ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 25 July 2018

ಕತಾ ಪುರಸ್ಕಾರಕ್ಕೆ ಅರ್ಜಿ..

ಶಹಾಪುರ: ಪ್ರತಿ ವರ್ಷದಂತೆ ಈ ಬಾರಿಯೂ ಇಲ್ಲಿಯ ಸಂಧ್ಯಾ ಸಾಹಿತ್ಯ ವೇದಿಕೆಯು 16 ವಯಸ್ಸಿನವರೆಗಿನ ಬಾಲ ಬರಹಗಾರರಿಗೆ "ವಿದ್ಯಾಸಾಗರ ಬಾಲ ಪುರಸ್ಕಾರ" ಮತ್ತು ಮಕ್ಕಳಿಗಾಗಿ ಕತೆ ಬರೆಯುವ ಹಿರಿಯರಿಗೆ "ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ" ನೀಡುತ್ತಿದ್ದು, ಅರ್ಜಿ ಆಹ್ವಾನಿಸಿದೆ.
ಬಾಲ ಬರಹಗಾರರು ಒಂದು ಸಂಕಲನಕ್ಕಾಗುವಷ್ಟು ಯಾವುದೇ ಪ್ರಕಾರದ ಪ್ರಕಟಿತ ಇಲ್ಲವೆ ಅಪ್ರಕಟಿತ ಕನ್ನಡ ಬರಹಗಳನ್ನು ಕಳುಹಿಸಬಹುದು.  ಕಥೆಗಳು ಕಳೆದ ಅಕ್ಟೋಬರ್‌ನಿಂದ ವರ್ಷದ ಅವಧಿಯೊಳಗೆ ರಚಿಸಿದವುಗಳಾಗಿರಬೇಕು. ಬರಹಗಳನ್ನು ಅಧ್ಯಕ್ಷರು, ಸಂಧ್ಯಾ ಸಾಹಿತ್ಯ ವೇದಿಕೆ, ಅಮೃತ ನಿವಾಸ, ಸಿ.ಬಿ. ಕಮಾನಿನ ಹತ್ತಿರ, ಶಹಾಪುರ-585223(ಯಾದಗಿರಿ ಜಿಲ್ಲೆ) ಇಲ್ಲಿಗೆ ಸೆಪ್ಟಂಬರ್ 30 ರೊಳಗೆ  ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. 9448651520 ಅಥವಾ 9986590894 ಗೆ ಸಂಪರ್ಕಿಸಬಹುದು.

Friday 20 July 2018

ಕುಟುಂಬ ನಿರ್ವಹಣೆಗೆ ಕೆಲವು ಕಹಿ ಸತ್ಯದ ಔಷದೋಪಚಾರ...

*''ಸುಪ್ರೀಂಕೋರ್ಟ್- ಕೌಟುಂಬಿಕ ಕಲಹ ವಿಚಾರಣೆ ಮಾಡುವ-ನ್ಯಾಯಮೂರ್ತಿ''ಗಳ ಹತ್ತು ಸಲಹೆಗಳು"*

(1) *ನಿಮ್ಮ ಮಗ ಮತ್ತು ಆತನ ಹೆಂಡತಿಗೆ: ನಿಮ್ಮ ಒಟ್ಟಿಗೆ "ಒಂದೇ ಸೂರಿನಡಿ" ಇರಲು ಪ್ರೋತ್ಸಾಹಿಸಬೇಡಿ, ಬಾಡಿಗೆ ಮನೆಯಾದರೂ ಸರಿ ಹೊರ ಹೋಗಲು ತಿಳಿಸಿ,* ಅದು ಅವರ ಜವಾಬ್ದಾರಿ, ಅವರ ಕುಟುಂಬ ಮತ್ತು ಮಕ್ಕಳಿಂದ ದೂರವಿರಿ-ಕಾನೂನಿನ ರೀತಿ ಮಾತ್ರ ಸಂಬಂಧವಿರಲಿ,

(2) *ಮಗನ ಹೆಂಡತಿಯನ್ನು-ಆತನ ಹೆಂಡತಿ ಎಂದು ಪರಿಗಣಿಸಿ, ಆದರೆ ಸ್ವಂತ ಮಗಳು ಎಂದು ಪರಿಗಣಿಸಬೇಡಿ* ಆಕೆಯನ್ನು ಸ್ನೇಹಿತರಂತೆ ಕಾಣಿರಿ,ಮಗನನ್ನು
ನಿಮ್ಮ ಜೂನಿಯರ್ ಎಂದು ಪರಿಗಣಿಸಿ, ಆತನ ಹೆಂಡತಿಗೆ
ನೀವು ಬೈಯ್ಯುವಹಾಗೇ ಇಲ್ಲ,
ಬೈದರೆ ಜೀವನ ಪಯ್ಂತ ಅದನ್ನು ಜ್ಞಾಪಕ ಇಟ್ಟುಕೊಂಡು
ಸಾದಿಸುತ್ತಾಳೆ, ನಿಜಜೀವನದಲ್ಲಿ ಆಕೆಯ ಹೆತ್ತತಾಯಿಗೆ ಮಾತ್ರ ಬೈಯುವ- ದಂಡಿಸುವ-ತಿದ್ದುವ ಹಕ್ಕು ಇರುತ್ತದೆ-ನಿಮ್ಮದಲ್ಲ,

(3) *ಸೊಸೆಯ ಹವ್ಯಾಸ/ನಡವಳಿಕೆ ಏನಾದರೂ ಇರಲಿ-ಅದು ಮಗನ ಸಮಸ್ಯೆ,* - ನಿಮಗೆ
ಸೇರಿದ್ದಲ್ಲ,

(4) *ಒಟ್ಟಿಗೆ ಇದ್ದರೂ ವ್ಯವಹಾರ ಪ್ರತ್ಯೇಕವಾಗಿರಬೇಕು/ನಿಖರ ವಾಗಿರ ಬೇಕು,,* ಅವರುಗಳ ಬಟ್ಟೆಯನ್ನು ಒಗೆಯುವ/ಅಡುಗೆ ಮಾಡುವ/ಮಕ್ಕಳನ್ನು ನೋಡಿಕೊಳ್ಳುವ ಉಸಾಬರಿ ಬೇಡ, ಸೊಸೆ ಒತ್ತಾಯಕ್ಕೆ ನೋಡಿಕೂಂಡರೆ-ನಿಮಗೆ ಶಕ್ತಿ ಇರಬೇಕು/ಏನನ್ನೂ ಪ್ರತಿಫಲ ಬಯಸಬಾರದು,
ಮುಖ್ಯವಾಗಿ ಮಗ‌ನ ಕುಟುಂಬದ ಸಮಸ್ಯೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ,ಅವನಿಗೆ
ಸೇರಿದ್ದು,

(5) *ಗಂಡ ಹೆಂಡತಿ ಜಗಳವಾಡುತ್ತಿದ್ದರೆ--ಕುರುಡರ ಹಾಗೆ/ಕಿವುಡರ ಹಾಗೆ ಇದ್ದುಬಿಡಿ,* ಯುವಜೋಡಿಗಳು
ನೀವು ಮದ್ಯೆಬರುವುದನ್ನು ಇಷ್ಟಪದುವುದಿಲ್ಲ,

(6) *ಮೊಮಕ್ಕಳನ್ನು ಸರಿಯಾಗಿ ಬೆಳೆಸುವುದು--ಒಳ್ಳೆಯದು/ಕೆಟ್ಟದ್ದು ಎಲ್ಲಾ ಅವರಿಗೇ ಸೇರಿದ್ದು, ನಿಮ್ಮದ್ದಲ್ಲ,*

(7) *ನಿಮ್ಮ ಸೊಸೆ ನಿಮಗೆ ಗೌರವಿಸುವ/ಸೇವೆ ಮಾಡಬೇಕಾದ ಅಗತ್ಯವಿಲ್ಲ*
- ಅದು ನಿಮ್ಮ ಮಗನ ಜವಾಬ್ದಾರಿ, ಮಗ ಸಮಾಧಾನ ವಾಗಿರಬೇಕು ಎನ್ನುವುದಾದರೆ ?
ನೀಮ್ಮ ಆಕೆಯ ಸಂಬಂಧ ಉತ್ತಮವಾಗಿರಬೇಕು,

(8) *ನಿಮ್ಮ ನಿವೃತ್ತಿ ಜೀವನಕ್ಕೆ  ಮೊದಲೇ ಎಲ್ಲಾ ವ್ಯವಸ್ಥೆ ಮಾಡಿಕೊಂಡಿರಬೇಕು,*
ಮಕ್ಕಳು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ ಎಂದು ನಂಬಬೇಡಿ/ಅವಲಂಬಿಸಬೇಡಿ,
ನೀವು ಜೀವನದ ಬಹುಕಾಲ ಪ್ರಯಾಣ ಮಾಡಿದ್ದೀರ,-ಕೊನೆಯವರಗೂ
ಇನ್ನೂ ತಿಳಿಯುವುದು ಇದ್ದೇಇರುತ್ತದೆ,

(9) *ನಿಮ್ಮ ನಿವೃತ್ತ ಜೀವನ ನಮಗೆ ಸೇರಿದ್ದು:*
ಹಣವನ್ನು ಉಪಯೋಗಿಸಿ/ಸಂತೋಷಪಡಿ,ಸಾಯುವ ಒಳಗೆ ಅದನ್ನು ಉಪಯೋಗಿಸಿಕೂಳ್ಳಿ,
ಗಳಿಸಿಟ್ಟು ಅದನ್ನು ವ್ಯರ್ಥ ಮಾಡಬೇಡಿ,

(10) *ಮೊಮ್ಮಕ್ಕಳು ನಿಮ್ಮ ಕುಟುಂಬಕ್ಕೆ ಸೇರಿಲ್ಲ* - ಅವರ ತಂದೆ-ತಾಯಿಯ ಕೊಡುಗೆ,:

ಈ ಸಂದೇಶ ನಿಮಗೊಬ್ಬರಿಗಲ್ಲ
ಮಿತ್ರರು,ಬಂಧುಗಳು,ತಂದೆ- ತಾಯಿಗಳಿಗೆ, ಗಂಡ-ಹೆಂಡತಿ, ಸಮಾಜದ ಎಲ್ಲರಿಗೂ ಹಂಚಿ ಎಂದು ಸುಪ್ರೀಂಕೋರ್ಟ್
ನ್ಯಾಯಾದೀಶರು, ಕೌಟುಂಬಿಕ
ಕಲಹ ತೀರ್ಪು ನೀಡುತ್ತಿದ್ದವರ ಸಲಹೆ

*(ಕನ್ನಡ ಅನುವಾದ)*

Wednesday 11 July 2018

ಅಲ್ಲಾ ಗಿರಿರಾಜ್ ಅವರ ಗಝಲ್ ಸಂವಾದ

ಕನ್ನಡದ ಪ್ರಮುಖ ಗಜಲ್ ಸಾಹಿತ್ಯ ಕೃಷಿಕ "ಅಲ್ಲಾ ಗಿರಿರಾಜ್" ಅವರು 'ನೂರ್ ಗಜಲ್' ನಂತರ ಮತ್ತೆ ಕನ್ನಡ ಸಾಹಿತ್ಯದಲ್ಲಿ ಗಜಲ್ ಸಾಹಿತ್ಯ ಸುಗಂಧ ಹರಡುತ್ತಿರುವ "ಸುರೂರ್ ಗಜಲ್"   ಕೃತಿಯನ್ನು ಪ್ರೀತಿಯಿಂದ ನೀಡಿದರು..
ಮನಸು ಮನಸುಗಳ ನಡುವಿನ ಪ್ರೀತಿಯ ಕಟ್ಟುವ  ಪ್ರೀತಿ ವೃತಾಂತ ಸಾರುವ ಮಹತ್ವದ ಗಜಲ್ ಪ್ರಕಾರವೇ ಹಾಗೆ  ಅವು ಪ್ರೇಮ ವೃತಾಂತದ ವಿಶಿಷ್ಟ ದ್ವಿಪದಿ.

ಗಜಲ್ ರಚನಾ ಕ್ರಮದ ಬಗ್ಗೆ ನನಗೆ ಒಂದಿಷ್ಟು ಸ್ಪಷ್ಟತೆ ದೊರೆತಿದ್ದೆ ಈ ಕೃತಿ ಓದಿದಮೇಲೆ..ಮೂಲ ಗಜಲ್ ರಚನಾ ಕ್ರಮದಿಂದ ಸ್ಫೂರ್ತಿಗೊಂಡು ಒಂದಿಷ್ಟು ಕನ್ನಡೀಕರಿಸಿ ನಮ್ಮ ನಾಡಿನಲ್ಲಿ ಒಂದಿಷ್ಟು ಗಜಲ್ ಸಾಹಿತ್ಯ ಪುಷ್ಪ ಕೃಷಿ ಮಾಡುತ್ತಿರುವವರು ಹಲವರಿದ್ದಾರೆ.. ನಮ್ಮ ಕವಿಮಿತ್ರ  ಅರಿಫ್ ರಾಜ ಸಹ ಆ ನಿಟ್ಟಿನ ಯಶಸ್ವಿ ಪಯಣ ಆರಂಭಿಸಿದ್ದಾರೆ. ರಚನಾ ವಿಶೇಷತೆ, ಮೂಲ ಗಜಲ್ ಸೆಲೆಯ ದಾರಿಯ ಪಯಣದಲ್ಲಿ ಅಲ್ಲಾ ಗಿರಿರಾಜ್ ಅವರದ್ದು ವಿಶಿಷ್ಟ ನಡೆಗೆ ಈ ಕೃತಿಯು ಸಹ ನೂರ್ ಗಜಲ್ ನಷ್ಟೇ ವಿಶೇಷತೆ ಉಳಿಸಿಕೊಂಡಿದೆ.

  "ಧರ್ಮದ  ಝಂಡಾ ಕಟ್ಟಿಕೊಂಡ ಮಂದಿರ ಮಸೀದಿಗಿಂತ ಮೌನ ಸ್ಮಶಾನ ಲೇಸು
ನೋವಿಗಾಗಿಯೇ ಅಳುವ ಕಣ್ಣುಗಳಿಗಿಂತ ನಗದಂತೆ ಮೌನವಾಗಿರುವ ನಿನ್ನ ತುಟಿ ಲೇಸು"    ಎನ್ನುವ ಕವಿಯ ಒಟ್ಟು ಆಶಯ ಅಲ್ಲಲ್ಲಿ ಹಲವೆಡೆ ಗಜಲ್ಗಳಲ್ಲಿ ರೂಪದರ್ಶನ ಮಾಡಿದೆ.

ನಿನ್ಹೆಜ್ಜೆಗಳು ಸದ್ದಾಗದಿರಲಿ ಎನ್ನ ಮನದಂಗಳದಲ್ಲಿ
ಅಲ್ಲಿ ಕನಸುಗಳು ಹುಳಿಉಂಡು ಹೆಪ್ಪಾಗುತಿವೆ ನಾಳೆಗಾಗಿ "  ಎಂದೂ ಬಹುತೇಕ ಗಜಲ್ ಸೊಬಗಿನ  ಹಲವು
ರೂಪಕಗಳ ಪದಮಾಲೆ ಪೋಣಿಸಿದ್ದಾರೆ..ಹಲವು ಕಡೆ ಬೇಂದ್ರೆ,ಅರವಿಂದ ರವೀಂದ್ರ, ಅಲ್ಲಮ ಮುಂತಾದವರು ಉಲ್ಲೇಖ ಮಾಡಲಾಗಿದೆ.ನಾಡಿನ ಹಲವು ಸ್ಥಳಗಳು  ಬನವಾಸಿ, ತಲಕಾಡು ಇಣುಕುತ್ತವೆ.ಕನ್ನಡ ಬಿಟ್ಟು ಬೇರೆ ಬಾಷೆ ಅರಿಯದ ನನ್ನಂತವನಿಗಾಗಿ ಅರ್ಥ ಆಗದ ಪದಗಳ ಅರ್ಥ ಅಲ್ಲೇ ನೀಡಿದ್ದು ಈ ಕೃತಿಯ ವಿಶೇಷತೆ. ಹೊಸ ಸಾಹಿತ್ಯ ಅನುಭವಕ್ಕೆ ಈ ಕೃತಿ ಓದಲೇ ಬೇಕು. ಮತ್ತೆ ಮತ್ತೆ ಕಾಡುತಿವೆ ಕೆಲವು .ಪ್ರೀತಿ ಪ್ರೇಮ ಬರಹಗಳೆಂದರೆ ಮತ್ತೆ ಕಾಡದೆ ಬಿಡವು ಸಹ. ಇನ್ನು ಕಾಡಲಿಕ್ಕೆಂದೇ ಹುಟ್ಟಿದ  ಗಿರಿರಾಜರ ಮೋಡಿಯ ಗಝಲ್ ಬಿಟ್ಟಾವೆಯೇ ...

ಹೆಚ್ವು  ಬರೆಯಲು ಈ ಬಗ್ಗೆ ಹೆಚ್ಚು ಗೊತ್ತಿಲ್ಲ.. ಮತ್ತೆ ಓದಿ ಮತ್ತೆ ತಿಳಿದು ಮತ್ತೆ ಬರೆವೆ...
- ರವಿರಾಜ ಮಾರ್ಗ

.

Tuesday 10 July 2018

ಕುವೆಂಪು ಕೃತಿ ಬಗ್ಗೆ ಗೆಳೆಯ ಪ್ರಶಾಂತ್ ಬರೆದದ್ದು

'ಸ್ನಿಗ್ಧೋಜ್ಜ್ವಲಜ್ಯೋತ್ನ್ಸೆ'
ಈ ಪದವನ್ನು ಒಂದೇ ಬಾರಿಗೆ ಉಚ್ಚರಿಸಿ ನೋಡುವ. ಇಡೀ ಪದದ ಅರ್ಥವನ್ನು ಯಾವ ಕನ್ನಡ ನಿಘಂಟು ಹುಡುಕಿದರೂ ಸಿಗಲಾರದು. 'ಸ್ನಿಗ್ಧ+ಉಜ್ವಲ+ಜ್ಯೋತ್ನ್ಸೆ' ಎಂದು ಬಿಡಿಬಿಡಿಯಾಗಿ ಪದವನ್ನು ಒಡೆದು ಓದಿಕೊಂಡರೆ ಮಾತ್ರ ಅರ್ಥವಾಗುತ್ತದೆ. ಸ್ನಿಗ್ಧ = ಕೋಮಲವಾದ, ಉಜ್ವಲ = ಪ್ರಕಾಶಮಾನವಾದ, ಜ್ಯೋತ್ನ್ಸೆ = ಬೆಳದಿಂಗಳು. ಕೋಮಲವಾದ ಪ್ರಕಾಶಮಾನವಾದ ಬೆಳದಿಂಗಳು. ಇದು ಕುವೆಂಪು ಅವರು 'ಮಲೆನಾಡಿನ ಚಿತ್ರಗಳು' ಪುಸ್ತಕದಲ್ಲಿ 'ಕಾಡಿನಲ್ಲಿ ಕಳೆದ ಒಂದಿರುಳು' ಚಿತ್ರದಲ್ಲಿ ತಾವು ಕಂಡ ಬೆಳದಿಂಗಳನ್ನು ವರ್ಣಿಸಲು ಉಪಯೋಗಿಸಿರುವ ಪದ. ಪೂರ್ತಿ ವಾಕ್ಯದ ಸಾಲು ಹೀಗಿದೆ-
"ಕಂಬಳಿಯನ್ನು ಹೊದೆದುಕೊಂಡು, ಅಂಗಾತನೆ ಮಲಗಿ, ಅನಂತಾಕಾಶದಲ್ಲಿ ಸ್ವರ್ಣ ಜ್ಯೋತಿರ್ಮಯ ಬಿಂಬದಿಂದ ರಂಜಿಸುತ್ತಿದ ಯಾಮಿನೀಕಾಂತನಿಂದ ಹೊರಹೊಮ್ಮಿ ಬನದ ಮೇಲೆ ಎಡೆಬಿಡದೆ ಸುರಿಯುತ್ತಿದ್ದ ಸ್ನಿಗ್ಧೋಜ್ಜ್ವಲಜ್ಯೋತ್ನ್ಸೆಯನ್ನು ಕಣ್ಣಿನಿಂದ ಕುಡಿಯತೊಡಗಿದೆ."

ಕುಪ್ಪಳ್ಳಿಯ ಪ್ರಕೃತಿ ಸೌಂದರ್ಯದೊಂದಿಗೆ ಇಂತಹ ವಿಶಿಷ್ಟ ಕನ್ನಡ ಪದಗಳ ಭಂಡಾರವೇ ಈ ಪುಸ್ತಕದಲ್ಲಿ ತುಂಬಿಕೊಂಡಿದೆ. ಸವಿಯಲು ತಪ್ಪದೇ ಓದಿ. ಅಂತಹ ಪದಗಳಲ್ಲಿ ಕೆಲವು- 'ಮೇಘಗವಾಕ್ಷ, ಗೈರಿಕವಸಧಾರಿ, ವರ್ಣೋಪವರ್ಣ, ಧವಳಫೇನ, ಆವರ್ತಗರ್ತ, ಗಗನತಟಾಕ್ರಾಂತ, ಪರಿವೃತಶೈಲಶ್ರೇಣಿ, ಪಸುಳೆವಿಸಿಲು, ತಿಮಿರಬ್ರಹ್ಮಸಮಾಧಿ, ವಿಕಟನಿರ್ಘೋಷ, ಕಾಳಪಾಷಾಣಭಿತ್ತಿ, ಭೀಮಭೂರೋಹರಾಜಿ, ಉಲ್ಮೀಲಿತನಯ, ಶ್ವೇತೋರ್ಣಸದೃಶ, ಜೋತ್ಸ್ನಾತುಷಾರವೃಷ್ಟಿ...

Wednesday 13 December 2017

ಮಾಸ್ ಮಪ್ತಿ ನರ್ತನ್

ಕ್ರೌಯ ರಂಜನೆಯ ಮಾಸ್ ಮಪ್ತಿ  ನರ್ತನ್...

ವ್ಯವಸ್ಥೆಯ ಲೋಪದಿಂದ  ಸಾಂಧರ್ಭಿಕವಾಗಿ ರೂಪುಗೊಂಡ " ರಾಕ್ಷಸ ರೂಪದ ಕರ್ತವ್ಯ ವ್ಯಕ್ತಿತ್ವ  ಹಾಗೂ  ಅಂತವನನ್ನು ಬಂಧಿಸಲು ಬಂದು ತಾನೇ  ಬಂಧಿಯಾಗುವ ಕರ್ತವ್ಯ ರೂಪದ ರಾಕ್ಷಸ ವ್ಯಕ್ತಿತ್ವ ವನ್ನು  ಕ್ರೌರ್ಯ ರಂಜನೆಯ ಕತೆಯನ್ನಿಟ್ಟುಕೊಂಡು  ನಿರ್ದೇಶಕ ನರ್ತನ ಅವ್ರು ಮೊದಲ ಪ್ರಯತ್ನದಲ್ಲೇ  ಕನ್ನಡ ಸಿನಿಮೊದ್ಯಮ ಅವರತ್ತ ನೋಡುವಂತ ಸಿನಿಮಾ ಮಾಡಿದ್ದು ಅವರ ಪ್ರತಿಭೆಗೆ ಸಾಕ್ಷಿ.ಅವರನ್ನು ಪ್ರೋತ್ಸಾಹಿಸಲು ನೀವೊಮ್ಮೆ ಈ ಸಿನಿಮಾ ನೋಡಬೇಕು.

ಕ್ರೌರ್ಯ ರಂಜನೆಯ ಕತೆ ಜೊತೆಗೆ ಕಣ್ಣಂಚಲಿ  ಕಣ್ಣಿರಾಡುವಂತೆ ಮಾಡುವ ಅಣ್ಣ ತಂಗಿ ಸೆಂಟಿಮೆಂಟ್ ಜೊತೆಗೆ  ಕತೆಗೆ ಗಟ್ಟಿ ತನ ತಂದುಕೊಡಬಲ್ಲ  ಸಂಬಾಷಣೆ , ಒಬ್ಬರಿಗೊಬ್ಬರು ಹಠಕ್ಕೆ ಬಿದ್ದು  ಅದ್ಬುತ ಅಭಿನಯ ನೀಡಲು ಶ್ರಮಿಸಿರುವುದು ಚಿತ್ರದುದ್ದಕ್ಕೂ ನಿಮ್ಮನ್ನು ಪ್ರತಿ ಕ್ಷಣವೂ ಪ್ರತಿ ಪ್ರೇಮುಗಳು ಥಿಯೇಟರಿನಲ್ಲೇ ನಿಮ್ಮನ್ನು ಹಿಡಿದುಕೂರಿಸುತ್ತದೆ.
ರವಿ ಬಸರುರ್ ಹಿನ್ನಲೆ ಸಂಗೀತದ ಅಬ್ಬರದ ಜೊತೆಗೆ ಭೈರತಿ ರಣಗಲ್ಲು , ಗಣ, ಸಿಂಗ, ಠಾಕೂರ್, ಮತ್ತಿತರ ಪಾತ್ರಗಳೆಲ್ಲ ನಿಮ್ಮನ್ನು ಮತ್ತೆ ಮತ್ತೆ ಥಿಯೇಟರಿಗೆ   ಕರೆಯುವುದು ಮಪ್ತಿಯ ಹೆಚ್ಚುಗಾರಿಕೆ.
ರವಿರಾಜ್ ಸಾಗರ್

Tuesday 17 October 2017

ದೀಪಾವಳಿ ಹಬ್ಬದ ಪರಂಪರ ಬಗ್ಗೆ ಒಂದಿಷ್ಟು ತಿಳಿಯಿರಿ

*"ದೀಪಾವಳಿ"*-
ಕತ್ತಲೆಯ ಕಳೆದು ಬೆಳಕು ಹರಿಸುವ ಹಬ್ಬ*                                                                    ‌                                                                                    *"ದೀಪವು ಜ್ಞಾನದ ಸಂಕೇತ,ಅಭಿವೃದ್ಧಿಯ ಸಂಕೇತ*"                         ‌                            ‌                                                                                                                          ಸಾಲು ಸಾಲಾಗಿ ದೀಪಗಳನ್ನು ಮನೆ, ಮಂದಿರ, ಮಠ, ನದಿ ತೀರಗಳಲ್ಲಿ ಬೆಳಗಿಸಿ, ದೇವತಾರಾಧನೆ ಮಾಡಿ, ಬಂಧು ಬಾಂಧವರೊಡನೆ ನಲಿಯುವ ಹಬ್ಬವೇ ದೀಪಾವಳಿ. ದೀಪಗಳನ್ನು, ಬೆಳಕನ್ನು ಪೂಜಿಸುವ ನಾವು ದೀಪದಲ್ಲಿ ದೇವಿಯ ಸಾನ್ನಿಧ್ಯವನ್ನು ಕಂಡವರು.                                       ‌                 ‌                                                                            ‌                                                                    * ಕಾರ್ತಿಕ ಮಾಸದಲ್ಲಿ  ದೀಪೋತ್ಸವ ಆಚರಿಸಬೇಕು. ದೀಪ ಪರಬ್ರಹ್ಮನ ಪ್ರತೀಕ. ಕತ್ತಲು ಎಂದರೆ ತಮೋಗುಣ - ಅಜ್ಞಾನ. ಬೆಳಕು ಎಂದರೆ ಸತ್ವಗುಣ - ಜ್ಞಾನ. ಬೆಳಕು ಹೊಸ ಬದುಕಿನ ಹಾದಿಯಾದರೆ, ಕತ್ತಲು ಕಷ್ಟ, ಭಯ, ಆತಂಕ, ನೋವುಗಳನ್ನು ಬಿಂಬಿಸುತ್ತದೆ. ಬೆಳಕು ಶಾಂತಿಯ ಸಂಕೇತ. ಕತ್ತಲು ಹಾಗೂ ಬೆಳಗಿನ ನಡುವೆ ಜೀವನ ನಡೆಸುವ ನಮಗೆ ದೀಪಾವಳಿ ಹೊಸ ಜೀವನ, ಬದುಕಿನ ಹಾದಿ ತೋರಿಸುವ ಹಬ್ಬವಾಗಿದೆ.                     ‌    ‌   ‌                                                                                      ‌                                                             ದೀಪಾವಳಿ ಹಬ್ಬವು 5 ದಿನಗಳ ಹಬ್ಬವಾಗಿದೆ.                                  ‌                                                            🌻 *ನೀರು ತುಂಬುವ ಹಬ್ಬ* 🌻                                        ‌                                                                   ಆಶ್ವಯುಜ ಮಾಸದ ಕೃಷ್ಣ  ಪಕ್ಷದ ತ್ರಯೋದಶಿ ದಿನದ ಸಾಯಂಕಾಲ ನೀರು ತುಂಬುವ ಹಬ್ಬ ಆಚರಿಸಲಾಗುತ್ತದೆ.  ಇದನ್ನು "ಧನ ತ್ರಯೋದಶಿ" ಎಂದೂ ಕರೆಯಲಾಗುತ್ತದೆ. ಆ ದಿನ ನೀರಿನ ಕೊಡಗಳನ್ನು ಶುದ್ಧವಾಗಿ ತೊಳೆದು ಸ್ವಚ್ಛ  ಮಾಡಿ, ಶುದ್ಧವಾದ ನೀರನ್ನು ತುಂಬಿ ಅದಕ್ಕೆ ಪೂಜೆ ಮಾಡುತ್ತಾರೆ. ಆ ದಿನ ಆ ನೀರನ್ನು ಉಪಯೋಗಿಸುವ   ಹಾಗಿಲ್ಲ ‌ ಕಳಶ ಪೂಜೆ ಮಾಡಿದ ರೀತಿಯಲ್ಲಿ ಆ ಕೊಡವನ್ನು    ಪೂಜಿಸಬೇಕು.                        ‌                                                                                         ‌                                                                                  🌻 *ನರಕ ಚತುರ್ದಶಿ ಹಬ್ಬ* 🌻                                                 ‌                                                         ದ್ವಾಪರ ಯುಗದಲ್ಲಿ ಲೋಕಕಂಟಕನಾದ ನರಕಾಸುರ  ಎಂಬ ರಾಕ್ಷಸನೊಂದಿಗೆ ಘೋರ ಯುದ್ಧ ಮಾಡಿ ಆ ರಾಕ್ಷಸನನ್ನು ಸಂಹರಿಸಿದನು. ಆ ದಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನವಾಗಿತ್ತು. ಆ ರಾತ್ರಿ ಶ್ರೀಕೃಷ್ಣನು ರಾಕ್ಷಸರನ್ನು ಸಂಹಾರ ಮಾಡಿ ಇಡೀ ಲೋಕಕ್ಕೆ ನೆಮ್ಮದಿಯ ಬೆಳಕನ್ನು ನೀಡಿದ ಶುಭ ದಿನವಾಯಿತು. ಹಾಗಾಗಿ ಆ ದಿನ ನರಕ ಚತುರ್ದಶಿ ಎಂದು ಕರೆಯಲ್ಪಟ್ಟಿದೆ.  ನರಕ ಚತುರ್ದಶಿ ದಿನ ತೈಲ ಸ್ನಾನ ಮಾಡುತ್ತೇವೆ. ಈ ಸ್ನಾನ ಮಾಡಲು ಕಾರಣ ನರಕಾಸುರನು ಮರಣ ಹೊಂದಿದ್ದರಿಂದ ಅಶೌಚವಾಯಿತು. ಆದ್ದರಿಂದಲೇ ಆ ದಿನ ಎಣ್ಣೆ ನೀರಿನ ಅಭ್ಯಂಜನ ಸ್ನಾನ ಮಾಡಬೇಕು.                                                                                        ‌                                                                                            ಆ ದಿನ ಎಣ್ಣೆ ಸ್ನಾನಕ್ಕೆ ಬಹಳ ಪ್ರಾಶಸ್ತ್ಯವಿದೆ. ಎಣ್ಣೆ ಸ್ನಾನ ಮಾಡದೇ ಇರುವವರು ಆ ದಿನ ಮಾಡಲೇಬೇಕು. ಸ್ತ್ರೀಯರು, ಪುರುಷರು, ಮಕ್ಕಳು, ಸಂನ್ಯಾಸಿಗಳಾದಿಗಳಾಗಿ ಎಲ್ಲರೂ ಅಂದು ಎಣ್ಣೆ ಸ್ನಾನ ಮಾಡಬೇಕು ಎಂದು ಧರ್ಮ ಶಾಸ್ತ್ರ ಹೇಳುತ್ತದೆ.                            ‌                                                                                    ಎಣ್ಣೆಯಲ್ಲಿ ಲಕ್ಷ್ಮೀ ದೇವಿಯೂ, ನೀರಿನಲ್ಲಿ ಗಂಗಾ ದೇವಿಯೂ ಇರುವುದರಿಂದ, ನಮಗೆ ಲಕ್ಷ್ಮೀ ಹಾಗೂ ಗಂಗಾ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ನಂಬಿಕೆ ಇದೆ.                                                                                                 ‌                                                                  ‌  ನರಕ ಎಂದರೆ ಅಜ್ಞಾನ. ಈ ಅಜ್ಞಾನವು ಚತುರ್ದಶಿ ದಿನದಂದಲೇ ನಾಶವಾಗಿ ಜ್ಞಾನ ದೊರೆಯಲಿ ಎಂದು ನರಕ ಚತುರ್ದಶಿ ಹಬ್ಬವನ್ನು ಆಚರಿಸುವುದು. ಚತುರ್ದಶಿ ಎಂದರೆ 14 ಎಂದು ಅರ್ಥ. ಜ್ಞಾನವನ್ನು ಸಂಪಾದಿಸಲು 14 ವಿದ್ಯೆಗಳನ್ನು ಸಂಪಾದಿಸಬೇಕು.  ನರಕ ಚತುರ್ದಶಿ ದಿನ ಸಂಜೆ ಮನೆಯ ಮುಂದೆ ಲೋಹದಿಂದಲೋ ಅಥವಾ ಮಣ್ಣಿನಿಂದಲೋ ಮಾಡಿದ ಹಣತೆಯಲ್ಲಿ ದೀಪವನ್ನು ಮತ್ತು ನರಕಾಸುರನ ಸಂಹಾರವಾದ ಸಂತೋಷಕ್ಕಾಗಿ ಪಟಾಕಿ ಹಚ್ಚಿ ಸಂತೋಷ ಪಡುವ ಕಾರ್ಯ ಹಿಂದಿನಿಂದಲೂ ಆಚರಣೆಯಲ್ಲಿ ಬಂದಿದೆ.                             ‌     ‌        ‌     ‌      ‌     ‌                             ‌ 🌻 *ಅಮಾವಾಸ್ಯೆಯ ಹಬ್ಬ (ಧನಲಕ್ಷ್ಮೀ ಪೂಜೆ)* 🌻                   ‌                                                                                                                                                                                   ಆಶ್ವಯುಜ ಮಾಸದ ಅಮಾವಾಸ್ಯೆ ದಿನ ಧನಲಕ್ಷ್ಮಿಗೆ ಪೂಜೆ ಸಲ್ಲಿಸುತ್ತಾರೆ.  ಅಮಾವಾಸ್ಯೆ ಎಂದರೆ ಅಶುಭ ಎಂದು ಕರೆಯುತ್ತಾರೆ. ಅಂದು ಯಾವ ಹೊಸ ಕಾರ್ಯಗಳನ್ನೂ ಮಾಡುವುದಿಲ್ಲ ಹಾಗೂ ಮಂಗಳಕರವಾದ ಪೂಜೆ ಸಹ ಮಾಡುವುದಿಲ್ಲ. ಆದರೆ ಈ ದೀಪಾವಳಿಯ ಅಮಾವಾಸ್ಯೆ ಇದಕ್ಕೆ ವಿರುದ್ಧವಾಗಿದೆ. ಏಕೆಂದರೆ ಅಂದು ವಿಷ್ಣುವಿನ ಪತ್ನಿಯಾದ ಮತ್ತು ಧನದೇವತೆಯಾದ ಮಹಾಲಕ್ಷ್ಮಿಯು ಸಮುದ್ರ ಮಥನದಿಂದ ಉದಯಿಸಿದ ದಿನ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದ ಅಂದು ಧನಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ದುಡಿದ ಸಂಪತ್ತು ಸ್ಥಿರವಾಗಿ ನಮ್ಮಲ್ಲಿರಬೇಕು ಎಂದು ಜ್ಞಾನಿಗಳು ಹೇಳುತ್ತಾರೆ. ಆದ್ದರಿಂದ ಆ ದಿನ ನಾವು ಶ್ರದ್ಧಾ ಭಕ್ತಿಗಳಿಂದ ಲಕ್ಷ್ಮೀ ಪೂಜೆಯನ್ನು ಮಾಡಬೇಕು.          ‌                                                                                                            

🌻*ಬಲಿಪಾಡ್ಯಮಿ*🌻                                                                      ‌     ‌                                                   ಕಾರ್ತೀಕ ಮಾಸದ ಮೊದಲನೆಯ ದಿನ ಅಂದರೆ ಪಾಡ್ಯಮಿಯ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಎಲ್ಲಾ ದಾನವರಿಗಿರುವ ದುರಾಸೆಯಂತೆ ಪ್ರಹ್ಲಾದನ ವಂಶದ ಬಲಿ ಚಕ್ರವರ್ತಿಗೂ ಸ್ವರ್ಗಾಧಿಪತಿಯಾಗಬೇಕೆಂಬ ಮಹದಾಸೆಯಿತ್ತು. ಬಲಿಯ ಗರ್ವಭಂಗ ಮಾಡಲು, ಶ್ರೀ ಹರಿಯು ವಾಮನ ಅವತಾರ ಎತ್ತಿ, ಬಲಿಯನ್ನು ಪಾತಾಳಕ್ಕೆ ತಳ್ಳಿದನು. ಆತನ ಮಹಾ ಬಲಿದಾನಕ್ಕೆ ಅವನ ಆಸೆಯಂತೆ ಶ್ರೀಹರಿಯು ಸದಾಕಾಲವೂ ಬಲಿಯ ಬಳಿಯೇ ಇರುತ್ತಾನೆಂದೂ, ಶ್ರೀಲಕ್ಷ್ಮಿಯ ಪ್ರಾರ್ಥನೆಯಂತೇ ಬಲಿಪಾಡ್ಯಮಿಯಂದು ಬಂದು ಭಕ್ತರ ಇಷ್ಟಾರ್ಥ ನೆರವೇರಿಸುತ್ತಾನೆಂದೂ, ಪ್ರಸನ್ನಳಾದ ಲಕ್ಷ್ಮೀ ಸಕಲ ಸಂಪತ್ತನ್ನೂ ನೀಡುತ್ತಾಳೆಂದೂ ಪುರಾಣ ಪ್ರಸಿದ್ಧಿಯಾಗಿದೆ. 🌻           ‌   ‌              ‌                                     ‌                                                             🌻 *ಸೋದರ ಬಿದಿಗೆ* 🌻   ‌          ‌         ‌         ‌                                           ‌                                                                               ಪಾಡ್ಯದ ನಂತರ ಬರುವ ಹಬ್ಬವೇ ಸೋದರ ಬಿದಿಗೆ. ಅಂದು ಯಮನು ತನ್ನ  ಸೋದರಿ ಯಾದ ಯಮುನಾದೇವಿಯ ಮನೆಗೆ ಹೋಗಿ ಅವಳ ಸತ್ಕಾರ ಸ್ವೀಕರಿಸಿ ಅವಳನ್ನು ಹರಸಿ ಉಡುಗೊರೆ ಕೊಟ್ಟು ಬಂದನೆಂದು ಪ್ರತೀತಿ. ಅವರ ನೆನಪಿಗಾಗಿ ಸೋದರ- ಸೋದರಿಯರು ವರ್ಷಕ್ಕೊಮ್ಮೆಯಾದರೂ ಈ ರೀತಿ ಸೇರಿ ತಮ್ಮ ಬಾಂಧವ್ಯವನ್ನು ಉಳಿಸಿಕೊಳ್ಳಲಿ ಎಂದು ಅಂದು ಸೋದರನು ತನ್ನ ಸೋದರಿಯ ಮನೆಗೆ ಹೋಗಿ ಅವಳ ಕೈಯಲ್ಲಿ ಊಟ ಮಾಡಿ ಉಡುಗೊರೆ ಕೊಟ್ಟು ಹರಸಿ ಬರುವ ವಾಡಿಕೆ ಇದೆ.  ‌         ‌                  ‌   ‌         ‌      ‌     ‌                                                                                                                                                     ನಮ್ಮ ಬದುಕು ಜ್ಞಾನದ ಬೆಳಕಿನಿಂದ ತುಂಬಿದ್ದರೆ ಬದುಕು ಸಾರ್ಥಕವಾಗುತ್ತದೆ. ಅಜ್ಞಾನದ ಅಂಧಕಾರ ನಿವಾರಿಸುವುದಕ್ಕೆ ದೀಪಗಳನ್ನು ಬೆಳಗುವುದು ಸಾಂಕೇತಿಕ ರೂಪವಾದರೂ, ನಮ್ಮನ್ನು ನಾವು ತಿದ್ದಿ ಕೊಂಡು ಮುನ್ನಡೆಯ ಬೇಕೆಂಬ ಮನೋಭಾವ ನಮ್ಮಲ್ಲಿ ಒಡಮೂಡಬೇಕು. *ಪ್ರತಿಯೊಬ್ಬರೂ ಮನದೊಳಗೆ ದೀಪಗಳನ್ನು ಬೆಳಗಿಸೋಣ*. ಜ್ಞಾನವನ್ನು ಪಡೆಯೋಣ.
*ಎಲ್ಲರಿಗೂ ಶುಭವಾಗಲಿ*

Monday 9 October 2017

ಡಾ. ನಾ.ಡಿಸೋಜಾ ಅವರ ಪ್ರಕೃತಿಯೊಂದಿಗೆ ಅನುಸಂಧಾನ...

*ಪ್ರಕೃತಿಯೊಂದಿಗೆ ಅನುಸಂಧಾನ.*            

*- ನಾ. ಡಿಸೋಜ*

ಬಹಳ ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಸುಂದರ ಕಡಲ ತಡಿಯಲ್ಲಿ ನಾನು ಕುಳಿತಿದ್ದೆ. ಮುಂಜಾನೆಯ ಹೊತ್ತು. ಅದೇ ಬೆಳಕು ನಿಧಾನವಾಗಿ ಬಂದು ಎಲ್ಲವನ್ನ ತನ್ನ ಹತೋಟಿಯಲ್ಲಿ ತೆಗೆದುಕೊಳ್ಳುತ್ತಿದ್ದ ಸಮಯ. ಕಡಲು ತನ್ನ ಅಲೆಗಳನ್ನ ನಿರಂತರವಾಗಿ ತಂದು ತಂದು ದಡಕ್ಕೆ  ಚೆಲ್ಲುತ್ತಲೇ ಇತ್ತು. ಕಡಲಲ್ಲಿ ಅಲ್ಲೊಂದು ಇಲ್ಲೊಂದು ಹಂದಿ ಮೀನು ಮೇಲೆ ಹಾರಿ ಮತ್ತೆ ನೀರಿಗೆ ಬಿದ್ದು ಮಾಯವಾಗುತ್ತಿದ್ದ ಸುಂದರ ದೃಶ್ಯವನ್ನ ನೋಡುತ್ತ ನಾನು ಕುಳಿತಾಗ, ತೆಂಗಿನ ಮರಗಳಿಂದ ಆವೃತವಾದ ಮನೆಗಳ ನಡುವಿನಿಂದ ಓರ್ವ ಅಂಬಿಗ ಸಣ್ಣ ಪಾತಿ (ದೋಣಿ)ಯೊಂದನ್ನ ಮರಳಲ್ಲಿ ಎಳೆದು ತಂದ. ಅವನ ಕೈಯಲ್ಲಿ ಒಂದು ಹುಟ್ಟು, ಬಲೆ ಮತ್ತಿತರ ಸಲಕರಣೆಗಳಿದ್ದವು. ಅವನ್ನೆಲ್ಲ ದೋಣಿಯೊಳಗೆ ಇರಿಸಿ ಆತ ದೋಣಿಯನ್ನ ನೀರಿನ ಅಂಚಿಗೆ ತಂದು ಇರಿಸಿ ಭಕ್ತಿಯಿಂದ ಕಡಲಿನತ್ತ ತಿರುಗಿ ನಿಂತು ಒಮ್ಮೆ ಕೈ ಮುಗಿದ.

ಬಗ್ಗಿ ದೋಣಿಯನ್ನ ನೀರಿಗೆ ತಳ್ಳಿ ನುಗ್ಗಿ ಬರುವ ಅಲೆಗಳನ್ನ ತಪ್ಪಿಸಿಕೊಂಡು ದೋಣಿಯನ್ನ ಕಡಲಿನೊಳಗೆ ನಡೆಸಿಕೊಂಡು ಹೋಗಿ, ಹಾರಿ ಅದನ್ನೇರಿ ಹುಟ್ಟು ಹಾಕತೊಡಗಿದ. ಕೆಲವೇ ನಿಮಿಷಗಳಲ್ಲಿ ಆತ ಕಡಲಿನಲ್ಲಿ ಸಾಕಷ್ಟು ದೂರ ಹೋಗಿ ತಲುಪಿದ್ದ. ಅತಿವಿಸ್ತಾರವಾದ ಸದಾ ಅಬ್ಬರಿಸುವ, ಕೊತಕೊತನೆ ಕುದಿಯುವ ನೀಲಿ  ಕಡಲು, ಕೇವಲ ಐದು ಅಡಿಯ ಸಣ್ಣ ಮನುಷ್ಯ ಕಡಲಿಗೆ ಕೈಮುಗಿಯುತ್ತಲೇ ತನ್ನತನವನ್ನ ಅಲ್ಲಿ ಸ್ಥಾಪಿಸಿದ ಈ ಮನುಷ್ಯನ ಸ್ವಭಾವ ನನಗೆ ಎಂದೂ ಅಚ್ಚರಿಯ ವಿಷಯ.

ನಾನಿಲ್ಲಿ ಮತ್ತೊಂದು ಘಟನೆಯನ್ನ ಹೇಳಬೇಕು. ನಾನು ಕಾರ್ಗಲ್ಲಿನಲ್ಲಿ ಇದ್ದಾಗ ನಡೆದದ್ದು. ಓರ್ವ ಯುವತಿ ಏನೋ ಕಾರಣಕ್ಕೆ ಜೋಗ್ ಜಲಪಾತಕ್ಕೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ಶವ ಜೋಗ್ ಜಲಪಾತದ ರಾಣಿ ಧಾರೆಯಲ್ಲಿ ನಟ್ಟನಡುವೆ ಅನ್ನುವ ಹಾಗೆ ಬಂಡೆಗಳ ಬಿರುಕಿನಲ್ಲಿ ಸಿಕ್ಕಿ ಬಿದ್ದಿತು. ದೂರದಿಂದ ನೋಡಿದವರಿಗೆ ಈ ಶವ ಕಾಣುತ್ತಿತ್ತು. ಆದರೆ ಅಲ್ಲಿ ಇಳಿದು ಅದನ್ನ ತೆಗೆಯುವುದು ಹೇಗೆ ಅನ್ನುವ ಪ್ರಶ್ನೆ ಬಂದಾಗ ಜೋಗದವನೇ ಆದ ಓರ್ವ ಮುಂದೆ ಬಂದ. ಆತ ಜಲಪಾತದ ಬಿರುಸು ಬಂಡೆಗಳ ಮೇಲಿನಿಂದ ಇಳಿದು ಕೆಳಗೆ ಹೋಗಿ ಆ ಶವವನ್ನ ಅಲ್ಲಿಂದ ಹಗ್ಗಕಟ್ಟಿ ಮೇಲೆ ತರುವಲ್ಲಿ ಯಶಸ್ವಿಯಾದ. ಆದರೆ ಸುಮಾರು 900 ಅಡಿ ಆಳದ ಆ ಕಣಿವೆಯ ಅಂಚಿಗೆ ಹೋಗಿ ಈ ಕೆಲಸ ಮಾಡಿದ ಆತ ಮೇಲೆ ಬಂದ ಎಷ್ಟೋ ಹೊತ್ತಿನವರೆಗೆ ಕಂಪಿಸುತ್ತಿದ್ದ. ಸಣ್ಣಗೆ ಬೆವರುತ್ತಿದ್ದ.

ಇಲ್ಲಿ ಹೇಳಬಹುದಾದ ಮೂರನೇ ಘಟನೆಯೊಂದಿದೆ. ಮಲೆನಾಡಿನ ಒಂದು ಹಳ್ಳಿಗೆ ಸ್ನೇಹಿತರ ಜೊತೆಯಲ್ಲಿ ಹೋಗಿದ್ದೆ ನಾನು. ಒಂದು ಅಡಕೆ ತೋಟದಲ್ಲಿ ಅಡಕೆ ಕೀಳುವ ಕೆಲಸ ನಡೆದಿತ್ತು. ಸೊಂಟಕ್ಕೆ ಸಿಕ್ಕಿಸಿಕೊಂಡ ಹಗ್ಗದ ಆಧಾರದಿಂದ ಅಡಕೆ ಕೊನೆಯನ್ನ ಕೆಳಗೆ ತೇಲಿಬಿಡುತ್ತಿದ್ದ ಕಾರ್ಯವನ್ನ ನೋಡುತ್ತ ನಿಂತ ನನಗೆ ಆಘಾತವಾಗುವಂತಹ ಒಂದು ಘಟನೆ ಕಾಣಲು ಸಿಕ್ಕಿತು. ಅಡಕೆ ಮರ ಹತ್ತಿದವ ಒಂದು ಮರ ಇಳಿದು ಇನ್ನೊಂದು ಮರ ಹತ್ತುವಾಗ ಆತ ಹತ್ತಿದ ಮರ ಲಡ್ಡಾಗಿ ಇದ್ದುದರಿಂದಲೋ ಏನೋ ಅದು ಮುರಿದು ಅದರ ಮೇಲೆ ಹತ್ತುವ ಯತ್ನದಲ್ಲಿದ್ದವ ಕೆಳಗೆ ಬಿದ್ದ.

ಹೀಗೆ ಬಿದ್ದವನಿಗೆ ತುಸು ಪೆಟ್ಟಾದರೂ ಆತ ಬಿದ್ದವನೇ ಮೊದಲು ಮಾಡಿದ ಕೆಲಸ ಅಂದರೆ ಅದೇ ಮರವನ್ನ ಮತ್ತೆ ಹತ್ತಿ ಇಳಿದದ್ದು.

'ಏಕೆ ಹೀಗೆ ಮಾಡಿದೆ' ಎಂದು ಕೇಳಿದಾಗ ಆವನು ನೀಡಿದ ಉತ್ತರ `ನಾವು ಮರ ಹತ್ತಿಯೇ ಬದುಕು ಮಾಡಬೇಕಾದವರು, ಒಂದು ಹೆದರಿಕೆ ನಮ್ಮಲ್ಲಿ ಉಳೀತು ಅಂದರೆ ಮುಂದೆ ಕಷ್ಟ, ಆ ಹೆದರಿಕೆ ಹೋಗಬೇಕು ಅಂದ್ರೆ ಹೀಗೆ ಮಾಡಬೇಕು' ಎಂದ ಆತ.

ಈ ಮೂರೂ ಘಟನೆಗಳು ಪರಿಸರದ ಜೊತೆಯಲ್ಲಿ ಮನುಷ್ಯ ಹೇಗೆ ಸಂಬಂಧವನ್ನ ಇರಿಸಿಕೊಂಡಿದ್ದಾನೆ ಅನ್ನುವುದನ್ನ ನೆನಪಿಸುತ್ತವೆ.
ಅಗಾಧವಾದ ಪರಿಸರಕ್ಕೆ ಕೈಮುಗಿಯುತ್ತಲೇ ಅದನ್ನ ಒಲಿಸಿಕೊಳ್ಳುವುದು, ಭೀಕರವಾದ ಪರಿಸರದ ಜೊತೆಯಲ್ಲಿ ಒಂದು ಅನುಸಂಧಾನವನ್ನ ಮಾಡಿಕೊಂಡು ಬದುಕುವುದು, ಪರಿಸರದಿಂದ ಸೋಲನ್ನ ಕಂಡರೂ ಅದನ್ನ ಮತ್ತೆ ಮತ್ತೆ ಗೆಲ್ಲುವ ಯತ್ನ ಮಾಡುವುದು ಇವೆಲ್ಲ ಒಂದು ಕಾಲದಲ್ಲಿ ಮನುಷ್ಯ ಪರಿಸರದ ಜೊತೆಯಲ್ಲಿ ಮಾಡಿಕೊಂಡ ಹಲವು ಬಗೆಯ ರಾಜಿಗಳು ಎಂದೇ ನನಗೆ ಅನಿಸುತ್ತದೆ. ಆದರೆ ಮನುಷ್ಯ ಮತ್ತು ಪರಿಸರದ ನಡುವಣ ಸಂಬಂಧ ಎಂತಹದು ಎಂಬ ಪ್ರಶ್ನೆ ಇವತ್ತು ಯಾರನ್ನೂ ಕಾಡುತ್ತಿಲ್ಲ. ಮನುಷ್ಯ ಪರಿಸರದ ಕೂಸು ಅನ್ನುವಂತಹಾ ಮಾತುಗಳನ್ನು ಕೂಡ ನಾವು ಮರೆತು ಬಿಟ್ಟಿದ್ದೇವೆ.

ಮನುಷ್ಯ ವೈಜ್ಞಾನಿಕವಾಗಿ ಹಲವು ಸಾಧನೆಗಳನ್ನ ಮಾಡಿದ ಹಾಗೆ, ಚಂದ್ರ ಮಂಗಳಗಳತ್ತ ಅವನ ದೃಷ್ಟಿ ಹರಿದ ಹಾಗೆ, ಆತ ಪರಿಸರದಿಂದ ದೂರವಾಗುತ್ತಿದ್ದಾನೆ. ಬೆಳದಿಂಗಳು, ಸೂರ್ಯೋದಯ, ಸೂರ್ಯಾಸ್ತ, ಮಳೆ ಬಿದ್ದ ಮರುದಿನವೇ ನಮ್ಮ ಮನೆ ಮುಂದಿನ ಬಯಲಲ್ಲಿ ಹಸಿರು ಹುಲ್ಲು ಚಿಗುರುವ ಅಚ್ಚರಿ, ಬೀಜ ಮೊಳಕೆ ಒಡೆಯುವ ಪರಿ, ಬಂಡೆ ಸಂದಿಯಲ್ಲಿ ಗಾಳಿ, ಬಿಸಿಲು ಮಳೆ ಎಲ್ಲವನ್ನ ಸಹಿಸಿಕೊಂಡು ಒಂದು ಬೀಜ ಗಿಡವಾಗಿ ಬೆಳೆಯುವ ಛಲ, ಕಾಲಕಾಲಕ್ಕೆ ಆಗುವ ಋತುಗಳ ಬದಲಾವಣೆ, ಬಾಹ್ಯಾಕಾಶದ ಹಲವು ಅಚ್ಚರಿಗಳು, ಇವೆಲ್ಲವನ್ನ ನೋಡುವ, ನೋಡಿ ಮೈಮರೆಯುವ ಬೆರಗಾಗುವ ನೂರು ಕ್ಷಣಗಳನ್ನ ನಾವು ಕಳೆದುಕೊಂಡಿದ್ದೇವೆ. ಆಧುನಿಕತೆ ಅನ್ನುವುದು ನಮ್ಮ ಮತ್ತು ಪರಿಸರದ ನಡುವೆ ಒಂದು ಕಣ್ಣಪಟ್ಟಿಯಾಗಿ ಬೆಳೆದು ನಿಂತಿದೆ. ಬಹಳ ಜನರಿಗೆ ಪರಿಸರದ ನೆನಪು ಆಗುವುದೇ ಇಲ್ಲ. ಬಹಳ ಜನರಿಗೆ ಪರಿಸರ ಬೇಕಾಗಿಯೂ ಇಲ್ಲ.

ಇಲ್ಲಿ ಪರಿಸರ ಅಂದರೆ ಕೇವಲ ಮರಗಿಡ ಬಳ್ಳಿ ಮಾತ್ರವಲ್ಲ. ಅದೊಂದು ವ್ಯವಸ್ಥೆ. ಒಂದರ ಮೇಲೆ ಇನ್ನೊಂದು ಅವಲಂಬಿಸಿಕೊಂಡು ಇಡೀ ಪ್ರಪಂಚವನ್ನ ಮುನ್ನಡೆಸುವ ಒಂದು ವಿಧಾನ. ಇದರ ಕುರಿತು ಅರಿವನ್ನ ಬೆಳೆಸಿಕೊಳ್ಳುವುದೇ ಪರಿಸರ ಪ್ರೇಮ.

ಆದರೆ ಸದಾ ಮನುಷ್ಯನ ಬದುಕು, ಅವನ ಕಷ್ಟ ಸುಖಗಳ ಕುರಿತೇ ಚಿಂತಿಸುವ ಸಾಹಿತ್ಯ ಮಾತ್ರ ಹಿಂದಿನಿಂದಲೂ ಪರಿಸರವನ್ನ ದೂರ ಮಾಡಿಲ್ಲ. ನಮ್ಮ ಹಿಂದಿನ ಕವಿಗಳಂತೂ `ತಳ್ತ ಎಲೆ ವಳ್ಳಿಯೇ ಚಿಗುರ್ವು ಮಾಮರವೇ ಕುಕಿಲ್ವ ಕೋಗಿಲೆಯೇ' ಎಂದು ಪರಿಸರದ ಮೇಲೆ ಅವಲಂಬಿಸಿಕೊಂಡವರೇ. ಪುಟ್ಟಪ್ಪನಂತಹಾ ಕವಿಗಳ ಕಾವ್ಯದ ಹೆಚ್ಚುಗಾರಿಕೆಯೇ ಪರಿಸರ. `ಕಾಡು ದೇವರ ಬೀಡು; ಗಿರಿಯ ಮುಡಿ ಶಿವನ ಗುಡಿ' ಎಂದೇ ಅವರು ಕೊಂಡಾಡಿದವರು. ಅವರ ಎರಡು ಕಾದಂಬರಿಗಳು ಏನಿವೆ `ಕಾನೂರು ಹೆಗ್ಗಡಿತಿ' ಮತ್ತು `ಮಲೆಗಳಲ್ಲಿ ಮದುಮಗಳು' ಪರಿಸರದ ಅರ್ಥಕೋಶಗಳಂತೆ.
ಕಾರಂತರ `ಬೆಟ್ಟದ ಜೀವ' ತೇಜಸ್ವಿಯವರ ಎಲ್ಲ ಕೃತಿಗಳಲ್ಲೂ ನಾವು ಕಾಣುವುದು ಪರಿಸರದ ವಿವಿಧತೆ ವೈಶಿಷ್ಟ್ಯಗಳನ್ನ. ಓದುಗರು ಈ ಕೃತಿಗಳನ್ನ ಮೆಚ್ಚಿಕೊಂಡಿರುವುದೇ ಪರಿಸರದ ವಿವರಗಳಿಗಾಗಿ. ಬೇಡವೆಂದರೂ ನನಗೆ ಅರ್ನೆಸ್ಟ್ ಹೆಮಿಂಗ್ವೇನ `ಓಲ್ಡ್ ಮ್ಯೋನ್ ಅಂಡ್ ದ ಸೀ' ನೆನಪಾಗುತ್ತದೆ. ಪರಿಸರ ಮತ್ತು ಮನುಷ್ಯನ ನಡುವಣ ಹೋರಾಟವನ್ನ ಹೆಮಿಂಗ್ವೆ ಸುಂದರವಾಗಿ ಚಿತ್ರಿಸುತ್ತಾನೆ ಈ ಕಾದಂಬರಿಯಲ್ಲಿ.

ಪಂಪ, ಕುವೆಂಪು, ಕಾರಂತರ ಕಾಲದಲ್ಲಿ ಪರಿಸರಕ್ಕೆ ಯಾವುದೇ ತೊಂದರೆ ಇರಲಿಲ್ಲ. ಅಂದು ಪರಿಸರ ಮಾನವನ ಜೀವನಕ್ಕೆ ಒಂದು ಒತ್ತಾಸೆಯಾಗಿದ್ದರಿಂದ ಅವರು ಪರಿಸರವನ್ನ ಕುರಿತು ಬರೆದರು, ಅದನ್ನ ಹಾಡಿ ಹೊಗಳಿದರು. ಆದರೆ ತೇಜಸ್ವಿಯವರ ಕಾಲಕ್ಕೆ ಆಗಲೇ ಪರಿಸರ ನಾಶವಾಗತೊಡಗಿತ್ತು. ಈಗಂತೂ ಈ ನಾಶದ ಪರಿಧಿ ವಿಸ್ತಾರವಾಗಿದೆ. ಈಗ ಲೇಖಕ ಪರಿಸರ ಕುರಿತಂತೆ ಎರಡೂ ಬಗೆಯ ದನಿಯನ್ನ ಎತ್ತಬೇಕಾಗಿದೆ. ಪರಿಸರದ ವಿಶೇಷತೆಯನ್ನೂ ಆತ ಹೇಳಬೇಕು ಅದನ್ನ ಉಳಿಸಿಕೊಂಡು ಹೋಗಬೇಕಾದ ಅವಶ್ಯಕತೆಯ ಕುರಿತೂ ಮಾತನಾಡಬೇಕು. ನಾನು ಕೂಡ ಬರವಣಿಗೆಯನ್ನ ಆರಂಭಿಸಿದಾಗ ನನ್ನ ಕಣ್ಣ ಮುಂದಿದ್ದುದು ಪರಿಸರ ಮತ್ತು ಮನುಷ್ಯ. ನಾನು ಮೇಲೆ ಉಲ್ಲೇಖಿಸಿರುವ ಘಟನೆಗಳು ಏನಿವೆ ಅವು ನನಗೆ ಕಲಿಸಿದ ಪಾಠ ಎಂದರೆ ಪರಿಸರದ ಮುಂದೆ ಮನುಷ್ಯ ವಿಧೇಯನಾಗಿರಬೇಕು ಅನ್ನುವುದನ್ನು. ಪರಿಸರದಿಂದ ಪಡೆಯಬಹುದಾದುದನ್ನ ಪಡೆಯಬೇಕು, ಪರಿಸರಕ್ಕೆ ನೀಡಬೇಕಾದ ಗೌರವವನ್ನ ನೀಡಬೇಕು, ಅದಕ್ಕೆ ಸಲ್ಲಿಸಬೇಕಾದ ಕೃತಜ್ಞತೆಯನ್ನ ಸಲ್ಲಿಸಬೇಕು, ಆ ಮೂಲಕ ಮನುಷ್ಯ ತನ್ನ ಬದುಕನ್ನ ನಡೆಸಬೇಕು ಅನ್ನುವುದು ನನ್ನ ಅಂಬೋಣ ಕೂಡ.
ಕಡಲಿನತ್ತ ತಿರುಗಿ ನಿಂತು ಕೈ ಮುಗಿಯುವ ಆ ಮೀನುಗಾರ ಸದಾ ನನಗೆ ಆದರ್ಶ. ಅಂತೆಯೇ ಉಳಿದ ಎರಡು ಘಟನೆಗಳು ಕೂಡ.

ಆದರೆ ಹೊರ ಜಗತ್ತಿನಲ್ಲಿ ನಾನು ನೋಡಿದ್ದು ಇದಕ್ಕೆ ತದ್ವಿರುದ್ಧವಾದುದನ್ನ. ನಾನು ಸರ್ಕಾರಿ ಕೆಲಸಕ್ಕೆ ಸೇರಿದ ಆರಂಭದ ದಿನಗಳಲ್ಲಿ ಒಂದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಕೆಲಸವೆಂದರೆ ಶರಾವತಿ ಯೋಜನೆ ಪ್ರದೇಶದಲ್ಲಿ ಕಳೆದ 50 ವರ್ಷಗಳಿಂದ ಆದ ಮಳೆಯ ಅಂಕಿ-ಅಂಶಗಳನ್ನ ಸಂಗ್ರಹಿಸಿ ಮೇಲಿನ ಅಧಿಕಾರಿಗಳಿಗೆ ಕಳುಹಿಸುವುದು. ಪ್ರತಿ ಊರಿನ ಪ್ರವಾಸಿ ಮಂದಿರ, ಆಸ್ಪತ್ರೆ, ಊರಿನ ಪೊಲೀಸ್ ಸ್ಟೇಷನ್ನಿನ ಮುಂಭಾಗದಲ್ಲಿ ಮಳೆ ಅಳತೆ ಮಾಡುವ ಯಂತ್ರಗಳನ್ನ ಇರಿಸುತ್ತಿದ್ದರು. ಅಲ್ಲದೆ ಬಿದ್ದ ಮಳೆಯನ್ನ ಪ್ರತಿ ದಿನ ಅಳತೆ ಮಾಡಿ ಓರ್ವ ನೌಕರ ಒಂದೆಡೆ ಬರೆದು ಇರಿಸಿಕೊಳ್ಳುತ್ತಿದ್ದ.

ಇಂತಹಾ ಅಳತೆ ಕಟ್ಟೆಗಳಿಂದ ಅಂಕಿಅಂಶವನ್ನ ಕಲೆಹಾಕಿ ಅದನ್ನ ಟೈಪ್ ಮಾಡುವ ಕೆಲಸವನ್ನ ನಾನು ಕೆಲ ವರುಷ ಮಾಡಿದೆ. ಆಗ ಮಲೆನಾಡಿನ ಮಳೆಯ ಅಂಕಿ-ಅಂಶ ಸರಾಸರಿ ವರ್ಷಕ್ಕೆ 320 ಇಂಚು. ಈ ಮಳೆಯ ಆಧಾರದ ಮೇಲೆಯೇ ಲಿಂಗನಮಕ್ಕಿ ಅಣೆಕಟ್ಟನ್ನ ನಿರ್ಮಿಸಲಾಯಿತು. ಅತ್ತ ಅಣೆಕಟ್ಟು ಏಳುತ್ತಿರಲು ಇತ್ತ ಶರಾವತಿಯ ಮುಳುಗಡೆ ಪ್ರದೇಶದಲ್ಲಿಯ ಕಾಡನ್ನ ಕಡಿದು ಸಾಗಿಸುವ ಕೆಲಸ ನನ್ನ ಕಣ್ಣೆದುರಿನಲ್ಲಿಯೇ ನಡೆಯಿತು. ಭಾರೀ ಮರಗಳು ಉರುಳಿ ಬಿದ್ದವು. ಕೆಲವನ್ನ ಅಲ್ಲಿಯೇ ಇದ್ದಲನ್ನಾಗಿ ಮಾಡಿ ಲಾರಿಗಳಲ್ಲಿ ಸಾಗಿಸಲಾಯಿತು. ಹಸಿರು ಹಸಿರಾಗಿದ್ದ ಪ್ರದೇಶ ಬೆಂಗಾಡಾಯಿತು. ಶರಾವತಿ ಯೋಜನೆ ಕೆಲಸ ಮುಗಿದು ಇಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗುತ್ತಿದೆ ಅನ್ನುವಾಗ ಈ ಪ್ರದೇಶದ ಮಳೆ 70- 90 ಇಂಚಿಗೆ ಇಳಿಯಿತು. ಮೊದಲ ಬಾರಿಗೆ ಕಾರ್ಗಲ್ಲಿನಲ್ಲಿ ನಾವು ಭೂಕಂಪನದ ಅನುಭವಕ್ಕೆ ಒಳಗಾದೆವು. ಬೇರೆ ಹಲವಾರು ಸಮಸ್ಯೆಗಳನ್ನ ಎದುರಿಸಬೇಕಾಯಿತು. ಕಾರ್ಗಲ್ ಲಿಂಗನಮಕ್ಕಿ ನಡುವಣ ಟಾರುರಸ್ತೆ ಒಂದು ಕಡೆ ಅಡ್ಡಡ್ಡಲಾಗಿ ಒಂದು ಒಂದೂವರೆ ಅಡಿ ಕೆಳಗೆ ಕುಸಿಯಿತು. `ಶರಾವತಿ ಕರ್ನಾಟಕದ ಬೆಳಕು ಭಾರತದ ಹೆಮ್ಮೆ' ಅನ್ನುವ ಸರ್ಕಾರದ ಘೋಷಣೆ ಏನಿತ್ತು ಅದರಲ್ಲಿ ಏನೋ ಪೊಳ್ಳುತನವಿದೆ ಎಂದು ನನಗೆ ಅನಿಸಿತು. ಪಂಡಿತ ಜವಾಹರಲಾಲ್ ಅವರು ಏನು  `ಅಣೆಕಟ್ಟುಗಳನ್ನ ಆಧುನಿಕ ಭಾರತದ ದೇವಾಲಯಗಳು' ಎಂದು ಕರೆದಿದ್ದರು ಇದು ಸುಳ್ಳು ಎಂದೆನಿಸತೊಡಗಿತು.
ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವುದೆಲ್ಲ ಮೋಸ ವಂಚನೆ ಅನಿಸಿ ನಾನು ಮುಳುಗಡೆಯ ಕುರಿತು ವಿರೋಧವಾಗಿ ಬರೆಯತೊಡಗಿದೆ. ಈ ಮುಳುಗಡೆ ಅನಿಸುವುದು ಕೇವಲ ಪರಿಸರದ ನಾಶ ಮಾತ್ರ ಆಗಿ ನನಗೆ ತೋರಲಿಲ್ಲ. ಇಲ್ಲಿ ತೊಂದರೆಗೆ ಒಳಗಾದ ಸುಮಾರು 30,000ಕ್ಕೂ ಮಿಕ್ಕ ಜನ ಅನುಭವಿಸಿದ ಬವಣೆ ಮನುಷ್ಯನ ಮೇಲೆ  ಮಾಡಿದ ಅತ್ಯಾಚಾರ ಎಂದು ನನಗೆ ಅನಿಸಿತು. ಈ ದೇಶದ ವಿಭಜನೆಯಾದಾಗ ಎಷ್ಟು ಜನ ತೊಂದರೆಗೆ ಒಳಗಾಗಿದ್ದರೋ ಅದಕ್ಕೆ ಮೂರು ಪಟ್ಟು ಜನ ಇಡೀ ದೇಶದಲ್ಲಿ ಈ ಅಣೆಕಟ್ಟುಗಳ ನಿರ್ಮಾಣದಿಂದಾಗಿ ತೊಂದರೆಗೆ ಒಳಗಾಗಿದ್ದಾರೆ ಎಂಬುದನ್ನ ಕೇಳಿದಾಗ ನನಗೆ ಆದ ಆಘಾತ ದೊಡ್ಡದು. ಈ ಜನರ ಬದುಕನ್ನ ಪರಿಸರದಿಂದ ಬೇರ್ಪಡಿಸಿ ನೋಡಲು ನಾನು ಇಂದಿಗೂ ಸಿದ್ಧನಿಲ್ಲ. ಇವರೆಲ್ಲ ಈ ಪರಿಸರದ ಕೂಸುಗಳು. ಇವರನ್ನ ಇಲ್ಲಿಂದ ಹೊರಗೆ ಕಳುಹಿಸಿದ್ದು ಒಂದು ಅಪರಾಧ. ಇವತ್ತು ಸರ್ಕಾರ ಎಲ್ಲೇ ಅಣೆಕಟ್ಟನ್ನ, ವಿಮಾನ ನಿಲ್ದಾಣವನ್ನ, ಕಾರ್ಖಾನೆಯನ್ನ, ಹೆದ್ದಾರಿಯನ್ನ, ಹೊಸ ಬಡಾವಣೆಗಳನ್ನ ಮಾಡುತ್ತೇನೆ ಎಂದು ಹೊರಟಾಗ ಅಲ್ಲಿ ವಿರೋಧ ವ್ಯಕ್ತವಾಗುತ್ತದೆ. ಅದಕ್ಕೆ ಕಾರಣ ತಮಗೆ ತೊಂದರೆಯಾಗುತ್ತದೆಂದು ಜನ ಕೂಗುವುದು. ಈ ಕೂಗಿನ ಹಿಂದಿರುವುದು ಪರಿಸರದ ಪ್ರಶ್ನೆ. ಈ ಪ್ರಶ್ನೆಯನ್ನೇ ನಾನು ದೊಡ್ಡದಾಗಿ ಬಿಂಬಿಸುತ್ತ ಬಂದಿದ್ದೇನೆ. ನಾನು ಮುಳುಗಡೆಯ ಕುರಿತು  ಬರೆದಿರುವ ಕಾದಂಬರಿಗಳು (ದ್ವೀಪ, ಮುಳುಗಡೆ, ಒಡ್ಡು, ಗುಣವಂತೆ), ಹಲವಾರು ಕತೆಗಳು ಇದೇ ವಿಷಯವನ್ನ ಕುರಿತು ಆಗಿದ್ದು ನನಗೆ `ಮುಳುಗಡೆ ಡಿಸೋಜ' ಅನ್ನುವ ಹೆಸರನ್ನೂ ತಂದು ಕೊಟ್ಟಿವೆ.

ಬರೆದದ್ದನ್ನೇ ಬರೆಯುತ್ತಾನೆ ಅನ್ನುವ ಆಪಾದನೆಯೂ ನನ್ನ ಮೇಲಿದೆ. ಈಗಲೂ ಸರ್ಕಾರ ಅಣೆಕಟ್ಟುಗಳನ್ನ ನಿರ್ಮಿಸುವ ಮಾತುಗಳನ್ನ ಆಡುತ್ತಲೇ ಇದೆ. ಪಶ್ಚಿಮ ಘಟ್ಟದ ಉದ್ದಕ್ಕೂ ಸುಮಾರು 29 ಅಣೆಕಟ್ಟುಗಳನ್ನ ನಿರ್ಮಿಸಬೇಕು ಅನ್ನುವ ಹುನ್ನಾರ ಸರ್ಕಾರದ ಮುಂದಿದೆ. ಅಣೆಕಟ್ಟನ್ನು ನಿರ್ಮಿಸುವ ಕೆಲಸವನ್ನ ಸರ್ಕಾರ ನಿಲ್ಲಿಸಿಲ್ಲ, ಇನ್ನು ಇದರ ಬಗ್ಗೆ ಬರೆಯುವುದನ್ನ ನಾನು ಏಕೆ ನಿಲ್ಲಿಸಬೇಕು ಎಂದು ನಾನು ನನ್ನ ವಿಮರ್ಶಕರಿಗೆ ಕೇಳ ಬಯಸುತ್ತೇನೆ. ನಾನು ಕಾದಂಬರಿಯ ಮೂಲಕ ಎತ್ತಿದ ಸಮಸ್ಯೆ ಸೆಲ್ಯೂಲಾಯ್ಡ ಮೂಲಕ ಎಲ್ಲರ ಗಮನ ಸೆಳೆದಿದೆ. ನನ್ನ ಕಾದಂಬರಿ `ದ್ವೀಪ' ಚಲನಚಿತ್ರವಾಗಿ ನನ್ನ ನಾಗಿ, ದುರ್ಗಜ್ಜರ ಸಮಸ್ಯೆ ಹಲವರನ್ನ ಕಾಡಿದೆ. ಇದೇ ಕಾದಂಬರಿ `ಆಕ್ಸ್‌ಫರ್ಡ್' ಪ್ರಕಾಶನದ ಮೂಲಕ  ಆಂಗ್ಲ ಭಾಷೆಗೆ ಅನುವಾದವಾಗಿ ಈ ಸಮಸ್ಯೆ ಮತ್ತೂ ಹೊಸ ಆಯಾಮಗಳಲ್ಲಿ ಚರ್ಚೆಗೆ ಒಳಗಾಗಲಿದೆ.

ನಾಲಿಗೆ ನೋಯುವ ಹಲ್ಲನ್ನ ಮತ್ತೆ ಮತ್ತೆ ಸವರುತ್ತದೆ. ಅದು ಸಹಜ. ವಿವಿಧ ರೀತಿಯಲ್ಲಿ ವಿವಿಧ ಬಗೆಯಲ್ಲಿ ನಾವು ಪರಿಸರವನ್ನ ಕಳೆದುಕೊಳ್ಳುತ್ತಿದ್ದೇವೆ. ಶರಾವತಿ ನದಿ ತನ್ನ ನದಿಯ ಸ್ವಭಾವವನ್ನ ಕಳೆದುಕೊಂಡ ಮೇಲೆ ಜೋಗದ ಜಲಪಾತ ಸತ್ತು ಹೋಯಿತು. 1905ರಲ್ಲಿ ಲಾರ್ಡ ಕರ್ಜನ್‌ಗೆ ಬ್ರಿಟಿಷ್ ಸರ್ಕಾರ ಒಂದು ಕಾರ್ಯವನ್ನ ವಿಧಿಸುತ್ತದೆ. ಕೆಲ ಬ್ರಿಟಿಷ್ ಕಂಪನಿಗಳು ಇಲ್ಲಿ ವಿದ್ಯುತ್ತನ್ನ ಉತ್ಪಾದಿಸಲು ಅನುಮತಿ ಕೇಳಿರುತ್ತವೆ. ಈ ವಿಷಯವನ್ನ ಪರಿಶೀಲಿಸಲು ಸರ್ಕಾರ ಕೇಳಿಕೊಂಡಾಗ ಕರ್ಜನ್ `ಇದಕ್ಕೆ ಅನುಮತಿ ಕೊಡಬೇಡಿ, ಕೊಟ್ಟರೆ ಒಂದು ಸುಂದರ ಜಲಪಾತ ಕಾಣೆಯಾಗುತ್ತದೆ' ಎಂದು ಉತ್ತರ ಕೊಡುತ್ತಾನೆ. ನಂತರದ ವಿಷಯ ನಮಗೆ ಗೊತ್ತಿದೆ. ಇವತ್ತು ಜಲಪಾತವಿಲ್ಲ. ಈ ಬಗ್ಗೆಯೇ ನಾನು ಬರೆದೊಂದು ಕಾದಂಬರಿ `ಒಂದು ಜಲಪಾತದ ಸುತ್ತ'. ಅಂತೆಯೇ ಶರಾವತಿ ಗೇರಸೊಪ್ಪೆಯಿಂದ ಹೊನ್ನಾವರದವರೆಗೆ ದೋಣಿಗಳ ಓಡಾಟಕ್ಕೆ ಹೇಳಿ ಮಾಡಿಸಿದಂತಹಾ ಒಂದು ನದಿ. ಒಂದು ಕಾಲದ ಗೇರಸೊಪ್ಪೆ ರಾಜಧಾನಿ ಇದ್ದುದು ಈ ನದಿಯ ದಡದ ಮೇಲೆ. ಪೋರ್ಚುಗೀಸರು ಗೇರಸೊಪ್ಪೆಯ ರಾಣಿಯ ಜೊತೆ ಸಂಪರ್ಕ ಇರಿಸಿಕೊಂಡದ್ದು ಈ ನದಿಯ ಮೂಲಕ. ನೂರಾರು ಮೀನ ದೋಣಿಗಳು, ಪ್ರಯಾಣಿಕರ ದೋಣಿಗಳು ತಿರುಗಾಡುತ್ತಿದ್ದದು ಇಲ್ಲಿ. ಇಡೀ ಒಂದು ಬದುಕು ಈ ನದಿಯ ಮೇಲೆ ಅವಲಂಬಿಸಿಕೊಂಡಿತ್ತು. ಈಗ ನದಿ ಸೊರಗಿದೆ. ನದಿ ಪಕ್ಕದಲ್ಲಿ ಒಂದು ಹೆದ್ದಾರಿಯಾಗಿದೆ. ಆಧುನಿಕತೆ ಅನ್ನುವುದು ಇಲ್ಲಿ ವಿಜೃಂಭಿಸುತ್ತಿದೆ. ಈ ಎಲ್ಲ ಚಿತ್ರಣವನ್ನ ನಾನು `ಹರಿವ ನದಿ' ಎಂಬ ಕಾದಂಬರಿಯ ಮೂಲಕ ನೀಡಿದ್ದೇನೆ. ಇದು ಮತ್ತೆ ಪರಿಸರದ ಬಗೆಗಿನ ನನ್ನ ಆಸಕ್ತಿ ಅಭಿಮಾನ.
ನನ್ನ ಈ ಪರಿಸರಾಸಕ್ತಿಯನ್ನ ಗಮನಿಸಿದ ಓರ್ವ ವಿಮರ್ಶಕರು ನನ್ನನ್ನ `ನದಿಯೊಂದರ ಕತೆಗಾರ' ಎಂದು ಕರೆದಿದ್ದಾರೆ. ಇದು ಕೂಡ ನನಗೆ ಹೆಮ್ಮೆ ತರುವ ವಿಷಯವೇ. ನದಿ ಕೂಡ ಪರಿಸರದ ಒಂದು ಅಂಗವೇ ಅಲ್ಲವೆ? ಕೊಡೈಕೆನಾಲಿನಲ್ಲಿ 12 ವರ್ಷಗಳಿಗೆ ಒಂದು ಹೂವು ಅರಳುತ್ತದೆ. ಅದರ ಹೆಸರು ಕೆಂಜಿರ ಪುಷ್ಪಂ.  ಆಗ ಕೆಲ ದಿನ ಇಡೀ ಕಣಿವೆ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಕೆಲವೇ ದಿನ ಇದ್ದು ಈ ಹೂವು ಬಾಡಿಹೋಗುತ್ತದೆ, ಮತ್ತೆ 12 ವರ್ಷಗಳ ನಂತರ ಇದು ಅರಳುತ್ತದೆ. ಈ ವಿಷಯವನ್ನೇ ಆಧಾರವಾಗಿ ಇರಿಸಿ ಕೊಂಡು ನಾನು ಬರೆದ ಕಾದಂಬರಿ `ಕುಂಜಾಲು ಕಣಿವೆಯ ಕೆಂಪು ಹೂವು'. ಮತ್ತೆ ಆಧುನಿಕತೆಯ ಹೆಸರಿನಲ್ಲಿ ನಾವು ಏನನ್ನ ಕಳೆದುಕೊಂಡಿದ್ದೇವೆ, ನಮ್ಮ ಹಿರಿಯರು ಇಲ್ಲಿ ಅದು ಹೇಗೆ ಬದುಕಿದ್ದರು, ನಮ್ಮ ಬದುಕಿನ ಕೊರತೆಗಳೇನು ಅನ್ನುವುದನ್ನ ಓದುಗರ ಗಮನಕ್ಕೆ ತರುವ ಒಂದು ಯತ್ನ ಇದು. ಈ ಕಾದಂಬರಿ ತೆಲುಗು ಮತ್ತು ಮಲಯಾಳಂ ಭಾಷೆಗೆ ಅನುವಾದಗೊಂಡಿದೆ. ನಮ್ಮ ಕಾಡಿನಲ್ಲಿ ಇರುವ ಹಲವಾರು ಗಿಡ ಮರಗಳು ಪ್ರಾಣಿಗಳು ಪಕ್ಷಿಗಳು ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಈ ಕಾದಂಬರಿ ಅಂತಹಾ ಒಂದು ವಿಷಯವನ್ನ ಡೀಲ್ ಮಾಡುತ್ತದೆ.

ಕರಗುತ್ತಿರುವ ಬೆಟ್ಟಗಳು, ಪಕ್ಷಿ  ಪ್ರಾಣಿ, ಬದಲಾದ ಜನ ಜೀವನ ಈ ಕಾದಂಬರಿಯ ವಸ್ತು. ತಂದೆಯಾದವನು ಪರಿಸರದಲ್ಲಿ ಏನನ್ನ ಕಂಡು ಸಂತಸ ಪಟ್ಟನೋ ಅದನ್ನ ಮಗ ನೋಡಲಾಗದೆ ಪರಿತಪಿಸುತ್ತಾನೆ. ನಾವು ಕಳೆದುಕೊಂಡ ಪರಿಸರದ ಒಂದು ಪರಿಚಯವನ್ನ ಈ ಕಾದಂಬರಿ ಮಾಡಿ ಕೊಡುತ್ತದೆ.

ಅಂತೆಯೇ ಮಕ್ಕಳಿಗಾಗಿ ನಾನು ಬರೆದ ಕೆಲ ಮಿನಿ ಕಾದಂಬರಿಗಳು ನನಗೆ ಪ್ರಿಯವಾದ ಈ ವಿಷಯವನ್ನ ಕುರಿತು ಮಾತನಾಡುತ್ತವೆ. `ಹಕ್ಕಿಗೊಂದು ಗೂಡು ಕೊಡಿ' ಪರಿಸರದಲ್ಲಿ ಗೂಡುಗಳನ್ನ ಕಟ್ಟಿ ಕೊಳ್ಳಲು ಅವಕಾಶ ಇಲ್ಲದಂತಹಾ ಪರಿಸ್ಥಿತಿಯಲ್ಲಿ ಬವಣೆ ಪಡುವ ಒಂದು ಹಕ್ಕಿಯ ಕತೆ ಇದು. ಈ ಕಾದಂಬರಿ ನಾಟಕವಾಗಿ ಹಲವೆಡೆಗಳಲ್ಲಿ ಪ್ರದರ್ಶನಗೊಂಡಿದೆ. ಹಾಗೆಯೇ ಎನ್. ಬಿ. ಟಿ. ಯವರು ಪ್ರಕಟಿಸಿದ `ಮಕ್ಕಳು ಕಲಿಸಿದ ಪಾಠ' ಎಂಬ ನಾಟಕ ಕೂಡ  ಪರಿಸರದ ಬಗ್ಗೆ ಮಕ್ಕಳು ವ್ಯಕ್ತಪಡಿಸುವ ಪ್ರೀತಿಯನ್ನ ತೋರ್ಪಡಿಸುವಂತಹದು. ಶಾಲೆಯ ಮುಂದೆ  ಇದ್ದ ಮರವೊಂದರ ಜೊತೆಯಲ್ಲಿ ಮಕ್ಕಳು ಒಂದು ಅವಿನಾಭಾವ ಸಂಬಂಧವನ್ನ ಇರಿಸಿಕೊಂಡಿರುತ್ತಾರೆ. ಆದರೆ ಕೆಲ ಮರಗಳ್ಳರು ಈ ಮರ ಕಡಿದು ಮಾರಿ ಅಲ್ಲೊಂದು ಮರದ ಪ್ರತಿಕೃತಿಯನ್ನ ನಿಲ್ಲಿಸಿದಾಗ ಮಕ್ಕಳು ಆ ಮರಗಳ್ಳರಿಗೆ ಮತ್ತೆ ಮರ ನೆಟ್ಟು ಬೆಳೆಸುವ ಶಿಕ್ಷೆ ವಿಧಿಸುತ್ತಾರೆ.

ಹೀಗೆ ನನ್ನ ಕತೆ ಕಾದಂಬರಿಗಳಲ್ಲಿ ಪರಿಸರ ಕುರಿತ ಹಲವು ಸಮಸ್ಯೆಗಳನ್ನ ನಾನು ಚಿತ್ರಿಸುತ್ತ ಬಂದಿದ್ದೇನೆ. ಹಾಗೆಂದು ಈ ವಿಷಯವನ್ನ ಒತ್ತಾಯ ಪೂರ್ವಕವಾಗಿ ಎಳೆದು ತಂದು ಕಾದಂಬರಿಯಲ್ಲಿ ಸೇರಿಸಬೇಕಾಗಿಲ್ಲ. ನೀರು, ಗಾಳಿ, ಬೆಳಕು, ಮಣ್ಣು, ಹೀಗೆ ಪರಿಸರ ನೀಡಿದ ಎಲ್ಲವೂ ನಮ್ಮ ಬದುಕಿಗೆ ಅತ್ಯಾವಶ್ಯಕವಾಗಿ ಇರುವುದರಿಂದ ಇವಿಲ್ಲದೆ ನಾವು ಬದುಕಲಾರೆವು ಅನ್ನುವುದೂ ನಿಜವೇ. ಆದರೆ ಈ ಅರಿವು ನಮ್ಮ ಹಿರಿಯರಿಗಿತ್ತು, ಅದು ನಮಗೆ ಇಲ್ಲ ಅನ್ನುವುದು ಒಂದು ದುರಂತ. ಈ ದುರಂತಕ್ಕೆ  ಸಾಹಿತ್ಯದ ರೂಪ ಕೊಡುವ ಕೆಲಸವನ್ನ ನಾನು ಮಾಡಿ ಕೊಂಡು ಬಂದಿದ್ದೇನೆ. ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕ ಈ ವಿಷಯ ಓದುಗರ ಗಮನಕ್ಕೆ ಬಂದೀತು ಅನ್ನುವ ಭರವಸೆ ಕೂಡ ನನಗಿದೆ.
ಓರ್ವ ಆಂಗ್ಲ ಲೇಖಕ ಒಂದು ಮಾತನ್ನ ಹೇಳಿದ್ದಾನೆ `ಮರಕಟುಕನೆ ದೂರ ಸರಿ, ಈ ಮರ ಬಾಲ್ಯದಿಂದ ನನಗೆ ನೆರಳನ್ನ ತಂಪನ್ನ ನೀಡಿ ಕಾಪಾಡಿದೆ, ಈಗ ನಾನು ಅದನ್ನ ರಕ್ಷಿಸ ಬೇಕು... ದೂರ ಸರಿ'.
ಇದೇ ಮಾತನ್ನ ಹೇಳುವುದು ನನ್ನ ಕರ್ತವ್ಯ ಅಂದುಕೊಂಡಿದ್ದೇನೆ ನಾನು. ನಮ್ಮ ಕವಿಗಳು, ಕುವೆಂಪು, ಕಾರಂತ, ತೇಜಸ್ವಿ ಮತ್ತಿತರರ ದನಿಗೆ ನನ್ನ ದನಿ ಸೇರಿಸಿದ್ದೇನೆ.