ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 17 October 2017

ದೀಪಾವಳಿ ಹಬ್ಬದ ಪರಂಪರ ಬಗ್ಗೆ ಒಂದಿಷ್ಟು ತಿಳಿಯಿರಿ

*"ದೀಪಾವಳಿ"*-
ಕತ್ತಲೆಯ ಕಳೆದು ಬೆಳಕು ಹರಿಸುವ ಹಬ್ಬ*                                                                    ‌                                                                                    *"ದೀಪವು ಜ್ಞಾನದ ಸಂಕೇತ,ಅಭಿವೃದ್ಧಿಯ ಸಂಕೇತ*"                         ‌                            ‌                                                                                                                          ಸಾಲು ಸಾಲಾಗಿ ದೀಪಗಳನ್ನು ಮನೆ, ಮಂದಿರ, ಮಠ, ನದಿ ತೀರಗಳಲ್ಲಿ ಬೆಳಗಿಸಿ, ದೇವತಾರಾಧನೆ ಮಾಡಿ, ಬಂಧು ಬಾಂಧವರೊಡನೆ ನಲಿಯುವ ಹಬ್ಬವೇ ದೀಪಾವಳಿ. ದೀಪಗಳನ್ನು, ಬೆಳಕನ್ನು ಪೂಜಿಸುವ ನಾವು ದೀಪದಲ್ಲಿ ದೇವಿಯ ಸಾನ್ನಿಧ್ಯವನ್ನು ಕಂಡವರು.                                       ‌                 ‌                                                                            ‌                                                                    * ಕಾರ್ತಿಕ ಮಾಸದಲ್ಲಿ  ದೀಪೋತ್ಸವ ಆಚರಿಸಬೇಕು. ದೀಪ ಪರಬ್ರಹ್ಮನ ಪ್ರತೀಕ. ಕತ್ತಲು ಎಂದರೆ ತಮೋಗುಣ - ಅಜ್ಞಾನ. ಬೆಳಕು ಎಂದರೆ ಸತ್ವಗುಣ - ಜ್ಞಾನ. ಬೆಳಕು ಹೊಸ ಬದುಕಿನ ಹಾದಿಯಾದರೆ, ಕತ್ತಲು ಕಷ್ಟ, ಭಯ, ಆತಂಕ, ನೋವುಗಳನ್ನು ಬಿಂಬಿಸುತ್ತದೆ. ಬೆಳಕು ಶಾಂತಿಯ ಸಂಕೇತ. ಕತ್ತಲು ಹಾಗೂ ಬೆಳಗಿನ ನಡುವೆ ಜೀವನ ನಡೆಸುವ ನಮಗೆ ದೀಪಾವಳಿ ಹೊಸ ಜೀವನ, ಬದುಕಿನ ಹಾದಿ ತೋರಿಸುವ ಹಬ್ಬವಾಗಿದೆ.                     ‌    ‌   ‌                                                                                      ‌                                                             ದೀಪಾವಳಿ ಹಬ್ಬವು 5 ದಿನಗಳ ಹಬ್ಬವಾಗಿದೆ.                                  ‌                                                            🌻 *ನೀರು ತುಂಬುವ ಹಬ್ಬ* 🌻                                        ‌                                                                   ಆಶ್ವಯುಜ ಮಾಸದ ಕೃಷ್ಣ  ಪಕ್ಷದ ತ್ರಯೋದಶಿ ದಿನದ ಸಾಯಂಕಾಲ ನೀರು ತುಂಬುವ ಹಬ್ಬ ಆಚರಿಸಲಾಗುತ್ತದೆ.  ಇದನ್ನು "ಧನ ತ್ರಯೋದಶಿ" ಎಂದೂ ಕರೆಯಲಾಗುತ್ತದೆ. ಆ ದಿನ ನೀರಿನ ಕೊಡಗಳನ್ನು ಶುದ್ಧವಾಗಿ ತೊಳೆದು ಸ್ವಚ್ಛ  ಮಾಡಿ, ಶುದ್ಧವಾದ ನೀರನ್ನು ತುಂಬಿ ಅದಕ್ಕೆ ಪೂಜೆ ಮಾಡುತ್ತಾರೆ. ಆ ದಿನ ಆ ನೀರನ್ನು ಉಪಯೋಗಿಸುವ   ಹಾಗಿಲ್ಲ ‌ ಕಳಶ ಪೂಜೆ ಮಾಡಿದ ರೀತಿಯಲ್ಲಿ ಆ ಕೊಡವನ್ನು    ಪೂಜಿಸಬೇಕು.                        ‌                                                                                         ‌                                                                                  🌻 *ನರಕ ಚತುರ್ದಶಿ ಹಬ್ಬ* 🌻                                                 ‌                                                         ದ್ವಾಪರ ಯುಗದಲ್ಲಿ ಲೋಕಕಂಟಕನಾದ ನರಕಾಸುರ  ಎಂಬ ರಾಕ್ಷಸನೊಂದಿಗೆ ಘೋರ ಯುದ್ಧ ಮಾಡಿ ಆ ರಾಕ್ಷಸನನ್ನು ಸಂಹರಿಸಿದನು. ಆ ದಿನ ಆಶ್ವಯುಜ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನವಾಗಿತ್ತು. ಆ ರಾತ್ರಿ ಶ್ರೀಕೃಷ್ಣನು ರಾಕ್ಷಸರನ್ನು ಸಂಹಾರ ಮಾಡಿ ಇಡೀ ಲೋಕಕ್ಕೆ ನೆಮ್ಮದಿಯ ಬೆಳಕನ್ನು ನೀಡಿದ ಶುಭ ದಿನವಾಯಿತು. ಹಾಗಾಗಿ ಆ ದಿನ ನರಕ ಚತುರ್ದಶಿ ಎಂದು ಕರೆಯಲ್ಪಟ್ಟಿದೆ.  ನರಕ ಚತುರ್ದಶಿ ದಿನ ತೈಲ ಸ್ನಾನ ಮಾಡುತ್ತೇವೆ. ಈ ಸ್ನಾನ ಮಾಡಲು ಕಾರಣ ನರಕಾಸುರನು ಮರಣ ಹೊಂದಿದ್ದರಿಂದ ಅಶೌಚವಾಯಿತು. ಆದ್ದರಿಂದಲೇ ಆ ದಿನ ಎಣ್ಣೆ ನೀರಿನ ಅಭ್ಯಂಜನ ಸ್ನಾನ ಮಾಡಬೇಕು.                                                                                        ‌                                                                                            ಆ ದಿನ ಎಣ್ಣೆ ಸ್ನಾನಕ್ಕೆ ಬಹಳ ಪ್ರಾಶಸ್ತ್ಯವಿದೆ. ಎಣ್ಣೆ ಸ್ನಾನ ಮಾಡದೇ ಇರುವವರು ಆ ದಿನ ಮಾಡಲೇಬೇಕು. ಸ್ತ್ರೀಯರು, ಪುರುಷರು, ಮಕ್ಕಳು, ಸಂನ್ಯಾಸಿಗಳಾದಿಗಳಾಗಿ ಎಲ್ಲರೂ ಅಂದು ಎಣ್ಣೆ ಸ್ನಾನ ಮಾಡಬೇಕು ಎಂದು ಧರ್ಮ ಶಾಸ್ತ್ರ ಹೇಳುತ್ತದೆ.                            ‌                                                                                    ಎಣ್ಣೆಯಲ್ಲಿ ಲಕ್ಷ್ಮೀ ದೇವಿಯೂ, ನೀರಿನಲ್ಲಿ ಗಂಗಾ ದೇವಿಯೂ ಇರುವುದರಿಂದ, ನಮಗೆ ಲಕ್ಷ್ಮೀ ಹಾಗೂ ಗಂಗಾ ದೇವಿಯ ಆಶೀರ್ವಾದ ಸಿಗುತ್ತದೆ ಎಂದು ನಂಬಿಕೆ ಇದೆ.                                                                                                 ‌                                                                  ‌  ನರಕ ಎಂದರೆ ಅಜ್ಞಾನ. ಈ ಅಜ್ಞಾನವು ಚತುರ್ದಶಿ ದಿನದಂದಲೇ ನಾಶವಾಗಿ ಜ್ಞಾನ ದೊರೆಯಲಿ ಎಂದು ನರಕ ಚತುರ್ದಶಿ ಹಬ್ಬವನ್ನು ಆಚರಿಸುವುದು. ಚತುರ್ದಶಿ ಎಂದರೆ 14 ಎಂದು ಅರ್ಥ. ಜ್ಞಾನವನ್ನು ಸಂಪಾದಿಸಲು 14 ವಿದ್ಯೆಗಳನ್ನು ಸಂಪಾದಿಸಬೇಕು.  ನರಕ ಚತುರ್ದಶಿ ದಿನ ಸಂಜೆ ಮನೆಯ ಮುಂದೆ ಲೋಹದಿಂದಲೋ ಅಥವಾ ಮಣ್ಣಿನಿಂದಲೋ ಮಾಡಿದ ಹಣತೆಯಲ್ಲಿ ದೀಪವನ್ನು ಮತ್ತು ನರಕಾಸುರನ ಸಂಹಾರವಾದ ಸಂತೋಷಕ್ಕಾಗಿ ಪಟಾಕಿ ಹಚ್ಚಿ ಸಂತೋಷ ಪಡುವ ಕಾರ್ಯ ಹಿಂದಿನಿಂದಲೂ ಆಚರಣೆಯಲ್ಲಿ ಬಂದಿದೆ.                             ‌     ‌        ‌     ‌      ‌     ‌                             ‌ 🌻 *ಅಮಾವಾಸ್ಯೆಯ ಹಬ್ಬ (ಧನಲಕ್ಷ್ಮೀ ಪೂಜೆ)* 🌻                   ‌                                                                                                                                                                                   ಆಶ್ವಯುಜ ಮಾಸದ ಅಮಾವಾಸ್ಯೆ ದಿನ ಧನಲಕ್ಷ್ಮಿಗೆ ಪೂಜೆ ಸಲ್ಲಿಸುತ್ತಾರೆ.  ಅಮಾವಾಸ್ಯೆ ಎಂದರೆ ಅಶುಭ ಎಂದು ಕರೆಯುತ್ತಾರೆ. ಅಂದು ಯಾವ ಹೊಸ ಕಾರ್ಯಗಳನ್ನೂ ಮಾಡುವುದಿಲ್ಲ ಹಾಗೂ ಮಂಗಳಕರವಾದ ಪೂಜೆ ಸಹ ಮಾಡುವುದಿಲ್ಲ. ಆದರೆ ಈ ದೀಪಾವಳಿಯ ಅಮಾವಾಸ್ಯೆ ಇದಕ್ಕೆ ವಿರುದ್ಧವಾಗಿದೆ. ಏಕೆಂದರೆ ಅಂದು ವಿಷ್ಣುವಿನ ಪತ್ನಿಯಾದ ಮತ್ತು ಧನದೇವತೆಯಾದ ಮಹಾಲಕ್ಷ್ಮಿಯು ಸಮುದ್ರ ಮಥನದಿಂದ ಉದಯಿಸಿದ ದಿನ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದ ಅಂದು ಧನಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ದುಡಿದ ಸಂಪತ್ತು ಸ್ಥಿರವಾಗಿ ನಮ್ಮಲ್ಲಿರಬೇಕು ಎಂದು ಜ್ಞಾನಿಗಳು ಹೇಳುತ್ತಾರೆ. ಆದ್ದರಿಂದ ಆ ದಿನ ನಾವು ಶ್ರದ್ಧಾ ಭಕ್ತಿಗಳಿಂದ ಲಕ್ಷ್ಮೀ ಪೂಜೆಯನ್ನು ಮಾಡಬೇಕು.          ‌                                                                                                            

🌻*ಬಲಿಪಾಡ್ಯಮಿ*🌻                                                                      ‌     ‌                                                   ಕಾರ್ತೀಕ ಮಾಸದ ಮೊದಲನೆಯ ದಿನ ಅಂದರೆ ಪಾಡ್ಯಮಿಯ ದಿನ ಈ ಹಬ್ಬವನ್ನು ಆಚರಿಸುತ್ತಾರೆ. ಎಲ್ಲಾ ದಾನವರಿಗಿರುವ ದುರಾಸೆಯಂತೆ ಪ್ರಹ್ಲಾದನ ವಂಶದ ಬಲಿ ಚಕ್ರವರ್ತಿಗೂ ಸ್ವರ್ಗಾಧಿಪತಿಯಾಗಬೇಕೆಂಬ ಮಹದಾಸೆಯಿತ್ತು. ಬಲಿಯ ಗರ್ವಭಂಗ ಮಾಡಲು, ಶ್ರೀ ಹರಿಯು ವಾಮನ ಅವತಾರ ಎತ್ತಿ, ಬಲಿಯನ್ನು ಪಾತಾಳಕ್ಕೆ ತಳ್ಳಿದನು. ಆತನ ಮಹಾ ಬಲಿದಾನಕ್ಕೆ ಅವನ ಆಸೆಯಂತೆ ಶ್ರೀಹರಿಯು ಸದಾಕಾಲವೂ ಬಲಿಯ ಬಳಿಯೇ ಇರುತ್ತಾನೆಂದೂ, ಶ್ರೀಲಕ್ಷ್ಮಿಯ ಪ್ರಾರ್ಥನೆಯಂತೇ ಬಲಿಪಾಡ್ಯಮಿಯಂದು ಬಂದು ಭಕ್ತರ ಇಷ್ಟಾರ್ಥ ನೆರವೇರಿಸುತ್ತಾನೆಂದೂ, ಪ್ರಸನ್ನಳಾದ ಲಕ್ಷ್ಮೀ ಸಕಲ ಸಂಪತ್ತನ್ನೂ ನೀಡುತ್ತಾಳೆಂದೂ ಪುರಾಣ ಪ್ರಸಿದ್ಧಿಯಾಗಿದೆ. 🌻           ‌   ‌              ‌                                     ‌                                                             🌻 *ಸೋದರ ಬಿದಿಗೆ* 🌻   ‌          ‌         ‌         ‌                                           ‌                                                                               ಪಾಡ್ಯದ ನಂತರ ಬರುವ ಹಬ್ಬವೇ ಸೋದರ ಬಿದಿಗೆ. ಅಂದು ಯಮನು ತನ್ನ  ಸೋದರಿ ಯಾದ ಯಮುನಾದೇವಿಯ ಮನೆಗೆ ಹೋಗಿ ಅವಳ ಸತ್ಕಾರ ಸ್ವೀಕರಿಸಿ ಅವಳನ್ನು ಹರಸಿ ಉಡುಗೊರೆ ಕೊಟ್ಟು ಬಂದನೆಂದು ಪ್ರತೀತಿ. ಅವರ ನೆನಪಿಗಾಗಿ ಸೋದರ- ಸೋದರಿಯರು ವರ್ಷಕ್ಕೊಮ್ಮೆಯಾದರೂ ಈ ರೀತಿ ಸೇರಿ ತಮ್ಮ ಬಾಂಧವ್ಯವನ್ನು ಉಳಿಸಿಕೊಳ್ಳಲಿ ಎಂದು ಅಂದು ಸೋದರನು ತನ್ನ ಸೋದರಿಯ ಮನೆಗೆ ಹೋಗಿ ಅವಳ ಕೈಯಲ್ಲಿ ಊಟ ಮಾಡಿ ಉಡುಗೊರೆ ಕೊಟ್ಟು ಹರಸಿ ಬರುವ ವಾಡಿಕೆ ಇದೆ.  ‌         ‌                  ‌   ‌         ‌      ‌     ‌                                                                                                                                                     ನಮ್ಮ ಬದುಕು ಜ್ಞಾನದ ಬೆಳಕಿನಿಂದ ತುಂಬಿದ್ದರೆ ಬದುಕು ಸಾರ್ಥಕವಾಗುತ್ತದೆ. ಅಜ್ಞಾನದ ಅಂಧಕಾರ ನಿವಾರಿಸುವುದಕ್ಕೆ ದೀಪಗಳನ್ನು ಬೆಳಗುವುದು ಸಾಂಕೇತಿಕ ರೂಪವಾದರೂ, ನಮ್ಮನ್ನು ನಾವು ತಿದ್ದಿ ಕೊಂಡು ಮುನ್ನಡೆಯ ಬೇಕೆಂಬ ಮನೋಭಾವ ನಮ್ಮಲ್ಲಿ ಒಡಮೂಡಬೇಕು. *ಪ್ರತಿಯೊಬ್ಬರೂ ಮನದೊಳಗೆ ದೀಪಗಳನ್ನು ಬೆಳಗಿಸೋಣ*. ಜ್ಞಾನವನ್ನು ಪಡೆಯೋಣ.
*ಎಲ್ಲರಿಗೂ ಶುಭವಾಗಲಿ*

No comments:

Post a Comment