ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್

  ಮಕ್ಕಳ   ಪ್ರಶ್ನೆಗಳ ಪದಮಾಲೆ ಅಂಕಪಟ್ಟಿ ಬಾಲ್ಯ 


             ಮಕ್ಕಳನ್ನು ಅಂಕವೀರರನ್ನಾಗಿಸುವ ಪಾಲಕರ ಆತುರ, ಆಕಾಂಕ್ಷೆ,  ಸ್ಪರ್ಧಾಲೋಕಕ್ಕೆ ಮಕ್ಕಳನ್ನು ಅಣಿಗೊಳಿಸಬೇಕಾದ ಅನಿವಾರ್ಯತೆಯಿಂದಾಗಿ ಅಂಕಗಳ ಹಿಂದೆ ತಳ್ಳಿದ ಮಕ್ಕಳ ಇಂದಿನ ಆಧುನಿಕ ಶಿಕ್ಷಣದ ವೈರುಧ್ಯಗಳು ಹಾಗೂ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಷಯ ವಸ್ತುವಾಗಿರುವ  ಹಲವಾರು ಮಕ್ಕಳ ಪ್ರಶ್ನೆಗಳ ಪದಮಾಲೆಯ ಕವಿತೆಗಳು ಅಂಕಪಟ್ಟಿ ಬಾಲ್ಯ ಕೃತಿಯ ವಿಶೇಷ.
‘’ ಅಂಕ ಆತಂಕ ಎದೆಯಲಿ ತಕತಕ
ಸಿಗಲೇ ಇಲ್ಲ ಬಾಲ್ಯದಾ ಸುಖ’’  ಎನ್ನುತ್ತಲೇ ಮತ್ತೊಂದು ಕವಿತೆಯಲ್ಲಿ
‘’ ನೋಡಿ ಸ್ವಾಮಿ ಎಷ್ಟೊಂದ್  ಇವೆ ಪ್ರಮಾಣ  ಪತ್ರಗಳು
ಆಟ ಊಟ ನಿದ್ರೆ ಬಿಟ್ಟು ಗಳಿಸಿದ  ಆಸ್ತಿಗಳು ‘’ ಎಂದು ದನಿಯೆತ್ತುವ ಮಕ್ಕಳ ಸಹಜ ಪ್ರಶ್ನೆಗಳಿವೆ.

೫೩ ವಿವಿಧ ವಿಭಿನ್ನ ಮಕ್ಕಳ ಕವಿತೆಗಳಿದ್ದು ಮಕ್ಕಳ ಸರಳ ಭಾಷೆ, ಸರಳ ನುಡಿಗಟ್ಟು ಸರಳ ಪ್ರಾಸ ಪದಗಳನ್ನು ಬಳಸಲಾಗಿದೆ. ಆರಂಭದಲ್ಲಿ ಅಂಕಪಟ್ಟಿ ಬಾಲ್ಯ ಕವಿತೆ ಇಡೀ ಕೃತಿಯನ್ನು ಓದುವಂತೆ ಸೆಳೆಯುತ್ತದೆ. ಚಿಲಿಪಿಲಿ ಹಕ್ಕಿಗಳು, ನಮ್ಮೂರ ಹಸಿರು ಸಿರಿ, ನಾಳೆಗಳು ನಮ್ಮವು, ಕಾಡಿಗೆ ಹೋಗುವ ಬಾರಮ್ಮ ಎನ್ನುವ ಹಲವು ಕವಿತೆಗಳು ಮಕ್ಕಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸುವ ವಿಷಯ ವಸ್ತುವನ್ನು ಹೊಂದಿವೆ .ಗುಡುಗು-ಮಿಂಚು ಮಳೆ, ಹೊಸ ಗ್ರಹದಲ್ಲಿ ಒಂದು ದಿನ,  ಸರಪಳಿ, ರೋಬೋಟ್ ಅಣ್ಣ.ಮೋಡಗಳ ಊರಲ್ಲಿ ಒಂದು ದಿನ, ಮುಂತಾದವುಗಳಲ್ಲಿ ವೈಜ್ಞಾನಿಕ ವಿಷಯಗಳನ್ನು ಮಕ್ಕಳಿಗೆ ಸರಳವಾಗಿ ತಿಳಿಸಲಾಗಿದೆ.

ಪ್ರಮಾಣಪತ್ರ, ಇನ್ನು ಎಷ್ಟು ಓದಲಪ್ಪಾ. ಚೂರು ಆಲಿಸಿ ನಮ್ಮಿಷ್ಟ, ಮಕ್ಕಳ ಹಕ್ಕು, ಉತ್ತರಿಸಿ , ಅಂಕಪಟ್ಟಿ ಬಾಲ್ಯ ಮುಂತಾದ ಕವನಗಳಲ್ಲಿ ಮಕ್ಕಳ ಶೈಕ್ಷಣಿಕ ಸಮಸ್ಯೆಗಳನ್ನು ಮಕ್ಕಳ ಭಾಷೆಗಳಲ್ಲಿಯೇ ಕಾವ್ಯವಾಗಿಸಲಾಗಿದೆ .ಚಂದ್ರನ ಕುರಿತಾದ ಕವನಗಳು ಗಮನಸೆಳೆಯುತ್ತವೆ.

ಜನಪದ ಶೈಲಿಯ  ಮಕ್ಕಳ ಕಥನ ಕವಿತೆಗಳು ಸಹ ಇವೆ. ಮಕ್ಕಳಿಗೆ ಇಷ್ಟವಾಗುವ , ಕುತೂಹಲ ಹುಟ್ಟಿಸುವ ಕಾಗೆ ,ಇಲಿ, ಮಂಗ,ಗುಬ್ಬಿ ,ಇರುವೆ ಕುರಿತಾದ ಕವನಗಳು ಸಹ ಇವೆ.

ಅನಂದ ಪಾಟೀಲರ ಮುನ್ನುಡಿಯಿದ್ದು ,ಹ ಸ ಬ್ಯಾಕೋಡ ,ಡಾ .ಕವಿತಾ ಕೃಷ್ಣ ,ಚ ನಾ ಅಶೋಕ ಅವರೂ ಬೆನ್ನುಡಿಯಲ್ಲಿ ಕೃತಿಯ ಕುರಿತು ಮೆಚ್ಚುಗೆಯ ಮಾತಾಡಿದ್ದಾರೆ .

"ಇದು ಕೇವಲ ಸಾಹಿತ್ಯ ಕೃತಿಯಾಗಿ ತನ್ನನ್ನು ಕಂಡುಕೊಳ್ಳುವಲ್ಲಿ ಮೂರ್ತಗೊಂಡಿಲ್ಲ. ಚಟುವಟಿಕೆಯ ಚುರುಕು ಮುಟ್ಟಿಸುವ ಹಂಬಲ ಹೊಂದಿದೆ. ಮಕ್ಕಳ ಸುತ್ತಲಿನ ವಾತಾವರಣವನ್ನು ಕೆದುಕುವುದೇ ಇಲ್ಲಿ ನಡೆದಿದೆ. ಇಲ್ಲಿ ಉದ್ದಕ್ಕೂ ಮಕ್ಕಳವೇ ಮಾತು ಕೇಳುತ್ತ ಹೋಗಿವೆ. ಇಲ್ಲಿರುವುದು ಅಪ್ಪಟ ಕಾಳಜಿಯ ಮನಸ್ಸಿನ ಹವಣಗಳು. "'
ತಿಂದಿದ್ದಾರೆ ಮಕ್ಕಳ ಕವಿ ಆನಂದ ಪಾಟೀಲರು.

ಮಕ್ಕಳೆ ನಾಳಿನ ಪ್ರಜೆಯಂತೆ
ನಮಗೂ ಹಕ್ಕು ಇವೆಯಂತೆ
ನಮ್ಮ ಶಾಲೆಯ ಪಾಠದಲಿ
ಇನ್ನೂ ಏನೇನೋ ಇದೆಯಂತೆ.

ಈ ಬಗೆಯ ಧ್ವನಿಪೂರ್ಣ ಸಾಲುಗಳು ಅಲ್ಲಿ ಕಾಣಿಸಿವೆ. ಮತ್ತೊಂದು ಕಡೆ . . .

ಚಿಲಿಪಿಲಿ ಹಕ್ಕಿಗಳು
ನಾವು ಚಿಲಿಪಿಲಿ ಹಕ್ಕಿಗಳು
ಸಾವಿರ ಕನಸು ನಮಗೂ ಉಂಟು
ಸ್ವತಂತ್ರ ಬದುಕಿನ ಬಯಕೆ ಉಂಟು
ನಾಳೆಯ ಬಗ್ಗೆ ಭರವಸೆ ಉಂಟು
ನಿಮಗೇಕೆ  ಸುಮ್ನೆ ಟೆನ್ಸನ್ನು..//
ದೊಡ್ಡವರನ್ನ ಎದುರಿಟ್ಟುಕೊಂಡು, ವ್ಯವಸ್ಥೆಯನ್ನೇ ಮುಂದಿಟ್ಟುಕೊಂಡು ಮಕ್ಕಳು ಎತ್ತುವ ಪ್ರಶ್ನೆಗಳು, ಸಂಶಯಗಳು, ಒಂದು ಬಗೆಯಲ್ಲಿ ಪ್ರತಿಭಟನೆಗಳು ಪದೆ ಪದೆ ಕಾಣಿಸಿವೆ . . .

ನಮ್ಮ ಶಾಲೆಯ ಪುಸ್ತಕದಿ ಮಕ್ಕಳ ಹಕ್ಕು ಪಾಠವಿದೆ, ಆದರೆ ಅಲ್ಲಿ ಹೊಡೆಯಲು ಕೋಲು ಕಾಯುತಿದೆ, ನಮ್ಮಯ  ಮನೆಯಲಿ ನ್ಯಾಯವ ಕೊಡಿಸೋ ಲಾಯರುಗಳಿಹರು, ಆದರೆ ಅವರು ಹೇಳಿದ ಹಾಗೇ ಬದುಕಲು ಆರ್ಡರ್ ಮಾಡಿಹರು, ಹೀಗೆ ಒಂದಾದ ಮೇಲೆ ಒಂದು ಹಿರಿಯರಾಗಿ ನಾವೆಲ್ಲ ಎದುರಿಸುವ ಸವಾಲುಗಳೇ ಇಲ್ಲಿವೆ.

ಹುಡುಗ ಹುಡುಗಿ ಸಮನೆಂದರೆ ಸಾಕೆ ?
ಬೆಳೆಸುವಾಗಲೇ ಭೇದ ಮಾಡುವಿರೇಕೆ ?
* * *
ಯಾರು ಕೇಳೋರು ನಮ್ಮ ತಲೆಬಿಸಿಯಾ
ಲೈಪಲ್ಲಿ ಗೆಲ್ಲೋಕೆ ರ‍್ಯಾಂಕೇ ಯಾಕ್ರಯ್ಯಾ..?
* * *
ಹೇಳದೆ ಕೇಳದೆ  ಹುಟ್ಸಿದ್ದಾರೆ
ಹೇಳಿದ್ದು ಕೇಳು ಅಂತಿದ್ದಾರೆ
ನಮ್ಮದೇನು ತಪ್ಪು ನೀವೇ ಹೇಳಿ
ಕೇಳಲೇ ಬೇಕಾ ನಿಮ್ಮಿಷ್ಟಾ ?
ಚೂರು ಆಲಿಸಿ ನಮ್ಮಿಷ್ಟ
ಅಂತಹ ಹಿರಿಯರು ತಲೆಮೇಲೆ ಕೈ ಹೊತ್ತುಕೊಳ್ಳುವ ಪ್ರಶ್ನೆಯೂ ಇಲ್ಲಿ ಕೇಳಿದೆ.
ಹೊಡಿಬೇಡಪ್ಪಾ ಹೊಡಿಬೇಡಾ 
ಬೈಯೋದೇಕೆ  ಸುಮ್ಮನೆ ?
ಮದುವೆಯಾದೆ ಯಾಕೆ ?
ನಮ್ಮ ಮಮ್ಮೀನಾ.

ಎನ್ನುವ ದಾರುಣ ಸನ್ನಿವೇಷದ ಮಗುವಿನ ಮಾತುಗಳೂ ಇಲ್ಲಿವೆ.      

ಪ್ರಮಾಣ ಮಾಡಿ ಹೇಳಪ್ಪಾ
ಪ್ರಮಾಣ ಪತ್ರ ಇರದಿದ್ದರೆ ಬದುಕೋಕಾಗಲ್ವಾ ?
* * *
ಅಂಕ ಆತಂಕ ಎದೆಯಲಿ ತಕ ತಕ
ಸಿಗಲೇಯಿಲ್ಲ ಬಾಲ್ಯದಾ  ಸುಖ

ಅರಳುವ ಮುನ್ನವೆ ಮೊಗ್ಗುಗಳ
ಸುವಾಸನೆ ಅಳೆಯುವುದೇ.. ?
ನಿಮ್ಮ ಕನಸುಗಳ ಮೂಟೆಯ ಹೇರಿ
ನಮ್ಮ ಕನಸುಗಳ ಕೊಲ್ಲುವುದೇ..?

ಹೀಗೆ ನೋವುಗಳು ಕೂಡ ಈ ಮಾತಿನ ವರಸೆಗಳಿಗೆ ಹತ್ತಿಕೊಂಡೇ ಬಂದುಬಿಡುತ್ತವೆ.
ಇಲ್ಲಿ ಮಕ್ಕಳು ಮುಗ್ಧತೆಯಲ್ಲಿ ಎತ್ತುವ ದಿಗಿಲಿನ ಪ್ರಶ್ನೆಗಳೂ ಕೇಳಿವೆ . . .

ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಪ್ರಕಟಿಸಿರುವ ಈ ಕೃತಿಯನ್ನು ರವಿರಾಜ್ ಸಾಗರ್ ಅವರು ರಚಿಸಿದ್ದಾರೆ.ಕೃತಿಗಾಗಿ ಸಂಪರ್ಕಿಸಿ .9980952630.


No comments:

Post a Comment

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...