ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

ಅಂಕಣ ಬರಹ- ಕನಸುಗಳೂರ ಶ್ರಮಿಕ

 ರಜೆಯಲ್ಲಿ ಮಕ್ಕಳ ನಿರ್ವಹಣೆ ಕಷ್ಟವೇ..?  ಇಲ್ಲಿದೆ ನೋಡಿ ಸುಲಭ ಮಾರ್ಗಗಳು


"ಈ  ಮಕ್ಕಳ ಶಾಲೆಗೆ ಯಾಕಾದ್ರು ರಜೆ ಬರುತ್ತೋ..."

 ಅನ್ನುವ ತಂದೆ-ತಾಯಿ , ಪೋಷಕರ ಮಾತನ್ನು ನೀವು ಕೇಳಿರಬಹುದು.ಶಾಲೆಗೆ ರಜೆ ಬಂತೆಂದರೆ ಮಕ್ಕಳ ತುಂಟಾಟಕ್ಕೆ ಕಡಿವಾಣವೇ ಇಲ್ಲ.

ಈ ವರ್ಷವಂತೂ ಕೊರೋನದಿಂದಾಗಿ ಮಕ್ಕಳಿಗೆ ಹದಿನೈದು ದಿನ ಮುಂಚಿತವಾಗಿ ರಜೆ ಸಿಕ್ಕಿಬಿಟ್ಟಿದೆ. ಇನ್ನು ಮಕ್ಕಳನ್ನು ಹಿಡಿಯಲಾದೀತೇ...? ಮನೆತುಂಬಾ ಆಟದ ಸಾಮಾನುಗಳು ,ಪಾತ್ರೆ ಮತ್ತಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಹರಡುವುದು, ಏನಾದರೂ ವಸ್ತುಗಳನ್ನು ಕೊಡಿಸುವಂತೆ ರಂಪಾಟ ಮಾಡುವುದು, ಮಕ್ಕಳೆಲ್ಲಾ ಸೇರಿಕೊಂಡು ಹುಡುಗಾಟ ಆಡುವುದು, ಯಾರಿಗೂ ಸಿಗದಂತೆ ಜೋಪಾನವಾಗಿ ಎತ್ತರದಲ್ಲಿಟ್ಟ ವಸ್ತುಗಳನ್ನು ಹುಡುಕಿ ಕೆಡಗುವುದು, ಊರುಕೇರಿ ಅಲೆಯುವುದು, ನದಿ ಹಳ್ಳಗಳಲ್ಲಿ ಈಜಾಡಲು ತೆರಳುವುದು,ಮೊಬೈಲ್ ಕಂಪ್ಯೂಟರ್ ಗೇಮ್ ಗಳಲ್ಲಿ ಕಳೆದುಹೋಗುವುದು , ಓಣಿಯಲ್ಲಿ ಕ್ರಿಕೆಟ್ ಮತ್ತಿತರ ಆಟ ಆಡುವುದು, ಚೀರಾ ಡುವುದು.. ಒಂದಾ..ಎರಡಾ..ಇನ್ನೂ ಏನೇನೋ ಕಿತಾಪತಿಗಳು.


ಮಕ್ಕಳ ಕಿತಾಪತಿಯನ್ನೆಲ್ಲಾ ನೋಡಿ ಸಾಕಾಗಿಯೇ ಅನೇಕ ಪಾಲಕರು ಮಕ್ಕಳನ್ನು ರಜೆಯಲ್ಲಿ ಟೂಷನ್ ಗಳಿಗೆ ಮಕ್ಕಳ ಶಿಬಿರಗಳಿಗೆ ಅಟ್ಟುವುದು.

ಆದರೆ ಜವಾಬ್ದಾರಿಯುತ ಪಾಲಕರ ನಾವು ಮಾಡುವುದು ಬೇಕಾದಷ್ಟಿದೆ. ಸ್ವಲ್ಪ ಮಕ್ಕಳ ಮನೋವಿಜ್ಞಾನವನ್ನು ಬಲ್ಲವರಾದರೆ ಮಕ್ಕಳನ್ನು ರಜೆಯಲ್ಲಿ ನಿರ್ವಹಿಸುವುದು ಸುಲಭ. ಅದಕ್ಕಾಗಿ ಕೆಲವು ಪರಿಹಾರೋಪಾಯಗಳನ್ನು ಪಾಲಿಸಬಹುದು.


1.ಮಕ್ಕಳಿಗಾಗಿ ನಿಗದಿತ ವೇಳಾಪಟ್ಟಿ ನೀಡುವುದು.


ಮಕ್ಕಳು ಪ್ರತಿದಿನ ಮಾಡಬೇಕಾದ ಕೆಲಸ ಕಾರ್ಯಗಳನ್ನು  ಸದಾ ನಿಗದಿಯಂತೆ ಮಾಡಲು ಅವರಿಗೊಂದು ವೇಳಾಪಟ್ಟಿ ಹಾಕಿಕೊಡುವುದು , ಅದರಂತೆ ಅವರು ಸಮಯವನ್ನು ಕಳೆಯುವಂತೆ ಮಾರ್ಗದರ್ಶಿಸುವ ಮೂಲಕ ಅವರು ಅನಗತ್ಯ  ಚಟುವಟಿಕೆಯಲ್ಲಿ ಸಮಯ ಪೋಲು ಮಾಡದಂತೆ ತಡೆಯಬಹುದು.


2.ಮಕ್ಕಳೊಂದಿಗೆ ನಾವು ಮಕ್ಕಳಾಗಿ ಸಮಯ ಕಳೆಯುವುದು.


  ಹೇಳಿಕೇಳಿ ಮಕ್ಕಳದು ಹುಡುಗಾಟದ ವಯಸ್ಸು. ಸ್ನೇಹಿತರ ಸಹವಾಸ , ಅವರೊಂದಿಗೆ ಆಟೋಟ ಸದಾ ಬಯಸುತ್ತವೆ. ಹಾಗಾಗಿ ಪಾಲಕರು ಮಕ್ಕಳಿಗೆ ಸ್ನೇಹಿತರಾಗಿಯು ಮನೆಯಲ್ಲಿ ಅವರೊಂದಿಗೆ ಆಟೋಟಗಳಲ್ಲಿ , ಸಹಪಠ್ಯ ಚಟುವಟಿಕೆಗಳಲ್ಲಿ ಕಾಲ ಕಳೆದರೆ ಅವರು ಅನಗತ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ತಪ್ಪಿಸಬಹುದು.

  

3.ಮಕ್ಕಳಿಗಾಗಿ ಉತ್ತಮ ಪುಸ್ತಕ  ನೀಡುವುದು.


ಮಕ್ಕಳಿಗಾಗಿ ಉತ್ತಮ ಚಿತ್ರ, ಸಂಭಾಷಣೆಗಳು ಇರುವ ಕಥಾ ಪುಸ್ತಕಗಳು, ಚಿತ್ರಕಲಾ ಪುಸ್ತಕಗಳನ್ನು ನೀಡಿ ಅವರ ಸಮಯವನ್ನು ರಚನಾತ್ಮಕವಾಗಿ ಕಳೆಯುವಂತೆ ಮಾಡುವುದು.


4.ಕೆಲವು ಮಕ್ಕಳ ಸಿನಿಮಾಗಳನ್ನು ರಜೆಯಲ್ಲಿ ತೋರಿಸುವುದು.


ಮಕ್ಕಳಿಗಾಗಿಯೇ ಇರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರಗಳನ್ನು , ಕಾರ್ಟೂನ್ ಗಳನ್ನು, ಮಕ್ಕಳ ನಾಟಕಗಳನ್ನು ಮನೆಯಲ್ಲಿಯೇ ತೋರಿಸುವುದು.


5.ಮಕ್ಕಳೊಂದಿಗೆ ಹೊರ ಸಂಚಾರಕ್ಕೆ ಹೋಗುವುದು.


   ಮಕ್ಕಳು ಬಹುತೇಕ ನಿಸರ್ಗಪ್ರಿಯರಾಗಿರುತ್ತಾರೆ. ರಜಾದಿನಗಳಲ್ಲಿ ಅವರೊಂದಿಗೆ ಪ್ರಾಣಿಸಂಗ್ರಹಾಲಯಗಳು ,ಪಕ್ಷಿಧಾಮಗಳು ಉದ್ಯಾನವನಗಳಿಗೆ ಭೇಟಿ ನೀಡಿ ಅವುಗಳನ್ನು ಪರಿಚಯಿಸುವುದು,ಸಮೀಪದ ವಸ್ತುಸಂಗ್ರಹಾಲಯ, ದೇವಸ್ಥಾನಗಳಿಗೆ ಭೇಟಿ ನೀಡುವುದು ಸಹ ಉತ್ತಮ ಮಾರ್ಗ.ಮಕ್ಕಳು ಮತ್ತು ಪಾಲಕರು ಸಹ ಜೀವನದ ಏಕತಾನತೆಯನ್ನು ಹೋಗಲಾಡಿಸಿಕೊಳ್ಳಲು ಸಹ ಉತ್ತಮ ಮಾರ್ಗ.


6.ಮಕ್ಕಳಿಗೆ ಕೆಲವು ಗೃಹ ಕೆಲಸಗಳ ಜವಾಬ್ದಾರಿ ನೀಡುವುದು.


ಮನೆಯಲ್ಲಿ  ಗಂಡು ಹೆಣ್ಣು ಭೇದವಿಲ್ಲದೆ   ಮನೆಯ ಸಣ್ಣಪುಟ್ಟ ಕೆಲಸಗಳ ಜವಾಬ್ದಾರಿ ವಹಿಸುವುದು ಹಾಗೂ ಮನೆಯವ ಕೆಲಸಗಳಲ್ಲಿ ನೆರವಾಗುವಂತೆ ತೊಡಗಿಸುವುದು. ಆ ಮೂಲಕ ರಜೆಯಲ್ಲಿ ಅವರು ಮನೆಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವುದು ಸಹ ಉತ್ತಮ ಮಾರ್ಗ.


 7.ಪ್ರೌಢ ಹಂತದ ಮಕ್ಕಳಿಗೆ ಕೆಲವು ಸಾಮಾಜಿಕ ಕೆಲಸ ಕಾರ್ಯ ನೀಡುವುದು.

  ಸ್ವಲ್ಪ ದೊಡ್ಡ ಮಕ್ಕಳಿಗೆ ಆಗೀಗ ತಮ್ಮ ಓಣಿಯ ಸ್ವಚ್ಛತಾ ಕಾರ್ಯ, ತಮ್ಮ ಸಮೀಪದ ಉದ್ಯಾನವನಗಳ ಸ್ವಚ್ಛತಾ ಕಾರ್ಯ, ಮನೆಯ ಸ್ವಚ್ಛತಾ ಕಾರ್ಯ, ಗಿಡ-ಮರ ಬೆಳೆಸುವಿಕೆ, ಅವುಗಳಿಗೆ ನೀರುಣಿಸುವುದು ಮತ್ತಿತರ ಸಾಮಾಜಿಕ ಚಟುವಟಿಕೆಗಳಲಿ ಜವಾಬ್ದಾರಿಯುತವಾಗಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿ ಅವರ ರಜೆಯ ಸದುಪಯೋಗ ವಾಗುವಂತೆ ನೋಡಿಕೊಳ್ಳುವುದು ಉತ್ತಮ ಮಾರ್ಗ.


ಹೀಗೆ ಮಕ್ಕಳು ಸದಾ ಉತ್ತಮ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುವ ಮೂಲಕ ಅವರ ಕೀಟಲೆ, ಹುಡುಗಾಟ ಬುದ್ದಿಯನ್ನು ಬೇರೆಡೆ ತಿರುಗಿಸಿ ಅವರಿಂದ ಆಗಬಹುದಾದ ಕಿರಿಕಿರಿ ತಪ್ಪಿಸಬಹುದು.

  

 ರವಿರಾಜ್ ಸಾಗರ್ .ಮಂಡಗಳಲೆ.

No comments:

Post a Comment

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...