ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

ನಮ್ಮೂರ ಸುದ್ದಿಗಳು

 ನಮ್ಮೂರ ಶಾಲಾ ನರ್ಸರಿ 



 ಫಾರೆಷ್ಟ್ ಆಫೀಸಿನವರು ,ಕೃಷಿಕರು ನರ್ಸರಿ ಮಾಡುವುದನ್ನು ನೋಡಿದ್ದೀರಿ. ಶಾಲೆಯಲ್ಲಿ ಶಾಲಾ ಮಕ್ಕಳ ನೇತೃತ್ವದ ನರ್ಸರಿ ನೋಡಬೇಕೆ  ನಮ್ಮ ಮಲ್ಕಾಪುರ ಶಾಲೆಗೆ ಬನ್ನಿ. ನಮ್ಮ ಶಾಲಾ  ಶಿಕ್ಷಕರಾದ ರವಿಚಂದ್ರ ಸರ್ ಯೋಜನೆಯಂತೆ ಪುಟ್ಟ ನರ್ಸರಿ ಮಾಡಿದ್ದೇವೆ. ಶಾಲಾ ಹಿರಿಯ ವಿದ್ಯಾರ್ಥಿಗಳು , ಮಕ್ಕಳೆಲ್ಲ ಸೇರಿ ನಮ್ಮ ಶಾಲೆಯಲ್ಲಿ ಆರಂಭಿಸಿದ ಮತ್ತೊಂದು ಹೊಸ ಯೋಜನೆ ನಮ್ಮೂರ ಶಾಲಾ ನರ್ಸರಿ. 
  ಕಳೆದ ಎರಡು ವರ್ಷಗಳಿಂದ ನಮ್ಮ ಶಾಲೆಯಲ್ಲಿ ನಲಿಕಲಿ ತರಗತಿಯ ಪರಿಸರ ಯೋಜನೆಯಾಗಿ ಕೈಗೊಂಡ ಈ ಕಾರ್ಯವನ್ನು ಈ ವರ್ಷ ದೊಡ್ಡಮಟ್ಟದಲ್ಲಿ ನಾವೇ ವಿವಿಧ ಬೀಜಗಳನ್ನು ಸಂಗ್ರಹಿಸಿ ,ಪಾಕೇಟಿಗೆ ಮಣ್ಣು ತುಂಬಿಸಿ ಬೀಜನಾಟಿಸಿ ಗಿಡಗಳನ್ನು ಬೆಳೆಸಿದ್ದೇವೆ. ಇದು ನಮ್ಮ ಶಾಲಾ ಜೀವನದಲ್ಲೇ ಅತಿ ವಿಶಿಷ್ಟ ಕೆಲಸವಾಗಿ ಅನುಭವ ನೀಡಿತು.ಈ ಹಿಂದೆ ಬೆಳೆಸಿದ ನರ್ಸರಿಯ ಗಿಡಗಳನ್ನು ನಲಿ ಕಲಿ ತರಗತಿಯ ಮಕ್ಕಳಿಗೆ ನೀಡಲಾಗಿದ್ದು ಅವರು ಅವರ ಮನೆಯ ಜಾಗದಲ್ಲಿ ಪ್ರೀತಿಯಿಂದ ಬೆಳೆಸಿದ್ದಾರೆ.  ಸಾವಿರಾರು ಬೀಜದುಂಡೆಗಳನ್ನು ಮಾಡಿ ನಮ್ಮೂರ ಹಳ್ಳ, ಖಾಲಿ ಜಾಗಗಳಲ್ಲಿ ಬೀಜ ಪ್ರಸಾರವನ್ನೂ ಮಾಡಿದ್ದೆವು. ಅವು ಸಹ ಅಲ್ಲಲ್ಲಿ ಮೊಳಕೆಯಾಗಿ ಗಿಡವಾಗಿ ಬೆಳೆದಿವೆ.ಇನ್ನೂ ದೊಡ್ಡ ಮಟ್ಟದಲ್ಲಿ  ನಮ್ಮ ಶಾಲಾ ನರ್ಸರಿ ಬೆಳೆಸಿ ಗಿಡಗಳನ್ನು ವಿತರಿಸೋಣ ಎಂದು ನಮ್ಮ ಶಾಲಾ ನರ್ಸರಿ ಯೋಜನೆಯ ಮಾರ್ಗದರ್ಶಕರಾದ ರವಿಚಂದ್ರ ಸರ್ ತಿಳಿಸಿದ್ದಾರೆ.ಹಸಿರಿದ್ದರೆ ಉಸಿರು. ಹಸಿರಿದ್ದರೆ ಮಳೆ.ನಮ್ಮೂರು ಮಲೆನಾಡಾಗಬೇಕೆಂಬುದೇ ನಮ್ಮ ಆಸೆ.

ಮೋಹನ್ ಕುಮಾರ . ೮ ನೇ ತರಗತಿ ಮಲ್ಕಾಪುರ.
--------------------------------------------------------------------------------------------------------------------------

ಕೊರೋನಾ ಕಾಲದಲ್ಲೂ ನಮಗಾಗಿ ಮನೆ ಮನೆಗೆ ವಿದ್ಯಾಗಮ ತರಗತಿ ಶಾಲೆ 

  ಕೋರೋನಾದಿಂದಾಗಿ ಶಾಲೆಗಳು ಬಂದಾಗಿ ನಮಗೆಲ್ಲ ಓದುವುದೇ ಮರೆತುಹೋದಂತೆ ಆಗಿತ್ತು.ಶಾಲೆಯ ಪಾಠ, ಆಟವಿಲ್ಲದೆ ಬೇಸರವಾಗಿತ್ತು. ನಮ್ಮ ಶಾಲೆಯ ಶಿಕ್ಷಕರು ಮನೆಮನೆಗೆ ಬಂದು ನಮಗಾಗಿ ಪಾಠಮಾಡಲು ಆರಂಭಿಸಿದಾಗ ಸಂತೋಷ ಆಯಿತು.ಅದರೆ ಕೊರೋನಾ ಎಂಬ ಭಯ ಹಾಗೇ ಇತ್ತು. 
           

ಮುಖಕ್ಕೆ ಮಾಸ್ಕು ಹಾಕಿಕೊಂಡೇ ಪಾಠಕೇಳಬೇಕಾದ ಪರಿಸ್ಥಿತಿ ನಮ್ಮದಾಗಿದೆ. ಆದರೂ ಹಲವು ಊರುಗಳಲ್ಲಿ ಕೊರೋನಾ ಬಂದಿರುವುದು ಭಯ ತಂದಿದೆ. ಆದರೂ ಪಾಠ ಕೇಳುವುದು ಇಷ್ಟ. ಹಾಗಾಗಿ ನಾವು ಊರಿನ ದೈವದ ಕಟ್ಟೆ ಬಳಿ,ಅಗಸಿ ಕಟ್ಟೆ ಬಳಿ  ಮತ್ತಿತರ ಜಾಗದಲ್ಲಿ ಗುಂಪು ಗುಂಪಾಗಿ ಕುಳಿತು ಓದುವುದು ಬರೆಯುವುದು ಮಾಡುತ್ತಿದ್ದೇವೆ. ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಬಂದು ಪಾಠ ಮಾಡುತ್ತಾರೆ. ಹೊರಗೆ ಮರದಡಿ ಕುಳಿತು ಪಾಠ ಕೇಳುವುದು ಒಂದು ಹೊಸ ಅನುಭವವಾಗಿದೆ.ಕೊರೋನಾ ಹೋಗಲಿ.  ಆದಷ್ಟು ಬೇಗ ಶಾಲೆ ಆರಂಭವಾಗಲಿ.

ದೊಡ್ಡಬಸವರಾಜ. ೭ ನೇ ತರಗತಿ 

---------------------------------------------------------------------------------------------------------------

ನಮ್ಮೂರ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಹಸಿರು ಹಬ್ಬ

ಅಯ್ಯಪ್ಪ ಮಲ್ಕಾಪುರ .ಹಿರಿಯ ವಿದ್ಯಾರ್ಥಿ


ಮಕ್ಕಳ ಮಂದಾರ ವರದಿ: ಮಲ್ಕಾಪುರ . ನಮ್ಮ ಮಲ್ಕಾಪುರ  ಶಾಲೆ ಅಂದರೆ  ಅದೇನೋ ಒಂದು ವಿಶೇಷತೆಯಿಂದ ಕೂಡಿದ ಹಲವು ಶೈಕ್ಷಣಿಕ ಪ್ರಯೋಗಗಳ ಶಾಲೆ ಅನಿಸುತ್ತದೆ. ಏಕೆಂದರೆ ಈ ಶಾಲೆಯಲ್ಲಿ ರವಿಚಂದ್ರ ಸರ್ ರೂಪಿಸುತ್ತಿರುವ ವೈವಿದ್ಯಮಯ ಕಾರ್ಯಕ್ರಮಗಳಾದ ''ಜಾನಪದ  ಪಠ್ಯಂತರ್ಗತ ಪ್ರಯೋಗಗಳು, ಮಕ್ಕಳಿಂದ ಜಾನಪದ ಕ್ಷೇತ್ರಕಾರ್ಯ, ಹಾಗು  ಹನ್ನೆರಡು ವರ್ಷ ಪೂರೈಸಿದ ಮಕ್ಕಳ ನೇತೃತ್ವದ ಮಕ್ಕಳ ಮಂದಾರ ಶಾಲಾಪತ್ರಿಕೆ ರಾಜ್ಯಮಟ್ಟದಲ್ಲಿ ಸಾಹಿತ್ಯ ವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಗಮನಸೆಳೆದಿದೆ. ನಮ್ಮೂರ  ಮಕ್ಕಳು ರಾಜ್ಯಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಿ ಸೈ ಅನಿಸಿಕೊಂಡಿದ್ದಾರೆ.ಆಕಾಶವಾಣಿ ನಾಟಕಗಳನ್ನು,  ಜಾನಪದ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆಗಳಿಸಿರುವುದು ನಮ್ಮೂರ ಹೆಮ್ಮೆಯಾಗಿದೆ.ಮಕ್ಕಳ ಸಾಹಿತ್ಯ ಸಮ್ಮೇಳನದ ಗೋಷ್ಟಿಗಳಲ್ಲಿ ಪ್ರತೀ ವರ್ಷ ನಮ್ಮೂರ ಮಕ್ಕಳು ಭಾಗಿಯಾಗುತ್ತಿದ್ದಾರೆ.ಈಗ ಮತ್ತೊಂದು ಹೊಸ ಹೆಜ್ಜೆಯಾಗಿ ಹಸಿರುಹಬ್ಬ ಕಾರ್ಯಕ್ರಮವೂ ಊರಿನ ಜನಮನ ಸೆಳೆದಿದೆ.

    ಈಗಾಗಲೇ ನಮ್ಮೂರ ಶಾಲೆಯಲ್ಲಿ ವಿವಿಧ ಸಸಿ ಬೆಳೆಸುವ ಸಣ್ಣ ನರ್ಸರಿಯೂ ಎರಡು ವರ್ಷಗಳಿಂದ ಪ್ರಾಯೋಗಿಕವಾಗಿ ಮಾಡಲಾಗಿದ್ದು ಈಗ ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಈ ಹಬ್ಬಕ್ಕೆ ಸುಮಾರು ನೂರು ಸಸಿಗಳನ್ನು ತಂದು ಶಾಲೆಯಲ್ಲಿ, ಊರ ದೇವಾಲಯಗಳ ಜಾಗದಲ್ಲಿ ನೆಡಲಾಯಿತು. ಆಸಕ್ತ ಗ್ರಾಮಸ್ಥರಿಗೂ  ತಮ್ಮ ಮನೆಮುಂದೆ ನೆಡಲು ನೀಡಲಾಗಿದೆ. 
   ಈ ಹಸಿರು ಹಬ್ಬದ ಯೋಜನೆಯ ರುವಾರಿಗಳು ರವಿಚಂದ್ರ ಸರ್ ಮತ್ತು ಡಾ. ನಾಗಲಿಂಗಸ್ವಾಮಿ, ಅಯ್ಯಪ್ಪ , ನಿಂಗರಾಜ್, ನಾಗರಾಜ, ಬಸವನಾಯಕ್ ಮುಂತಾದ ಸ್ನೇಹಿತರೆಲ್ಲ ಸೇರಿ ಇದ್ದಕ್ಕಿದ್ದಂತೆ  ರವಿಚಂದ್ರ ಸರ್ ಸಲಹೆ ಮೇರೆಗೆ ನಿರ್ಧರಿಸಿ ಹಸಿರು ಹಬ್ಬವನ್ನು ಸಡಗರದಿಂದ ಗೆಳೆಯರೆಲ್ಲ ಕುದ್ದಾಗಿ ಗುಂಡಿ ತೆಗೆದು ಗಿಡಗಳನ್ನು ನಾಟಿಸಿದೆವು.ನಾವು ಓದಿದ ಶಾಲೆಗೆ ನಾವೂ ಏನಾದರೂ ಕೊಡುಗೆ ನೀಡಬೇಕೆಂದು ಈ ಕೆಲಸ ಮಾಡಿದೆವು.ನಮ್ಮ  ಕೆಲಸವನ್ನು  ಊರಿನ ಎಲ್ಲರೂ ಮೆಚ್ಚಿಕೊಂಡಿದ್ದು ಸಂತೋಷ ನೀಡಿತು.  ಊರಿನ ಹಲವು ಹಿರಿಯರು, ಎಸ್ ಡಿ ಎಂ ಸಿ ಅಧ್ಯಕ್ಷರು ,ಎಲ್ಲಾ ಶಿಕ್ಷಕರು ಸಹ ಭಾಗಿಯಾಗಿದ್ದರು. ಮುಂದೆ ಇಂತಹ ಹಲವು ಕಾರ್ಯಕ್ರಮಗಳನ್ನು  ಮಾಡುವ ಉದ್ದೇಶವಿದೆ. 

‘’ನಾನು ಓದಿದ ಶಾಲೆ ,ನಮ್ಮ ಬದುಕನ್ನು ಹಸಿರು ಮಾಡಿದ ಶಾಲೆ ,ನಮ್ಮ ಊರು ಸದಾ ಹಸಿರಾಗಿರಬೇಕು .ಬಯಲುಸೀಮೆಯಾದ ನಮ್ಮ ರಾಯಚೂರಿನ ಪ್ರತಿ ಊರುಗಳು ಮಲೆನಾಡಾಗಬೇಕು ಎನ್ನುವ ಆಸೆಯೊಂದಿಗೆ ನಾವು ಹಸಿರು ಹಬ್ಬಕ್ಕೆ ಕೈಜೋಡಿಸಿದೆವು. ಪ್ರತಿ ವರ್ಷ ಇಂತಹ ಕಾರ್ಯ ಮಾಡುವ ಯೋಚನೆ ಇದೆ.ಇಂತಹ ಯೋಚನೆಯ ಅವಕಾಶ ಮಾಡಿಕೊಟ್ಟ ರವಿಚಂದ್ರ ಸರ್ ಅವರಿಗೆ ಧನ್ಯವಾದಗಳು ‘’ – ಡಾ. ನಾಗಲಿಂಗ ಸ್ವಾಮಿ. ಮಲ್ಕಾಪುರ. ಹಿರಿಯ ವಿದ್ಯಾರ್ಥಿ.





No comments:

Post a Comment

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...