ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 15 March 2014

ಶ್ರೀ ನಾರಾಯಣ ಗುರು.


ಶ್ರೀ ನಾರಾಯಣ ಗುರುಗಳು ದೇಶ ಕಂಡ ಅದ್ಭುತ ದಾರ್ಶನಿಕ, ಚಿಂತಕ, ಮಾನವತಾವಾದಿ ನಾರಾಯಣಗುರುಗಳು (ಜನನ 18.9.1854, ಮಹಾಸಮಾಧಿ 20.9.1928). `ಧಾರ್ಮಿಕ ಸಿದ್ಧಾಂತಗಳು ವಾದಿಸಲಿಕ್ಕೂ ಅಲ್ಲ, ವಾದಿಸಿ ಜಯಿಸಲಿಕ್ಕೂ ಅಲ್ಲ. ಅದು ಸರ್ವರ ಸಮನ್ವಯ ಜೀವನಕ್ಕೆ ಜೀವಾಳವಾಗಬೇಕು.' 'ಮನುಷ್ಯನನ್ನು ಒಳ್ಳೆಯ ಮನುಷ್ಯನನ್ನಾಗಿ ಮಾಡುವುದೇ ಎಲ್ಲಾ ಧರ್ಮಗಳ ಉದ್ದೇಶಗಳು. ಮತ ಯಾವುದಾದರೇನು, ಮನುಷ್ಯ ಒಳ್ಳೆಯವನಾದರೆ ಸಾಕು..', 'ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು', `ಜಾತಿಯ ಬಗ್ಗೆ ಕೇಳಬೇಡ, ಹೇಳಬೇಡ, ಚಿಂತಿಸಬೇಡ' ಎಂಬಂಥ ನವಯುಗದ ಸಂದೇಶಗಳನ್ನು ಸಾರಿದ ಐತಿಹಾಸಿಕ ವಿಭೂತಿ ಪುರುಷ ನಾರಾಯಣಗುರು. ಇವರು ಈಳವ ಜಾತಿಗೆ ಸೇರಿದವರೆಂಬುದು ಹೆಮ್ಮೆಯ ಸಂಗತಿ. ದೇವಸ್ಥಾನದ ಹೊಸ್ತಿಲಲ್ಲಿ ನಿಂತು, ಜಾತಿ ಪದ್ಧತಿಯ ನಿರ್ಮೂಲನಕ್ಕೆ ಕರೆಕೊಟ್ಟ ಧೀಮಂತ ದಾರ್ಶನಿಕ ನಾರಾಯಣಗುರು. ಧರ್ಮದ ಹೆಸರಿನಲ್ಲಿ ಅರ್ಥವಿಲ್ಲದ ಆಚರಣೆ, ದೇವರ ಹೆಸರಿನಲ್ಲಿ ಅನವಶ್ಯಕ ಪೂಜಾಕ್ರಮ, ಪ್ರಾಣಿಬಲಿ ಪದ್ಧತಿಯಂಥ ಅಮಾನವೀಯ ಮೂಢನಂಬಿಕೆಗಳನ್ನು ಬೇರುಸಹಿತ ಕಿತ್ತು, ಜನಸಾಮಾನ್ಯರಿಗೂ ಸಾಧ್ಯವಾಗುವ ಸರಳ ಪೂಜಾಕ್ರಮಗಳನ್ನು ಅನುಷ್ಠಾನಕ್ಕೆ ತಂದವರು ಆಚಾರ್ಯ ನಾರಾಯಣಗುರು. ಕೇರಳದಲ್ಲಿ ಅಸ್ಪೃಶ್ಯರೇ ಆಗಿದ್ದ ಈಳವ (ಈಡಿಗ) ಸಮುದಾಯಕ್ಕೆ ದೇವಾಲಯಗಳನ್ನು ನಿರ್ಮಿಸಿಕೊಟ್ಟು ಅವರಿಂದಲೇ ಪೂಜೆ ಮಾಡಿಸಲು ಅಗತ್ಯವಾದ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ನಾರಾಯಣಗುರುಗಳು ಈಳವರಲ್ಲಿ ಮಾತ್ರವಲ್ಲದೆ ನಿರ್ಲಕ್ಷ್ಯಕ್ಕೀಡಾಗಿ ದೇವಾಲಯಗಳಿಂದಲೇ ಬಹಿಷ್ಕೃತರಾಗಿದ್ದ ದಲಿತ ವರ್ಗಕ್ಕೆ ಭರವಸೆಯ ಆಶಾಕಿರಣ ಮೂಡಿಸಿದವರು. ವರ್ಣಾಶ್ರಮ ಪದ್ಧತಿ ಉಂಟು ಮಾಡಿದ್ದ ಮೇಲು ಕೀಳೆಂಬ ತಾರತಮ್ಯದ ವಿರುದ್ಧ ಸಂಘಟನೆಯನ್ನು ಆರಂಭಿಸಿದ್ದ ಗುರುಗಳಿಗೆ ಅದು ನೆಪಮಾತ್ರವಾಗಿತ್ತು. ಅವರ ದೃಷ್ಟಿಯಲ್ಲಿ ವಿಶ್ವವೇ ಒಂದು ಸೃಷ್ಟಿ. ಅದರ ಯಾವುದೇ ಮೂಲೆಯ ಪ್ರತಿಯೊಬ್ಬ ವ್ಯಕ್ತಿ ದೇವರ ಸೃಷ್ಟಿ, ತನಗೆ ಪರಕೀಯರಲ್ಲ ಎಂಬ ವಿಶ್ವಮಾನವ ತತ್ವ ಅವರದಾಗಿತ್ತು. ಸಂಘಟನೆಯಿಂದ ಬಲಯುತರಾಗಿ, ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ, ಮೂಢನಂಬಿಕೆಗಳನ್ನು ತೊರೆದು ವಿಚಾರವಂತರಾಗಿ ಎಂಬ ಗುರುವಾಣಿ ದೀನದಲಿತ ವರ್ಗಕ್ಕೆ ಅಗತ್ಯ ಮಾನಸಿಕ ಧೈರ್ಯ ಸ್ಥೈರ್ಯಗಳನ್ನು ನೀಡಬಲ್ಲದಾಗಿದೆ. ನಾರಾಯಣ ಗುರುಗಳ ಸುಧಾರಣಾ ಚಳವಳಿ 1888ರಲ್ಲಿ ಕೇರಳದ ಅರವಿಪುರಂನಲ್ಲಿ ಲಿಂಗ ಪ್ರತಿಷ್ಠಾಪನೆಯ ಮೂಲಕ ದೇವಾಲಯವೊಂದನ್ನು ಸ್ಥಾಪಿಸುವ ಮೂಲಕ ಪ್ರಾರಂಭವಾಯಿತು. ಅದರ ನಂತರದ 48 ವರ್ಷಗಳ ಕಾಲ ಅಲ್ಲಿನ ಶೋಷಿತರ ಕೊರಳದನಿಯಾಗಿ ಮೂಡಿಬಂದ ಈ ಸುಧಾರಣಾ ಚಳುವಳಿ ಕೇರಳದ ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳ ಚಿತ್ರವನ್ನು ಪಲ್ಲಟಗೊಳಿಸಿತು. ಚಳುವಳಿಯ ಮೊದಲ 40ವರ್ಷಗಳಲ್ಲಿ ನಾರಾಯಣ ಗುರುಗಳು ಜತೆಯಲ್ಲಿಯೇ ಇದ್ದುಕೊಂಡು ಮಾರ್ಗದರ್ಶನ ನೀಡಿದರೆ ಅವರ ಸಾವಿನ ನಂತರದ ಎಂಟು ವರ್ಷಗಳ ಹೋರಾಟಕ್ಕೆ ಅವರ ತತ್ವಗಳೇ ಚಳುವಳಿಯ ದಾರಿಗೆ ಬೆಳಕಾಗಿದ್ದವು. ಅಸ್ಪೃಶ್ಯರಿಗೂ ದೇವಸ್ಥಾನ ಪ್ರವೇಶವಕಾಶ ನೀಡುವ `ದೇವಾಲಯ ಪ್ರವೇಶ' ಘೋಷಣೆ ಅಂದಿನ ಸರ್ಕಾರದಿಂದ ಹೊರಬಿದ್ದಾಗ ಆ ದಿನವನ್ನು ನೋಡಲು ನಾರಾಯಣಗುರುಗಳು ಜೀವಂತ ಇರಲಿಲ್ಲ. ನಾರಾಯಣ ಗುರು ಚಳುವಳಿ ಐದು ಹಂತಗಳಲ್ಲಿ ನಡೆಯಿತು. ಮೊದಲನೆಯದು ಡಾ.ಪದ್ಮನಾಭ ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ, ಎರಡನೆಯದು ನಾರಾಯಣ ಗುರು ನೇತೃತ್ವದ ಸಾಮಾಜಿಕ ಸುಧಾರಣೆ, ಮೂರನೆಯದು ಕುಮಾರ ಆಶಾನ್ ನೇತೃತ್ವದ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಕ್ಕಾಗಿ ಹೋರಾಟ. ನಾಲ್ಕನೆಯದು ಟಿ.ಕೆ.ಮಾಧವನ್ ನೇತೃತ್ವದಲ್ಲಿ ದೇವಾಲಯಗಳ ಪ್ರವೇಶ ಮತ್ತು ಅಸ್ಪೃಶ್ಯತೆಯ ವಿರುದ್ಧ ನಡೆದ ಚಳುವಳಿ ಹಾಗೂ ಕೊನೆಯದು ಸಿ.ಕೇಶವನ್ ನೇತೃತ್ವದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಹೋರಾಟ. ಇವೆಲ್ಲವೂ ನಾರಾಯಣಗುರುಗಳ ಸಿದ್ಧಾಂತದ ನೆಲೆಗಟ್ಟಿನ ಮೇಲೆಯೇ ನಡೆದವು. ಈ ಚಳುವಳಿಯ ಮಹತ್ವ ಅರಿಯಬೇಕಾದರೆ ಅವರಿಗಿಂತ ಹಿಂದಿನ ಕೇರಳದ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ದರಿದ್ರರಲ್ಲಿ, ರೋಗಿಗಳಲ್ಲಿ ದೇವರನ್ನು ಕಾಣಬೇಕೆಂದು ಹೇಳಿದ ವಿವೇಕಾನಂದರು ಕೇರಳದ ಸಮಾಜವನ್ನು ನೋಡಿ `ಅದೊಂದು ಹುಚ್ಚರ ಆಸ್ಪತ್ರೆ' ಎಂದು ಹೇಳಿ ಕೈಚೆಲ್ಲಿ ಹೋಗಿದ್ದರು. ಜಾತಿ ವ್ಯವಸ್ಥೆ ಅಂತಹ ಭೀಕರ ಮನೋರೋಗಿಗಳನ್ನು ಅಲ್ಲಿ ಸೃಷ್ಟಿಸಿತ್ತು. ದೇವಸ್ಥಾನ ಪ್ರವೇಶ ದೂರವೇ ಉಳಿಯಿತು. ಕೆಳಜಾತಿ ಜನರು ಸಾರ್ವಜನಿಕ ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವಂತಿರಲಿಲ್ಲ. ತಲೆಗೆ ಮುಂಡಾಸು, ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಮಹಿಳೆಯರು ಎದೆ ಮುಚ್ಚಿಕೊಳ್ಳುವಂತಿರಲಿಲ್ಲ. ಸರ್ಕಾರಿ ಶಾಲೆಗಳಿಗೂ ಅವರಿಗೂ ಪ್ರವೇಶ ನಿಷಿದ್ಧವಾಗಿತ್ತು. ಸರ್ಕಾರಿ ಉದ್ಯೋಗದ ಅವಕಾಶ ಇರಲಿಲ್ಲ. ಅಸ್ಪೃಶ್ಯತೆಯ ವಿರುದ್ಧದ ಹೋರಾಟದಲ್ಲಿ ದೇವಸ್ಥಾನ ಪ್ರವೇಶ ಚಳುವಳಿಯದು ಪ್ರಮುಖ ಪಾತ್ರವಾದರೆ ನಾರಾಯಣ ಗುರುಗಳು ಅದನ್ನೇ ಕೈಬಿಟ್ಟಿದ್ದರು. (ಈ ದೃಷ್ಟಿಯಿಂದ ಪೆರಿಯಾರ್ಗಿಂತ ಗುರುಗಳು ಭಿನ್ನ). ಅವರು ಸವರ್ಣೀಯರ ಒಡೆತನದ ದೇವಾಲಯ ಪ್ರವೇಶಿಸಲಿಲ್ಲ. ಅದನ್ನು ಬಹಿಷ್ಕರಿಸಿದರು. ಅವರು ದೇವಸ್ಥಾನ ಸ್ಥಾಪಿಸಿದ್ದನ್ನು ನಂಬೂದಿರಿಗಳು ಪ್ರಶ್ನಿಸಿದಾಗ `ಅದು ನಿಮ್ಮ ಶಿವ ಅಲ್ಲ, ಈಳವರ ಶಿವ. ಅದರ ಬಗ್ಗೆ ನಿಮಗೆ ಯಾಕೆ ವಿರೋಧ?' ಎಂದು ಮಾರ್ಮಿಕವಾಗಿ ಪ್ರಶ್ನಿಸಿ ಬಾಯಿ ಮುಚ್ಚಿಸಿದ್ದರು. ಶ್ರೀನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ (ಎಸ್.ಎನ್.ಡಿ.ಪಿ) ಸ್ಥಾಪನೆಯ ಮೂಲಕ ನಾರಾಯಣಗುರು ಚಳವಳಿ ಸಂಘರ್ಷದ ಹಾದಿ ಹಿಡಿಯಿತು. ಆಗ ಅವರಿಗೆ ಜತೆಯಾದವರು ಡಾ.ಪದ್ಮನಾಭ ಪಲ್ಪು. ಡಾ.ಪಲ್ಪು ಮತ್ತು ಅವರ ಅಣ್ಣ ವೇಲು. ಇಬ್ಬರೂ ಕೇರಳದ ಜಾತಿ ವ್ಯವಸ್ಥೆಗೆ ಬಲಿಯಾಗಿ ಹುಟ್ಟೂರಿನಲ್ಲಿ ಶಿಕ್ಷಣ ಮತ್ತು ಉದ್ಯೋಗ ಎರಡೂ ಸಿಗದೆ ಊರು ಬಿಟ್ಟವರು. ಈಳವ ಜನಾಂಗದ ಮೊದಲ ಪದವೀಧರ ವೇಲು ಮದ್ರಾಸ್ನಲ್ಲಿಯೇ ಕಲಿತು ಅಲ್ಲಿಯೇ ಸರ್ಕಾರಿ ನೌಕರಿಗೆ ಸೇರಿದರೆ, ಪಲ್ಪು ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಓದಿ ಮೈಸೂರಿನಲ್ಲಿ ಸರ್ಕಾರಿ ವೈದ್ಯರಾಗಿ ನೇಮಕಗೊಂಡರು. ಈಳವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಕೋರುವ ಮೊದಲ ಮನವಿಯನ್ನು ತಿರುವಾಂಕೂರು ಮಹಾರಾಜರಿಗೆ ಅರ್ಪಿಸುವ ಮೂಲಕ ಡಾ.ಪಲ್ಪು ತನ್ನ ಹೋರಾಟ ಪ್ರಾರಂಭಿಸಿದರು. ಬ್ರಿಟಿಷ್ ವೈಸ್ರಾಯ್, ಬ್ರಿಟನ್ ಪಾರ್ಲಿಮೆಂಟ್, ಕಾಂಗ್ರೆಸ್ ಪಕ್ಷ ಹಾಗೂ ಇಂಗ್ಲಿಷ್ ದಿನಪತ್ರಿಕೆಗಳಿಗೆ ಈಳವರ ದುಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಈ ಕ್ರಮಗಳಿಂದ ನಿರೀಕ್ಷಿತ ಫಲ ಸಿಗದೆ ಹತಾಶರಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕೆಲವು ಕಾಲ ತಂಗಿದ್ದ ಸ್ವಾಮಿ ವಿವೇಕಾನಂದರನ್ನು ಭೇಟಿಯಾದರು. ಕೇರಳದ ಪರಿಸ್ಥಿತಿಯ ಸಂಪೂರ್ಣ ಅರಿವಿದ್ದ ವಿವೇಕಾನಂದರು `ಆಧ್ಯಾತ್ಮಿಕ ನಾಯಕರೊಬ್ಬರ ನೇತೃತ್ವದಲ್ಲಿ ಸಾಮಾಜಿಕ ಚಳವಳಿಯನ್ನು ಹುಟ್ಟುಹಾಕಿದರೆ ಮಾತ್ರ ಕೇರಳದಲ್ಲಿ ಬದಲಾವಣೆ ಸಾಧ್ಯ' ಎಂದು ಸಲಹೆ ನೀಡಿದರು. ಡಾ.ಪಲ್ಪು ಅವರ ಭೇಟಿಯ ನಂತರ ಅಲ್ಲಿಯವರೆಗೆ ದೇವಸ್ಥಾನ ಪ್ರವೇಶ ಚಳುವಳಿಯಲ್ಲಿಯೇ ನಿರತರಾಗಿದ್ದ ನಾರಾಯಣಗುರುಗಳ ಚಳುವಳಿಯ ದಿಕ್ಕು ಬದಲಾಯಿತು. ಮುಂದಿನ ದಿನಗಳಲ್ಲಿ ಇವರಿಬ್ಬರಿಗೆ ಜೊತೆಯಾದವರು ಮಲೆಯಾಳಿ ಭಾಷೆಯ ಹೆಸರಾಂತ ಕವಿ ಕುಮಾರನ್ ಆಶಾನ್. ಅರವಿಪುರಂನಲ್ಲಿ ದೇವಾಲಯ ಸ್ಥಾಪನೆಯ ನಂತರ 1916ರಲ್ಲಿ ಎಸ್.ಎನ್.ಡಿ.ಪಿ ಸ್ಥಾಪನೆಯಾಗುವ ವರೆಗಿನ ಅವಧಿಯಲ್ಲಿ ನಾರಾಯಣ ಗುರುಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಸಾಮಾಜಿಕ ಅನಿಷ್ಟಗಳ ವಿರುದ್ಧ ಜನಜಾಗೃತಿ ಮಾಡಿದ್ದರು. ಮೂಢನಂಬಿಕೆ ಮತ್ತು ದುಂದುವೆಚ್ಚದ ಅಂಧ ಸಂಪ್ರದಾಯಗಳನ್ನು ಕಿತ್ತೊಗೆಯಲು ಹೋರಾಟ ನಡೆಸಿದ್ದರು. ವಿವಾಹಗಳನ್ನು ಸರಳಗೊಳಿಸಿದರು. ಸಹಭೋಜನಕ್ಕೆ ಪ್ರೋತ್ಸಾಹ ನೀಡಿದರು. ಹೆಂಡ ಇಳಿಸುವುದಕ್ಕೆ ಪರ್ಯಾಯವಾಗಿ ತೆಂಗಿನ ನಾರಿನ ಉದ್ದಿಮೆಯಲ್ಲಿ ತೊಡಗುವಂತೆ ಪ್ರೇರೇಪಿಸಿದರು. ಇದಕ್ಕಾಗಿ ಕೈಗಾರಿಕಾ ಸಮ್ಮೇಳನಗಳನ್ನು ನಡೆಸಿದರು. (ಇದರಿಂದಾಗಿಯೇ ಕೇರಳ ಈಗ ತೆಂಗಿನನಾರು ಉದ್ದಿಮೆಯಲ್ಲಿ ಏಕಸ್ವಾಮ್ಯ ಹೊಂದಿದೆ). ಭೂತಾರಾಧನೆಗೆ ವಿರುದ್ಧವಾಗಿದ್ದ ಗುರುಗಳು ತಮ್ಮ ಮನೆಯಲ್ಲಿದ್ದ ಭೂತದ ಕಲ್ಲುಗಳನ್ನು ಎಸೆದುಬಿಟ್ಟಿದ್ದರು. ಕೆಳಜಾತಿಯವರ ಮಕ್ಕಳು ಇಂಗ್ಲಿಷ್ ಕಲಿಯಬೇಕೆಂದು ಗುರುಗಳು ಬಯಸಿದ್ದರು. ಈ ರೀತಿ ಲೌಕಿಕ ಬದುಕಿನ ಬೇಕು-ಬೇಡಗಳ ಬಗ್ಗೆಯೂ ಪ್ರಾಯೋಗಿಕವಾಗಿ ಯೋಚನೆ ಮಾಡಿದ ಇನ್ನೊಬ್ಬ ಧಾರ್ಮಿಕ ಸುಧಾರಕನನ್ನು ಕಾಣುವುದು ಅಪರೂಪ. ದೇವಸ್ಥಾನ ಪ್ರವೇಶಕ್ಕಾಗಿ ನಾರಾಯಣ ಗುರುಗಳು ಹೋರಾಟ ನಡೆಸಿರಲಿಲ್ಲ. ಬದಲಿಗೆ ಅವರೇ ದೇವಾಲಯಗಳನ್ನು ಸ್ಥಾಪಿಸಿದರು. ಆದರೆ ಶಾಲೆಗಳ ಸ್ಥಾಪನೆಗೆ ಸರ್ಕಾರದ ಅನುಮತಿ ಬೇಕಿತ್ತು. ಅದಕ್ಕಾಗಿ ಸರ್ಕಾರಿ ಶಾಲೆಗಳ ಪ್ರವೇಶದ ಹಕ್ಕಿನ ಹೋರಾಟಕ್ಕೆ ಅವರು ಚಾಲನೆ ನೀಡಿದರು. ದೇವಸ್ಥಾನ ಪ್ರವೇಶದ ಕಾಲದಲ್ಲಿ ಎದುರಾಗದ ವಿರೋಧ ಶಿಕ್ಷಣದ ಹಕ್ಕಿನ ಚಳುವಳಿಗೆ ಎದುರಾಗಿದ್ದು ಗಮನಾರ್ಹ. ಎಸ್.ಎನ್.ಡಿ.ಪಿ ಚಳವಳಿಯಲ್ಲಿ ಈ ಕಾಲ ನಿರ್ಣಾಯಕವಾದದ್ದು. ಕೇರಳದಾದ್ಯಂತ ನಾಯರ್-ಈಳವ ಸಂಘರ್ಷ ನಡೆಯಿತು. ಈಳವ ಮಹಿಳೆಯರ ಮೇಲೆ ದೌರ್ಜನ್ಯವೆಸಗಲಾಯಿತು. ಎಸ್.ಎನ್.ಡಿ.ಪಿಯನ್ನು ಬೆಂಬಲಿಸುವ ಪತ್ರಿಕೆಗಳ ಕಚೇರಿಗಳನ್ನು ಸುಟ್ಟುಹಾಕಲಾಯಿತು. ಚಳುವಳಿಯ ಒತ್ತಡಕ್ಕೆ ಮಣಿದ ತಿರುವಾಂಕೂರು ದಿವಾನರು ಈಳವರಿಗೆ ಅವರದೇ ಶಾಲೆಗಳನ್ನು ಸ್ಥಾಪಿಸಲು ಅನುಮತಿ ನೀಡಿದರು. ಸರ್ಕಾರಿ ಶಾಲೆಗಳಲ್ಲಿ ಎಲ್ಲ ಜಾತಿ ಜನರಿಗೆ ಮುಕ್ತ ಪ್ರವೇಶ ನೀಡುವ ಮಸೂದೆ ಜಾರಿಗೆ ಬಂದಿತು. ನಾರಾಯಣ ಗುರು ಚಳವಳಿಯಲ್ಲಿ ದೇವಸ್ಥಾನ ಸ್ಥಾಪನೆಗಿಂತಲೂ ಮುಖ್ಯವಾದ ಘಟನೆ ಇದು. ಆದರೆ ಸರ್ಕಾರಿ ಸೇವೆ ಸೇರಲು ಸರ್ಕಾರ ಅವಕಾಶ ನೀಡಿದ್ದನ್ನು ನೋಡಲು ನಾರಾಯಣ ಗುರುಗಳು ಬದುಕಿರಲಿಲ್ಲ. 1936ರಲ್ಲಿ ಸರ್ಕಾರ ಲೋಕಸೇವಾ ಆಯೋಗವನ್ನು ಸ್ಥಾಪಿಸಿ ಉನ್ನತ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಹುದ್ದೆಗಳಲ್ಲಿ ಶೇಕಡಾ 40ರಷ್ಟು ಮೀಸಲಾತಿ ನೀಡಿತು. 1936ರ ಹೊತ್ತಿಗೆ ಎಸ್.ಎನ್.ಡಿ.ಪಿ ಸಂಘಟನಾ ಜಾಲ ವ್ಯಾಪಕವಾಗಿ ಹರಡಿತ್ತು, ಮುಖ್ಯ ಉದ್ದೇಶಗಳೂ ಈಡೇರಿದ್ದವು ರಾಜ್ಯಾದ್ಯಂತ ನೂರಾರು ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿದ್ದವು. ಅದೇ ಹೊತ್ತಿಗೆ ರಾಜಕೀಯ ನಾಯಕರ ಕಣ್ಣು ಸಂಘಟನೆಯ ಮೇಲೆ ಬಿದ್ದಿತು. ಸಂಘಟನೆಯೊಳಗಿದ್ದವರಲ್ಲಿಯೂ ರಾಜಕೀಯ ಆಕಾಂಕ್ಷೆಗಳು ಹುಟ್ಟಿಕೊಂಡಿದ್ದವು. ಚಳುವಳಿ ಒಂದು ಹಂತಕ್ಕೆ ತಲುಪವವರೆಗೆ ಯಾವುದೇ ರೀತಿಯ ಗೊಂದಲ, ಹತಾಶೆ, ನಿರಾಶೆಗಳು ಗುರುಗಳ ನಡೆ-ನುಡಿಗಳಲ್ಲಿ ಇರಲಿಲ್ಲ. ಆದರೆ ಜೀವನದ ಕೊನೆಯ ದಿನಗಳಲ್ಲಿ ಅವರು ಖಿನ್ನರಾಗಿದ್ದರು, ಅಂತರ್ಮುಖಿಯಾಗಿದ್ದರು. ತಮ್ಮ ಅನುಯಾಯಿಗಳಲ್ಲಿ ಹುಟ್ಟಿಕೊಂಡ ರಾಜಕೀಯ ಆಕಾಂಕ್ಷೆ ಮತ್ತು ಆಸ್ತಿಗಳ ಮೇಲೆ ನಿಯಂತ್ರಣಕ್ಕಾಗಿ ನಡೆಸುತ್ತಿದ್ದ ಶೀತಲ ಸಮರ ಅವರ ಗಮನಕ್ಕೆ ಬಂದಿತ್ತು. ಇದೇ ಬೇಸರದಿಂದ ಅವರು ಶ್ರೀಲಂಕಾಕ್ಕೆ ಹೋಗಿದ್ದರು. ಅಲ್ಲಿಯೇ ಶಾಶ್ವತವಾಗಿ ನೆಲೆಸಲು ಬಯಸಿದ್ದರು. ಕೊನೆಗೆ ಅವರ ಅನುಯಾಯಿಗಳ ಒತ್ತಡಕ್ಕೆ ಮಣಿದು ಹಿಂದಿರುಗಿದ ಮೇಲೆ ಸಮಾಧಿಯಾಗುವ ಆಸೆ ತೋಡಿಕೊಂಡಿದ್ದರು. ಅದರ ನಂತರ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಅವರು ಬದುಕಲಿಲ್ಲ. ಮೊದಲು ದೇವಸ್ಥಾನ ಪ್ರವೇಶ ಚಳುವಳಿ ನಡೆಸದೆ ದೇವಸ್ಥಾನ ನಿರ್ಮಿಸಲು ಅನುಸರಿಸಿದ ಕಾರ್ಯತಂತ್ರ ಎರಡು ರೀತಿಯಲ್ಲಿ ಅವರಿಗೆ ನೆರವಾಯಿತು. ಸಾವಿರಾರು ವರ್ಷಗಳಿಂದ ತಮ್ಮಿಂದ ದೂರವೇ ಉಳಿದಿದ್ದ ದೇವಸ್ಥಾನಗಳಿಗೆ ಪ್ರವೇಶಿಸಲು ಅಡ್ಡಿಯಾಗುವ ಸಾಂಪ್ರದಾಯಿಕ ಮನಸ್ಸಿನ ಹಿಂಜರಿಕೆ ಹಾಗೂ ಭೀತಿಯಿಂದ ಜನರನ್ನು ಅವರು ಮುಕ್ತಗೊಳಿಸಿದರು. `ದೇವಾಲಯಕ್ಕೆ ಹೋಗುವ ಹಕ್ಕು ನಿಮಗಿಲ್ಲವೆಂದಾದರೆ ದೇವಾಲಯವನ್ನೇ ನಿಮ್ಮಲ್ಲಿಗೆ ತರುತ್ತೇನೆ' ಎಂದು ಹೇಳಿ ಅಸ್ಪೃಶ್ಯರಿಗೆ ಪೂಜೆಯ ಹಕ್ಕನ್ನೂ ನೀಡಿದ್ದು ಕೆಳಜಾತಿಗಳಲ್ಲಿ ಸ್ವಾಭಿಮಾನದ ಜಾಗೃತಿಗೆ ಕಾರಣವಾಯಿತು. ದೇವಸ್ಥಾನ ಪ್ರವೇಶ ಹೋರಾಟಕ್ಕೆ ಎದುರಾಗುವ ಪ್ರತಿಭಟನೆಯನ್ನು ಎದುರಿಸುವ ಸಂಘಟನಾ ಶಕ್ತಿ ಆಗಿನ್ನೂ ಆ ರಾಜ್ಯದ ನಿಮ್ನವರ್ಗದ ಜನರಲ್ಲಿ ಬೆಳೆದಿಲ್ಲ ಎಂದು ನಾರಾಯಣ ಗುರುಗಳಿಗೆ ತಿಳಿದಿತ್ತು. ಅವರು ಮೊದಲು ದೇವಸ್ಥಾನ ಸ್ಥಾಪಿಸಿದ ಮೂವತ್ತಮೂರು ವರ್ಷಗಳ ನಂತರ ದೇವಾಲಯಗಳ ಮುಂಭಾಗದ ರಸ್ತೆಗಳಲ್ಲಿ ನಡೆಯುವ ಹಕ್ಕಿಗಾಗಿ ನಡೆದ ವೈಕಂ ಸತ್ಯಾಗ್ರಹಕ್ಕೆ ಎದುರಾದ ಪ್ರತಿಭಟನೆಯನ್ನು ನೋಡಿದರೆ ಅದು ಸ್ಪಷ್ಟವಾಗುತ್ತದೆ. ಅವರ ಸಾವಿನ ಎಂಟು ವರ್ಷಗಳ ನಂತರ ಕೇರಳ ಸರ್ಕಾರ ದೇವಾಲಯ ಪ್ರವೇಶ ಘೋಷಣೆ ಹೊರಡಿಸಿದಾಗ ಅಲ್ಲಿನ ಸವರ್ಣೀಯರ ದೇವಾಲಯಗಳಿಗೆ ಭಕ್ತರೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿತ್ತು. ಆಗಲೇ ನಾರಾಯಣ ಗುರುಗಳು ಮಂಗಳೂರು ಮಾತ್ರವಲ್ಲದೆ ಕೇರಳ, ತಮಿಳುನಾಡಿನಲ್ಲಿ ನೂರಾರು ದೇವಾಲಯಗಳನ್ನು ಸ್ಥಾಪಿಸಿದ್ದರು. ಗುರುದೇವ ರವೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ ಅವರಿಗೂ ತಮ್ಮ ಪ್ರಖರ ವಿಚಾರಗಳಿಂದ ಪ್ರಭಾವ ಬೀರಿದ್ದ ನಾರಾಯಣಗುರುಗಳು ಕೆಳಜಾತಿಯವರು ವಿದ್ಯೆ ಕಲಿತು ವೈಚಾರಿಕತೆಯನ್ನು, ವೈಜ್ಞಾನಿಕ ದೃಷ್ಟಿಯನ್ನೂ ಬೆಳೆಸಿಕೊಂಡು ಆರ್ಥಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸ್ವಾವಲಂಬಿಯಾಗ ಬೇಕು ಎಂದು ಬಯಸಿದ್ದರು. ಮನುಕುಲಕ್ಕೆ ಲೇಸನ್ನು ಬಯಸಿದ ನಾರಾಯಣ ಗುರುಗಳಿಗೆ ನೀಡುವ ಗೌರವವೆಂದರೆ ಅವರು ಹೇಳಿದ ಮಾತುಗಳನ್ನು ಅನುಸರಿಸುವುದು. ಅಂತಹ ಸ್ಥೈರ್ಯವನ್ನು ಹಿಂದುಳಿದ ವರ್ಗದ ಜನತೆ ಪ್ರದರ್ಶಿಸಬೇಕು.          ( ಮಾಹಿತಿ ಸಂಗ್ರಹ - ಫೇಸ್ಬುಕ್ , ವಿಕಿಪೀಡಿಯ,)

No comments:

Post a Comment