ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 7 September 2020

ವೈದ್ಯಲೋಕದ ಬೆರಗು ಬವಣೆಗಳ ಆರ್ಥನಾದಲಯದ ಆತ್ಮ ಚರಿತ್ರೆ ಉಸಿರೇ ಗಾಳಿಯಾದಾಗ

ವೈದ್ಯಲೋಕದ ಬೆರಗು ಬವಣೆಗಳ ಆರ್ಥನಾದಲಯದ  ಆತ್ಮಚರಿತ್ರೆ 'ಉಸಿರೇ ಗಾಳಿಯಾದಾಗ".

ಟಿ ಎಸ್ ಎಲಿಯಟ್ ರವರ ಅಮರತ್ವದ ಪಿಸುಮಾತು ಸ್ಮರಿಸುತ್ತಲೇ  ತನಗೆ ಶ್ವಾಸಕೋಶದಲ್ಲಿ ಸಣ್ಣ ಸಣ್ಣ ಕ್ಯಾನ್ಸರ್ ಗಡ್ಡೆಗಳು ತುಂಬಿಕೊಂಡಿರುವುದು ಸಿಟಿ ಸ್ಕ್ಯಾನ್ ಪ್ರತಿಬಿಂಬದಿಂದ ದೃಢಪಟ್ಟಿರುವ ವಿಚಾರದ ಬಗ್ಗೆ ನೇರವಾಗಿ ವರ್ತಮಾನದಲ್ಲಿ ವಿವರಿಸುತ್ತಲೇ ತನ್ನ  ಆತ್ಮಚರಿತ್ರೆ ಆರಂಭಿಸಿರುವ ಭಾರತೀಯ ಮೂಲದ ಅಮೇರಿಕದ  ನರರೋಗ ತಙ್ಞ ಡಾಕ್ಟರ್ ಪೌಲ್ ಕಲಾನಿಧಿ ಅವರ "when breath becomes air" ಕೃತಿಯ ಪ್ರತಿ ಪುಟದ ಸಾಲಿನಲ್ಲೂ  ಬದುಕು ಮತ್ತು ಸಾವು ಎಂಬ ವಾಸ್ತವದ ಎದುರೇ ತನ್ನ  ಜೀವನದ ಕುರಿತು ಮಹತ್ವಾಕಾಂಕ್ಷೆಗಳೊಂದಿಗೆ ವೈದ್ಯಕೀಯ  ಹುಡುಕಾಟವಿದೆ, ಪ್ರಶ್ನೆಗಳಿವೆ, ಹತಾಶೆಗ

ಳಿವೆ .ಬದುಕಿನ ಬಗ್ಗೆ ಹಲವು ಮಹಾತ್ವಕಾಂಕ್ಷೆ ಹೊತ್ತ ನನಗೆ ಇಷ್ಟು ಬೇಗ ಸಾವೇಕೆ ಎನ್ನುವ ಆರ್ಥನಾದವಿದೆ. ಸಾವಿನ ಬಳಿ ಹೋಗುವ ವಯಸ್ಸಲ್ಲದ ವಯಸ್ಸಲ್ಲಿ  ಒಬ್ಬ ವೈದ್ಯನಾಗಿ ರೋಗಿಯಾಗಿ ಮಲಗಿ ಸಾವು ಸನಿಹದಲ್ಲೇ ಇರುವುದು ಖಾತ್ರಿಯಾದಾಗ ಹೆಂಡತಿ ,ಮಕ್ಕಳು , ತನ್ನ ಬದುಕಿನ ಮಹತ್ವಾಕಾಂಕ್ಷಿಗಳು ಕಣ್ಣ ಸುತ್ತ ಸುಳಿದಾಡಿದ ಹಲವು ಸಂಗತಿಗಳನ್ನು ಇಲ್ಲಿ  ಮುಚ್ಚುಮರೆಯಿಲ್ಲದೆ ಸಹಜ ಸರಳ ನಿರೂಪಣೆ ಶೈಲಿಯಲ್ಲಿಯೆ ಹಂಚಿಕೊಂಡಿದ್ದಾರೆ.

ವೈದ್ಯನಾಗಿ ಸಾಕಷ್ಟು ಸಾವುಗಳನ್ನು ಕಣ್ಣಾರೆ ಕಂಡಿದ್ದು, ಹಲವರನ್ನು ಸಾವಿನಿಂದ ಬದುಕಿಸಿದ್ದ ಪೌಲ್ ತಾನೇ ಸಾವಿನ ಮನೆಗೆ ಶರಣಾಗಿ ಮಲಗಿರುವಾಗಿನ  ಬರಹಗಳ ಪದ ಮಾಲೆಯಾಗಿ ಸಮರ್ಪಿಸಿರುವ ಈ ಕೃತಿಯ ಪ್ರತಿ ಪುಟದಲ್ಲೂ ಆರ್ಥನಾದಲಯ ಓದುಗನ ಭಾವಕೋಶ ತಟ್ಟಿ  ಎದೆ ನಡುಗಿಸುತ್ತದೆ, ಗಂಟಲು ಒಣಗಿಸುತ್ತದೆ, ಕಲ್ಲು ಹೃದಯದ ವನ ಕಣ್ಣನ್ನು ಸಹ ಒದ್ದೆಯಾಗಿಸುತ್ತದೆ. ಜೊತೆಗೆ ವೈದ್ಯಕೀಯ ಲೋಕದ  ಹಲವು ಮಜಲುಗಳ ಅರಿವನ್ನು, ಶಸ್ತ್ರಚಿಕಿತ್ಸೆಗಳ ಜ್ಞಾನವನ್ನು ಸಹ ನೀಡುವ ಈ ಕೃತಿ ವೈದ್ಯಲೋಕಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಕೃತಿಯಾಗಿಯೂ ನಿಲ್ಲಬಲ್ಲದು. ವೈದ್ಯರಿಗೆ ಇರಬೇಕಾದ ಸೇವಾ ಸಮರ್ಪಣಾ ಮನೋಭಾವ, ದೈಹಿಕ ಮಾನಸಿಕ ಸೂಕ್ಷ್ಮತೆ, ಮಾನವೀಯತೆಯ ಹಲವು ಸಂಗತಿಗಳನ್ನು ತನ್ನದೇ ಬದುಕಿನ ಘಟನಾವಳಿಗಳ ಮೂಲಕ ತಿಳಿಸಿದ್ದಾರೆ.

ಪ್ರತಿ ಪುಟದತ್ತ ನೆಟ್ಟ ದೃಷ್ಟಿ  ನೆಟ್ಟಂತೆಯೆ  ಇರುವಂತೆ ಮಾಡಿ, ಮೆದುಳು ಭಾವಕೋಶಕ್ಕೆ ಪ್ರತಿ ಸಾಲು ಸಾಲು ಸನ್ನಿವೇಶವನ್ನೂ ಚಿತ್ರಿಸಿ ರವಾನಿಸಿ ಅವರ ಯಾತನೆ, ಅನುಭವ ಚಿತ್ರಣವನ್ನು  ಕಣ್ಣಮುಂದೆಯೇ ನೋಡುತ್ತಿರುವಷ್ಟರಮಟ್ಟಿಗೆ  ನನ್ನನ್ನು  ಎಳೆದುಕೊಂಡು  ಹೋಗಿ  ನನ್ನೊಳಗೆ ಓದುವ ಭಾವತೀವ್ರತೆ ಹೆಚ್ಚಿಸಿ ಉಸಿರು ಬಿಗಿಯಾಗಿಸಿ ಕೆಲವೇ ಪುಟ ಓದುತ್ತಲೇ  ಅವರನ್ನೇ ಆವಾಹಿಸಿಕೊಂಡಂತೆ ಭಾಸವಾಗಿ ವಾಸ್ತವಕ್ಕೆ ಎಚ್ಚೆತ್ತಾಗ  ಮನನೊಂದು ಓದುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಆದರಿಂದ ಹೊರಬರಲು ಬಹಳ ಕಷ್ಟಪಡಬೇಕಾಯಿತು.
ಆದರೂ ಪುಸ್ತಕವನ್ನು ಓದಿ ಮುಗಿಸಲೇಬೇಕೆಂಬ ಹಠದಿಂದ ಧೈರ್ಯ ಮಾಡಿ ಎರಡು ದಿನ ಬಿಟ್ಟು ಮತ್ತೆ ಓದಿ ಪೂರ್ಣಗೊಳಿಸಬೇಕಾಯಿತು.

ಸಾವು ಸನಿಹ ಬಂದಮೇಲೆಯೂ ಸಾಹಿತ್ಯದ ವಿದ್ಯಾರ್ಥಿಯಾದ ತಾನು ಏನೂ ಬರೆಯಲಾಗಲಿಲ್ಲವಾಲ್ಲ ಎಂದು ಕೊರಗುತ್ತ ತಾನು ಒಂದು ಪುಸ್ತಕ ಬರೆಯಬೇಕೆಂದು  ಡಾ.ಪೌಲ್ ಅಂತಿಮವಾಗಿ ತನ್ನದೇ ದುರಂತ ಕಥೆಯನ್ನು  ಬರೆಯುತ್ತಾ ಸಾಗಿದ್ದಾರೆ. ಇದನ್ನು ಒಂದು ಆತ್ಮಚರಿತ್ರೆ ಎಂದು ಸಾಮಾನ್ಯವಾಗಿ ಗ್ರಹಿಸಿದರೆ ಸಾಲದು. ಅವರ ಉದ್ದೇಶ ತನ್ನ ಆತ್ಮಚರಿತ್ರೆ  ಎನ್ನುವ ಸಾಮಾನ್ಯ ದೃಷ್ಟಿಕೋನದಿಂದ ಬರೆಯುವುದು ಆಗಿದ್ದರೆ  ಅವರು ಆರಂಭದಲ್ಲಿಯೇ ತನಗೆ ಕ್ಯಾನ್ಸರ್ ಇರುವ ವಿಷಯದೊಂದಿಗೆ ಬರಹ ಆರಂಭಿಸುತ್ತಿರಲಿಲ್ಲ. ತನ್ನ ಬದುಕಿನ ಸಿಹಿ ಸಂಗತಿಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಾ ನೋವನ್ನು ಮರೆಯುತ್ತಾ ಬರೆಯಬಹುದಿತ್ತು. ಆದರೆ ಅವರಲ್ಲಿ ತನ್ನ ನೋವಿನ ಸಂಗತಿಗಳನ್ನೇ ಕೆದಕಿ ಕೆದಕಿ ಬರೆದಿದ್ದಾರೆ.ಓದುಗರ ಭಾವಕೋಶ ತಲುಪಿ ಹಿಡಿದಿಟ್ಟುಕೊಂಡು ಪ್ರತಿ ಪುಟವನ್ನು ಓದುವಂತೆ ಮಾಡುವ ಅವರ ಬರವಣಿಗೆಯ ತಂತ್ರ ಮತ್ತು ನಿರೂಪಣೆಯ ದೃಷ್ಟಿಯಿಂದ  ಸಾಹಿತ್ಯಕವಾಗಿ ಸಹ ವಿಶಿಷ್ಟ ಕ್ರಮ ಅನುಸರಿಸಿದ್ದಾರೆ.

ಮಾನವನ ದೇಹ ರಚನೆ,ನರರೋಗ , ವೈದ್ಯಕೀಯ ಲೋಕದ ತವಕ ತಲ್ಲಣಗಳು, ವೈದ್ಯಕೀಯ ಪರೀಕ್ಷೆಯ ಸವಾಲುಗಳು, ವೈದ್ಯರ ವೈಯಕ್ತಿಕ ಬದುಕು ಬವಣೆಗಳು , ವೈದ್ಯಕೀಯ ಲೋಕದ ಪ್ರಯೋಗಗಳ ಅಚ್ಚರಿಗಳು ಹೀಗೆ ಹಲವಾರು ವೈಚಾರಿಕ ಸಂಗತಿಗಳನ್ನು, ತನ್ನ ಬದುಕಿನ ಪುಟಗಳು ಸಹ ಆಗಿದ್ದ ವಿಚಾರಗಳೊಂದಿಗೆ ತಿಳಿಸುತ್ತಾ ಸಾಗುವ ಈ ಕೃತಿಯ ನಿರೂಪಣೆಯನ್ನು ಒಂದು ವಿಶಿಷ್ಟ ರೋಚಕ ಕಾದಂಬರಿಯಲ್ಲಿ ಬಂದು ಹೋಗುವ ತಿರುವುಗಳಷ್ಟೇ ವಿಶಿಷ್ಟ ಶೈಲಿಯಲ್ಲಿ ಹೆಣೆದಿದ್ದಾರೆ.

ಹಲವಾರು ಮಹಾನ್ ನಾಯಕರ ಆತ್ಮಚರಿತ್ರೆಗಳನ್ನು ಓದಿದ ನಮಗೆ ಕೊಡುವ ಅನುಭವಕ್ಕೂ ಒಬ್ಬ ವೈದ್ಯ  ಚಿಕ್ಕ ವಯಸ್ಸಿನಲ್ಲಿಯೆ ತನ್ನದೇ ದುರಂತ ದಿನಗಳನ್ನು ಆಸ್ಪತ್ರೆಯಲ್ಲಿ ಕಳೆಯುತ್ತ
ಬದುಕಿನ ಹಲವು ಮಜಲುಗಳನ್ನು, ಆತ್ಮ- ಆಧ್ಯಾತ್ಮವನ್ನು, ದೇಹರಚನೆ ,ಜೀವ - ಜೀವನ ಕ್ರಮ , ಉಸಿರಿನ ಕುರಿತು ತನ್ನದೆ ವೈಚಾರಿಕ ವೈದ್ಯಕೀಯ ಅನುಭವದ ನೆಲೆಯಲ್ಲಿ ವಿವರಿಸುತ್ತಾ ತನ್ನ ಘಟನೆಗಳೊಂದಿಗೆ ಓದುಗರಿಗೆ ಮುಖಾಮುಖಿಯಾಗಿ ನಿಂತು ವೈದ್ಯಕೀಯ ಅರಿವಿನ ಜೊತೆಗೆ ಭಾವಕೋಶಕ್ಕೆ ಈ ಕೃತಿ ಮೂಲಕ ಲಗ್ಗೆ ಹಾಕುವಲ್ಲಿ ಯಶಸ್ವಿಯಾಗುವುದು ಈ ಕೃತಿಯ ಹೆಚ್ಚುಗಾರಿಕೆ.

ಈವರೆಗಿನ ಹೆಸರಾಂತ ಆತ್ಮಚರಿತ್ರೆಗಳು  ಸಾಮಾಜಿಕ, ರಾಜಕೀಯ ಮಾದರಿ ಜೀವನ ವಿಧಾನ , ಹೋರಾಟದ ಘಟನಾವಳಿಗಳನ್ನು  ಸ್ವತಃ ಅವರೇ ವಿವರಿಸುವ ಕ್ರಮಗಳಾಗಿ ಕಂಡರೆ  ಈ ಕೃತಿ ಸಾವಿನ ಅಂಚಿನಲ್ಲಿರುವ ವ್ಯಕ್ತಿಯೊಬ್ಬನ ಅರ್ಥ ಧ್ವನಿಯಾಗಿಯೂ, ವೈದ್ಯಕೀಯ ಲೋಕದ ಹಲವು ಮಜಲುಗಳ ಪರಿಚಯ ಕೃತಿಯಾಗಿಯೂ ಗ್ರಹಿಸಬಹುದಲ್ಲದೆ ಇಲ್ಲಿ ದಂಪತಿಗಳಿಬ್ಬರು ಸಹ ಕೃತಿಕಾರರಾಗಿರುವುದು ವಿಶಿಷ್ಟ. ಪೌಲ್ ಅವರು ಸಾಕಷ್ಟು ಬರೆದು ನಿಲ್ಲಿಸಿದ್ದ ಅವರದೇ ಬದುಕಿನ ಅಂತಿಮ ದಿನಗಳ ಘಟನಾವಳಿಗಳನ್ನು ಅವರ ಮರಣದ ನಂತರ  ವಿಚ್ಛೇದನ ಬಯಸಿದ್ದ ಅವರ ಹೆಂಡತಿ ಡಾ.ಲೂಸೀ ಸಾವಿನ ಅಂಚಿನಲ್ಲಿರುವ ಗಂಡನನ್ನು  ಮಗನ ಕಾರಣದಿಂದಾಗಿ ಮತ್ತೆ ಜೊತೆಯಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಾ ಮರಣಾನಂತರ ಆಕೃತಿಯನ್ನು ಪೂರ್ಣಗೊಳಿಸಿ  ನಮ್ಮ ಕೈಗೆ when breath becomes air  ಎಂಬ ವಿಶಿಷ್ಟ ಕೃತಿಯನ್ನು ಇಟ್ಟು ಸಾಹಿತ್ಯಲೋಕದಲ್ಲಿ ಹೊಸ ಸಂಚಲನ ಹುಟ್ಟುಹಾಕಿದ್ದಾರೆ. ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದವಾದ ಈ ಕೃತಿ ಕನ್ನಡದಲ್ಲಿ ನಮಗೆ ಓದಲು  ಹಗಲಿರುಳು ಶ್ರಮಿಸಿದ ಡಾ.ಡಿ.ಸಿ ನಂಜುಂಡ ಅವರು "ಉಸಿರೇ ಗಾಳಿಯಾದಾಗ " ಎನ್ನುವ ಶೀರ್ಷಿಕೆ ಯೊಂದಿಗೆ ಸಶಕ್ತವಾಗಿ ಅನುವಾದಿಸಿದ್ದಾರೆ.ಇಂತಹ ವಿಶಿಷ್ಟ ವೈದ್ಯಕೀಯ ವ್ಯಕ್ತಿ ಚರಿತ್ರೆಯನ್ನು ನಾನು ಈವರೆಗೆ  ಓದಿರಲಿಲ್ಲ. ಕನ್ನಡದಲ್ಲಿ ಇದೇ ಮೊದಲ ಕೃತಿ ಇರಬಹುದು ಅನಿಸುತ್ತದೆ.

ವೈದ್ಯಕೀಯ ಕ್ಷೇತ್ರದಲ್ಲಿ , ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವವನ್ನು ಸಾಧಿಸುವ ಮಹತ್ವಾಕಾಂಕ್ಷೆ ಹೊತ್ತಿದ್ದ ಪೌಲ್ ಇಷ್ಟು ಬೇಗ ಸಾವಿನ ಅಂಚಿನಲ್ಲಿ ದಿನಗಣನೆ ಎಣಿಸುತ್ತಿರುವುದರ ಬಗ್ಗೆ ತಿಳಿದ ವಿಚ್ಛೇದನ ಬಯಸಿದ್ದ ಡಾ.ಲೂಸೀಗೆ  ಇಂತಹ ಸಂದಿಗ್ಧ ಕಾಲದಲ್ಲಿ ಅವನ ಜೊತೆಗೆ ಇರಬೇಕೆಂದು ಬಯಸಿ ಬಂದಮೇಲೆ ಮಕ್ಕಳನ್ನು ಪಡೆಯುವ ಆಸೆಪಟ್ಟ ಪೌಲ್   ತಂದೆಯಾಗಿ ತನ್ನ ಸಂಗತಿಗಳನ್ನು ಆಸೆಗಳನ್ನು ಜವಾಬ್ದಾರಿಗಳನ್ನು ವಿವರಿಸುವಾಗ ಕಣ್ಣೀರು ತರಿಸುತ್ತದೆ. ಸಾವಿನ ಅಂಚಿಗೆ ತಲುಪಿರುವ ವ್ಯಕ್ತಿಯ ಹತಾಶೆಯ ಸಂಗತಿಗಳನ್ನು ಓದುತ್ತಲೇ ಎದೆ ಭಾರವಾಗುತ್ತದೆ. ಮಗು ಹುಟ್ಟುವ ಮುನ್ನವೇ ಸಂಭ್ರಮಿಸಿದ ಪೌಲ್ ತನಗೆ ಮಗಳೇ ಹುಟ್ಟುವುದೇ ಎಂದು ಖಾತ್ರಿಮಾಡಿಕೊಂಡು ಎಲಿಜಬೆತ್ ಕ್ಯಾಂಡಿ ಎಂದು ನಾಮಕರಣವನ್ನೂ ಒಂದು ತಿಂಗಳು ಮೊದಲೇ ಮಾಡಿಬಿಡುತ್ತಾನೆ.  ಮಗಳು ಹುಟ್ಟುವುದು ಖಾತ್ರಿ ಆದ ಮೇಲೆ ಜೀವನದ ಪ್ರತಿ ಕ್ಷಣವನ್ನು ಸಂಭ್ರಮಿಸಲು ಆರಂಭಿಸುತ್ತಾನೆ. ಮಗಳು ಜನಿಸುವ ದಿನ ಹೆಂಡತಿಯ ಜೊತೆಗೆ ಇದ್ದು ಪ್ರತಿ ಸಂಗತಿಯನ್ನು ವೀಕ್ಷಿಸುತ್ತಾ ಜೊತೆ ಇರುತ್ತಾನೆ. ಪೌಲ್ ಒಬ್ಬ ಭಾವಜೀವಿಯಾಗಿ ಓದುಗನನ್ನು ಆವರಿಸುತ್ತಾನೆ. ಮಗಳಿಗೆ  ತನ್ನನ್ನು ನೆನಪಿಟ್ಟುಕೊಳ್ಳುವಷ್ಟು ನೆನಪಿನ ಶಕ್ತಿ ಬರುವವರೆಗೆ ಆದರೂ ತಾನು ಬದುಕಿರಬೇಕು ಎಂದು ಬಯಸುತ್ತಾನೆ. ಆದರೆ ಸಾವು ಸನಿಹದಲ್ಲಿದೆ ಎಂದು ಅನಿಸುತ್ತದೆ. "ಶಬ್ದಗಳು ಬಹಳ ವರ್ಷಗಳ ಕಾಲ ಬದುಕುತ್ತವೆ. ಆದರೆ ನಾನಲ್ಲ.. ಎನ್ನುವಲ್ಲಿಗೆ ಪೌಲ್ ಆತ್ಮಚರಿತ್ರೆ ಮುಗಿಯುತ್ತದೆ.

ಶ್ರೇಷ್ಠ ಕೃತಿಕಾರರ ಕೃತಿ ಎಂಬ ಕಾರಣಕ್ಕೆ, ಅಥವಾ ಹಲವು ಪ್ರಶಸ್ತಿ ಪಡೆದ ಕೃತಿ ಎಂಬ ಕಾರಣಕ್ಕೆ ಕೆಲವು ಪುಸ್ತಕಗಳನ್ನು ಓದಿರುತ್ತೇವೆ. ಅವು ಅಷ್ಟೇ ವೇಗವಾಗಿ ನಮ್ಮಿಂದ ಮರೆತು ಹೋಗಿರುತ್ತವೆ. ಆದರೆ ಈ ಕೃತಿ ಒಮ್ಮೆ ಓದಿದಮೇಲೆ ಮರೆಯುವ ಸಾಧ್ಯತೆಯೇ ಇಲ್ಲ. ಪ್ರತಿ ಪುಟಕ್ಕೂ ನಿಮ್ಮ ಭಾವಕೋಶದ ಆಳಕ್ಕೆ ಇಳಿದು ಹಾಗೆ ಕೂತುಬಿಡುವ ಗುಣವಿದೆ.

ಪೌಲ್ ಅವರ ನಿಧನದ ನಂತರವೂ ಅವರು ಬರೆದಿಟ್ಟ ಬರವಣಿಗೆಯನ್ನು ಅವನ ಹೆಂಡತಿ ಡಾಕ್ಟರ್ ಲೂಸಿ ಕಲಾನಿಧಿ ಅವರು ಮುಂದುವರಿಸಿ  ಬರೆದು ಈ ಕೃತಿಯನ್ನು ಪ್ರಕಟಿಸಿದ್ದು  ಸಾಹಿತ್ಯಲೋಕದ ಮತ್ತೊಂದು ವಿಶೇಷ ಪರಂಪರೆ. ಕ್ಯಾಡಿ ಹುಟ್ಟಿದ ನಂತರದ ದಿನಗಳಲ್ಲಿ ಪೌಲ್ ಅವರು ಬರೆಯುವುದನ್ನು ನಿಲ್ಲಿಸಿದಂತೆ ತೋರುತ್ತದೆ. ಹಾಗಾಗಿ ಕ್ಯಾಡಿಯೊಂದಿಗೆ ಕಳೆದ ಕೆಲವೇ ತಿಂಗಳುಗಳ ಸಂಗತಿಗಳನ್ನು  ಅವನ  ಹೆಂಡತಿ ಶ್ರೀಮತಿ ಲೂಸಿ ಅವರು ಬರೆದಿದ್ದಾರೆ. ಲೂಸಿಯವರು ಓದುಗರ ಭಾವಕೋಶಗಳಲ್ಲಿ ಮತ್ತಷ್ಟು ಭಾವಸ್ಪರ್ಶೀ ಮಾತುಗಳನ್ನು ಹಂಚಿಕೊಳ್ಳುತ್ತಾ  ಕ್ಯಾನ್ಸರ್ ತೀವ್ರವಾಗಿ ಸಾವಿನೂರಿಗೆ  ಕರೆದುಕೊಂಡು ಹೋದ  ಸಂಗತಿಯನ್ನು ಮನಸ್ಸು ಭಾರಮಾಡಿಕೊಂಡೇ ಎದೆಭಾರವಾಗುವಂತೆ ನಿರೂಪಿಸಿದ್ದಾರೆ.

ಇಂತಹ ವಿಶಿಷ್ಟ ಕೃತಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ ಮತ್ತು ವೆಲ್ಕಮ್ ಬುಕ್ ಪ್ರೈಸ್ ಎರಡಕ್ಕೂ ನಾಮನಿರ್ದೇಶನಗೊಂಡದ್ದು ಈ ಕೃತಿಯ ಹೆಚ್ಚುಗಾರಿಕೆ.
ಕನ್ನಡಕ್ಕೆ  ಡಾ ಡಿ.ಸಿ ನಂಜುಂಡ ಅವರು ಕನ್ನಡದ್ದೇ ಕೃತಿ ಎನಿಸುವಷ್ಟು ಶಕ್ತವಾಗಿ ಅನುವಾದಿಸಿದ್ದಾರೆ. ಭಾವನೆಗಳು ಭಾಷಾತೀತ. ಪೌಲ್ ಅವರು ಇಂಗ್ಲಿಷ್ನಲ್ಲಿ ತಮ್ಮ ಭಾವನೆಗಳನ್ನು ಆತ್ಮಚರಿತ್ರೆ ರೂಪದಲ್ಲಿ ಪ್ರಕಟಿಸಿದರು ಸಹ ಕನ್ನಡದಲ್ಲಿ ಅದನ್ನು ಅಷ್ಟೇ ಅಚ್ಚುಕಟ್ಟಾಗಿ ಮೂಲ ಭಾವಕ್ಕೆ , ಭಾವನೆಗಳ ಓಟಕ್ಕೆ ಧಕ್ಕೆ, ಆಗದಂತೆ ಪೌಲ್ ಅವರ ಮನದ ಭಾಷೆಯಂತೆಯೆ ಭಾಸವಾಗುವಂತೆ ಮನತಟ್ಟುವ ಪದಪುಂಜಗಳನ್ನು ಬಳಸಿ ಅನುವಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಅನುವಾದಿತ ಈ ಕೃತಿಯನ್ನು ಪ್ರಕಟಿಸಿದ್ದು ದೀಕ್ಷಾ ಪ್ರಕಾಶನ ಮೈಸೂರು. ಬೆಲೆ 200.
ಪುಸ್ತಕಕ್ಕಾಗಿ ಈ ಕೃತಿಯ ಅನುವಾದಕರಾದ
ಡಾ.ಡಿ.ಸಿ ನಂಜುಂಡ ಅವರನ್ನು ಸಹ ಸಂಪರ್ಕಿಸಬಹುದು.

ರವಿರಾಜ್ ಸಾಗರ್ .ಮಂಡಗಳಲೆ
ಹವ್ಯಾಸಿ ಬರಹಗಾರರು
9980952630.

No comments:

Post a Comment