ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 27 October 2018

ಮಧುರ ಚೆನ್ನರು ಕಟ್ಟಿದ ಜಾನಪದ ಲೋಕ ಸಾಹಿತ್ಯ

ಿ

ಮಧುರಚೆನ್ನರ ಸಾಹಿತ್ಯ
ಹಲಸಂಗಿ ಗೆಳೆಯರ ಕೊಡುಗೆಯ ಆಳ ಸಂಪಾದಿಸಿ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪೂರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ ‘ಮಲ್ಲಿಗೆ ದಂಡೆ’(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪೂರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು.

ಡಾ.ಗುರುಲಿಂಗ ಕಾಪಸೆಯವರು ‘ಹಲಸಂಗಿ ಹಾಡು’(2000) ಪ್ರಸ್ತಾವನೆಯಲ್ಲಿ ಹಲಸಂಗಿ ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “ಹಲಸಂಗಿಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ ತೀರಿಕೊಂಡ ಮೇಲೆ, ಅವನ ಲಾವಣಿಗಳು ಇನ್ನೂ ಸ್ವಾರಸ್ಯಕರವಾಗಿ ಹಾಡಲ್ಪಡುತ್ತಿದ್ದವು. ಖಾಜಾಭಾಯಿ ತೀರಿಕೊಂಡದ್ದು 1924ರಲ್ಲಿ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”

ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್ವುದಲ್ ಫ್ಲೀಟ್ ರ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಯಪುರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.

ಗರತಿಯ ಹಾಡು :

ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.

ಗರತಿಯ ಹಾಡು’ ಸಂಗ್ರಹದಲ್ಲಿರುವ ಸುಮಾರು 800 ತ್ರಿಪದಿಗಳು ಜನಪದ ತಾಯಂದಿರ ಕಲ್ಪಿತ ಶಕ್ತಿಗೆ, ಅನುಭವಕ್ಕೆ, ಬದುಕಿನ ವಿವಿಧ ಬಗೆಯ ಸಂದರ್ಭಗಳಿಗೆ ಹಿಡಿದ ಕನ್ನಡಿಗಳಾಗಿವೆ. ವಿಜಯಪುರ ಜಿಲ್ಲೆಯ ಭಾಷಿಕ ಸೊಗಡು ಇಲ್ಲಿ ಹೆಪುಗಟ್ಟಿದೆ. ಇಲ್ಲಿಯ ಹಾಡುಗಳನ್ನು ಅವುಗಳ ವಿಷಯ ವಸ್ತುಗಳ ಹಿನ್ನೆಲೆಯಲ್ಲಿ ವರ್ಗೀಕರಿಸಿಕೊಟ್ಟಿದ್ದಾರೆ. ಪರಂಪರೆ, ಸ್ತುತಿ, ತವರುಮನೆ ತಾಯ್ತಂದೆ, ಅಣ್ತಮ್ಮರೂ ಅಕ್ಕತಂಗಿಯರೂ ಅತ್ತಿಗೆ ನಾದಿನಿಯರೂ, ಗೆಳತಿ, ಅತ್ತೆಯ ಮನೆಯ ಕಷ್ಟ, ಮನಸ್ತಾಪ, ಸತಿಪತಿ ಇತ್ಯಾದಿ ಶೀರ್ಷಿಕೆಗಳಲ್ಲಿ ಸರಿಜೋಡಿಸಿ ಇಂಥ ಸಂಗ್ರಹಗಳ ವಿಧಾನವನ್ನು ತಾವೇ ರೂಪಿಸಿ ಮುಂದಿನ ಸಂಗ್ರಾಹಕರಿಗೆ ಮಾರ್ಗ ತೋರಿಸಿದ್ದಾರೆ. ಬಿ.ಎಂ.ಶ್ರೀ., ಬೇಂದ್ರೆ ಮತ್ತು ಮಾಸ್ತಿ ಅವರು ಈ ಪ್ರತಿಷ್ಠಿತ ಜನಪದ ಗೀತ ಸಂಕಲನಕ್ಕೆ ಮೌಲಿಕವಾದ ಪ್ರಸ್ತಾವನೆ, ಪರಿಚಯ, ಮುನ್ನುಡಿ ಬರೆದು ತೂಕ ಹೆಚ್ಚಿಸಿದ್ದಾರೆ. ಅದುವರೆಗಿನ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಕುರಿತು, ವ್ಯಕ್ತವಾಗಿದ್ದ ಹೀಗಳಿಕೆಯ ಮಾತುಗಳನ್ನು ಮೊಟ್ಟಮೊದಲಬಾರಿಗೆ ‘ಇಕ್ಕಿ ಮೆಟ್ಟಿದ’ ಬಿ.ಎಂ.ಶ್ರೀ ಅವರು ‘ಮೊದಲು ಹುಟ್ಟಿದುದು ಜನವಾಣಿ, ಅದು ಬೆಳೆದು ಪರಿಷ್ಕøತವಾಗಿ ವೃದ್ದಿಯಾದುದು ಕವಿವಾಣಿ. "ಜನವಾಣಿ ಬೇರು: ಕವಿವಾಣಿ ಹೂವು" ಎಂದು ಸಾರಿದರು.ಹಾಡುತ್ತ, ಕಲಿಯುತ್ತ ಮುಂದಿನ ಪೀಳಿಗೆಗೆ ಬೆಳೆದು ಉಳಿದುಕೊಂಡು ಬಂದ ಈ ಪದಗಳು ಜನಸಾಮಾನ್ಯರ ನಾಲಗೆಯ ಮೇಲೆ ನಲಿದಾಡುವ ಭಾರತೀಯ ಸಂಸ್ಕøತಿಯ ಪರಂಪರೆಯ ಕಿಡಿನುಡಿಗಳಾಗಿವೆ.

ಬ್ಯಾಸಗಿ ದಿವಸಕ ಬೇವಿನ ಮರತಂಪ ತವರ ಮನಿಯಾ ದೀಪ ತವರೇರಿ ನೋಡೇನ ನಾರಿ ಕಣ್ಣಿನ ನೀರ ಬಾರಿ ಬೀಜಿನ್ಹಾಂಗ ಗೆಳೆತನ ಕೂಡಿದರ ಗೆಜ್ಜಿ ಜೋಡಿಸಿದ್ಹಾಂಗ ಅರಸ ಒಳ್ಳೆವರಂತ ವಿರಸವಾಡಲಿಬ್ಯಾಡ ತೊಟ್ಟೀಲದಾಗೊಂದು ತೊಳದ ಮುತ್ತನು ಕಂಡೆ ತಾಯಿದ್ರ ತವರ್ಹೆಚ್ಚು ತಂದಿದ್ರ ಬಳಗ್ಹೆಚ್ಚು ಎಲ್ಲ್ಯಾರೆ ಇರಲೆವ್ವಾ ಹುಲ್ಲಾಗಿ ಬೆಳೆಯಲಿ ಕಣ್ಣು ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ...

ಹೀಗೆ ಪ್ರತಿ ತ್ರಿಪದಿಯಲ್ಲಿ ಕಂಡುಬರುವ ಸಾಲುಗಳು ಜನಪದರ ಸಾಹಿತ್ಯಿಕ ಭಾಷೆಯ ಶ್ರೇಷ್ಠತೆಯನ್ನು ಸಾರುತ್ತವೆ. ಸರಳ, ಲಲಿತ, ಹಿತಮಿತವಾದ ನುಡಿಗಳು ಎಂಥ ಸಹೃದಯದವರನ್ನಾದರೂ ಸೆಳೆದುಕೊಳ್ಳುತ್ತವೆ. ಇಂಥ ನುಡಿ ಸಾಲುಗಳು ಮೌಖಿಕ ಕಾವ್ಯ ಶ್ರೀಮಂತಿಕೆಯಿಂದ ಕೂಡಿ ಹಾಡಿದವರ ಜೊತೆಗೇನೆ ಮರೆಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಇವನ್ನು ಸಂಗ್ರಹಿಸಿ ಸಂಪಾದಿಸಿಕೊಡುವ ಮೂಲಕ ‘ಹಲಸಂಗಿ ಗೆಳೆಯರು’ ಕನ್ನಡ ನಾಡಿನ ಜಾನಪದದ ಹೆಬ್ಬಾಗಿಲು ತೆರೆದುದು ಒಂದು ಐತಿಹಾಸಿಕ ಸತ್ಯವಾಗಿದೆ. ಜನಪದ ತಾಯಂದಿರು ಕೊಡುವ ಪ್ರತಿಮೆ, ಪ್ರತೀಕಗಳಿಗೆ ಎಂಥ ಶಿಷ್ಟಕವಿಯನ್ನಾದರೂ ತೀವ್ರತರವಾಗಿ ಸೆಳೆಯುವಂಥದು. ಮಗಳು ಎಂಥಾ ಚೆಲುವಿ ನಕ್ಕರೆ ತುಟಿಗೆಂಪು ಅಳಿಯ ಎಂಥವರು ನನಗ್ಹೇಳ | ಹಂಪೀಯ ವಿರುಪಾಕ್ಷಿಗಿಂತ ಚೆಲುವರು.

ಜನಪದ ಕವಿಯತ್ರಿಯರ ಹೋಲಿಕೆ, ಹಂಬಲಗಳು ತಾವು ಆರಾಧಿಸುವ ದೇವನನ್ನು ಜೊತೆ ಸೇರಿಸಿ ಕಲ್ಪಿಸುವುದು ವಿಶಿಷ್ಟವಾದುದು. ದ.ರಾ.ಬೇಂದ್ರೆಯವರು ಈ ಸಂಕಲನದ ‘ಪರಿಚಯ’ದಲ್ಲಿ ಜನಪದ ಹಾಡುಗಾರ್ತಿಯರ ಪದ ಶ್ರೇಷ್ಠತೆಯನ್ನು ಹೀಗೆ ಸಾರಿದ್ದಾರೆ. “ಜೀವನವೇ ದೇವತೆಯಾದ, ತ್ರಿಪದಿ ಛಂದದಲ್ಲಿ ಹೊರಹೊಮ್ಮಿದ ‘ಗರತಿಯ ಹಾಡಿ’ನ ಋಷಿಗಳು ಹೆಣ್ಣು ಮಕ್ಕಳು-ನಮ್ಮ ತಾಯಿ ತಂಗಿಯರು, ಅಮ್ಮ ಅಕ್ಕಂದಿರು, ಮಡದಿ ಮಕ್ಕಳು. ಹಾಗೆ ವಿಚಾರಿಸಿ ನೋಡಿದರೆ ಅವರದೇ ನಿಜವಾದ ಕಾವ್ಯ, ಉಳಿದದು ಕಾವ್ಯದ ಛಾಯೆ” ಎಂಬಲ್ಲಿ ಬೇಂದ್ರೆಯವರು ಈ ಕೃತಿಯ ಮಹತ್ತು ಸಾರಿದ್ದು ಸ್ಪಷ್ಟ ವಾಗುತ್ತದೆ.

ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡು ಬಂದ ‘ಗರತಿಯ ಹಾಡು’ ಉದ್ದಕ್ಕೂ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ. ‘ಈ ಗ್ರಂಥ ಕನ್ನಡದ ಗರತಿಯರ ಬಾಳಿನ ಅಮೃತ ಬಿಂದುಗಳನ್ನೇ ಸಂಕಲನ ಮಾಡಿದಂತಿರುವ ರೀತಿಯಲ್ಲಿ ದಿವ್ಯ ಮಾಧುರ್ಯವನ್ನು ನೀಡುತ್ತದೆ’ ಎಂದು ಜಾನಪದ ವಿದ್ವಾಂಸ ಎಲ್.ಆರ್.ಹೆಗಡೆ ಅವರು ಗುರುತಿಸಿದರೆ, ಗರತಿಯ ಹಾಡು ಕನ್ನಡದ ಪ್ರಪ್ರಥಮ ಜಾನಪದ ಕಾವ್ಯ ಸಂಕಲನವಾಗಿದ್ದು ಗುಣದ ದೃಷ್ಟಿಯಿಂದ ಕೂಡ ಇಂದಿಗೂ ಅದ್ವಿತೀಯ ಕೃತಿಯಾಗಿ ನಿಂತಿದೆ ಎಂದಿದ್ದಾರೆ ಹಿರಿಯ ವಿದ್ವಾಂಸರಾದ ಸಿ.ಪಿ.ಕೆ.ಅವರು. ಗುರುಲಿಂಗ ಕಾಪಸೆ ಅವರು ‘ಕನ್ನಡ ಜನಪದ ಸಾಹಿತ್ಯದ ಆದ್ಯ ಸಂಗ್ರಹವಾದ ಇದು ಅದ್ವೀತಿಯವಾದ ಸಂಗ್ರಹವೂ ಅಹುದು’ ಎಂದು ಅದರ ವಿಶೇಷತೆಯನ್ನು ಬಣ್ಣಿಸಿದ್ದಾರೆ. ಕೃತಿಗೆ ಆಶೀರ್ವಾದ ರೂಪದಲ್ಲಿ ಬರೆದ ಬರಹದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಮಾತನ್ನು ಗಮನಿಸಬೇಕು. ಈ ಕೃತಿ ಮುಂದೆ ಕಾವ್ಯ ಕಟ್ಟುವ ಕವಿಗಳಿಗೆ ಮಾರ್ಗದರ್ಶಿಯಾಗಿರಲೆಂದು ಅವರು ಹೇಳಿದ್ದು ಈ ಪದಗಳು ನಮ್ಮ ಜನರೆಲ್ಲರ ಆದರವನ್ನು ಪಡೆಯಲೆಂದೂ ಇವುಗಳಿಂದ ಸಾಧ್ಯವಾದ ಎಲ್ಲ ಪ್ರಯೋಜನ ವನ್ನೂ ನಮ್ಮ ಸಾಹಿತ್ಯ ಸೇವಕರೂ ಹೊಂದಲೆಂದೂ ನಾನು ಹಾರೈಸುತ್ತೇನೆ ಎನ್ನುವಲ್ಲಿ ನವೋದಯದ ಪ್ರಾರಂಭದ ಕಾಲಕ್ಕೆ ಬರೆಯುತ್ತಿದ್ದ ಕವಿಗಳಿಗೆ ಈ ಕೃತಿ ಸ್ಪೂರ್ತಿ ನೀಡುವ ಸುಳಿವನ್ನು ಪ್ರಕಟಪಡಿಸಿದ್ದಾರೆ. ಈ ಹಾರೈಕೆ ನಿಜವೂ ಆಗಿದೆ.(ಡಾ.ಪ್ರಕಾಶ ಗ.ಖಾಡೆ ಅವರ ,ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಕೃತಿಯಿಂದ)

No comments:

Post a Comment