ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 3 February 2021

ಮಲೆನಾಡಿನಲ್ಲಿ ಗಜಲ್ ಕಾವ್ಯ'ವಾಣಿ' ನುಡಿಸಿದ ವಾಣಿ ಭಂಡಾರಿಯವರ' ಸಂತನೊಳಗಿನ ಧ್ಯಾನ'.

ರವಿರಾಜಮಾರ್ಗ: ಪುಸ್ತಕ ಪರಿಚಯ

 *ಮಲೆನಾಡಿನಲ್ಲಿ ಗಜಲ್ ಕಾವ್ಯ'ವಾಣಿ'ಯ ಹೊಸ ದನಿ  ವಾಣಿ ಭಂಡಾರಿಯವರ 'ಸಂತನೊಳಗಿನ ಧ್ಯಾನ* 
ಶಾಂತರಸರಿಂದ ಆರಂಭವಾಗಿ ಇಂದಿನ ಅಲ್ಲಾಗಿರಿರಾಜ್, ಚಿದಾನಂದ ಸಾಲಿ, ಆರಿಫ್ ರಾಜಾ ಮುಂತಾದ ಹಲವರೆಲ್ಲರೂ ಸೇರಿದಂತೆ ಗಜಲ್ ಸಾಹಿತ್ಯಕೃಷಿ ಹೆಚ್ಚಾಗಿ ನಡೆದದ್ದು ಉತ್ತರ ಕರ್ನಾಟಕ ಭಾಗದಲ್ಲಿ. ನಮ್ಮ ಮಲೆನಾಡಿನಲ್ಲಿ ಗಜಲ್ ಸಾಹಿತ್ಯ ಕೃಷಿ ನಡೆದದ್ದು ವಿರಳ.
ಇತ್ತೀಚಿನ ಕೆಲವು ಯುವಕರು ರಾಜ್ಯದ ಹಲವೆಡೆ ಗಜಲ್ ಧ್ಯಾನ ಆರಂಭಿಸಿದ್ದಾರೆ. ಅಂಥವರ ಸಾಲಿಗೆ ಹೊಸ ಸೇರ್ಪಡೆ ನಮ್ಮ ಶಿವಮೊಗ್ಗದ ಮಲೆನಾಡಿನ  ಆತ್ಮೀಯ ವಾಣಿ ಭಂಡಾರಿಯವರು.
ಅವರು ತಮ್ಮ ಚೊಚ್ಚಲ ಕೃತಿಯಲ್ಲಿಯೇ ಗಜಲ್ ಗಾನ ಆರಂಭಿಸಿರುವುದು ಅವರ ಹೆಚ್ಚುಗಾರಿಕೆ. 

ಬಹುಮುಖ ಪ್ರತಿಭೆಯಾದ ಇವರು ಸದಾ ಹಸನ್ಮುಖಿ ಕ್ರಿಯಾಶೀಲ ಶಿಕ್ಷಕಿಯಾಗಿ, ಕ್ರಿಯಾಶೀಲ ಅದ್ಯಾಪಕಿಯಾಗಿ ಹಲವು ವಿದ್ಯಾರ್ಥಿಗಳಿಗೆ ಮಾದರಿಯಾಗಿ ಸಹ ಕರ್ತವ್ಯ ನಿರ್ವಹಿಸುತ್ತಲೇ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಕೊಂಡು ಆರಂಭದಲ್ಲೇ ಗಂಭೀರವಾಗಿ ಗಜಲ್ ಧ್ಯಾನ ಆರಂಭಿಸಿ  ಮಲೆನಾಡಿನಲ್ಲಿ ಹೊಸ ಗಜಲ್ ಗಾಳಿ ಬೀಸುವಂತೆ ಕಾವ್ಯ"ವಾಣಿ" ನುಡಿಸಿದ್ದಾರೆ.

"ನನ್ನ ಯಾರು ಹಿಂಬಾಲಿಸಬೇಡಿ, ನೆರಳು ಹಿಂದೆ ನಿಂತಿದೆ
ಸುಮ್ಮನೆ ಮರುಗಬೇಡಿ, ಕತ್ತಲು ಕರಗುವುದಿದೆ ಬೆಳಕು ಕಾಯುತ್ತಿದೆ" 

"ಸಂತನೊಳಗಿನ ಧ್ಯಾನ ಕಂಡು ಬಯಲು ಮಾತು ನಿಲ್ಲಿಸಿದೆ.
ಬಡವರ ಕನಸಿನ ಚೀಲಗಳು ರಸ್ತೆಬದಿ ಬಿದ್ದು ನರಳುತ್ತಿವೆ"

"ದೀಪ ಹಚ್ಚುವ ಬದಲಿಗೆ ಪಟಾಕಿ ಕುಣಿದು ಕುಪ್ಪಳಿಸಿದವು
ಏನೆಂದು ಹೇಳಲಿ ಹಸಿದ ಮೈ ಬೆವರಿಗೆ ಬೇಸರ ಬಂದಿದೆ ನೋಡು"

ಎಂದು ಗಜಲ್ ಗಾನವನ್ನು ತುಸು ಬಿರುಸಾಗಿಯೇ  ನುಡಿಸುವ ಅವರು ಶೃಂಗಾರ, ವಿರಹ ,ರೌದ್ರ ,ಶಾಂತ ಮೌನಗಾನದಲ್ಲೂ ಗಜಲ್ ನೇಯ್ದಿದ್ದಾರೆ. ಬದುಕಿನ ಅನುಭವಕ್ಕೆ ನಿಲುಕಿದ ,ಅಂತರಂಗದ ಸುತ್ತಲೇ ಸುತ್ತುತ್ತಿರುವ ವಿಷಯವಸ್ತುವನ್ನು ಕೇಂದ್ರಿಕರಿಸಿದಂತೆ ಹಲವೆಡೆ ಕಾಣುತ್ತದೆ. ಮನದ ತಳವಳ, ತುಮುಲಗಳೆಲ್ಲ ಗಜಲ್ ಆಗಿಸಲು ಪದಗಳನ್ನು ಕಾವ್ಯದ ನೂಲಿನಲ್ಲಿ ಪೋಣಿಸಿದ್ದಾರೆ.

"ಮುಂಗುರುಳಿಗೆ ಬೇಸರ ಅವನ ಹೆಜ್ಜೆ ಸಪ್ಪಳವಿಲ್ಲದೆ
ಮನಸ್ಸಿಗೆ ಖೇದವಿದೆ ಬಯಕೆಯ ಜ್ವಾಲೆ ತಣಿಯದೆ.

"ರಾತ್ರಿ ರಾಣಿಯ ಮಲ್ಲಿಗೆದಂಡೆ ಮೌನವಾಗಿ ಮಗ್ಗುಲಾಗಿದೆ
ಸೋರಿದ ಕನಸು ಬಿಸ್ತಾರ್ನಲಿ ಮಕಾಡೆ ಮಲಗಿದೆ.
ಎಂದೂ ಹೇಳುವ ಅವರ ಗಜಲ್ ಹಲವು ಕಡೆ ಸ್ತ್ರೀಸಂವೇದನೆಯ ದನಿ ಮೊಳಗಿಸಿದೆ.ಗಜಲ್ ನಂತಹ ಗಜಲ್ ಸಾಹಿತ್ಯ ಕೃಷಿಗೆ ಇಳಿದ ಆರಂಭದಲ್ಲಿಯೇ ತಮ್ಮ ಅಭಿವ್ಯಕ್ತಿಯನ್ನು ಗಜಲ್ ಆಗಿಸಲು ಶ್ರಮಿಸಿರುವುದು ಪ್ರತಿ ಗಜಲ್ ನಲ್ಲಿ ಕಂಡುಬರುತ್ತದೆ. 
ಕೆಲವೆಡೆ ಇವರ ಗಜಲ್ ಗಾನ ಬಹುತೇಕ  ವಾಚ್ಯವಾಗಿವೆ ಎನಿಸಬಹುದಾದ ಗಜಲ್ ಆಗಿದ್ದರೂ ಇದು ಅವರ ಮೊದಲ ಪ್ರಯೋಗ ಆಗಿರುವುದರಿಂದ ಮುಂದೆ ಮತ್ತಷ್ಟು ಸಮೃದ್ಧ ಗಜಲ್ ಕೃಷಿ ಅವರಿಂದ ನಿರೀಕ್ಷಿಸಬಹುದು.
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾದ ಇವರ ಕೃತಿ ಭಂಡಾರಿ ಪ್ರಕಾಶನ ಶಿವಮೊಗ್ಗ ಕೃತಿಯ ಬೆಲೆ ನೂರು ರೂಪಾಯಿ. ಪ್ರೋತ್ಸಾಹಿಸಲು ಕೃತಿಯನ್ನು ಕೊಂಡು ಇವರ ಗಜಲ್  ಸಾಹಿತ್ಯ ಕೃಷಿಗೆ ನೀವೂ ಒಂದಿಷ್ಟು ಸಹಕರಿಸಬಹುದು. 

ರವಿರಾಜ್ ಸಾಗರ್.ಮಂಡಗಳಲೆ.

No comments:

Post a Comment