ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 26 December 2020

ಜನಪ್ರಿಯ ಶಿಶು ಗೀತೆಗಳು

ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..*

❤️❤️❤️

*ಚಿಕ್ಕ ಮಕ್ಕಳ ಪದ್ಯಗಳು:*

ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ
ಲೊಳ್ ಲೊಳ್ ಎಂದು ಕೂಗಿ ಪಾಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
*********************************************

ಆನಿ ಬಂತೊಂದು ಆನಿ, ಯಾವೂರು ಆನಿ, ಬಿಜಾಪೂರ ಆನಿ,
ಇಲ್ಲಿಗ್ಯಾಕ ಬಂತು, ಹಾದಿ ತಪ್ಪಿ ಬಂತು

ಹಾದಿಗೊಂದು ದುಡ್ಡು, ಬೀದಿಗೊಂದು ದುಡ್ಡು

ಅದೇ ದುಡ್ಡ ಕೊಟ್ಟು, ಸೇರ ಕೊಬ್ರಿ ತಂದು

ಲಟಲಟ ಮುರದು ಹುಡುಗರ ಕೈಯಾಗ ಕೊಟ್ಟು

ಆನಿ ಓಡೋಡೋಡ ಹೋಯ್ತು!

*********************************************


ಮಾಮ ಮಾಮ ಮಾತಾಡು...

ಮಾವಿನ ಗಿಡಕ್ಕ ಜೋತಾಡು...

ಮಾವಿನ ಗಂಟಿ ಮುರೀತ್..

ಮಾಮನ ಪಂಚೆ ಹರೀತ್!

********************************************

ಕಾಗಿ ಕಾಗಿ..ಕವ್ವ
ಯಾರ ಬಂದಾರವ್ವ
ಮಾಮಾ ಬಂದಾನವ್ವ
ಏನ ತಂದಾನವ್ವ
ಹಂಡೆದಂಥ*****
ಬಿಟ್ಕೊಂಡ್ ಹಂಗೇ ಬಂದಾನವ್ವ!

*********************************************

ಪಟ ಪಟ ಪಾರಿ
ಪಾರಿ ಗಂಡ ಪರೂತ್ ಕ ಹೋದ
ಏನ್ ತಂದ? ಕೋಳಿ ತಂದ
ಏನ್ ಮಾಡ್ದ...ಕೊಯ್ಕೊಂಡ್ ತಿಂದ!

*********************************************

ಕೈ ಕೈ ಎಲ್ಲಿಟ್ಟಿ?ಬಾಗಲಾಗ ಇಟ್ಟೆ,
ಬಾಗಲೇನ ಕೊಟ್ತು? ಕಸಬರಿಗಿ ಕೊಟ್ತು
ಕಸಬರಗಿಲೆ ಏನ ಮಾಡ್ದಿ? ಕಸಾ ಬಳದೆ
ಕಸಾ ಏನು ಮಾಡ್ದಿ? ತಿಪ್ಪಿಗೆ ಚಲ್ದೆ
ತಿಪ್ಪಿ ಏನು ಕೊಟ್ತು? ಗೊಬ್ಬರ ಕೊಟ್ತು
ಗೊಬ್ಬರ ಏನ ಮಾಡ್ದಿ? ಹೊಲಕ್ಕ ಹಾಕ್ದೆ
ಹೊಲ ಏನು ಕೊಟ್ತು? ಜ್ವಾಳ ಕೊಟ್ತು
ಜ್ವಾಳ ಏನು ಮಾಡ್ದಿ? ರೊಟ್ಟಿ ಮಾಡ್ದೆ
ರೊಟ್ಟಿ ಏನು ಮಾಡ್ದಿ? ಗಂಡಗ ಕೊಟ್ಟೆ..
ಹೊಹೊಹೊಹೊ...!!

*********************************************

ಹತ್ತಂಬಳ ಹಲಗಿ ಬಡದು,
ಹತ್ತಾರ ಆಳ ಡಂಗುರ ಸಾರಿ,
ಗೌಡನ ಹೆಂಡ್ತಿ ಏನ ಹಡದ್ಲು?
ಗಂಡನ ತಲೀಗೆ ಎಣ್ಣೀಲ್ಲೋ ಎಣ್ಣೀಲ್ಲೋ...
ಸುಂಬಳ ಹಚ್ಚಿ ಯರದಾರೋ ಯರದಾರೋ...!!!


*********************************************

ಅಚ್ಚಚ್ಚೋ....ಬೆಲ್ಲದಚ್ಚೋ
ಅಲ್ಲಿ ನೋಡು...ಇಲ್ಲಿ ನೋಡು
ಕೆಂಪತ್ತಿ ಮರದಲಿ ಗುಂಪು ನೋಡು
ಯಾವ ಗುಂಪು; ಕಾಗೆ ಗುಂಪು
ಯಾವ ಕಾಗೆ; ಕಪ್ಪು ಕಾಗೆ
ಯಾವ ಕಪ್ಪು; ಇದ್ದಿಲು ಕಪ್ಪು
ಯಾವ ಇದ್ದಿಲು; ಸೌದೆ ಇದ್ದಿಲು
ಯಾವ ಸೌದೆ;ಕಾಡು ಸೌದೆ
ಯಾವ ಕಾಡು;ಸುಡಗಾಡು
ಯಾವ ಸುಡು; ರೊಟ್ಟಿ ಸುಡು
ಯಾವ ರೊಟ್ಟಿ;ತಿನ್ನೋ ರೊಟ್ಟಿ
ಯಾವ ತಿನ್ನ; ಏಟು ತಿನ್ನಾ
ಯಾವ ಏಟು; ದೊಣ್ಣೆ ಏಟು..
ಯಾವ ದೊಣ್ಣೆ;ದಪ್ಪ ದೊಣ್ಣೆ
ಯಾವ ದಪ್ಪ; ಹೊಟ್ಟೆ ದಪ್ಪ
ಯಾವ ಹೊಟ್ಟೆ; ನಿನ್ನ ಹೊಟ್ಟೆ... ನಿನ್ನ ಹೊಟ್ಟೆ..

ಹೊಹೊಹೊಹೊ..!!

***************************************************

ಕ್ಕೋ..ಕ್ಕೋ...ಕೋಳಿ

ಬೆಳಗಾಯ್ತೇಳಿ...

ಅಂಬಾ ಅಂಬಾ ಕರುವೇ

ಹಾಲು ಕರೆಯ ಬರುವೇ

ಮಿಯಾಂವ್ ಮಿಯಾಂವ್ ಬೆಕ್ಕೇ

ಕದ್ದು ಹಾಲು ನೆಕ್ಕೇ

ಬೌ ಬೌ ನಾಯಿ

ಸಾಕು ಮುಚ್ಚು ಬಾಯಿ...!

********************************************

ಅಮ್ಮ ನೋಡೆ ಕಣ್ಬಿಟ್ಟು

ನಮ್ಮಯ ಶಾಲೆಯ ಉಪ್ಪಿಟ್ಟು

ನಮ್ಗೆ ಮಾತ್ರ ಇಷ್ಟೇ ಇಷ್ಟು

ಮಿಸ್ ಗಳಿಗ್ಮಾತ್ರ ಅಷ್ಟಷ್ಟು..!

********************************************

ನಾಗರಹಾವೇ ಹಾವೊಳು ಹೂವೇ
ಬಾಗಿಲ ಬಿಲದಲಿ ನಿನ್ನಯ ಠಾವೆ
ಕೈಯನು ಮುಗಿವೆ ಹಾಲನೀವೆ
ಬಾ ಬಾ ಬಾ

ಹಳದಿಯ ಹೆಡೆಯನು ಬಿಚ್ಚೋ ಬೇಗ
ಒಳಗಿನಿಂದಲೆ ಕೂಗೋ ರಾಗ
ಕೊಳಲನೂದುವೆ ಆಲಿಸು ರಾಗ
ನೀ ನೀ ನೀ ನೀ

ಎಲೆ ನಾಗಣ್ಣ ಹೇಳೆಲೋ ನಿನ್ನ
ತಲೆಯಲ್ಲಿರುವ ನಿಜವನ್ನ
ಬಡುಬಗ್ಗರಿಗೆ ಕೊಪ್ಪರಿಗೆಯ ಚಿನ್ನ 
ತಾ ತಾ ತಾ ತಾ ತಾ

ಬರೀ ಮೈ ಸಣ್ಣಗೆ ಮೊದದಲಿ ಬಿಸಿ ಹಗೆ
ಎರಡಲೆ ನಾಲಗೆ ಇಟ್ಟರೂ ಸುಮ್ಮಗೆ
ಎರಗುವೆ ನಿನಗೆ ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ

****************************************

ಒಂದು ಎರಡು ಬಾಳೆಲೆ ಹರಡು

ಮೂರು ನಾಕು ಅನ್ನ ಹಾಕು

ಐದು ಆರು ಬೇಳೆ ಸಾರು

ಏಳು ಎಂಟು ಪಲ್ಯಕ್ಕೆ ದಂಟು

ಒಂಭತ್ತು ಹತ್ತು ಎಲೆ ಮುದುರೆತ್ತು

ಒಂದರಿಂದ ಹತ್ತು ಹೀಗಿತ್ತು

ಊಟದ ಆಟವು ಮುಗಿದಿತ್ತು!

***************************************

ಒಂದು ಎರಡು ಬೇಸನ್ ಲಾಡು

ಮೂರು ನಾಕು ಮೈಸೂರ್ ಪಾಕು

ಐದು ಆರು ಬಾದಾಮಿ ಖೀರು

ಏಳು ಎಂಟು ಪೆಪ್ಪರಮೆಂಟು

ಒಂಭತ್ತು ಹತ್ತು ಕೈ ತುಂಬಾ ಬಿಸ್ಕತ್ತು

ಒಂದರಿಂದ ಹತ್ತು ಹೀಗಿತ್ತು

ತಿಂಡಿಯ ಆಟವು ಮುಗಿದಿತ್ತು!

*******************************************

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು

ಎತ್ತಿಕೊಳಲು ಹೋದರದಕೆ ಕೋಪ ಬರುವುದು

ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು

ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು

ಪಾಪ ಅತ್ತರಮ್ಮ ತಾನು ಅತ್ತುಬಿಡುವಳು

ಅಯ್ಯೊ ಪಾಪ ಎಂದುಕೊಂಡು ಮುತ್ತು ಕೊಡುವಳು!

********************************************

ಉಂಡಾಡಿ ಗುಂಡ
ಮದ್ವೆ ಮನೆಗೋದ

ಹತ್ತು ಲಾಡು ತಿಂದ
ಇನ್ನು ಬೇಕು ಅಂದ

ಹೊಟ್ಟೆ ನೋವು ಅಂದ

ಅಮ್ಮ ಬೆಣ್ಣೆ ಕೊಟ್ಳು
ಇನ್ನೂ ಸ್ವಲ್ಪ ಅಂದ

ಅಪ್ಪ ದೊಣ್ಣೆ ತಂದ
ಕೈ ಕಟ್ ಬಾಯಿ ಮುಚ್ ಎಂದ.!

**********************************************

ನರಿಯು ತೋಟಕೆ ಹೋಯಿತು...ನರಿಯು ತೋಟಕೆ ಹೋಯಿತು

ತೋಟ ನೋಡಲು....ನೋಡಿತೇನದು...ನೋಡಿತೇನದು...

ಚಪ್ಪರದಿಂದ ಕೂಡಿದ...ಚಪ್ಪರದಿಂದ ಕೂಡಿದ

ಚಪ್ಪರದಿಂದ ಕೂಡಿದ ದ್ರಾಕ್ಷಿ ಗೊಂಚಲು

ಒಂದು ಸಲ ಹಾರಿತು....ಎರಡು ಸಲ ಹಾರಿತು

ಮೂರು ಸಲ ಹಾರಿತು....ಸೋತು ಹೋಯಿತು

ದ್ರಾಕ್ಷಿ ಹುಳಿ ಎಂದಿತು...ದ್ರಾಕ್ಷಿ ಹುಳಿ ಎಂದಿತು

ಸಪ್ಪೆ ಮುಖ ಮಾಡಿತು....ಓಡಿ ಹೋಯಿತು...

**********************************************

ಮಳೆ ಬಂತು ಮಳೆ

ಕೊಡೆ ಹಿಡಿದು ನಡೆ

ಜಾರಿ ಬಿದ್ದರೊಮ್ಮೆ,

ಬಟ್ಟೆಯೆಲ್ಲಾ ಕೊಳೆ

ಬಾವಿಯಿಂದ ನೀರು ಸೇದಿ

ಬಟ್ಟೆಯೆಲ್ಲಾ ಒಗೆ..!

*************************************************

ಇವನೇ ನೋಡು ಅನ್ನದಾತ

ಹೊಲದಿ ದುಡಿದೇ ದುಡಿವನು

ನಾಡ ಜನರು ಬದುಕಲೆಂದು

ದವಸ ಧಾನ್ಯ ಬೆಳೆವನು


ಮಳೆಯ ಗುಡುಗು ಚಳಿಯ ನಡುಗು

ಬಿಸಿಲ ಬೇಗೆಯ ಸಹಿಸುತಾ

ಬೆವರು ಸುರಿಸಿ ಕಷ್ಟ ಸಹಿಸಿ

ಒಂದೇ ಸಮನೆ ದುಡಿಯುತಾ


ಗಟ್ಟಿ ದೇಹ ದೊಡ್ಡ ಮನಸು

ದೇವನಿಂದ ಪಡೆವನು

ಯೋಗಿಯಾಗಿ ತ್ಯಾಗಿಯಾಗಿ 

ಅನ್ನ ನೀಡುತಿರುವನು


ಎತ್ತು ಎರಡು ಅವನ ಜೋಡು

ಕೂಡಿ ದುಡಿವ ಗೆಳೆಯರು

ಹಿಗ್ಗು ಕುಗ್ಗು ಏನೇ ಬರಲಿ

ಹೊಂದಿಕೊಂಡು ನಡೆವರು.

***************************************************

ಓಲೆಯ ಹಂಚಲು ಹೊರಡುವೆ ನಾನು

ತೋರಲು ಆಗಸದಲಿ ಬಿಳಿ ಬಾನು

ಮನೆಯಲಿ ನೀವು ಬಿಸಿಲಲಿ ನಾನು

ಕಾಗದ ಬಂತು ಕಾಗದವು


ಓಲೆಯ ಕೊಡುವಧಿಕಾರಿಯು ನಾನು

ಆದರೂ ಅದರಲಿ ಬರೆದುದು ಏನು

ಎಂಬುದನರಿಯೆ ಬಲು ಸುಖಿ ನಾನು

ಕಾಗದ ಬಂತು ಕಾಗದವು
************************************

ಏರುತಿಹುದು ಹಾರುತಿಹುದು 
ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು 
ಬಾನಿನಗಲ ಪಟಪಟ

ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು
ಸತ್ಯ ಶಾಂತಿ ತ್ಯಾಗ ಮೂರ್ತಿ 
ಗಾಂಧಿ ಹಿಡಿದ ಚರಕವು

ಇಂತ ಧ್ವಜವು ನಮ್ಮ ಧ್ವಜವು 
ನೋಡು ಹಾರುತಿರುವುದು
ಧ್ವಜದ ಶಕ್ತಿ ನಮ್ಮ ಭಕ್ತಿ 
ನಾಡ ಸಿರಿಯ ಮೆರೆವುದು

ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ಣವಾಗಿದೆ
ನಮ್ಮ ನಾಡ ಗುಡಿಯ ಬಣ್ಣ 
ನೋಡಿರಣ್ಣ ಹೇಗಿದೆ

************************************************

ರೊಟ್ಟಿ ಅಂಗಡಿ ಕಿಟ್ಟಪ್ಪ

ನಂಗೊಂದು ರೊಟ್ಟಿ ತಟ್ಟಪ್ಪ

ಪುಟಾಣಿ ರೊಟ್ಟಿ ಕೆಂಪಗೆ ಸುಟ್ಟು

ಒಂಭತ್ತು ಕಾಸಿಗೆ ತಟ್ಟಪ್ಪ

ಬಿಟ್ಟು ಹೋಗೆನು ಕಿಟ್ಟಪ್ಪ



ರೊಟ್ಟಿ ಅಂಗಡಿ ಕಿಟ್ಟಪ್ಪ

ರೊಟ್ಟಿಯ ನೋಡಿ ತಟ್ಟಪ್ಪ

ರೊಟ್ಟಿಯ ಸುತ್ತು ಹಸಿ ಹಸಿ ಹಿಟ್ಟು

ರೊಟ್ಟಿಯ ಬೇರೆ ತಟ್ಟಪ್ಪ

ನನಗಿದು ಬೇಡ ಕಿಟ್ಟಪ್ಪ

ರೊಟ್ಟಿ ಅಂಗಡಿ ಕಿಟ್ಟಪ್ಪ

ನಂಗೊಂದು ರೊಟ್ಟಿ ತಟ್ಟಪ್ಪ


ರೊಟ್ಟಿ ಅಂಗಡಿ ಕಿಟ್ಟಪ್ಪ

ಬೇರೆ ರೊಟ್ಟಿಯ ತಟ್ಟಪ್ಪ

ಕೊಂಡರೆ ರೊಟ್ಟಿ ಸುಡಬೇಕಪ್ಪ


ಟೂ.. ಟೂ.... ಸಂಗ ಬಿಟ್ಟೆಪ್ಪಾ


ಟೂ ಟೂ ಸಂಗ ಬಿಟ್ಟೆಪ್ಪ

ಬಿಟ್ಟರೆ ಪುನಹಾ ಕಟ್ಟೆಪ್ಪಾ

***********************************************

ಬೊಂಬೆ ಪೀಪೀ...ಬಣ್ಣದ ತುತ್ತೂರಿ

ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡನು ಕಸ್ತೂರಿ

ಬಣ್ಣದ ತಗಡಿನ ತುತ್ತೂರಿ

ಕಾಸಿಗೆ ಕೊಂಡೆನು ನಾನೂರಿ


ಸರಿಗಮ ಪದನಿಸ ಊದಿದನು

ಸನಿದಮ ಮಗರಿಸ ಊದಿದನು

ತನಗೆ ತುತ್ತೂರಿ ಇದೆಯೆಂದ

ಬೇರಾರಿಗೂ ಅದು ಇಲ್ಲೆಂದ


ಕಸ್ತೂರಿ ನಡೆದನು ಬೀದಿಯಲಿ

ಜಂಭದ ಕೋಳಿಯ ರೀತಿಯಲಿ

ತುತ್ತೂರಿ ಊದುತ ಕೊಳದ ಬಳಿ

ನಡೆದನು ಕಸ್ತೂರಿ ಸಂಜೆಯಲಿ


ಜಾರಿತು ನೀರಿಗೆ ತುತ್ತೂರಿ

ಗಂಟಲು ಕಟ್ಟಿತು ನೀರೂರಿ

ಸರಿಗಮ ಊದಲು ನೋಡಿದನು

ಗಗ ಗಗ ಸದ್ದನು ಮಾಡಿದನು


ಬಣ್ಣವು ನೀರಿನ ಪಾಲಾಯ್ತು

ಬಣ್ಣದ ತುತ್ತೂರಿ ಬೋಳಾಯ್ತು

ಬಣ್ಣದ ತುತ್ತೂರಿ ಹಾಳಾಯ್ತು

ಜಂಭದ ಕೋಳಿಗೆ ಗೋಳಾಯ್ತು

************************************************

ಬಂದಿತು ರೈಲು 
ಬಿದ್ದಿತು ಕೈಮರ
ಹೊಡೆಯಿತು ಗಂಟೆ
ಊದಿತು ಸೀಟಿ
ಬೀಸಿತು ಬಾವುಟ 
ಹೊರಟಿತು ರೈಲು.

ಉರುಳಿತು ಚಕ್ರ
ಹಾಕಿತು ಸಿಳ್ಳು
ಉಗುಳಿತು ಧೂಮ, 
ದಾಟಿತು ಹೊಲಮನೆ
ಒಡಿತು ವೇಗದಿ
ಸೇರಿತು ಊರು.

*******************************************

ಬಾಳೆಯ ತೋಟದ ಪಕ್ಕದ ಕಾಡೊಳು ವಾಸಿಸುತ್ತಿದ್ದವು ಮಂಗಗಳು

ಮಂಗಗಳೆಲ್ಲವೂ ಒಟ್ಟಿಗೆ ಸೇರುತ ಒಂದುಪವಾಸವ ಮಾಡಿದವು


ಏನೂ ತಿನ್ನದೆ ಮಟಮಟ ನೋಡುತ ಇದ್ದವು ಮರದಲ್ಲಿ ಕುಳಿತಲ್ಲೇ

ನಾಳೆಗೆ ತಿಂಡಿಯ ಈಗಲೇ ಹುಡುಕುವ ಬನ್ನಿರಿ ಎಂದಿತು ಕಪಿಯೊಂದು 


ಹೌದಣ್ಣಾ ಎಂದೆನ್ನುತ ಎಲ್ಲವೂ ಬಾಳೆಯ ತೋಟಕೆ ಹಾರಿದವು 

ತೋಟದಿ ಬಾಳೆಯ ಹಣ್ಣನು ನೋಡಲು ಆಸೆಯು ಹೆಚ್ಚಿತು ನೀರೂರಿ


ಸುಲಿದೇ ಇಡುವ ಆಗದೆ ಎಂದಿತು ಆಸೆಯ ಮರಿಕಪಿಯೊಂದಾಗ 

ಹೌದೌದೆನ್ನುತ ಹಣ್ಣನು ಸುಲಿದವು ಕೈಯೊಳು ಹಿಡಿದು ಕುಳಿತಿರಲು


ಕೈಯಲ್ಲೇತಕೆ ಬಾಯೊಳಗಿಟ್ಟರೆ ಆಗದೇ ಎಂದಿತು ಇನ್ನೊಂದು

ಹಣ್ಣನು ಬಾಯಲಿ ಇಟ್ಟವು ಜಗಿದೇ ಇಡುವೆವು ಎಂದಿತು ಮತ್ತೊಂದು


ಜಗಿದೂ ಜಗಿದೂ ನುಂಗಿದವೆಲ್ಲಾ...ಆಗಲೇ ಮುಗಿಯಿತು ಉಪವಾಸ! 

******************************************************

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟಕ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು?


ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೊಂಡು
ಮೆರೆವ ಕಾಳಿಂಗನೆಂಬ ಗೊಲ್ಲನ ಸಿರಿಯ
ನಾನೆಂತು ಪೇಳ್ವೆನು?


ಗೊಲ್ಲದೊಡ್ದಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲು ಒಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ


ಕರುಗಳನ್ನು ನೆನೆನೆನೆದು ಹಸುಗಳು
ಕೊರಳ ಘಂಟೆ ಢಣಿರು ಢಣಿರೆನೆ
ಪರಿದು ಲಂಘಿಸಿ ಚಿಮ್ಮಿ ನೆಗೆಯುತ
ಮರಳಿ ಬಂದವು ದೊಡ್ಡಿಗೆ

ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು

ಉದಯಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚಿದುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲಗೌಡನು
ಬಳಸಿ ನಿಂದ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೇ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಕಾಮಧೇನು ನೀನು ಬಾರೆಂದು
ಪ್ರೇಮದಲಿ ಗೊಲ್ಲ ಕರೆದನು

ಗೊಲ್ಲ ಕರೆದ ಧ್ವನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೊಯುತಾ ಹುಲಿ
ಘುಡು ಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚದುರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನ್ನು ಕೊಡುವೆನೆನುತ
ಚೆನ್ನಾಗಿ ತಾ ಬರುತಿರೆ

ಇಂದೆನೆಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡ ಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳ ಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ.


ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕ್ಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು.


ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ.

ಅಮ್ಮ ನೀನು ಸಾಯಲೇಕೆ?
ನಮ್ಮ ತಬ್ಬಲಿ ಮಾಡಲೇಕೆ?
ಸುಮ್ಮನಿಲ್ಲೆಯೆ ನಿಲ್ಲೆನುತ
ಅಮ್ಮನಿಗೆ ಕರು ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪನಲ್ಲಿಗೆ
ಕಟ್ಟಕಡೆಗಿದು ಖಂಡಿತ.


ಆರ ಮೊಲೆಯನು ಕುಡಿಯಲಮ್ಮ
ಆರ ಸೇರಿ ಬದುಕಲಮ್ಮ
ಆರ ಬಳಿಯಲಿ ಮಲಗಲಮ್ಮಾ
ಆರು ನನಗೆ ಹಿತವರು?

ಅಮ್ಮಗಳಿರಾ ಅಕ್ಕಗಳಿರಾ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲೀಯನೀ ಕರುವನು


ಕಟ್ಟಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟವ್ಯಾಘ್ರನು ಹೊಂಚುತಿರುವನು
ನಟ್ಟನಡುವಿರು ಕಂದನೆ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆ ಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ-
ನುಂಡು ಸಂತಸದಿಂದಿರು


ಪುಣ್ಯಕೋಟಿಯ ಮಾತ ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು!


************************************************

ನನ್ನ ಸ್ಲೇಟು ಕರಿಯದು

ಅದರ ಪಟ್ಟಿ ಬಿಳಿಯದು

ಬರಿಯಲಿಕ್ಕೆ ಬರುವುದು

ಬಹಳ ಚಂದ ಇರುವುದು

ಅಪ್ಪ ದುಡ್ಡು ಕೊಟ್ಟನು

ನಾನು ಬಳಪ ತಂದೆನು

ಅ ಆ ಇ ಈ ಬರೆದೆನು

ಅಮ್ಮ ನ ಮುಂದೆ ಇಟ್ಟೆನು

ಅಮ್ಮ ನೋಡಿ ನಕ್ಕಳು

ತಿನ್ನಲು ತಿಂಡಿ ಕೊಟ್ಟಳು

ಕುಣಿದು ಕುಣಿದು ತಿಂದೆನು

ತಿರುಗಿ ಶಾಲೆಗೆ ಹೋದೆನು

ಕಲಿತು ಜಾಣನಾದೆನು! 

********************************************

ಗೇರ್ ಗೇರ್ ಮಂಗಣ್ಣ
ಕಡಲೆ ಕಾಯಿ ನೋಡಣ್ಣ
ಓಡುತ ಓಡುತ ನೋಡಣ್ಣ
ಲಾಗ ಗೀಗ ಹಾಕಣ್ಣ

ಕಡಲೆ ಕಾಯಿ ಬೇಕಣ್ಣ
ಕಾಸುಗೀಸು ಬೇಡಣ್ಣ
ನನ್ನೊಡನಾಟ ಆಡಣ್ಣ
ಕಡಲೆ ಕಾಯಿ ತಿನ್ನಣ್ಣ

ಮಕ್ಕಳ ಕಾಡಬೇಡಣ್ಣ
ಮನೆಯವರೆಗೂ ಬಾರಣ್ಣ
ಹಣ್ಣು ಗಿಣ್ಣು ಬೇಕಣ್ಣ
ಹಾಗಾದರೆ ಲಾಗ ಹಾಕಣ್ಣ.

**********************************

ಹತ್ತು ಒಂದು ಹನ್ನೊಂದು
ಮೆತ್ತನ ಕಡುಬು ಇನ್ನೊಂದು

ಹತ್ತೂ ಎರಡು ಹನ್ನೆರಡು
ಉತ್ತಮ ತುಪ್ಪಾ ಮೇಲ್ಹರಡು

ಹತ್ತೂ ಮೂರು ಹದಿಮೂರು
ನೆತ್ತಿಗೆ ಹತ್ತಲಿ ಸುರಿ ಸಾರು

ಹತ್ತೂ ನಾಲ್ಕು ಹದಿನಾಲ್ಕು
ಮೆತ್ತನ ಕಡುಬು ಇನ್ನೂಬೇಕು

ಹತ್ತೂ ಐದು ಹದಿನೈದು
ಹೊತ್ತಗಿಲ್ಲ ಹೊಡಿ ಇನ್ನೈದು

ಹತ್ತೂ ಆರು ಹದಿನಾರು
ಉತ್ತಮಳಮ್ಮ ಸರಿ ನಿನಗಾರು?

ಹತ್ತು ಏಳು ಹದಿನೇಳು
ಮತ್ತೂ ಬಂದರೆ ಹೊಡಿಯೇಳು

ಹತ್ತೂ ಎಂಟು ಹನಿನೆಂಟು
ಚಿತ್ತಕೆ ಬಂದರೆ ಇನ್ನೂ ಉಂಟು

ಹತ್ತೂ ಒಂಭತ್ತು ಹತ್ತೊಂಭತ್ತು
ಹೆತ್ತುಪ್ಪಣ್ಣಾ ಹೊಟ್ಟೆಯು ತುಂಬಿತು

ಹತ್ತೂ ಹತ್ತೂ ಇಪ್ಪತ್ತು
ಮಾಡಿದ ಕಡುಬು ತೀರಿತ್ತು.

************************************
ತಿರುಕನೊರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿರುತ್ತಲೊಂದು ಕನಸ ಕಂಡನೆಂತೆನೆ 
ಪುರದ ರಾಜ ಸತ್ತನವಗೆ
ವರಕುಮಾರರಿಲ್ಲದಿರಲು,
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು


ನಡೆದು ಯಾರ ಕೊರಳಿನಲ್ಲಿ
ತೊಡರಿಸುವದೊ ಅವರ ಪಟ್ಟ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡ ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು


ಪಟ್ಟವನ್ನು ಕಟ್ಟಿ ನೃಪರು
ಕೊಟ್ಟರವಗೆ ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ
ಭಟ್ಟನಿಗಳ ಕೂಡಿ ನಲ್ಲ
ನಿಷ್ಟಸುಖದೊಳಿರಲವಂಗೆ
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ


ಓಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿ, ಸುತರುಗಳಿಗೆ
ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ


ನೋಡಿ ಬನ್ನಿರೆನಲು ಜೀಯ
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ
ಗಾಢವಾಗೆ ಸಂಭ್ರಮಗಳು
ಮಾಡುತಿದ್ದ ಮದುವೆಗಳನು
ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ


ಧನದ ಮದವು ರಾಜ್ಯ ಮದವು
ತನುಜ ಮದವು ಯುವತಿಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದಂತೆಯಾಗೆ
ಕನಸ ಕಾಣತಿರ್ದ ಹೆದರಿ ಕಣ್ಣ ತೆರೆದನು.

********************************************

ಹಸಿದ ಹೊಟ್ಟೆಯಿಂದ ನಾಯಿ
ರೊಟ್ಟಿಗಾಗಿ ತಿರುಗಿತು
ಊರ ದಾಟಿ ಹಳ್ಳದಾಚೆ
ಹುಡುಕಲೆಂದು ಹೊರಟಿತು ||೧||

ಅಲ್ಲಿ ಹೊಲದ ಗುಡಿಸಲಲ್ಲಿ
ಬುತ್ತಿ ಗಂಟು ದೊರಕಿತು
ರೊಟ್ಟಿಯೊಂದನೆತ್ತಿಕೊಂಡು
ಊಬ್ಬಿನಿಂದ ಮರಳಿತು ||೨||

ಹಳ್ಳ ದಾಟುವಾಗ ನೋಟ
ನೀರಿನಲ್ಲಿ ಬಿದ್ದಿತು
ರೊಟ್ಟಿ ಹಿಡಿದ ಬೇರೆ ನಾಯಿ
ಕಂಡು ರೊಚ್ಚಿಗೆದ್ದಿತು ||೩||

ಅದನು ಕಿತ್ತುಕೊಳ್ಳಲೆಂದು
ಬಾಯಿ ತೆರೆದು ಬೊಗಳಿತು
ರೊಟ್ಟಿ ಜಾರಿ ಹಳ್ಳದಲ್ಲಿ
ಬಿದ್ದುಬಿಡಲು ಮರುಗಿತು ||೪||

ಆಸೆಯಿಂದ ತನ್ನದನ್ನು
ಕಳೆದುಕೊಂಡ ತಪ್ಪಿಗೆ
ಡೊಂಕುಬಾಲ ಎತ್ತಿಕೊಂಡ್ದು
ಓಡಿತಾಗ ತೆಪ್ಪಗೆ ||೫||

*******************************************

ಬಹಳ ಒಳ್ಳೇರು ನಮ್ಮಿಸ್ಸು
ಏನ್ ಹೇಳಿದ್ರು ಎಸ್ಸೆಸ್ಸು...
ನಗ್ತಾ ನಗ್ತಾ ಮಾತಾಡಿಸ್ತಾರೆ 
ಸ್ಕೂಲಿಗೆಲ್ಲಾ ಪೇಮಸ್ಸು...ಸ್ಕೂಲಿಗೆಲ್ಲಾ ಪೇಮಸ್ಸು...

ಆಟಕ್ಕೆ ಬಾ ಅಂತಾರೆ 
ಆಟದ ಸಾಮಾನ್ ಕೊಡ್ತಾರೆ
ಆಟದ್ ಜೊತೆ ಗೊತ್ತಿಲ್ದಂಗೆ.. ಪಾಟನೂ ಕಲಿಸ್ತಾರೆ...

ನಮ್ಮಿಸ್ಸಂತ ಮಿಸ್ ಇಲ್ಲ
ನಮ್ ಸ್ಕೂಲ್ ಅಂತ ಸ್ಕೂಲ್ ಇಲ್ಲಾ
ಅಮ್ಮನ್ನಾಗೆ ಅವರನ್ನ ಬಿಟ್ಬರೋಕೆ ಮನಸಿಲ್ಲಾ....

***********************************

ಬಸ್ ಬಂತು ಬಸ್

ಗೌರ್ನಮೆಂಟ್ ಬಸ್

ಕೆಂಪು ಬಿಳಿ ಬಣ್ಣಾ

ನೋಡು ಬಾರಣ್ಣಾ


ಆರು ಚಕ್ರ ಇರುವುದು

ಎರಡು ಲೈಟ್ ಉರಿವುದು

ನಾ ಕಂಡಕ್ಟರ್ ಆಗುವೆ

ರೈಟ್ ರೈಟ್ ಹೇಳುವೆ

ಸೀಟಿಯನ್ನು ಊದುವೆ! 

***************************************

ಗೋಡೆ ಮೇಲಿನ ಗಡಿಯಾರಕ್ಕೆ

ಯಾಕೋ ತುಂಬಾ ನಿದ್ದೆ

ಟಿಕ್ ಟಿಕ್ ಎಂದು ಹಾಡಲು ಮರೆತು

ಗೊರಕೆ ಹೊಡಿದದ್ದೇ


ಗೊರಕೆ ಹೊಡಿಯೋ ಗಡಿಯಾರಕ್ಕೆ

ಹೊಕ್ಕಿತೊಂದು ಜೇಡ

ಹೊರಗೆ ಬರಕ್ಕೆ ಆಗಲೇ ಇಲ್ಲಾ

ಅದರ ಫಜೀತಿ ಬೇಡ! 

***********************************

ಕರಡಿ ಬೆಟ್ಟಕೆ ಹೋಯಿತು

ಕರಡಿ ಬೆಟ್ಟಕೆ ಹೋಯಿತು

ಕರಡಿ ಬೆಟ್ಟಕೆ ಹೋಯಿತೂ

ನೋಟ ನೋಡಲು


ನೋಡಿತೇನದು ನೋಡಿತೇನದು

ಬೆಟ್ಟದ ಇನ್ನೊಂದು ಭಾಗಾ

ಬೆಟ್ಟದ ಇನ್ನೊಂದು ಭಾಗ

ಕರಡಿ ನೋಡಿತು 

ಹಲಸು ತಂದಿತು...ಜೇನ ಕಲಸಿತು

ಮರಿಗಳಿಗೆ ತಿನ್ನಿಸಿ

ತಾನು ತಿಂದು ತೇಗಿತು!

*****************************************

ಪೆನ್ಸಿಲ್ಲಣ್ಣನ ಮೊದಲನೆ ಶತ್ರು

ಅಳಿಸೋ ರಬ್ಬರ್ರು

ತಪ್ಪು ಬರೆದರೆ ಒಪ್ಪೋದಿಲ್ಲಾ 

ಎನೇ ಹೇಳಿದ್ರೂ


ಪೆನ್ಸಿಲ್ಲಣ್ಣನ ಎರಡನೆ ಶತ್ರು

ಹೆರೆಯೋ ಮೆಂಡರ್ರು

ಮೊಂಡಾಗಿರಲು ಬಿಡೋದೇ ಇಲ್ಲಾ

ಎಷ್ಟೇ ಬಡ್ಕೊಂಡ್ರೂ!

**********************************

ಘಂಟೆಯ ನೆಂಟನೆ ಓ ಗಡಿಯಾರ

ಬೆಳ್ಳಿಯ ಬಣ್ಣದ ಗೋಳಾಕಾರ

ಹೊತ್ತನು ತಿಳಿಯಲು ನೀನಾಧಾರ

ಟಿಕ್ ಟಿಕ್ ಗೆಳೆಯಾ

ಟಿಕ್ ಟಿಕ್ ಟಿಕ್


ಹಗಲೂ ಇರಳೂ ಒಂದೇ ಬಾಳು

ನೀನಾವಾಗಲೂ ದುಡಿಯುವ ಆಳು

ಕಿವಿಯನು ಹಿಂಡಲು ನಿನಗದೇ ಕೂಳು

ಟಿಕ್ ಟಿಕ್ ಗೆಳೆಯಾ

ಟಿಕ್ ಟಿಕ್ ಟಿಕ್ 

*********************************


ಕಾಮನ ಬಿಲ್ಲು ಕಮಾನು ಕಟ್ಟಿದೆ

ಮೋಡದ ನಾಡಿನ ಬಾಗಿಲಿಗೆ

ಬಣ್ಣಗಳೇಳನು ತೋರಣ ಮಾಡಿದೆ

ಕಂದನ ಕಣ್ಣಿಗೆ ಚಂದನ ಮಾಡಿದೆ

ಹಣ್ಣಿನ ಹೂವಿನ ಹೊನ್ನನು ಕೂಡಿದೆ

ಮಕ್ಕಳಿಗೋಕುಳಿ ಆಟವನಾಡಿದೆ

ತೆಂಗಿನ ತೋಟದ ಬುಡದಲಿ ಮೂಡಿದೆ

ಭೂಮಿಗೆ ಬಾನಿಗೆ ಸೇತುವೆ ಮಾಡಿದೆ

***********************************

ಹತ್ತು ಹತ್ತು ಇಪ್ಪತ್ತು

ತೋಟಕೆ ಹೋದನು ಸಂಪತ್ತು

ಇಪ್ಪತ್ತು ಹತ್ತು ಮೂವತ್ತು

ಕೈಯಲಿ ಒಂದು ಕಲ್ಲಿತ್ತು

ಮೂವತ್ತು ಹತ್ತು ನಲವತ್ತು

ಎದುರಿಗೆ ಮಾವಿನ ಮರವಿತ್ತು

ನಲವತ್ತು ಹತ್ತು ಐವತ್ತು

ಮರದಲಿ ಕಾಯಿಯು ತುಂಬಿತ್ತು

ಐವತ್ತು ಹತ್ತು ಅರವತ್ತು

ಕಲ್ಲನು ಬೀರಿದ ಸಂಪತ್ತು

ಅರವತ್ತು ಹತ್ತು ಎಪ್ಪತ್ತು

ಕಾಯಿಯು ತಪತಪ ಉದುರಿತ್ತು

ಎಪ್ಪತ್ತು ಹತ್ತು ಎಂಭತ್ತು

ಮಾಲಿಯ ಕಂಡನು ಸಂಪತ್ತು

ಎಂಭತ್ತು ಹತ್ತು ತೊಂಭತ್ತು

ಕಾಲುಗಳೆರಡು ನಡುಗಿತ್ತು

ತೊಂಭತ್ತು ಹತ್ತು ನೂರು

ಮನೆಯನು ತಲುಪಿದ ಸಂಪತ್ತು
*********************************

ನಾನು ಒಬ್ಬ ಮಂಗಣ್ಣ

ನಂಗೆ ಉಂಟು ಬಾಲ

ಹಾಕುವೆ ನಾನು ಲಾಗ

ನಾನು ಒಬ್ಬ ಮಂಗಣ್ಣ

ಹಣ್ಣು ಗಿಣ್ಣು ತಿನ್ನುವೆ

ಸಿಪ್ಪೆ ಗಿಪ್ಪೆ ಎಸೆಯುವೆ

ಡಾನ್ಸ್ ಗೀನ್ಸ್ ಮಾಡುವೆ

ಟ್ವಿಸ್ಟ್ ಗಿಸ್ಟ್ ಮಾಡುವೆ

ಕುಂಟು ಕಾಲಲಿ ನಡೆಯುವೆ

ನಾಲ್ಕು ಕಾಲಲಿ ನಡೆಯುವೆ

ಲಾಗ ಗೀಗ ಹಾಕುವೆ 

ನಾನು ಒಬ್ಬ ಮಂಗಣ್ಣ
********************************

: ಬೊಮ್ಮನಹಳ್ಳಿಯ ಕಿಂದರಿಜೋಗಿ :


ತುಂಗಾ ತೀರದ ಬಲಗಡೆಯಲ್ಲಿ ಹಿಂದಲ್ಲಿದ್ದುದು ಬೊಮ್ಮನ ಹಳ್ಳಿ
ಅಲ್ಲೇನಿಲಿಗಳ ಕಾಟವೆ ಕಾಟ ಅಲ್ಲಿನ ಜನಗಳಿಗತಿಗೋಳಾಟ
ಇಲಿಗಳು ಬಡಿದವು ನಾಯಿಗಳ ಇಲಿಗಳು ಕಡಿದವು ಬೆಕ್ಕುಗಳ
ಕೆಲವನು ಕೊಂದವು ಕೆಲವನು ತಿಂದವು ಕೆಲವನು ಬೆದರಿಸಿ ಹಿಂಬಾಲಿಸಿದವು
ಅಲ್ಲಿಯ ಮೂಶಿಕ ನಿಕರವು ಸೊಕ್ಕಿ ಎಲ್ಲರ ಮೇಲೆಯು ಕೈಬಾಯಿಕ್ಕಿ
ಹೆದರಿಕೆಯಿಲ್ಲದೆ ಬೆದರಿಕೆಯಿಲ್ಲದೆ ಕುಣಿದವು ಯಾರನು ಲೆಕ್ಕಿಸದೆ
ಹಾಲಿನ ಮಡಕೆಯನೊಡೆದವು ಕೆಲವು ಅನ್ನದ ಗಡಿಗೆಯ ಪುಡಿ ಮಾಡಿದವು
ಬಡಿಸುವ ಅಡುಗೆಯ ಭಟ್ಟನ ತಡೆದು ಕೈಯಲ್ಲಿರುವಾ ಸಟ್ಟುಗವ
ಭೀತಿಯೆ ಇಲ್ಲದೆ ನೆಕ್ಕಿದವು ಈ ಪರಿ ತಿನ್ನುತ ಸೊಕ್ಕಿದವು
ಧಾನ್ಯವನೆಲ್ಲವ ಬಿಕ್ಕಿದವು
ಟೋಪಿಯ ಒಳಗಡೆ ಗೂಡನು ಮಾಡಿ ಹೆತ್ತವು ಮರಿಗಳನು
ಪೇಟದ ಒಳಗಡೆ ಆಟವನಾಡಿ ಕಿತ್ತವು ಸರಿಗೆಯನು
ಗೋಡೆಗೆ ತಗುಲಿಸಿದಂಗಿಯ ಜೇಬಿನ ದಿನವೂ ಜಪ್ತಿಯ ಮಾಡಿದವು
ಮಲಗಿರೆ ಹಾಸಿಗೆಯನ್ನೇ ಹರಿದವು ಕೇಶಛೇದನ ಮಾಡೀದವು
ಬೆಣ್ಣೆಯ ಕದ್ದವು ಬೆಲ್ಲವ ಮೆದ್ದವು ಎಣ್ಣೆಗೆ ಬಿದ್ದವು ದಿನದಿನವು
ಗೌಡರು ಮಾತಾಡುತ ಕುಳಿತಲ್ಲಿ ಬಹಳ ಗಲಾಟೆಯ ಮಾಡಿದವು
ಗರತಿಯರಾಡುವ ಹರಟೆಗೆ ತುಂಬಾ ತೊಂದರೆಯಿತ್ತು ಗಿಜಿಬಿಜಿ ಮಾಡಿ
ಊರಿನ ಮಕ್ಕಳ ಕೈಯಲ್ಲಿದ್ದಾ ತಿಂಡಿಯ ಕಸಿದವು ಧೈರ್ಯದಲಿ

ಇಲಿಗಳ ಕೊಲ್ಲಲು ಊರಿನ ಜನರು ತುಂಬಾ ಯತ್ನವ ಮಾಡಿದರು
ಕಡಿದರೆ ಮುರಿದುವು ಕತ್ತಿಗಳೆಲ್ಲ ಹೋಡೆದರೆ ಮಡಿದವು ಕೋಲುಗಳೆಲ್ಲ
ಇಲಿಗಳ ಬೇಟೆಯನಾಡುತಲಿರಲು ಮುರಿದವು ತಿಮ್ಮನ ಕಾಲುಗಳು
ಭೃಂಗಾಮಲಕದ ತೈಲವ ಹಚ್ಚಿದ ಶೇಶಕ್ಕನ ನುಣ್ಣನೆ ಫಣಿವೇಣಿ
ಬೆಳಗಾಗೇಳುತ ಕನ್ನದಿ ನೋಡೆ ಇಲಿಗಳಿಗಾಗಿತ್ತೂಟದ ಫೇಣಿ
ನುಗ್ಗುತ ಕೊಟ್ಟಿಗೆಗಿರುಳಿನ ಹೊತ್ತು ಉಂಡವು ತಿಂದವು ದನಗಳ ಕೆಚ್ಚಲು
ಹರಿದವು ಕರುಗಳ ಬಾಲಗಳ
ಸಿದ್ದೋಜೈಗಳು ಶಾಲೆಗೆ ಹೋಗಿ ಪಾಟವ ಬೊಧಿಸುತಿದ್ದಾಗ
ಅಂಗಿಯ ಜೇಬಿಂ ಹೆಳವಿಲಿಯೊಂದು ಛಂಗನೆ ನೆಗೆಯಿತು ತೂತನು ಮಾಡಿ
ಲೇವಡಿಯೆಬ್ಬಿಸೆ ಬಾಲಕರೆಲ್ಲ ಗುರುಗಳಿಗಾಯಿತು ಬಲುಗೇಲಿ
ಬೇಟೆಯನಾಡಲು ಅಡುಗೆಯ ಮನೆಯಲಿ ಬಿದ್ದಳು ಬಳೆಯೊಡೆದಚ್ಚಮ್ಮ
ಮೂಶಿಕ ಯಾಗವ ಮಾಡಿದರು ದೇವರ ಪೂಜೆಯ ಮಾಡಿದರು
ಹರಕೆಯ ಹೊತ್ತರು ಕಾಣಿಕೆ ತೆತ್ತೆರು ಮಂತ್ರವ ದಿನದಿನ ಹೇಳಿದರು
ನಿಶ್ಫಲವಾದವು ಮಂತ್ರಗಳೆಲ್ಲ ಬಾಯಿ ಬಾಯಿ ಕಳೆದರು ಶಾಸ್ತ್ರಿಗಳೆಲ್ಲ
ಕಣ್ ಕಣ್ ಬಿಟ್ಟರು ಪಂಡಿತರೆಲ್ಲ ಕಂಬನಿಗರೆದರು ಜನರೆಲ್ಲ

ಮುಂದಿನ ಮಾರ್ಗವ ಕಾಣದೆ ಜನರು ಗೌಡನ ಬಳಿ ಹೋದರು ಗುಂಪಾಗಿ
ಗೌಡನು ಜನರನು ಕುರಿತಿಂತೆಂದನು
ಇಲಿಗಳ ಕೊಲ್ಲಲು ದಾರಿಯನಾರು ತೋರಿಸಿಕೊಡುವಿರೊ ಅವರಿಗೆ ಆರು
ಸಾವಿರ ನಾಣ್ಯಗಳೀಯುವೆ ನಾನು ತಿಳಿದವರಿದ್ದರೆ ಬನ್ನಿರಿಯೇನು ?

ಏನಿದು ಗುಜುಗುಜು ಗುಂಪಿನಲಿ ? ನೋಡಿದರೇನಾಶ್ಚರ್ಯವನು
ಆಲಿಸಿ ದೂರದ ಕಿಂದಿರಿನಾದ ಬರುವನು ಯಾರೋ ಕಿಂದರಿ ಜೋಗಿ
ಹತ್ತಿರ ಹತ್ತಿರಕವನೈತಂದ ಬಂದಿತು ಜನರಿಗೆ ಬಲು ಆನಂದ
ನೋಡಿರಿ ನೋಡಿರಿ ಕಿಂದರಿ ಜೋಗಿ ನೋಡಿದರೆಲ್ಲರು ಬೆರಗಾಗಿ
ಬಂದನು ಬಂದನು ಕಿಂದರಿ ಜೋಗಿ ಕೆದರಿದ ಕೂದಲ ಗಡ್ಡದ ಜೋಗಿ
ನಾನಾ ಬಣ್ಣದ ಬಟ್ಟೆಯ ಜೋಗಿ ಕೈಯಲಿ ಕಿಂದರಿ ಹಿಡಿದಾ ಜೋಗಿ
ಜೋಗಿಯು ಹತ್ತಿದ ಗೌಡನ ಕಟ್ಟೆಯ ಗೌಡನ ಹೃದಯವು ಬಾಯಿಗೆ ಬಂದಿತು
ಗಡಗಡ ನಡುಗಿದನು
ತೊದಲುತ ಬೆದರುತ ಕಂಪಿತ ಕಂಠದಿ ನೀನಾರೆಂದನು ಜೋಗಿಯ ಕುರಿತು
ಅದಕಾ ಜೋಗಿಯು ಇಂತೆಂದ ಕೇಳಿದರೆಲ್ಲರು ಬಾಯಿಬಿಟ್ಟು
ಹಿಮಗಿರಿಯಲ್ಲಿಹ ಜೋಗಿಯು ನಾನು ಪರಮೇಶ್ವರನಿಗೆ ಗೆಳೆಯನು ನಾನು
ನಿಮ್ಮೀ ಗೋಳನು ಕೇಳಿದ ಶಿವನು ನನ್ನನ್ನಿಲ್ಲಿಗೆ ಕಳುಹಿದನು
ಇಲಿಗಳನೆಲ್ಲಾ ಕೊಂದರೆ ಆರು ಸಾವಿರ ನಾಣ್ಯಗಳೀಯುವೆಯೇನು ?

ಉಬ್ಬಿತು ಉಕ್ಕಿತು ಗೌಡನ ಸಂತಸ ಶಹಭಾಸೆಂದರು ಜನರೆಲ್ಲ
ಗೌಡನು ಜೋಗಿಯ ಕುರಿತಿಂತೆಂದನು ಜನರದನೆಲ್ಲಾ ಕೇಳಿದರು
ಬೇಕಾದುದ ನಾ ಕೊಡುವೆನು ಜೋಗಿ ಆರೇಕಿನ್ನೆರಡಾದರು ಕೊಡುವೆನು
ಬೇಕಾದುದನೆಲ್ಲವ ನೀ ಕೇಳು ಊರೇ ನಿನ್ನದು ನಾ ನಿನ್ನಾಳು

ಮರು ಮಾತಾಡದೆ ಕಿಂದರಿ ಜೋಗಿ ಕಟ್ಟೆಯನಿಳಿದನು ಬೀದಿಗೆ ಹೋಗಿ
ಗಡ್ಡವ ನೀವುತ ಸುತ್ತಲು ನೋಡಿ ಮಂತ್ರವ ಬಾಯಲಿ ಮಣಮಣ ಹಾಡಿ
ಕಿಂದರಿ ಬಾರಿಸತೊಡಗಿದನು ಜಗವನೆ ಮೋಹಿಸಿತಾ ನಾದ !
ಏನಿದು ? ಏನಿದು ಗಜಿಬಿಜಿಯೆಲ್ಲಿ ? ಊರನೆ ಮುಳುಗಿಪ ನಾದವಿದೆಲ್ಲಿ ?
ಇಲಿಗಳೂ ! ಇಲಿಗಳೂ ! ಇಲಿಗಳ ಹಿಂಡು ಬಳಬಳ ಹರಿದವು ಇಲಿಗಳ ದಂಡು
ಅನ್ನದ ಮಡಕೆಯನಗಲಿದವು ಟೋಪಿಯ ಗೂಡನು ತ್ಯಜಿಸಿದವು
ಬಂದವು ಅಂಗಿಯ ಜೇಬನು ಬಿಟ್ಟು ಮಕ್ಕಳ ಕಾಲಿನ ಚೀಲವ ಬಿಟ್ಟು
ಹಾರುತ ಬಂದವು ಓಡುತ ಬಂದವು ನೆಗೆಯುತ ಬಂದವು ಕುಣಿಯುತ ಬಂದವು
ಜೋಗಿಯು ಬಾರಿಸೆ ಕಿಂದರಿಯ ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ ಎಲ್ಲಾ ಬಂದವು ಓಡೋಡಿ
ಜೋಗಿಯು ಬಾರಿಸೆ ಕಿಂದರಿಯ ! ಬಂದವು ನಾನಾ ಬಣ್ಣದ ಇಲಿಗಳು
ಕೆಂಪಿನ ಇಲಿಗಳು, ಹಳದಿಯ ಇಲಿಗಳು, ಬೆಳ್ಳಿಲಿ, ಕರಿಯಿಲಿ, ಗಿರಿಯಿಲಿ, ಹೊಲದಿಲಿ,
ಕುಂಕುಮ ರಾಗದ, ಚಂದನ ರಾಗದ, ಹಸುರಿನ ಬಣ್ಣದ, ಪಚ್ಚೆಯ ವರ್ಣದ,
ಸಂಜೆಯ ರಾಗದ, ಗಗನದ ರಾಗದ ನಾನಾ ವರ್ಣದ ಇಲಿಗಳು ಬಂದವು
ಕುಣಿಯುತ ನಲಿಯುತ ಸಂತಸದಿ ಜೋಗಿಯು ಬಾರಿಸೆ ಕಿಂದರಿಯ
ನೋಡಿರಿ ! ಕಾಣಿರಿ ! ಬರುತಿಹವಿನ್ನೂ ಅಟ್ಟದ ಮೇಲಿಂ ಬರುವುವು ಕೆಲವು,
ಕಣಜದ ಕಡೆಯಿಂ ಬರುವುವು ಹಲವು, ಓಹೋ ! ಬಂದವು ಹಿಂಡಿಂಡಾಗಿ !
ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ ಚೀ ಪೀ ಎನ್ನುತ ಕೂಗುತಲೋಡಿ
ಗಹಗಹಿಸುತ ನೆರೆ ನೆರೆನಲಿದಾಡಿ ಬಂದಿತು ಮೂಶಿಕ ಸಂಕುಲವು
ಜೋಗಿಯು ಬಾರಿಸೆ ಕಿಂದರಿ ನಾದ !

ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಹೊರಟನು ತುಂಗಾ ನದಿಯೆಡೆಗಾಗಿ
ಕಿಂದರಿ ನಾದವು ಗಗನಕ್ಕೇರಿತು ಇಲಿಗಳನೆಲ್ಲಾ ಮನಮೋಹಿಸಿತು
ಕಿಂದರಿ ಜೋಗಿಯ ಹಿಂಬಾಲಿಸಿದರು ಜನಗಳು ನೋಡಲು ಕೌತುಕವ
ಜೋಗಿಯು ನಡೆದನು, ಇಲಿಗಳು ನಡೆದವು ಸೇರಿದರೆಲ್ಲರು ನದಿಯೆಡೆಯ
ಹೊಳೆಯಾ ಮರಳಿನ ಗುಡ್ಡೆಯ ತುಂಬಾ ನೋಡಿದರೆಲ್ಲೆಲ್ಲಿಯು ಇಲಿ-ಇಲಿ ಗುಂಪೆ !
ಉಸಿರಾಡದೆ ನಿಂತರು ಜನರೆಲ್ಲಾ ಮುಂದೇನಾಗುವುದೆಂದಲ್ಲಿ
ದಿವಿಜರು ಕವಿದರು ಗಗನದಲಿ ಹೂಮಳೆ ಕರೆದರು ಹರುಶದಲಿ
ದುಂದುಭಿ ನಾದವ ಮಾಡಿದರು ಕಾಣದ ಬೆರಗನು ನೋಡಿದರು
ಸುತ್ತಲು ನೋಡಿಮ್ ಕಿಂದರಿ ಜೋಗಿ ನಡೆದನು ಹೊಳೆಯ ನೀರಿನ ಮೇಲೆ
ಸೇರಿದ ಜನರೆಲ್ಲರು ಬೆರಗಾಗಿ ಜಯಜಯ ಜೋಗಿ ಎಂದರು ಕೂಗಿ
ಇಲಿಗಳು ಒಂದರ ಮೇಲೊಂದು ಹಿಂಬಾಲಿಸಿದವು ಜೋಗಿಯನು
ಬುಳುಬುಳು ನೀರೊಳು ಮುಳುಗಿದವೆಲ್ಲಾ ಹೆಣವಾಗಲ್ಲಿಯೆ ತೇಲಿದವು
ಕಿಂದರಿ ಜೋಗಿಯು ಹಿಂದಕೆ ಬಂದು ಗೌಡನೆ ನಾಣ್ಯಗಳನು ಕೊಡು ಎಂದ
ಗೌಡನು ನೋಡಿದ ಬೆರಗಾಗಿ ! ಸಾವಿರ ಆರೂ ಎಂದನು ಜೋಗಿ !
ಗೌಡನು ನಿಂತನು ತಲೆತೂಗಿ ! ಕಿಂದರಿ ಜೋಗಿಯೆ ಹೇಳುವೆ ಕೇಳು
ಸಾವಿರ ಆರನು ನಾ ಕೊಡಲಾರೆನು ನೀ ಮಾಡಿದ ಕೆಲಸವು ಹೆಚ್ಚಲ್ಲ
ಸುಮ್ಮನೆ ಕಿಂದರಿ ಬಾರಿಸಿದೆ ಇಲಿಗಳ ಹೊತ್ತೆಯ ನೀನೇನು ?
ಅವುಗಳು ತಮ್ಮಷ್ಟಕೆ ತಾವೇ ಬಿದ್ದವು ಹೊಳೆಯಲಿ ಮುಳುಗಿದವು
ಕೊಡುವೆ ನೀ ಪಟ್ಟಿಹ ಶ್ರಮಕಾಗಿ ಕಾಸೈದಾರನು ಕೊಡುವೆನು ಜೋಗಿ
ಪುರಿಗಡಲೆಯನು ಕೊಂಡುಕೊ ಹೋಗಿ !
ಗೌಡನು ಈ ಪರಿ ನುಡಿಯಲು ಜೋಗಿಯು ಕಂಗಳ ಕೆರಳಿಸುತಿನ್ತೆಂದ
ಆಡಿದ ಭಾಶೆಯ ತಪ್ಪುವೆಯ ? ಸಾವಿರ ಆರನು ಕೊಡದಿರೆ ನೀನು
ಮತ್ತೀ ಕಿಂದರಿ ಬಾರಿಸುವೆ ! ನಿಮ್ಮೀ ಹಳ್ಳಿಯನಾರಿಸುವೆ !
ಸಾವಿರವಾರನು ಕೊಡುವವರಾರು ಅಪ್ಪನ ಗಂಟೇ ? ಹೊಗೋ ಜೋಗಿ
ನೀ ಮಾಡುವುದೇನನು ನೋಡುವೆನು ಮರುಮಾತಾಡದೆ ತೊಲಗಿಲ್ಲಿಂದ !
ಹೆಚ್ಚಿಗೆ ಮಾತೇನಾದರು ನೀನಾಡಿದರೆ ಕಿಂದರಿಯೊಡೆಸುವೆ ಗಡ್ಡವ ಸುಡಿಸುವೆ
ನಿನ್ನೀ ತಲೆಯನು ಬೋಳಿಸುವೆ ಕಿಂದರಿ ತಂತಿಯು ಹರಿಯುವವರೆಗೂ
ಬಾರಿಸು ! ಬೇಡೆಂದವರಾರು ? ಬಲ್ಲೆಯ ನಾನಾರೆಂಬುದನು ?
ಊರ ಪಟೇಲ ಹಳ್ಳಿಗೆ ಗೌಡ ! ನಡೆನಡೆ ಮರುಮಾತಾಡದಿರು

ಗೌಡನ ನುಡಿಯನು ಕೇಳಿದ ಜೋಗಿ ಕಿಂದರಿ ಬಾರಿಸತೊಡಗಿದನು
ನಾದವು ಉಬ್ಬಿತು ಊರೊಳಗೆಲ್ಲ ಕರೆಯಿತು ಊರಿನ ಹುಡುಗರನೆಲ್ಲ
ಓಡುತ ಬಂದರು ಬಾಲಕರು ಕೇಳದೆ ಹಿರಿಯರ ಮಾತುಗಳ
ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಕಿಂದರಿ ಬಾರಿಸಿದನು ಇಂಪಾಗಿ
ಟಿಂಗ್ ಟಿಂಗ್ ಟಿಂಗ್ ಟಿಂಗ್ ನಾದವ ಕೇಳಿ ಚಂಗ್ ಚಂಗ್ ನೆಗೆದರು ಬಾಲಕರಾದಿ
ಕಿಂದರಿ ಜೋಗಿಯು ಹೊರಟನು ಮುಂದೆ ಬಾಲಕರೆಲ್ಲರು ಹರಿದರು ಹಿಂದೆ
ಊರಿನ ಜನರೆಲ್ಲರು ಭಯದಿಂದ ಎಂದರು ಮಕ್ಕಳ ಗೌಡನೆ ಕೊಂದ
ಹಾಳಾದೆವು ಗೌಡನ ದೆಸೆಯಿಂದ ಗೌಡನು ಕೂಗಿದ ಹೆದರಿಕೆಯಿಂದ
ಜೋಗಿ, ಜೋಗಿ, ಹಿಂದಿರುಗೆಂದ ಕಿಂದರಿ ಜೋಗಿಯು ನಡೆದನು
ಮುಂದೆಮಕ್ಕಳು ಓಡುತ ಹೋದರು ಹಿಂದೆ
ಕುಂಟರು ಭರದಿಂದೋಡಿದರು ಕುರುಡರು ನೋಟವ ನೋಡಿದರು
ಮೂಗರು ಸವಿ ಮಾತಾಡಿದರು ಕಿವುಡರು ನಾದವ ಕೇಳಿದರು
ಜನರೆಲ್ಲಾ ಗೋಳಾಡಿದರು ಬೊಮ್ಮನ ಹಳ್ಳಿಯ ಕಿಂದರಿ ಜೋಗಿ
ಮಕ್ಕಳ ಹೊಳೆಯೊಳಗಿಳಿಸುವನೆಂದು ಓಡಿದರೆಲ್ಲರು ಜೋಗಿಯ ಹಿಂದೆ
ಬೆಟ್ಟದ ಬುಡವನು ಸೇರಿದ ಜೋಗಿ ನಿಲ್ಲುವನೆಂದೆಲ್ಲಾ ಬಯಸಿದರು

ಏನಿದು ನಿಂತರು ಜನರೆಲ್ಲ ? ಅಯ್ಯೋ ಮಕ್ಕಳೆ ಎಂದೆನುತ !
ಜೋಗಿಯು ಬಾರಿಸೆ ಕಿಂದರಿಯ ಬಂಡೆಯು ದವಡೆಯನಾಕಳಿಸುತ್ತ
ಬಾಯನು ತೆರೆಯಿತು ಆ ಗಿರಿಯ ! ಜೋಗಿಯು ನುಗ್ಗಿದನದರಲ್ಲಿ
ಹಿಂದೆಯೆ ಹೋದರು ಬಾಲಕರು ! ಬೆಟ್ಟವು ಹಾಕಿತು ಬಾಗಿಲ ಬೇಗ
ಹಿಂದಕ್ಕುಳಿದವನೊಬ್ಬನೆ ಕುಂಟ ಅಲ್ಲಿಗೆ ಬಂದರು ಜನರೋಡಿ
ಕುಂಟನ ಕಂಡರು ಒಂಟಿಯಲಿ ಕುಂಟನು ಉಳಿದವರೆಲ್ಲೆಂದು
ಕೇಳಲು ಬೆಟ್ಟವ ತೋರಿದನು ಕಂಬನಿಗರೆದರು ಗೋಳಾಡಿದರು
ಉಳಿದಾ ಕುಂಟನು ಅಳುತಿಂತೆಂದ
ಅಯ್ಯೋ ಹೋಯಿತೆ ಆ ನಾಕ ! ಅಯ್ಯೋ ಬಂದಿತೆ ಈ ಲೋಕ !

ಓದಿ ಆನಂದಿಸಿ

🙏🙏 ಸಂಗ್ರಹ ಕೆ. ಜಿ
. ಘಾಟೆ🙏🙏

Friday 25 December 2020

ಅಪ್ಪ ನೀನೆಷ್ಟು ಅದ್ಭುತ

‘ಚಿತ್ರ.ಕವನ ಆರ್ ಮಂಡಗಳಲೆ

ಪ್ರೇರಣೆಯ ಮಣಿ’ ಅಂಕಣ

                    ಮಕ್ಕಳ ಕಥೆ

      ಅಪ್ಪಾ! ನೀನೆಷ್ಟು ಅದ್ಭುತ,,, !!!!

                                     :-ವೀರೇಶ ಮಾಶೆಟ್ಟಿ

                     ಸುತ್ತಲೂ ಹಚ್ಚಹಸಿರಿನಿಂದ ಕೂಡಿರುವ ಕಾನನದ ಐಸಿರಿ. ಅದರ ಮಧ್ಯದಲ್ಲಿ ವಿರಳ ಸಂಖ್ಯೆಯ ಜನ ವಾಸಿಸುವ ಮನೆಗಳು. ಆ ಮನೆಗಳು ಒಂದಕ್ಕೊಂದು ಕೂಗು ಕೇಳಸದ ಅಂತರದಲ್ಲಿದ್ದವು. ಇಂತಹ ಚಿಕ್ಕ ಚಿಕ್ಕ ಮನೆಗಳ ಸಮೂಹದಲ್ಲಿ ಸುಬ್ರಹ್ಮಣ್ಯ ಹಾಗೂ ಅವನ ಹೆಂಡತಿ ತಮ್ಮೆರಡು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದರು. ಸುಬ್ರಹ್ಮಣ್ಯ  ಉದರ  ಉಪಜೀವನಕ್ಕಾಗಿ ಕೂಲಿ ಕೆಲಸದ ಮೇಲೆ ಅವಲಂಬಿತನಾಗಿದ್ದ. ಪ್ರತಿದಿನ ಇನ್ನೊಬ್ಬರ ಹೊಲಕ್ಕೆ ಕೆಲಸಕ್ಕೆ ಹೋಗಿ ದುಡಿದು ಬರುವಾಗ ಕೈಯಲ್ಲಿ ಮಕ್ಕಳಿಗೆ ಹಣ್ಣು-ಹಂಪಲಗಳನ್ನು ತರುತ್ತಿದ್ದ. ಮಕ್ಕಳು ತಂದೆಯ ಉತ್ತಮ ಸಂಸ್ಕಾರ ಹಾಗೂ ತಾಯಿಯ ಶ್ರದ್ಧೆ ಮಕ್ಕಳಲ್ಲಿ ಅನುಕರಣೆಗೆ ಪೂರಕವಾಗಿದ್ದವು. ತಂದೆಯ ಅವಿರತ ದುಡಿಮೆ ಕಂಡು ಮಗನಿಗೂ “ನಾನು ಏನಾದರೂ ಕುಟುಂಬಕ್ಕೆ ಸಹಾಯ ಮಾಡಬೇಕೆಂದು” ಆಸೆ ಚಿಗುರಿತು. ಮಕ್ಕಳು ದಿನನಿತ್ಯ ಶಾಲೆಗೆ ಹೋಗುವುದರೊಂದಿಗೆ ಕಲಿಕೆಯಲ್ಲಿಯೂ ಚುರುಕಾಗಿದ್ದವು. ಸುಬ್ರಹ್ಮಣ್ಯನ ಮಗ ಕಲ್ಮೇಶನು ಮತ್ತೊಬ್ಬರ ಹೊಲಗಳಿಗೆ ಹೋಗಿ ಹೊಲದ ಬದಿಯಲ್ಲಿ ಕಸವಾಗಿ ಬೆಳೆದಿರುವ ‘ಹಾತರಕಿ,ಕಿರಿಸಾಲೆ’ ಹಾಗೂ ಇನ್ನೀತರ ಪಲ್ಲೆಗಳ ಸಸಿಗಳನ್ನು ಕಿತ್ತುಕೊಂಡು ಮನೆಗೆ ಬಂದು ‘ಸೂಡು’ಗಳನ್ನು ಮಾಡಿ ನೆರೆಯ ಪಟ್ಟಣಕ್ಕೆ ಹೋಗಿ ಮಾರಿಕೊಂಡು ಬರುತ್ತಿದ್ದ. ಬಂದ ಅಲ್ಪ ಹಣವನ್ನು ತಾಯಿಯ ಹತ್ತಿರ ಕೊಡುತ್ತಿದ್ದ. ಕೆಲವೇ ಕ್ಷಣಗಳಲ್ಲಿ ಸ್ನಾನ ಮುಗಿಸಿ,ದೇವರಿಗೆ ನಮಸ್ಕರಿಸಿ ಮತ್ತೆ ಶಾಲೆಗೆ  ಬರುತ್ತಿದ್ದ. ಶಾಲೆಯಲ್ಲಿಯೂ ಗೆಳೆಯರೊಂದಿಗೆ  ಸ್ನೇಹದಿಂದ, ಗುರುಗಳೊಂದಿಗೆ ವಿನಯದಿಂದ ಇರುತ್ತಾ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ.
                                                              ಹೀಗೆ ಕೆಲವು ದಿನಗಳ ನಂತರ ಒಂದು ದಿನ ಮಗಳು ಶಾರದೆಗೆ ವಿಪರೀತ ಜ್ವರ ಬಂದ ಕಾರಣ ಸುಬ್ರಹ್ಮಣ್ಯ ವೈದ್ಯರಿಗೆ ತೋರಿಸಿ ಕರೆದುಕೊಂಡು ಬಂದನು.ಸುಬ್ರಹ್ಮಣ್ಯನಿಗೆ ಸಮಾಧಾನವಿರದ ಕಾರಣ ಕೆಲಸ ಬಿಟ್ಟು ಮನೆಯಲ್ಲಿ ಅವಳ ಪಕ್ಕದಲ್ಲಿಯೇ ಇದ್ದು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ. ಹೀಗಿರುವಾಗ ಮಗನು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ. ಮನೆಯ ಸಮೀಪದಲ್ಲೇ ಬರುತ್ತಿರುವಾಗ ದೂರದಲ್ಲಿ ಹಸಿವಿನ ದಾಹ ಇಮ್ಮಡಿಯಾಗಿ ಆಹಾರಕ್ಕಾಗಿ ಅರಚುತ್ತಾ ತಿರುಗುತ್ತಿತ್ತು. ಒಂದು ದುಷ್ಟ ವ್ಯಾಘ್ರವು ಆತನನ್ನು ನೋಡಿ ಹೊಂಚುಹಾಕುತ್ತಾ ಹಿಂಬಾಲಿಸತೊಡಗಿತು. ದೂರದಿಂದ ಅದನ್ನು ನೋಡಿದ ಸುಬ್ರಹ್ಮಣ್ಯ ಗಾಬರಿಯಿಂದ  ಹೆಂಡತಿಯು ಕಾಯಿಪಲ್ಲೆಯನ್ನು ಕತ್ತರಿಸುತ್ತಿದ್ದ ಈಳಿಗೆಯನ್ನು ಹಿಡಿದುಕೊಂಡು ವೇಗವಾಗಿ ಮಗನ ಹತ್ತಿರಕ್ಕೆ ಬಂದ. ಆದರೆ  ಹಸಿದ ವ್ಯಾಘ್ರವು ಮಗನ ಮೇಲೆ ಹಾರಿತು. ಅಷ್ಟರಲ್ಲಿ ಮಗನ ಜೀವ ಉಳಿಸಲು ಸುಬ್ರಮಣ್ಯನು ಮಗ ಕಲ್ಮೇಶನನ್ನು ಎತ್ತಿಕೊಂಡು  ಆತನನ್ನು ಮನೆಯ ಒಳಗಡೆ ನೂಕಿ ಮನೆಯ ಬಾಗಿಲನ್ನು ಮುಚ್ಚುವಷ್ಟರಲ್ಲಿ  ಕೋಪಿಷ್ಟ ವ್ಯಾಘ್ರವು ತನ್ನ ಬೆನ್ನ ಮೇಲೆ ಹಾರಿತು. ಒಂದು ಕಡೆ ಬಲಗೈಯಲ್ಲಿರುವ ಈಳಿಗೆಯನ್ನು ಹಿಡಿದರೂ ಹುಲಿಯ ಅಬ್ಬರದ ಬಾಯಿಗೆ ಸಹಾಯಕ್ಕೆ ಬರಲಿಲ್ಲ. ಆತನ ಬೆನ್ನಿನ ಗಾಯದ ರಕ್ತದ ಕೋಡಿ ಹರಿಯುತ್ತಿತ್ತು. ಜೊತೆಗೆ ಗಂಡನ ಮುಖದ ತುಂಬ ಸುರಿಯತ್ತಿರುವ ರಕ್ತವನ್ನು ಕಂಡು ಕಿಟಕಿಯಲ್ಲಿ ನೋಡುತ್ತಿರುವ ಹೆಂಡತಿ, ಮಕ್ಕಳು ಅಳುತ್ತಾ ಜೋರಾಗಿ ಸಹಾಯಕ್ಕಾಗಿ ಕೂಗಿದರು. ಅವರ ಕೂಗು ದೂರ ದೂರದಲ್ಲಿರುವ ಜನರ ಕಿವಿಗೆ ಕೇಳದೇ ಅರಣ್ಯ ರೋಧನವಾಗಿತ್ತು.

  ಈ ಕಡೆ ಸುಬ್ರಹ್ಮಣ್ಯ ಹುಲಿಯಿಂದ ಜೀವ ಉಳಿಸಿಕೊಳ್ಳಲು ಅಸಾಧ್ಯವಾಯಿತು. ಕೊನೆಗೆ ಮನೆಯ ಎಡಬದಿಯಲ್ಲಿ ಮುಳ್ಳಿನ ಪೊದರಿನಲ್ಲಿ ಅವಿತುಕೊಂಡನು. ರಕ್ಕಸ ಹಸಿವಿನಲ್ಲಿರುವ ಹುಲಿಯೂ ಕಾಲುಗಳ ಮೂಲಕ ಮುಳ್ಳುಗಳನ್ನು ಸರಿಸಲು ತೊಡಗಿತು. ಇದನ್ನು ನೋಡಿದ ಹೆಂಡತಿ ಗಾಬರಿಯಿಂದ ಗಂಡನ ಜೀವ ಹೋಯಿತೆಂದು  ಜೋರಾಗಿ ರೋಧಿಸುತ್ತಿರುವಾಗ ಕ್ಷಣದಲ್ಲಿ ಒಂದು ಉಪಾಯ ಹೊಳೆಯಿತು. ಕೆಳಗೆ ಬಿದ್ದಿರುವ ಒಂದು ಕೋಲನ್ನು ತೆಗೆದುಕೊಂಡು ಅದಕ್ಕೆ ಬಟ್ಟೆಯನ್ನು ಸುತ್ತಿ ಸೀಮೆಯನ್ನು ಸುರಿದು ಕಿಟಕಿಯ ಹೊರಗೆ ಅದಕ್ಕೆ ಬೆಂಕಿಹಚ್ಚಿದಳು. ಧಗಧಗನೆ ಉರಿಯುವ ಹೀಲಾಲನ್ನು ಕಿಟಕಿ ಮೂಲಕ ಗಂಡನ ಬದಿಯಲ್ಲಿ ಎಸೆದಳು. ಗಂಡನು ಅದನ್ನು ಹುಷಾರಾಗಿ ಬಲಗೈಯಲ್ಲಿ ಹಿಡಿದುಕೊಂಡು ಜೀವದ ಕೊನೆಯ ಪ್ರಯತ್ನವೆಂದು ಮುಳ್ಳುಕಂಟಿಯಿಂದ ಹೊರಗೆ ಬಂದನು. ಧಗಧಗಿಸುವ ಚಿತೆಯನ್ನು ವ್ಯಾಘ್ರನತ್ತ ತೋರಿಸಿದನು.ಎಡಗೈಲಿ ಈಳಿಗೆ ಬಲಗೈಯಲ್ಲಿ ಬೆಂಕಿ ನೋಡಿ ತನ್ನ ಜೀವ ಉಳಿಯುವುದಿಲ್ಲ ಎಂಬ ಭಯದಿಂದ ಅದು ಹೆಜ್ಜೆಗಳನ್ನು ಹಿಂದಕ್ಕೆ ಸರಿಯ ತೊಡಗಿತು. ಕ್ಷಣದಲ್ಲಿ ಕಾಡಿನತ್ತ ಓಡತೊಡಗಿತು. ಜೀವ ಉಳಿಸಿಕೊಂಡ ಸುಬ್ರಹ್ಮಣ್ಯ ನಿಟ್ಟುಸಿರುಬಿಟ್ಟ. ಮನೆಯಿಂದ ಹೊರಗೆ ಬಂದ ಹೆಂಡತಿ ಮಕ್ಕಳು ಆನಂದಭಾಷ್ಪದೊಂದಿಗೆ ರಕ್ತದ ಚಾಮರದಲ್ಲಿರುವ ಗಂಡನನ್ನು ತಬ್ಬಿಕೊಂಡರು.

               
 ಹೀಗೆ ಮಗನಿಗಾಗಿ ಜೀವ ತ್ಯಾಗಮಾಡಲು ಮುಂದಾದ ತಂದೆ, ಗಂಡನ ಉಸಿರಿಗೆ ಕುತ್ತು ಬಂದಾಗ ಬುದ್ಧಿಕೌಶಲ್ಯ ತೋರಿದ ಹೆಂಡತಿ.ಇAತಹ  ಕುಟುಂಬ ನಮಗೆಲ್ಲಾ ಪ್ರೇರಕವಾಗಿದೆ.


ನೀತಿ:ಜೀವನದಲ್ಲಿ ಧೈರ್ಯ ಜೊತೆಗೆ ಕೌಶಲ್ಯವಿದ್ದರೆ ಯಾವುದೇ ಅಪಾಯವನ್ನು ಎದುರಿಸಬಹುದು

                                                             ***************

                    :-ವೀರೇಶ ಮಾಶೆಟ್ಟಿ ನಿಡಗುಂದಿ

  ವಿಜ್ಞಾನ ಶಿಕ್ಷಕರು,ಸಾಹಿತಿ ಹಾಗೂ ಲೇಖಕರು
 (ಸ.ಹಿ.ಪ್ರಾ.ಶಾ ಹುಲ್ಲೂರ ಎಲ್.ಟಿ ತಾ||ಮುದ್ದೇಬಿಹಾಳ)                                                                   8105672142

Friday 27 November 2020

8 ನೇ ತರಗತಿ ಮಕ್ಕಳಿಗಾಗಿ ಕನ್ನಡ ವೀಡಿಯೋ ಪಾಠಗಳು

ವೀಕ್ಷಿಸಿ.ಶೇರ್ ಮಾಡಿ. 8 ನೇ ತರಗತಿ ಮಕ್ಕಳಿಗಾಗಿ....
ಹೆಚ್ಚಿನ ಮಾಹಿತಿಗೆ 
ಚಾನೆಲ್ ಸಬ್ಸ್ಕ್ರೈಬ್ ಮಾಡಿ.

https://youtu.be/ixiTbpGHbvQ

ಮಕ್ಕಳ ಮಂದಾರ ಅಕ್ಟೋಬರ್ ಸಂಚಿಕೆ 2020

ಹಲವು ಹೊಸ ನಾವಿನ್ಯತೆಯೊಂದಿಗೆ ನಿಮ್ಮೆಲ್ಲರ ಮಕ್ಕಳ ಮಂದಾರ ಈ ತಿಂಗಳ ಸಂಚಿಕೆ. ಇದು ನಮ್ಮ 49 ನೇ ಸಂಚಿಕೆ. ಪ್ರತಿ ಸಂಚಿಕೆಯು ಹೊಸ ಸವಾಲು ಹೊಸ ಸಾಧ್ಯತೆ.ತಮ್ಮ ಸಲಹೆ ಸಹಕಾರ ಬಯಸುವೆ.
ಪೂರ್ತಿ ಪತ್ರಿಕೆ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://drive.google.com/file/d/1BF3JeCq8TdSg04wXjSbm5GYyd0HRP4e9/view?usp=drivesdk.
ಮುದ್ರಿತ ಪ್ರತಿಗೆ ಕರೆ ಮಾಡಿ.
9980952630.
ಸುಂದರವಾಗಿ ವಿನ್ಯಾಸ ಮಾಡಿದ್ದಾರೆ ಆತ್ಮೀಯರಾದ
- Sujay Lingappa,ಅವರು.

Saturday 10 October 2020

ನಮ್ಮೂರ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಹಸಿರು ಹಬ್ಬ

ನಮ್ಮೂರ ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಹಸಿರು ಹಬ್ಬ


ಅಯ್ಯಪ್ಪ ಮಲ್ಕಾಪುರ .ಹಿರಿಯ ವಿದ್ಯಾರ್ಥಿ


ಮಕ್ಕಳ ಮಂದಾರ ವರದಿ: ಮಲ್ಕಾಪುರ . ನಮ್ಮ ಮಲ್ಕಾಪುರ  ಶಾಲೆ ಅಂದರೆ  ಅದೇನೋ ಒಂದು ವಿಶೇಷತೆಯಿಂದ ಕೂಡಿದ ಹಲವು ಶೈಕ್ಷಣಿಕ ಪ್ರಯೋಗಗಳ ಶಾಲೆ ಅನಿಸುತ್ತದೆ. ಏಕೆಂದರೆ ಈ ಶಾಲೆಯಲ್ಲಿ ರವಿಚಂದ್ರ ಸರ್ ರೂಪಿಸುತ್ತಿರುವ ವೈವಿದ್ಯಮಯ ಕಾರ್ಯಕ್ರಮಗಳಾದ ''ಜಾನಪದ  ಪಠ್ಯಂತರ್ಗತ ಪ್ರಯೋಗಗಳು, ಮಕ್ಕಳಿಂದ ಜಾನಪದ ಕ್ಷೇತ್ರಕಾರ್ಯ, ಹಾಗು  ಹನ್ನೆರಡು ವರ್ಷ ಪೂರೈಸಿದ ಮಕ್ಕಳ ನೇತೃತ್ವದ ಮಕ್ಕಳ ಮಂದಾರ ಶಾಲಾಪತ್ರಿಕೆ ರಾಜ್ಯಮಟ್ಟದಲ್ಲಿ ಸಾಹಿತ್ಯ ವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಗಮನಸೆಳೆದಿದೆ. ನಮ್ಮೂರ  ಮಕ್ಕಳು ರಾಜ್ಯಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಿ ಸೈ ಅನಿಸಿಕೊಂಡಿದ್ದಾರೆ.ಆಕಾಶವಾಣಿ ನಾಟಕಗಳನ್ನು,  ಜಾನಪದ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆಗಳಿಸಿರುವುದು ನಮ್ಮೂರ ಹೆಮ್ಮೆಯಾಗಿದೆ.ಮಕ್ಕಳ ಸಾಹಿತ್ಯ ಸಮ್ಮೇಳನದ ಗೋಷ್ಟಿಗಳಲ್ಲಿ ಪ್ರತೀ ವರ್ಷ ನಮ್ಮೂರ ಮಕ್ಕಳು ಭಾಗಿಯಾಗುತ್ತಿದ್ದಾರೆ.ಈಗ ಮತ್ತೊಂದು ಹೊಸ ಹೆಜ್ಜೆಯಾಗಿ ಹಸಿರುಹಬ್ಬ ಕಾರ್ಯಕ್ರಮವೂ ಊರಿನ ಜನಮನ ಸೆಳೆದಿದೆ.

    ಈಗಾಗಲೇ ನಮ್ಮೂರ ಶಾಲೆಯಲ್ಲಿ ವಿವಿಧ ಸಸಿ ಬೆಳೆಸುವ ಸಣ್ಣ ನರ್ಸರಿಯೂ ಎರಡು ವರ್ಷಗಳಿಂದ ಪ್ರಾಯೋಗಿಕವಾಗಿ ಮಾಡಲಾಗಿದ್ದು ಈಗ ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಈ ಹಬ್ಬಕ್ಕೆ ಸುಮಾರು ನೂರು ಸಸಿಗಳನ್ನು ತಂದು ಶಾಲೆಯಲ್ಲಿ, ಊರ ದೇವಾಲಯಗಳ ಜಾಗದಲ್ಲಿ ನೆಡಲಾಯಿತು. ಆಸಕ್ತ ಗ್ರಾಮಸ್ಥರಿಗೂ  ತಮ್ಮ ಮನೆಮುಂದೆ ನೆಡಲು ನೀಡಲಾಗಿದೆ. ಹಿರಿಯ ವಿದ್ಯಾರ್ಥಿಗಳ ಈ ಕಾರ್ಯದಿಂದ ನಮ್ಮ ಶಾಲಾ ಶಿಕ್ಷಕರು ಊರಿನ ಗ್ರಾಮಸ್ಥರು, ಶಿಕ್ಷಣ ಇಲಾಖೆಯ ಅಧಿಕಾರಿಗಳು , ಅರಣ್ಯ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
   ಈ ಹಸಿರು ಹಬ್ಬದ ಯೋಜನೆಯ ರುವಾರಿಗಳು ರವಿಚಂದ್ರ ಸರ್ ಮತ್ತು ಡಾ. ನಾಗಲಿಂಗಸ್ವಾಮಿ, ಅಯ್ಯಪ್ಪ , ನಿಂಗರಾಜ್, ನಾಗರಾಜ, ಬಸವನಾಯಕ್ ಮುಂತಾದ ಸ್ನೇಹಿತರೆಲ್ಲ ಸೇರಿ ಇದ್ದಕ್ಕಿದ್ದಂತೆ  ರವಿಚಂದ್ರ ಸರ್ ಸಲಹೆ ಮೇರೆಗೆ ನಿರ್ಧರಿಸಿ ಹಸಿರು ಹಬ್ಬವನ್ನು ಸಡಗರದಿಂದ ಗೆಳೆಯರೆಲ್ಲ ಕುದ್ದಾಗಿ ಗುಂಡಿ ತೆಗೆದು ಗಿಡಗಳನ್ನು ನಾಟಿಸಿದೆವು.ನಾವು ಓದಿದ ಶಾಲೆಗೆ ನಾವೂ ಏನಾದರೂ ಕೊಡುಗೆ ನೀಡಬೇಕೆಂದು ಈ ಕೆಲಸ ಮಾಡಿದೆವು.ನಮ್ಮ  ಕೆಲಸವನ್ನು  ಊರಿನ ಎಲ್ಲರೂ ಮೆಚ್ಚಿಕೊಂಡಿದ್ದು ಸಂತೋಷ ನೀಡಿತು.  ಊರಿನ ಹಲವು ಹಿರಿಯರು, ಎಸ್ ಡಿ ಎಂ ಸಿ ಅಧ್ಯಕ್ಷರು ,ಎಲ್ಲಾ ಶಿಕ್ಷಕರು ಸಹ ಭಾಗಿಯಾಗಿದ್ದರು. ಮುಂದೆ ಇಂತಹ ಹಲವು ಕಾರ್ಯಕ್ರಮಗಳನ್ನು  ಮಾಡುವ ಉದ್ದೇಶವಿದೆ. 





ಮಕ್ಕಳ ಶೈಕ್ಷಣಿಕ ತವಕ ತಲ್ಲಣಗಳ “ ಅಂಕಪಟ್ಟಿ ಬಾಲ್ಯ” ದೊಳಗೊಂದು ಸುತ್ತು - ಭವ್ಯಬಡಗೇರ

 

    ಮಕ್ಕಳ ಶೈಕ್ಷಣಿಕ ತವಕ ತಲ್ಲಣಗಳ   ಅಂಕಪಟ್ಟಿ ಬಾಲ್ಯದೊಳಗೊಂದು ಸುತ್ತು

 - ಭವ್ಯಬಡಗೇರ

         


ಹೀಗೊಂದು ದಿನ ಅಂಚೆಯಣ್ಣನ ಧ್ವನಿ ಪೋಸ್ಟ್……ಪೋಸ್ಟ್…….ಎಂದು ಕೇಳಿ ಅಚ್ಚರಿಯಾಯಿತು, ಆದರೂ ಅಂಚೆಯಲ್ಲಿ ಬಂದ ಸಾಹಿತ್ಯ ಕೃತಿ ನೋಡಿ ಮುಖದಲ್ಲಿ ಮಂದಹಾಸ ಮೂಡಿಸಿತು, ಲಕೋಟೆ ತೆರೆದು ಪುಟತಿರುಗಿಸಿದೆ ಕೃತಿ ರಚನೆಕಾರರಿಗೆ ಮನದಲ್ಲೇ ಅಭಿನಂದಿಸಿದೆ .ಕಾರಣ ಸಾಹಿತ್ಯ ಚಟುವಟಿಕೆಗಳೇ ಕಾಣಸಿಗದ ಡಿಜಿಟಲ್ ಯುಗದಲ್ಲಿ ಮಕ್ಕಳಿಗಾಗಿ ಒಂದಷ್ಟು ಸಮಯ, ತಾಳ್ಮೆ, ಪರಿಶ್ರಮ ಹಾಗು ತಮ್ಮ ಕವಿಮನವನ್ನು ಮುಡುಪಾಗಿಟ್ಟು ಮಕ್ಕಳ ಬಾಲ್ಯದ ಆನಂದ ಕುತೂಹಲಗಳನ್ನು ಕಾಪಾಡಿ ಎಲ್ಲರಿಗೂ ಪರಿಚಯಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿರುವ  ರವಿರಾಜ್ ಸಾಗರ್ಸರ್ ಅವರಿಗೆ ಅನಂತ ಧನ್ಯವಾದಗಳು.

              ಕೃತಿಯ ಬಗೆಗೆ ಹಾಳುವುದಾದರೆ ಅಂಕಪಟ್ಟಿಬಾಲ್ಯಐವತ್ಮೂರು ಮುದ್ದಾದ ವೈವಿಧ್ಯಪೂರ್ಣ ಬಾಲ ಪದ್ಯಗಳಪದ್ಯಗುಚ್ಛ ’.ಶೀರ್ಶಿಕೆ ಪದ್ಯವು ಇಂದಿನ ಪ್ರಸ್ತುತ ವ್ಯವಸ್ಥೆಯ ಅಂಕಾಧಾರಿತ ಶಿಕ್ಷಣ ವ್ಯವಸ್ಥೆಯನ್ನು ಅತ್ಯಂತ ಪಾರದರ್ಶಕವಾಗಿ ತೋರಿಸುತ್ತದೆ. ಅಂಕ- ಅಂಕ ಅಂಕದಾತಂಕ ಮಕ್ಕಳ ಬಾಲ್ಯವನ್ನೆ ಮಂಕಾಗಿಸಿರುವ ಪರಿಯನ್ನು ಅತ್ಯಂತ ನವಿರಾಗಿ ಅಷ್ಟೇ ತೀಕ್ಷ್ಣವಾಗಿ ಹೆಣೆಯಲಾಗಿದೆ.‘ಉತ್ತರಿಸಿನಮ್ಮ ಬಾಲ್ಯದಲ್ಲಿ ನಮಗೂ ಉತ್ತರಸಿಗದ  ಕೇಳುವ ಧೈರ್ಯವಿಲ್ಲದೇ ಅಡಗಿದ್ದ ಪ್ರಶ್ನೆಗಳನ್ನು  ನಮ್ಮ ಮಕ್ಕಳೂ ಕೇಳುತ್ತಿರುವರೇನೋ ಎಂಬಂತೆ ಭಾಸವಾಗುತ್ತಿದೆ. ಆದರೆ ಬಹುಶಃ ಅಂಕರಾಜರೂ ಸಹ ಇದಕ್ಕೆ ಉತ್ತರಿಸಲಾರರು.

          ಚಿಲಿಪಿಲಿ ಹಕ್ಕಿಗಳುನಮ್ಮ ಮಕ್ಕಳು ಅವರ ಕಲರವವನ್ನು ಕೇಳುವ ಕಿವಿಗಳೇ ನಮಗೆ ಇಲ್ಲದಂತಾಗಿದೆ, ಕಾರಣ ದುಡಿಯಲು ಹೊರನಡೆಯುವ ತಂದೆ ತಾಯಿಯರ ಸಮಯದ ಹಿಂದೆ ಓಡುವ ಆತುರದ ಬದುಕು , ಸಮಯಕ್ಕೆ ಹೊಂದಿಕೊಂಡು ಹಣದಹಿಂದೆ ಸುಧಾರಿತ ವೈವಸ್ಥೆಗಳ ಮೋಜುಗಳ ದಂದುವೆಚ್ಚಗಳನ್ನು ಭರಿಸಲು ತಮ್ಮ ಮಕ್ಕಳ ಬಾಲ್ಯದ ತುಂಟತನದ ಸುಸಮಯವನ್ನು ಅನುಭವಿಸುವಲ್ಲಿ ವಿಫಲರಾಗಿದ್ದೇವೆ ಹಾಗೆಯೇ ಮಕ್ಕಳನ್ನೂ ಡಿಜಿಟಲ್ ಗೇಮ್ಗಳಿಗೆ ದಾಸರನ್ನಾಗಿಸಿ   ಸಾರಹೀನ ಬಾಲ್ಯವನ್ನು ಅವರದಾಗಿಸಿದ್ದೇವೆ. ಸಾಮಾಜಿಕ ಹೊಂದಾಣಿಕೆಯಿಂದ ದೂರ ಉಳಿಸಿದ್ದೇವೆ, ಅಡ್ಡದಾರಿಯಲ್ಲಿ ಶೀಘ್ರ ಗುರಿಸೇರುವ ಮಾರ್ಗಗಳನ್ನೇ ಹುಡುಕಿ ಕೊಳ್ಳಲು ಪ್ರೇರೇಪಣೆಯಾಗಿದ್ದೇವೆ. ಎಲ್ಲದರಿಂದಲೂ ಬೇಗನೆ ಎಚ್ಚೆತ್ತುಕೊಳ್ಳಿ ಎಂಬ ಸಂದೇಶ ಪದ್ಯದಲ್ಲಿದೆ.

          ಎಲ್ಲರಿಗೂ ಹಕ್ಕುಗಳಿವೆ ನಮ್ಮ ಮಕ್ಕಳ ಹಕ್ಕುಗಳನ್ನು ನಾವು ಮರೆತಿದ್ದೇವೆ. ಪ್ರಶ್ನೆಕೇಳುವ ಹಕ್ಕನ್ನೂ ಸಹ ಅವರಿಂದ ಕಿತ್ತುಕೊಂಡಿದ್ದೇವೆ. ಆದರೆ ಪ್ರಶ್ನೆಕೇಳುವುದು ಅವರ ಜನ್ಮಸಿದ್ಧಹಕ್ಕು, ಬಾಲ್ಯದ ಜೀವಂತಿಕೆಯ ಸಂಕೇತ ಎಂಬುದನ್ನೇ ಮರೆತಿದ್ದೇವೆ ಹಕ್ಕುಗಳು ಪುಸ್ತಕ ಸೇರಿವೆ ಮನೆಗಳಲ್ಲಿಲ್ಲ,ಅನಾದಿಕಾಲದಿಂದಲೂ ನಡೆದು ಬಂದಿರುವ ಪುರುಷಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮುಗ್ದ ಮಗಳೊಬ್ಬಳ ಮುದ್ದಾದ ಪ್ರಶ್ನೆಗಳು ಅಪ್ಪನ ಮೂಲಕ ಪುರುಷ ಸಮಾಜಕ್ಕೇ ಬಲಿಷ್ಠ ಗುದ್ದುಗಳನ್ನು ಹೇರಿದೆ.ಮಗಳ ಪ್ರಶ್ನೆಲಿಂಗತಾರತಮ್ಯಕ್ಕೆ ಹಿಡಿದ ಕನ್ನಡಿಯಾಗಿದೆ ನಾಗರೀಕ ಸಮಾಜ ಕಣ್ತೆರೆಯಬೇಕಿದೆ.

          ಆಲದಮರದಒಗ್ಗಟಿನ ಬದುಕು ಸಹಬಾಳ್ವೆಯ ಸಂಕೇತ ಎಲ್ಲರಿಗೂ ಆಶ್ರಯನೀಡಿ  ಮಹಾ ಆಲಯವಾಗಿದೆ. ಅವಿಭಕ್ತಕುಟುಂಬದ ಕಲ್ಪನೆ ಕಾಣೆಯಾಗುತ್ತಿರುವ  ಇಂದಿನ ದಿನಗಳಿಗೆ ಮಾದರಿಯಾಗಿದೆ.ಲೇಖಕರುಆಕಾಶದ ಕಡೆಗೂಒಮ್ಮೆ ದೃಷ್ಟಿ ಹಾಯಿಸಿ ಹೊಸಗ್ರಹದಲ್ಲೂ ಒಂದುದಿನ ಕಳೆದಿದ್ದಾರೆ, ದಿನ ಆಕಾಶದ ಟ್ರಾಫಿಕ್ ಫ್ರೀ ಸಂಚಾರದ ಮಜಾ ವಾಹನವಿಲ್ಲದೆ ಹಾರುವ ಲೋಕದಲ್ಲಿ ಸ್ನೇಹವೂ ಸಿಕ್ಕಿತು. ಇಲಿ,ಹಾವು,ಗರುಡ ಪರಸ್ಪರ ವೈರಿಗಳು ಭೂಲೋಕದಲ್ಲಿ  ಆದರೆ ಆಕಾಶದಲ್ಲಿ ಅನ್ಯೋನ್ಯವಾಗಿವೆ ದೇಶಭಾಷೆಗಳ ಹಂಗಿಲ್ಲದ ಸಹಬಾಳ್ವೆಯ ಸಿರಿ ಗ್ರಹವಿದು.

          ಮಗುವಿನ ಮುದ್ದಾದ ಜಾಣ  ಪ್ರಶ್ನೆಗಳಿಗೆ ಪದ್ದು ಉತ್ತರಕೊಟ್ಟ ಅಪ್ಪನು ಮಗುವಿನ ಕೈಲಿ ಸಿಕ್ಕಿಹಾಕೊಳ್ಳುವ ರೀತಿ ಆಪ್ಯಾಯವಾಗಿದೆ.ಕಿರಿಕಿರಿ,ರಗಳೆಗಳು ಮಕ್ಕಳು ಪೋಷಕರ ನದುವೆ ಶತ್ರತ್ವವನ್ನೇ ಬೆಳೆಸಿಬಿಡುತ್ತದೆ. ಪರೀಕ್ಷೆಯ ಸೋಲಿಗೆ ಹೆಚ್ಚು ಮಹತ್ವ ನೀಡುವ ಬದಲು ಬದುಕಿನ ಗೆಲುವಿಗೆ ಪಾಠಕಲಿಸುವ ಅಗತ್ಯತೆಯನ್ನು ಪದ್ಯ ಎತ್ತಿ ಹಿಡಿದಿದೆ. ನಿನ್ನೆಯ ಮಕ್ಕಳೇ ಇಂದಿನ ಅಪ್ಪ-ಅಮ್ಮಂದಿರು ಎನ್ನುವುದನ್ನು ನಾವು ಮರೆತಿದ್ದೇವೆ ಎನ್ನುವದನ್ನುಚೂರು ಆಲಿಸಿ ನಮ್ಮಿಷ್ಟಪದ್ಯ ಮೊರೆಯಿಡುತ್ತಿದೆ.‘ಅಜ್ಜನ ತೋಟದ ಸೊಬಗನ್ನು ಮಲೆನಾಡಿನ ಹಸಿರನ್ನು ಮುದ್ದುಮಗುವೊಂದು ತನ್ನದನಿಯಲ್ಲಿ ಹಾಡಿದಂತಿದೆ.

          ಇಂದಿನ ಸಂಚಾರಿ ದೂರವಾಣಿಗಳ ಅಬ್ಬರಕ್ಕೆ ಎಲ್ಲೆಂದರಲ್ಲಿ  ನೆಟ್ವರ್ಕ್ ಟವರ್ ಗಳು ತಲೆಎತ್ತಿವೆ, ಹೀಗಾಗಿ ಹಲವುಜೀವ ಸಂಕುಲಗಳಿಗೆ ಕಂಟಕವಾಗಿದೆ ಅದರಲ್ಲೂ ಗುಬ್ಬಿಗಳಿಗಂತೂ ನೆಲೆಯೇ ಇಲ್ಲದಂತಾಗಿ ನಶಿಸುವಿಕೆಯ ಅಂಚಿನಲ್ಲಿವೆ, ಮಾನವನಿಗೆ ಅಪಾಯದ ಮುನ್ಸೂಚನೆ ನೀಡುತ್ತಿವೆ.ಮಕ್ಕಳ ಚೆಂದದ ಚಿಂತನೆಗಳು  ಅವರ ಮುಗ್ದ ಭಾವನೆಗಳು ಅದರೊಟ್ಟಿಗೆ ಅವರ ಚುರುಕು ಬುದ್ಧಿಯ ತೀಕ್ಷ್ಣತೆಮಕ್ಕಳ ಉಪಾಯದಲ್ಲಿಹೊಳೆದಿದೆ.

          ಒಬ್ಬ ಬಡತಾಯಿ ತನ್ನ ಶಾಣ್ಯಾ ಮಗಚೋಟ್ಯಾ ಸಕಲ ಗುಣಗಳನ್ನೂ ವರ್ಣಿಸಿ, ಬಡತನದಲ್ಲೂ ಯಾವ ಕೊರತೆಯನ್ನೂ ತೋರಿಸದೇ ಜಗಜ್ಯೋತಿ ಬಸವೇಶ್ವರರ ಹಾದಿಯಲ್ಲಿ ನಡೆಯುವಂತೆ ಹರಸುವ ಪರಿ ಯಾವ ಆದರ್ಶಮಾತೆಯರಿಗೂ ಕಡಿಮೆಯಿಲ್ಲ.ಮದುವೆ ಮನೇಲಿ ಮಕ್ಕಳನ್ನು ಹಾಡಿ ಕುಣಿಸಿರುವ ಲೇಖಕರು ವಿವಿಧ ವಾದ್ಯಗಳು ಜೋಡುನುಡಿಗಳು ಪ್ರಾಸಗಳೊಂದಿಗೆ ಮದುವೆಯ ಸರಳ ಆಚರಣೆಯನ್ನೂ ಬಿಂಬಿಸಿದ್ದಾರ      ಚಂದಾಮಾಮನನ್ನುಏಕೆ ಅಡಗುವೆ ಬಾನಲಿಎಂದು ಪ್ರಶ್ನಿಸುವ ಮಗು, ತನ್ನ ಅಮ್ಮನ ಹಾಡು, ತಂಗಿಯು ಹಠಮರೆಯುವ ಪರಿಯನ್ನು ವರ್ಣಿಸಿದೆ.ಮಕ್ಕಳಿಗಾಗಿ ಆಸ್ತಿಪಾಸ್ತಿ ಕೂಡಿಡುವ ಧಾವಂತದಲ್ಲಿ ಬದುಕಲು ಅಗತ್ಯವಾದ ಜೀವಜಲ ಜೀವವಾಯು,ಭೂಮಿಗಳನ್ನೇ ಮಲಿನಗೊಳಿಸುತ್ತಿದ್ಧೇವೆ. ಆಸ್ತಿಬೇಡ ಬದುಕಲು ಅಗತ್ಯ ಪರಿಸರವನ್ನು ಉಳಿಸಿ ಎಂದು ಮಕ್ಕಳು ಬೇಡುತ್ತಿದ್ದಾರೆ,ಇಂದಿನ ಹಲವು ಕುಟುಂಬಗಳ ನೈಜತೆಗೆ ಹತ್ತಿರವಿರಬಹುದಾದ ಪದ್ಯಮೊಬೈಲ್ ಪಪ್ಪ ಧಾರಾವಾಹಿ ಮಮ್ಮಿಮಕ್ಕಳನ್ನು ನಿರ್ಲಕ್ಷಿಸುವ ಪರಿಸ್ಥಿತಿಯನ್ನು ಚಿತ್ರಿಸಿದೆ.


          ಜಾದು ಕಲಿಸು ಎಂದು ಚಂದ್ರನ ಚೆಲುವಿಗೆ ಬೆರಗಾದ ಮಗುವೊಂದು ಹಾಡುತ್ತಾ ತನಗೂ ಜಾದೂ ಕಲಿಸು ಎನ್ನುತ್ತಿದೆ.ಸಾಕ್ಷರತೆಯ ಹರಿಕಾರ ಪೆನ್ಸಿಲಣ್ಣನಿಗೆ ಕೆತ್ತಿದರೂ ನೋವಾಗುವುದಿಲ್ಲ ಹೇಗೆ ಗೀಚಿದರೂ ಬೇಸರವಿಲ್ಲ, ತಪ್ಪನ್ನು ತಿದ್ದಿಕೊಳ್ಳಲು ರಬ್ಬರ್ ನಂತಹ ಮೃದುವಾದ ಗೆಳೆಯನಿದ್ದರೂ ತಪ್ಪನು ಮಾಡಿಸುವವರು ನಾವು, ಜಾಗ್ರತೆಯಿಂದಿದ್ದರೆ ತಪ್ಪೇ ಆಗುವುದಿಲ್ಲ.‘ಕನಸುಮಗುವಿನ ಮುಗ್ದಮನದ ಪರಿಶುದ್ಧ ಕನಸಿನಲ್ಲಿ ನಲಿವ ನವಿಲು,ಹಸು,ಸಿಹಿಮಾವಿನಹಣ್ಣು, ಪ್ರಶಸ್ತಿಗಳೆಲ್ಲವೂ ದೊರೆತಿತ್ತು.

          ಪಪ್ಪನ ಫೋನುಮಗುವಿಗೆ ಹಿಗ್ಗು ಆದರೆ ಅದರಲ್ಲಿ ಬಯಲಲಿ ಆಟವಾಡುವ ಆನಂದ, ಸಡಗರ, ಜೊತೆಗಾರರು ಯಾರೂ ಇಲ್ಲದೆ ಒಂಟಿ ಆಟಕೂ ಇಲ್ಲ ಜಗಳಕೂ ಇಲ್ಲದೆ ಬಲು ಬೇಸರ, ಯೂಟೂಬ್ನಲ್ಲಿ ಅಜ್ಜಿಯ ಹಾಡು ಕಥೆಗಳಿದ್ದರೂ ಮಡಿಲಲಿ ಕೇಳುವ  ಅನುಭವವಿಲ್ಲ, ಅಗತ್ಯವರಿತು ಇತಿಮಿತಿಯಲಿ ಮೊಬೈಲು ಬಳಸಿ ಎಂಬ ಸಂದೇಶ ಸಮಯೋಚಿತವಾಗಿದೆ. ‘ಮೋಡಗಳೂರಲಿ ಒಂದು ದಿನಮಗುವೊಂದು ಮೋಡಗಳೊಂದಿಗೆ ಮಾತನಾಡುತ್ತಾ  ಭೂಮಿ ಮೋಡಗಳ ಪರಿಶುದ್ಧತೆಯನ್ನು ಹೋಲಿಸುತ್ತದೆ.

          ಗುಡುಗು ಮಿಂಚು ಮಳೆಒಮ್ಮೆ ಕದನಕಿಳಿದು ಮೂವರೂ ನಾನು ನಾನು ಎಂದು ಪೈಪೋಟಿ ನಡೆಸಿದವು. ಕದನದಲ್ಲಿ ವಿಜ್ಞಾನದ ತತ್ವ ಶಬ್ದ,ಬೆಳಕು.ಹಾಗೂ ನೀರಿನ ವೇಗಗಳ ಅರಿವೂ ಅಡಗಿದೆ.‘ಕಾಗೆ ಹೇಳಿದ ಪಾಠಬದುಕಿನ ವಿಭಿನ್ನತೆ, ವೈವಿಧ್ಯತೆಯೊಂದಿಗೆ ಪರಸ್ಪರರನ್ನು ಸಮಾನವಾಗಿ ಕಾಣುತ್ತಾ ಗೌರವಿಸುತ್ತಾ ಸ್ವಂತಿಕೆಯೊಂದಿಗೆ ಸಹಬಾಳ್ವೆಯಿಂದ ಬದುಕುವ ಪಾಠಕಲಿಸುತ್ತದೆ.‘ಒಗ್ಗಟ್ಟಿನ ಇರುವೆಶಿಸ್ತು, ಸಂಯನ, ಪರಿಶ್ರಮ, ಅವಿರತದುಡಿಮೆ, ಆತ್ಮವಿಶ್ವಾಸದಿಂದ ಜೀವನ ಸಾಗಿಸುವ ಇರುವೆ ಜೀವನಕ್ಕೊಂದು ಶ್ರೇಷ್ಠ ಸಂದೇಶವನ್ನು ನೀಡುತ್ತದೆ.ಅರಿತು ಬಾಳಿದರೆ ಎಲ್ಲರೂ ಸಹ ಜೀವನದಲ್ಲಿ ಯಶಸ್ಸು ಪಡೆಯತ್ತಾರೆ ಎಂಬುದು ನೀತಿ.

          ಅಂತಿಮ ಕ್ಷಮೆನದಿಯೊಂದ ಕಂಡು ಅನ್ಯ ಜೀವಿಗಳು ತಮ್ಮ ಅಗತ್ಯವನ್ನು ಪೂರೈಸಿಕೊಂಡು ಇತರರಿಗೂ ಉಪಕಾರ ಮಾಡಿದರೆ ಸ್ವಾರ್ಥಿ ಮಾನವ ಕಾಡುಕಡಿದು ಜೀವಿಗಳ ನೆಲೆಯನ್ನು ಕಿತ್ತುಕೊಂಡು ಕಡೆಗೆ ತನಗೂ ಅನ್ನಕ್ಕೂ ಗತಿಇಲ್ಲದಂತೆ ಮಾಡಿಕೊಂಡು ತಪ್ಪಿನ ಅರಿವಾಗಿ ಗಿಡ ಬೆಳೆಸಿ ಮಳೆ ತರುವ ವಾಗ್ದಾನ ನೀಡಿದ್ದಾನೆ.‘ನನಗೊಂದಿಷ್ಟು ಕನಸಿವೆಯಮ್ಮಾಎಂದು ಮುದ್ದು ಕಂದ ತನ್ನ ಅಮ್ಮನ ಬಳಿ ಇರುವೆಯ ಶಿಸ್ತಿಗೆ ತಾನೆಷ್ಟು ಮಾರುಹೋಗಿದ್ದೇನೆ ಎನ್ನುವ ವಾಂಛೆಯನ್ನು ವ್ಯಕ್ತಪಡಿಸಿದೆ. ಹುಲಿಯ ಘಾಂಭೀರ್ಯ, ಹಲ್ಲಿಯ ಮಾಧುರ್ಯ, ಮೋಡದ ಸಾಮರ್ಥ್ಯ, ಸಹಬಾಳ್ವೆಯ ಸಾಮರಸ್ಯವನ್ನು ಒಟ್ಟಾಗಿಸಿ ಸಾರಿದೆ.

          ಇವರು  ಎಲ್ಲಿಯೇ ಹೋದರೂ ತಮ್ಮ ಮಲೆನಾಡಿನ ಸಿರಿಯನ್ನು ಮೆಲುಕುಹಾಕುವುದನ್ನು ಮಾತ್ರ ಮರೆಯುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ನಮ್ಮೂರ ಹಸಿರು ಸಿರಿಪದ್ಯ. ಮಲೆನಾಡಿನ ಸೊಬಗು ವರ್ಣನಾತೀತ.ಅಡುಗೆ ಮನೆ ಆಟಗಾರ ಪುಟ್ಟನ ತುಂಟಾಟ, ತೊದಲು ನುಡಿ, ಆಡುವ ಜಾಣ್ಮೆ, ಎಲ್ಲರ ಗಮನ ಸೆಳೆಯುವ ಆಕರ್ಶಣೆ ಅತ್ಯಂತ ನವಿರಾಗಿ ಹೆಣೆಯಲ್ಪಟ್ಟಿದೆ. ‘ಪುಟ್ಟನ ದೀಪಾವಳಿಮನೆಯ ಪುಟ್ಟ ಮಗುವೊಂದು ತನ್ನ ಮೊದಮೊದಲ ದೀಪಾವಳಿ ಹಬ್ಬವನ್ನು ಸಂಭ್ರಮಿಸುತ್ತಿರುವ ರೀತಿಯನ್ನು , ಮಲೆನಾಡಿನ ಅಂಟಿಗೆ-ಪಿಂಟಿಗೆಯನ್ನು ನೆನಪಿಸುತ್ತಾ ಪರಿಸರ ಕಾಳಜಿಯನ್ನೂ. ಕಳವಳವನ್ನೂ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಮನವಿಯಲ್ಲಿ  ಪ್ರಸ್ತುತ ಮಾಧ್ಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿ ಮಕ್ಕಳ ವಿದ್ಯಾಭಾಸ, ಸಾಮಾಜಿಕ ಸಾಮರಸ್ಯವನ್ನು ಉಳಿಸಿ, ಮಕ್ಕಳಿಗೆ ಹೊರೆಯಾಗುವ ವಿಷಯಗಳನ್ನು ತುಸು ಹಗುರಾಗಿಸೋಣ ಎಂದಿದ್ದಾರೆ. ಮಕ್ಕಳ ಮೂಲಕ ಪದ್ಯದಲ್ಲಿ ಮನವಿ ಮಾಡಿಕೊಂಡಿದ್ದಾರೆ.‘ವೃಕ್ಷಪ್ರಿಯ ಚೋಟುಅತ್ಯಂತ ತರಲೆ, ತುಂಟ, ಚಾಣಾಕ್ಷ ಅದರೂ  ವೃಕ್ಷಪ್ರಿಯತೆಯೇ ಗುಣಗಾನಕ್ಕೆ ಕಾರಣವಾಗಿದೆ. ಇಲ್ಲಿ.‘ಚೋರ ಇಲಿಪ್ರಾಸದ ಹಂದರದಲ್ಲಿ ಇಲಿಯೊಂದಿಗೆ ಮಗು ಆಡುವ ಮಾತಿನ ಆಟ ಚೆನ್ನಾಗಿದೆ, ಹಾಗೆಯೇ ಇಲಿಗೆ ಹೇಳುವ ನೀತಿಯು  ಎಲ್ಲರಿಗೂ ಒಂದು ಪಾಠವೇ ಸರಿ.‘ಕಾಗೆಯ ಸಂದೇಶಎಷ್ಟುಚೆಂದ ಕಾಗೆಯ ಸಂದೇಶ , ಒಂದು ಅಗುಳ ಕಂಡರೂ ಇಡೀ ಬಳಗವನ್ನೇ ಕರೆಯುವ ಗುಣ ಕಾಗೆಯದು, ಮನುಜ ಕಾಗೆಗಿಂತಲೂ ಕೀಳೇ? ಅರಿಯೋ ಮನುಜ ಎನುತಿದೆ ಪದ್ಯ.

          ಪುಟ್ಟ ಬಾಲಕನೊಬ್ಬ ಮೋಡವನ್ನು ಬೇಡುವ ಪರಿ ಅತ್ಯಂತ ಮನೋಜ್ಞವಾಗಿದೆ, ಕಡೆಗೆ ಬೇಡಿಕೆಯ ಎಲ್ಲೆ ಮೀರಿ ಮೋಡಕೇ ಚೂರಿಹಾಕುವ ಕ್ರೌರ್ಯತೆಗೆ ತಿರುಗುವ ಭಾವ ಬಿಸಿಲಿನ ಧಗೆಯ ತೀಕ್ಷತೆಯನ್ನು ಬಿಂಬಿಸುತ್ತದೆ.ಚಳಿಗಾಲದ ಸಮಯವಿರಬಹುದು ಮಕ್ಕಳು ಸೂರ್ಯದೇವನ್ನು ಅತ್ಯಂತ ವಿನಯದಿಂದ ಕೈಜೋಡಿಸಿ ಕೊಂಡು ಕರೆಯುತ್ತಿದ್ದಾರೆ. ಚಳಿಯನೋಡಿಸಿ ಬಿಸಿಲ ಬೆಚ್ಚನೆ ಹೊಡಿಕೆಯನ್ನು ನೀಡೆಂದು.


               ಮಕ್ಕಳು ಮನವಿ ಮಾಡುವ ಪದ್ಯವನ್ನು ಬಹುಶಃ ಲೇಖಕರು ಉತ್ತರ ಕರ್ನಾಟಕದ  ಬಿಸಿಲ ಧಗೆಯನ್ನು ಕುರಿತೇ ರಚಿಸಿರಬೇಕೆನಿಸುತ್ತದೆ. ಬೇಸಿಗೆಯ ರಜೆಯ ಮಜವೆಲ್ಲಾ ಸೂರ್ಯನ ತಾಪಕ್ಕೇ ಬೆಂದು ಹೋಗುತ್ತಿದೆ, ಹಸಿರೆಲ್ಲಾ ಒಣಗಿದೆ, ನದಿಗಳೆಲ್ಲಾ ಬತ್ತಿವೆ, ಮೋಡಕ್ಕೆ ದಯೆ ಮಾಡಿ ಮಳೆ ಸುರಿಸು ಎಂದು  ಬೇಡುವಂತಿದೆ.‘ಬಾ ಬಾ ಮಂಗಣ್ಣಪುಟ್ಟ ಮಗುವೊಂದು ಮಗನ ಚೇಷ್ಟೆಗಳಿಂದ ಬೇಸತ್ತು ಅತ್ಯಂತ ವಿನಯ ಹಾಗೂ ಜಾಣ್ಮೆಯಿಂದ ಮಂಗನೊಂದಿಗೆ ನಡೆಸುವ ಸಂವಾದವಿದು.

               ಅಪ್ಪನ ಹೊಲದಲಿ ಪದ್ಯವು ಅನ್ನದಾತನ ನಿಸ್ವಾರ್ಥ ಶ್ರಮ ಲೋಕಕ್ಕೆ ಉಣಬಡಿಸುವ ಅವನ ಕಾಯಕವು ಅತ್ಯುನ್ನತ ಸ್ಥಾನದಲ್ಲಿದೆ. ಆತನ ಪರಿಶ್ರಮವನ್ನು ಗೌರವಿಸುವ ಆತನ ಮಗನೂ ಸಹ ದುಡಿಯುವ ಪಣತೊಟ್ಟು ವೈಜ್ಞಾನಿಕ ಪದ್ದತಿ ಅನುಸರಿಸಿ ಸಫಲತೆಯ ಸಾಧಿಸುವ ಹಾದಿಯಲ್ಲಿ ನಿಷ್ಟೆಯಿಂದ ದುಡಿಯುವೆ ಎಂದು ಹೇಳಿದ್ದಾನೆ.‘ಇನ್ನೂ ಎಷ್ಟು ಓದಲಪ್ಪಾ’ ? ಪುಸ್ತಕದೊಳಗೇ ಮಕ್ಕಳನ್ನು ಹೂತುಬಿಡುವ ಪೋಷಕರಿಗೆ ಕಣ್ತೆರೆಸುವ ಪ್ರಯತ್ನವಾಗಿದೆ ಪದ್ಯ.

          ರೋಬೋಟಣ್ಣಾಯಂತ್ರಾವೃತ ಪ್ರಪಂಚದಲ್ಲಿ ರೋಬೋಟ್ ಗಳ ಪಾತ್ರವೂ ಅತ್ಯಂತ ವಿಸ್ಮಯವಾಗಿದೆ ಇಂದು.ಅಂತಹುದರಲ್ಲಿ ಇಲ್ಲಾ ಕಾರ್ಯಗಳನ್ನು ಅತ್ಯಂತ ಚಾಕುಚಕ್ಯತೆಯಿಂದ ಮಾಡುವ ರೋಬೋಟ್ಗೆ ಶಕ್ತಿತುಂಬಲು ಚಾಲನೆ ನೀಡಲು ಮನುಷ್ಯನೇ ಬೇಕು.“ನಮ್ಮಯಶಾಲೆಮಕ್ಕಳೆಲ್ಲರೂ ಕೂಡಿನಲಿಯುವ ಮಂದಿರ ಗುರುಶಿಷ್ಯರ ಸಮಾಗಮದ ತಾಣ. ಮಕ್ಕಳ ಶಾಲೆಯ ಸಂಭ್ರಮ ಬಿಂಬಿತವಾಗಿದೆ.“ಮಗನ ಪ್ರಶ್ನೆಅಮ್ಮನಿಗೆ ಕಷ್ಟ ಆದರೂ ಅಮ್ಮ ಮುದ್ದಾಗಿ ತಿದ್ದಿ ಹೇಳಿದ ಬುದ್ದಿಮಾತು ಅತ್ಯಂತ ಮುಕ್ತ. ಅದಕೂ ಹಾಕಿದ ಮರುಪ್ರಶ್ನೆಯ ಬೇಡಿ ವಿಚಲಿತಳಾಗದೆ ಅಮ್ಮ ಸ್ರಷ್ಟಿಯ ನಿಯಮಗಳ ತಿಳಿಹೇಳಿದಳು. ಜಾಣಮರಿ ಎಂದು ಮಗನನು ಉಬ್ಬಿಸಿ ಪ್ರಶ್ನೆಗಳಿಗೆ ವಿರಾಮ ಹಾಕಿದಳು.‘ಮೊಬೈಲ್ ಗೀಳಿನಿಂದ ಹೊರನಡೆದ ಮಗು ಹೊ ಪ್ರಪಂಚವನ್ನು ಕಾಣುವ ಹಂಬಲವನ್ನು ತಾಯಿಯ ಬಳಿ ಹಂಚಿಕೊಂಡಿದೆ.

          ನನ್ನ ಸಂತೆಮಗುವೊಂದು ಅಮ್ಮನೊಟ್ಟಿಗೆ ಸಂತೆಗೆ ಹೋಗಿ ಶಾಲೆಯ ವಿಜ್ನಾನದಪಾಠವ ನೆನಪಿಸಿಕೊಂಡು ತರತರದ ಸತ್ವಯುತ ತರಕಾರಿ,ಹಣ್ಣು,ದ್ವಿದಳಧಾನ್ಯಗಳನ್ನು ಕೊಂಡುಕೊಂಡು ಬೆಲೆಗಿಂತಲೂಆರೋಗ್ಯವೇ ಭಾಗ್ಯಎಂದು ಬೀಗುತ್ತಾ ಮನೆಗೆ ಹಿಂದಿರುಗಿದೆ.‘ಯುದ್ಧಗಳೇಕೆ ಬೇಕಪ್ಪಾಯುದ್ಧ ಎಂದರೇನು ಎಂಬುದರ ಹೊಸ ಪರಿಚಯವಾದಾಗ ತನ್ನ ಸರಳಪ್ರಶ್ನೆಯೊಂದಿಗೆ ತಂದೆಯೊಡನೆ ನಡೆಸುವ ಸಂವಾದ ಹಾಗೂ ಯುದ್ಧದ ಭಯ ಮಗುವನ್ನೂ ಭಯಭೀತವಾಗಿಸಿದ್ದು ಅತ್ಯಂತ ಭೀಕರವಾಗಿದೆ. ವಿಶ್ವಶಾಂತಿಯ ಮಂತ್ರ ಮಗುವಿಗೂ ಅರಿವಿದೆ ಆದರೆ ರಾಷ್ಟ್ರನಾಯಕರಿಗಿಲ್ಲವಾಗಿದೆ.

          ಭೀಮಲೀಲೆಡಾ|ಬಿ.ಆರ್.ಅಂಬೇಡ್ಕರ್ ಅವರ ಜೀವನ ಬಹಿಷ್ಕತ ಬದುಕು,ಬಡತನದ ಬೇಗೆ, ಅಜ್ಞಾನದ ಅಂಧಕಾರಗಳಿಂದ ತುಂಬಿದ್ದರೂ ಅವೆಲ್ಲವನ್ನೂ ಮುಟ್ಟಿನಿಂತ ದಿಟ್ಟ ಬಾಲಕನ ಕತೆಯನ್ನು ಮಕ್ಕಳಿಗೆ ಮನಮುಟ್ಟುವಂತೆ ಚಿತ್ರಿಸಿದ್ದಾರೆ ಲೇಖಕರು. ಮಗುವೊಂದು ಅಮ್ಮಅಮ್ಮನ ನಡುವಿನ ಇರಿಸು ಮುರಿಸುಗಳನ್ನು ಗಮನಿಸಿ ತನ್ನಭಾವದಲ್ಲಿ ಅಪ್ಪನಿಗೆ ತನ್ನ ತಪ್ಪಿನ ಅರಿವುಮೂಡಿಸುವಂತಿದೆ.ಬಸವನ ಓದು ಶಾಲೆಯ ಬಗೆಗಿನ ನಿರಾಸಕ್ತಿ ಹಾಗೂ ಊರಿಗೆ ಉಪಕಾರಮಾಡುವ ಉದಾರಗುಣ ಇಲ್ಲಿ ಪಾರದರ್ಶಕವಾಗಿದೆ, ಅಂತೆಯೇ ಅವನ ಅಜ್ಞಾನದಿಂದಾಗಬಹುದಾದ ಅನಾಹುತಗಳ ಚಿತ್ರಣವೂ ಇದೆ.ಇದರಿಂದ ನಾಳಿನ ಒಳಿತಿಗೆ ಇಂದು ಶಾಲೆಗೆ ಬನ್ನಿ ಮಕ್ಕಳೇ…… ಎಂದು ಕರೆ ನೀಡಿದ್ದಾರೆ.ಕಾಡಿನ ಹಣ್ಣುಗಳ ಪರಿಚಯ, ವಿಭಿನ್ನ ರುಚಿಗಳನ್ನು ವಿವರಿಸುತ್ತಾ ಲೇಖಕರು ಕರ್ನಾಟಕದ ವಿವಿಧ ಸೀಮೆಗಳನ್ನು ಪರಿಚಯಿಸಿದ್ದಾರೆ.

          ಜೀವ ವ್ಯವಸ್ಥೆಯಲ್ಲಿ ಒಂದನ್ನೊಂದು ತಿಂದು ಬದುಕುವ ಪರಿಯಿದೆ. ಆದರೆ ವಿವೇಚನಾಶೀಲ ಮಾನವನಿಗೆ ಇದು ಅನಿವಾರ್ಯವಲ್ಲ ಜೀವಿಸು ಜೀವಿಸಲು ಬಿಡು ಎಂಬ ನುಡಿ ಇಲ್ಲಿ ಪ್ರಸ್ತುತವಾಗಿದೆ.ಪ್ರಮಾಣ ಪತ್ರದ ಗೀಳಿನಲ್ಲಿ ಮಕ್ಕಳನ್ನು ಮುಳುಗಿಸಿರುವ ಪೋಷಕರಿಗೆ ನೊಂದ ಮಕ್ಕಳು ಅಳಲು ತೋಡಿಕೊಳ್ಳುತಿದ್ದಾರೆ. ಪ್ರಮಾಣಪತ್ರವಿರದೆ ಬದುಕಲಾಗದೇ ಎಂದು ಪ್ರಶ್ನಿಸಿದ್ದಾರೆ.ಬಾಲಸಾಹಿತ್ಯ ಎಂಬುದು ಹೆಸರಿಗಷ್ಟೆ, ಆದರೆ ಬಾಲ ಪದ್ಯಸಾಹಿತ್ಯದ ಮೂಲಕ ಲೇಖಕರು ಮುಗ್ದ ಮಕ್ಕಳಿಗೆ ಅರ್ಥವಾಗುವ ಸರಳಸುಂದರ ಭಾಷೆಯಲ್ಲಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದ್ದಾರೆ. ಮಕ್ಕಳಲ್ಲಿ ಸಾಮಾಜಿಕ ಕಳಕಳಿಯ ಬಾವನೆಯು ಮೊಳೆಯಲು ಕಾರಣರಾಗಿದ್ದಾರೆ ಎಂದರೆ  ತಪ್ಪಾಗಲಾರದು.

          ಲೇಖಕರ ಪರಿಶ್ರಮ ನಿಜಕ್ಕೂ ಶ್ಲಾಘನೀಯ ಅದಕ್ಕೆ ಪೂರಕವಾಗಿ ನಾವು ನಮ್ಮ ಮಕ್ಕಳನ್ನು ಸಾಹಿತ್ಯ ಓದಲು ಹಾಗೂ ಬರೆಯಲು ತೊಡಗುವಂತೆ ಪ್ರೇರೇಪಿಸುವ ವಾಗ್ದಾನದೊಂದಿಗೆ ನನ್ನ ಸಾಲುಗಳನ್ನು ಮುಗಿಸುತಿದ್ದೇನೆ.

ವಂದನೆಗಳೊಂದಿಗೆ

ಭವ್ಯಬಡಗೇರ

shivamogga

         

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...