ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 25 December 2020

ಅಪ್ಪ ನೀನೆಷ್ಟು ಅದ್ಭುತ

‘ಚಿತ್ರ.ಕವನ ಆರ್ ಮಂಡಗಳಲೆ

ಪ್ರೇರಣೆಯ ಮಣಿ’ ಅಂಕಣ

                    ಮಕ್ಕಳ ಕಥೆ

      ಅಪ್ಪಾ! ನೀನೆಷ್ಟು ಅದ್ಭುತ,,, !!!!

                                     :-ವೀರೇಶ ಮಾಶೆಟ್ಟಿ

                     ಸುತ್ತಲೂ ಹಚ್ಚಹಸಿರಿನಿಂದ ಕೂಡಿರುವ ಕಾನನದ ಐಸಿರಿ. ಅದರ ಮಧ್ಯದಲ್ಲಿ ವಿರಳ ಸಂಖ್ಯೆಯ ಜನ ವಾಸಿಸುವ ಮನೆಗಳು. ಆ ಮನೆಗಳು ಒಂದಕ್ಕೊಂದು ಕೂಗು ಕೇಳಸದ ಅಂತರದಲ್ಲಿದ್ದವು. ಇಂತಹ ಚಿಕ್ಕ ಚಿಕ್ಕ ಮನೆಗಳ ಸಮೂಹದಲ್ಲಿ ಸುಬ್ರಹ್ಮಣ್ಯ ಹಾಗೂ ಅವನ ಹೆಂಡತಿ ತಮ್ಮೆರಡು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದರು. ಸುಬ್ರಹ್ಮಣ್ಯ  ಉದರ  ಉಪಜೀವನಕ್ಕಾಗಿ ಕೂಲಿ ಕೆಲಸದ ಮೇಲೆ ಅವಲಂಬಿತನಾಗಿದ್ದ. ಪ್ರತಿದಿನ ಇನ್ನೊಬ್ಬರ ಹೊಲಕ್ಕೆ ಕೆಲಸಕ್ಕೆ ಹೋಗಿ ದುಡಿದು ಬರುವಾಗ ಕೈಯಲ್ಲಿ ಮಕ್ಕಳಿಗೆ ಹಣ್ಣು-ಹಂಪಲಗಳನ್ನು ತರುತ್ತಿದ್ದ. ಮಕ್ಕಳು ತಂದೆಯ ಉತ್ತಮ ಸಂಸ್ಕಾರ ಹಾಗೂ ತಾಯಿಯ ಶ್ರದ್ಧೆ ಮಕ್ಕಳಲ್ಲಿ ಅನುಕರಣೆಗೆ ಪೂರಕವಾಗಿದ್ದವು. ತಂದೆಯ ಅವಿರತ ದುಡಿಮೆ ಕಂಡು ಮಗನಿಗೂ “ನಾನು ಏನಾದರೂ ಕುಟುಂಬಕ್ಕೆ ಸಹಾಯ ಮಾಡಬೇಕೆಂದು” ಆಸೆ ಚಿಗುರಿತು. ಮಕ್ಕಳು ದಿನನಿತ್ಯ ಶಾಲೆಗೆ ಹೋಗುವುದರೊಂದಿಗೆ ಕಲಿಕೆಯಲ್ಲಿಯೂ ಚುರುಕಾಗಿದ್ದವು. ಸುಬ್ರಹ್ಮಣ್ಯನ ಮಗ ಕಲ್ಮೇಶನು ಮತ್ತೊಬ್ಬರ ಹೊಲಗಳಿಗೆ ಹೋಗಿ ಹೊಲದ ಬದಿಯಲ್ಲಿ ಕಸವಾಗಿ ಬೆಳೆದಿರುವ ‘ಹಾತರಕಿ,ಕಿರಿಸಾಲೆ’ ಹಾಗೂ ಇನ್ನೀತರ ಪಲ್ಲೆಗಳ ಸಸಿಗಳನ್ನು ಕಿತ್ತುಕೊಂಡು ಮನೆಗೆ ಬಂದು ‘ಸೂಡು’ಗಳನ್ನು ಮಾಡಿ ನೆರೆಯ ಪಟ್ಟಣಕ್ಕೆ ಹೋಗಿ ಮಾರಿಕೊಂಡು ಬರುತ್ತಿದ್ದ. ಬಂದ ಅಲ್ಪ ಹಣವನ್ನು ತಾಯಿಯ ಹತ್ತಿರ ಕೊಡುತ್ತಿದ್ದ. ಕೆಲವೇ ಕ್ಷಣಗಳಲ್ಲಿ ಸ್ನಾನ ಮುಗಿಸಿ,ದೇವರಿಗೆ ನಮಸ್ಕರಿಸಿ ಮತ್ತೆ ಶಾಲೆಗೆ  ಬರುತ್ತಿದ್ದ. ಶಾಲೆಯಲ್ಲಿಯೂ ಗೆಳೆಯರೊಂದಿಗೆ  ಸ್ನೇಹದಿಂದ, ಗುರುಗಳೊಂದಿಗೆ ವಿನಯದಿಂದ ಇರುತ್ತಾ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದ.
                                                              ಹೀಗೆ ಕೆಲವು ದಿನಗಳ ನಂತರ ಒಂದು ದಿನ ಮಗಳು ಶಾರದೆಗೆ ವಿಪರೀತ ಜ್ವರ ಬಂದ ಕಾರಣ ಸುಬ್ರಹ್ಮಣ್ಯ ವೈದ್ಯರಿಗೆ ತೋರಿಸಿ ಕರೆದುಕೊಂಡು ಬಂದನು.ಸುಬ್ರಹ್ಮಣ್ಯನಿಗೆ ಸಮಾಧಾನವಿರದ ಕಾರಣ ಕೆಲಸ ಬಿಟ್ಟು ಮನೆಯಲ್ಲಿ ಅವಳ ಪಕ್ಕದಲ್ಲಿಯೇ ಇದ್ದು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ. ಹೀಗಿರುವಾಗ ಮಗನು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ. ಮನೆಯ ಸಮೀಪದಲ್ಲೇ ಬರುತ್ತಿರುವಾಗ ದೂರದಲ್ಲಿ ಹಸಿವಿನ ದಾಹ ಇಮ್ಮಡಿಯಾಗಿ ಆಹಾರಕ್ಕಾಗಿ ಅರಚುತ್ತಾ ತಿರುಗುತ್ತಿತ್ತು. ಒಂದು ದುಷ್ಟ ವ್ಯಾಘ್ರವು ಆತನನ್ನು ನೋಡಿ ಹೊಂಚುಹಾಕುತ್ತಾ ಹಿಂಬಾಲಿಸತೊಡಗಿತು. ದೂರದಿಂದ ಅದನ್ನು ನೋಡಿದ ಸುಬ್ರಹ್ಮಣ್ಯ ಗಾಬರಿಯಿಂದ  ಹೆಂಡತಿಯು ಕಾಯಿಪಲ್ಲೆಯನ್ನು ಕತ್ತರಿಸುತ್ತಿದ್ದ ಈಳಿಗೆಯನ್ನು ಹಿಡಿದುಕೊಂಡು ವೇಗವಾಗಿ ಮಗನ ಹತ್ತಿರಕ್ಕೆ ಬಂದ. ಆದರೆ  ಹಸಿದ ವ್ಯಾಘ್ರವು ಮಗನ ಮೇಲೆ ಹಾರಿತು. ಅಷ್ಟರಲ್ಲಿ ಮಗನ ಜೀವ ಉಳಿಸಲು ಸುಬ್ರಮಣ್ಯನು ಮಗ ಕಲ್ಮೇಶನನ್ನು ಎತ್ತಿಕೊಂಡು  ಆತನನ್ನು ಮನೆಯ ಒಳಗಡೆ ನೂಕಿ ಮನೆಯ ಬಾಗಿಲನ್ನು ಮುಚ್ಚುವಷ್ಟರಲ್ಲಿ  ಕೋಪಿಷ್ಟ ವ್ಯಾಘ್ರವು ತನ್ನ ಬೆನ್ನ ಮೇಲೆ ಹಾರಿತು. ಒಂದು ಕಡೆ ಬಲಗೈಯಲ್ಲಿರುವ ಈಳಿಗೆಯನ್ನು ಹಿಡಿದರೂ ಹುಲಿಯ ಅಬ್ಬರದ ಬಾಯಿಗೆ ಸಹಾಯಕ್ಕೆ ಬರಲಿಲ್ಲ. ಆತನ ಬೆನ್ನಿನ ಗಾಯದ ರಕ್ತದ ಕೋಡಿ ಹರಿಯುತ್ತಿತ್ತು. ಜೊತೆಗೆ ಗಂಡನ ಮುಖದ ತುಂಬ ಸುರಿಯತ್ತಿರುವ ರಕ್ತವನ್ನು ಕಂಡು ಕಿಟಕಿಯಲ್ಲಿ ನೋಡುತ್ತಿರುವ ಹೆಂಡತಿ, ಮಕ್ಕಳು ಅಳುತ್ತಾ ಜೋರಾಗಿ ಸಹಾಯಕ್ಕಾಗಿ ಕೂಗಿದರು. ಅವರ ಕೂಗು ದೂರ ದೂರದಲ್ಲಿರುವ ಜನರ ಕಿವಿಗೆ ಕೇಳದೇ ಅರಣ್ಯ ರೋಧನವಾಗಿತ್ತು.

  ಈ ಕಡೆ ಸುಬ್ರಹ್ಮಣ್ಯ ಹುಲಿಯಿಂದ ಜೀವ ಉಳಿಸಿಕೊಳ್ಳಲು ಅಸಾಧ್ಯವಾಯಿತು. ಕೊನೆಗೆ ಮನೆಯ ಎಡಬದಿಯಲ್ಲಿ ಮುಳ್ಳಿನ ಪೊದರಿನಲ್ಲಿ ಅವಿತುಕೊಂಡನು. ರಕ್ಕಸ ಹಸಿವಿನಲ್ಲಿರುವ ಹುಲಿಯೂ ಕಾಲುಗಳ ಮೂಲಕ ಮುಳ್ಳುಗಳನ್ನು ಸರಿಸಲು ತೊಡಗಿತು. ಇದನ್ನು ನೋಡಿದ ಹೆಂಡತಿ ಗಾಬರಿಯಿಂದ ಗಂಡನ ಜೀವ ಹೋಯಿತೆಂದು  ಜೋರಾಗಿ ರೋಧಿಸುತ್ತಿರುವಾಗ ಕ್ಷಣದಲ್ಲಿ ಒಂದು ಉಪಾಯ ಹೊಳೆಯಿತು. ಕೆಳಗೆ ಬಿದ್ದಿರುವ ಒಂದು ಕೋಲನ್ನು ತೆಗೆದುಕೊಂಡು ಅದಕ್ಕೆ ಬಟ್ಟೆಯನ್ನು ಸುತ್ತಿ ಸೀಮೆಯನ್ನು ಸುರಿದು ಕಿಟಕಿಯ ಹೊರಗೆ ಅದಕ್ಕೆ ಬೆಂಕಿಹಚ್ಚಿದಳು. ಧಗಧಗನೆ ಉರಿಯುವ ಹೀಲಾಲನ್ನು ಕಿಟಕಿ ಮೂಲಕ ಗಂಡನ ಬದಿಯಲ್ಲಿ ಎಸೆದಳು. ಗಂಡನು ಅದನ್ನು ಹುಷಾರಾಗಿ ಬಲಗೈಯಲ್ಲಿ ಹಿಡಿದುಕೊಂಡು ಜೀವದ ಕೊನೆಯ ಪ್ರಯತ್ನವೆಂದು ಮುಳ್ಳುಕಂಟಿಯಿಂದ ಹೊರಗೆ ಬಂದನು. ಧಗಧಗಿಸುವ ಚಿತೆಯನ್ನು ವ್ಯಾಘ್ರನತ್ತ ತೋರಿಸಿದನು.ಎಡಗೈಲಿ ಈಳಿಗೆ ಬಲಗೈಯಲ್ಲಿ ಬೆಂಕಿ ನೋಡಿ ತನ್ನ ಜೀವ ಉಳಿಯುವುದಿಲ್ಲ ಎಂಬ ಭಯದಿಂದ ಅದು ಹೆಜ್ಜೆಗಳನ್ನು ಹಿಂದಕ್ಕೆ ಸರಿಯ ತೊಡಗಿತು. ಕ್ಷಣದಲ್ಲಿ ಕಾಡಿನತ್ತ ಓಡತೊಡಗಿತು. ಜೀವ ಉಳಿಸಿಕೊಂಡ ಸುಬ್ರಹ್ಮಣ್ಯ ನಿಟ್ಟುಸಿರುಬಿಟ್ಟ. ಮನೆಯಿಂದ ಹೊರಗೆ ಬಂದ ಹೆಂಡತಿ ಮಕ್ಕಳು ಆನಂದಭಾಷ್ಪದೊಂದಿಗೆ ರಕ್ತದ ಚಾಮರದಲ್ಲಿರುವ ಗಂಡನನ್ನು ತಬ್ಬಿಕೊಂಡರು.

               
 ಹೀಗೆ ಮಗನಿಗಾಗಿ ಜೀವ ತ್ಯಾಗಮಾಡಲು ಮುಂದಾದ ತಂದೆ, ಗಂಡನ ಉಸಿರಿಗೆ ಕುತ್ತು ಬಂದಾಗ ಬುದ್ಧಿಕೌಶಲ್ಯ ತೋರಿದ ಹೆಂಡತಿ.ಇAತಹ  ಕುಟುಂಬ ನಮಗೆಲ್ಲಾ ಪ್ರೇರಕವಾಗಿದೆ.


ನೀತಿ:ಜೀವನದಲ್ಲಿ ಧೈರ್ಯ ಜೊತೆಗೆ ಕೌಶಲ್ಯವಿದ್ದರೆ ಯಾವುದೇ ಅಪಾಯವನ್ನು ಎದುರಿಸಬಹುದು

                                                             ***************

                    :-ವೀರೇಶ ಮಾಶೆಟ್ಟಿ ನಿಡಗುಂದಿ

  ವಿಜ್ಞಾನ ಶಿಕ್ಷಕರು,ಸಾಹಿತಿ ಹಾಗೂ ಲೇಖಕರು
 (ಸ.ಹಿ.ಪ್ರಾ.ಶಾ ಹುಲ್ಲೂರ ಎಲ್.ಟಿ ತಾ||ಮುದ್ದೇಬಿಹಾಳ)                                                                   8105672142

No comments:

Post a Comment