ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 22 November 2019

ನಾ ಡಿಸೋಜಾ ಅವರ ಒಂದು ಸಣ್ಣ ಕಥೆ...

** ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕುಳಿತವ **

ಕಲ್ಲು ಮತ್ತು ಸಿಮೆಂಟಿನ ಬೃಹತ್ ಕಪ್ಪು ಗೋಡೆಗೆ ಮೈಯೊತ್ತಿ ನಿಂತ ಜಲಸಾಗರದ ಅಂಚಿನಲ್ಲಿಯೇ, ಆತ ತನ್ನ ವಾಹನದಲ್ಲಿ ಕುಳಿತು ಅಷ್ಟು ದೂರ ಹೋದ. ರಸ್ತೆ ಸಂಪೂರ್ಣ ನಿರ್ಜನವಾಗಿತ್ತು. ಯಾವುದೇ ವಾಹನದ ಓಡಾಟವಿಲ್ಲದೆ ಹಾಳು ಬಿದ್ದಿತ್ತು. ಅಲ್ಲಲ್ಲಿ ಬಿದ್ದ ಎಲೆ ಟೊಂಗೆಗಳು ರಸ್ತೆಯ ಏಕಾಂತಕ್ಕೆ ಕನ್ನಡಿ ಹಿಡಿದ ಹಾಗೆ ಕಾಣುತ್ತಿತ್ತು. ಅದು ಯಾವತ್ತೋ ಮಾಡಿದ ರಸ್ತೆ, ಮತ್ತೆ ರಿಪೇರಿಯನ್ನೇ ಕಾಣದೆ ಹಾಳು ಹಾಳು ಸುರಿಯುತ್ತಿತ್ತು. ರಸ್ತೆಗೆ ಹಾಕಿದ ಕಪ್ಪು ಡಾಮರು, ಅದು ಒಂದು ಕಾಲದಲ್ಲಿ ವೈಭವದಿಂದ ಮೆರೆದ ರಸ್ತೆ ಎಂಬುದನ್ನು ಸಾರಿ ಹೇಳುತ್ತಿದ್ದರೂ ಇಂದು ಅದು, ತನ್ನ ಗತ ಕಾಲದ ಅವನತಿಯ ಸಂಕೇತವಾಗಿ ನಿಂತಿತ್ತು.

ಆ ಕೃತಕ ಜಲಾಶಯ ಮೌನವಾಗಿ ನಿಂತ ಕಾಡು ಗುಡ್ಡಗಳ ನಡುವೆ, ಸದ್ದಿಲ್ಲದೆ ಬೀಸುವ ಗಾಳಿಯ ನಡುವೆ ತಾನು ಅಲ್ಲಿ ನೂರಾರು ವರ್ಷಗಳಿಂದ ಇದ್ದೇನೇನೋ ಎಂಬಂತೆ ಪರಿಸರದೊಡನೆ ಒಂದಾಗಿತ್ತು. ನೀರಿನೊಳಗೆ ನಿಂತ ಗುಡ್ಡಗಳು, ನೀರಿನ ಅಂಚಿನ ಕಾಡು, ನೀರಿನಲ್ಲಿ ಉಳಿದು ಚಿಗುರಿಕೊಂಡ ಮರಗಳು, ನೀರಿನಲ್ಲಿ ತಮ್ಮನ್ನು ನೋಡಿಕೊಂಡು ಹಾರುತ್ತಿದ್ದ ಹಕ್ಕಿಗಳು, ಎಲ್ಲ ಜಲಾಶಯದೊಡನೆ ಏನೋ ಸಂಬಂಧ ಬೆಳೆಸಿಕೊಂಡಂತೆ ಇವನಿಗೆ ಕಂಡಿತು.

ಅಲ್ಲಲ್ಲಿ ತನ್ನ ವಾಹನವನ್ನ ನಿಲ್ಲಿಸಿ ಈತ ಜಲಾಶಯವನ್ನ ನೋಡಿದ. ಹೆಪ್ಪುಗಟ್ಟಿ ನಿಂತ ನೀರಿನಲ್ಲಿ ಸಣ್ಣಗೆ ಅಲೆಗಳು ಏಳುತ್ತಿದ್ದವು. ಅಕ್ಕಪಕ್ಕದ ಗುಡ್ಡ ಕಾಡನ್ನು ನೀರು ತನ್ನಲ್ಲಿ ಪ್ರತಿಬಿಂಬಿಸುತ್ತ ಯಾರೂ ನೋಡದ ಒಂದು ಚಿತ್ರವನ್ನ ಬರೆಯುತ್ತಿರುವಂತೆ ಅನಿಸಿತು,.

ಹಾಗೆಯೇ ಇಂಥದ್ದೆಂದು ಹೇಳಲಾಗದ ಒಂದು ವಿಚಿತ್ರ ಬೇಗುದಿ ಅಲ್ಲೆಲ್ಲ ವ್ಯಾಪಿಸಿಕೊಂಡಿರುವುದನ್ನ ಈತ ಗಮನಿಸಿದ. ಈ ಮುಳುಗಡೆ ಪ್ರದೇಶಕ್ಕೆ ಬಂದ ಕ್ಷಣದಿಂದ ಆತ ಇದನ್ನು ಅನುಭವಿಸುತ್ತ ಬಂದಿದ್ದ. ಆ ಪ್ರದೇಶದಲ್ಲಿ ಮುಳುಗಡೆಯಾಗದೇ ಉಳಿದ ಜನ, ಮನೆ, ಹಳ್ಳಿಗಳು ಸಾಕಷ್ಟು ಇದ್ದವು. ಇಂತಹಾ ಸಾವಿರಾರು ಜನರ ವರ್ತನೆಯಲ್ಲಿ, ಮಾತಿನಲ್ಲಿ, ಬದುಕಿನಲ್ಲಿ, ನಿತ್ಯದ ವ್ಯವಹಾರದಲ್ಲಿ ತಟ್ಟನೆ ಗುರುತಿಸಲಾಗದ ಒಂದು ನೋವು, ತಳಮಳ ಅವನ ಗಮನಕ್ಕೆ ಬಂದಿತ್ತು. ಅದೇ ಬಗೆಯ ಒಂದು ಉಸಿರು ಬಿಗಿ ಹಿಡಿಯುವ ಪರಿಸ್ಥಿತಿಯನ್ನು ಆತ ಹಿನ್ನೀರಿನ ಈ ಅಂಚಿನಲ್ಲೂ ಕಂಡ.

ಈತ ಹೀಗೆ ಹೋಗುತ್ತಿರುವಾಗ ಒಂದು ಬಗೆಯ ಭೀತಿ ಇವನನ್ನೂ ಬಂದು ಆವರಿಸಿಕೊಂಡಿತು. ಎಲ್ಲ ಕಡೆಯೂ ಕವಿದುಕೊಂಡ ಮೌನ ಇವನನ್ನು ಬಾಧಿಸಿತು. ಆಗೊಮ್ಮೆ, ಈಗೊಮ್ಮೆ ಕೂಗುವ ಹಕ್ಕಿಯ ಸದ್ದು, ಮರದ ರೆಂಬೆಗೆ ತನ್ನ ಮೈಯುಜ್ಜುವ ಅದೇ ಮರದ ಇನ್ನೊಂದು ಕೊಂಬೆಯ ಕೀರಲು ದನಿ, ದೂರದಲ್ಲಿ ಬೊಗಳುತ್ತಿರುವ ಒಂದು ನಾಯಿ...ಇಷ್ಟನ್ನು ಬಿಟ್ಟರೆ ಬೇರೊಂದು ಸದ್ದು ಅಲ್ಲಿ ಇಲ್ಲದ್ದರಿಂದ ಈತ ಕೊಂಚ ಆತಂಕಗೊಂಡ. ಜತೆಗೆ ಗೋಡೆಯಂತೆ ಒಂದು ಕಡೆ ನಿಂತ ಕಾಡು, ಮತ್ತೊಂದು ಕಡೆ ಮಡುಗಟ್ಟಿದ ನೀರು. ಇದೆಲ್ಲವನ್ನ ತನ್ನ ಕಕ್ಷೆಯಲ್ಲಿ ತೆಗೆದುಕೊಂಡಂತಿದ್ದ ಬಿಸಿಲು. ಆತ ಕಾರಿನಲ್ಲಿ ಕುಳಿತೇ ಭಯಭೀತನಾದ. ಒಂದು  ಬಗೆಯ ಆತಂಕಕ್ಕೆ ಒಳಗಾದ.

ಸದಾ ಗದ್ದಲ, ಗೌಜಿಯಲ್ಲಿಯೇ ಬದುಕುವ ತನಗೆ ಈ ಮೌನ ವಿಚಿತ್ರವೆನಿಸಿ, ಯಾರಾದರೂ ಜನ ತನ್ನ ಕಣ್ಣಿಗೆ ಬೀಳಬಹುದೆ ಎಂದು ಹುಡುಕಾಡಿದ. ಬಹಳ ದೂರದಿಂದ ಆಣೆಕಟ್ಟಿನ ಹಿನ್ನೀರಿನಲ್ಲಿ ಹಾದು ಬಂದರೂ ಒಂದು ನರಪಿಳ್ಳೆ ಎದುರಾಗದೇ ಇದ್ದುದು ವಿಚಿತ್ರವೆನಿಸಿತು. ಏನು ಈ ಪ್ರದೇಶದಲ್ಲಿ ಜನರೇ ಇಲ್ಲವೇ ಎಂದು ಗಾಬರಿಗೊಂಡ.

ಆಗ ದೂರದಲ್ಲಿ, ಜಲಾಶಯದ ದಂಡೆಯ ಮೇಲೆ, ಕಾಡಿನ ಹಸಿರು ಹಾಗೂ ನೀರಿನ ನೀಲಿಯ ನಡುವೆ ಅದಾರೋ ಕುಳಿತಿರುವುದು ಅವನ ಗಮನಕ್ಕೆ ಬಂದು ಕೊಂಚ ನಿಟ್ಟುಸಿರುಬಿಟ್ಟ.
ಕಾರಿನ ವೇಗವನ್ನ ಕಡಿಮೆ ಮಾಡಿ ಆ ವ್ಯಕ್ತಿಯ ಬಳಿ ತನ್ನ ಕಾರನ್ನ ನಿಲ್ಲಿಸಿದ.

ಕೆಳಗೆ ಕಣಿವೆಯಲ್ಲಿ ನೀಲಿ ನೀರು ಮೈಚಾಚಿ ಮಲಗಿದ್ದರೆ, ಮೇಲೆ ಒಂದು ದಿಣ್ಣೆ. ಅದರ ಮೇಲೆ ಅನ್ಯಮನಸ್ಕನಾಗಿ ಈ ಕಂಬಳಿ ಧರಿಸಿದ ವ್ಯಕ್ತಿ ಕುಳಿತಿದ್ದ. ತನ್ನ ಹಿಂದೆ ಒಂದು ಕಾರು ಬಂದು ನಿಂತದ್ದು ಅವನ ಗಮನಕ್ಕೆ ಬಂದಂತಿರಲಿಲ್ಲ. ಆತ ದೂರದಲ್ಲಿಯ ನೀರಿನಲ್ಲಿ ದೃಷ್ಟಿ ನೆಟ್ಟು ಕುಳಿತಿದ್ದ.

ಈತ ಕಾರಿನ ಹಾರ್ನ್ ಮಾಡಿದ. 'ಅಯ್ಯಾ' ಎಂದು ಕರೆದ. ಆ ವ್ಯಕ್ತಿ ತನ್ನನ್ನು ಗಮನಿಸದೇ ಹೋದಾಗ ಕಾರಿನ ಬಾಗಿಲು ತೆರೆದು ಕೆಳಗೆ ಇಳಿದ.
ನೇರವಾಗಿ ಅವನ ಮುಂದೆ ಹೋಗಿ ನಿಂತಾಗ ಆತ ಇವನನ್ನು ಗಮನಿಸಿದ ಹಾಗೆ ಇವನತ್ತ ತಿರುಗಿದ.

ಅವನ ಮುಖ ನೋಡಿ ಇವನ ಎದೆ ಧಸ್ ಎಂದಿತು. ಆತ ತನ್ನ ಮೈಯನ್ನು ಕಂಬಳಿ ಕೊಪ್ಪೆಯೊಂದರಲ್ಲಿ ಮುಚ್ಚಿ ಇರಿಸಿಕೊಂಡಿದ್ದ. ಕೈಗಳು ಕಾಣದ ಹಾಗೆ, ಮೈ ಕಾಣದ ಹಾಗೆ, ಮುಖ ಒಂದೇ ಕಾಣುವಂತೆ ಕಂಬಳಿಯನ್ನು ಮೈಗೆ ಸುತ್ತಿಕೊಂಡಿದ್ದ. ಅವನ ಮುಖದ ಮೇಲೆ ಬಹಳ ದಿನಗಳ ಹರಿತವಾದ ಗಡ್ಡವಿತ್ತು. ಕಿವಿಗಳಲ್ಲಿಯ ಒಂಟಿಗಳು ಮುಚ್ಚಿಕೊಂಡ ಕಂಬಳಿಯಿಂದ ಹೊರಬಂದು ಕಾಣಿಸಿಕೊಂಡವು. ತಾನು ಬದುಕಿರುವ ಕಾಲದಿಂದ ದೂರವಾದ ಯಾವುದೋ ಕಾಲದ ಓರ್ವ ವ್ಯಕ್ತಿಯ ಹಾಗೆ ಆತ ಕಂಡು ಬಂದು ಈತ ತುಸು ಬೆದರಿದ. ಅವನ ಕೆನ್ನೆಗಳು ಚೂಪಾದ ಬೆಣಚು ಕಲ್ಲುಗಳ ಹಾಗೆ ತಿವಿಯಲು ಸಿದ್ಧವಾಗಿ ನಿಂತದ್ದನ್ನು ಈತ ಗಮನಿಸಿದ.

ಆತ ತನ್ನ ಕಣ್ಣುಗಳಿಂದ ಏನು ಎಂಬಂತೆ ಈತನನ್ನು ಕೇಳಿದಂತೆ ಅನಿಸಿ, 'ಯಜಮಾನ, ಯಾವ ಊರು?' ಎಂದು ಕೇಳಿದ.

'ನರಸೀ ಗದ್ದೆ.'

ಅಸ್ಪಷ್ಟವಾಗಿ ಕೇಳಿಬಂದಿತು ದನಿ. ಆಳವೇ ಅರಿಯದ ಬಾವಿಯೊಳಗೆ ಹಾಕಿದ ಕಲ್ಲೊಂದು ಬಹಳ ಹೊತ್ತಿನ ನಂತರ ನೀರಿಗೆ ಬಿದ್ದು ಸದ್ದು ಮೇಲೆ ಬಂದಂತೆ ಆತನ ದನಿ ಕೇಳಿಸಿತು. ಆದರೂ ಈತ ಕೇಳಿದ.

'ನರಸೀ ಗದ್ದೆ ಎಲ್ಲಿದೆ ?'

ಕಂಬಳಿಯೊಳಗಿನಿಂದ ಅವನ ಒಂದು ಕಪ್ಪು ಕೈ ಹೊರಬಂದಿತು. ಒಣಗಿ ಬಿದಿರ ಗೂಟದಂತಾಗಿ ನೆರಿಗೆಗಟ್ಟಿದ್ದ ಈ ಕೈಯನ್ನು ನೀರಿನತ್ತ ಚಾಚಿ ಅವನು ತೋರಿಸಿದ.
'ಅಗೋ ಅಲ್ಲಿ, ನೇರಲೇ ಗುಡ್ಡೆ ಕೆಳಗೆ.....'
ಅಲ್ಲೊಂದು ಗುಡ್ಡ ಇದ್ದುದು ಹೌದು. ನೀರಿನಲ್ಲಿ ಮುಳುಗಿ ಅದರ ಮೇಲ್ ಭಾಗವಷ್ಟೇ ಕಾಣುತ್ತಿತ್ತು. ಅದರ ಸುತ್ತ ನೀರು ಗುಡ್ಡದ ಮೇಲೆ ದಟ್ಟವಾಗಿ ಬೆಳೆದ ಮರ ಗಿಡ ಪೊದೆಗಳು.
'ನೇರಲೇ ಗುಡ್ಡೆ ಕೆಳಗೆ ನನ್ ಗದ್ದೆ...ಮನೆ...ಕೊಟ್ಟಿಗೆ...' ಎಂದ ಆತ ತುಸು ಉತ್ಸಾಹದಿಂದ.

'ಎಷ್ಟು ಎಕರೆ ಇತ್ತು ಜಮೀನು ?'

'ಐದು ಎಕರೆ. ನಾನೇ ಮಾಡಿದ್ದು. ನಾನೇ ದರಖಾಸ್ತು ಪಡೆದು, ನಾನೇ ಕಾಡು ಕಡಿದು, ನೆಲ ಸವರಿ, ಹಾಳೆ ಮಾಡಿ, ಉತ್ತು ಬಿತ್ತು ಕಳೆ ಕಿತ್ತು, ವ್ಯವಸಾಯ ಮಾಡಿದ್ದು. ಜನ ಅದನ್ನು ನರಸೀ ಗದ್ದೆ ಅಂತ ಕರೆದ್ರು. ನಾನೇ ಕಲ್ಸಂಕದ ನರಸಣ್ಣ...ನನ್ ಹೆಸರನಲ್ಲಿ ಜನ ಇದನ್ನ ನರಸೀ ಗದ್ದೆ ಅಂದ್ರು...ಊರ ಗೌಡ ನನ್ನ ಕೈಯಿಂದ ಇದನ್ನ ಕಸಗೋಬೇಕು ಅಂತ ನೋಡ್ದ....ಮತ್ತೆ ಯಾರೋ ಕಸಕೊಳ್ಳೋದಕ್ಕೆ ಬಂದ್ರು...ನಾ ಬಿಡಲಿಲ್ಲ, ಮಾಡ್ದೆ. ಮನೇಲಿ ಏನೇನೋ ಕಷ್ಟ ಬಂತು. ಅದನ್ನ ಅಡವು ಇಟ್ಟು ಸಾಲ ಮಾಡು ಅಂದ್ರು, ನಾನು ಈ ಕೆಲಸ ಮಾಡಲಿಲ್ಲ. ಒಂದಲ್ಲ, ಹದಿನೈದು ವರ್ಷ ಬೇಸಾಯ ಮಾಡ್ದೆ...ನರಸೀ ಗದ್ದೆ ಅಂದ್ರೆ ಬಂಗಾರದಂತಾ ನೆಲ ಅಂದ್ರು ಜನ. ಆದರೆ ಈ ಭೋಸುಡಿ ನನ್ ಮಗನ್ನ ಸರಕಾರ, ಇದನ್ನ ಮುಳುಗುಸ್ತು...ಊರಿಗೆಲ್ಲ ಏಲಕ್ಕೀ ದೀಪ ಕೊಡತೀನಿ ಅಂತು...ನಿಮ್ಮನ್ನೆಲ್ಲ ಉದ್ಧಾರ ಮಾಡ್ತೀನಿ ಅಂತು....ಸ್ವರ್ಗ ನೆಲಕ್ಕೆ ಇಳಸ್ತೀನಿ ಅಂತು...ಕೊನೆಗೆ ನಮಗೆ ಅದು ತೋರ್ಸಿದ್ದು ಮಾತ್ರ ನರಕಾನ...ಕಳ್ ನನ್ ಮಕ್ಳು ಎಲ್ಲ ನಾಶ ಮಾಡಿದ್ರು...'

ಮಾತನಾಡುತ್ತ ಆತ ಏಕೋ ವ್ಯಗ್ರನಾಗುತ್ತಿರುವುದು ಇವನ ಗಮನಕ್ಕೆ ಬಂದಿತು. ಆತ ಹಲ್ಲು ಕಚ್ಚತೊಡಗಿದ. ಅವನ ಕಣ್ಣುಗಳಲ್ಲಿ ಕೆಂಡದ ಮಳೆ ಕಂಡು ಬಂದಿತು. ಅವನ ಮೈ ನಡುಗತೊಡಗಿತು. ಅವನ ಮೈ ಇಡೀ ಸೆಟೆದುಕೊಂಡು ಎತ್ತರದ ದನಿಯಲ್ಲಿ ಕಿರುಚಾಡತೊಡಗಿದ.

'ಈ ನರಸೀ ಗದ್ದೆ ಯಾವ ನನ್ ಮಗನೂ ಮಾಡಿದ್ದಲ್ಲ, ನಾನು ಮಾಡಿದ್ದು. ನಾನು ಬೆವರು ಸುರಿಸಿದ್ದು. ನಾನು ಒಪ್ಪತ್ತು ಉಂಡಿದ್ದೆ. ನಾನು ನಿದ್ದೆಗೆಟ್ಟಿದ್ದೆ. ನಾನು ಮೈ ಮುರಿದಿದ್ದೆ. ಯಾರು ಯಾರೋ ಬಂದಾಗ ಇಲ್ಲ ಅಂದಿದ್ದೆ. ಮಳೆ, ಬಿಸಿಲು ಅಂತಿಲ್ಲ ಅಂಗೆ ಗೇಯ್ದಿದ್ದೆ...ಆಮ್ಯಾಲೆ...ಬೋಸುಡಿ ಮಕ್ಳು...ಬೋಸುಡಿ ಮಕ್ಳು...'

ಕಂಬಳಿ ಹೊದ್ದು ಕುಳಿತ ಆತನ ಮೈ ನಡುಗತೊಡಗಿತು. ಅವನ ಮುಖ ವಿಕಾರವಾಯಿತು. ಆತ ತನ್ನ ಹಲ್ಲುಗಳನ್ನು ಕಟಕಟನೆ ಕಚ್ಚತೊಡಗಿದ. ಅವನಿಗೆ ಬಾಹ್ಯ ಪ್ರಪಂಚದ ಅರಿವು ಹಾರಿಹೋದಂತೆ ಅನಿಸಿತು. ಅವನ ಅವಸ್ಥೆ ಕಂಡು ಈತ ಬೆದರಿದ. ಇವನ ಮೈ ಭೀತಿಯಿಂದ ಕಂಪಿಸತೊಡಗಿತು.

ಈತ ನಿಧಾನವಾಗಿ ಅಲ್ಲಿಂದ ಹಿಂದೆ ಸರಿದ. ಇನ್ನು ಅಲ್ಲಿ ನಿಂತಿರುವುದು ಅಪಾಯ ಎನಿಸಿ ನೇರ ಕಾರಿನ ಬಳಿ ಬಂದು ಕಾರು ಹತ್ತಿದ. ಕಾರು ಅಲ್ಲಿಂದ ಹೊರಟಾಗ ತಿರುಗಿ ನೋಡಿದ. ಆತ ಹಿಂದಿನಂತೆಯೇ ರಸ್ತೆಗೆ ಬೆನ್ನು ಹಾಕಿ ಕುಳಿತಿದ್ದ. ಈತ ನಿಧಾನವಾಗಿ ಕಾರು ನಡೆಸಿಕೊಂಡು ಮುಂದೆ ಹೋದ.

ತುಂಬಾ ಕಷ್ಟಪಟ್ಟು ಮಾಡಿದ ಜಮೀನನ್ನ ಯಾರೋ ಕಿತ್ತುಕೊಂಡಾಗ ಸಿಟ್ಟು ನೋವು ಸಹಜ, ನರಸಣ್ಣ ಈ ನೋವಿನಿಂದ ನೊಂದಿದ್ದಾನೆ ಅನಿಸಿತು.

ಸುಮಾರು ಮೂವತ್ತು ವರ್ಷಗಳ ಹಿಂದೆ ಮಾಡಿದಂತಿದ್ದ ಟಾರು ರಸ್ತೆಯ ಮೇಲೆ ಕಾರು ಓಡಿತು.

ಹೀಗೆ ಹೋದವನಿಗೆ ಎಷ್ಟು ದೂರ ಹೋದರೂ ಹಿನ್ನೀರು ಮುಗಿಯುವಂತೆ ಕಾಣಲೇ ಇಲ್ಲ. ಇದು ಸದ್ಯಕ್ಕೆ ಮುಗಿಯುವುದಿಲ್ಲ ಅನಿಸಿ ಆತ ಒಂದು ಕಡೆ ಕಾರನ್ನ ತಿರುಗಿಸಿದ. ಮತ್ತೆ ಅದೇ ರಸ್ತೆ. ಅದೇ ನೀರು. ಅದೇ ಕಾಡು ಮತ್ತೆ ಅದೇ ನೇರಲೇ ಗುಡ್ಡ.

ಆದರೆ ಒಂದು ಅರ್ಧ ಗಂಟೆಯ ಹಿಂದೆ ಆ ಕಂಬಳಿಯವನು ಕುಳಿತ ದಿಣ್ಣೆ  ಬರಿದಾಗಿತ್ತು. ಆ ಮನುಷ್ಯ ಅಲ್ಲಿಯೇ ಎಲ್ಲಿಯಾದರೂ ಇರಬಹುದೇ ಎಂದು ಹುಡುಕಾಡಿದ. ಆತ ಇವನಿಗೆ ದಾರಿಯಲ್ಲೂ ಎದುರಾಗಿರಲಿಲ್ಲ. ಈಗಲೂ ಎಲ್ಲೂ ಕಾಣಲಿಲ್ಲ. ಮುಂದೆ ಸಿಗಬಹುದು ಎಂದು ಮುಂದೆ ಕಾರನ್ನು ನಡೆಸಿದ. ಆಗಲೂ ಆತ ಸಿಗಲಿಲ್ಲ. ಹಾಗಾದರೆ ಎಲ್ಲಿ ಹೋದ?

ಈತ ವಿಚಾರ ಮಾಡುತ್ತ ಮುನ್ನಡೆದ. ಕಾರು ಮುಳುಗಡೆ ಪ್ರದೇಶದಿಂದ ಹೊರ ಬಂದಿತು.

ಒಂದು ವೃತ್ತ ಎದುರಾಯಿತು. ಅಲ್ಲೊಂದು ಹಳ್ಳಿ ಹೋಟೆಲು. ಬೆಳಗ್ಗೆ ಇಲ್ಲಿಗೆ ಬಂದಾಗಿನಿಂದ ಟೀ ಕುಡಿದಿರಲಿಲ್ಲವಾದ್ದರಿಂದ ಹೋಟೆಲಿನ ಒಳಹೊಕ್ಕ.
ತಿಂಡಿಗೆ ಹೇಳಿ ಕುಳಿತಾಗ ಹೋಟೆಲಿನ ಮಾಲೀಕ ಬಂದು ಪಕ್ಕದಲ್ಲಿ ಕುಳಿತ.
'ಎಲ್ಲಿಂದ ಬಂದಿದೀರಾ ಸಾರ್  ?' ಆತ ಕೇಳಿದ.

'ಬೆಂಗಳೂರಿನಿಂದ, ಅಣೆಕಟ್ಟನ್ನ ನೋಡೋಣ ಅಂತ ಬಂದೆ.'
ತಟ್ಟನೆ ಅವನಿಗೆ ಕಲ್ಸಂಕದ ನರಸಣ್ಣನ ನೆನಪಾಯಿತು.
'ಅಲ್ಲ ಇವರೇ, ಇಲ್ಲಿ ಕಲ್ಸಂಕದ ನರಸಣ್ಣ ಅಂತ...'

ಇವನ ಮಾತು ಮುಗಿಯುವ ಮುನ್ನವೇ ಆತ ಕೇಳಿದ 'ನರಸೀಗದ್ದೆ ನರಸಣ್ಣ ಅಲ್ವಾ ?'

'ಹೌದು, ಅವನು ಸಿಗಬಹುದೇ ?'

ಆತ ನಕ್ಕ.

'ಈ ಹಿನ್ನೀರಿನ ಪ್ರದೇಶದಲ್ಲಿ ನೀವು ಒಂಟಿಯಾಗಿ ತಿರುಗಾಡಿದರೆ ನಿಮಗೆ ಒಬ್ಬನಲ್ಲ ಸಾವಿರ ಜನ ನರಸಣ್ಣಗಳು ಸಿಗತಾರೆ...ಅಣೆಕಟ್ಟನ್ನ ಕಟ್ಟಿದ್ದರಿಂದ ಸಾವಿರ ಜನರ ಬದುಕು ಉದ್ಧಾರ ಆಗಿದೆ...ಆದರೆ ಅಷ್ಟೇ ಜನರ ಬದುಕು ಹಾಳಾಗಿದೆ. ಅವರೆಲ್ಲ ಇಲ್ಲಿ ಪ್ರೇತಗಳಾಗಿ ಅಲೆದಾಡ್ತಿದಾರೆ...ಇದನ್ನ ಯಾರೂ ನಂಬೋದಿಲ್ಲ...ಆದರೆ ನಮ್ಮ ಅನುಭವವೇ ಬೇರೆ...ಇಲ್ಲಿ ಕವಿದಿರೋ ಈ ಮೌನ, ಭೀತಿಯ ಹಿಂದೆ ಮತ್ತೆ ಏನು ಇರಲಿಕ್ಕೆ ಸಾಧ್ಯ ಹೇಳಿ ?'

ಮಾಣಿ ತಂದು ಎದುರು ಇರಿಸಿದ ತಿಂಡಿಯ ತಟ್ಟೆಯನ್ನು ತನ್ನ ಬಳಿ ಎಳೆದುಕೊಂಡು ಕುಳಿತ ಆತ ಮತ್ತೊಮ್ಮೆ ನರಸಣ್ಣನನ್ನ ನೆನಸಿಕೊಂಡ.
ಮನಸ್ಸು ಏಕೋ ಸಣ್ಣಗೆ ಮಿಡುಕಾಡಿತು.
ದೇಹ ತನಗರಿವಿಲ್ಲದೆ ಕಂಪಿಸಿತು.

(೧೯೯೯)

✍ ಡಾ. ನಾ. ಡಿಸೋಜ
{ಸಮಗ್ರ ಕತೆಗಳು ಸಂಪುಟ ೨}

ಈ ಸಣ್ಣಕತೆ ಆಧರಿಸಿದ 'ಶರಾವತಿ' ಕಿರುಚಿತ್ರದ ಲಿಂಕ್:
https://youtu.be/IhUzzd_RQg8

No comments:

Post a Comment