ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 17 November 2019

ವಿಜ್ಞಾನದಲ್ಲಿ ಸೃಜನಶೀಲತೆ

ವಿಜ್ಞಾನದಲ್ಲಿ ಸೃಜನಶೀಲತೆ



ರಾಜು ಭೂಶೆಟ್ಟಿ


ವಿಜ್ಞಾನ ವಿಷಯಕ್ಕೆ ಅನ್ವಯಿಸಿ ನೋಡಿದಾಗ ವಿದ್ಯಾರ್ಥಿಗಳು ಸಮಸ್ಯಾತ್ಮಕ ಸನ್ನಿವೇಶಗಳನ್ನು ಅರಿತು ಅದಕ್ಕೆ ಉತ್ತರವನ್ನು ಹುಡುಕಲು ಸ್ವಂತವಾಗಿ ವಿವೇಚಿಸುವುದು ಸೃಜನಶೀಲ ಚಿಂತನೆ ಎನಿಸಿಕೊಳ್ಳುತ್ತದೆ.


ಮಕ್ಕಳು ಕುತೂಹಲಿಗಳಾಗಿದ್ದು, ಹೊಸತನ್ನು ಹುಡುಕಲು ಒಂದೇ ಸಮನೆ ಪ್ರಶ್ನೆಗಳನ್ನು ಹಾಕಿದರೆ ಅವರು ಪ್ರತಿಭಾಶಾಲಿಗಳೆಂದೇ ನಾವು ಮನಗಾಣಬೇಕು. ಕೇವಲ ಕಲಿಸುವ ವಿಷಯಕ್ಕೆ ಸೀಮಿತವಾಗಿರದೇ, ವಿಷಯಕ್ಕೆ ಸಂಬಂಧವಿರಲಿ, ಇಲ್ಲದಿರಲಿ, ಕುತೂಹಲಭರಿತವಾಗಿ ಗುಣಮಟ್ಟದ ಪ್ರಶ್ನೆಗಳನ್ನು ಕೇಳುವ ಮುಕ್ತ ಅವಕಾಶವನ್ನು ವಿದ್ಯಾರ್ಥಿಗಳಿಗೆ ಒದಗಿಸಿದಾಗ ಅವರಲ್ಲಿ ಸೃಜನಾತ್ಮಕತೆ ಎಂಬುದು ವೃಕ್ಷವಾಗಿ ಬೆಳೆಯುತ್ತದೆ.

ಕೇವಲ ಪ್ರಶ್ನೆಗಾಗಿ ಕೇಳಿದ ಪ್ರಶ್ನೆಗಳಾಗಳಲ್ಲ. ಕೇಳಿದ ಪ್ರಶ್ನೆಯ ಹಿಂದಿನ ಆಲೋಚನೆ, ಅದರ ಗುಣಮಟ್ಟವು ಹೇಗಿದೆ ಎಂಬುದು ಮಾತ್ರ ಸೃಜನಾತ್ಮಕತೆಯನ್ನು ಸೂಚಿಸುತ್ತದೆ.

ಸೃಜನಾತ್ಮಕ ಆಲೋಚನೆಯಲ್ಲಿರುವ ಹಂತಗಳು

l ಸಿದ್ಧತೆಯ ಹಂತ- ಈ ಹಂತದಲ್ಲಿ ಸಮಸ್ಯೆ ಪರಿಹಾರಕ್ಕೆ ಅವಶ್ಯವಾದ ಮಾಹಿತಿ ಸಂಗ್ರಹಣೆ ನಡೆಯುತ್ತದೆ. ಸಂಗ್ರಹಿತ ಸಾಮಗ್ರಿಗಳನ್ನು ವಿಶ್ಲೇಷಿಸಿ ವ್ಯವಸ್ಥೆಗೊಳಿಸುವ ದಿಸೆಯಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತದೆ.

l ಸುಪ್ತ ಚಿಂತನೆ- ಈ ಹಂತದಲ್ಲಿ ಸಮಸ್ಯೆ ಪರಿಹಾರದ ದೃಷ್ಟಿಯಿಂದ ಸಾಕಷ್ಟು ಪ್ರಗತಿ ಉಂಟಾಗುತ್ತದೆ. ವಿಚಾರಗಳು ತಮಗೆ ತಾವೇ ವ್ಯವಸ್ಥಿತಗೊಂಡು ಸಮಸ್ಯೆಯ ಪರಿಹಾರವು ಉದ್ಭವಿಸುವುದಕ್ಕೆ ಸಿದ್ಧವಾಗುತ್ತದೆ.

l ವಿಚಾರ ಸರಣಿ / ಜ್ಞಾನೋದಯ- ಈ ಹಂತದಲ್ಲಿ ಪರಿಹಾರವು ಆರ್ಕಿಮಿಡಿಸ್‌ನಿಗೆ ಹೊಳೆದಂತೆ ಇದ್ದಕ್ಕಿದ್ದಂತೆ ಹೊಳೆಯಬಹುದು. ಅಥವಾ ಆಲೋಚಕ ತನ್ನ ಸಮಸ್ಯೆಯ ಬಗ್ಗೆ ಒಳನೋಟವನ್ನು ಪಡೆಯಬಹುದು.

l ಸಮರ್ಥನಿಯ ಮತ್ತು ಪರಿಷ್ಕರಣದ ಹಂತ- ಇದು ತುಂಬಾ ಮಹತ್ವದ ಹಂತವಾಗಿದ್ದು, ಈ ಹಂತದಲ್ಲಿ ಸಮಸ್ಯೆಯ ಪರಿಹಾರವನ್ನು ತಾಳೆ ನೋಡಲಾಗುವುದು. ಅದರಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಅವುಗಳನ್ನು ನಿವಾರಿಸಿ ಪರಿಷ್ಕರಿಸಿ ಅದಕ್ಕೊಂದು ಸರಿಯಾದ ರೂಪ ಬರುವಂತೆ ಪ್ರಕಟಿಸಲಾಗುವುದು.

ಸೃಜನಶೀಲತೆಯ ತಾಯಿ ಬೇರು ಆಲೋಚಿಸುವುದು. ಮಕ್ಕಳ ಆಲೋಚನಾ ಸಾಮರ್ಥ್ಯವನ್ನು ಹೆಚ್ಚಿಸಲು ಅವರಿಗೆ ಸಮಸ್ಯೆಯ ವಿಶ್ಲೇಷಣೆ ಮತ್ತು ಪರಿಹಾರಕ್ಕೆ ಹೊಸ ಮತ್ತು ಹಳೆಯ ಮಾರ್ಗಗಳಾವವು? ಎಂದು ಕೇಳಲು, ಚರ್ಚಿಸಲು ಬಿಡಬೇಕು. ಏನಾದರೂ ಹೊಸತನ್ನು ಆಲೋಚಿಸಿ, ಸೃಷ್ಟಿಸಿ ಎಂದು ಸ್ಪರ್ಧೆಗಳನ್ನು ಏರ್ಪಡಿಸಬೇಕು.

ಉದಾಹರಣೆಗೆ- ಒಂದು ಬೀಕರ್‌ನಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು, ಅದರೊಳಗೆ ಪೊಟ್ಯಾಶಿಯಂ ಪರ್ಮಾಂಗನೇಟ್ ಹರಳನ್ನು ಹಾಕಿದಾಗ ನೀರಿನ ಬಣ್ಣ ಬದಲಾಗುತ್ತದೆ. ಕಾರಣವೇನು? ಎಂದು ವಿದ್ಯಾರ್ಥಿಗಳನ್ನು ಕೇಳಿದಾಗ ಅವರು ಪೊಟ್ಯಾಶಿಯಂ ಪರ್ಮಾಂಗನೇಟ್ ಅಣುಗಳು ನೀರಿನಲ್ಲಿ ಹಂಚಿ
ಹೋಗುವುದರಿಂದ ಹೀಗಾಗುತ್ತದೆ ಎಂದು ಹೇಳುತ್ತಾರೆ. ಹೀಗೆ ಅಣುಗಳು ಹೆಚ್ಚಿನ ಸಾರತೆಯ ಪ್ರದೇಶದಿಂದ ಕಡಿಮೆ ಸಾರತೆಯ ಪ್ರದೇಶದೆಡೆಗೆ ಚಲಿಸುವ ಕ್ರಿಯೆಯನ್ನು ವಿಸರಣೆ ಎನ್ನುವರು ಎಂದು ಉತ್ತರಿಸುತ್ತಾರೆ. ಹಾಗಾದರೆ ಈ ವಿಸರಣೆ ಕ್ರಿಯೆ ಇಲ್ಲದಿದ್ದರೆ ಏನಾಗುತ್ತಿತ್ತು? ಎಂದು ವಿದ್ಯಾರ್ಥಿಗಳನ್ನು ಆಲೋಚನೆಗೆ ಹಚ್ಚಬೇಕಾಗುತ್ತದೆ.

l ಉಪಯುಕ್ತ ಅಣುಗಳನ್ನು ದೇಹದೊಳಗೆ ಹಾಗೂ ಅನುಪಯುಕ್ತ
ವಾದವುಗಳನ್ನು ಹೊರಹಾಕುವ ಕ್ರಿಯೆಗಳು ನಡೆಯುತ್ತಿರಲಿಲ್ಲ.

l ವಿಸರಣೆ ಇಲ್ಲದಿದ್ದರೆ ಭೂಮಿಯ ಮೇಲೆ ಮನುಷ್ಯನ ಜೀವನವೇ ದುಸ್ತರವಾಗುತ್ತಿತ್ತು. ಕಾರಣ ಉಸಿರಾಟ ಕ್ರಿಯೆಯಲ್ಲಿ ಜೀವಕೋಶಗಳಿಗೆ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.

l ನೀರು ಮತ್ತು ಲವಣಾಂಶಗಳು ಸಸ್ಯಗಳ ಬೇರುಗಳಿಂದ ಹೀರಲ್ಪಡಲು ವಿಸರಣೆ ಅತ್ಯಗತ್ಯ. ಇದು ನಡೆಯುತ್ತಿರಲಿಲ್ಲ.

l ರಕ್ತದಲ್ಲಿನ ಹಿಮೋಗ್ಲೋಬಿನ್‌ಗೆ ಆಮ್ಲಜನಕ ಒದಗಿಸುವ ಕೆಲಸವು ಸಾಧ್ಯವಾಗುತ್ತಿರಲಿಲ್ಲ.

l ಆಹಾರ ತಯಾರಿಸುವಾಗ ಅದರ ಸುವಾಸನೆ ಹರಡಿರುವುದನ್ನು ವಾಸನೆ ಮೂಲಕ ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ.

l ಎಲೆಗಳಲ್ಲಿರುವ ಆಮ್ಲಜನಕ ವಾತಾವರಣಕ್ಕೆ ಬಿಡುಗಡೆಯಾಗುತ್ತಿರಲಿಲ್ಲ.

ಹೀಗೆ ವಿಸರಣೆಯ ಒಂದು ಪ್ರಯೋಗದ ಮೂಲಕ ಅದರ ಅನ್ವಯಗಳನ್ನು ತಿಳಿಸುವ ಸೃಜನಾತ್ಮಕ ಕಾರ್ಯವನ್ನು ಮಾಡಬಹುದಾಗಿದೆ. ವಿಜ್ಞಾನದ ಪ್ರತಿಯೊಂದು ತತ್ವಗಳನ್ನು ಪ್ರಯೋಗಗಳ ಮೂಲಕ ವಿವರಿಸಿ ನಿತ್ಯ ಜೀವನದಲ್ಲಿ ಆ ತತ್ವಗಳ ಮಹತ್ವವನ್ನು ತಿಳಿಸುವುದರಿಂದ ವಿಜ್ಞಾನದಲ್ಲಿ ಸೃಜನಾತ್ಮಕತೆಯನ್ನು ಮೂಡಿಸಬಹುದಾಗಿದೆ.

(ಲೇಖಕರು ಸಹ ಸಂಪಾದಕರು, ಜೀವನ ಶಿಕ್ಷಣ ಮಾಸ ಪತ್ರಿಕೆ, ಡಯಟ್, ಧಾರವಾಡ)

No comments:

Post a Comment