ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 25 June 2019

ಜೋಗದ ಸಿರಿಯ ಉಳಿಸುವ ಬನ್ನಿ

ಜೋಗದಸಿರಿಯ ಉಳಿಸುವ ಬನ್ನಿ..

ಮಲೆನಾಡು ನಮ್ಮದು ಹಸಿರು ಸೀಮೆ ನಮ್ಮದು
ಈ ಹಸಿರಿಗೆ ನೀರುಣಿಸುವ ಶರಾವತಿ ನಮ್ಮದು

ರಕ್ಕಸ ಬಾಯಿಯ ಬೆಂಗಳೂರಿಗೆ
ಕಾವೇರಿ ಕಬಿನಿ ಇಂಗಿಹೋದವು
ಕನ್ನಡ ಕಲಿಯದ ಐಟಿ ಬೀಟಿಗಳು
ಕೇಕೆ ಹಾಕುತ್ತಾ ತಣ್ಣಗೆ ಬೆಳೆದರು
ಕಾವೇರಿ ಕಣಿವೆಯ ರೈತಾಪಿ ಜನಗಳು 
ಐಟಿ ಬೀಟಿ  ಕಂಪೆನಿಗಳಲ್ಲಿ ಕೂಲಿಗಿಳಿದರು
ಧಣಿಗಳ ದುಡ್ಡಿಗೆ ಹೊಲವನೆ ಮಾರಿ
ಮಹಾನಗರದಿ  ಕಳೆದು ಹೋದರು.
ನಮಗೆ ಆ ಗತಿ  ಬೇಡ ಸ್ವಾಮಿ
ನಿತ್ಯೋತ್ಸವ ನಾಡನು ಉಳಿಸೋಣ
ಜೋಗದ ಸಿರಿಯ ಉಳಿಸೋಣ..  

ದುಡ್ಡಿನ ಅಮಲಲಿ ಕುಣಿಯುವ ಜನಕೆ
ನೆಲ ನೀರಿನ ಅರಿವೇ ಇಲ್ಲದೇ
ಕೆರೆ ನದಿಗಳ ನಾಶ ಮಾಡಿ..
ರಿಯಲ್ ಎಸ್ಟೇಟ್ಗೆ ಬಲಿ ಕೊಟ್ಟರಲ್ಲ...
ನೀರಿನ ಮೂಲ ನಾಶ ಮಾಡಿ
ಇಲ್ಲಿಗೆ ಬರುವುದು ನ್ಯಾಯವೇ  ಹೇಳಿ ?
ಉತ್ತರಿಸಿ ...ಬೆಂಗಳೂರಿಗರೆ ಉತ್ತರಿಸಿ..?
ನೆಲ ಜಲ ಕಾಳಜಿ ಮರೆತು ಆಳುತಿಹ
ಮಂತ್ರಿಗಳೇ ನೀವ್ ಉತ್ತರಿಸಿ...

ಶರಾವತಿ ನೆಲದ ಹಸಿರು ಸೀಮೆಯ
ನೀರನು ಎಲ್ಲಿಗೂ ನೀಡುವುದಿಲ್ಲ..
ನಿಸರ್ಗದ ಸ್ವತ್ತದು ನಿಸರ್ಗಕೆ ಉಳಿಯಲಿ
ಮಳೆನಾಡನು ಬರಿದು ಮಾಡದಿರಿ
ನಿತ್ಯೋತ್ಸವ  ಬೀಡನು ಉಳಿಸುವ ಬನ್ನಿ
ಸಹ್ಯಾದ್ರಿ ಸೀಮೆಯ ಉಳಿಸುವ ಬನ್ನಿ..
ಜೋಗದ ಸಿರಿಯ ಉಳಿಸುವ ಬನ್ನಿ..

ರವಿರಾಜ್ ಸಾಗರ್ .ಮಂಡಗಳಲೇ.


Tuesday 18 June 2019

ಉತ್ತರ ಕರ್ನಾಟಕದ ಲ್ಲಿ ಕಾರಹುಣ್ಣಿಮೆ ವಿಶೇಷ

ಉತ್ತರ ಕರ್ನಾಟಕದ ಕಾರ ಹುಣ್ಣಿಮೆಯ    ವಿಶೇಷ    

            ಹೊಲದಲ್ಲಿ ವರ್ಷ ಪೂರ್ತಿ ರೈತನೊಂದಿಗೆ ದುಡಿಯುವ ಎತ್ತುಗಳಿಗಾಗಿಯೆ ಇರುವಂತಹ ಹಬ್ಬ ಕಾರ ಹುಣ್ಣಿಮೆ. ಈ ಹುಣ್ಣಿಮೆಯಂದು ರೈತರು ತಮ್ಮ ಹಸು,ಕರು,ಎತ್ತುಗಳನ್ನು ಊರ ಹೊರಗಿನ ಹಳ್ಳ,ಕೆರೆ ಅಥವಾ ಬಾವಿಯ ಹತ್ತಿರ ಕರೆದುಕೊಂಡು ಹೋಗಿ ಅವುಗಳಿಗೆ ನೀರಿನಿಂದ ಸ್ನಾನ ಮಾಡಿಸಿ ವಿವಿಧ ರೀತಿಯ ಅಲಂಕಾರಿಕ ವಸ್ತುಗಳಿಂದ ಅಲಂಕರಿಸುತ್ತಾರೆ. ಅವರವರ ಸಾಮಥ್ರ್ಯಕ್ಕೆ ತಕ್ಕಂತೆ ಈ ಅಲಂಕಾರ ರೂಪು ಪಡೆಯುತ್ತದೆ.ಕೊರಳಲ್ಲಿ ವಿವಿಧ ರೀತಿಯ ಸರಪಳಿ (ಜಂಗು) ,ಸರ ಗಂಟೆ ಹಾಗೂ ಕೊಂಬು ಗಳಿಗೆ ಹಿತ್ತಾಳೆ ಯಿಂದ ತಯಾರಿಸಿದ ಮುಚ್ಚಳ ಜೊತೆಗೆ ಬಣ್ಣ ಬಣ್ಣದ ದಾರಗಳಿಂದ ತಯಾರಿಸಿದ ಗೊಂಡೆಗಳು,ಕಾಲುಗಳಿಗೂ ಕೂಡ ಹಿತ್ತಾಳೆಯ ಗೆಜ್ಜೆ ಗಳು, ಎತ್ತಿನ ಸೊಂಟಕ್ಕೆ (ಬೆನ್ನಿಗೆ) ವಿಷೇಶ ರೀತಿಯ ಬಣ್ಣ ಬಣ್ಣದ ದಾರದಿಂದ ತಯಾರಿಸಿದ ಪಟ್ಟಿಗಳು ಬೆನ್ನ ಮೇಲೆ ವಿವಿಧ ರೀತಿಯ ಕುಸುರಿಯ ಕಸೂತಿ ಹಾಕಿರುವ ಬಟ್ಟೆಗಳು ಹೀಗೆ ಹಲವಾರು ರೀತಿಯ ಅಲಂಕಾರ ಮುಗಿಸಿ ಎತ್ತಿಗೆ ಗೊಟ್ಟ ಹಾಕುತ್ತಾರೆ. ‌‌‌‌‌
ಗೊಟ್ಟ ಎಂದರೆ ಒಂದು ಮೊಳದಷ್ಟು ಬಿದಿರಿನ ಕೊಳವೆಯಲ್ಲಿ ಮೊಟ್ಟೆಯೊಡೆದು ಹಾಕುತ್ತಾರೆ ಅದರಲ್ಲಿ ಕಾರಿಂಗ ಎನ್ನುವ ಗಿಡಮೂಲಿಕೆಯ ಪುಡಿ ಸೇರಿಸಿ ಎತ್ತಿನ ಬಾಯಿಯೊಳಗೆ ಸುರಿಯುತ್ತಾರೆ.

                ಊರ ಅಗಸಿಯೊಳಗೆ ಪ್ರವೇಶ (ಊರಿನ ಮುಖ್ಯ ದ್ವಾರ )

        ಊರಿನ ಪ್ರಮುಖ ಗೌಡರ ಎತ್ತುಗಳು ಮೊದಲು ಅಗಸಿಯ ಬಾಗಿಲು  ಪ್ರವೇಶಿಸುತ್ತವೆ. ನಂತರ ಅವುಗಳ ಹಿಂದೆ ಬೇರೆ ಬೇರೆಯ ಎತ್ತುಗಳೂ ಪ್ರವೇಶ ಮಾಡಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತದೆ.
        ಹುಣ್ಣಿಮೆಯ ನಂತರ ಕರಿ ಹರಿಯುವ ಕಾರ್ಯಕ್ರಮ .ಈ ದಿನ ಸಾಯಂಕಾಲ ಊರ ಅಗಸಿ ಬಾಗಿಲಿಗೆ ಮಾವಿನ ತೋರಣದಿಂದ ಸುಣ್ಣ,ಜಾಜಿ (ಹುರಮಂಜು)ದಿಂದ ಅಲಂಕರಿಸಿ ಒಂದು ಉದ್ದನೆಯ ಹಗ್ಗದಲ್ಲಿ ಮಾವಿನ ತೋರಣ, ಬಾಳೆ ಹಣ್ಣು,ಕೊಡ ಬೆಳೆ ,ಹೀಗೆ ಹಲವಾರು ವಸ್ತುಗಳನ್ನು ಪೋಣಿಸಿ ಅಗಸಿಯ ಬಾಗಿಲಿಗೆ ಆಚಿಚೆಗೆ ಕಟ್ಟಿ ಎತ್ತುಗಳನ್ನು ಓಡಿಸುತ್ತಾರೆ .ಆ ಹಗ್ಗವನ್ನು ಹರಿದುಕೊಂಡು ಎತ್ತುಗಳು  ಊರನ್ನು ಪ್ರವೇಶಿಸಿದಾಗ ಕರಿ ಹರಿಯುವ ಕಾರ್ಯ ಪೂರ್ಣಗೊಳ್ಳುತ್ತದೆ.

ಸಸಿ ಆಡೋ ಹಬ್ಬ..

ಉತ್ತರ ಕರ್ನಾಟಕದ ಭಾಗದಲ್ಲಿ ಕಾರಹುಣ್ಣಮಿಯಂದು   ಎತ್ತುಗಳನ್ನು  ಅಲಂಕರಿಸಿ ಪೂಜಿಸುವ ರೈತಾಪಿ ಜನರಿಗೆ ಇದು ಸಂಭ್ರಮದ ಹಬ್ಬ. ಅಷ್ಟೇ ಅಲ್ಲ  ಮುಂಗಾರು ಆರಂಭ ಆಗುವ ಈ ಕಾರ ಹುಣ್ಣಿಮೆಯ ಅವಧಿಯ ನಂತರ ಮುಂದಿನ ಬಿತ್ತನೆ ಕಾರ್ಯಕ್ಕೆ  ಪೂರ್ವ ಸಿದ್ಧತೆಯಾಗಿಯೂ ಪರಂಪರೆಯಿಂದ ಆಚರಣೆಯಲ್ಲಿ ಬಂದಿದೆ.
ಅಲ್ಲದೆ ಮರುದಿನ
ಮಕ್ಕಳೆ ಲ್ಲ ಸೇರಿ ಸಸಿ ಆಡುವ ಆಟ ಆಡುತ್ತಾರೆ ಇದು ಈ ಹಬ್ಬದ ಮತ್ತೊಂದು ವಿಶಿಷ್ಟತೆ.

ಒಂದು ವಾರ ಮೊದಲೇ ಬತ್ತ , ಜೋಳ ಮತ್ತಿತರೆ ಬಿತ್ತನೆ ಬೀಜಗಳನ್ನು ಮೊದಲೇ ಸಣ್ಣ ಸಣ್ಣ ತೆಂಗಿನ ಚಿಪ್ಪು ಅತ್ವ ಮತ್ತಿ ತರೆ ಬಾಕ್ಸ್ ಗಳಲ್ಲಿ ಮಣ್ಣು ತುಂಬಿ ಮಡಿ ಮಾಡಿ ಮೊಳಕೆ ಬರಿಸಿಟ್ಟುಕೊಂಡು ಬಿತ್ತಿ ಸಸಿಯಾಗುವಂತೆ ನೋಡಿಕೊಳ್ಳುತ್ತಾರೆ.ಸಸಿಗಳನ್ನು ತಂದು ಸಣ್ಣ ಸಣ್ಣ ಹೆಣ್ಣು ಮಕ್ಕಳನ್ನು ಮದುವೆ ಗಂಡುಗಳಂತೆ ಅಲಂಕರಿಸಿ ,ಚಪ್ಪರ ಹಾಕಿ , ಹಾರ ತಾಳಿಯನ್ನು ಸಿದ್ಧವಿಟ್ಟು ಕೊಂಡು ಮಕ್ಕಳ ಆಟದ ಓಲಗ,ಡೊಳ್ಳು ಸಹಿತ ಹಾಡುತ್ತಾ ಕುಣಿಯುತ್ತ ಮದುವೆ ಮಾಡಿ ಸಸಿ, ಹಾಗೂ ಆರತಿಯೊಂದಿಗೆ  ಬೆಳಗುತ್ತ  ಹಾಡುತ್ತಾರೆ.ಮನೆಯಿಂದಲೇ ಸಿದ್ಧಪಡಿಸಿಕೊಂಡು ಬುತ್ತಿ ಕಟ್ಟಿಕೊಂಡು ಹೋಗಿರುತ್ತಾರೆ.. ಎಲ್ಲ ಮಕ್ಕಳೂ ಸೇರಿ ಮದುವೆ ಊಟದಂತೆ ಸಂಭ್ರಮಿಸುತ್ತ  ಆಡುವ ಸಾಂಪ್ರದಾಯಿಕ ಆಟವಾಗಿ ಸಸಿ ಆಡುವ ಆಟ ಈಗಲೂ ಉತ್ತರ ಕರ್ನಾಟಕದ ಭಾಗದಲ್ಲಿ ಚಾಲ್ತಿಯಲ್ಲಿದೆ. ಈ ಆಟವನ್ನು ಮಕ್ಕಳು ಕಾರಹುಣ್ಣಿಮೆಯ ಮರುದಿನ ಮಾತ್ರ ಆಡುತ್ತಾರೆ..

ಮುಂಗಾರು ಆರಂಭದ ಈ ಕಾರಹುಣ್ಣಿಮೆಯ ಅವಧಿಯಲ್ಲಿ    ಇನ್ನೇನು ಮುಂಗಾರು ಆರಂಭವಾಗುವ ಕಾಲವಾದರಿಂದ ಮುಂಗಾರನ್ನು ಸಂಭ್ರಮಿಸುವ ಬಿತ್ತನೆ ಕಾರ್ಯಕ್ಕೆ  ಎತ್ತುಗಳನ್ನು  ಸಜ್ಜುಗೊಲಿಸುತ್ತ ರೈತಾಪಿ ಜನ  ಸಂಬ್ರಮದಿಂದ ಸಜ್ಜಾಗುವ ಹಬ್ಬವಾಗಿ ಪರಂಪರೆಯಿಂದ ಚಾಲ್ತಿಯಲ್ಲಿದ್ದು ಈ ಹಬ್ಬಕ್ಕೆಂದೇ ಹಾಡುವ ಜಾನಪದ ಹಾಡುಗಳು ಸಹ ಚಾಲ್ತಿಯಲ್ಲಿದೆ.

ರವಿರಾಜ್ ಸಾಗರ್.
                     

Sunday 16 June 2019

ಅರುಣ್ ಜೋಳದ ಕೂಡ್ಲಿಗಿ ಅವರ ಮಳೆ ಜಾನಪದ

*Repost      2013 ರ ಬರಹ ಮಳೆಗಾಲಕ್ಕೆ ಮರುಓದು*

*ಮಳೆಜಾನಪದ*

*ಅರುಣ್ ಜೋಳದಕೂಡ್ಲಿಗಿ*

ಮಳೆಯೆಂದರೆ ಸಂಭ್ರಮ, ಮಳೆಯೆಂದರೆ ರೈತರ ನರ ನಾಡಿಗಳಲ್ಲಿ ಉಕ್ಕುವ ಚೈತನ್ಯ. ಮಳೆಯೆಂದರೆ ಮನಸ್ಸು ಉಲ್ಲಸಿತವಾಗುವ ತಂಪು. ಆಕಾಶದಲ್ಲಿ ಮೋಡ ಕಟ್ಟುವ ಕ್ರಿಯೆ ಆರಂಭವಾಗುತ್ತಲೂ ರೈತರಲ್ಲಿ ನೂರಾರು ಕನಸು ಕಲ್ಪನೆಗಳು ಗರಿಗೆದರುತ್ತವೆ. ಸಂತಸ, ಭಯ, ಆತಂಕ, ಸಂಭ್ರಮ ಒಟ್ಟೊಟ್ಟಿಗೆ ಒಡಮೂಡುತ್ತವೆ.

ಮಳೆಯೆಂಬುದು ನೈಸರ್ಗಿಕ ಕ್ರಿಯೆ. ಪ್ರತಿಯಾಗಿ ಜೈವಿಕ ಅಸಮತೋಲನವನ್ನು ಕಡಿಮೆ ಮಾಡುವ ಪ್ರಕ್ರಿಯೆಗಳಿಂದ ಒಂದಷ್ಟು ಮಳೆಯನ್ನು ಬರಿಸಬಹುದಾದರೂ, ಕೇವಲ ನಂಬಿಕೆ ಆಚರಣಲೋಕ ಹೆಚ್ಚು ಫಲಕಾರಿಯಲ್ಲ. ಹೀಗಿದ್ದಾಗಲೂ ಮಳೆಯ ಜತೆ ಜನ ನಂಬುಗೆಯ ನಂಟನ್ನು ಬೆಸೆಯುತ್ತಲೇ ಬಂದಿದ್ದಾರೆ. ವೈಜ್ಞಾನಿಕವಾಗಿ ಇದೆಲ್ಲಾ ಮೂಡನಂಬಿಕೆ ಎಂದು ತಳ್ಳಿಹಾಕುವ ಒರಟುತನವನ್ನು ತೋರಬಹುದು. ಆದರೆ ನಿಸರ್ಗದ ಜತೆಗಿನ ಬೆಸುಗೆಯನ್ನು ಗಟ್ಟಿಗೊಳಿಸಿದ ಈ ನಂಬಿಕೆಗಳು ಪರಿಸರ ಸ್ನೇಹಿ ಕೂಡ.

ನಂಬಿಕೆಯೊಂದು ಜಾತಿ ಧರ್ಮ ಲಿಂಗದ ತರತಮಗಳನ್ನು ದಾಟುವಂತಿದ್ದರೆ, ಈ ಕಾಲದ ಸಂಗಾತಿಯಾಗಿ ಅದರ ಜತೆ ಸ್ನೇಹದ ಸಲುಗೆಯನ್ನು ಮಾಡಬಹುದು. ಹೀಗಾಗಿ ಮಳೆಕುರಿತ ನಂಬಿಕೆ, ಆಚರಣೆಯ ಲೋಕ ಈ ಕಾಲದ ಸಂಗಾತಿಯೂ ಹೌದು. ಜನರ ಚೈತನ್ಯವನ್ನು ಇಮ್ಮಡಿಗೊಳಿಸುವ ಆಚರಣಾ ಲೋಕದಲ್ಲಿ ಒಂದು ಸುತ್ತು ಸುತ್ತಿದರೆ, ಧಣಿವಾಗದು. ನಂಬಿಕೆಲೋಕದ ಕುತೂಹಲಕಾರಿ ಸಂಗತಿಗಳು ಹುಟ್ಟಿಸುವ ಅಚ್ಚರಿ ಹೊಸ ತಲೆಮಾರಿನಲ್ಲಿ ಮಳೆಯ ಜತೆ ಹೊಸ ನಂಟನ್ನು ಗಟ್ಟಿಗೊಳಿಸಬಲ್ಲದು.

*ಮಳೆ ತಯಾರಿ*

ಆಕಾಶದಲ್ಲಿ ಮೋಡ ಕಟ್ಟಲು ಶುರುವಾಗುವ ಮೊದಲು ಗ್ರಾಮಜಗತ್ತು ತನ್ನದೇ ಆದ ತಯಾರಿಯನ್ನು ಮಾಡಿಕೊಳ್ಳುತ್ತದೆ. ಇರುವೆಯೊಂದು ತನ್ನ ಮನೆಯಲ್ಲಿ ಆಹಾರ ಸಂಗ್ರಹಿಸಿಕೊಂಡಂತೆ, ರೈತರು ಹೊಲ ಉಳುವ ಪರಿಕರಗಳನ್ನೆಲ್ಲಾ ಮೈದಡವಿ, ಸಜ್ಜುಗೊಳಿಸುತ್ತಾರೆ. ಮನೆಯ ಮಾಡಿ, ಹಂಚುಗಳ ಸರಿಪಡಿಸಿ ಮಳೆಗೆ ಮನೆಯ ಸಿದ್ಧಗೊಳಿಸುತ್ತಾರೆ. ಮಲೆನಾಡಿನಲ್ಲಿ ಗಂಡಸರು ಕಂಬಳಿ, ಕೊಡೆ ಹೊರತೆಗೆದು ಹಳತಾದರೆ ರಪೇರಿ ಮಾಡಿ ಮಳೆಗೆ ಅಣಿಗೊಳಿಸುತ್ತಾರೆ. ಕೃಷಿಕರಾದರೆ ಬಿತ್ತನೆ, ನಾಟಿ, ತೋಟಕ್ಕೆ ಬೇಕಾಗುವ ನೇಗಿಲು-ನೊಗ, ಹಾರೆ-ಪಿಕಾಸಿ, ಗುದ್ದಲಿ, ಕುಳ, ಕುಂಟೆ, ಕೊಲ್ಡುಗಳ ಕಡೆ ಗಮನಹರಿಸುತ್ತಾರೆ.
ಕೂಡಿಟ್ಟ ಹಣವನ್ನು ಮತ್ತೊಮ್ಮೆ ಎಣಿಸಿಟ್ಟು ಬೀಜ ಗೊಬ್ಬರಗಳ ಬೆಲೆಯ ಜತೆ ತಾಳೆ ಹಾಕುತ್ತಾರೆ. ಬಡ ರೈತರು ಉಳ್ಳವರ ಮನೆ ಮುಂದೆ ಸಾಲದ ಸೂಚನೆ ನೀಡಿ ಕುಶಲೋಪರಿ ಮಾತಾಡಿ ಬರುತ್ತಾರೆ. ಹೊಲದ ಗಿಡಗಂಟೆಯ ಕತ್ತರಿಸಿ ಊಳಲು ಸಪಾಟುಗೊಳಿಸಿರುತ್ತಾರೆ. ಮಹಿಳೆಯರು ಮಳೆಗಾಲದ ಚಳಿಗೆ ಹಪ್ಪಳ-ಸಂಡಿಗೆ, ಉಪ್ಪಿನಕಾಯಿ, ಹುಳಿ, ವಿವಿಧ ಕಾಳು-ಬೇಳೆಗಳನ್ನು ತಯಾರುಗೊಳಿಸಿ ಡಬ್ಬಿಗಳಲ್ಲಿ ಬೆಚ್ಚಗೆ ಅಡಗಿಸಿಡುತ್ತಾರೆ. ಹೆಂಗಳೆಯರು ಜತನದಿಂದ ಕಾಪಿಡುವುದು ಬರಿ ತಿನಿಸು- ಖಾದ್ಯಗಳನ್ನಷ್ಟೇ ಅಲ್ಲ, ಪ್ರೀತಿ, ಮಮತೆಯನ್ನೂ ಕೂಡ. ಹಾಗಾಗಿ ಈ ತಿನಿಸುಗಳ ಜತೆ ಮಳೆ ಪ್ರೀತಿಯೂ ಸೇರಿ ಮನೆಯಲ್ಲಿ ಸಂತಸ ತುಂಬುತ್ತದೆ.

*ಮಳೆ ಮೊರೆ*

ಹೀಗೆ ಮಳೆಗೆ ತಯಾರಿಯಾದ ಮೇಲೆ ಮಳೆಗಾಗಿ ಮುಗಿಲು ನೋಡುತ್ತಾರೆ. ರೈತರ ಲೆಕ್ಕಾಚಾರದ ಪ್ರಕಾರ ಮಳೆ ಬರದಿದ್ದಾಗ, ಮಳೆಯ ಮನವೊಲಿಸಲು ಮೊರೆ ಹೋಗುತ್ತಾರೆ. ಕರ್ನಾಟಕದ ತುಂಬೆಲ್ಲಾ ಹೀಗೆ ಮಳೆ ಮೊರೆಯ ಆಚರಣಾ ಲೋಕ ವೈವಿದ್ಯಮಯವಾಗಿದೆ. ಮಳೆ ಬರಿಸುವ ಅಥವಾ ನಿಲ್ಲಿಸುವ ಎರಡೂ ಆಚರಣೆಗಳಲ್ಲಿ ನಗ್ನತೆ ಬಹು ಮುಖ್ಯವಾದದ್ದು. ಗುರ್ಚಿ, ಮಳೆಮಲ್ಲಪ್ಪ, ಮೊದಲಾದ ಆಚರಣೆಗಳಲ್ಲಿ ಮಳೆರಾಯನ ಪ್ರತೀಕವನ್ನು ಹೊರುವ ಹುಡುಗ ನಗ್ನನಾಗಿರುತ್ತಾನೆ.

ಇಲ್ಲಿ ಮಳೆ ಫಲವಂತಿಕೆಯ ಸಂಕೇತವಾಗಿದ್ದು ಇದನ್ನು ಪ್ರೇರೇಪಿಸುವುದಕ್ಕೆ ನಗ್ನತೆ ಅಗತ್ಯವಾಗುತ್ತದೆ. ಹಾಗಾಗಿಯೇ ಮಳೆಬರಿಸಲು ಮದುವೆ ಆಚರಣೆ ದೊಡ್ಡ ಪ್ರಮಾಣದಲ್ಲಿದೆ. ಕಪ್ಪೆಗಳ ಮದುವೆ, ಕತ್ತೆಗಳ ಮದುವೆ, ಗಂಡು ಗಂಡಿನ ಮದುವೆ, ಮಕ್ಕಳ ಮದುವೆ ಹೀಗೆ ಮದುವೆ ಆಚರಣೆಯೂ ಫಲವಂತಿಕೆಯನ್ನು ಬಿಂಬಿಸುತ್ತದೆ. ಎನ್ನುವುದನ್ನು ನೆನೆಯಬೇಕು.

*ಮಳೆ ದೈವ*

ಮರದೈವ, ಮಣ್ಣುದೈವ, ಕಲ್ಲುದೈವದಂತೆ ಮಳೆ ದೈವವೂ ಇದೆ. ಮುಂಗಾರಿಗೆ ಮುಂಚೆ ನಡೆದ ಯಾವುದೇ ದೈವದ ಜಾತ್ರೆಯು ಮಳೆಯ ಬರವಿನ ಭವಿಷ್ಯವನ್ನು ನುಡಿಯುತ್ತವೆ. ಅಂತೆಯೇ ಮಳೆ ಮಲ್ಲಯ್ಯ, ಮಳೆ ಮಲ್ಲಿಕಾರ್ಜುನ, ಮಳೆ ದುರುಗಮ್ಮ, ಮಳೆ ಮಾದೇವ, ಮಳೆ ಮಾರಮ್ಮ, ಮಳೆ ಗುಂಡಯ್ಯ ಮುಂತಾದ ಮಳೆ ದೈವಗಳು ಪ್ರಾದೇಶಿಕವಾಗಿ ಆಚರಣೆಯಲ್ಲಿವೆ. ಸಾಮಾನ್ಯವಾಗಿ ಪ್ರತಿ ಹಳ್ಳಿಗಳಲ್ಲೂ ಇರುವ ಆಂಜನೇಯ, ಹನುಮಂತ ದೇವರನ್ನು ಪೂಜೆ ಮಾಡುವುದರಿಂದ ಮಳೆ ಬರುತ್ತದೆ ಎಂದು ನಂಬುತ್ತಾರೆ. ಈ ದೈವಗಳಿಗೆ ಮಳೆ ಬರದಿದ್ದಾಗ ಹಾರೈಕೆಯೂ, ಪೂಜೆ ಪುರಸ್ಕಾರಗಳೂ ನಡೆಯುತ್ತವೆ. ಅದೇ ಮಳೆ ಬರದಿದ್ದಾಗ ಪೂಜಿಸಿದ ದೈವಗಳನ್ನೇ ದೂಷಿಸುವುದೂ ಇದೆ. ಬೈಯುವುದಿದೆ.

*ಮಳೆ ನಂಬಿಕೆ*

ಮಳೆ ಕುರಿತ ನಂಬಿಕೆಗಳು ಪ್ರಾದೇಶಿಕವಾಗಿ ಹಲವಿವೆ. ಈ ನಂಬಿಕೆಗಳಿಗೆ ಅಲ್ಲಿಯದೇ ಆದ ದಂತಕಥೆಗಳಿರುತ್ತವೆ. ಪ್ರತಿ ಮಳೆ ಒಂದೊಂದು ಜಾತಿಯವರ ಮನೆಯಲ್ಲಿ ವಾಸವಾಗಿರುತ್ತದೆ ಎಂಬ ನಂಬಿಕೆಯೂ ಇದೆ. ಹೂಗಾರರಲ್ಲಿ ಅಶ್ವಿನಿ, ತಳವಾರರಲ್ಲಿ ಕೃತ್ತಿಕೆ, ಅಗಸರ ಮನೆಯಲ್ಲಿ ಭರಣಿ, ಬಣಜಿಗರಲ್ಲಿ ರೋಹಿಣಿ, ಕ್ವಾಮಟರ (ವೈಶ್ಯ) ಮನೆಯಲ್ಲಿ ಮೃಗಶಿರಮಳೆ ವಾಸವಾಗಿರುತ್ತದಂತೆ. ಉತ್ತರ ಕರ್ನಾಟಕದಲ್ಲಿ ನಂಬಿಕಸ್ತ ಮೃಗಶಿರ ಮಳೆ ಕ್ವಾಮಟರ ಮನೆಯಲ್ಲಿದ್ದರೆ, ಹೊರಬರುವುದು ಅಸಾಧ್ಯದ ಮಾತು, ಹೇಗಾದರೂ ಸರಿ ಹೊರ ತರಬೇಕೆಂದು ಪಣತೊಟ್ಟ ಯುವಕರ ಗುಂಪು ಅವರ ಮನೆ ಮುಂದೆ ಹಾಡನ್ನು ಪುನರಾವರ್ತಿಸುತ್ತಾರೆ.

ಇಂತಹ ಯುವಕರ ಗುಂಪು ಮಳೆ ಬಾರದಿದ್ದಾಗ ಓಣಿ-ಓಣಿ ತಿರುಗಿ ಭಿಕ್ಷೆ ಬೇಡುವ ಆಚರಣೆ ವಿಶೇಷವಾಗಿದೆ. ಯುವಕರಲ್ಲಿ ಒಬ್ಬನಿಗೆ ಹೆಣ್ಣಿನ ವೇಷ ಹಾಕಿಸಿ, ಮಗುವೊಂದನ್ನು ಎತ್ತಿಕೊಂಡು ಭಿಕ್ಷೆ ಬೇಡುವ ಹೆಂಗಸಿನಂತೆ ಬೀದಿಗೆ ಹೊರಡಿಸುತ್ತಾರೆ. ಆತನ ಹಿಂದಿರುವ ಯುವಕರ ಹಿಂಡು ‘ಯವ್ವ ನೀಡವ್ವ, ಯಕ್ಕ ನೀಡವ್ವ,/ಮಕ್ಕಳು ಮರಿ ಹಸಗೊಂಡಾವೆ,/ಮೂರು ದಿನದಿಂದ ಅನ್ನ ನೀರು ಕಂಡಿಲ್ಲ,/ಯವ್ವ ನೀಡವ್ವ, ಯಕ್ಕ ನೀಡವ್ವ/ನಿಮ್ಮ ಮನಿ ತಣ್ಣಗಿರತೈತಿ’ ಎಂದು ಹಾಡುತ್ತಾರೆ.

ತಲೆಯ ಮೇಲೆ ಕಪ್ಪೆಯನ್ನು ಹೊತ್ತು ನೀರು ಸುರಿದುಕೊಳ್ಳುತ್ತಾ ಬೀದಿ-ಬೀದಿ ತಿರುಗಿ ಭಿಕ್ಷೆ ಬೇಡುತ್ತಾ ಮಳೆ ಕರೆಯುವ ಆಚರಣೆಯೂ ಇದೆ. ಒಬ್ಬ ಯುವಕನ ತಲೆಯ ಮೇಲೆ ರೊಟ್ಟಿ ಹಾಕುವ ಹೆಂಚು(ಕಾವಲಿ) ಇಟ್ಟು, ಆ ಹೆಂಚಿನ ಮೇಲೆ ಸಗಣಿಯ ಉಂಡೆಯನ್ನಿಟ್ಟು ಅದರೊಳಗೆ ಒಂದು ಕಪ್ಪೆ ಇಡುತ್ತಾರೆ. ಇದೇ ಗುರ್ಜಿ. ಈ ಗುರ್ಜಿಯನ್ನೊತ್ತ ಯುವಕನನ್ನು ಮುಂದೆ ಬಿಟ್ಟು ಯುವಕರ ಗುಂಪು ತಾಟು, ಜೋಳಿಗೆ ಇತ್ಯಾದಿಗಳನ್ನಿಡಿದು ಆತನನ್ನು ಹಿಂಬಾಲಿಸುತ್ತಾರೆ.

ತುಮಕೂರು, ಚಿತ್ರದುರ್ಗ ಭಾಗಗಳಲ್ಲಿ ಗಡಿ ಮಾರಮ್ಮನ ಬೊಂಬೆಯನ್ನು ತಮ್ಮ ಗ್ರಾಮದ ಗಡಿಗೆ ಕೊಂಡೊಯ್ದು ಪಕ್ಕದ ಗ್ರಾಮದ ಗಡಿಯೊಳಕ್ಕೆ ಇಟ್ಟು ಬರುತ್ತಾರೆ, ಇದರಿಂದಾಗಿ ಮಳೆ ಬರುವ ನಂಬಿಕೆ ಇದೆ. ಇದೇ ಸಂದರ್ಭಕ್ಕೆ ಚಿಕ್ಕ ಗಾಡಿಯಲ್ಲಿ ಹಳೆ ಮೊರ, ಮೊಂಡು ಪೊರಕೆ, ಹಳೆ ಬುಟ್ಟಿ ಇತ್ಯಾದಿಗಳ ಬೊಂಬೆ ಜೊತೆ ಇಟ್ಟು ರಾತ್ರಿ ಮೆರವಣಿಗೆ ಮಾಡಿ ಊರ ದಾಟಿಸುತ್ತಾರೆ.

*ಮಳೆ ಕಂಬಳಿ*

ಉತ್ತರ ಕರ್ನಾಟಕದಲ್ಲಿ ಹಾಲುಮತದ ವ್ಯಕ್ತಿಯೊಬ್ಬ ಕಂಬಳಿಯನ್ನು ಐದು ಸಲ ಬೀಸುತ್ತಾನೆ. ಹೀಗೆ ಮಾಡಿ ಮನೆಗೆ ಹಿಂತಿರುವಷ್ಟರಲ್ಲಿ ಮಳೆ ಬರುವುದೆಂದು ನಂಬಿಕೆ ಇದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗುಡ್ಡದ ಮೇಲೆ ನಿಂತು ಕಂಬಳಿ ಬೀಸುವ ಆಚರಣೆ ಇದೆ. ಕಂಬಳಿ ಬೀಸುವುದರ ಜತೆ ಕಪ್ಪು ಮೋಡಗಳು ಇತ್ತ ತೇಲಿ ಬರಲಿ ಎಂಬ ಆಶಯವಿದ್ದಂತಿದೆ. ಹೀಗೆ ಕಂಬಳಿ ಬೀಸಿ ಮಳೆ ತರಿಸಿದ ವ್ಯಕ್ತಿಗಳ ಕುರಿತ ಐತಿಹ್ಯಗಳಿವೆ.

*ಮಳೆ ಹಾಡು*

ಮಳೆ ಕುರಿತಂತೆ ಜನಪದರಲ್ಲಿ ಮಳೆಗೀತೆಗಳಿವೆ. ಇವು ಮಳೆಯ ರಮಣೀಯತೆಯನ್ನು, ಅದರ ಸೌಂದರ್ಯವನ್ನು ವರ್ಣಿಸುವ ಜತೆ, ಅದೊಂದು ನೈಸರ್ಗಿಕ ಕ್ರಿಯೆ ಎನ್ನುವುದನ್ನು ಹೇಳುವಂತಿವೆ. ‘ಆಕಾಶದೊಳಗೆ ಆರ್ಭಟವೇನಿರೆ/ದೇವೇಂದ್ರರಾಯ ಹೊರ ಪಯಣ ಹೋಗ್ವಾಗ/ಸಿಡಿಲು ಮಿಂಚಿನ ಐಭೋಗ/ಕೆಂಧೂಳು ಎದ್ದೂ ಮುಗಿಲ ಮೋಡ ಕವಿದೂ/ಹಗಲ್ ಇರುಳಾದೂ ಜಗಕೆಲ್ಲ-ಮಳೆರಾಯ/ಮುಗಿಲಿಳಿದು ಬರುವೊ ಸಡಗರ’ ಎನ್ನುವ ಮಳೆ ಸಡಗರದ ಹಾಡುಗಳಿವೆ. ‘ಬಾರೆಂದರೆ ಬಾರನು/ ಹೋಗೆಂದರೆ ಹೋಗನು/ ಯಾರಿಚ್ಛೆ ಹೇಳು ಮಳೆರಾಯ’ ಎನ್ನುವ ಮಳೆಯ ಅನಿಶ್ಚಿತತೆಯನ್ನೂ ಹೇಳುತ್ತಿವೆ. ‘ಮಳಿ ಹೋಯ್ತು ಅಂತ ಮಳೆರಾಯ್ನ ಬೈಬೇಡ/ಒಕಾಳ ಹೊನ್ನ ಸೆರಗಲ್ಲಿ ಕಟ್ಕೊಂಡು/ಸಾಲಕ್ಹೋಗವ್ನೆ ಮಳೆರಾಯ’ ಎನ್ನುವಲ್ಲಿ ನಮಗೆ ಮಳೆ ಬರಿಸಲು ಮಳೆರಾಯ ಸಾಲ ತರಲು ಹೋಗಿದ್ದಾನೆ ಎನ್ನುತ್ತಾ ತಮ್ಮ ಕಷ್ಟಗಳ ಜತೆ ಮಳೆರಾಯನ ಕಷ್ಟವನ್ನೂ ಬೆಸೆಯುವಿಕೆ ಇದೆ.

*ಮಳೆ ಗಾದೆ*

ಮಳೆ ಕಾದು ಸಸ್ತಾದಾಗ ಜನ ‘ಬೆಂಕಿಯ ಮಳೆ ಸುರಿಸಿಯಾದರೂ ಕೊಲ್ಲಬಾರದೆ’ ಎಂಬು ಆರ್ತಧ್ವನಿಯಲ್ಲಿ ಗಾದೆಯೊಂದನ್ನು ಕಟ್ಟಿದ್ದಾರೆ. ರೈತರು ಕಟ್ಟಿದ ಮಳೆ ನಕ್ಷತ್ರದ ಗಾದೆಗಳು ಆಯಾ ಮಳೆಯ ಲಕ್ಷಣಗಳನ್ನೂ ಹೇಳುತ್ತಿವೆ. ಆಶ್ಲೇಷಾ ನಕ್ಷತ್ರದ ಮಳೆಗೆ ಭೂಮಿ ಹಸಿರಾಗುವುದನ್ನು ‘ಅಸಲೆ ಮಳೆಗೆ ನೆಲವೆಲ್ಲ ಹಸಲೆ’ ’ಅಸಲೆ ಮಳೆಗೆ ಹಂಚ್ಮೇಲೆಲ್ಲ ಹುಲ್ಲು’ ಎಂದಿದ್ದಾರೆ. ‘ಭರ್ಣಿ ಸುರಿದ್ರೆ ಬರಗಾಲ್ದ ಭಯಿಲ್ಲ’ ’ಭರಣಿ ಮಳೆ ಹುಯ್ದರೆ ಧರಣೆಲ್ಲ ಬೆಳೆ’ ಎಂಬ ಗಾದೆಗಳು ಸಮೃದ್ಧ ಬೆಳೆಯನ್ನು ಸೂಚಿಸುತ್ತಿವೆ. ಸ್ವಾತಿಮಳೆ ಸಕಲಜೀವಕ್ಕೆ ಚೇತನ ತರುವುದೆನ್ನುವುದು ಅನುಭವದ ಮಾತು. ‘ಚಿತ್ತಿ ಸ್ವಾತಿ ಆದ್ರೆ ಹಿಂಗಾರು ಬೆಳೆ ಬಂಗಾರದಂಗೆ’ ‘ಸ್ವಾತಿ ಮಳೆಯಾದ್ರೆ ಹುಲ್ಲೂ ಹೊಡೆ’ ‘ಸ್ವಾತಿ ಮಳೆಗೆ ಚಾಪೆ ಕೆಳಗೂ ತೆನೆ’ ಎಂಬ ಗಾದೆಗಳು ಸ್ವಾತಿ ಮಳೆಯ ಅಗತ್ಯವನ್ನು ಹೇಳುತ್ತಿವೆ.

‘ಅಳಿಯ ಬಂದ ಮರುದಿನ ಮಗಳ ಮಾರಿ ನೋಡು, ಮಳೆ ಬಂದ ಮರುದಿನ ಬೆಳಿ ಮಾರಿ ನೋಡು’ ‘ಮಳೆ ಬರೋದಿಲ್ಲ ಅಂತ ಕಂಬಳಿ ಬಿಟ್ಟು ಹೋಗ್ಬಾರ್ದು, ಕೆಸರು ಆಗಿದೆ ಅಂತ ಕೆರ ಬಿಟ್ಟು ಹೋಗ್ಬಾರ್ದು’ ಮುಂತಾದ ಮಳೆ ಮತ್ತು ಬದುಕಿನ ಜತೆ ಬೆಸೆದ ಗಾದೆಗಳೂ ಸಾಕಷ್ಟಿದೆ.

*ಮಳೆ ಸೂಚನೆ*

ಕೊಡತಿ ಹುಳ ಎದ್ದರೆ, ಕಾಗೆಗಳು ಊರಸುತ್ತ ಕೂಗುತ್ತ ಹಾರಾಡಿದರೆ, ಮೊಟ್ಟೆ ಇರುವೆ ಹೆಚ್ಚಾದರೆ, ಗುಬ್ಬಿ ಮಣ್ಣಿನ ಸ್ನಾನ ಮಾಡಿದರೆ, ಈಚಲ ಹುಳ ಭೂಮಿಯಿಂದೆದ್ದು ಆಗಲೇ ನೆಲ ಕಚ್ಚಿದರೆ ಮಳೆಯ ಸೂಚನೆ ಎಂದು ಹೇಳುತ್ತಾರೆ. ಎತ್ತು ಕತ್ತನ್ನು ಮೇಲಕೆತ್ತಿ ಆಕಾಶ ಮೂಸಿದರೆ, ಮುಸ್ಸಂಜೆಯಲ್ಲಿ ಗೂಬೆ ಕೂಗಿದರೆ, ಬೆಕ್ಕು ಮುಖ ತೊಳೆದರೆ, ಕೋಳಿ ಪುಕ್ಕ ಕಾಯಿಸಿದರೆ, ಕಪ್ಪೆ ಎಡಬಿಡದೆ ವಟಗುಟ್ಟಿದರೆ ಮಳೆಯ ಸೂಚನೆ ಎನ್ನುತ್ತಾರೆ. ಜೇನು ಹುಳುಗಳು ಗೂಡಿನಿಂದ ಯಾವ ದಿಕ್ಕಿಗೆ ಹೋಗುವವೋ ಆ ದಿಕ್ಕಿಗೆ ಮಳೆ ಬರುತ್ತದೆಂದು ನಂಬುತ್ತಾರೆ. ಮಳೆ ಬರದಿರುವ ಸೂಚನೆಗಳೂ ಇವೆ. ಚಂದ್ರನ ಸುತ್ತ ಮಂಡಲ ಕಟ್ಟಿದರೆ, ಹೆಚ್ಚು ಇಬ್ಬನಿ ಬಿದ್ದರೆ, ಮಳೆಗೆ ಮುಂಚೆ ಗುಡುಗಿದರೆ, ಎರಡು ಕಾಮನಬಿಲ್ಲುಗಳು ಕಾಣಿಸಿದರೆ ಮಳೆಯಾಗುವುದಿಲ್ಲ ಎಂದು ತಿಳಿಯುತ್ತಾರೆ. ಪ್ರಾದೇಶಿಕವಾಗಿಯೂ ಈ ನಂಬಿಕೆಗಳು ಭಿನ್ನವಾಗಿವೆ.

*ಮಳೆ ಅಳತೆ*

ವೈಜ್ಞಾನಿಕವಾಗಿ ಮಳೆ ಅಳತೆ ಸೆಂಟಿಮೀಟರುಗಳಲ್ಲಿದೆ, ಆದರೆ ಜನಪದರ ಅಳತೆ ಮಾಪನವೇ ಬೇರೆ. ಶ್ರೀಕಂಠ ಕೂಡಿಗೆಯವರು ತಮ್ಮ ’ಭೂಮಿ ಹುಣ್ಣಿಮೆ’ ಕೃತಿಯಲ್ಲಿ ಶಿವಮೊಗ್ಗೆ ಭಾಗದ ಮಳೆ ಅಳತೆಯ ಪದಗಳನ್ನು ಪಟ್ಟಿಮಾಡಿದ್ದಾರೆ. ಧೂಳಡಗೋಮಳೆ, ಹನಿಮಳೆ, ಹದಮಳೆ, ಜಡಿಮಳೆ, ಕ್ಯಾಣನ ಮಳೆ, ಸ್ಯಾನೆಮಳೆ, ಬಟ್ಟಿಹದ, ಬಟ್ಟಿದೇವ, ಕಂಬಳಿ ಮಳೆ, ದೋಣಿಹದ, ಉಕ್ಕೆಹದ, ಬಿತ್ನೆಹದ, ಹರ್ತೆದೇವ, ಮಾರಿಮಳೆ, ದೆವ್ವಮಳೆ ಇತ್ಯಾದಿ ಬಳಕೆಯನ್ನು ಗುರುತಿಸಿದ್ದಾರೆ. ಈ ಪದ ಬಳಕೆಯಲ್ಲಿ ಪ್ರಾದೇಶಿಕ ಭಿನ್ನತೆಯೂ ಇದೆ.

*ಮಳೆಬೀಜ*

ಮಳೆ ಬೀಜ ತರುವ ಭಿನ್ನ ಆಚರಣೆಯೊಂದು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಉಜ್ಜಯನಿಯಲ್ಲಿದೆ. ಐದು ವರ್ಷಕ್ಕೊಮ್ಮೆ ನಡೆವ ಈ ಆಚರಣೆಯಲ್ಲಿ ಒಂಭತ್ತು ಆಯಗಾರರು ನೂರು ಕಿಲೋಮೀಟರ್ ದೂರದ ಸಿಂದೋಗಿಯಿಂದ ಕಾಲುನಡಿಗೆಯಲ್ಲಿ ತೆರಳಿ ಸಾಂಕೇತಿಕವಾಗಿ ಮಳೆ ಬೀಜ ತರುತ್ತಾರೆ. ಇದಕ್ಕೆ ದಂತ ಕಥೆಯೊಂದಿದೆ, ಉಜ್ಜಿನಿ ಪೀಠದಲ್ಲಿದ್ದ ಮಳೆ ಮಲ್ಲಿಕಾರ್ಜುನರು ಧರ್ಮ ಪ್ರಚಾರಕ್ಕೆ ಸಿಂಧೋಗಿಗೆ ಬಂದರಂತೆ. ಚರ್ಮಕಾರರಿಗೆ ಲಿಂಗ ದೀಕ್ಷೆ ನೀಡಿ ಮರಳುವಾಗ ಮಳೆಬೀಜವನ್ನು ಮರೆತು ಬಂದರಂತೆ. ಹಾಗಾಗಿ ಈಗ ಮಳೆ ಬೀಜ ತರುವ ಆಚರಣೆ ಮಾಡಿದರೆ ಉಜ್ಜಿನಿ ಭಾಗಕ್ಕೆ ಮಳೆ ಬರುತ್ತದೆ ಎನ್ನುವ ನಂಬಿಕೆ ಈಗಲೂ ಉಳಿದಿದೆ. ಈ ನಂಬಿಕೆ ಮಳೆಯನ್ನು ಫಲವಂತಿಕೆಯ ಸಂಕೇತವೆಂಬಂತೆ ನೋಡುತ್ತದೆ.

*ಮಳೆಹಬ್ಬ*

ಜೂನ್ ತಿಂಗಳಿನಲ್ಲಿ ಬರುವ ಆದ್ರಿ ಬಿರುಸಿನ ಮಳೆ. ಮಲೆನಾಡಿನಲ್ಲಿ ಇದರ ಆರ್ಭಟ ಜೋರು. ಈ ಮಳೆಯಲ್ಲಿ ಮಲೆನಾಡಿಗರು ವಿಶಿಷ್ಟ ಹಬ್ಬ ಆಚರಿಸುತ್ತಾರೆ. ಈ ಹಬ್ಬದಲ್ಲಿ ಹಲಸಿನ ಹಣ್ಣು ಮತ್ತು ಕೋಳಿಸಾರು ವಿಶೇಷ ಭಕ್ಷ್ಯಗಳು. ಹೆಚ್ಚಾಗಿ ದೀವರ ಜನಾಂಗದವರು ಇದನ್ನು ಆಚರಿಸುತ್ತಾರೆ. ಇದು ಅವರಿಗೆ ಸಂಭ್ರಮದ ಆಚರಣೆ. ಈ ಹಬ್ಬ ಮಾಡುವ ಹೊತ್ತಿಗೆ ಹೊಲದಲ್ಲಿ ಬಿತ್ತನೆಯಾದ ಬೀಜ ಮೊಳಕೆಯೊಡೆದು ಸಸಿಯಾಗಿರುತ್ತದೆ. ಹಬ್ಬದ ದಿನ ಊರ ಗಂಡುಮಕ್ಕಳು ಸುರಿವ ಮಳೆ, ರಭಸ ಗಾಳಿಯನ್ನೂ ಲೆಕ್ಕಿಸದೆ ಮುಖಕ್ಕೆ ಗ್ರಾಮದೇವತೆಯ ಹಾಗೂ ದೀವರ ದೈವ ಕುಮಾರರಾಮನ ಮುಖವಾಡ ಧರಿಸಿ ಬೀದಿ-ಬೀದಿಯಲ್ಲಿ ಮೆರವಣಿಗೆ ಹೊರಡುತ್ತಾರೆ. ತಂತಮ್ಮ ಮನೆ ಮುಂದೆ ಮೆರವಣಿಗೆ ಬಂದಾಗ ಹೆಣ್ಣುಮಕ್ಕಳು ಆರತಿ ಬೆಳಗುತ್ತಾರೆ. ಶಿವಮೊಗ್ಗ ಜಿಲ್ಲೆ ಸಾಗರ-ಸೊರಬ ತಾಲೂಕುಗಳಲ್ಲಿ ಈ ಹಬ್ಬ ಜೋರು.

*ಮಳೆ ನಿಲುಗಡೆ*

ಮಳೆಬರಿಸುವ ಆಚರಣಲೋಕದಂತೆ, ವಿಪರೀತ ಮಳೆ ಬರುವಾಗ ಸಾಕು ಮಳೆಯೆ ನಿಂತು ಬಿಡು ಎಂದು ನಿವೇದಿಸುವ ಆಚರಣಲೋಕವೂ ಇದೆ. ‘ಹೋಗು’ ಎಂದು ಗಟ್ಟಿಯಾಗಿ ಕೂಗಿ ಕೆಂಡವನ್ನು ಮನೆ ಮುಂದೆ ಮೇಲಕ್ಕೆ ಎಸೆಯುತ್ತಾರೆ. ಬೆಣಚುಕಲ್ಲು, ಕಪ್ಪೆ ಮುಂತಾದುವನ್ನು ಅತಿಮಳೆಯಾದಲ್ಲಿ ಬೆಂಕಿಯ ಬಳಿ ಇಡುವುದಿದೆ. ಚಿಕ್ಕಮಕ್ಕಳನ್ನು ಬೆತ್ತಲೆಮಾಡಿ ಅವರಿಂದ ಬೆಂಕಿಕೊಳ್ಳಿ ಹೊರಗೆಸೆಯುವಂತೆ ಮಾಡಿದರೆ, ಮಕ್ಕಳು ಚಡ್ಡಿ ಬಿಚ್ಚಿ ತಮ್ಮ ಹಿಂಭಾಗವನ್ನು ಆಕಾಶಕ್ಕೆ ತೋರಿಸಿದರೆ, ಬಯಲಲ್ಲಿ ಕಕ್ಕಸಿಗೆ ಕೂತರೆ, ಮನೆಮುಂದೆ ಹರಿವ ನೀರೊಳು ಎಲೆಯಲ್ಲಿ ತುಪ್ಪ ಬಿಟ್ಟರೆ, ಕುಡುಗೋಲನ್ನು ಬೆಂಕಿಯಲ್ಲಿ ಕೆಂಪಗೆ ಕಾಯಿಸಿ ಮಳೆಹನಿಗೆ ಹಿಡಿದರೆ, ಮಳೆ ನಿಲ್ಲುವ ನಂಬಿಕೆ ಇದೆ. ಕೆಲವು ಕಡೆ ಮಳೆರಾಯನನ್ನು ಬೈಯ್ದು ಮಳೆಯನ್ನು ಹೋಗಲಾಡಿಸುವ, ಪೊರಕೆಯನ್ನು ತಲೆಕೆಳಗಾಗಿ ಇಡುವ ವಿಧಾನಗಳೂ ರೂಢಿಯಲ್ಲಿವೆ.

*ಮಳೆ ಮುನಿಸು*

ಮಳೆ ಮುನಿಸಿಕೊಂಡು ಮೊಂಡು ಹಠ ಮಾಡುವುದೂ ಇದೆ. ಆಗ ಜನ ಮಳೆಯ ಜತೆಗೂ ಮುನಿಸಿಕೊಳ್ಳುತ್ತಾರೆ. ಮಳೆ ಕಾದು ತಾಳ್ಮೆಗೆಟ್ಟಾಗ ದೈವದೊಂದಿಗೆ ಜಗಳ ಕಾಯುವುದೂ ಇದೆ. ಶಿವನಿಗೆ ಕಾರ ಹಚ್ಚುವುದು, ಮಳೆ ದೇವನನ್ನು ಬೈಯುವುದಿದೆ. ಉತ್ತರ ಕರ್ನಾಟಕದ ಕೆಲವೆಡೆ ಮಳೆದೇವ ಮಲ್ಲಪ್ಪನನ್ನು ಬಿಸಿಲಿಗಿಡುತ್ತಾರೆ. ತಾಪ ತಾಳದೆ ದೇವ ಒಲಿದು ಮಳೆ ಸುರಿಸುತ್ತಾನೆಂಬ ನಂಬಿಕೆ ಅವರದು. ಗುಳ್ಳವ್ವನ ಆಚರಣೆಯಲ್ಲಿ ಮಳೆದೇವರನ್ನು ಮುಳ್ಳುಕಂಟಿಯಲ್ಲಿ ಎಸೆಯುತ್ತಾರೆ. ಕೋಲಾರದ ಹಲವೆಡೆ ಕೆರೆದೇವತೆ ದುಗ್ಗಮ್ಮನಿಗೆ ಕಲ್ಲು ಹೊಡೆಯುತ್ತಾರೆ. ದೇಗುಲದ ಬಾವಿಗೆ ಸಗಣಿ ಕರಡುವುದು, ದೇವರ ವಿಗ್ರಹಕ್ಕೆ ತಿಗಣೆ, ಚೇಳುಗಳನ್ನು ಬಿಡುವ ನಂಬಿಕೆಗಳೂ ಇವೆ. ಜೋಕುಮಾರ ಸ್ವಾಮಿಯನ್ನು ಕಲ್ಲಿನಹಾರೆ ಹಾಕಿ ಸಾಯಿಸುವುದೂ, ಮಾಟಗಾತಿಯ ಮನೆಯ ಮುಂದೆ ಕಲ್ಲು ರಾಶಿ ಹಾಕುವುದು, ಬಸುರಿ ಕಪ್ಪೆಯನ್ನು ಸಿಗಿದು ಊರ ಮುಂದೆ ನೇತಾಡಿಸುವುದು ಸಹ ಇವು ಗಳಲ್ಲಿ ಒಂದು.

ಹೀಗೆ ಮಳೆ ಕುರಿತ ನಂಬಿಕೆಯ ಜಗತ್ತು ದೊಡ್ಡದಿದೆ. ಅದು ಜನರಲ್ಲಿ ಮಳೆಯ ಬಗೆಗೆ ನೂರಾರು ಕನಸು ಕಲ್ಪನೆಗಳನ್ನು ಹುಟ್ಟಿಸಿದೆ. ಮಳೆಯೆಂಬ ಜೀವಜಲದ ಜತೆ ಉಸಿರು ಬಸಿದ ಜನ ಅದರ ನರನಾಡಿಗಳಲ್ಲಿ ಒಂದಾಗಿದ್ದಾರೆ. ಹಾಗಾಗಿ ಮಳೆ ಬರದಿದ್ದರೆ ಜನರಿಗೆ ಉಸಿರುಕಟ್ಟಿದ ಅನುಭವವಾಗುತ್ತದೆ. ಮಳೆ ಬಂದರೆ ಹುಸಿರಾಡಿ ಹಗುರಾಗುತ್ತಾರೆ. ಹಸಿರಾಗುತ್ತಾರೆ, ಚಿಗುರಾಗಿ ಕುಡಿಯೊಡೆಯುತ್ತಾರೆ.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...