ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 7 November 2018

ನಮ್ಮೂರ ದೀಪಾವಳಿ

*ನಮ್ಮ ದೀಪಾವಳಿ ಆಚರಣೆ..*                                                                          ಬೂದಿ ನೀರು ಮೀಯುವುದು , ಹಿಂದಿನ ದಿನ ನೀರು ಒಲೆಗೆ ,ಹರಿಗೆ ಸೇಡಿಯ ಗೆರೆ ,ಬಿಂದುಗಳನ್ನಿಟ್ಟು , ಹರಿಗೆ ಹೀರೆ ,ಕುಂಬಳಬಳ್ಳಿ ಗೊಂಡೆ ಹೂವಿನ ಸರ ಹಾಕಿ ಶಂಖ ಜಾಗಟೆ (ಜಾಗಟೆ ಬದಲು ಬಟ್ಟಲು ಬಡಿಯುತಾತಿದ್ದದ್ದೂ ಇದೆ) ಸದ್ದುಗಳೊಂದಿಗೆ ಅಮ್ಮ ನೀರು ತುಂಬುವುದು , ಬೆಳಿಗ್ಗೆ ಹೊತ್ತು ಮೂಡುವ ಮೊದಲು ತೆಂಗಿನೆಣ್ಣೆ ಅರಸಿನ ಜಜ್ಜಿದ ಚಗಟೆ ಕೋಡಿನ ಮಿಶ್ರಣ ಹಚ್ಚಿಕೊಂಡು ಮೀಯುವುದು.
ಅಮಾಸೆಯ ರಾತ್ರಿ ಗದ್ದೆ ಹಿಟ್ಟು , ಅರಸಿನ ಎಲೆಯಲ್ಲಿ ಬೇಯಿಸಿದ ಸಪ್ಪೆ ಕಡುಬು , ಜಂಗಮನ ಸೊಪ್ಪು ಕರಿಬೀಳು ಸಟ್ಟುಗದ ಎಲೆ ,ಕಿಸಗಾರ ಹೂವು , ಕೋಳಿಬೀಳು -ಇವುಗಳ ಕೊಚ್ಚಲು ಬೆಂಡೆ ಗಿಡದ ಕಾಂಡಕ್ಕೆ ನೆಣೆ ಸುತ್ತಿ ಮಾಡಿದ ದೊಂದಿ , ಅವಲಕ್ಕಿ ,ಬಾಳೆಹಣ್ಣು ,ಅರಸಿನ ಎಲೆಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ,ಸೂಟೆ ಬೀಸಿಕೊಂಡು ಗದ್ದೆಗೆ ಹೋಗುವುದು.ಅಲ್ಲಿ ಕೊಯ್ಲು ಆದ ಗದ್ದೆಗಳಿಗೆ ಅರಸಿನ ಎಲೆಯ ಮೇಲೆ ಸೊಪ್ಪು ,ಕಡುಬು ಹಾಕಿ ನೆಣೆ ಇಟ್ಟು ದೀಪ ಹಚ್ಚಿ , ಹೊಲಿ ಕೊಟ್ರೊ ,ಬಲಿ ತಗೊಂಡ್ರೊ ,ಬಲೀಂದ್ರ ದೇವರು ತಮ್ ರಾಜ್ಯಕ್ಕೆ ತಾವೇ ಬಂದ್ರೊ ಕೂ ಕೂ ಕೂ ಎಂದು ಮೂರು ಸರತಿ ಹೇಳುವುದು.

ಅಗೇಡಿಗೆ ಅವಲಕ್ಕಿ ಬಾಳೆಹಣ್ಣು ಇಟ್ಟು ಪೂಜೆ ಮಾಡುವುದು..

ನಂತರ , ಹುಲ್ಲು ಕುತ್ರೆ ,ಮೇಟಿ ಕಂಬ , ಗೊಬ್ಬರಗುಂಡಿಗಳಿಗೂ ಹೀಗೇ  ಮಾಡಲುಂಟು.

ನಂತರ ಹೊಲಿರಾಶಿಗೆ ಬೂದಿ ಗೆರೆ ,ದೂಪ ದೀಪ ಹಿಡಿಯುವುದು.

ಮರುದಿನ ಗೋಪೂಜೆ , ಎತ್ತು ಓಡಿಸುವುದು..
ತೋಡಿನಲ್ಲಿ ಸಿಗುವ ಜಾಜಿಕಲ್ಲು ಎಂದು ಕರೆಯಲ್ಪಡುವ ತಿಳಿಗೆಂಪು.ಬಣ್ಣದ ಕಲ್ಲನ್ನು ತೇದಿ , ಗರಟೆಗೆ ಗುಣಾಕಾರದ ರೀತಿಯಲ್ಲಿ ಹಗ್ಗ ಬಿಗಿದು , ಆ ಗರಟೆ ಬಾಯಿಯನ್ನು ತೇದಿದ ಕಲ್ಲಿನ ಬಣ್ಣದಲ್ಲಿ ಅದ್ದಿ ದನ ,ಎತ್ತುಗಳ ಮೈಗೆ ಹಚ್ಚುವುದು ,ಕೋಳೆ ಹೂವಿನ್ನು ತೊಡಿಸುವುದು ,ಅಕ್ಕಿ ಹಿಟ್ಟಿ ನ ಚಪ್ಪೆ ರೊಟ್ಟಿಗಳ ಮಾಲೆಯನ್ನು  ಅವುಗಳ ಕೊರಳಿಗೆ ತೊಡಿಸುವುದು ,ಪೂಜೃಯ ನಂತರ ಅವುಗಳನ್ನು ಬಿಟ್ಟು ಬಿಡುವುದು , ಆಗ ಮಕ್ಕಳು ಅವುಗಳ ಕುತ್ತಿಗೆಯಿಂದ ರೊಟ್ಟಿಗಳನ್ನು ಹರಿದು ತಿನ್ನುವುದು ,ಹಾಗೆ ಮಾಡಿದರೆ ಚರ್ಮದ ಕಾಯಿಲೆ ಬರೋದಿಲ್ಲ ಅಂತ ನಂಬುವುದು....ರಾತ್ರಿ ಹಬ್ಬ ಹಾಡುವುದು..ಮೂರು ದಿನ ಸಂಭ್ರಮ... ಆಚರಣೆ..

ಇದು ನಮ್ಮ ಕಡೆಯ ದಿವಾಳಿ ಹಬ್ಬ , ಶುದ್ದ ಕೃಷಿ ಸಂಸ್ಕೃತಿ.ಬೆಳೆದ ಗದ್ದೆಯನ್ನು ಮರೆಯದಿರುವುದು...

No comments:

Post a Comment