ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 27 October 2018

ಮಧುರ ಚೆನ್ನರು ಕಟ್ಟಿದ ಜಾನಪದ ಲೋಕ ಸಾಹಿತ್ಯ

ಿ

ಮಧುರಚೆನ್ನರ ಸಾಹಿತ್ಯ
ಹಲಸಂಗಿ ಗೆಳೆಯರ ಕೊಡುಗೆಯ ಆಳ ಸಂಪಾದಿಸಿ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯ ಗೆಳೆಯರು ಮೊದಲ ಬಾರಿಗೆ ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪೂರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ ‘ಮಲ್ಲಿಗೆ ದಂಡೆ’(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪೂರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಯಪುರದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು.

ಡಾ.ಗುರುಲಿಂಗ ಕಾಪಸೆಯವರು ‘ಹಲಸಂಗಿ ಹಾಡು’(2000) ಪ್ರಸ್ತಾವನೆಯಲ್ಲಿ ಹಲಸಂಗಿ ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “ಹಲಸಂಗಿಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ ತೀರಿಕೊಂಡ ಮೇಲೆ, ಅವನ ಲಾವಣಿಗಳು ಇನ್ನೂ ಸ್ವಾರಸ್ಯಕರವಾಗಿ ಹಾಡಲ್ಪಡುತ್ತಿದ್ದವು. ಖಾಜಾಭಾಯಿ ತೀರಿಕೊಂಡದ್ದು 1924ರಲ್ಲಿ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”

ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್ವುದಲ್ ಫ್ಲೀಟ್ ರ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. 1919ರಲ್ಲಿ ಜರುಗಿದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಯಪುರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.

ಗರತಿಯ ಹಾಡು :

ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.

ಗರತಿಯ ಹಾಡು’ ಸಂಗ್ರಹದಲ್ಲಿರುವ ಸುಮಾರು 800 ತ್ರಿಪದಿಗಳು ಜನಪದ ತಾಯಂದಿರ ಕಲ್ಪಿತ ಶಕ್ತಿಗೆ, ಅನುಭವಕ್ಕೆ, ಬದುಕಿನ ವಿವಿಧ ಬಗೆಯ ಸಂದರ್ಭಗಳಿಗೆ ಹಿಡಿದ ಕನ್ನಡಿಗಳಾಗಿವೆ. ವಿಜಯಪುರ ಜಿಲ್ಲೆಯ ಭಾಷಿಕ ಸೊಗಡು ಇಲ್ಲಿ ಹೆಪುಗಟ್ಟಿದೆ. ಇಲ್ಲಿಯ ಹಾಡುಗಳನ್ನು ಅವುಗಳ ವಿಷಯ ವಸ್ತುಗಳ ಹಿನ್ನೆಲೆಯಲ್ಲಿ ವರ್ಗೀಕರಿಸಿಕೊಟ್ಟಿದ್ದಾರೆ. ಪರಂಪರೆ, ಸ್ತುತಿ, ತವರುಮನೆ ತಾಯ್ತಂದೆ, ಅಣ್ತಮ್ಮರೂ ಅಕ್ಕತಂಗಿಯರೂ ಅತ್ತಿಗೆ ನಾದಿನಿಯರೂ, ಗೆಳತಿ, ಅತ್ತೆಯ ಮನೆಯ ಕಷ್ಟ, ಮನಸ್ತಾಪ, ಸತಿಪತಿ ಇತ್ಯಾದಿ ಶೀರ್ಷಿಕೆಗಳಲ್ಲಿ ಸರಿಜೋಡಿಸಿ ಇಂಥ ಸಂಗ್ರಹಗಳ ವಿಧಾನವನ್ನು ತಾವೇ ರೂಪಿಸಿ ಮುಂದಿನ ಸಂಗ್ರಾಹಕರಿಗೆ ಮಾರ್ಗ ತೋರಿಸಿದ್ದಾರೆ. ಬಿ.ಎಂ.ಶ್ರೀ., ಬೇಂದ್ರೆ ಮತ್ತು ಮಾಸ್ತಿ ಅವರು ಈ ಪ್ರತಿಷ್ಠಿತ ಜನಪದ ಗೀತ ಸಂಕಲನಕ್ಕೆ ಮೌಲಿಕವಾದ ಪ್ರಸ್ತಾವನೆ, ಪರಿಚಯ, ಮುನ್ನುಡಿ ಬರೆದು ತೂಕ ಹೆಚ್ಚಿಸಿದ್ದಾರೆ. ಅದುವರೆಗಿನ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಕುರಿತು, ವ್ಯಕ್ತವಾಗಿದ್ದ ಹೀಗಳಿಕೆಯ ಮಾತುಗಳನ್ನು ಮೊಟ್ಟಮೊದಲಬಾರಿಗೆ ‘ಇಕ್ಕಿ ಮೆಟ್ಟಿದ’ ಬಿ.ಎಂ.ಶ್ರೀ ಅವರು ‘ಮೊದಲು ಹುಟ್ಟಿದುದು ಜನವಾಣಿ, ಅದು ಬೆಳೆದು ಪರಿಷ್ಕøತವಾಗಿ ವೃದ್ದಿಯಾದುದು ಕವಿವಾಣಿ. "ಜನವಾಣಿ ಬೇರು: ಕವಿವಾಣಿ ಹೂವು" ಎಂದು ಸಾರಿದರು.ಹಾಡುತ್ತ, ಕಲಿಯುತ್ತ ಮುಂದಿನ ಪೀಳಿಗೆಗೆ ಬೆಳೆದು ಉಳಿದುಕೊಂಡು ಬಂದ ಈ ಪದಗಳು ಜನಸಾಮಾನ್ಯರ ನಾಲಗೆಯ ಮೇಲೆ ನಲಿದಾಡುವ ಭಾರತೀಯ ಸಂಸ್ಕøತಿಯ ಪರಂಪರೆಯ ಕಿಡಿನುಡಿಗಳಾಗಿವೆ.

ಬ್ಯಾಸಗಿ ದಿವಸಕ ಬೇವಿನ ಮರತಂಪ ತವರ ಮನಿಯಾ ದೀಪ ತವರೇರಿ ನೋಡೇನ ನಾರಿ ಕಣ್ಣಿನ ನೀರ ಬಾರಿ ಬೀಜಿನ್ಹಾಂಗ ಗೆಳೆತನ ಕೂಡಿದರ ಗೆಜ್ಜಿ ಜೋಡಿಸಿದ್ಹಾಂಗ ಅರಸ ಒಳ್ಳೆವರಂತ ವಿರಸವಾಡಲಿಬ್ಯಾಡ ತೊಟ್ಟೀಲದಾಗೊಂದು ತೊಳದ ಮುತ್ತನು ಕಂಡೆ ತಾಯಿದ್ರ ತವರ್ಹೆಚ್ಚು ತಂದಿದ್ರ ಬಳಗ್ಹೆಚ್ಚು ಎಲ್ಲ್ಯಾರೆ ಇರಲೆವ್ವಾ ಹುಲ್ಲಾಗಿ ಬೆಳೆಯಲಿ ಕಣ್ಣು ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ...

ಹೀಗೆ ಪ್ರತಿ ತ್ರಿಪದಿಯಲ್ಲಿ ಕಂಡುಬರುವ ಸಾಲುಗಳು ಜನಪದರ ಸಾಹಿತ್ಯಿಕ ಭಾಷೆಯ ಶ್ರೇಷ್ಠತೆಯನ್ನು ಸಾರುತ್ತವೆ. ಸರಳ, ಲಲಿತ, ಹಿತಮಿತವಾದ ನುಡಿಗಳು ಎಂಥ ಸಹೃದಯದವರನ್ನಾದರೂ ಸೆಳೆದುಕೊಳ್ಳುತ್ತವೆ. ಇಂಥ ನುಡಿ ಸಾಲುಗಳು ಮೌಖಿಕ ಕಾವ್ಯ ಶ್ರೀಮಂತಿಕೆಯಿಂದ ಕೂಡಿ ಹಾಡಿದವರ ಜೊತೆಗೇನೆ ಮರೆಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಇವನ್ನು ಸಂಗ್ರಹಿಸಿ ಸಂಪಾದಿಸಿಕೊಡುವ ಮೂಲಕ ‘ಹಲಸಂಗಿ ಗೆಳೆಯರು’ ಕನ್ನಡ ನಾಡಿನ ಜಾನಪದದ ಹೆಬ್ಬಾಗಿಲು ತೆರೆದುದು ಒಂದು ಐತಿಹಾಸಿಕ ಸತ್ಯವಾಗಿದೆ. ಜನಪದ ತಾಯಂದಿರು ಕೊಡುವ ಪ್ರತಿಮೆ, ಪ್ರತೀಕಗಳಿಗೆ ಎಂಥ ಶಿಷ್ಟಕವಿಯನ್ನಾದರೂ ತೀವ್ರತರವಾಗಿ ಸೆಳೆಯುವಂಥದು. ಮಗಳು ಎಂಥಾ ಚೆಲುವಿ ನಕ್ಕರೆ ತುಟಿಗೆಂಪು ಅಳಿಯ ಎಂಥವರು ನನಗ್ಹೇಳ | ಹಂಪೀಯ ವಿರುಪಾಕ್ಷಿಗಿಂತ ಚೆಲುವರು.

ಜನಪದ ಕವಿಯತ್ರಿಯರ ಹೋಲಿಕೆ, ಹಂಬಲಗಳು ತಾವು ಆರಾಧಿಸುವ ದೇವನನ್ನು ಜೊತೆ ಸೇರಿಸಿ ಕಲ್ಪಿಸುವುದು ವಿಶಿಷ್ಟವಾದುದು. ದ.ರಾ.ಬೇಂದ್ರೆಯವರು ಈ ಸಂಕಲನದ ‘ಪರಿಚಯ’ದಲ್ಲಿ ಜನಪದ ಹಾಡುಗಾರ್ತಿಯರ ಪದ ಶ್ರೇಷ್ಠತೆಯನ್ನು ಹೀಗೆ ಸಾರಿದ್ದಾರೆ. “ಜೀವನವೇ ದೇವತೆಯಾದ, ತ್ರಿಪದಿ ಛಂದದಲ್ಲಿ ಹೊರಹೊಮ್ಮಿದ ‘ಗರತಿಯ ಹಾಡಿ’ನ ಋಷಿಗಳು ಹೆಣ್ಣು ಮಕ್ಕಳು-ನಮ್ಮ ತಾಯಿ ತಂಗಿಯರು, ಅಮ್ಮ ಅಕ್ಕಂದಿರು, ಮಡದಿ ಮಕ್ಕಳು. ಹಾಗೆ ವಿಚಾರಿಸಿ ನೋಡಿದರೆ ಅವರದೇ ನಿಜವಾದ ಕಾವ್ಯ, ಉಳಿದದು ಕಾವ್ಯದ ಛಾಯೆ” ಎಂಬಲ್ಲಿ ಬೇಂದ್ರೆಯವರು ಈ ಕೃತಿಯ ಮಹತ್ತು ಸಾರಿದ್ದು ಸ್ಪಷ್ಟ ವಾಗುತ್ತದೆ.

ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡು ಬಂದ ‘ಗರತಿಯ ಹಾಡು’ ಉದ್ದಕ್ಕೂ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ. ‘ಈ ಗ್ರಂಥ ಕನ್ನಡದ ಗರತಿಯರ ಬಾಳಿನ ಅಮೃತ ಬಿಂದುಗಳನ್ನೇ ಸಂಕಲನ ಮಾಡಿದಂತಿರುವ ರೀತಿಯಲ್ಲಿ ದಿವ್ಯ ಮಾಧುರ್ಯವನ್ನು ನೀಡುತ್ತದೆ’ ಎಂದು ಜಾನಪದ ವಿದ್ವಾಂಸ ಎಲ್.ಆರ್.ಹೆಗಡೆ ಅವರು ಗುರುತಿಸಿದರೆ, ಗರತಿಯ ಹಾಡು ಕನ್ನಡದ ಪ್ರಪ್ರಥಮ ಜಾನಪದ ಕಾವ್ಯ ಸಂಕಲನವಾಗಿದ್ದು ಗುಣದ ದೃಷ್ಟಿಯಿಂದ ಕೂಡ ಇಂದಿಗೂ ಅದ್ವಿತೀಯ ಕೃತಿಯಾಗಿ ನಿಂತಿದೆ ಎಂದಿದ್ದಾರೆ ಹಿರಿಯ ವಿದ್ವಾಂಸರಾದ ಸಿ.ಪಿ.ಕೆ.ಅವರು. ಗುರುಲಿಂಗ ಕಾಪಸೆ ಅವರು ‘ಕನ್ನಡ ಜನಪದ ಸಾಹಿತ್ಯದ ಆದ್ಯ ಸಂಗ್ರಹವಾದ ಇದು ಅದ್ವೀತಿಯವಾದ ಸಂಗ್ರಹವೂ ಅಹುದು’ ಎಂದು ಅದರ ವಿಶೇಷತೆಯನ್ನು ಬಣ್ಣಿಸಿದ್ದಾರೆ. ಕೃತಿಗೆ ಆಶೀರ್ವಾದ ರೂಪದಲ್ಲಿ ಬರೆದ ಬರಹದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಮಾತನ್ನು ಗಮನಿಸಬೇಕು. ಈ ಕೃತಿ ಮುಂದೆ ಕಾವ್ಯ ಕಟ್ಟುವ ಕವಿಗಳಿಗೆ ಮಾರ್ಗದರ್ಶಿಯಾಗಿರಲೆಂದು ಅವರು ಹೇಳಿದ್ದು ಈ ಪದಗಳು ನಮ್ಮ ಜನರೆಲ್ಲರ ಆದರವನ್ನು ಪಡೆಯಲೆಂದೂ ಇವುಗಳಿಂದ ಸಾಧ್ಯವಾದ ಎಲ್ಲ ಪ್ರಯೋಜನ ವನ್ನೂ ನಮ್ಮ ಸಾಹಿತ್ಯ ಸೇವಕರೂ ಹೊಂದಲೆಂದೂ ನಾನು ಹಾರೈಸುತ್ತೇನೆ ಎನ್ನುವಲ್ಲಿ ನವೋದಯದ ಪ್ರಾರಂಭದ ಕಾಲಕ್ಕೆ ಬರೆಯುತ್ತಿದ್ದ ಕವಿಗಳಿಗೆ ಈ ಕೃತಿ ಸ್ಪೂರ್ತಿ ನೀಡುವ ಸುಳಿವನ್ನು ಪ್ರಕಟಪಡಿಸಿದ್ದಾರೆ. ಈ ಹಾರೈಕೆ ನಿಜವೂ ಆಗಿದೆ.(ಡಾ.ಪ್ರಕಾಶ ಗ.ಖಾಡೆ ಅವರ ,ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ಕೃತಿಯಿಂದ)

Wednesday 10 October 2018

ಈವರೆಗಿನ ಕನ್ನಡ ಸಾಹಿತ್ಯ ಸಮ್ಮೇಳನ ಪಟ್ಟಿ

*ಕನ್ನಡ ಸಾಹಿತ್ಯ ಸಮ್ಮೇಳನಗಳು*

ಕ್ರಮಸಂಖ್ಯೆ
ವರ್ಷಸ್ಥಳಅಧ್ಯಕ್ಷತೆ
೦೧
೧೯೧೫ಬೆಂಗಳೂರುಎಚ್.ವಿ.ನಂಜುಂಡಯ್ಯ
೦೨
೧೯೧೬ಬೆಂಗಳೂರುಎಚ್.ವಿ.ನಂಜುಂಡಯ್ಯ
೦೩
೧೯೧೭ಮೈಸೂರುಎಚ್.ವಿ.ನಂಜುಂಡಯ್ಯ
೦೪
೧೯೧೮ಧಾರವಾಡಆರ್.ನರಸಿಂಹಾಚಾರ್
೦೫
೧೯೧೯ಹಾಸನಕರ್ಪೂರ ಶ್ರೀನಿವಾಸರಾವ್
೦೬
೧೯೨೦ಹೊಸಪೇಟೆರೊದ್ದ ಶ್ರೀನಿವಾಸರಾವ
೦೭
೧೯೨೧ಚಿಕ್ಕಮಗಳೂರುಕೆ.ಪಿ.ಪುಟ್ಟಣ್ಣ ಶೆಟ್ಟಿ
೦೮
೧೯೨೨ದಾವಣಗೆರೆಎಂ.ವೆಂಕಟಕೃಷ್ಣಯ್ಯ
೦೯
೧೯೨೩ಬಿಜಾಪುರಸಿದ್ಧಾಂತಿ ಶಿವಶಂಕರ ಶಾಸ್ತ್ರಿ
೧೦
೧೯೨೪ಕೋಲಾರಹೊಸಕೋಟೆ ಕೃಷ್ಣಶಾಸ್ತ್ರಿ
೧೧
೧೯೨೫ಬೆಳಗಾವಿಬೆನಗಲ್ ರಾಮರಾವ್
೧೨
೧೯೨೬ಬಳ್ಳಾರಿಫ.ಗು.ಹಳಕಟ್ಟಿ
೧೩
೧೯೨೭ಮಂಗಳೂರುಆರ್.ತಾತಾಚಾರ್ಯ
೧೪
೧೯೨೮ಕಲಬುರ್ಗಿಬಿ ಎಂ ಶ್ರೀ
೧೫
೧೯೨೯ಬೆಳಗಾವಿಮಾಸ್ತಿ ವೆಂಕಟೇಶ ಅಯ್ಯಂಗಾರ್
೧೬
೧೯೩೦ಮೈಸೂರುಆಲೂರು ವೆಂಕಟರಾಯರು
೧೭
೧೯೩೧ಕಾರವಾರಮುಳಿಯ ತಿಮ್ಮಪ್ಪಯ್ಯ
೧೮
೧೯೩೨ಮಡಿಕೇರಿಡಿ ವಿ ಜಿ
೧೯
೧೯೩೩ಹುಬ್ಬಳ್ಳಿವೈ.ನಾಗೇಶ ಶಾಸ್ತ್ರಿ
೨೦
೧೯೩೪ರಾಯಚೂರುಪಂಜೆ ಮಂಗೇಶರಾಯರು
೨೧
೧೯೩೫ಮುಂಬಯಿಎನ್.ಎಸ್.ಸುಬ್ಬರಾವ್
೨೨
೧೯೩೭ಜಮಖಂಡಿಬೆಳ್ಳಾವೆ ವೆಂಕಟನಾರಣಪ್ಪ
೨೩
೧೯೩೮ಬಳ್ಳಾರಿರಂಗನಾಥ ದಿವಾಕರ
೨೪
೧೯೩೯ಬೆಳಗಾವಿಮುದವೀಡು ಕೃಷ್ಣರಾಯರು
೨೫
೧೯೪೦ಧಾರವಾಡವೈ.ಚಂದ್ರಶೇಖರ ಶಾಸ್ತ್ರಿ
೨೬
೧೯೪೧ಹೈದರಾಬಾದ್ಎ.ಆರ್.ಕೃಷ್ಣಶಾಸ್ತ್ರಿ
೨೭
೧೯೪೩ಶಿವಮೊಗ್ಗದ.ರಾ.ಬೇಂದ್ರೆ
೨೮
೧೯೪೪ರಬಕವಿಎಸ್.ಎಸ್.ಬಸವನಾಳ
೨೯
೧೯೪೫ಮದರಾಸುಟಿ ಪಿ ಕೈಲಾಸಂ
೩೦
೧೯೪೭ಹರಪನಹಳ್ಳಿಸಿ.ಕೆ.ವೆಂಕಟರಾಮಯ್ಯ
೩೧
೧೯೪೮ಕಾಸರಗೋಡುತಿ.ತಾ.ಶರ್ಮ
೩೨
೧೯೪೯ಕಲಬುರ್ಗಿಉತ್ತಂಗಿ ಚನ್ನಪ್ಪ
೩೩
೧೯೫೦ಸೊಲ್ಲಾಪುರಎಮ್.ಆರ್.ಶ್ರೀನಿವಾಸಮೂರ್ತಿ
೩೪
೧೯೫೧ಮುಂಬಯಿಗೋವಿಂದ ಪೈ
೩೫
೧೯೫೨ಬೇಲೂರುಎಸ್.ಸಿ.ನಂದೀಮಠ
೩೬
೧೯೫೪ಕುಮಟಾವಿ.ಸೀತಾರಾಮಯ್ಯ
೩೭
೧೯೫೫ಮೈಸೂರುಶಿವರಾಮ ಕಾರಂತ
೩೮
೧೯೫೬ರಾಯಚೂರುಶ್ರೀರಂಗ
೩೯
೧೯೫೭ಧಾರವಾಡಕುವೆಂಪು
೪೦
೧೯೫೮ಬಳ್ಳಾರಿವಿ.ಕೆ.ಗೋಕಾಕ
೪೧
೧೯೫೯*ಬೀದರ*ಡಿ.ಎಲ್.ನರಸಿಂಹಾಚಾರ್
೪೨
೧೯೬೦ಮಣಿಪಾಲಅ.ನ. ಕೃಷ್ಣರಾಯ
೪೩
೧೯೬೧ಗದಗಕೆ.ಜಿ.ಕುಂದಣಗಾರ
೪೪
೧೯೬೩ಸಿದ್ದಗಂಗಾರಂ.ಶ್ರೀ.ಮುಗಳಿ
೪೫
೧೯೬೫ಕಾರವಾರಕಡೆಂಗೋಡ್ಲು ಶಂಕರಭಟ್ಟ
೪೬
೧೯೬೭ಶ್ರವಣಬೆಳಗೊಳಆ.ನೇ.ಉಪಾಧ್ಯೆ
೪೭
೧೯೭೦ಬೆಂಗಳೂರುದೇ.ಜವರೆಗೌಡ
೪೮
೧೯೭೪ಮಂಡ್ಯಜಯದೇವಿತಾಯಿ ಲಿಗಾಡೆ
೪೯
೧೯೭೬ಶಿವಮೊಗ್ಗಎಸ್.ವಿ.ರಂಗಣ್ಣ
೫೦
೧೯೭೮ದೆಹಲಿಜಿ.ಪಿ.ರಾಜರತ್ನಂ
೫೧
೧೯೭೯ಧರ್ಮಸ್ಥಳಗೋಪಾಲಕೃಷ್ಣ ಅಡಿಗ
೫೨
೧೯೮೦ಬೆಳಗಾವಿಬಸವರಾಜ ಕಟ್ಟೀಮನಿ
೫೩
೧೯೮೧ಚಿಕ್ಕಮಗಳೂರುಪು.ತಿ.ನರಸಿಂಹಾಚಾರ್
೫೪
೧೯೮೧ಮಡಿಕೇರಿಶಂ.ಬಾ.ಜೋಶಿ
೫೫
೧೯೮೨ಶಿರಸಿಗೊರೂರು ರಾಮಸ್ವಾಮಿ ಐಯಂಗಾರ್
೫೬
೧೯೮೪ಕೈವಾರಎ.ಎನ್.ಮೂರ್ತಿ ರಾವ್
೫೭
೧೯೮೫*ಬೀದರ*ಹಾ.ಮಾ.ನಾಯಕ
೫೮
೧೯೮೭ಕಲಬುರ್ಗಿಸಿದ್ದಯ್ಯ ಪುರಾಣಿಕ
೫೯
೧೯೯೦ಹುಬ್ಬಳ್ಳಿಆರ್.ಸಿ.ಹಿರೇಮಠ
೬೦
೧೯೯೧ಮೈಸೂರುಕೆ.ಎಸ್. ನರಸಿಂಹಸ್ವಾಮಿ
೬೧
೧೯೯೨ದಾವಣಗೆರೆಜಿ.ಎಸ್.ಶಿವರುದ್ರಪ್ಪ
೬೨
೧೯೯೩ಕೊಪ್ಪ್ಪಳಸಿಂಪಿ ಲಿಂಗಣ್ಣ
೬೩
೧೯೯೪ಮಂಡ್ಯಚದುರಂಗ
೬೪
೧೯೯೫ಮುಧೋಳಎಚ್ ಎಲ್ ನಾಗೇಗೌಡ
೬೫
೧೯೯೬ಹಾಸನಚನ್ನವೀರ ಕಣವಿ
೬೬
೧೯೯೭ಮಂಗಳೂರುಕಯ್ಯಾರ ಕಿಞ್ಞಣ್ಣ ರೈ
೬೭
೧೯೯೯ಕನಕಪುರಎಸ್.ಎಲ್.ಭೈರಪ್ಪ
೬೮
೨೦೦೦ಬಾಗಲಕೋಟೆಶಾಂತಾದೇವಿ ಮಾಳವಾಡ
೬೯
೨೦೦೨ತುಮಕೂರುಯು.ಆರ್. ಅನಂತಮೂರ್ತಿ
೭೦
೨೦೦೩ಬೆಳಗಾವಿಡಾ.ಪಾಟೀಲ ಪುಟ್ಟಪ್ಪ
೭೧
೨೦೦೪ಮೂಡುಬಿದಿರೆಕಮಲಾ ಹಂಪನಾ
೭೨
೨೦೦೬*ಬೀದರ*ಶಾಂತರಸ ಹೆಂಬೆರಳು
೭೩
೨೦೦೭ಶಿವಮೊಗ್ಗನಿಸಾರ್ ಅಹಮ್ಮದ್
೭೪
೨೦೦೮ಉಡುಪಿಎಲ್. ಎಸ್. ಶೇಷಗಿರಿ ರಾವ್
೭೫
೨೦೦೯ಚಿತ್ರದುರ್ಗಎಲ್. ಬಸವರಾಜು
೭೬
೨೦೧೦ಗದಗಡಾ. ಗೀತಾ ನಾಗಭೂಷಣ
೭೭
೨೦೧೧ಬೆಂಗಳೂರುಜಿ. ವೆಂಕಟಸುಬ್ಬಯ್ಯ
೭೮
೨೦೧೨ಗಂಗಾವತಿಸಿ.ಪಿ ಕೃಷ್ಣಕುಮಾರ್
೭೯
೨೦೧೩ವಿಜಯಪುರಕೋ.ಚನ್ನಬಸಪ್ಪ
೮೦
೨೦೧೪ಕೊಡಗುನಾ ಡಿಸೋಜ
೮೧
೨೦೧೫ಶ್ರವಣಬೆಳಗೊಳಡಾ. ಸಿದ್ದಲಿಂಗಯ್ಯ
೮೨
೨೦೧೬ರಾಯಚೂರುಬರಗೂರು ರಾಮಚಂದ್ರಪ್ಪ
೮೩
೨೦೧೭ಮೈಸೂರುಚಂದ್ರಶೇಖರ ಪಾಟೀಲ
೮೪
೨೦೧೮ *ಧಾರವಾಡ/ ಡಾ.ಚಂದ್ರಶೇಖರ ಕಂಬಾರ*

ಸಂಗ್ರಹ

Saturday 6 October 2018

ಯಾಕ ಕಾಡತಾವ ಕಬ್ಬಕ್ಕಿ

ಏನ ಕಾಡತಾವ ಕಬ್ಬಕ್ಕಿ
ಹೊಲದಾಗ ಇರುವಾಕೀ
ನಾ ಒಬ್ಬಾಕೀ||

ಅತ್ತಲಿಂದ ಬರುತಾವ
ಮೂರಕ್ಕೀ
ಇತ್ತಲಿಂದ ಬರುತಾವ
ಆರಕ್ಕೀ
ಸಾಲು ಸಾಲಾಗೀ
ಕವಣಿಯ ಬೀಸಿ ಬೀಸೀ
ಬೇಸರಕೀ||

ಬೆಳಸಿಯ ತಿನ್ನುತ
ಡುರಕೀಯ ಹೊಡೆಯುತ
ಶಿಶುನಾಳಧೀಶನ
ಮುದಿಹಕ್ಕಿ||

ವಸುಧೆಯೊಳಗೆ
ನಮ್ಮ ಶಿಶುನಾಳಧೀಶನ
ಪಾದವ ಹಿಡಿಯೋಣ ಬಾ||

**  ಮತ್ತೊಂದು ಭಜನೀ ಪದಾ
( ಹೇಳಿದ್ದು- ಬಾಬು ಚಕ್ಕಡಿ)

Tuesday 2 October 2018

ವಿಶ್ವ ಕನ್ನಡ ಸಮ್ಮೇಳನ ಬಗ್ಗೆ ಒಂದಿಷ್ಟು ತಿಳಿಯಿರಿ

ವಿಶ್ವ ಕನ್ನಡ ಸಮ್ಮೇಳನವು ಜಗತ್ತಿನಾದ್ಯಂತ ಹರಡಿರುವ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ನಡೆಸುವ ಸಮ್ಮೇಳನ. ಈವರೆಗೆ ವಿಶ್ವ ಕನ್ನಡ ಸಮ್ಮೇಳನವು ಎರಡು ಬಾರಿ ನಡೆದಿದೆ. ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವ ಯೋಜನೆಯನ್ನು ಎರಡನೆಯ ಸಮ್ಮೇಳನದಲ್ಲಿ ಘೋಷಿಸಲಾಗಿದೆ.

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನ

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನವು ೧೯೮೫ರಲ್ಲಿಮೈಸೂರಿನಲ್ಲಿ ನಡೆಯಿತು. ಸಾಹಿತಿ ಶಿವರಾಮ ಕಾರಂತರಅಧ್ಯಕ್ಷತೆಯಲ್ಲಿ ರಾಷ್ಟ್ರಕವಿ ಕುವೆಂಪುರವರು ಈ ಸಮ್ಮೇಳನವನ್ನು ಉದ್ಘಾಟಿಸಿದರು.

ಎರಡನೆಯ ವಿಶ್ವ ಕನ್ನಡ ಸಮ್ಮೇಳನ

ಎರಡನೆಯ ವಿಶ್ವ ಕನ್ನಡ ಸಮ್ಮೇಳನವು ೨೦೧೧ರಮಾರ್ಚ್ ೧೧, ೧೨, ೧೩ರಂದು ಬೆಳಗಾವಿಯಲ್ಲಿನಡೆಯಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಅಧ್ಯಕ್ಷತೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿಯವರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಶ್ರೀಮತಿ ಐಶ್ವರ್ಯಾ ರೈ ಬಚ್ಚನ್ ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ದೇ ಜವರೇಗೌಡರು ವಹಿಸಿದ್ದರು. ಈ ಸಮ್ಮೇಳನಕ್ಕಾಗಿ ಸಾವಿರಾರು ಜನ ದೇಶ ವಿದೇಶಗಳಿಂದ ಆಗಮಿಸಿದ್ದರು.

Monday 1 October 2018

ಗಾಂಧೀಜಿಯವರ 15 ಸ್ಮಾರಕಗಳು ಎಲ್ಲೆಲ್ಲಿವೆ ಗೊತ್ತೇ...

ಗಾಂಧೀಜಿಯವರ ಚಿತಾಭಸ್ಮದಿಂದ ಸ್ಥಾಪಿತವಾದ ಗಾಂಧೀ ಸ್ಮಾರಕಗಳು ದೇಶದ 15 ಕಡೆಗಳಲ್ಲಿವೆ. ವಿಶೇಷವೆಂದರೆ ಅವುಗಳಲ್ಲಿ 12 ಕರ್ನಾಟಕದಲ್ಲಿಯೇ ಇವೆ. ಇನ್ನೂ ವಿಶೇಷವೆಂದರೆ 10 ಸ್ಮಾರಕಗಳು ಉತ್ತರ ಕರ್ನಾಟಕ ಭಾಗದಲ್ಲಿವೆ.

•ಹುಬ್ಬಳ್ಳಿಯ ಅಯೋಧ್ಯಾನಗರ,
•ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ,
•ಧಾರವಾಡದ ಆಝಾದ್ ಉಪವನ,
•ಬೆಳಗಾವಿಯ ಮುಗಟಖಾನ ಹುಬ್ಬಳ್ಳಿ,
•ರಾಮದುರ್ಗ ತಾಲೂಕಿನ ಸುರೇಬಾನ,
•ಬಳ್ಳಾರಿಯ ಕೌಲಪೇಟ, ಕೂಡ್ಲಗಿ,
•ಹಾಸನದ ಅರಸಿಕೇರಿ,
•ಗದಗನ ಬೆಟಗೇರಿ,
•ಹಾವೇರಿಯ ಸಂಗೂರ, ಕರ್ಜಗಿ
ಹಾಗೂ ಮಡಿಕೇರಿ
ಸೇರಿದಂತೆ 12 ಸ್ಥಳಗಳಲ್ಲಿಯೇ ಚಿತಾಭಸ್ಮ ಸ್ಮಾರಕವಿರುವುದು ವಿಶೇಷ. ಅದರಲ್ಲಿಯೂ ಗಾಂಧೀಜಿಯವರಿಗೆ ಪ್ರಿಯವಾದ ದಲಿತಕೇರಿಯಲ್ಲಿ ಸ್ಥಾಪಿತವಾದ ಗಾಂಧಿ ಸ್ಮಾರಕ ಎಂಬ ಹೆಗ್ಗಳಿಕೆ ಹುಬ್ಬಳ್ಳಿ ಅಯೋಧ್ಯಾನಗರ ಸ್ಮಾರಕಕ್ಕಿದೆ. ( ಮಾಹಿತಿ: ಪ್ರಕಾಶ .ಎಸ್. ಶೇಟ್ ) ಗಾಂಧಿ ಜೀವಂತಿಕೆಯ ತಾಣಗಳೆನಿಕೊಂಡಿರುವ ಈ ಸ್ಮಾರಕಗಳು, ಇತಿಹಾಸ ಸೇರುವ ಹಂತದಲ್ಲಿವೆ.

*ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು*

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...