ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Showing posts with label ಶೈಕ್ಷಣಿಕ ಲೇಖನಗಳು. Show all posts
Showing posts with label ಶೈಕ್ಷಣಿಕ ಲೇಖನಗಳು. Show all posts

Sunday 23 August 2020

ಅಂತರಂಗದ ಅರಿವಿನ ಮಾರ್ಗಗಳು

ಅಂತರಂಗದ  ಅರಿವಿನ ಮಾರ್ಗಗಳು

ಉದಾಹರಣೆಯೊಂದಿಗೆ ಅಂತರಂಗ ಪ್ರವೇಶ:
 ಕೆಲವರ ಉತ್ತಮ  ಕೆಲಸ ಖುಷಿ ನೀಡುತ್ತದೆ, ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೀರಿ.ಅದರಿಂದ ನಿಮ್ಮೊಳಗೂ  ಒಂದು ಆಂತರಿಕ ಸಂತಸದ ಸಂಚಲನ ಆಗುತ್ತದೆ. ನಿಮ್ಮ ಮೆಚ್ಚುಗೆಯಿಂದ ಅವರು ಇನ್ನೂ ಹೆಚ್ಚು ಒಳ್ಳೆಯ ಕೆಲಸ ಮಾಡಬಹುದು , ಮಾಡಿದೆ ಇರಬಹುದು ಆದರೆ ನಿಮ್ಮ ಬಗ್ಗೆ ಗೌರವ ತಾಳುತ್ತಾರೆ. ನಿಮ್ಮ ಮೇಲೆ ಹೆಚ್ಚು ವಿಶ್ವಾಸ ಇಡುತ್ತಾರೆ.ನಿಮ್ಮ ಮೆಚ್ಚುಗೆ, ಅಭಿನಂದನೆ ಪರಸ್ಪರ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿಮ್ಮ  ಅಂತರಂಗವನ್ನು  ಧನಾತ್ಮಕವಾಗಿ  ಸಕ್ರಿಯವಾಗಿ 
ಇಟ್ಟುಕೊಳ್ಳಲು ಸಹಾಯವಾಗುತ್ತದೆ. ನಿಮ್ಮ ಅಂತರಂಗ ಶುದ್ಧತೆಯತ್ತ ಸಾಗಿದಷ್ಷೂ   ಸದಾ ಉತ್ಸಾಹದಿಂದ ಇರುವ ನಿಮ್ಮ ಮನಸ್ಸು  ನೆಮ್ಮದಿಯಿಂದ  ಇದ್ದಷ್ಟು ನೀವು ಬೆಳೆಯುತ್ತೀರಿ. ನಿಮ್ಮ ಆರೋಗ್ಯ ಸದಾ ಉತ್ತಮವಾಗಿರುತ್ತದೆ.

ಆದರೆ ಅಸೂಹೆ ... ತೂತು ಬಿದ್ದ ಮಡಿಕೆ.  ನಿಮ್ಮ ಅಂತರಂಗದ ಮಡಿಕೆಯೋಳಗಿದ್ದ ಎಲ್ಲವೂ ಸೋರುತ್ತಾ ಹೋಗುತ್ತದೆ.

ಅಸೂಹೆಯ ಕಣ್ಣಿನಿಂದ ನೀವು  ಯಾರನ್ನು ನೋಡುತ್ತೀರೋ ಅವರ  ಒಳ್ಳೆಯ ಕೆಲಸವೂ ಅಸೂಯೆ ತರುತ್ತದೆ. ಇದರಿಂದ ವೈಯಕ್ತಿಕವಾಗಿ ನಿಮಗೆ ಯಾವ ಲಾಭವಾಗದಿದ್ದರೂ ಅವರಿಗೆ ತೊಂದರೆ ಕೊಡುವುದರಿಂದ ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ವಿದ್ರೋಹಿ ಸಂತಸ ಮನೆ ಮಾಡಬಹುದು. ಆದರೆ ಅದು ನಿಮ್ಮ ಮನಸ್ಸನ್ನು ಕೆಟ್ಟ ಮಾರ್ಗದತ್ತ ಕೊಂಡೊಯ್ಯುತ್ತದೆ. ನಿಮ್ಮ ಮಾನಸಿಕ ನೆಮ್ಮದಿಯನ್ನು ಸದಾ ಕದಡುತ್ತದೆ. ನಿಮ್ಮ ಎದುರಾಳಿ ಎಂದುಕೊಂಡವರ ಬೆಳವಣಿಗೆಯಿಂದ ನಿಮ್ಮ ನಿದ್ದೆ ಕದಡುತ್ತದೆ. ಅಂತರಂಗ  ಅಸೂಯೆಯಿಂದ ಕುದಿಯುತ್ತದೆ. ಅಸೂಯೆಯ ಬಿಸಿ ಮೊದಲು ಸುಡುವುದು ನಿಮ್ಮ ದೇಹ ಮತ್ತು ಮನಸ್ಸನ್ನೇ ಹೊರತು ವೈಯಕ್ತಿಕವಾಗಿ ನಿಮಗೆ ಯಾವ ಉಪಯೋಗವೂ ಆಗದು. ನಿಮ್ಮ ಅಂತರಂಗ ಧನಾತ್ಮಕ ಅರಿವಿನತ್ತ ಸಾಗದು. ನಿಮ್ಮ ಕ್ರಿಯಾಶೀಲತೆ, ನಿಮ್ಮ ಜೀವನ ಉತ್ಸಾಹ ಕಡಿಮೆಯಾಗಿ ವಿಕೃತ ಸಂತೋಷದತ್ತ ಹೆಜ್ಜೆ ಹಾಕಬಹುದು. ಹಾಗಾಗಿ ಅಂತರಂಗದ ಅರಿವು ಅತಿ ಅಗತ್ಯ. ಅಂತರಂಗದೊಳಗೆ ಅಸೂಹೆಯನ್ನು ದೂರ ಇಡುವುದು ಒಳಿತು. ಒಳಹೊಕ್ಕ ಅಸೂಹೆ ಓಡಿಸಿ ಪರಸ್ಪರ ಮೆಚ್ಚುಗೆ ಅಭಿಮಾನ ಬೆಳೆಸಿಕೊಳ್ಳುತ್ತಾ ನಿಮ್ಮನ್ನು ನೀವು ಒಳ್ಳೆಯ ಕೆಲಸಗಳತ್ತ ಸಕ್ರಿಯಗೊಳಿಸಿ ಕೊಳ್ಳಲು ಸಾಗುವ ಮಾರ್ಗ ಕಂಡುಕೊಳ್ಳಬೇಕು. ನಿಮ್ಮ ಅಂತರಂಗದ ಅರಿವು ನಿಮ್ಮ ಕೈಯಲ್ಲೇ ಇರಬೇಕು.ಯಾರದೋ   ಮಾತಿಗೆ ಕಿವಿ ಆಗಬಾರದು

ನಾವು ಮಾಡುವ ಕೆಲಸ ಹೇಗಿರಬೇಕು...

ಋಣಾತ್ಮಕ ಮಾತು ಅಥವಾ ಕೆಟ್ಟತನ ಅಥವಾ ಇನ್ನೊಬ್ಬರಿಗೆ ತೊಂದರೆ ಕೊಡುವ ಕೆಲಸ ನಿರಂತರವಾಗಿ ಮತ್ತು ಅದೇ ಉತ್ಸಾಹದಲ್ಲಿ ಬಹಳ ಕಾಲ ಮಾಡುವುದು ಸಾಧ್ಯವಿಲ್ಲ.

ಅದೇ ರೀತಿ,
ಧನಾತ್ಮಕತೆ ಅಥವಾ ಒಳ್ಳೆಯತನ ಅಥವಾ ಇನ್ನೊಬ್ಬರಿಗೆ ಸಹಾಯ ಮಾಡುವ ಕೆಲಸವನ್ನು ಜೀವನ ಪರ್ಯಂತ ಅದೇ ಉತ್ಸಾಹದಲ್ಲಿ ಮಾಡಬಹುದು.

ಏಕೆಂದರೆ,
ಅಸೂಯೆಯಿಂದಲೋ ಕೋಪದಿಂದಲೋ ಇನ್ನೊಬ್ಬರಿಗೆ ನಾವು ತೊಂದರೆ ಕೊಡಲು ಪ್ರಾರಂಭಿಸಿದರೆ ಆ ವಿರೋಧಿಗೆ ಅದರಿಂದ ತೊಂದರೆಯಾಗಬಹುದು ಅಥವಾ ಆಗದೇ ಇರಬಹುದು. ಆದರೆ ನಮಗೆ ಅದರಿಂದ ಲಾಭವಾಗುವ ಸಾಧ್ಯತೆ ಕಡಿಮೆ. ನಮ್ಮ ಮನಸ್ಥಿತಿ ಕೂಡ ಮಲಿನವಾಗುತ್ತಾ, ನರಮಂಡಲದ ದುರ್ಬಲವಾಗುತ್ತಾ ಸಾಗುತ್ತದೆ. ಇತರರಿಂದ ಅದಕ್ಕೆ ಸಿಗುವ ಬೆಂಬಲ ಕೂಡ ಕಡಿಮೆಯಾಗುತ್ತಾ ಕೊನೆಗೆ ನಮ್ಮ ಬಗ್ಗೆಯೇ ಅವರಲ್ಲಿ ತಿರಸ್ಕಾರ ಮೂಡತೊಡಗುತ್ತದೆ.  ಇದರಿಂದ ಆತ್ಮತೃಪ್ತಿಯೂ ಸಿಗುವುದಿಲ್ಲ. ಜೊತೆಗೆ ನೆಗೆಟಿವ್ ಕೆಲಸ ಮಾಡುವಾಗ ನಮ್ಮ ವಿರೋಧಿಗೆ ತೊಂದರೆಯಾದಾಗ ಮೇಲ್ನೋಟಕ್ಕೆ ನಮ್ಮಲ್ಲಿ ಸ್ವಲ್ಪ ಖುಷಿ ಕಾಣಿಸಿದರು ಆಳದಲ್ಲಿ ಮತ್ತು ದೀರ್ಘಕಾಲದಲ್ಲಿ ಅದರ ಪರಿಣಾಮ ನಮ್ಮ ವಿನಾಶಕ್ಕೆ ಕಾರಣವಾಗುತ್ತದೆ. ನಮಗರಿವಿಲ್ಲದೆ ನಮ್ಮ ಕೆಟ್ಟ ನಡವಳಿಕೆಗೆ ಕಾರಣವಾಗುತ್ತದೆ.

ಅದಕ್ಕೆ ವಿರುದ್ಧವಾಗಿ ನೀವು ಯಾರಿಗಾದರೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸಿ. ಆಗ ನಿಮ್ಮ ಮಾನಸಿಕ ವ್ಯಕ್ತಿತ್ವವೇ ವಿಭಿನ್ನವಾಗಿ ಇಡೀ ವಾತಾವರಣ ಚೇತೋಹಾರಿಯಾಗಿರುತ್ತದೆ. ನೀವು ಎಷ್ಟೇ ಸಹಾಯ ಮಾಡಿದರೂ ಧಣಿವಾಗುವುದಿಲ್ಲ. ಸಹಾಯ ಮಾಡುವಾಗ ಏನಾದರೂ ನಿರೀಕ್ಷೆ ಇದ್ದರೆ ಅಥವಾ ಸಹಾಯ ಮಾಡಿದವರು ಉಪಕಾರವನ್ನು ಸ್ಮರಿಸದಿದ್ದರೆ ಒಂದಷ್ಟು ಬೇಸರವಾಗಬಹುದೇ ಹೊರತು ಅದಕ್ಕಿಂತ ಹೆಚ್ಚಿನದೇನೂ ಆಗುವುದಿಲ್ಲ.

ವ್ಯಾವಹಾರಿಕ ಮತ್ತು ವೈಯಕ್ತಿಕ ದ್ವೇಷ -  ವಂಚನೆಯ ವಿಷಯಗಳಲ್ಲಿ ಇದು ಹೆಚ್ಚಾಗಿ ಅನ್ವಯಿಸುವುದಿಲ್ಲ. ಆದರೆ ಭಿನ್ನ ಅಭಿಪ್ರಾಯ ಮತ್ತು ಅಸೂಯಾಪರ ಗುಣಗಳಲ್ಲಿ ಇದರ ಪರಿಣಾಮ ಹೆಚ್ಚಾಗಿರುತ್ತದೆ.

ನಾವು ನಿಯಂತ್ರಣ ಸಾಧಿಸಬೇಕಾಗಿರುವುದೇ ಇಲ್ಲಿ. ಇನ್ನು ಮುಂದಾದರು ಇನ್ನೊಬ್ಬರ ಬಗ್ಗೆ ಕೆಟ್ಟ ಮಾಹಿತಿ ಹಂಚುವುದಕ್ಕಿಂತ ಸಾಧ್ಯವಾದರೆ ಒಳ್ಳೆಯದನ್ನು ಹಂಚಿಕೊಳ್ಳೋಣ. ನಾವು ಯಾರೂ ಪರಿಪೂರ್ಣರಲ್ಲ. ಒಂದಲ್ಲ ಒಂದು ಸಂದರ್ಭದಲ್ಲಿ ನಾವು ಕೂಡ ಯಾವುದೋ ರೂಪದ ತಪ್ಪೆಸಗಿರುವ ಸಾಧ್ಯತೆ ಇದ್ದೇ ಇರುತ್ತದೆ. 

ಅಂತರಂಗದ ಆಶಯ

ಯಾರು ಹೇಗೆ ಇದ್ದರು  ಅವರವರ ಆತ್ಮಾವಲೋಕನಕ್ಕೆ ಬಿಟ್ಟು ನಾವು ಮಾತ್ರ ಸಾಧ್ಯವಾದಷ್ಟು ಧನಾತ್ಮಕ ಅರಿವಿನತ್ತ ಸಾಗುವ ಗುಣ ಬೆಳೆಸಿಕೊಳ್ಳೋಣ . ಪರಸ್ಪರ ಒಳ್ಳೆಯ ಕೆಲಸಗಳನ್ನು ಅಭಿನಂದಿಸೋಣ. ಪ್ರೋತ್ಸಾಹಿಸೋಣ. ಪರಸ್ಪರರ ಅಂತರಂಗವನ್ನು ಅರಿಯೋಣ ಎಂಬ ಆಶಯದೊಂದಿಗೆ.

ರವಿರಾಜ್ ಸಾಗರ್.