ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Showing posts with label ದಿವ್ಯಾಂಕಣ. Show all posts
Showing posts with label ದಿವ್ಯಾಂಕಣ. Show all posts

Friday 11 September 2020

ಮಕ್ಕಳ ಕೋಪ ಶಮನ ಮಾಡಲು ಸರಳ ಮಾರ್ಗಗಳು

ದಿವ್ಯಾಂಕಣ     

                 
 ಪುಟ್ಟ ಮಕ್ಕಳ  ಹಠ ಕೆಲವೊಮ್ಮೆ ಪೋಷಕರಿಗೆ ಕಿರಿಕಿರಿ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಅತೀ ಬೇಸರ ಹಾಗೂ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತದೆ. ಆದಾಗಿಯೂ ಈ ಸಮಸ್ಯೆಯನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುವುದರ ಮೂಲಕ ನೀವು ಓರ್ವ ನುರಿತ ಪೋಷಕರು ಎಂಬುದನ್ನು ಸಾಬೀತು ಪಡಿಸಲೂ ಸಹ ಇಂತಹ ಸನ್ನಿವೇಶವು ಪೂರಕವಾಗಿರುತ್ತದೆ. ಇತ್ತೀಚೆಗೆ ಕೈಗೊಳ್ಳಲಾದ ಸಮೀಕ್ಷೆಯೊಂದರ ವರದಿಯ ಪ್ರಕಾರ, ಮಕ್ಕಳ ಕುರಿತಾದ ಪೋಷಕರ ಈ ಮೇಲಿನ ಸಮಸ್ಯೆಯ  ವಿಚಾರದಲ್ಲಿ ಯಶಸ್ಸಿನ ದರವು ಸಾಕಷ್ಟು ಕಡಿಮೆ ಇದೆ. ವಾಸ್ತವವಾಗಿ, ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಪೋಷಕರು ಈ ಸಮಸ್ಯೆಯನ್ನು ಎದುರುಗೊಂಡಾಗ ಮಕ್ಕಳತ್ತ ಕಿರುಚುವುದು, ವಿಪರೀತವಾಗಿ ಮಕ್ಕಳಿಗೆ ಬೈಯ್ಯುವುದು, ಮತ್ತು ಮಕ್ಕಳನ್ನು ಹೆದರಿಸುವುದು ಹಾಗೂ ತಮ್ಮ ಬೇಸರವನ್ನು ಹೊರಹಾಕಲು ಬಾಗಿಲುಗಳನ್ನು  ಮುಚ್ಚುವುದು ಇವೇ ಮೊದಲಾದ ಕ್ರಿಯೆಗಳಲ್ಲಿ ತೊಡಗಿದ್ದುದನ್ನು ಒಪ್ಪಿಕೊಳ್ಳುತ್ತಾರೆ.ದೈಹಿಕ ಮತ್ತು ಹಿಂಸಾತ್ಮಕ್ಕ ಕ್ರಿಯೆಗಳೂ ಸಹ ಸಾಮಾನ್ಯ. ಮನೋರೋಗಗಳ ಕುರಿತಾದ ನಿಯತಕಾಲಿಕೆಯೊಂದರಲ್ಲಿ ಪ್ರಕಟಗೊಂಡ ಅಂಕಣವೊಂದು, ಸುಮಾರು ಶೇ. 85% ರಷ್ಟು ಹದಿಹರೆಯದ ಮಕ್ಕಳು ತಮ್ಮ ತಪ್ಪು ವರ್ತನೆಗಾಗಿ ಪೋಷಕರಿಂದ ಶಿಕ್ಷೆಗೆ ಒಳಗಾದ ಅಥವಾ ಹೊಡೆಯಲ್ಪಟ್ಟ ಬಗ್ಗೆ ವಿವರಿಸಲ್ಪಟ್ಟಿದೆ. ಹದಿಹರೆಯದ ಮಕ್ಕಳ ಅತೀ ಸಿಡುಕು, ಕೋಪ, ಮತ್ತು ಚಿಕ್ಕ ಮಕ್ಕಳ ಹಠಮಾರಿತನಗಳನ್ನು ನಿಭಾಯಿಸುವುದರ ಕುರಿತ  ಮಾರ್ಗದರ್ಶಿಯ ಬಗ್ಗೆ ಈ ಕೆಳಗೆ ನೀಡಲಾಗಿದೆ.                         
                    ೧)ಶಾಂತಚಿತ್ತರಾಗಿರುವುದು ಮತ್ತು ಮಕ್ಕಳ ನೈಜ ಸಮಸ್ಯೆಗೆ ಕಿವಿಯಾಗುವುದು. 

ಹೆಚ್ಚಿನ ಪೋಷಕರು ಮಕ್ಕಳ ವರ್ತನೆಯ ಕುರಿತು  ಬೇಗನೇ ತಾಳ್ಮೆಯನ್ನು ಕಳೆದುಕೊಳ್ಳುತ್ತಾರೆ ಆದ್ದರಿಂದ, ಅವರು ಮಕ್ಕಳ ಕುರಿತು ಬಹು ಬೇಗ ಕೋಪಗೊಳ್ಳುತ್ತಾರೆ.   ಕೆಲವೊಮ್ಮೆಯಂತೂ ಮಕ್ಕಳು ದೈಹಿಕ ಹಿಂಸೆಯ ಕುರಿತೂ ಸಹ ಪೋಷಕರನ್ನು ಭಯಗೊಳಿಸುತ್ತಾರೆ. ಆದರೆ, ಈ ಎಲ್ಲಾ ಸಂದರ್ಭಗಳಲ್ಲಿಯೂ ಪೋಷಕರ ಕೋಪಭರಿತ ಪ್ರತಿಕ್ರಿಯೆಯು ಉರಿಯುವ ಬೆಂಕಿಗೆ ತುಪ್ಪ ಸುರಿದoತಾಗುತ್ತದೆ ಮತ್ತು ನೆಮ್ಮದಿ ಎಂಬುದು ಮರೀಚಿಕೆಯಾಗುತ್ತದೆ. ಇದಕ್ಕೆ ಬದಲಾಗಿ, ಪೋಷಕರು ಇಂತಹ ಸನ್ನಿವೇಶಗಳಲ್ಲಿ ಶಾಂತಚಿತ್ತತೆಯನ್ನು ಕಾಪಾಡಿಕೊಳ್ಳುವಂತೆ ತಜ್ಞರು ಶಿಪಾರಸು ಮಾಡುತ್ತಾರೆ. ಏಕೆಂದರೆ, ಮಕ್ಕಳಂತೆಯೇ ಪೋಷಕರೂ ಕೂಡ ಇಂತಹ ಸಂದರ್ಭದಲ್ಲಿ ಕೋಪೋದ್ರಿಕ್ತರಾಗಿ ವರ್ತಿಸತೊಡಗಿದರೆ, ಅದು ಅನವಶ್ಯಕವಾಗಿ ಪರಿಸ್ಥಿತಿಯೂ ದು:ಖಾಂತವಾಗಬಹುದು. ಇಷ್ಟಕ್ಕೂ, ತಾಳ್ಮೆ ಹಾಗೂ ಸಮಾಧಾನದಿಂದ ಕೂಡಿದ ಪೋಷಕರ ವರ್ತನೆಯು ಮಕ್ಕಳ ಪಾಲಿಗೆ "ಬಿರುಗಾಳಿಯ ನಡುವೆ ಸಿಕ್ಕ ಸ್ವರ್ಗ" ದಂತೆ ಅಪ್ಯಾಯಮಾನವಾಗಬಹುದು. ಬಹುತೇಕ ತಜ್ಞರ ಅಭಿಮತದ ಪ್ರಕಾರ ಮಕ್ಕಳ ಅಂತಹ ವರ್ತನೆಯನ್ನು ಸಂಪೂರ್ಣವಾಗಿ ಹೊರಹರಿಯಲು ಅವಕಾಶ ಕಲ್ಪಿಸಿಕೊಡಬೇಕು. ಹೀಗೆ ಮಾಡುವುದರಿಂದ ಮಗುವಿನ ನೈಜ ಸಮಸ್ಯೆಯನ್ನು ಅರಿತಂತಾಗುತ್ತದೆ ಹಾಗೂ ತನ್ಮೂಲಕ ಮಗುವೂ ಸಹ ನಿರ್ಲಕ್ಷ್ಯಕ್ಕೆ ಒಳಗಾದ ಅಥವಾ ಮನಸ್ಸಿಗೆ ಅಘಾತವಾದ ಭಾವನೆಗೆ ಈಡಾಗುವುದಿಲ್ಲ.        

  ೨.ಯಾವುದೇ ಕಾರಣಕ್ಕೂ ಸಹ ಮಕ್ಕಳ ಮೇಲೆ ದೈಹಿಕ ಹಲ್ಲೆಯನ್ನು ಮಾಡಬೇಡಿ.                    ಮಗುವಿಗೆ ಕೋಪಬಂದಾಗ ಮಗುವು ಪೀಠೋಪಕರಣವನ್ನೋ ಅಥವಾ ಕೆಲವೊಮ್ಮೆ ತನ್ನ ಸಹೋದರನ್ನೋ ಅಥವಾ ಇನ್ನೂ ಕೆಲವೊಮ್ಮೆ ತನ್ನ ಹೆತ್ತವರನ್ನೇ ಹೊಡೆಯಲು ಮುಂದಾದಾಗ, ಆ ಮಗುವಿನ ವರ್ತನೆಯೂ ಸಹಿಸಲು ಅಸಾಧ್ಯ ಅನಿಸುತ್ತದೆ   ಇಂತಹ ಸನ್ನಿವೇಶದಲ್ಲಿ ಹೆತ್ತವರು, ದೈಹಿಕವಾಗಿ ಶಿಕ್ಷಿಸಿದರೇ  ಮಗುವಿನೊಂದಿಗೆ ವ್ಯವಹರಿಸುವುದು ಅವರಿಗೆ ಕಷ್ಟವಾಗುತ್ತದೆ. ಮಗುವಿನ ಮನಸ್ಸಿನಲ್ಲಿ ಅದಾಗಲೇ ದ್ವೇಷವು ಮನೆಮಾಡಿರುತ್ತದೆ ಹಾಗೂ ಅದರ ಪರಿಣಾಮವಾಗಿ ಮಗುವನ್ನು ಶಾಂತ ಮನಸ್ಥಿತಿಗೆ ತರುವುದು ಮತ್ತಷ್ಟೂ ಜಟಿಲವಾಗುತ್ತದೆ. ಪೋಷಕರ ವತಿಯಿಂದ ದೈಹಿಕ ಪ್ರತಿಕ್ರಿಯೆಯು ಮಕ್ಕಳ ವರ್ತನೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ಇದು ನಿಜಕ್ಕೂ ಹೆತ್ತವರಿಗೆ ಅನಪೇಕ್ಷಣೀಯವಾಗಿರುತ್ತದೆ. ಹೆತ್ತವರ ಕಡೆಯಿಂದ ಇಂತಹ ವರ್ತನೆಯು ಖಂಡಿತವಾಗಿಯೂ ಒಳ್ಳೆಯದಲ್ಲ ಯಾಕೆಂದರೆ, ಇದು ಪರಿಸ್ಥಿಯನ್ನು ತಿಳಿಗೊಳಿಸುವುದರ ಬದಲಾಗಿ ತೊಂದರೆಯನ್ನು ಉಂಟುಮಾಡುತ್ತದೆ.  
           3.ಸಿಟ್ಟಿನ ಸಂದರ್ಭದಲ್ಲಿ ಸರಿಯಾದ ವರ್ತನೆಯ ಕುರಿತು ತಿಳಿಹೇಳುವುದು:                    
 ಒಮ್ಮೆ ಪರಿಸ್ಥಿತಿ ತಿಳಿಯಾದ ನಂತರ  ಈ ಹಿಂದೆ ಸಂಭವಿಸಿದ ಕಹಿ ಸನ್ನಿವೇಶದ ಕುರಿತು ಮಕ್ಕಳಲ್ಲಿ ಪ್ರಸ್ತಾಪಿಸುವುದು ಅತೀ ಅಗತ್ಯ. ಇದು ಯಾವ ರೀತಿಯಾಗಿರಬೇಕೆಂದರೆ ಆ ಮಗುವಿಗೆ ತನ್ನ ತಂದೆ ತಾಯಿಯು ಪರಿಸ್ಥಿಯನ್ನು ಅರ್ಥಮಾಡಿಕೊಂಡಿದ್ದಾರೆ ಎಂಬುದು ಅರಿವಾಗುವoತಿರಬೇಕು. ಕೋಪವನ್ನುoಟು ಮಾಡುವ ಸಂದರ್ಭದಲ್ಲಿ  ಸರಿಯಾದ ರೀತಿಯಲ್ಲಿ ವರ್ತಿಸಲು ಇರುವ ಇತರ ಅನೇಕ ಮಾರ್ಗೋಪಾಯಗಳ ಬಗ್ಗೆ ಮಕ್ಕಳಿಗೆ ಅರಿವಾಗುವಂತೆ ತಿಳಿ ಹೇಳುವುದು ಒಂದು ಅತ್ಯುತ್ತಮ ಆರಂಭ. ಮೊದಲು, ನಿಜವಾಗಿಯಾದರೂ ನಡೆದದ್ದೇನು ಎಂಬುದರ ಬಗ್ಗೆ ಮಕ್ಕಳಿಂದ ವಿವರಣೆಯನ್ನು ಪಡೆಯಬೇಕು. ಆದರೆ, ಹೆಚ್ಚಿನ ಹೆತ್ತವರು ಇದರ ಗೋಜಿಗೇ ಹೋಗುವುದಿಲ್ಲ. ಕಾರಣ, ಅವರು ಅವರದ್ದೇ ಅದ ನಿರಾಶೆ, ಹತಾಶೆಗಳಿಂದ ಬಳಲುತ್ತಿರುತ್ತಾರೆ ಮತ್ತು ಸ್ವಭಾವತಃ ಕೋಪಿಷ್ಟರಾಗಿರುತ್ತಾರೆ. ಇದಾದ ನಂತರ, ಕೋಪದ ಸನ್ನಿವೇಶಗಳಲ್ಲಿ ಹೇಗೆ ಬೇರೆ ಬೇರೆ ಉತ್ತಮ ಮಾರ್ಗೊಪಾಯಗಳಿಂದ ಪರಿಸ್ಥಿತಿಯನ್ನು ನಿಭಾಯಿಸಬಹುದು ಎಂಬುದನ್ನು ಮಕ್ಕಳಿಂದಲೇ ಕೇಳಿ ಉತ್ತರ ಪಡೆಯಿರಿ. ಚಿಕ್ಕ ಮಕ್ಕಳಿಗಂತೂ ಇವೆಲ್ಲವನ್ನೂ ಸ್ವತಃ ಹೆತ್ತವರೇ ಸರಳವಾಗಿ ಅವರಿಗೆ ಮನದಟ್ಟಾಗುವಂತೆ ತಿಳಿಸಿಹೇಳಬೇಕಾಗುತ್ತದೆ.     ಕೋಪದ ಮತ್ತು ಬೇಸರದ ಸಂದರ್ಭಗಳಲ್ಲಿ ವ್ಯವಹರಿಸಬೇಕಾದ ಸ್ವೀಕಾರಾರ್ಹ ಮಾರ್ಗಗಳ ಕುರಿತು ಮಕ್ಕಳೊಂದಿಗೆ ಚರ್ಚಿಸಿರಿ.              

   4.ಕೋಪವನ್ನು ಕಡಿಮೆ ಮಾಡಲು ದೈಹಿಕ ಚಟುವಟಿಕೆಗಳು:   ಕೋಪವನ್ನು ಹಾನಿಕಾರಕವಲ್ಲದ ರೀತಿಯಲ್ಲಿ ಹೊರಹಾಕಬಹುದು.ಇದಕ್ಕೆ ಸಂಬಂಧಿಸಿದಂತೆ ಒಂದು ಸರಳವಾದ ಆಟವು ಈ ರೀತಿ ಇದೆ. ಇದಕ್ಕೆ ಬೇಕಾಗಿರುವುದು ಬಯಲಲ್ಲಿ ಒಂದು ಗೋಡೆ ಮತ್ತು ಕೆಲವು ಒದ್ದೆ ಬಟ್ಟೆಗಳು. ಮಕ್ಕಳು, ಅವರಿಗೆ ಬೇಸರವನ್ನುಂಟು ಮಾಡುವ ಅಥವಾ ಅವರನ್ನು ಕೆರಳಿಸುವ ಸನ್ನಿವೇಶಗಳು ಮತ್ತು ಜನರ ಕುರಿತಾಗಿ ಈ ಗೋಡೆಯ ಮೇಲೆ ಅವರು ಬರೆಯಬೇಕು. ನಂತರ ಅವರು ಒದ್ದೆ ಬಟ್ಟೆಗಳನ್ನು ತಮ್ಮ ಬರವಣಿಗೆಗಳ ಮೇಲೆ ಎಸೆಯಲು ಅವಕಾಶ ಒದಗಿಸಬೇಕು. ಇದೊಂದು ಹಾನಿಕಾರಕವಲ್ಲದ ಕ್ರಿಯೆಯಾಗಿದ್ದು, ಕೋಪವನ್ನು ಮನಸ್ಸಿನಿಂದ ಹೊರಹಾಕಲು ಒಂದು ಸರಳ ಮಾರ್ಗೋಪಾಯ. ಇಂತಹ ಒಂದು ಕ್ರೀಡೆಯನ್ನು ಮಕ್ಕಳಿಗೆ ತಿಳಿಸುವುದರ ಮೂಲಕ ಪೋಷಕರು ಮಕ್ಕಳಿಗೆ ಕೋಪದೊಂದಿಗೆ ವ್ಯವಹರಿಸುವ ಪರಿಣಾಮಕಾರಿ ಮಾರ್ಗಗಳ ಇರುವಿಕೆಯ ಬಗ್ಗೆ ತಿಳಿಸಿದಂತಾಗುವುದು. 
5.ಕೋಪದೊಂದಿಗೆ ನೀವು ಹೇಗೆ ವ್ಯವಹರಿಸುತ್ತೀರಿ ಎಂಬುದನ್ನು ಸ್ವತಃ ನೀವೇ ಅವರಿಗೆ ತೋರಿಸಿಕೊಡಿ: ಮಕ್ಕಳು ಇತರರ ವರ್ತನೆಯನ್ನು ಅನುಸರಿಸುವುದರಲ್ಲಿ ಬಹಳ ನಿಸ್ಸೀಮರು. ಈ ಕಾರಣಕ್ಕಾಗಿಯೇ, ಪೋಷಕರು ತಾವು ಕೋಪದೊಂದಿಗೆ ಸ್ವತಹ ಹೇಗೆ ವರ್ತಿಸುತ್ತಾರೆ ಎಂಬುದನ್ನು ತೋರಿಸಿಕೊಡಬೇಕಾಗುತ್ತದೆ. ನಿಮಗಿರುವ ಬೇಸರ ಮತ್ತು ನಿಮಗೆ ಕೋಪ ತರಿಸುವ ಸನ್ನಿವೇಶಗಳ ಬಗ್ಗೆ ಮಾತನಾಡಿರಿ ಹಾಗೂ ಅಂತಹ ಸಂದರ್ಭಗಳಲ್ಲಿ ನೀವು ಹೇಗೆ ವರ್ತಿಸುವಿರಿ ಎಂಬುದನ್ನು ತೋರಿಸಿ ಕೊಡಿ. ಹಾ ನೆನಪಿರಲಿ, ಈ ಸಂದರ್ಭದಲ್ಲಿ ನೀವು ತಾಳ್ಮೆ ಕಳೆದುಕೊಳ್ಳಬಾರದು ಅಥವಾ ಕುರ್ಚಿ ಮೇಜುಗಳನ್ನು ಎತ್ತಿ ಎಸೆಯಬಾರದು. ಹಾಗೆಯೇ ನೀವು ತಿಳಿಹೇಳಿದ್ದು ಸಮoಜಸವಾದುದಾಗಿದ್ದರೆ ಅದನ್ನು ಅನುಮೋದಿಸಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿರಿ. ಅಂತೆಯೇ, ನಿಮಗೂ ಕೂಡ ಸ್ವಲ್ಪ ಮಾನಸಿಕ ನೆಮ್ಮದಿಯ ಅವಶ್ಯಕತೆಯಿದೆ ಎಂಬುದನ್ನು ಅವರಿಗೆ ತೋರಿಸಲು ಹೆದರಬೇಡಿ. ಕೆಲವು ಹೆತ್ತವರು ಕಾರಿನಂತಹ ತಮ್ಮ ಖಾಸಗಿ ವಾಹನದಲ್ಲಿ ತಮ್ಮ ಸಿಟ್ಟೆಲ್ಲವನ್ನೂ ಹೊರಹಾಕಿದರೆ, ಮತ್ತೆ ಕೆಲವರು ತಲೆದಿಂಬಿಗೆ ಬಾರಿಸುತ್ತಲೋ ತಮ್ಮ ಕೋಪವನ್ನು ಹೊರಗೆಡವುತ್ತಾರೆ, ಅದೂ ಕೂಡ ಖಾಸಗಿಯಾಗಿ. ನಿಜಕ್ಕೂ ಅತ್ಯಂತ ಕಠಿಣತಮ ಸವಾಲು ಯಾವುದೆಂದರೆ ಪೋಷಕರು ತಮ್ಮ ತಾಳ್ಮೆಯ ಕಟ್ಟೆಯೊಡೆದು, ಮಕ್ಕಳ ಮೇಲೆ ಸಿಕ್ಕಾಪಟ್ಟೆ ಸಿಟ್ಟಿಗೇಳುವ ಸಂದರ್ಭ. ಇದು ನಿಜಕ್ಕೂ ಹೆತ್ತವರ ಪಾಲಿಗೆ ಅಗ್ನಿಪರೀಕ್ಷೆ. ಆದರೆ, ಈ ಮೇಲೆ ಸೂಚಿಸಿದ ಪಂಚ ಸೂತ್ರಗಳನ್ನು ಅನುಸರಿಸುವುದರ ಮೂಲಕ ಪೋಷಕರು ಸ್ವತಹ ತಮ್ಮ ಕೋಪವನ್ನು ಹಾಗೂ ತಮ್ಮ ಮಕ್ಕಳ ಕೋಪವನ್ನೂ ಸಹ ಪರಿಣಾಮಕಾರಿಯಾಗಿ ನಿಭಾಯಿಸಬಲ್ಲರು.

ಡಾ.ದಿವ್ಯಾ ವಿನಯ್