ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 21 May 2020

ಆರ್ ಕೆ ನಾರಾಯಣ್ ಅವರ ಮಕ್ಕಳ ಕಾದಂಬರಿ ಸ್ವಾಮಿ ಮತ್ತು ಅವನ ಗೆಳೆಯರು

ಕೊರೋನಾ ವಿಪತ್ತಿನ ಸುದೀರ್ಘ ರಜೆಯಲ್ಲಿ ಮತ್ತೆ ಸೆಳೆದ ಸ್ವಾಮಿ ಮತ್ತು ಅವನ ಗೆಳೆಯರು. 

ಸೋಮವಾರ ಬೆಳಗ್ಗೆ ಹಾಸಿಗೆಯಿಂದೆದ್ದು ಕಣ್ಣು ಬಿಡುವುದಕ್ಕೆ ಕೂಡ ಸ್ವಾಮಿನಾಥನಿಗೆ ಇಷ್ಟ ಇರಲಿಲ್ಲ. ವಾರದಲ್ಲಿ ಅವನಿಗೆ  ಸೋಮವಾರ ಎಂದರೆ ಆಗದು.ಶನಿವಾರ ಭಾನುವಾರಗಳ ಸೊಗಸಾದ ಸುಖದ ಸ್ವಾತಂತ್ರವಾದ ಮೇಲೆ ಇದ್ದಕ್ಕಿದ್ದಂತೆ ಸೋಮವಾರದ ಶಿಸ್ತಿಗೆ ತಲೆಬಾಗುವುದು ಸುಲಭವೇ...?

ಇದು ಯಾವ ಕಾದಂಬರಿಯ ಆರಂಭದ ಸಾಲುಗಳು ಹೇಳಬಲ್ಲಿರಾ....?

"ಇಂಡಿಯಾ ದೇಶದ ಹವಾಗುಣದ ಬಗ್ಗೆ ನಿನಗೇನು ಗೊತ್ತು..?

"ಬೇಸಿಗೆಯಲ್ಲಿ ಶಕೆ ಚಳಿಗಾಲದಲ್ಲಿ ಚಳಿ ಸಾರ್.."

ಇಂತಹ ಕಚಗುಳಿ ಇಡುವ ಶಾಲಾ ಮಕ್ಕಳ ತರಲೆ  ಉತ್ತರಗಳ ಸಂಭಾಷಣೆಗಳಿರುವ ಆ ಕಾದಂಬರಿ ಕಿರುತೆರೆಗೆ ಲಗ್ಗೆ ಹಾಕಿ ಜಗತ್ತಿನ ಹಲವೆಡೆ ಮನೆಮಾತಾಗಿತ್ತು.

ನೆನಪಾಯಿತಲ್ಲ...ಹಾಂ .. ಅದೇ ಸ್ವಾಮಿನಾಥ , ಅವನ ಗೆಳೆಯರಾದ ಸೋಮು,ಮಣಿ, ಶಂಕರ್, ಸಾಮ್ಯುಯೆಲ್,
ಅವರ ಮಾಲ್ಗುಡಿ  ಶಾಲಾ ದಿನಗಳು..
ಅವರ ಅಜ್ಜಿ ರಾಜಂ, ಶಿಕ್ಷಕ ಎಬನೀಜರ್, ಡಿ.ಪಿಳ್ಳೆ, ವೇದ ನಾಯಗಂ, ಮತ್ತಿತರರು.

ಎಸ್, ಅದೇ..." ಸ್ವಾಮಿ ಅಂಡ್ ಫ್ರೆಂಡ್ಸ್ ' .  ಕನ್ನಡದ ನೆಲದ  ಸಾಹಿತಿಯಿಂದ ರಚನೆಯಾದ ಇಂಗ್ಲಿಷ್ ನಾವೆಲ್. ಮಕ್ಕಳ ಸಾಹಿತ್ಯಲೋಕದ ವಿನೂತನ  ಥ್ರಿಲ್ಲರ್ ಕಾದಂಬರಿ. ಹಲವು ಭಾಷೆಗಳಿಗೆ ಅನುವಾದವಾದ ಈ ಕೃತಿಯನ್ನು  ಹೆಚ್ ವೈ ಶಾರದಾಪ್ರಸಾದ್ ಅವರು  ಸ್ವಾಮಿನಾಥ- ಮತ್ತು ಅವನ ಸ್ನೇಹಿತರು ಎನ್ನುವ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಹೊಸತನದ ಹುಡುಕಾಟಕ್ಕೆ ನಾಂದಿ ಹಾಡಿದ ಕೃತಿ. ಸ್ವಾಮಿನಾಥ- ಮತ್ತು ಅವನ ಗೆಳೆಯರ ಚಿತ್ರಣವೇ ಇಡೀ ಕೃತಿಯುದ್ದಕ್ಕೂ ತೆರೆದುಕೊಳ್ಳುತ್ತದೆ.  

ಸರಯೂ ನದಿ ತೀರದಲ್ಲಿ ತೆರೆದುಕೊಳ್ಳುವ ಮಾಲ್ಗುಡಿಯ ಶಾಲಾದಿನಗಳ  ಅಲ್ಲಿನ ಕಥಾ ಪರಿಸರವು  ಅದು ನಮಗೆ ಉತ್ತರ ಭಾರತದ್ದು ಎಂದು ಎನಿಸುವುದೇ ಇಲ್ಲ.
ಅಲ್ಲಿನ ಸಂಭಾಷಣೆಗಳು, ಕಥಾ ಪರಿಸರ ನಮ್ಮ ಮನಃಪಟಲದಲ್ಲಿ ಆವರಿಸಿ ಕಥಾ ಪಾತ್ರಗಳನ್ನು ಮೂಡಿಸಿ ಕಲ್ಪನೆಯನ್ನು ವಿಸ್ತರಿಸುತ್ತದೆಯಲ್ಲದೆ ಅದು ನಮ್ಮ,ಮೈಸೂರು, ಮಲೆನಾಡು ಭಾಗದ ಕತೆಯಾಗಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಆರ್ ಕೆ ನಾರಾಯಣ್ ಅವರು ಮೈಸೂರು ಭಾಗದವರು ಆಗಿರುವುದರಿಂದ ಅದು ಇಂಗ್ಲೀಷ್ ಭಾಷೆಯ ಕಾದಂಬರಿಯಾಗಿದ್ದರು ಸಹ ಕನ್ನಡ ನೆಲದ ಸಹಜ ಭಾಷಾ ಸೊಗಡು ಅಲ್ಲಿದೆ. ಅಲ್ಲದೆ ಶಂಕರ್ ನಾಗ್ ಅವರ ಕಲ್ಪನೆಯ ವಿಸ್ತರಣೆಯ ಮಾಲ್ಗುಡಿ ಡೇಸ್ ನಮ್ಮ ಕಣ್ಣಲ್ಲಿ ಇನ್ನು ಹಾಗೆ ಇರುವುದರಿಂದ ಈ ಕಾದಂಬರಿ ಓದುತ್ತ ಹೋದಂತೆ ಅದು ಇಂಗ್ಲೀಷ್ ಮೂಲ ಕಾದಂಬರಿ ಎಂದು ಅನಿಸುವುದೇ ಇಲ್ಲ.
ಈಗಂತೂ ಜಿ ಟೀವಿ  'ಮಾಲ್ಗುಡಿ ಡೇಸ್  "ಅನ್ನು ಕನ್ನಡ ಧಾರಾವಾಹಿಯಾಗಿಸಿ ಪ್ರಸಾರವನ್ನು ಮಾಡುತ್ತಿದೆ.
 
ಕನ್ನಡದವರಾಗಿ ಇಂಗ್ಲಿಷ್ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸಾಹಿತ್ಯ ಕೃಷಿ ಮಾಡಿ ಹೆಸರು ಮಾಡಿದ ಭಾರತೀಯ ಸಾಹಿತ್ಯದಲ್ಲೇ   ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿಯೂ ವಿಶಿಷ್ಟ ಸಾಹಿತಿಯಾಗಿ ಬೆಳೆದ ಆರ್ ಕೆ ನಾರಾಯಣ್ ಅವರ ಹೆಸರು ಕೇಳದವರಿಲ್ಲ.
ಅವರ ಆರಂಭದ ಕೃತಿ ಸ್ವಾಮಿ ಅಂಡ್ ಫ್ರೆಂಡ್ಸ್  ನನ್ನನ್ನು ಹಲವು ಕಾರಣಕ್ಕೆ ಸೆಳೆದ ಕೃತಿಯಾಗಿತ್ತು. ಹಲವು ವರ್ಷಗಳ ನಂತರ ಮತ್ತೀಗ  ಕೋರೋನ ವಿಪತ್ತಿನಲ್ಲಿ ಲಾಕ್ ಆಗಿರುವ ಶಾಲಾಮಕ್ಕಳನ್ನು ನೆನೆಸಿಕೊಂಡು , ಮಕ್ಕಳ ಬದುಕಿನಲ್ಲಿ ಆಗುತ್ತಿರುವ ಪಲ್ಲಟಗಳನ್ನು ಗಮನಿಸುತ್ತಲೇ ಈ ಕಾದಂಬರಿಯನ್ನು ಮತ್ತೆ ಏಕೋ ಓದಬೇಕು ಎನಿಸಿತು.

ಮಕ್ಕಳ ಕಾದಂಬರಿಯೊಂದು ಹೇಗಿರಬೇಕು ಎಂಬುದರ ಹೊಸ ಸೂತ್ರ, ಕಥಾತಂತ್ರ, ಕಥಾ ನೇಯ್ಗೆಯ ದೃಷ್ಟಿಯಿಂದಲೂ ಅಂದೇ ಹೊಸ ಮಾರ್ಗ ತೋರಿಸಿದ್ದಾರೆ.

ಕಥೆಯ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಈಗಾಗಲೇ ಮಾಲ್ಗುಡಿ ಡೇಸ್ ಜನಪ್ರಿಯವಾಗಿ ಬಹುತೇಕರನ್ನು ತಲುಪಿಯಾಗಿದೆ.
ಆದರೆ ಪುಸ್ತಕವನ್ನು ಕೈಯಲ್ಲಿಟ್ಟುಕೊಂಡು ಓದುವ ಸುಖವೇ ಬೇರೆ. ಜಿ ಟೀವಿಯ ದಾರವಾಹಿಗಿಂತ
ನ್ಯಾಷನಲ್ ಬುಕ್ ಟ್ರಸ್ಟ್  ಇಂಡಿಯಾ
ಪ್ರಕಟಿಸಿರುವ ಕನ್ನಡ ಅವತರಣಿಕೆ ಪುಸ್ತಕ ಓದಿ.
ನಿಮ್ಮ ಮಕ್ಕಳಿಗೂ ಉಡುಗೊರೆಯಾಗಿ ನೀಡಿ.

ನಿಮ್ಮ ರವಿರಾಜ್ ಸಾಗರ್


 .

1 comment: