ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 4 March 2020

ನಮ್ಮೂರ ಜಾನಪದ ಅನುಸಂಧಾನ

ಹತ್ತಿ ಕಟಗಿ, ಬತ್ತಿ ಕಟಗಿ

ಹತ್ತಿ ಕಟಗಿ
ಬತ್ತಿ ಕಟಗಿ
ಬಾವಣ್ಣವರ
ಬಸಪ್ಪನವರ
ಕೈ ಕೈ ದೂಳಗೈ
ಪಂಚಂ ಪಗಡಂ
ನೆಲಕಡಿ ಹನುಮ
ದಾತರ ದರ‍್ಮ
ತಿಪ್ಪಿ ಮೇಲೆ ಕೋಳಿ
ರಗತ ಬೋಳಿ

ಕೈ ಕೈ ಎಲ್ಲಿ ಹೋಯ್ತು ?
ಕದದ ಸಂದ್ಯಾಗ !
ಕದ ಏನ್ ಕೊಟ್ತು ?
ಚೆಕ್ಕಿ ಕೊಟ್ತು !
ಚೆಕ್ಕಿ ಏನ್ ಮಾಡ್ದಿ ?
ಒಲಿಯಾಗ ಹಾಕ್ದೆ !
ಒಲಿ ಏನ್ ಕೊಟ್ತು ?
ಬೂದಿ ಕೊಟ್ತು !
ಬೂದಿ ಏನ್ ಮಾಡ್ದಿ ?
ತಿಪ್ಪಿಗಾಕಿದೆ !
ತಿಪ್ಪಿ ಏನ್ ಕೊಟ್ತು ?
ಗೊಬ್ಬರ ಕೊಟ್ತು !
ಗೊಬ್ಬರ ಏನ್ ಮಾಡ್ದಿ ?
ಹೊಲಕ ಹಾಕಿದೆ !
ಹೊಲ ಏನ್ ಕೊಟ್ತು ?
ಜೋಳ ಕೊಟ್ತು !
ಜೋಳ ಏನ್ ಮಾಡ್ದಿ ?
ಚೊಲೊ ಚೊಲೊ ನಾ ತಗಂಡೆ
ಸೆರಗ ಮುರಗ(ಕೆಟ್ಟಿದ್ದೆಲ್ಲಾ) ಕುಂಬಾರಗ ಕೊಟ್ಟೆ !
ಕುಂಬಾರ ಏನ್ ಕೊಟ್ಟ ?
ಗಡಿಗಿ ಕೊಟ್ಟ !
ಗಡಿಗಿ ಏನ್ ಮಾಡ್ದಿ ?
ಬಾವ್ಯಾಗ ಬಿಟ್ಟೆ !
ಬಾವಿ ಏನ್ ಕೊಟ್ತು ?
ನೀರು ಕೊಟ್ತು !
ನೀರು ಏನ್ ಮಾಡ್ದಿ ?
ಗಿಡಕ್ಕ ಹಾಕ್ದೆ !
ಗಿಡ ಏನ್ ಕೊಟ್ತು ?
ಹೂವು ಕೊಟ್ತು !
ಹೂವು ಏನ್ ಮಾಡ್ದೆ ?
ದೇವ್ರಿಗೆ ಏರಿಸಿದೆ… !

ಉತ್ತರ ಕರ್ನಾಟಕದ ಊರುಗಳಲ್ಲಿ ಚಿಕ್ಕ ಮಕ್ಕಳು ಒಂದೆಡೆ ಸೇರಿದಾಗ ಮೇಲಿನ ಸಾಲುಗಳನ್ನು ಹೇಳುತ್ತಾ ಆಟ ಆಡುವ ದೃಶ್ಯ ಸಾಮಾನ್ಯ. ನಾಕೆಂಟು ಮಕ್ಕಳು ಸುತ್ತಲೂ ಕುಳಿತು ಅಂಗೈ ಕೆಳಮುಕ ಮಾಡಿ, ನೆಲಕ್ಕೆ ಹಚ್ಚಿ, ಒಂದನೆಯ ಕೈಯಿಂದ ಆರಂಬಿಸಿ-ಹತ್ತಿಕಟಗಿ..ಬತ್ತಿಕಟಗಿ ಎನ್ನುತ್ತಾ ಆಟವಾಡುತ್ತಾರೆ. ಇಲ್ಲಿರುವ ಆಟದ ಸ್ವರೂಪ ಕುರಿತು ಹೇಳುವುದು ನನ್ನ ಉದ್ದೇಶವಲ್ಲ. ಕೂಡಿ ಆಡುವದರೊಂದಿಗೆ ಮಕ್ಕಳು ಪಡುವ ಸಂತೋಷದ ಕುರಿತು ಹೇಳುವ ಇರಾದೆಯೂ ನನಗಿಲ್ಲ. ಅದ್ಬುತ ಲಯ ವಿನ್ಯಾಸದ ವಿವರಣೆಗೂ ನಾ ಕೈ ಹಾಕುವುದಿಲ್ಲ. ಆಟದ ನಿಯಮ ಕುರಿತು ಒಣ ವಿವರಣೆ ನೀಡುವ ಗೋಜಿಗೂ ನಾನು ಹೋಗುವುದಿಲ್ಲ.

ನಾವೆಲ್ಲ ಚಿಕ್ಕಂದಿನಲ್ಲಿ ಹಾಡಿದ ಈ ಹಾಡು ಇಂದಿಗೂ ಹಚ್ಚ ಹಸಿರು! 

ಹತ್ತಿ ಕಟಗಿ ಎಂದರೆ ಜೀವವಿದ್ದ ಮನುಷ್ಯ. ಬತ್ತಿ ಕಟಗಿಯಾಗುವುದೆಂದರೆ ಸಾಯುವುದು. ಸತ್ತ ಮೇಲೆ ಕೆಲ ಹೊತ್ತಿನಲ್ಲಿಯೆ ದೇಹ(ಹೆಣ) ಬಾಯುತ್ತದೆ. ಅದಕ್ಕೆ ಬಾಯುವ ಅಣ್ಣನವರು ಅವರು(ಬಾವಣ್ಣವರ). ಎರಡು ದಿನ ಹಾಗೆಯೇ ಇಟ್ಟರೆ ಬಸಿಯಪ್ಪನವರೂ ಹೌದು(ಬಸಪ್ಪನವರು). ಆದ್ದರಿಂದಲೇ ಅದು ಧೂಳಾಗುವ ಕಾಯ(ಕೈ ಅಲ್ಲ ಅದು ಕಾಯ – ಕಾಯ ಕಾಯ ದೂಳ ಕಾಯ) ಪಂಚಭೂತಗಳಲ್ಲಿ ಕರಗಿ ಹೋಗುವ ಕಾಯ(ಪಂಚಂ ಪಗಡಂ). ಆ ದೇಹಕ್ಕೆ ಸಂಸ್ಕಾರ ಕೊಡಬೇಕಲ್ಲವೆ? ನೆಲ ಕಡಿಯಲು ಹನುಮನಿಗೆ ಹೇಳಬೇಕಾಗುತ್ತದೆ(ನೆಲ ಕಡಿ ಹನುಮ). ಧನವಂತರಾದವರು ದರ‍್ಮವನ್ನೂ ದಾನವನ್ನೂ ಮಾಡಬೇಕಾಗುತ್ತದೆ. ಮಾಡುತ್ತಾರೆ(ದಾತರ ಧರ್ಮ).

ಆದರೆ ಈವರೆಗಿನ ಅವನ ಜೀವನ ತಿಪ್ಪೆಯ ಮೇಲಿನ ಕೋಳಿಯಂತೆ. ಸಂಸಾರದ ಹೊಲಸನ್ನೇ ಕೆದರಿದೆ (ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೂ ತಿಪ್ಪೆ ಕೆದರೂದ ಬಿಡೂದಿಲ್ಲ – ಎಂಬ ಗಾದೆ ಮಾತು ಇದನ್ನೇ ಹೇಳುತ್ತದೆ ಎನಿಸುತ್ತದೆ). ಇದರ ಫಲವಾಗಿ ರಕ್ತದಲ್ಲಿಯೇ ಹುಟ್ಟಿ ಹುಟ್ಟಿ ಬರುವ ಜನ್ಮಾಂತರವನ್ನು ಪಡೆದಿದೆ. ಇದೇ ತಿಪ್ಪೆಮೇಲೆ ಕೋಳಿ ರಗತಬೋಳಿ.

ಈ ಶಿಶುಪ್ರಾಸದ ಮೊದಲ ಭಾಗ ಇಲ್ಲಿಗೆ ಮುಗಿಯಿತು. ಇನ್ನು ಮುಂದಿನ ಭಾಗ ಏನನ್ನು ಹೇಳುತ್ತದೆ? ಪ್ರಶ್ನೋತ್ತರ ರೂಪದಲ್ಲಿರುವ ಇದು ವಸ್ತುವಿನ ಪರಿವರ್ತನೆಯ ಸತ್ಯವನ್ನು ಸಾಂಕೇತಿಕವಾಗಿ ತಿಳಿಸುತ್ತದೆ. ಜಗತ್ತಿನ ಯಾವ ವಸ್ತುವಿಗೂ ಜೀವಿಗೂ ನಿಜ ಅ‍ರ್ಥದಲ್ಲಿ ಸಾವಿಲ್ಲ. ಅದು ರೂಪಾಂತರ ಹೊಂದುತ್ತಿರುತ್ತದೆ ಅಷ್ಟೆ.

ಕಾಯ ಎಲ್ಲಿ ಹೋಯಿತು?(ಕೈ ಕೈ ಎಲ್ಲಿ ಹೋಯಿತು?) ಕದದ ಸಂಧಿಯಲ್ಲಿ. ಕದದ ಸಂದಿ ಎಂಬುದು ಮತ್ತೆ ಸಂಸಾರದ ಸಂಗತಿ ಕಡೆಗೆ ಬೊಟ್ಟು ಮಾಡುತ್ತದೆ. ಅಲ್ಲಿಂದ ಹೊಲ ಏನ್ ಕೊಟ್ಟಿತು? ಎನ್ನುವವರೆಗೆ ಚಕ್ಕಿ, ಬೂದಿ, ಗೊಬ್ಬರ ಮುಂತಾದವು ರೂಪಾಂತರದ ಸಂಗತಿಗಳನ್ನೇ ಹೇಳುತ್ತವೆ . ಜೊತೆಗೆ ಬೂದಿ ,ಗೊಬ್ಬರ, ಹೊಲ ಇವು ಬೇಸಾಯ ಸಂಬಂಧದ ಕ್ರಿಯೆಗಳನ್ನು ಸೂಚಿಸುತ್ತವೆ. ಕುತೂಹಲಕರ ಸಂಗತಿಯೆಂದರೆ, ಹೊಲ ಕೊಟ್ಟ ಜೋಳದಲ್ಲಿ, ಚಲೊ(ಒಳ್ಳೆದು) ಇದ್ದವನ್ನು ತಾ ತಿಂದು ಸೆರಗು ಮುರಗನ್ನು ಕುಂಬಾರನಿಗೆ ಕೊಡುವ ವಿಧಾನ.

ಕುಂಬಾರ ಗಡಿಗೆ ಸೃಷ್ಟಿ ಮಾಡುವ ಸೃಷ್ಟಿಕರ್ತ( ದೇಹಕ್ಕೆ ಗಡಿಗೆ ಎನ್ನುವ ಪರಂಪರೆ ಅನುಬಾವ ಸಾಹಿತ್ಯದಲ್ಲಿದೆ). ಅವನಿಗೆ ಸೆರಗು ಜೋಳವನ್ನು ಮಾತ್ರ ಕೊಡುತ್ತಾನೆ!(ನಮ್ಮ ವರ್ತನೆಗೆ ಈ ಸಂಗತಿಯನ್ನು ಹೋಲಿಸಿ ನೋಡಬಹುದು. ದೇವರಿಗೆ ಮಾಡುವ ಕಡಬು ನೈವೇದ್ಯಗಳೆಲ್ಲಾ ಚಿಕ್ಕವಿರುತ್ತವೆ ಇಲ್ಲವೇ ನೆಪಮಾತ್ರಕ್ಕೆ ಇರುತ್ತವೆ). ಭೋಗ ಜೀವನಕ್ಕೆ ಮೊದಲ ಮಣೆ ಹಾಕಿದ ಮನುಷ್ಯ ಕೊನೆಗೂ ಎಚ್ಚರಗೊಳ್ಳುತ್ತಾನೆ (ಗಡಿಗೆ ಏನ್ ಮಾಡಿದಿ?). ಹಾಗೆ ಎಚ್ಚರಗೊಂಡ ಮನುಷ್ಯ ಗಡಿಗೆಯನ್ನು ಭಕ್ತಿಜಲ ತುಂಬಿಕೊಳ್ಳಲು ಬಾವಿಗೆ ಬಿಡುತ್ತಾನೆ(ಬಾವ್ಯಾಗ ಬಿಟ್ಟೆ). ಆ ಜಲವನ್ನೇ(ಬಾವಿ ಏನ್ ಕೊಟ್ಟಿತು? -ನೀರ ಕೊಟ್ಟಿತು) ಗಿಡಕ್ಕೆ ಹಾಕಿ ಜೀವಾತ್ಮ ಪುಷ್ಪ ಅರಳಲು ಕಾರಣವಾಗುತ್ತಾನೆ. ಹಾಗೆ ಅರಳಿದ ಹೂವನ್ನು ದೇವರಿಗೆ ಅರ್ಪಿಸಿ ಧನ್ಯನಾಗುತ್ತಾನೆ (ಹೂವು ಏನ್ ಮಾಡಿದಿ ?- ದೇವರಿಗೆ ಏರಿಸಿದೆ).

ಇಲ್ಲಿಗೆ ಜೀವನ ಕತೆಗೆ ಒಂದು ‍ಅರ್ಥ ಬರುತ್ತದೆ. ಜೀವನ ಸಾರ್ಥಕವಾಗುತ್ತದೆ. ಮೊದಲ ಭಾಗದ ಅಪೂರ್ಣತೆ ಇಲ್ಲಿ ಪೂರ್ಣವಾಗುತ್ತದೆ. ಇಡೀ ಬದುಕಿನ ಚಿತ್ರಣವನ್ನು ಇಷ್ಟೊಂದು ಅಡಕವಾಗಿ, ‍ಅರ್ಥಪೂರ್ಣವಾಗಿ ಹೇಳಿದ ರೀತಿ ಬೆರಗು ಹುಟ್ಟಿಸುತ್ತದೆ! ರಚನೆಯ ಸ್ವರೂಪದಲ್ಲಿ ಒಂದು ಸಂಗತಿಯಿಂದ ಇನ್ನೊಂದು ಸಂಗತಿಗೆ ಕೋ ಕೊಡುತ್ತ ಸಾಗುವ ಈ ಶಿಶುಪ್ರಾಸ ರಂಜನೆಯ ಜೊತೆಗೆ ನೆನಪಿನ ಶಕ್ತಿಯನ್ನು ಹರಿತಗೊಳಿಸಲು, ಸಹ ಸಂಬಂಧವನ್ನು ಕಲ್ಪಿಸಲು ನೆರವಾಗುತ್ತದೆ. ಮಕ್ಕಳ ಮನೋವಿಕಾಸಕ್ಕೆ ಕಾರಣವಾಗುತ್ತದೆ.

No comments:

Post a Comment