ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 16 January 2020

ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ

ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ

ಮಕ್ಕಳ ಸಾಹಿತ್ಯವು ತಾಯಿಯ ಜೋಗುಳ ಹಾಡುಗಳಿಂದಲೇ ಆರಂಭವಾಗಿದೆ. ಜನಪದರ ಜೋಗುಳಗಳಲ್ಲಿ  ಚಂದಮಾಮನ ಕುರಿತಾದ ಪ್ರಾಣಿ-ಪಕ್ಷಿಗಳ ಹಾಡುಗಳು ಸಾಕಷ್ಟಿವೆ. ಅವೆಲ್ಲವೂ ಅವರ ಪರಿಸರ ಪ್ರಜ್ಞೆಯನ್ನು ಸಾರುತ್ತದೆ. ಸಹಜವಾಗಿ ಮಕ್ಕಳು ಕುತೂಹಲದ ಕಣ್ಮಣಿಗಳು .ಅವರು ಪರಿಸರವನ್ನು ಕುತೂಹಲದಿಂದ ವೀಕ್ಷಿಸುತ್ತಾರೆ. ಹಾಗಾಗಿ ಅವರಿಗೆ ಪರಿಸರದ ಕುರಿತಾದ ಶಿಶುಪ್ರಾಸಗಳು  ಹತ್ತಿರವಾಗುತ್ತವೆ.

ಇಂದಿನ ಆಧುನಿಕ ಮಕ್ಕಳ ಸಾಹಿತ್ಯದಲ್ಲು ಪರಿಸರದ ಕುರಿತಾದ ಶಿಶುಪ್ರಾಸಗಳು ಹೆಚ್ಚಾಗಿವೆ . ಕುವೆಂಪು ಅವರ ಬೊಮ್ಮನಹಳ್ಳಿ ಕಿಂದರಜೋಗಿ, ಜಿ.ಪಿ.ರಾಜರತ್ನಮ್ ಅವರ ನಾಗರಹಾವೆ ಹಾವೊಳು ಹೂವೆ, ಸಿದ್ದಯ್ಯ ಪುರಾಣಿಕರು, ಶಿವರಾಮಕಾರಂತರು, ನಾ ಡಿಸೋಜ, ಸಹ ಪರಿಸರ ಮತ್ತು ವಿಜ್ಞಾನದ ವಿಷಯ ವಸ್ತುವಿನ  ಮಕ್ಕಳ ಸಾಹಿತ್ಯ ರಚನೆ ಮಾಡಿದ್ದಾರೆ.

ಇತ್ತೀಚಿನ ಮಕ್ಕಳ ಸಾಹಿತಿಗಳಲ್ಲಿ ಚಂದ್ರಕಾಂತ ಕರದಳ್ಳಿ ಅವರು, ಆನಂದ ಪಾಟೀಲರು, ಹ.ಸ ಬ್ಯಾಕೋಡ್, ಸಿ ಎಂ ಗೋವಿಂದರೆಡ್ಡಿ, ಗಣೇಶ್ ನಾಡರ್, ಸಹ ಪರಿಸರ ಕುರಿತಾದ ಪದ್ಯಗಳನ್ನೇ ಮಕ್ಕಳಿಗಾಗಿ ರಚಿಸಿದ್ದಾರೆ, ಹ.ಸ ಬ್ಯಾಕೋಡರ ನವೀನ ಸಾಕಿದ ನವಿಲು, ಚಂದ್ರಕಾಂತ ಕರದಳ್ಳಿ  ಕಾಡು ಕನಸಿನ ಬೀಡಿಗೆ ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ಕುರಿಸುವ ಹೆಸರಿಸಬಹುದಾದ ಅತ್ಯುತ್ತಮ ಕೃತಿಗಳಾಗಿವೆ. ಅಲ್ಲದೆ ನಾಡಿನ ಬಹುತೇಕ ಮಕ್ಕಳ ಸಾಹಿತಿಗಳು ರಚಿಸಿರುವ ಕೃತಿಗಳು ಪರಿಸರದ ಕುರಿತ ಹೆಚ್ಚಿನ ವಸ್ತು ವಿಷಯವನ್ನು ಹೊಂದಿದ್ದನ್ನಾ ಗಮನಿಸಬಹುದು, ಪರಿಸರ ಮಾನವನಿಂದಾಗಿ ವಿನಾಶದ ಅಂಚಿಗೆ ಹೋಗುತ್ತಿರುವ ಹಿನ್ನೆಲೆಗಳಲ್ಲಿ ಪರಿಸರ ಕುರಿತಾದ ಮಕ್ಕಳ ಸಾಹಿತ್ಯ ವಿಫಲವಾಗಿ ರಚನೆಯಾಗುತ್ತಿರುವುದು ಪರಿಸರ ಪ್ರಜ್ಞೆ ಜಾಗೃತಿ ಮೂಡಿಸಲು ಆಶಾದಾಯಕವಾದ ಬೆಳವಣಿಗೆಯೇ ಸರಿ.
ಆದರೆ ಪರಿಸರ ಪ್ರಜ್ಞೆಯ ಸಾಹಿತ್ಯ ಕೃತಿಗಳನ್ನು ಓದಿದವರು ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಪರಿಸರವನ್ನು ಆರಾಧಿಸುವ ಮಾನವನ ಸಹಜಗುಣ ಮಕ್ಕಳಲ್ಲಿ ತುಸು ಹೆಚ್ಚಾಗಿಯೇ ಇರುತ್ತದೆ. ಸುತ್ತಮುತ್ತಲಿನ ಪ್ರಾಣಿ ಪಕ್ಷಿ ಕೀಟ ಮರಗಿಡಬಳ್ಳಿ ಹೂವುಗಳ ಬಗ್ಗೆ ಕುತೂಹಲ, ಆಕರ್ಷಣೆ ಹೆಚ್ಚಾಗಿರುತ್ತದೆ. ಹಾಗಾಗಿ ಕವಿಗಳು ಮಕ್ಕಳ ಮನಸ್ಸನ್ನು ಮುಟ್ಟಲು  ಪರಿಸರದ ಕುರಿತಾದ ಕವಿತೆಗಳನ್ನು ಹೆಚ್ಚಾಗಿ ರಚಿಸಿದ್ದಾರೆ. ಮಕ್ಕಳು ಅವುಗಳನ್ನು ಓದುವ ಮೂಲಕ ,ಆಲಿಸು ಮೂಲಕ ಪರಿಸರ ಪ್ರಜ್ಞೆ ಮೂಡಿಸಿಕೊಳ್ಳುವುದಲ್ಲದೆ ಸುತ್ತಲಿನ ಪರಿಸರದ ಜ್ಞಾನ ತಿಳಿದುಕೊಳ್ಳುವರು.
ಇಂದಿನ ಹೊಸ ತಲೆಮಾರಿನ ಮಕ್ಕಳ ಸಾಹಿತಿಗಳು ತಮ್ಮ ಸಾಹಿತ್ಯಕೃತಿಗಳಲ್ಲಿ ಮಕ್ಕಳ ಕಾದಂಬರಿಗಳಲ್ಲಿ ಕಥೆಗಳಲ್ಲಿ ಯಥೇಚ್ಛವಾಗಿ ಪರಿಸರದ ಕುರಿತು ಬರೆದಿದ್ದಾರೆ,. ಇತ್ತೀಚಿಗೆ  ನಮ್ಮ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರ ಕೃತಿ ಕಾಡು ಕನಸಿನ ಬೀಡಿಗೆ  ಒಂದು ಉತ್ತಮ ಪರಿಸರ ಕಾದಂಬರಿ ಆಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಈ ಕೃತಿಗೆ ಇತ್ತೀಚಿಗೆ ದೊರಕಿದೆ. ಪೂರ್ಣಚಂದ್ರ ತೇಜಸ್ವಿ ಅವರು ಮಕ್ಕಳ ಸಾಹಿತ್ಯಕ್ಕೆ ಪರಿಸರದ ಕುರಿತಾದ ಉತ್ತಮ ಕೃತಿಗಳನ್ನು ನೀಡಿದ್ದಾರೆ.

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ರಚನೆ ಸಾಕಷ್ಟು ಬೆಳೆದಿದ್ದು ಕುವೆಂಪು ಅವರಂತಹ ಜ್ಞಾನಪೀಠ ಪ್ರಶಸ್ತಿ ವಿಜೇತರು ಸಹ ಮಕ್ಕಳ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಶಿವರಾಮಕಾರಂತರು, ತೇಜಸ್ವಿ,ದೊಡ್ಡರಂಗೇಗೌಡ ಎಚ್.ಎಸ, ವೆಂಕಟೇಶಮೂರ್ತಿ, ನಾ ಡಿಸೋಜ , ಬೋಳುವಾರು ಮಹಮದ ಕುಂಇ,  ಮುಂತಾದವರು ಕನ್ನಡ ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರೆಲ್ಲರೂ ಮಕ್ಕಳ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ ‌ ಸಾಹಿತ್ಯ ಕೃಷಿ ಮಾಡಿದ್ದಾರೆ.
ನಮ್ಮ ರಾಯಚೂರಿನ ಮಕ್ಕಳ ಸಾಹಿತಿಗಳೂ ಸಹಸ್ರ ಪ್ರಜ್ಞೆಯನ್ನು ತಮ್ಮ ಕೃತಿಯಲ್ಲಿ ಜಾಗೃತಗೊಳಿಸಿದ್ದಾರೆ.

ರವಿರಾಜ್ ಸಾಗರ್.


Saturday 4 January 2020

ಬರವಣಿಗೆಯ ಹೊತ್ತು ಗೊತ್ತು.

ಸದಾ ಶಿವ ಹೊರಟೂರು

ಬರವಣಿಗೆಯ ಹೊತ್ತು-ಗೊತ್ತುಗಳು..

ತುಟಿ‌ ಚಟಕ್ಕೆ ಪಟ್ ನೇ ಸಿಗರೇಟ್ ಹಚ್ಚಿ‌ ಬೂದಿ ಮಾಡುತ್ತೇವಲ್ಲ ಆಗಲ್ಲ ಸಾಹಿತ್ಯದ ಬರವಣಿಗೆ.‌ ಅಂಗಡಿ ವ್ಯಾಪಾರದ ನಂತರ ಕೂಡಿ ಕಳೆದು ಕೊಡುವ ರಶೀದಿ ಚೀಟಿಯೂ ಅಲ್ಲ. ಅದರಲ್ಲೂ‌ ಕವನಗಳನ್ನು ಹೀಗೆ ದಿಢೀರನೆ ಬರೆದುಕೊಂಡು  ಕೂರಲು ಸಾಧ್ಯವಾಗುತ್ತದಾ? ಬಹುಶಃ ಇಲ್ಲ, ಸಾಧ್ಯವೂ ಅಲ್ಲ. ಯಾಕೆ ಜಯಂತ್ ಕಾಯ್ಕಿಣಿಯವರ ಎಲ್ಲಾ ಹಾಡುಗಳು‌ ಹಿಟ್ ಆಗಲಿಲ್ಲ. ಒಬ್ಬ ನಿರ್ದೇಶಕ ಒಂದು ಗೆಲುವು ಕಂಡ ನಂತರ ಮತ್ತೆ ಮತ್ತೆ ತೆಗೆದ ಸಿನೆಮಾಗಳು‌ ಗೆಲ್ಲುವುದಿಲ್ಲ ಯಾಕೆ? ಯಾಕೆ ಯೋಗರಾಜ್ ಭಟ್ ರ ಎಲ್ಲಾ ಸಿನೆಮಾಗಳು ನೂರುದಿನ ಓಡಲಿಲ್ಲ.  ಬರೆಯುವ ಹುಕಿ ಮೂಡಿದಾಗ ನಾವೇ ನಾಲ್ಕಾರು ಸಾಲುಗಳನ್ನು ಗೀಚಿಕೊಂಡು ಅದನ್ನು ನಾಳೆಯೊ, ನಾಡಿದ್ದೊ ಬರೆಯಲು ಕೂತರೆ ಅದೇ ರೀತಿ ಯಾಕೆ ಬರೆಯಲಾಗುವುದಿಲ್ಲ? ಯಾಕೆ ಎಲ್ಲರೂ ಕವಿಗಳಾಗಿಲ್ಲ?  ಹೌದು, ಇಲ್ಲೆಲ್ಲಾ ನಮಗೇ ಗೊತ್ತಿಲ್ಲದ ಯಾವುದೊ ವಿಚಾರವೊಂದು ಕೆಲಸ ಮಾಡಿರಬೇಕು ಅಲ್ಲವೇ?

ಗೋಪಾಲಕೃಷ್ಣ ಅಡಿಗರು ಒಮ್ಮೆ ತಮ್ಮ ಸ್ನೇಹಿತರ ವಲಯದಲ್ಲಿ‌ ತಮ್ಮ ಕವನ ರಚನೆಯ ವಿಷಯದಲ್ಲಿ‌ ಕಳವಳಗೊಂಡಿದ್ದರು. ಯಾಕೊ ಎರಡ್ಮೂರು ತಿಂಗಳಿನಿಂದ ಕವನಗಳನ್ನು ಬರೆಯಲು ಸಾಧ್ಯವಾಗುತ್ತಿಲ್ಲ ಅನ್ನುತ್ತಾ ಗಾಬರಿಗೊಂಡಿದ್ದರು.‌ ಸೃಜನ್ಮಾಕತೆ ಮುಗಿದು ಹೊಯಿತೆ ಅಂತ ಕಳವಳಿಸಿದ್ದರು. ತದನಂತರವೂ ಅವರಿಂದ ಅದ್ಬುತ ಕವಿತೆಗಳು ಹೊರಬಂದವು.‌ ಆದರೆ ‌ಆ ಎರಡ್ಮೂರು ತಿಂಗಳ ಅವಧಿಯಲ್ಲಿ ಅವರಿಗ್ಯಾಕೆ ಸಾಧ್ಯವಾಗಲಿಲ್ಲ? ಕುವೆಂಪು ಅವರನ್ನು ಕೂಡ ಇಂತದ್ದೆ ಸಮಸ್ಯೆ ಕಾಡಿದೆ.  ಶ್ರೀ ರಾಮಾಯಣ ದರ್ಶನಂ ಬರೆಯುವಾಗ ಮಧ್ಯೆ ನಾಲ್ಕು ತಿಂಗಳು ಏನನ್ನೂ ಕೂಡ ಬರೆಯಲಾಗದ ಕೂತು ಬಿಟ್ಟಿದ್ದರು. ಹೇಗೆ ಆರಂಭಿಸಬೇಕೆಂದು ಅವರಿಗೆ ಹೊಳೆಯುತ್ತಿರಲಿಲ್ಲ. ಒಮ್ಮೆ ಪುಟ್ಟ ತೇಜಸ್ವಿ ಮನೆಯಲ್ಲಿ ಅಳುತ್ತಿರುವಾಗ ಅವನನ್ನು‌ ಸಂತೈಸಲು ಹುಟ್ಟಿಕೊಂಡ ಒಂದು ಸಾಲು 'ಯಾಕೆ ಅಳುವೇ ತೇಜಸ್ವಿ..' ಅನ್ನುವ ಸಾಲೇ ಮತ್ತೆ 'ರಾಮಾಯಣ ದರ್ಶನಂ' ಅನ್ನು ಮುಂದುವರೆಸಲು‌ ಸಾಧ್ಯವಾಗಿಸಿತು. ಶಿವರಾಮ ಕಾರಂತರು ಒಂದು ಕಾದಂಬರಿಯನ್ನು ನಿಲ್ಲಿಸಿ ಮತ್ತೆ ಎಷ್ಟೊ ವರ್ಷಗಳ ನಂತರ ಮುಂದುವರೆಸಿ ಮುಗಿಸಿದರು.

ಯಾಕೆ ಎಲ್ಲರಿಗೂ, ಎಲ್ಲಾ  ಕಾಲದಲ್ಲೂ ಒಂದೇ ರೀತಿ ಬರೆಯಲು ಸಾಧ್ಯವಾಗುವುದಿಲ್ಲ? ಅದಕ್ಕೆ ಕಾರಣಗಳಿವೆ.‌ ರಚನೆಗೆ ಬೇಕಾದ ಪ್ರತಿಭೆಯೂ ಎಲ್ಲಾ  ಕಾಲದಲ್ಲೂ ಕೆಲಸ ಮಾಡಬೇಕಲ್ಲ!. ತೀನಂಶ್ರೀ ಅದನ್ನು 'ಹೊಳಹು' ಅಂತ ಕರೆಯುತ್ತಾರೆ. ಒಂದು ದಂತಕಥೆಯು ಹೇಳುವಂತೆ, ಕುಮಾರವ್ಯಾಸ ನಿತ್ಯ ನದಿಯಲ್ಲಿ ಮಿಂದು ಬಂದ ಒದ್ದೆ ಬಟ್ಟೆಯಲ್ಲೇ ಬರವಣಿಗೆಗೆ ಕೂರುತ್ತಿದ್ದನಂತೆ. ಬಟ್ಟೆ ಒಣಗುವ ಮೊದಲೇ ಅಂದಿನದ್ದನ್ನು ಬರೆದು ಮುಗಿಸುತ್ತಿದ್ದನಂತೆ.‌ ಈ ಹೊಳಹು ಎಂತಹ ಸಾಮಾನ್ಯನನ್ನು‌ ಅಸಾಮಾನ್ಯನ್ನಾಗಿ ಮಾಡುತ್ತದೆ.‌ ಆದರೆ ಅದನ್ನು‌ ಹಿಡಿದಿಟ್ಟು ಕೊಳ್ಳುವ ಕಲೆ ನಮಗಿರಬೇಕು. ಅದನ್ನು 'ಕಾವ್ಯಾತ್ಮಕತೆ' ಅನ್ನುತ್ತಾರೆ. ಬರೆದವನು ಕವಿ ಅಥವಾ ಸಾಹಿತಿ ಅನ್ನಿಸಿಕೊಳ್ಳುತ್ತಾನೆ.  ಇದನ್ನೇ ಇಂಗ್ಲಿಷ ಸಾಹಿತ್ಯದಲ್ಲಿ ಸ್ಫೂರ್ತಿ ಅಂತ ಕರೆಯಲಾಗಿದೆ.‌ ಅದು ಯಾವಾಗ್ಲೂ ಒಂದೇ ರೀತಿಯಲ್ಲಿ ಇರುತ್ತದೆ ಎಂದು ಹೇಳಲಾಗದು. ಕುಮಾರವ್ಯಾಸ ಕೇವಲ ಹತ್ತು ಪರ್ವಗಳನ್ನು ಮಾತ್ರ ಬರೆದು ನಿಲ್ಲಿಸಿದಕ್ಕೆ ಕೆಲವರು ಇದೇ  ಕಾರಣವನ್ನು ನೀಡುತ್ತಾರೆ. ಅಲ್ಲಿಗೆ ಅವರ ಬರೆಯುವ ಪ್ರತಿಭೆ,  ಹೊಳಹು ನಿಂತು ಹೊಯಿತು ಅನ್ನುವ ವಾದವೂ ಇದೆ.

ಬೇಂದ್ರೆಯವರ ಈ ಕವನ ನೋಡಿ

“ಎಲ್ಲೆಕಟ್ಟು ಇಲ್ಲದಾ
ಬಾನಬಟ್ಟೆಯಲ್ಲಿದೊ
ಎಂsದೆಂದು ಹಾರುವೀ
ಹಕ್ಕಿ-ಗಾಳಿ ಸಾಗಿದೆ”

’ಕವಿಯ ಕಾವ್ಯಪಕ್ಷಿಯು ಮನೋಆಕಾಶದಲ್ಲಿ ಹಾರುತ್ತಿರುವಾಗ ಉದುರಿದ ಗರಿಗಳೇ ತಮ್ಮ ಕವನಗಳು’ ಎಂದು ಬೇಂದ್ರೆ ಹೇಳುತ್ತಾರೆ. ಅವರ ಭೃಂಗದ ಬೆನ್ನೇರಿ ಬಂತು ಕವನವನ್ನು ಓದಿ ನೋಡಿ. ಕವಿಯ ಕಾವ್ಯರಚನೆಯ ಸೊಬಗನ್ನು ಎಷ್ಟು ಚೆನ್ನಾಗಿ ಕಟ್ಟಿಕೊಡುತ್ತದೆ.

ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ”
ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ
ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ
ಭೃಂಗದ ಬೆನ್ನೇರಿ ಬಂತು ಕಲ್ಪನಾ..."

ಕವಿಯೊಬ್ಬ ಸಾಮಾನ್ಯರಿಗಿಂತ ಭಿನ್ನವಾಗುವುದು ಹೇಗೆ? ಇದು ಮಿಲಿಯನ್ ಡಾಲರ್ ಪ್ರಶ್ನೆ. ಬಹುಶಃ ಕವಿ ತನ್ನ ಅನುಭವಗಳನ್ನು ಪದಗಳಲ್ಲಿ‌ ಕಟ್ಟಿಕೊಡುವ  ಪ್ರತಿಭೆ ಹೊಂದಿರುತ್ತಾನೆ. ಯಾರು ಅದನ್ನು ಮತ್ತೆ- ಮತ್ತೆ ದುಡಿಸಿಕೊಳ್ಳುತ್ತಾರೊ‌ ಆತ ಅದ್ಬುತ ಕವಿಯಾಗಿತ್ತಾನೆ. ಪದಗಳು ಸಂತೆಯಲ್ಲಿ‌ ಸಿಗುವುದಿಲ್ಲ, ಓದಿನಲ್ಲಿ ಸಿಗುತ್ತವೆ, ಜನರ ಮಧ್ಯೆಯ ಒಡನಾಟದಲ್ಲಿ ಸಿಗುತ್ತವೆ. ಮನುಷ್ಯ ಸದಾ ತಾನು ಕಂಡದ್ದನ್ನು ಹೊರ ಹಾಕುವ ಪ್ರಯತ್ನದಲ್ಲಿರುತ್ತಾನೆ. ಆದರೆ ಕವಿಯಾದವನು ಮಾತ್ರ ಅದನ್ನು ಸಾಹಿತ್ಯದ ಮೂಲಕ ಆಚೆ ಹಾಕುತ್ತಾನೆ.  ಕವಿಯೊಬ್ಬ ನಿರಾಳನಾಗುವುದು ಬರೆದು ಕೂತ ಮೇಲೆಯೇ!

ಕಾವ್ಯಕ್ಕೊಂದು ಹೊಳಹು ನುಗ್ಗಿ ಬರುವಂತಿರವುದನ್ನೇ  ಮಧುರ ಚೆನ್ನರು ಈ ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದಾರೇನೊ ಅನಿಸುವಂತೆ ಬರೆದಿದ್ದಾರೆ ನೋಡಿ. ಪ್ರತಿಯೊಬ್ಬ ಕವಿಯೂ ಇಂತದ್ದೆ ತುಡಿತಕ್ಕೆ ಕಾಯುತ್ತಿರುತ್ತಾನೆ.

ಬಂತು ಬಂತೆಲೆ ಬಂತು ಬಂತು ಘನಸಿರಿ ಬಂತು
ಬಂತೆಂದರೂ ಇದ್ದುದಿದ್ದೇ ಇತ್ತು |
ಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆ
ಇದ್ದದ್ದೆ ತುಂಬಿ ತುಳುತುಳುಕುತಿತ್ತು ||

ಬರೆಯುವುದನ್ನೇ ಹಗುರಾಗುವುದು ಎಂದೇ ನಾನು ಭಾವಿಸುತ್ತೇನೆ. ನಿಜ ಹೇಳಬೇಕಂದರೆ ಕವಿಯಾದವನು ಲಕ್ಕಿಯೇ ಸರಿ. ಪಡೆದ ಅನುಭವ ಎಲ್ಲವನ್ನೂ ಆತ ಅಕ್ಷರಕ್ಕಿಳಿಸಿ ಕೂತು ಬಿಡುತ್ತಾನೆ. ಅವನು ಆಗ ನಿರಾಳ. ಈಗೀಗ ಬರೆಯುವವರೇ ಹೆಚ್ಚು. ಬರೆದವರಲ್ಲ ಕವಿಗಳಲ್ಲ. ಅಷ್ಟೊಂದು ಬರೆದ ಬೇಂದ್ರೆ ಕೂಡ ನಾನು ಕವಿಯಲ್ಲ ಕಿವಿ ಅಂದಿದ್ದಾರೆ. ಕವಿಯಾಗುವುದು ಒಂದು ತಪಸ್ಸೇ! ಕಾವ್ಯ ಕಟ್ಟುವುದು ಒಂದು ಧ್ಯಾನ. ಕವಿ ಕೆ.ಎಸ್ ನರಸಿಂಹಸ್ವಾಮಿ ಹೀಗೆನ್ನುತ್ತಾರೆ. ಅನಿಸಿದನ್ನು ಒಮ್ಮೆಲೆ ಬರೆದುಬಿಡಬೇಡಿ. ವಾರಗಟ್ಟಲೇ ಅದನ್ನು ಮನಸ್ಸಿನಲ್ಲಿ ನೆನೆಹಾಕಿ.. ಆ ವಿಚಾರದ ಸುತ್ತಾ ಏನೇನು ಹೊಳೆಯಬಹುದು ಎಂಬುದನ್ನು ಗುರುತಿಸಿಕೊಳ್ಳಿ. ಒಮ್ಮೆ ಕೂತು ಬರೆಯಿರಿ. ಬರೆದಿದ್ದನ್ನು ಮತ್ತೆ ಮತ್ತೆ ಓದಿ, ತಿದ್ದಿ. ತೃಪ್ತಿಯಾಯಿತು ಅನಿಸಿದಾಗ ಅದನ್ನು ಪ್ರಕಟಿಸಿ ಅನ್ನುತ್ತಾರೆ. ಕಾವ್ಯಕಲೆ ಎಂಬುದು ಸುಮ್ನೆ ಅಲ್ಲ. ಅರವಿಂದ ಮಾಲಗತ್ತಿ 'ಎಷ್ಟೊ ಬಾರಿ‌ ಕವಿ ನೆಲದ ಮೇಲಿರುವುದಿಲ್ಲ' ಅನ್ನುವ ಒಂದು ಮಾತನ್ನು ಹೇಳುತ್ತಾರೆ. ಕವಿ ಎಲ್ಲವನ್ನೂ ಮೀರಿದವನು ಮತ್ತು ಮಿತಿಯಲ್ಲೇ ಬದುಕುವವನು.

ಸದಾಶಿವ್ ಸೊರಟೂರು

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...