ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 29 December 2019

ಫಲವಂತಿಕೆ ಆಚರಣೆ ಮತ್ತು ಶಿವಲಿಂಗ ರಹಸ್ಯ

ಹರ್ಷಕುಮಾರ್ ಕುಗ್ವೆ :

ನಮ್ಮ ಸಾಗರದ ಬಳಿಯ ಆನಂದಪುರದ ಕೆರೆಯ ಪಕ್ಕದಲ್ಲಿ ಹೈವೇ ಪಕ್ಕ ಅಗೆತ ಮಾಡುವಾಗ ಈ ಫಲವಂತಿಕೆ ಶಿಲ್ಪಗಳು ನೆನ್ನೆ ಸಿಕ್ಕಿವೆಯಂತೆ.. ಇದೇ ರೀತಿಯ ಶಿಲಾರಚನೆಗಳು ಸಾಗರದಿಂದ 25 ಕಿಲೋಮೀಟರ್ ದೂರದ ಉಳವಿ ಕೆರೆಯ ಮೇಲೂ ಇವೆ. ದ್ರಾವಿಡ ಹಾಗೂ ದ್ರಾವಿಡ ಪೂರ್ವ ಧಾರ್ಮಿಕ ಆಚರಣೆಯಾದ ಫಲವಂತಿಕೆ ಆಚರಣೆಗಳು ಈ ಭಾಗದಲ್ಲಿ ಚಾಲ್ತಿಯಿದ್ದ ಕುರಿತು ಇವು ತಿಳಿಸುತ್ತವೆ.
ಈ ಕುರಿತು ಹಿಂದೆ ನಾನು ಬರೆದಿದ್ದ ಬರೆಹವನ್ನು ಮತ್ತೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಶಿವಮೊಗ್ಗ ಜಿಲ್ಲೆಯ ಉಳವಿಯ (ನಮ್ಮೂರಿನಿಂದ 25 ಕಿಲೋಮೀಟರ್ ದೂರದಲ್ಲಿರುವ) ಕೆರೆ ಏರಿಯೊಂದರ ಮೇಲೆ ಬೈಕಿನಲ್ಲಿ ಹೋಗುತ್ತಿರುವಾಗ ನನ್ನನ್ನು ಗಕ್ಕನೆ ನಿಲ್ಲಿಸುವಂತೆ ಮಾಡಿದ್ದು ಈ ಕಲ್ಲಿನ ಕೆತ್ತನೆಗಳು...
ಇದನ್ನು ನೋಡಿ ಕೆಲವರು ನಾಚಿಕೆ ಪಟ್ಟುಕೊಳ್ಳಬಹುದು, ಲೇವಡಿ ಮಾಡಬಹುದು ಅಥವಾ ಇಂತಹ erotic ಲೈಂಗಿಕ ಶಿಲ್ಪಗಳ ಅರ್ಥ ಏನು ಎಂದೂ ತಲೆ ಕೆಡಿಸಿಕೊಳ್ಳಬಹುದು.
ಗಂಭೀರವಾಗಿ ಅವಲೋಕಿಸಿದರೆ ಈ ದೇಶದ ಮೂಲ ಸಂಸ್ಕೃತಿ ಮತ್ತು ಮೂಲ ಧರ್ಮ ಇವುಗಳಲ್ಲಿದೆ.

ಪುರುಷ ತನ್ನ ಲಿಂಗವನ್ನು ಹಿಡಿದುಕೊಂಡಿರುವ ಮತ್ತು ಮಹಿಳೆ ಅದನ್ನು ಹೊತ್ತುಕೊಂಡಿರುವ ಒಂದು ಶಿಲ್ಪ, ಹಾಗೂ ಮಹಿಳೆ ತನ್ನ ಯೋನಿಯನ್ನು ಹಿಡಿದುಕೊಂಡಿರುವ ಮತ್ತೊಂದು ಶಿಲ್ಪ ಸೂಚಿಸುವುದು ದ್ರಾವಿಡ ಮತ್ತು ದ್ರಾವಿಡ ಪೂರ್ವ ಸಮುದಾಯಗಳ ಫಲವಂತಿಕೆಯ ಆಚರಣೆ (fertility cult) ಯನ್ನು...
ಜಗತ್ತಿನಲ್ಲಿ ಇಂದು ಇರುವ ವೈದಿಕ, ಇಸ್ಲಾಂ, ಪಾರ್ಸಿ, ಕ್ರೈಸ್ತ ಮೊದಲಾದ ಯಾವುದೇ ಮತಧರ್ಮ ಹುಟ್ಟುವುದಕ್ಕೆ ಮೊದಲು ವ್ಯಾಪಕವಾಗಿ ಇದ್ದ ಆಚರಣೆ ಇದು. ಭಾರತದ ಮಟ್ಟಿಗೆ ಆರ್ಯರು ಇಲ್ಲಿಗೆ ಕಾಲಿಡುವ ಮುನ್ನ ದ್ರಾವಿಡ ಸಮುದಾಯಗಳು ಎಲ್ಲೆಡೆ ಪಾಲಿಸುತ್ತಿದ್ದ "ಧರ್ಮ" ಇದು.
ಇದೇ ಆಚರಣೆಗಳು ಮುಂದೆ ವ್ಯವಸ್ಥಿತ ರೂಪ ಪಡೆದು ತಾಂತ್ರಿಕ ಪಂಥದ ಏಳಿಗೆಗೆ ಅನುವು ಮಾಡಿಕೊಟ್ಟವು ಎಂದು ಮಾನವಶಾಸ್ತ್ರಜ್ಞರು, ಸಂಸ್ಕೃತಿ ಚಿಂತಕರು ಶೋಧಿಸಿದ್ದಾರೆ.

ಕರ್ನಾಟಕದಲ್ಲಿಯೇ ಅನೇಕ ಕಡೆಗಳಲ್ಲಿ ಲಜ್ಜಾ ಗೌರಿಯ ವಿಗ್ರಹಗಳು ದೊರೆತಿವೆ. ಲಜ್ಜಾಗೌರಿಯ ಮುಖವು ಅರಳಿದ ಕಮಲವನ್ನು ಹೊಂದಿದ್ದು ಯೋನಿ ಮೇಲ್ಮುಖವಾಗಿರುತ್ತದೆ... ಇದೂ ಸಹ ಫಲವಂತಿಕೆ ಪಂಥದ ಪೂಜಾ ಸಾಧನವೇ ಆಗಿದೆ.

ಈ ಕೆತ್ತನೆಗಳಲ್ಲಿನ ಮೂಲ ತಿಳುವಳಿಕೆಯ ಸಾರ ಇಷ್ಟೇ. ಸಕಲ ಜೀವಜಂತುಗಳ ಸಂತಾನೋತ್ಪತ್ತಿಗೆ ಕಾರಣವಾಗುವ ಸ್ತ್ರೀ ಪುರುಷ ಜನನಾಂಗಗಳೇ ಪೂಜನೀಯವಾದವು.

ಮುಂದೆ ಶೈವ ಪಂಥವು ಸ್ವೀಕರಿಸಿದ ಲಿಂಗವೂ ಸ್ತ್ರೀ-ಪುರುಷ ಸಮಾಗಮ ತತ್ವವನ್ನೇ ಸಾಂಕೇತಿಕಗೊಳಿಸಿಕೊಂಡದ್ದು. ಈ ಬಗ್ಗೆ ಸಂಸ್ಕೃತಿ ಚಿಂತಕರಾದ ಡಾ.ಲಕ್ಷ್ಮೀಪತಿ ಕೋಲಾರ ಅವರು ತಮ್ಮ 'ಲಾಗಾಯ್ತಿನ ಲಿಂಗ ಪುರಾಣ' ಎಂಬ ಲೇಖನದಲ್ಲಿ, "ವೇದದಲ್ಲೆಲ್ಲೂ "ಶಿವ' ಎಂಬ ಪದದ ಪ್ರಯೋಗವೂ ಆಗಿಲ್ಲ ಎಂಬುದನ್ನು ಶಂ.ಭಾ. ಜೋಶಿಯವರು ತಮ್ಮ 'ಶಿವ ರಹಸ್ಯ' ದಲ್ಲಿ ದಾಖಲಿಸಿದ್ದಾರೆ. ವೈದಿಕ ಸಾಹಿತ್ಯದಲ್ಲಿ ಮೊದಲು ಶಿವ ಎಂಬ ನಾಮದ ಪ್ರಯೋಗವಾಗಿರುವುದು ಶ್ವೇತಾಶ್ವತೋಪನಿಷತ್ತಿನಲ್ಲೇ! ದ್ರಾವಿಡ ಭಾಷಾ ವಿಜ್ಞಾನಿಗಳು ಈಗಾಗಲೇ ದೃಢಪಡಿಸಿರುವಂತೆ 'ಶಿವ' ಮತ್ತು 'ಲಿಂಗ' ಶಬ್ದಗಳು ಸಂಸ್ಕೃತ ಭಾಷೆಯದ್ದಲ್ಲವೇ ಅಲ್ಲ....." ಎನ್ನುತ್ತಾರೆ. ಲಿಂಗ ಎಂಬ ಪದವು ಕೋಲಾ ಮುಂಡಾ ಬುಡಕಟ್ಟು ಜನರಿಂದ ಪಡೆದುಕೊಂಡಿದ್ದೆಂದೂ ಈ ಕುರಿತ ಅಧ್ಯಯನಗಳು ತಿಳಿಸಿವೆ.

ದ್ವೈತ ಹಾಗೂ ಅದ್ವೈತ ಚಿಂತನೆಗಳ ಮೂಲವೂ ಸಹ ಈ ಸ್ತ್ರೀ ಪುರುಷ ಸಂಯೋಗದ ಫಲವಂತಿಕೆ ಪಂಥದಲ್ಲಿಯೇ ಇತ್ತು ಎನ್ನಲಾಗುತ್ತದೆ. ಹೆಣ್ಣು ಗಂಡಿನ ಮಿಲನದ ಸರಳ ಸುಂದರ ಅದ್ವೈತ ತತ್ವವನ್ನು ಮುಂದೆ ಎಂಟನೇ ಶತಮಾನದಲ್ಲಿ ಜನವಿರೊಧಿ ಸಿದ್ಧಾಂತವಾಗಿಸಲಾಯಿತು. ಈ ಬಗ್ಗೆ ಲಕ್ಷ್ಮೀಪತಿ ಕೋಲಾರ ಅವರು ಅದೇ ಲೇಖನದಲ್ಲಿ ಹೀಗ ಬರೆಯುತ್ತಾರೆ, "ಹೆಣ್ಣು- ಗಂಡುಗಳು ದ್ವೈತವಾಗಿದ್ದು, ಅವರ ಸಮಾಗಮದಿಂಸ ಸೃಷ್ಟಿಕ್ರಿಯೆ ನಡೆದು, ಅಲ್ಲಿ ಹುಟ್ಟುವ ಹೊಸ ಜೀವ ಅವರಿಂದ ಬೇರೆಯಲ್ಲವಾಗಿ ಅದು ಅದ್ವೈತ. ಇದು ಜೇನು ಕುರುಬರ ಅಣಪೆ ನೂರಾಳೊಡೆಯನ ಪರಿಕಲ್ಪನೆಯ ಹಿಂದಿರುವ ಆದಿಮವಾದ, ಸರಳ ಅದ್ವೈತ ತತ್ವ. ಜೇನು ಕುರುಬರಲ್ಲಿನ ಈ ಸೃಷ್ಟಿ ಕ್ರಿಯೆಯನ್ನಾಧರಿಸಿದ ಅದ್ವೈತ ತತ್ವವನ್ನೇ ವೈದಿಕ ಪೂರ್ವದ ಅಥವ ದ್ರಾವಿಡರ ತಂತ್ರ ಪಂಥವು ತಂತ್ರಾಕೃತಿಗಳ ಮೂಲಕವೇ ಹಿಡಿದಿಟ್ಟಿತು. ಉದಾಹರಣೆಗೆ ಸರಳವಾಗಿ ಹೀಗೆ ವಿವರಿಸಬಹುದು: ಮೇಲ್ಮುಖವಾದ ತ್ರಿಕೋನವು ಪುರುಷ ಲಿಂಗದ ಸಂಕೇತವಾದರೆ ಕೆಳಮುಖವಾದ ತ್ರಿಕೋನವು ಸ್ತ್ರೀಲಿಂಗದ ಸಂಕೇತವೆಂದುಕೊಳ್ಳೋಣ. ಹೆಣ್ಣು ಗಂಡುಗಳು ಪ್ರತ್ಯೇಕವಾಗಿರುವವರೆಗೂ ಈ ತ್ರಿಕೋನಗಳು ಬೇರೆ ಬೇರೆಯೇ ಆಗಿ ದ್ವೈತವನ್ನು ಹೇಳುತ್ತವೆ. ಹೆಣ್ಣು- ಗಂಡುಗಳು ಸಮಾಗಮಗೊಂಡಾಗ ಎರಡು ತ್ರಿಕೋನಗಳೂ ಹೀಗೆ ಬೆಳೆದುಕೊಂಡು ಆರು ತ್ರಿಕೋನಗಳನ್ನು ಸೃಷ್ಟಿಸುತ್ತವೆ. ಈ ಹೊಸದಾದ ಆರು ತ್ರಿಕೋನಗಳೂ ಮೂಲದ ಹೆಣ್ಣು ಗಂಡುಗಳ ಎರಡು ತ್ರಿಕೋನಗಳಿಂದ ಹೊರತಾದುದಲ್ಲವಾದ್ದರಿಂದ ಅದು ಅದ್ವೈತವನ್ನು ಸಾರುತ್ತದೆ. ಮನುಷ್ಯ ಮೂರು ಸಂದರ್ಭಗಳಲ್ಲಿ ತುರಿಯಾವಸ್ಥೆಯನ್ನು (orgasm) ತಲುಪುತ್ತಾನೆಂದು ಶೈವ ತತ್ವ ಹೇಳುತ್ತದೆ. ಅದು ಹೆಣ್ಣು ಗಂಡಿನ ಸಮಾಗಮ, ಸಂಗೀತ ಹಾಗೂ ನೃತ್ಯದ ತಲ್ಲೀನತೆಗಳಲ್ಲಿ. ಹಾಗಾಗಿ ಇದೇ ತಂತ್ರಾಕೃತಿಯನ್ನು
ಕೊಂಚ ಬದಲಿಸಿ ಢಮರುಗವನ್ನು ಸೃಷ್ಟಿಸಿ ಹೆಣ್ಣು ತ್ರಿಕೋನದಿಂದ ಶಕ್ತಿ ಮತ್ತು ಪುರುಷ ತ್ರಿಕೋನದಿಂದ ಶಿವನನ್ನು ಇರಿಸಿ ಶಿವ ಶಕ್ತಿಯರ ಸಮಾಗಮದಲ್ಲಿ ನಾದೋತ್ಪತ್ತಿಯ ತತ್ವವನ್ನು ವಿವರಿಸುತ್ತದೆ. ಇದು ದ್ರಾವಿಡ ಪೂರ್ವ ಬುಡಕಟ್ಟುಗಳ phallic cult ನಿಂದ ಎತ್ತಿ ವಿವರಿಸಿದ diagrammatic ಅದ್ವೈತವಾಗಿದೆ. ಈ ಮೂಲ ಅದ್ವೈತವನ್ನು ಸೃಷ್ಟಿಶೀಲ ನೆಲೆಯಿಂದ ಪಲ್ಲಟಗೊಳಿಸಿ ಪರ- ಬ್ರಹ್ಮ- ಆತ್ಮ- ಪರಮಾತ್ಮದ ವೈದಿಕೋಪನಿಷತ್ತಿನ ವಂಚ ಜಾಲದಲ್ಲಿ ಸಂಕೀರ್ಣಗೊಳಿಸಿ ಜನಸಾಮಾನ್ಯರಿಗೆ ಎಟುಕದಂತೆ ಜಟಿಲ ತತ್ವವನ್ನಾಗಿಸಿದ್ದೊಂದು ಪಿತೂರಿಯೂ ಆಗಿದೆ. ಈ ವಂಚಕ ಚರಿತ್ರೆಯ ವಿವರಣೆಯೂ ಮತ್ತೊಂದು ಅಧ್ಯಾಯವಾಗಬಲ್ಲದು".

ಇಂದಿನ ಕಾಲದಲ್ಲಿ ಹಾಸ್ಯ ಎನಿಸುವ, ವಿಚಿತ್ರ ಎನಿಸುವ ಜನಪದರ ಎಷ್ಟೋ ಆಚರಣೆಗಳಲ್ಲಿ, ನಂಬಿಕೆಗಳಲ್ಲಿ ಇತಿಹಾಸದ ಸತ್ಯಗಳು ಹುದುಗಿ ಹೋಗಿರುತ್ತವೆ. ಅವುಗಳನ್ನು ಎತ್ತಿ ತೆಗೆದು ಜನರಿಗೆ ವಿವರಿಸುವ ಜರೂರು ಇಂದು ಎದುರಾಗಿದೆ.. ಬದುಕಿನ ಪ್ರತಿ ಕ್ಷಣವೂ ವೈದಿಕಗೊಳ್ಳುತ್ತಿರುವ ಕೇಡುಗಾಲದಲ್ಲಿರುವ ನಾವು ಸಂಸ್ಕೃತಿಯ ಮಹಾ ಮರೆವಿನಿಂದ ಹೊರಬರಲೇಬೇಕಾಗಿದೆ.

- ಹರ್ಷಕುಮಾರ್ ಕುಗ್ವೆ

ಚಿತ್ರಗಳು: ಬಿದ್ದ ಮಣ್ಣು ತುಂಬಿದ ಕಲ್ಲುಗಳು ಆನಂದಪುರ ಬಳಿ ಸಿಕ್ಕವು
ನಿಂತಿರುವ ಕಲ್ಲು- ಉಳವಿ ಕೆರೆಯ ಮೇಲಿನವು

Friday 20 December 2019

ಟಿ.ಇ.ಟಿ ಪರೀಕ್ಷೆ ತಯಾರಿಗೆ ಸೂಕ್ತ ಮಾರ್ಗಗಳು

ವೆಂಕಟಸುಬ್ಬರಾವ್..

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಸಿದರೆ ಕರ್ನಾಟಕ ಟಿ.ಇ.ಟಿ. (ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್) ಪರೀಕ್ಷೆಗೆ ಬೇರೆಯದೇ ರೀತಿಯ ಪ್ರಾಮುಖ್ಯತೆ ಇದೆ.


ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರ ಹುದ್ದೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಟಿ.ಇ.ಟಿ.! ಹೀಗಾಗಿ, ಇಲ್ಲಿ ಕೇವಲ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ, ವೇಗವಾಗಿ ಉತ್ತರಿಸುವುದು ಮಾತ್ರವಲ್ಲ, ಮಕ್ಕಳ ಮನಸ್ಸನ್ನು ಸರಿಯಾದ ರೀತಿಯಲ್ಲಿ ಅರಿತು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಅವರಿಗೆ ವಿದ್ಯಾಭ್ಯಾಸದ ಜೊತೆಗೆ, ಜೀವನದ ಮೌಲ್ಯಗಳು, ಆದರ್ಶಗಳನ್ನು ಕಲಿಸಬೇಕಾದ ಗುರುತರವಾದ ಜವಾಬ್ದಾರಿ ಇರುತ್ತದೆ. ಅವರಿಗೆ ಮೌಲ್ಯಗಳನ್ನು ಕಲಿಸುವುದಕ್ಕೆ ಮೊದಲು ಶಿಕ್ಷಕರು ಅವುಗಳನ್ನು ಪಾಲಿಸಬೇಕಾಗುತ್ತದೆ.


ಈ ಸಮಯದಲ್ಲಿ ತಾವು ಟಿ.ಇ.ಟಿ ಪರೀಕ್ಷೆಗೆ ಸಂಪೂರ್ಣ ತಯಾರಾಗಿದ್ದೀರಿ ಮತ್ತು ಈ ಲೇಖನವನ್ನು ಓದುವ ಮೊದಲು, ಟಿ.ಇ.ಟಿ ಪರೀಕ್ಷೆಯ ವಿಷಯಗಳನ್ನು ಸರಿಯಾಗಿ ಅರ್ಥೈಸಿ ಓದಿಕೊಂಡಿದ್ದೀರಿ ಎಂದು ಭಾವಿಸುತ್ತಾ, ಓದಿದ ವಿಷಯಗಳನ್ನು ಸರಳವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಕೆಲವು ವಿಧಾನಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ. ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಹಲವಾರು ವಿಧಾನಗಳಿವೆ, ಈ ಕೆಳಗಿನ ಕೆಲವು ವಿಧಾನಗಳು ತಮಗೆ ಸಹಾಯಕವಾಗಬಹುದು.


ಪದಜೋಡಣೆ ವಿಧಾನ


ಈ ವಿಧಾನದಲ್ಲಿ, ತಾವು ಓದಿದ ವಿಷಯಗಳನ್ನು ಸರಳ ಪದಗಳಾಗಿ ಅಥವಾ ಸರಳ ಅರ್ಥಪೂರ್ಣ ವಾಕ್ಯಗಳಾಗಿ ಬದಲಾಯಿಸಿ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಈ ವಿಧಾನವು ಸಮಾಜಶಾಸ್ತ್ರ, ವಿಜ್ಞಾನ ಹಾಗೂ ಭಾಷಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿ.


ಉದಾ : ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರೇನು?


ಈ ಕೆಳಗಿನ ಸರಳವಾಕ್ಯದ ಸಹಾಯದಿಂದ ಈ ಪ್ರಶ್ನೆಯ ಉತ್ತರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು,


ಅವರಂಗಿ ಜೇಬು ಮುರಿದು ಹೋಯಿತು, ಸೂಜಿ ದಾರದಿಂದ ಹೊಲಿ!


ಇಲ್ಲಿ ಅವರಂಗಿ ಜೇಬು ಔರಂಗಜೇಬ್,


ಮುರಿದು - ಮುರಾದ್


ಸೂಜಿ - ಶೂಜ


ದಾರ - ದಾರ


ಉತ್ತರ: ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರು ಔರಂಗಜೇಬ್, ಮುರಾದ್, ಶೂಜ, ದಾರ !


ಎಷ್ಟು ಸರಳ ಅಲ್ಲವೇ !


ಹೀಗೆ ಪದ ಜೋಡಣೆ ವಿಧಾನದಿಂದ ಹಲವಾರು ವಿಷಯಗಳನ್ನು ಸರಳವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು.


ಈ ವಿಧಾನದಿಂದ ತಾವು ಓದಿದ ವಿಷಯಗಳ ಮುಖ್ಯ ಅಂಶಗಳನ್ನು ಸರಳವಾದ ವಾಕ್ಯಗಳ ಸಹಾಯದಿಂದ ನೆನಪಿನಲ್ಲಿಟ್ಟುಕೊಳ್ಳಬಹುದು. ತಮ್ಮದೇ ವಾಕ್ಯಗಳಾದ್ದರಿಂದ ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ. ಹೀಗೆ ತಾವು ಮೂಡಿಸಿದ ವಾಕ್ಯಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಈ ವಾಕ್ಯಗಳು, ಟಿ.ಇ.ಟಿ. ಪರೀಕ್ಷೆಯಷ್ಟೇ ಅಲ್ಲದೆ, ಮುಂದೆ, ನಿಮ್ಮ ತರಗತಿಗಳಲ್ಲಿಯೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತವೆ.


ಮೈಂಡ್ ಮ್ಯಾಪ್ ವಿಧಾನ


ನಮ್ಮ ಮೆದುಳು ಚಿತ್ರಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವಿಧಾನದಲ್ಲಿ ನೀವು ಓದಿದ ಬಹಳಷ್ಟು ವಿಷಯಗಳನ್ನು ಚಿತ್ರೀಕರಿಸಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಇದೊಂದು ಅತ್ಯಂತ ಸರಳ ವಿಧಾನ. ಆದರೆ ಬಹಳ ಪರಿಣಾಮಕಾರಿ ವಿಧಾನ. ಈ ವಿಧಾನವು ಭಾಷೆ, ಸಮಾಜಶಾಸ್ತ್ರ ಹಾಗೂ ವಿಜ್ಞಾನದ ವಿಷಯಗಳಿಗೆ ಬಹಳ ಉಪಯುಕ್ತ.


ಇಲ್ಲಿ ಒಂದು ಪಾಠದ ಸರಳ ಚಿತ್ರವನ್ನು ಸಂಪೂರ್ಣವಾಗಿ ಒಂದೇ ಹಾಳೆಯಲ್ಲಿ ಬಿಡಿಸಿಟ್ಟುಕೊಳ್ಳಬಹುದು. ಇದರಿಂದ, ಪರೀಕ್ಷೆಗೆ ಮೊದಲು ಪುನಾರಾವರ್ತನೆಯು ಬಹಳ ಸುಲಭವಾಗುತ್ತದೆ ಹಾಗೂ ಪರೀಕ್ಷೆಯ ಸಮಯದಲ್ಲಿ ಈ ಚಿತ್ರವನ್ನು ಅತ್ಯಂತ ಸುಲಭವಾಗಿ ನೆನಪಿಸಿಕೊಳ್ಳಬಹುದು ಹಾಗೂ ಪ್ರಶ್ನೆಗಳಿಗೆ ಅತ್ಯಂತ ಸುಲಭವಾಗಿ ಉತ್ತರಿಸಬಹುದು. ಈ ವಿಧಾನವು ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲದೇ ಮುಂದೆ ತರಗತಿಗಳಲ್ಲಿಯೂ ಉಪಯೋಗಕ್ಕೆ ಬರುತ್ತದೆ.


ಮೈಂಡ್ ಮ್ಯಾಪ್‌ನ ಒಂದು ಉದಾಹರಣೆ:


ಸರಳವಾದ ತಾಳೆ ನೋಡುವ ಪದ್ಧತಿ


ಈ ತಾಳೆ ನೋಡುವ ಪದ್ಧತಿಯಿಂದ ಗಣಿತ (ಅಂಕಗಣಿತ ಮತ್ತು ಬೀಜಗಣಿತ)ದ ಸಮಸ್ಯೆಗಳ ಉತ್ತರಗಳನ್ನು ಅತ್ಯಂತ ವೇಗವಾಗಿ ತಾಳೆ ನೋಡಲು ಸಹಾಯಕವಾಗುತ್ತದೆ. ಈ ವಿಧಾನವು ಕೇವಲ ತಾಳೆ ನೋಡುವ ವಿಧಾನ. ಇದರಿಂದ ಬಹು ಆಯ್ಕೆ ಪ್ರಶ್ನೆಗಳಿಗೆ ಸುಲಭವಾಗಿ, ಕೇವಲ ಉತ್ತರಗಳನ್ನು ಗಮನಿಸುವುದರ ಮೂಲಕ ಸರಿಯಾದ ಉತ್ತರವನ್ನು ಕಂಡುಹಿಡಿಯಬಹುದು! ಇದು ವೇದಗಣಿತದ ವಿಧಾನ.


ಹೀಗೆ ತಾಳೆ ನೋಡಿ


ಈ ವಿಧಾನದಲ್ಲಿ ಎಲ್ಲ ಸಂಖ್ಯೆಗಳನ್ನೂ ಒಂದಂಕಿಯಾಗಿ ಪರಿವರ್ತಿಸಿ. ಒಂದಂಕಿಯಾಗಿ ಪರಿವರ್ತಿಸಲು ಕೊಟ್ಟಿರುವ ಸಂಖ್ಯೆಯ ಎಲ್ಲ ಅಂಕಿಗಳನ್ನೂ ಕೂಡಿಸಿ. ಉದಾ : 12 ರ ಒಂದಂಕಿ = 1 + 2 = 3, 65ರ ಒಂದಂಕಿ = 6 + 5 = 11 ( ಎರಡು ಅಂಕಿಗಳು ಬಂದರೆ ಮತ್ತೆ ಕೂಡಿಸಿ ಒಂದಂಕಿ ಮಾಡಿ) = 1 + 1 = 2


ಈ ಒಂದಂಕಿ ಸಹಾಯದಿಂದ ಸುಲಭವಾಗಿ ತಾಳೆ ನೋಡಬಹುದು.


ಉದಾ : 123ರ ವರ್ಗ


ಎ) 15129 ಬಿ) 15139 ಸಿ) 25129 ಡಿ) 15229


ಮೇಲಿನ, ಉದಾಹರಣೆಯಲ್ಲಿ ಪ್ರಶ್ನೆಯಲ್ಲಿರುವ 123ನ್ನು ಒಂದಂಕಿಯಾಗಿ ಪರಿವರ್ತಿಸಿ,


1+2 + 3 = 6, 6ರ ವರ್ಗ( ಏಕೆಂದರೆ, ಇಲ್ಲಿ ನಾವು 123ರ ವರ್ಗವನ್ನು ಕಂಡುಹಿಡಿಯಬೇಕು) = 36 = 3+6 ರ ಒಂದಂಕಿ = 9


ಈಗ ಉತ್ತರದ ಆಯ್ಕೆಗಳಲ್ಲಿ, ಯಾವ ಆಯ್ಕೆಯು 9ನ್ನು ಒಂದಂಕಿಯಾಗಿ ಕೊಡುತ್ತದೆ ಎಂದು ನೋಡಿ.


ಆಯ್ಕೆ ಎ) ದ ಒಂದಂಕಿ 9 ಆಗುತ್ತದೆ, ಅಂದರೆ, 123 ರ ವರ್ಗ 15129 ಆಯ್ಕೆ ಎ) ಸರಿ ಉತ್ತರ !


ಈ ತಾಳೆ ನೋಡುವ ಪದ್ಧತಿಯಿಂದ ಸರಿಯಾದ ಆಯ್ಕೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕಂಡುಹಿಡಿಯಬಹುದು!


ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು ಆಯ್ಕೆಗಳ ಒಂದಂಕಿಗಳು ಒಂದೇ ಆಗಿದ್ದರೆ ಬೇರೆಯ ರೀತಿಯ ತಾಳೆ ನೋಡುವ ಪದ್ಧತಿಗಳನ್ನು ಬಳಸಬಹುದು. ಮೊದಲೇ ತಿಳಿಸಿದಂತೆ, ಈ ಕೆಲವು ವಿಧಾನಗಳು ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಮಾತ್ರ ಸಹಕಾರಿಯಾಗಿರುತ್ತವೆ.


(ಲೇಖಕರು .ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್, ಬೆಂಗಳೂರು)


Friday 22 November 2019

ನಾ ಡಿಸೋಜಾ ಅವರ ಒಂದು ಸಣ್ಣ ಕಥೆ...

** ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕುಳಿತವ **

ಕಲ್ಲು ಮತ್ತು ಸಿಮೆಂಟಿನ ಬೃಹತ್ ಕಪ್ಪು ಗೋಡೆಗೆ ಮೈಯೊತ್ತಿ ನಿಂತ ಜಲಸಾಗರದ ಅಂಚಿನಲ್ಲಿಯೇ, ಆತ ತನ್ನ ವಾಹನದಲ್ಲಿ ಕುಳಿತು ಅಷ್ಟು ದೂರ ಹೋದ. ರಸ್ತೆ ಸಂಪೂರ್ಣ ನಿರ್ಜನವಾಗಿತ್ತು. ಯಾವುದೇ ವಾಹನದ ಓಡಾಟವಿಲ್ಲದೆ ಹಾಳು ಬಿದ್ದಿತ್ತು. ಅಲ್ಲಲ್ಲಿ ಬಿದ್ದ ಎಲೆ ಟೊಂಗೆಗಳು ರಸ್ತೆಯ ಏಕಾಂತಕ್ಕೆ ಕನ್ನಡಿ ಹಿಡಿದ ಹಾಗೆ ಕಾಣುತ್ತಿತ್ತು. ಅದು ಯಾವತ್ತೋ ಮಾಡಿದ ರಸ್ತೆ, ಮತ್ತೆ ರಿಪೇರಿಯನ್ನೇ ಕಾಣದೆ ಹಾಳು ಹಾಳು ಸುರಿಯುತ್ತಿತ್ತು. ರಸ್ತೆಗೆ ಹಾಕಿದ ಕಪ್ಪು ಡಾಮರು, ಅದು ಒಂದು ಕಾಲದಲ್ಲಿ ವೈಭವದಿಂದ ಮೆರೆದ ರಸ್ತೆ ಎಂಬುದನ್ನು ಸಾರಿ ಹೇಳುತ್ತಿದ್ದರೂ ಇಂದು ಅದು, ತನ್ನ ಗತ ಕಾಲದ ಅವನತಿಯ ಸಂಕೇತವಾಗಿ ನಿಂತಿತ್ತು.

ಆ ಕೃತಕ ಜಲಾಶಯ ಮೌನವಾಗಿ ನಿಂತ ಕಾಡು ಗುಡ್ಡಗಳ ನಡುವೆ, ಸದ್ದಿಲ್ಲದೆ ಬೀಸುವ ಗಾಳಿಯ ನಡುವೆ ತಾನು ಅಲ್ಲಿ ನೂರಾರು ವರ್ಷಗಳಿಂದ ಇದ್ದೇನೇನೋ ಎಂಬಂತೆ ಪರಿಸರದೊಡನೆ ಒಂದಾಗಿತ್ತು. ನೀರಿನೊಳಗೆ ನಿಂತ ಗುಡ್ಡಗಳು, ನೀರಿನ ಅಂಚಿನ ಕಾಡು, ನೀರಿನಲ್ಲಿ ಉಳಿದು ಚಿಗುರಿಕೊಂಡ ಮರಗಳು, ನೀರಿನಲ್ಲಿ ತಮ್ಮನ್ನು ನೋಡಿಕೊಂಡು ಹಾರುತ್ತಿದ್ದ ಹಕ್ಕಿಗಳು, ಎಲ್ಲ ಜಲಾಶಯದೊಡನೆ ಏನೋ ಸಂಬಂಧ ಬೆಳೆಸಿಕೊಂಡಂತೆ ಇವನಿಗೆ ಕಂಡಿತು.

ಅಲ್ಲಲ್ಲಿ ತನ್ನ ವಾಹನವನ್ನ ನಿಲ್ಲಿಸಿ ಈತ ಜಲಾಶಯವನ್ನ ನೋಡಿದ. ಹೆಪ್ಪುಗಟ್ಟಿ ನಿಂತ ನೀರಿನಲ್ಲಿ ಸಣ್ಣಗೆ ಅಲೆಗಳು ಏಳುತ್ತಿದ್ದವು. ಅಕ್ಕಪಕ್ಕದ ಗುಡ್ಡ ಕಾಡನ್ನು ನೀರು ತನ್ನಲ್ಲಿ ಪ್ರತಿಬಿಂಬಿಸುತ್ತ ಯಾರೂ ನೋಡದ ಒಂದು ಚಿತ್ರವನ್ನ ಬರೆಯುತ್ತಿರುವಂತೆ ಅನಿಸಿತು,.

ಹಾಗೆಯೇ ಇಂಥದ್ದೆಂದು ಹೇಳಲಾಗದ ಒಂದು ವಿಚಿತ್ರ ಬೇಗುದಿ ಅಲ್ಲೆಲ್ಲ ವ್ಯಾಪಿಸಿಕೊಂಡಿರುವುದನ್ನ ಈತ ಗಮನಿಸಿದ. ಈ ಮುಳುಗಡೆ ಪ್ರದೇಶಕ್ಕೆ ಬಂದ ಕ್ಷಣದಿಂದ ಆತ ಇದನ್ನು ಅನುಭವಿಸುತ್ತ ಬಂದಿದ್ದ. ಆ ಪ್ರದೇಶದಲ್ಲಿ ಮುಳುಗಡೆಯಾಗದೇ ಉಳಿದ ಜನ, ಮನೆ, ಹಳ್ಳಿಗಳು ಸಾಕಷ್ಟು ಇದ್ದವು. ಇಂತಹಾ ಸಾವಿರಾರು ಜನರ ವರ್ತನೆಯಲ್ಲಿ, ಮಾತಿನಲ್ಲಿ, ಬದುಕಿನಲ್ಲಿ, ನಿತ್ಯದ ವ್ಯವಹಾರದಲ್ಲಿ ತಟ್ಟನೆ ಗುರುತಿಸಲಾಗದ ಒಂದು ನೋವು, ತಳಮಳ ಅವನ ಗಮನಕ್ಕೆ ಬಂದಿತ್ತು. ಅದೇ ಬಗೆಯ ಒಂದು ಉಸಿರು ಬಿಗಿ ಹಿಡಿಯುವ ಪರಿಸ್ಥಿತಿಯನ್ನು ಆತ ಹಿನ್ನೀರಿನ ಈ ಅಂಚಿನಲ್ಲೂ ಕಂಡ.

ಈತ ಹೀಗೆ ಹೋಗುತ್ತಿರುವಾಗ ಒಂದು ಬಗೆಯ ಭೀತಿ ಇವನನ್ನೂ ಬಂದು ಆವರಿಸಿಕೊಂಡಿತು. ಎಲ್ಲ ಕಡೆಯೂ ಕವಿದುಕೊಂಡ ಮೌನ ಇವನನ್ನು ಬಾಧಿಸಿತು. ಆಗೊಮ್ಮೆ, ಈಗೊಮ್ಮೆ ಕೂಗುವ ಹಕ್ಕಿಯ ಸದ್ದು, ಮರದ ರೆಂಬೆಗೆ ತನ್ನ ಮೈಯುಜ್ಜುವ ಅದೇ ಮರದ ಇನ್ನೊಂದು ಕೊಂಬೆಯ ಕೀರಲು ದನಿ, ದೂರದಲ್ಲಿ ಬೊಗಳುತ್ತಿರುವ ಒಂದು ನಾಯಿ...ಇಷ್ಟನ್ನು ಬಿಟ್ಟರೆ ಬೇರೊಂದು ಸದ್ದು ಅಲ್ಲಿ ಇಲ್ಲದ್ದರಿಂದ ಈತ ಕೊಂಚ ಆತಂಕಗೊಂಡ. ಜತೆಗೆ ಗೋಡೆಯಂತೆ ಒಂದು ಕಡೆ ನಿಂತ ಕಾಡು, ಮತ್ತೊಂದು ಕಡೆ ಮಡುಗಟ್ಟಿದ ನೀರು. ಇದೆಲ್ಲವನ್ನ ತನ್ನ ಕಕ್ಷೆಯಲ್ಲಿ ತೆಗೆದುಕೊಂಡಂತಿದ್ದ ಬಿಸಿಲು. ಆತ ಕಾರಿನಲ್ಲಿ ಕುಳಿತೇ ಭಯಭೀತನಾದ. ಒಂದು  ಬಗೆಯ ಆತಂಕಕ್ಕೆ ಒಳಗಾದ.

ಸದಾ ಗದ್ದಲ, ಗೌಜಿಯಲ್ಲಿಯೇ ಬದುಕುವ ತನಗೆ ಈ ಮೌನ ವಿಚಿತ್ರವೆನಿಸಿ, ಯಾರಾದರೂ ಜನ ತನ್ನ ಕಣ್ಣಿಗೆ ಬೀಳಬಹುದೆ ಎಂದು ಹುಡುಕಾಡಿದ. ಬಹಳ ದೂರದಿಂದ ಆಣೆಕಟ್ಟಿನ ಹಿನ್ನೀರಿನಲ್ಲಿ ಹಾದು ಬಂದರೂ ಒಂದು ನರಪಿಳ್ಳೆ ಎದುರಾಗದೇ ಇದ್ದುದು ವಿಚಿತ್ರವೆನಿಸಿತು. ಏನು ಈ ಪ್ರದೇಶದಲ್ಲಿ ಜನರೇ ಇಲ್ಲವೇ ಎಂದು ಗಾಬರಿಗೊಂಡ.

ಆಗ ದೂರದಲ್ಲಿ, ಜಲಾಶಯದ ದಂಡೆಯ ಮೇಲೆ, ಕಾಡಿನ ಹಸಿರು ಹಾಗೂ ನೀರಿನ ನೀಲಿಯ ನಡುವೆ ಅದಾರೋ ಕುಳಿತಿರುವುದು ಅವನ ಗಮನಕ್ಕೆ ಬಂದು ಕೊಂಚ ನಿಟ್ಟುಸಿರುಬಿಟ್ಟ.
ಕಾರಿನ ವೇಗವನ್ನ ಕಡಿಮೆ ಮಾಡಿ ಆ ವ್ಯಕ್ತಿಯ ಬಳಿ ತನ್ನ ಕಾರನ್ನ ನಿಲ್ಲಿಸಿದ.

ಕೆಳಗೆ ಕಣಿವೆಯಲ್ಲಿ ನೀಲಿ ನೀರು ಮೈಚಾಚಿ ಮಲಗಿದ್ದರೆ, ಮೇಲೆ ಒಂದು ದಿಣ್ಣೆ. ಅದರ ಮೇಲೆ ಅನ್ಯಮನಸ್ಕನಾಗಿ ಈ ಕಂಬಳಿ ಧರಿಸಿದ ವ್ಯಕ್ತಿ ಕುಳಿತಿದ್ದ. ತನ್ನ ಹಿಂದೆ ಒಂದು ಕಾರು ಬಂದು ನಿಂತದ್ದು ಅವನ ಗಮನಕ್ಕೆ ಬಂದಂತಿರಲಿಲ್ಲ. ಆತ ದೂರದಲ್ಲಿಯ ನೀರಿನಲ್ಲಿ ದೃಷ್ಟಿ ನೆಟ್ಟು ಕುಳಿತಿದ್ದ.

ಈತ ಕಾರಿನ ಹಾರ್ನ್ ಮಾಡಿದ. 'ಅಯ್ಯಾ' ಎಂದು ಕರೆದ. ಆ ವ್ಯಕ್ತಿ ತನ್ನನ್ನು ಗಮನಿಸದೇ ಹೋದಾಗ ಕಾರಿನ ಬಾಗಿಲು ತೆರೆದು ಕೆಳಗೆ ಇಳಿದ.
ನೇರವಾಗಿ ಅವನ ಮುಂದೆ ಹೋಗಿ ನಿಂತಾಗ ಆತ ಇವನನ್ನು ಗಮನಿಸಿದ ಹಾಗೆ ಇವನತ್ತ ತಿರುಗಿದ.

ಅವನ ಮುಖ ನೋಡಿ ಇವನ ಎದೆ ಧಸ್ ಎಂದಿತು. ಆತ ತನ್ನ ಮೈಯನ್ನು ಕಂಬಳಿ ಕೊಪ್ಪೆಯೊಂದರಲ್ಲಿ ಮುಚ್ಚಿ ಇರಿಸಿಕೊಂಡಿದ್ದ. ಕೈಗಳು ಕಾಣದ ಹಾಗೆ, ಮೈ ಕಾಣದ ಹಾಗೆ, ಮುಖ ಒಂದೇ ಕಾಣುವಂತೆ ಕಂಬಳಿಯನ್ನು ಮೈಗೆ ಸುತ್ತಿಕೊಂಡಿದ್ದ. ಅವನ ಮುಖದ ಮೇಲೆ ಬಹಳ ದಿನಗಳ ಹರಿತವಾದ ಗಡ್ಡವಿತ್ತು. ಕಿವಿಗಳಲ್ಲಿಯ ಒಂಟಿಗಳು ಮುಚ್ಚಿಕೊಂಡ ಕಂಬಳಿಯಿಂದ ಹೊರಬಂದು ಕಾಣಿಸಿಕೊಂಡವು. ತಾನು ಬದುಕಿರುವ ಕಾಲದಿಂದ ದೂರವಾದ ಯಾವುದೋ ಕಾಲದ ಓರ್ವ ವ್ಯಕ್ತಿಯ ಹಾಗೆ ಆತ ಕಂಡು ಬಂದು ಈತ ತುಸು ಬೆದರಿದ. ಅವನ ಕೆನ್ನೆಗಳು ಚೂಪಾದ ಬೆಣಚು ಕಲ್ಲುಗಳ ಹಾಗೆ ತಿವಿಯಲು ಸಿದ್ಧವಾಗಿ ನಿಂತದ್ದನ್ನು ಈತ ಗಮನಿಸಿದ.

ಆತ ತನ್ನ ಕಣ್ಣುಗಳಿಂದ ಏನು ಎಂಬಂತೆ ಈತನನ್ನು ಕೇಳಿದಂತೆ ಅನಿಸಿ, 'ಯಜಮಾನ, ಯಾವ ಊರು?' ಎಂದು ಕೇಳಿದ.

'ನರಸೀ ಗದ್ದೆ.'

ಅಸ್ಪಷ್ಟವಾಗಿ ಕೇಳಿಬಂದಿತು ದನಿ. ಆಳವೇ ಅರಿಯದ ಬಾವಿಯೊಳಗೆ ಹಾಕಿದ ಕಲ್ಲೊಂದು ಬಹಳ ಹೊತ್ತಿನ ನಂತರ ನೀರಿಗೆ ಬಿದ್ದು ಸದ್ದು ಮೇಲೆ ಬಂದಂತೆ ಆತನ ದನಿ ಕೇಳಿಸಿತು. ಆದರೂ ಈತ ಕೇಳಿದ.

'ನರಸೀ ಗದ್ದೆ ಎಲ್ಲಿದೆ ?'

ಕಂಬಳಿಯೊಳಗಿನಿಂದ ಅವನ ಒಂದು ಕಪ್ಪು ಕೈ ಹೊರಬಂದಿತು. ಒಣಗಿ ಬಿದಿರ ಗೂಟದಂತಾಗಿ ನೆರಿಗೆಗಟ್ಟಿದ್ದ ಈ ಕೈಯನ್ನು ನೀರಿನತ್ತ ಚಾಚಿ ಅವನು ತೋರಿಸಿದ.
'ಅಗೋ ಅಲ್ಲಿ, ನೇರಲೇ ಗುಡ್ಡೆ ಕೆಳಗೆ.....'
ಅಲ್ಲೊಂದು ಗುಡ್ಡ ಇದ್ದುದು ಹೌದು. ನೀರಿನಲ್ಲಿ ಮುಳುಗಿ ಅದರ ಮೇಲ್ ಭಾಗವಷ್ಟೇ ಕಾಣುತ್ತಿತ್ತು. ಅದರ ಸುತ್ತ ನೀರು ಗುಡ್ಡದ ಮೇಲೆ ದಟ್ಟವಾಗಿ ಬೆಳೆದ ಮರ ಗಿಡ ಪೊದೆಗಳು.
'ನೇರಲೇ ಗುಡ್ಡೆ ಕೆಳಗೆ ನನ್ ಗದ್ದೆ...ಮನೆ...ಕೊಟ್ಟಿಗೆ...' ಎಂದ ಆತ ತುಸು ಉತ್ಸಾಹದಿಂದ.

'ಎಷ್ಟು ಎಕರೆ ಇತ್ತು ಜಮೀನು ?'

'ಐದು ಎಕರೆ. ನಾನೇ ಮಾಡಿದ್ದು. ನಾನೇ ದರಖಾಸ್ತು ಪಡೆದು, ನಾನೇ ಕಾಡು ಕಡಿದು, ನೆಲ ಸವರಿ, ಹಾಳೆ ಮಾಡಿ, ಉತ್ತು ಬಿತ್ತು ಕಳೆ ಕಿತ್ತು, ವ್ಯವಸಾಯ ಮಾಡಿದ್ದು. ಜನ ಅದನ್ನು ನರಸೀ ಗದ್ದೆ ಅಂತ ಕರೆದ್ರು. ನಾನೇ ಕಲ್ಸಂಕದ ನರಸಣ್ಣ...ನನ್ ಹೆಸರನಲ್ಲಿ ಜನ ಇದನ್ನ ನರಸೀ ಗದ್ದೆ ಅಂದ್ರು...ಊರ ಗೌಡ ನನ್ನ ಕೈಯಿಂದ ಇದನ್ನ ಕಸಗೋಬೇಕು ಅಂತ ನೋಡ್ದ....ಮತ್ತೆ ಯಾರೋ ಕಸಕೊಳ್ಳೋದಕ್ಕೆ ಬಂದ್ರು...ನಾ ಬಿಡಲಿಲ್ಲ, ಮಾಡ್ದೆ. ಮನೇಲಿ ಏನೇನೋ ಕಷ್ಟ ಬಂತು. ಅದನ್ನ ಅಡವು ಇಟ್ಟು ಸಾಲ ಮಾಡು ಅಂದ್ರು, ನಾನು ಈ ಕೆಲಸ ಮಾಡಲಿಲ್ಲ. ಒಂದಲ್ಲ, ಹದಿನೈದು ವರ್ಷ ಬೇಸಾಯ ಮಾಡ್ದೆ...ನರಸೀ ಗದ್ದೆ ಅಂದ್ರೆ ಬಂಗಾರದಂತಾ ನೆಲ ಅಂದ್ರು ಜನ. ಆದರೆ ಈ ಭೋಸುಡಿ ನನ್ ಮಗನ್ನ ಸರಕಾರ, ಇದನ್ನ ಮುಳುಗುಸ್ತು...ಊರಿಗೆಲ್ಲ ಏಲಕ್ಕೀ ದೀಪ ಕೊಡತೀನಿ ಅಂತು...ನಿಮ್ಮನ್ನೆಲ್ಲ ಉದ್ಧಾರ ಮಾಡ್ತೀನಿ ಅಂತು....ಸ್ವರ್ಗ ನೆಲಕ್ಕೆ ಇಳಸ್ತೀನಿ ಅಂತು...ಕೊನೆಗೆ ನಮಗೆ ಅದು ತೋರ್ಸಿದ್ದು ಮಾತ್ರ ನರಕಾನ...ಕಳ್ ನನ್ ಮಕ್ಳು ಎಲ್ಲ ನಾಶ ಮಾಡಿದ್ರು...'

ಮಾತನಾಡುತ್ತ ಆತ ಏಕೋ ವ್ಯಗ್ರನಾಗುತ್ತಿರುವುದು ಇವನ ಗಮನಕ್ಕೆ ಬಂದಿತು. ಆತ ಹಲ್ಲು ಕಚ್ಚತೊಡಗಿದ. ಅವನ ಕಣ್ಣುಗಳಲ್ಲಿ ಕೆಂಡದ ಮಳೆ ಕಂಡು ಬಂದಿತು. ಅವನ ಮೈ ನಡುಗತೊಡಗಿತು. ಅವನ ಮೈ ಇಡೀ ಸೆಟೆದುಕೊಂಡು ಎತ್ತರದ ದನಿಯಲ್ಲಿ ಕಿರುಚಾಡತೊಡಗಿದ.

'ಈ ನರಸೀ ಗದ್ದೆ ಯಾವ ನನ್ ಮಗನೂ ಮಾಡಿದ್ದಲ್ಲ, ನಾನು ಮಾಡಿದ್ದು. ನಾನು ಬೆವರು ಸುರಿಸಿದ್ದು. ನಾನು ಒಪ್ಪತ್ತು ಉಂಡಿದ್ದೆ. ನಾನು ನಿದ್ದೆಗೆಟ್ಟಿದ್ದೆ. ನಾನು ಮೈ ಮುರಿದಿದ್ದೆ. ಯಾರು ಯಾರೋ ಬಂದಾಗ ಇಲ್ಲ ಅಂದಿದ್ದೆ. ಮಳೆ, ಬಿಸಿಲು ಅಂತಿಲ್ಲ ಅಂಗೆ ಗೇಯ್ದಿದ್ದೆ...ಆಮ್ಯಾಲೆ...ಬೋಸುಡಿ ಮಕ್ಳು...ಬೋಸುಡಿ ಮಕ್ಳು...'

ಕಂಬಳಿ ಹೊದ್ದು ಕುಳಿತ ಆತನ ಮೈ ನಡುಗತೊಡಗಿತು. ಅವನ ಮುಖ ವಿಕಾರವಾಯಿತು. ಆತ ತನ್ನ ಹಲ್ಲುಗಳನ್ನು ಕಟಕಟನೆ ಕಚ್ಚತೊಡಗಿದ. ಅವನಿಗೆ ಬಾಹ್ಯ ಪ್ರಪಂಚದ ಅರಿವು ಹಾರಿಹೋದಂತೆ ಅನಿಸಿತು. ಅವನ ಅವಸ್ಥೆ ಕಂಡು ಈತ ಬೆದರಿದ. ಇವನ ಮೈ ಭೀತಿಯಿಂದ ಕಂಪಿಸತೊಡಗಿತು.

ಈತ ನಿಧಾನವಾಗಿ ಅಲ್ಲಿಂದ ಹಿಂದೆ ಸರಿದ. ಇನ್ನು ಅಲ್ಲಿ ನಿಂತಿರುವುದು ಅಪಾಯ ಎನಿಸಿ ನೇರ ಕಾರಿನ ಬಳಿ ಬಂದು ಕಾರು ಹತ್ತಿದ. ಕಾರು ಅಲ್ಲಿಂದ ಹೊರಟಾಗ ತಿರುಗಿ ನೋಡಿದ. ಆತ ಹಿಂದಿನಂತೆಯೇ ರಸ್ತೆಗೆ ಬೆನ್ನು ಹಾಕಿ ಕುಳಿತಿದ್ದ. ಈತ ನಿಧಾನವಾಗಿ ಕಾರು ನಡೆಸಿಕೊಂಡು ಮುಂದೆ ಹೋದ.

ತುಂಬಾ ಕಷ್ಟಪಟ್ಟು ಮಾಡಿದ ಜಮೀನನ್ನ ಯಾರೋ ಕಿತ್ತುಕೊಂಡಾಗ ಸಿಟ್ಟು ನೋವು ಸಹಜ, ನರಸಣ್ಣ ಈ ನೋವಿನಿಂದ ನೊಂದಿದ್ದಾನೆ ಅನಿಸಿತು.

ಸುಮಾರು ಮೂವತ್ತು ವರ್ಷಗಳ ಹಿಂದೆ ಮಾಡಿದಂತಿದ್ದ ಟಾರು ರಸ್ತೆಯ ಮೇಲೆ ಕಾರು ಓಡಿತು.

ಹೀಗೆ ಹೋದವನಿಗೆ ಎಷ್ಟು ದೂರ ಹೋದರೂ ಹಿನ್ನೀರು ಮುಗಿಯುವಂತೆ ಕಾಣಲೇ ಇಲ್ಲ. ಇದು ಸದ್ಯಕ್ಕೆ ಮುಗಿಯುವುದಿಲ್ಲ ಅನಿಸಿ ಆತ ಒಂದು ಕಡೆ ಕಾರನ್ನ ತಿರುಗಿಸಿದ. ಮತ್ತೆ ಅದೇ ರಸ್ತೆ. ಅದೇ ನೀರು. ಅದೇ ಕಾಡು ಮತ್ತೆ ಅದೇ ನೇರಲೇ ಗುಡ್ಡ.

ಆದರೆ ಒಂದು ಅರ್ಧ ಗಂಟೆಯ ಹಿಂದೆ ಆ ಕಂಬಳಿಯವನು ಕುಳಿತ ದಿಣ್ಣೆ  ಬರಿದಾಗಿತ್ತು. ಆ ಮನುಷ್ಯ ಅಲ್ಲಿಯೇ ಎಲ್ಲಿಯಾದರೂ ಇರಬಹುದೇ ಎಂದು ಹುಡುಕಾಡಿದ. ಆತ ಇವನಿಗೆ ದಾರಿಯಲ್ಲೂ ಎದುರಾಗಿರಲಿಲ್ಲ. ಈಗಲೂ ಎಲ್ಲೂ ಕಾಣಲಿಲ್ಲ. ಮುಂದೆ ಸಿಗಬಹುದು ಎಂದು ಮುಂದೆ ಕಾರನ್ನು ನಡೆಸಿದ. ಆಗಲೂ ಆತ ಸಿಗಲಿಲ್ಲ. ಹಾಗಾದರೆ ಎಲ್ಲಿ ಹೋದ?

ಈತ ವಿಚಾರ ಮಾಡುತ್ತ ಮುನ್ನಡೆದ. ಕಾರು ಮುಳುಗಡೆ ಪ್ರದೇಶದಿಂದ ಹೊರ ಬಂದಿತು.

ಒಂದು ವೃತ್ತ ಎದುರಾಯಿತು. ಅಲ್ಲೊಂದು ಹಳ್ಳಿ ಹೋಟೆಲು. ಬೆಳಗ್ಗೆ ಇಲ್ಲಿಗೆ ಬಂದಾಗಿನಿಂದ ಟೀ ಕುಡಿದಿರಲಿಲ್ಲವಾದ್ದರಿಂದ ಹೋಟೆಲಿನ ಒಳಹೊಕ್ಕ.
ತಿಂಡಿಗೆ ಹೇಳಿ ಕುಳಿತಾಗ ಹೋಟೆಲಿನ ಮಾಲೀಕ ಬಂದು ಪಕ್ಕದಲ್ಲಿ ಕುಳಿತ.
'ಎಲ್ಲಿಂದ ಬಂದಿದೀರಾ ಸಾರ್  ?' ಆತ ಕೇಳಿದ.

'ಬೆಂಗಳೂರಿನಿಂದ, ಅಣೆಕಟ್ಟನ್ನ ನೋಡೋಣ ಅಂತ ಬಂದೆ.'
ತಟ್ಟನೆ ಅವನಿಗೆ ಕಲ್ಸಂಕದ ನರಸಣ್ಣನ ನೆನಪಾಯಿತು.
'ಅಲ್ಲ ಇವರೇ, ಇಲ್ಲಿ ಕಲ್ಸಂಕದ ನರಸಣ್ಣ ಅಂತ...'

ಇವನ ಮಾತು ಮುಗಿಯುವ ಮುನ್ನವೇ ಆತ ಕೇಳಿದ 'ನರಸೀಗದ್ದೆ ನರಸಣ್ಣ ಅಲ್ವಾ ?'

'ಹೌದು, ಅವನು ಸಿಗಬಹುದೇ ?'

ಆತ ನಕ್ಕ.

'ಈ ಹಿನ್ನೀರಿನ ಪ್ರದೇಶದಲ್ಲಿ ನೀವು ಒಂಟಿಯಾಗಿ ತಿರುಗಾಡಿದರೆ ನಿಮಗೆ ಒಬ್ಬನಲ್ಲ ಸಾವಿರ ಜನ ನರಸಣ್ಣಗಳು ಸಿಗತಾರೆ...ಅಣೆಕಟ್ಟನ್ನ ಕಟ್ಟಿದ್ದರಿಂದ ಸಾವಿರ ಜನರ ಬದುಕು ಉದ್ಧಾರ ಆಗಿದೆ...ಆದರೆ ಅಷ್ಟೇ ಜನರ ಬದುಕು ಹಾಳಾಗಿದೆ. ಅವರೆಲ್ಲ ಇಲ್ಲಿ ಪ್ರೇತಗಳಾಗಿ ಅಲೆದಾಡ್ತಿದಾರೆ...ಇದನ್ನ ಯಾರೂ ನಂಬೋದಿಲ್ಲ...ಆದರೆ ನಮ್ಮ ಅನುಭವವೇ ಬೇರೆ...ಇಲ್ಲಿ ಕವಿದಿರೋ ಈ ಮೌನ, ಭೀತಿಯ ಹಿಂದೆ ಮತ್ತೆ ಏನು ಇರಲಿಕ್ಕೆ ಸಾಧ್ಯ ಹೇಳಿ ?'

ಮಾಣಿ ತಂದು ಎದುರು ಇರಿಸಿದ ತಿಂಡಿಯ ತಟ್ಟೆಯನ್ನು ತನ್ನ ಬಳಿ ಎಳೆದುಕೊಂಡು ಕುಳಿತ ಆತ ಮತ್ತೊಮ್ಮೆ ನರಸಣ್ಣನನ್ನ ನೆನಸಿಕೊಂಡ.
ಮನಸ್ಸು ಏಕೋ ಸಣ್ಣಗೆ ಮಿಡುಕಾಡಿತು.
ದೇಹ ತನಗರಿವಿಲ್ಲದೆ ಕಂಪಿಸಿತು.

(೧೯೯೯)

✍ ಡಾ. ನಾ. ಡಿಸೋಜ
{ಸಮಗ್ರ ಕತೆಗಳು ಸಂಪುಟ ೨}

ಈ ಸಣ್ಣಕತೆ ಆಧರಿಸಿದ 'ಶರಾವತಿ' ಕಿರುಚಿತ್ರದ ಲಿಂಕ್:
https://youtu.be/IhUzzd_RQg8

Monday 18 November 2019

ಮಾರಿಹಬ್ಬದ ಸುತ್ತಮುತ್ತ... ಅಸಲಿ ವಿಷಯ ಏನು ಗೊತ್ತ....

ಸಂಸ್ಕೃತಿ, ಸಂಪ್ರದಾಯದ ಹೆಸರಿನಲ್ಲಿ ದುಂದುವೆಚ್ಚ ತರವೇ?

ಬಡತನ ಹೆಚ್ಚಿಸುವ ಮಾರಿ ಹಬ್ಬ!



ಡಿ.ಜಿ.ನಾಗರಾಜ್ ಹರ್ತಿಕೋಟೆ


ಶ್ರಾವಣ ಮಾಸದ ಆಸುಪಾಸಿನ ದಿನಗಳಲ್ಲಿ ಮಾರಿ ಹಬ್ಬದ ಸಂಭ್ರಮ ತುಸು ಜೋರಾಗಿಯೇ ಇರುತ್ತದೆ. ಇತ್ತೀಚೆಗೆ ತನ್ನ ಲವಲವಿಕೆಯನ್ನು ಕಳೆದುಕೊಂಡು ಬಿಕೋ ಎನ್ನುತ್ತಿರುವ ಗ್ರಾಮಗಳಲ್ಲಿ, ಮಾರಿ ಹಬ್ಬದ ಸಂಜೆಯ ದಿನಗಳಲ್ಲಿ ಕಾಲಿಡಲಾಗದಷ್ಟು ಜನಜಂಗುಳಿ ಇರುತ್ತದೆ. ವರ್ಷಕ್ಕೊಮ್ಮೆ ಅಥವಾ ಎರಡು ಮೂರು ವರ್ಷಗಳಿಗೊಮ್ಮೆ ನಡೆಯುವ ಉತ್ಸವದಲ್ಲಿ ಜನಪದೀಯ ಆಚರಣೆಗಳ ಜೊತೆಗೆ ಮದ್ಯ, ಮಾಂಸದ ಸಮಾರಾಧನೆ ಎಗ್ಗಿಲ್ಲದೆ ನಡೆಯುತ್ತದೆ.


ಇಂತಿಪ್ಪ ಮಾರಿ ಹಬ್ಬದ ಹಿನ್ನೆಲೆಯನ್ನು ಗಮನಿಸಿ
ದಾಗ, ಮಾನವ ಮೊದಮೊದಲಿಗೆ, ಪ್ರಕೃತಿದೇವಿ
ಯನ್ನು ಪೂಜಿಸುವ ಮೂಲಕ ಆಕೆಯ ಆರಾಧಕನಾಗಿದ್ದ.
ಇದು ಆತನ ಬದುಕಿಗೆ ಸ್ಫೂರ್ತಿ, ಉಲ್ಲಾಸ, ನೆಮ್ಮದಿ ನೀಡುವ ಆರಾಧನೆಯಾಗಿತ್ತು ಎಂಬುದು ತಿಳಿಯುತ್ತದೆ. ನಂತರದ ದಿನಗಳಲ್ಲಿ ಇದು ನಡೆದುಬಂದ ಹಾದಿ
ಯನ್ನು ಗಮನಿಸಿದರೆ, ಬಹುತೇಕ ಕಥೆಗಳು ವರ್ಣಾಶ್ರಮ
ವ್ಯವಸ್ಥೆಯ ಹಿನ್ನೆಲೆಯನ್ನು ಹಾಸಿಹೊದ್ದಿರುವುದು ತಿಳಿಯುತ್ತದೆ. ಅಲ್ಲಿ ಮತ್ತದೇ ಸಾಮಾಜಿಕ ಶ್ರೇಣೀ
ಕರಣದ ಮೇಲ್ಪಂಕ್ತಿಯೇ ಮುನ್ನೆಲೆಗೆ ಬರುತ್ತದೆ. 
ಬ್ರಾಹ್ಮಣತಿಯೊಬ್ಬಳನ್ನು ಶೂದ್ರ ಹುಡುಗನೊಬ್ಬ ತನ್ನ ಹಿನ್ನೆಲೆ ತಿಳಿಸದೇ ವಿವಾಹವಾಗುತ್ತಾನೆ. ತದನಂತರ ಆತನ ಹಿನ್ನೆಲೆಯು ಹೆಂಡತಿಯ ಅರಿವಿಗೆ ಬರುತ್ತದೆ. ಆಗ ಆಕೆ ಪುನರ್ಜನ್ಮವೆತ್ತಿ ಮಾರಿಯಾಗಿ, ಕೋಣ ರೂಪದ ಶೂದ್ರ ಗಂಡನನ್ನು ಬಲಿ ತೆಗೆದುಕೊಳ್ಳುವುದರೊಂದಿಗೆ ಅಂತ್ಯ ಹಾಡಲಾಗಿದೆ. ವಿಚಿತ್ರವೆಂದರೆ, ಮೇಲ್ವರ್ಗದ ಗಂಡು ಶೂದ್ರ ಹುಡುಗಿಯನ್ನು ವಿವಾಹವಾದರೆ ಅಪರಾಧವೆಂದು ಬಿಂಬಿಸದೆ, ಇತಿಹಾಸದ ಪುಟಗಳಲ್ಲಿ ವಿನಾಯಿತಿಯನ್ನೂ ಕೊಡಲಾಗಿದೆ.

ಮಾರಿ ಹಬ್ಬಕ್ಕೆ ಸಂಬಂಧಿಸಿದಂತೆ ಇನ್ನೂ ಒಂದು
ಕಥೆ ಚಾಲ್ತಿಯಲ್ಲಿದೆ. ಒಂದು ಪ್ರಾಂತ್ಯದಲ್ಲಿನ ಶ್ರೀಮಂತ
ಮಂದಿ ನೂರಾರು ಎಕರೆ ಭೂಮಿಯನ್ನು ಹೊಂದಿದ್ದರೆ,
ಕೆಳವರ್ಗದ ಮಂದಿಯೂ ಅಗತ್ಯವಿರುವಷ್ಟು ಭೂಮಿ
ಯಲ್ಲಿ ಸ್ವಾವಲಂಬಿ ಜೀವನವನ್ನು ಕಂಡುಕೊಂಡಿ
ರುತ್ತಾರೆ. ಹೆಚ್ಚು ಭೂಮಿ ಹೊಂದಿದ ಮೇಲ್ವರ್ಗಕ್ಕೆ ಕೃಷಿಕ ಆಳುಗಳು ಸಿಗುವುದೇ ದುಸ್ತರವಾಗಿರುತ್ತದೆ. ತಾವು ಶ್ರಮರಹಿತ ಆಡಂಬರದ ಜೀವನ ಕಂಡುಕೊಳ್ಳಬೇಕು ಎಂದರೆ, ಹೇಗಾದರೂ ಸರಿ ಇವರನ್ನು ಮಟ್ಟ ಹಾಕ
ಬೇಕು ಎಂಬ ಆಲೋಚನೆ ಅವರದ್ದು. ಹೀಗಿರಲಾಗಿ, ಊರಿಗೆ ಒಮ್ಮೆ ಭಯಾನಕ ಸೋಂಕು ತಗುಲಿ, ಊರಿ
ಗೂರೇ ಸಾವಿನ ಮನೆಯಾಗುತ್ತದೆ. ಇದೇ ಅವಕಾಶ
ಬಳಸಿಕೊಂಡ ಶ್ರೀಮಂತರು ಮತ್ತು ಪೂಜಾರಿ ‘ಊರ ದೇವತೆ ನಮ್ಮ ಮೇಲೆ ಮುನಿದಿದ್ದಾಳೆ. ಪ್ರಾಣಿಗಳ ಬಲಿ ಕೊಟ್ಟು ಪ್ರತಿವರ್ಷವೂ ಮಾರಿ ಹಬ್ಬ ಮಾಡಿದರೆ ಶಾಂತಳಾಗುತ್ತಾಳೆ’ ಎಂದು ಜನರನ್ನು ನಂಬಿಸುತ್ತಾರೆ. ಕಡೆಗೆ, ಮಾರಿ ಹಬ್ಬ ಮಾಡುವ ಬಗ್ಗೆ ಒಕ್ಕೊರಲ ತೀರ್ಮಾನವಾಗುತ್ತದೆ. ಮಾರಿ ಹಬ್ಬ ಮಾಡುವವರಾರು...? ಮತ್ತದೇ ಮಂದಿ.

ನೆಂಟರಿಷ್ಟರನ್ನು ಕಲೆಹಾಕಿ ಹಬ್ಬದ ನೆಪದಲ್ಲಿ ಪ್ರಾಣಿ ಬಲಿಯೊಂದಿಗೆ ಮದ್ಯ, ಮಾಂಸದ ಭರ್ಜರಿ ರಸದೌತಣ ನಡೆಯುತ್ತದೆ. ಹೀಗೆ ಇತ್ತ ಹಬ್ಬವೇನೋ ವಿಜೃಂಭಣೆಯಿಂದ ನಡೆಯುತ್ತದೆ. ಆದರೆ ಅತ್ತ ಮನೆಯಲ್ಲಿ ನಿಧಾನವಾಗಿ ಅಶಾಂತಿ ಭುಗಿಲೇಳುತ್ತದೆ. ಕಾರಣವಿಷ್ಟೇ, ಮಾರಿಗೆ ಔತಣ ನೀಡಲು ಕೂಡಿಟ್ಟ ಹಣ ಸಾಲದಾಗಿ, ಕೆಳವರ್ಗದ ಮಂದಿಯೆಲ್ಲಾ ಶ್ರೀಮಂತರ ಮನೆ
ಬಾಗಿಲಿಗೆ ಎಡತಾಕಿ ಬೊಗಸೆ ತುಂಬಾ ಹಣ ತಂದಿರು
ತ್ತಾರೆ. ಈ ಸಮಯಕ್ಕಾಗಿಯೇ ಕಾದು ಕುಳಿತವರು
ಕೆಲವು ದಿನಗಳ ನಂತರ ಹಣ ಮರುಪಾವತಿಗೆ ಪೀಡಿಸುತ್ತಾರೆ. ಸಾಲ ತೀರಿಸಲು ಆದಾಯದ ಮೂಲಗಳೇ ಇಲ್ಲದವರು ಶ್ರೀಮಂತರ ಮನೆಗಳಲ್ಲಿ ಜೀತದಾಳುಗಳಾಗುತ್ತಾರೆ. ಅವರ ದುಡಿಮೆಯ ಹಣ ಬಡ್ಡಿ ಚುಕ್ತಾಗಷ್ಟೇ ಸೀಮಿತವಾಗುತ್ತದೆ. ಅಸಲಿನ
ಬಾಬತ್ತು ಮಕ್ಕಳು, ಮೊಮ್ಮಕ್ಕಳ ಕಾಲಕ್ಕೂ ವರ್ಗಾವಣೆ
ಯಾಗಿ, ಅದು ತೀರದ ಸಾಲವಾಗಿಬಿಡುತ್ತದೆ.

ಗುಪ್ತ ಕಾರ್ಯಸೂಚಿಗಳೇ ಹೀಗೆ. ಅಲ್ಲಿ ಬಲಿಯಾಗು
ವವರು ಅಮಾಯಕರೇ ಆಗಿರುತ್ತಾರೆ. ಇಂದಿಗೂ ಹಳ್ಳಿ ಹಳ್ಳಿಗಳಲ್ಲಿ ಆಚರಿಸುವ ಮಾರಿ ಹಬ್ಬದ ಸಂಭ್ರಮವು ಜನಪದೀಯತೆಯನ್ನು ಕಳೆದುಕೊಂಡು, ಉಂಡು ತಿಂದು ತೇಗುವುದಕ್ಕಷ್ಟೇ ಸೀಮಿತವಾಗಿದೆ. ಸ್ಪರ್ಧೆಗಿಳಿ
ದವರಂತೆ ಹಬ್ಬ ಮಾಡುವ ಹಳ್ಳಿಗರು ಮಾಡುವ ವೆಚ್ಚವು ಎಷ್ಟೋ ಬಾರಿ, ಅವರ ಒಣಭೂಮಿಯಲ್ಲಿ ಬೆಳೆ
ಯುವ ಬೆಳೆಯ ವರ್ಷದ ಆದಾಯಕ್ಕಿಂತಲೂ ಹೆಚ್ಚು! ಹಬ್ಬದ ನೆಪದಲ್ಲಿ ನಡೆಯುವ ಅತಿಥಿ ಸತ್ಕಾರಕ್ಕೆ ಸಂತಸ
ಪಡಬೇಕೋ, ಆರ್ಥಿಕ ಜಂಜಾಟಗಳ ನಡುವೆಯೂ ಮಾಡುವ ಹಬ್ಬಕ್ಕೆ ಸಂಭ್ರಮಿಸಬೇಕೋ ತಿಳಿಯದು.

ಇಲ್ಲಿ ಸಂಪ್ರದಾಯ, ನಂಬಿಕೆ, ಆಚರಣೆ, ಸಂಸ್ಕೃತಿ ಮತ್ತು ಆಹಾರದ ಹಕ್ಕುಗಳು ಪ್ರಶ್ನಾತೀತ. ಆದರೆ ಅವುಗಳ ಹೆಸರಿನಲ್ಲಿ ನಡೆಯುವ ದುಂದುವೆಚ್ಚ, ಹುನ್ನಾರ, ಗುಪ್ತ ಸಿದ್ಧಾಂತಗಳು ಬಡವರನ್ನು ಇನ್ನಷ್ಟು ಬಡವರನ್ನಾಗಿಸುತ್ತಿವೆ. ಇಲ್ಲಿ ಬಂಡವಾಳವಾಗುತ್ತಿರು
ವುದು ಅಮಾಯಕರ ಭಾವನೆಗಳೇ. ಬೇರೆಲ್ಲಾ ದಿನಗಳಲ್ಲಿ ಅತಿ ಸರಳವಾಗಿ ಬದುಕುವ ಜನ, ಹಬ್ಬ, ಜಾತ್ರೆ, ಉತ್ಸವಗಳಲ್ಲಿ ವರ್ಷದ ವರಮಾನವನ್ನೆಲ್ಲ ವೆಚ್ಚ ಮಾಡಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸೊರಗಿ ಹೋಗುತ್ತಿರುವುದು ದುರಂತವೇ ಸರಿ. ಜನ ಬದಲಾದಂತೆಲ್ಲಾ ಆಳುವವರ ಗುಪ್ತ ಕಾರ್ಯ
ಸೂಚಿಗಳ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ. ತಮ್ಮ ಅಸ್ತಿತ್ವಕ್ಕಾಗಿ ಜನರ ಭಾವನೆಗಳನ್ನು 
ಅವರು ಬಳಸಿಕೊಳ್ಳುತ್ತಾರೆ. 

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...