ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 9 October 2017

ಡಾ. ನಾ.ಡಿಸೋಜಾ ಅವರ ಪ್ರಕೃತಿಯೊಂದಿಗೆ ಅನುಸಂಧಾನ...

*ಪ್ರಕೃತಿಯೊಂದಿಗೆ ಅನುಸಂಧಾನ.*            

*- ನಾ. ಡಿಸೋಜ*

ಬಹಳ ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ಸುಂದರ ಕಡಲ ತಡಿಯಲ್ಲಿ ನಾನು ಕುಳಿತಿದ್ದೆ. ಮುಂಜಾನೆಯ ಹೊತ್ತು. ಅದೇ ಬೆಳಕು ನಿಧಾನವಾಗಿ ಬಂದು ಎಲ್ಲವನ್ನ ತನ್ನ ಹತೋಟಿಯಲ್ಲಿ ತೆಗೆದುಕೊಳ್ಳುತ್ತಿದ್ದ ಸಮಯ. ಕಡಲು ತನ್ನ ಅಲೆಗಳನ್ನ ನಿರಂತರವಾಗಿ ತಂದು ತಂದು ದಡಕ್ಕೆ  ಚೆಲ್ಲುತ್ತಲೇ ಇತ್ತು. ಕಡಲಲ್ಲಿ ಅಲ್ಲೊಂದು ಇಲ್ಲೊಂದು ಹಂದಿ ಮೀನು ಮೇಲೆ ಹಾರಿ ಮತ್ತೆ ನೀರಿಗೆ ಬಿದ್ದು ಮಾಯವಾಗುತ್ತಿದ್ದ ಸುಂದರ ದೃಶ್ಯವನ್ನ ನೋಡುತ್ತ ನಾನು ಕುಳಿತಾಗ, ತೆಂಗಿನ ಮರಗಳಿಂದ ಆವೃತವಾದ ಮನೆಗಳ ನಡುವಿನಿಂದ ಓರ್ವ ಅಂಬಿಗ ಸಣ್ಣ ಪಾತಿ (ದೋಣಿ)ಯೊಂದನ್ನ ಮರಳಲ್ಲಿ ಎಳೆದು ತಂದ. ಅವನ ಕೈಯಲ್ಲಿ ಒಂದು ಹುಟ್ಟು, ಬಲೆ ಮತ್ತಿತರ ಸಲಕರಣೆಗಳಿದ್ದವು. ಅವನ್ನೆಲ್ಲ ದೋಣಿಯೊಳಗೆ ಇರಿಸಿ ಆತ ದೋಣಿಯನ್ನ ನೀರಿನ ಅಂಚಿಗೆ ತಂದು ಇರಿಸಿ ಭಕ್ತಿಯಿಂದ ಕಡಲಿನತ್ತ ತಿರುಗಿ ನಿಂತು ಒಮ್ಮೆ ಕೈ ಮುಗಿದ.

ಬಗ್ಗಿ ದೋಣಿಯನ್ನ ನೀರಿಗೆ ತಳ್ಳಿ ನುಗ್ಗಿ ಬರುವ ಅಲೆಗಳನ್ನ ತಪ್ಪಿಸಿಕೊಂಡು ದೋಣಿಯನ್ನ ಕಡಲಿನೊಳಗೆ ನಡೆಸಿಕೊಂಡು ಹೋಗಿ, ಹಾರಿ ಅದನ್ನೇರಿ ಹುಟ್ಟು ಹಾಕತೊಡಗಿದ. ಕೆಲವೇ ನಿಮಿಷಗಳಲ್ಲಿ ಆತ ಕಡಲಿನಲ್ಲಿ ಸಾಕಷ್ಟು ದೂರ ಹೋಗಿ ತಲುಪಿದ್ದ. ಅತಿವಿಸ್ತಾರವಾದ ಸದಾ ಅಬ್ಬರಿಸುವ, ಕೊತಕೊತನೆ ಕುದಿಯುವ ನೀಲಿ  ಕಡಲು, ಕೇವಲ ಐದು ಅಡಿಯ ಸಣ್ಣ ಮನುಷ್ಯ ಕಡಲಿಗೆ ಕೈಮುಗಿಯುತ್ತಲೇ ತನ್ನತನವನ್ನ ಅಲ್ಲಿ ಸ್ಥಾಪಿಸಿದ ಈ ಮನುಷ್ಯನ ಸ್ವಭಾವ ನನಗೆ ಎಂದೂ ಅಚ್ಚರಿಯ ವಿಷಯ.

ನಾನಿಲ್ಲಿ ಮತ್ತೊಂದು ಘಟನೆಯನ್ನ ಹೇಳಬೇಕು. ನಾನು ಕಾರ್ಗಲ್ಲಿನಲ್ಲಿ ಇದ್ದಾಗ ನಡೆದದ್ದು. ಓರ್ವ ಯುವತಿ ಏನೋ ಕಾರಣಕ್ಕೆ ಜೋಗ್ ಜಲಪಾತಕ್ಕೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡಳು. ಅವಳ ಶವ ಜೋಗ್ ಜಲಪಾತದ ರಾಣಿ ಧಾರೆಯಲ್ಲಿ ನಟ್ಟನಡುವೆ ಅನ್ನುವ ಹಾಗೆ ಬಂಡೆಗಳ ಬಿರುಕಿನಲ್ಲಿ ಸಿಕ್ಕಿ ಬಿದ್ದಿತು. ದೂರದಿಂದ ನೋಡಿದವರಿಗೆ ಈ ಶವ ಕಾಣುತ್ತಿತ್ತು. ಆದರೆ ಅಲ್ಲಿ ಇಳಿದು ಅದನ್ನ ತೆಗೆಯುವುದು ಹೇಗೆ ಅನ್ನುವ ಪ್ರಶ್ನೆ ಬಂದಾಗ ಜೋಗದವನೇ ಆದ ಓರ್ವ ಮುಂದೆ ಬಂದ. ಆತ ಜಲಪಾತದ ಬಿರುಸು ಬಂಡೆಗಳ ಮೇಲಿನಿಂದ ಇಳಿದು ಕೆಳಗೆ ಹೋಗಿ ಆ ಶವವನ್ನ ಅಲ್ಲಿಂದ ಹಗ್ಗಕಟ್ಟಿ ಮೇಲೆ ತರುವಲ್ಲಿ ಯಶಸ್ವಿಯಾದ. ಆದರೆ ಸುಮಾರು 900 ಅಡಿ ಆಳದ ಆ ಕಣಿವೆಯ ಅಂಚಿಗೆ ಹೋಗಿ ಈ ಕೆಲಸ ಮಾಡಿದ ಆತ ಮೇಲೆ ಬಂದ ಎಷ್ಟೋ ಹೊತ್ತಿನವರೆಗೆ ಕಂಪಿಸುತ್ತಿದ್ದ. ಸಣ್ಣಗೆ ಬೆವರುತ್ತಿದ್ದ.

ಇಲ್ಲಿ ಹೇಳಬಹುದಾದ ಮೂರನೇ ಘಟನೆಯೊಂದಿದೆ. ಮಲೆನಾಡಿನ ಒಂದು ಹಳ್ಳಿಗೆ ಸ್ನೇಹಿತರ ಜೊತೆಯಲ್ಲಿ ಹೋಗಿದ್ದೆ ನಾನು. ಒಂದು ಅಡಕೆ ತೋಟದಲ್ಲಿ ಅಡಕೆ ಕೀಳುವ ಕೆಲಸ ನಡೆದಿತ್ತು. ಸೊಂಟಕ್ಕೆ ಸಿಕ್ಕಿಸಿಕೊಂಡ ಹಗ್ಗದ ಆಧಾರದಿಂದ ಅಡಕೆ ಕೊನೆಯನ್ನ ಕೆಳಗೆ ತೇಲಿಬಿಡುತ್ತಿದ್ದ ಕಾರ್ಯವನ್ನ ನೋಡುತ್ತ ನಿಂತ ನನಗೆ ಆಘಾತವಾಗುವಂತಹ ಒಂದು ಘಟನೆ ಕಾಣಲು ಸಿಕ್ಕಿತು. ಅಡಕೆ ಮರ ಹತ್ತಿದವ ಒಂದು ಮರ ಇಳಿದು ಇನ್ನೊಂದು ಮರ ಹತ್ತುವಾಗ ಆತ ಹತ್ತಿದ ಮರ ಲಡ್ಡಾಗಿ ಇದ್ದುದರಿಂದಲೋ ಏನೋ ಅದು ಮುರಿದು ಅದರ ಮೇಲೆ ಹತ್ತುವ ಯತ್ನದಲ್ಲಿದ್ದವ ಕೆಳಗೆ ಬಿದ್ದ.

ಹೀಗೆ ಬಿದ್ದವನಿಗೆ ತುಸು ಪೆಟ್ಟಾದರೂ ಆತ ಬಿದ್ದವನೇ ಮೊದಲು ಮಾಡಿದ ಕೆಲಸ ಅಂದರೆ ಅದೇ ಮರವನ್ನ ಮತ್ತೆ ಹತ್ತಿ ಇಳಿದದ್ದು.

'ಏಕೆ ಹೀಗೆ ಮಾಡಿದೆ' ಎಂದು ಕೇಳಿದಾಗ ಆವನು ನೀಡಿದ ಉತ್ತರ `ನಾವು ಮರ ಹತ್ತಿಯೇ ಬದುಕು ಮಾಡಬೇಕಾದವರು, ಒಂದು ಹೆದರಿಕೆ ನಮ್ಮಲ್ಲಿ ಉಳೀತು ಅಂದರೆ ಮುಂದೆ ಕಷ್ಟ, ಆ ಹೆದರಿಕೆ ಹೋಗಬೇಕು ಅಂದ್ರೆ ಹೀಗೆ ಮಾಡಬೇಕು' ಎಂದ ಆತ.

ಈ ಮೂರೂ ಘಟನೆಗಳು ಪರಿಸರದ ಜೊತೆಯಲ್ಲಿ ಮನುಷ್ಯ ಹೇಗೆ ಸಂಬಂಧವನ್ನ ಇರಿಸಿಕೊಂಡಿದ್ದಾನೆ ಅನ್ನುವುದನ್ನ ನೆನಪಿಸುತ್ತವೆ.
ಅಗಾಧವಾದ ಪರಿಸರಕ್ಕೆ ಕೈಮುಗಿಯುತ್ತಲೇ ಅದನ್ನ ಒಲಿಸಿಕೊಳ್ಳುವುದು, ಭೀಕರವಾದ ಪರಿಸರದ ಜೊತೆಯಲ್ಲಿ ಒಂದು ಅನುಸಂಧಾನವನ್ನ ಮಾಡಿಕೊಂಡು ಬದುಕುವುದು, ಪರಿಸರದಿಂದ ಸೋಲನ್ನ ಕಂಡರೂ ಅದನ್ನ ಮತ್ತೆ ಮತ್ತೆ ಗೆಲ್ಲುವ ಯತ್ನ ಮಾಡುವುದು ಇವೆಲ್ಲ ಒಂದು ಕಾಲದಲ್ಲಿ ಮನುಷ್ಯ ಪರಿಸರದ ಜೊತೆಯಲ್ಲಿ ಮಾಡಿಕೊಂಡ ಹಲವು ಬಗೆಯ ರಾಜಿಗಳು ಎಂದೇ ನನಗೆ ಅನಿಸುತ್ತದೆ. ಆದರೆ ಮನುಷ್ಯ ಮತ್ತು ಪರಿಸರದ ನಡುವಣ ಸಂಬಂಧ ಎಂತಹದು ಎಂಬ ಪ್ರಶ್ನೆ ಇವತ್ತು ಯಾರನ್ನೂ ಕಾಡುತ್ತಿಲ್ಲ. ಮನುಷ್ಯ ಪರಿಸರದ ಕೂಸು ಅನ್ನುವಂತಹಾ ಮಾತುಗಳನ್ನು ಕೂಡ ನಾವು ಮರೆತು ಬಿಟ್ಟಿದ್ದೇವೆ.

ಮನುಷ್ಯ ವೈಜ್ಞಾನಿಕವಾಗಿ ಹಲವು ಸಾಧನೆಗಳನ್ನ ಮಾಡಿದ ಹಾಗೆ, ಚಂದ್ರ ಮಂಗಳಗಳತ್ತ ಅವನ ದೃಷ್ಟಿ ಹರಿದ ಹಾಗೆ, ಆತ ಪರಿಸರದಿಂದ ದೂರವಾಗುತ್ತಿದ್ದಾನೆ. ಬೆಳದಿಂಗಳು, ಸೂರ್ಯೋದಯ, ಸೂರ್ಯಾಸ್ತ, ಮಳೆ ಬಿದ್ದ ಮರುದಿನವೇ ನಮ್ಮ ಮನೆ ಮುಂದಿನ ಬಯಲಲ್ಲಿ ಹಸಿರು ಹುಲ್ಲು ಚಿಗುರುವ ಅಚ್ಚರಿ, ಬೀಜ ಮೊಳಕೆ ಒಡೆಯುವ ಪರಿ, ಬಂಡೆ ಸಂದಿಯಲ್ಲಿ ಗಾಳಿ, ಬಿಸಿಲು ಮಳೆ ಎಲ್ಲವನ್ನ ಸಹಿಸಿಕೊಂಡು ಒಂದು ಬೀಜ ಗಿಡವಾಗಿ ಬೆಳೆಯುವ ಛಲ, ಕಾಲಕಾಲಕ್ಕೆ ಆಗುವ ಋತುಗಳ ಬದಲಾವಣೆ, ಬಾಹ್ಯಾಕಾಶದ ಹಲವು ಅಚ್ಚರಿಗಳು, ಇವೆಲ್ಲವನ್ನ ನೋಡುವ, ನೋಡಿ ಮೈಮರೆಯುವ ಬೆರಗಾಗುವ ನೂರು ಕ್ಷಣಗಳನ್ನ ನಾವು ಕಳೆದುಕೊಂಡಿದ್ದೇವೆ. ಆಧುನಿಕತೆ ಅನ್ನುವುದು ನಮ್ಮ ಮತ್ತು ಪರಿಸರದ ನಡುವೆ ಒಂದು ಕಣ್ಣಪಟ್ಟಿಯಾಗಿ ಬೆಳೆದು ನಿಂತಿದೆ. ಬಹಳ ಜನರಿಗೆ ಪರಿಸರದ ನೆನಪು ಆಗುವುದೇ ಇಲ್ಲ. ಬಹಳ ಜನರಿಗೆ ಪರಿಸರ ಬೇಕಾಗಿಯೂ ಇಲ್ಲ.

ಇಲ್ಲಿ ಪರಿಸರ ಅಂದರೆ ಕೇವಲ ಮರಗಿಡ ಬಳ್ಳಿ ಮಾತ್ರವಲ್ಲ. ಅದೊಂದು ವ್ಯವಸ್ಥೆ. ಒಂದರ ಮೇಲೆ ಇನ್ನೊಂದು ಅವಲಂಬಿಸಿಕೊಂಡು ಇಡೀ ಪ್ರಪಂಚವನ್ನ ಮುನ್ನಡೆಸುವ ಒಂದು ವಿಧಾನ. ಇದರ ಕುರಿತು ಅರಿವನ್ನ ಬೆಳೆಸಿಕೊಳ್ಳುವುದೇ ಪರಿಸರ ಪ್ರೇಮ.

ಆದರೆ ಸದಾ ಮನುಷ್ಯನ ಬದುಕು, ಅವನ ಕಷ್ಟ ಸುಖಗಳ ಕುರಿತೇ ಚಿಂತಿಸುವ ಸಾಹಿತ್ಯ ಮಾತ್ರ ಹಿಂದಿನಿಂದಲೂ ಪರಿಸರವನ್ನ ದೂರ ಮಾಡಿಲ್ಲ. ನಮ್ಮ ಹಿಂದಿನ ಕವಿಗಳಂತೂ `ತಳ್ತ ಎಲೆ ವಳ್ಳಿಯೇ ಚಿಗುರ್ವು ಮಾಮರವೇ ಕುಕಿಲ್ವ ಕೋಗಿಲೆಯೇ' ಎಂದು ಪರಿಸರದ ಮೇಲೆ ಅವಲಂಬಿಸಿಕೊಂಡವರೇ. ಪುಟ್ಟಪ್ಪನಂತಹಾ ಕವಿಗಳ ಕಾವ್ಯದ ಹೆಚ್ಚುಗಾರಿಕೆಯೇ ಪರಿಸರ. `ಕಾಡು ದೇವರ ಬೀಡು; ಗಿರಿಯ ಮುಡಿ ಶಿವನ ಗುಡಿ' ಎಂದೇ ಅವರು ಕೊಂಡಾಡಿದವರು. ಅವರ ಎರಡು ಕಾದಂಬರಿಗಳು ಏನಿವೆ `ಕಾನೂರು ಹೆಗ್ಗಡಿತಿ' ಮತ್ತು `ಮಲೆಗಳಲ್ಲಿ ಮದುಮಗಳು' ಪರಿಸರದ ಅರ್ಥಕೋಶಗಳಂತೆ.
ಕಾರಂತರ `ಬೆಟ್ಟದ ಜೀವ' ತೇಜಸ್ವಿಯವರ ಎಲ್ಲ ಕೃತಿಗಳಲ್ಲೂ ನಾವು ಕಾಣುವುದು ಪರಿಸರದ ವಿವಿಧತೆ ವೈಶಿಷ್ಟ್ಯಗಳನ್ನ. ಓದುಗರು ಈ ಕೃತಿಗಳನ್ನ ಮೆಚ್ಚಿಕೊಂಡಿರುವುದೇ ಪರಿಸರದ ವಿವರಗಳಿಗಾಗಿ. ಬೇಡವೆಂದರೂ ನನಗೆ ಅರ್ನೆಸ್ಟ್ ಹೆಮಿಂಗ್ವೇನ `ಓಲ್ಡ್ ಮ್ಯೋನ್ ಅಂಡ್ ದ ಸೀ' ನೆನಪಾಗುತ್ತದೆ. ಪರಿಸರ ಮತ್ತು ಮನುಷ್ಯನ ನಡುವಣ ಹೋರಾಟವನ್ನ ಹೆಮಿಂಗ್ವೆ ಸುಂದರವಾಗಿ ಚಿತ್ರಿಸುತ್ತಾನೆ ಈ ಕಾದಂಬರಿಯಲ್ಲಿ.

ಪಂಪ, ಕುವೆಂಪು, ಕಾರಂತರ ಕಾಲದಲ್ಲಿ ಪರಿಸರಕ್ಕೆ ಯಾವುದೇ ತೊಂದರೆ ಇರಲಿಲ್ಲ. ಅಂದು ಪರಿಸರ ಮಾನವನ ಜೀವನಕ್ಕೆ ಒಂದು ಒತ್ತಾಸೆಯಾಗಿದ್ದರಿಂದ ಅವರು ಪರಿಸರವನ್ನ ಕುರಿತು ಬರೆದರು, ಅದನ್ನ ಹಾಡಿ ಹೊಗಳಿದರು. ಆದರೆ ತೇಜಸ್ವಿಯವರ ಕಾಲಕ್ಕೆ ಆಗಲೇ ಪರಿಸರ ನಾಶವಾಗತೊಡಗಿತ್ತು. ಈಗಂತೂ ಈ ನಾಶದ ಪರಿಧಿ ವಿಸ್ತಾರವಾಗಿದೆ. ಈಗ ಲೇಖಕ ಪರಿಸರ ಕುರಿತಂತೆ ಎರಡೂ ಬಗೆಯ ದನಿಯನ್ನ ಎತ್ತಬೇಕಾಗಿದೆ. ಪರಿಸರದ ವಿಶೇಷತೆಯನ್ನೂ ಆತ ಹೇಳಬೇಕು ಅದನ್ನ ಉಳಿಸಿಕೊಂಡು ಹೋಗಬೇಕಾದ ಅವಶ್ಯಕತೆಯ ಕುರಿತೂ ಮಾತನಾಡಬೇಕು. ನಾನು ಕೂಡ ಬರವಣಿಗೆಯನ್ನ ಆರಂಭಿಸಿದಾಗ ನನ್ನ ಕಣ್ಣ ಮುಂದಿದ್ದುದು ಪರಿಸರ ಮತ್ತು ಮನುಷ್ಯ. ನಾನು ಮೇಲೆ ಉಲ್ಲೇಖಿಸಿರುವ ಘಟನೆಗಳು ಏನಿವೆ ಅವು ನನಗೆ ಕಲಿಸಿದ ಪಾಠ ಎಂದರೆ ಪರಿಸರದ ಮುಂದೆ ಮನುಷ್ಯ ವಿಧೇಯನಾಗಿರಬೇಕು ಅನ್ನುವುದನ್ನು. ಪರಿಸರದಿಂದ ಪಡೆಯಬಹುದಾದುದನ್ನ ಪಡೆಯಬೇಕು, ಪರಿಸರಕ್ಕೆ ನೀಡಬೇಕಾದ ಗೌರವವನ್ನ ನೀಡಬೇಕು, ಅದಕ್ಕೆ ಸಲ್ಲಿಸಬೇಕಾದ ಕೃತಜ್ಞತೆಯನ್ನ ಸಲ್ಲಿಸಬೇಕು, ಆ ಮೂಲಕ ಮನುಷ್ಯ ತನ್ನ ಬದುಕನ್ನ ನಡೆಸಬೇಕು ಅನ್ನುವುದು ನನ್ನ ಅಂಬೋಣ ಕೂಡ.
ಕಡಲಿನತ್ತ ತಿರುಗಿ ನಿಂತು ಕೈ ಮುಗಿಯುವ ಆ ಮೀನುಗಾರ ಸದಾ ನನಗೆ ಆದರ್ಶ. ಅಂತೆಯೇ ಉಳಿದ ಎರಡು ಘಟನೆಗಳು ಕೂಡ.

ಆದರೆ ಹೊರ ಜಗತ್ತಿನಲ್ಲಿ ನಾನು ನೋಡಿದ್ದು ಇದಕ್ಕೆ ತದ್ವಿರುದ್ಧವಾದುದನ್ನ. ನಾನು ಸರ್ಕಾರಿ ಕೆಲಸಕ್ಕೆ ಸೇರಿದ ಆರಂಭದ ದಿನಗಳಲ್ಲಿ ಒಂದು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಆ ಕೆಲಸವೆಂದರೆ ಶರಾವತಿ ಯೋಜನೆ ಪ್ರದೇಶದಲ್ಲಿ ಕಳೆದ 50 ವರ್ಷಗಳಿಂದ ಆದ ಮಳೆಯ ಅಂಕಿ-ಅಂಶಗಳನ್ನ ಸಂಗ್ರಹಿಸಿ ಮೇಲಿನ ಅಧಿಕಾರಿಗಳಿಗೆ ಕಳುಹಿಸುವುದು. ಪ್ರತಿ ಊರಿನ ಪ್ರವಾಸಿ ಮಂದಿರ, ಆಸ್ಪತ್ರೆ, ಊರಿನ ಪೊಲೀಸ್ ಸ್ಟೇಷನ್ನಿನ ಮುಂಭಾಗದಲ್ಲಿ ಮಳೆ ಅಳತೆ ಮಾಡುವ ಯಂತ್ರಗಳನ್ನ ಇರಿಸುತ್ತಿದ್ದರು. ಅಲ್ಲದೆ ಬಿದ್ದ ಮಳೆಯನ್ನ ಪ್ರತಿ ದಿನ ಅಳತೆ ಮಾಡಿ ಓರ್ವ ನೌಕರ ಒಂದೆಡೆ ಬರೆದು ಇರಿಸಿಕೊಳ್ಳುತ್ತಿದ್ದ.

ಇಂತಹಾ ಅಳತೆ ಕಟ್ಟೆಗಳಿಂದ ಅಂಕಿಅಂಶವನ್ನ ಕಲೆಹಾಕಿ ಅದನ್ನ ಟೈಪ್ ಮಾಡುವ ಕೆಲಸವನ್ನ ನಾನು ಕೆಲ ವರುಷ ಮಾಡಿದೆ. ಆಗ ಮಲೆನಾಡಿನ ಮಳೆಯ ಅಂಕಿ-ಅಂಶ ಸರಾಸರಿ ವರ್ಷಕ್ಕೆ 320 ಇಂಚು. ಈ ಮಳೆಯ ಆಧಾರದ ಮೇಲೆಯೇ ಲಿಂಗನಮಕ್ಕಿ ಅಣೆಕಟ್ಟನ್ನ ನಿರ್ಮಿಸಲಾಯಿತು. ಅತ್ತ ಅಣೆಕಟ್ಟು ಏಳುತ್ತಿರಲು ಇತ್ತ ಶರಾವತಿಯ ಮುಳುಗಡೆ ಪ್ರದೇಶದಲ್ಲಿಯ ಕಾಡನ್ನ ಕಡಿದು ಸಾಗಿಸುವ ಕೆಲಸ ನನ್ನ ಕಣ್ಣೆದುರಿನಲ್ಲಿಯೇ ನಡೆಯಿತು. ಭಾರೀ ಮರಗಳು ಉರುಳಿ ಬಿದ್ದವು. ಕೆಲವನ್ನ ಅಲ್ಲಿಯೇ ಇದ್ದಲನ್ನಾಗಿ ಮಾಡಿ ಲಾರಿಗಳಲ್ಲಿ ಸಾಗಿಸಲಾಯಿತು. ಹಸಿರು ಹಸಿರಾಗಿದ್ದ ಪ್ರದೇಶ ಬೆಂಗಾಡಾಯಿತು. ಶರಾವತಿ ಯೋಜನೆ ಕೆಲಸ ಮುಗಿದು ಇಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗುತ್ತಿದೆ ಅನ್ನುವಾಗ ಈ ಪ್ರದೇಶದ ಮಳೆ 70- 90 ಇಂಚಿಗೆ ಇಳಿಯಿತು. ಮೊದಲ ಬಾರಿಗೆ ಕಾರ್ಗಲ್ಲಿನಲ್ಲಿ ನಾವು ಭೂಕಂಪನದ ಅನುಭವಕ್ಕೆ ಒಳಗಾದೆವು. ಬೇರೆ ಹಲವಾರು ಸಮಸ್ಯೆಗಳನ್ನ ಎದುರಿಸಬೇಕಾಯಿತು. ಕಾರ್ಗಲ್ ಲಿಂಗನಮಕ್ಕಿ ನಡುವಣ ಟಾರುರಸ್ತೆ ಒಂದು ಕಡೆ ಅಡ್ಡಡ್ಡಲಾಗಿ ಒಂದು ಒಂದೂವರೆ ಅಡಿ ಕೆಳಗೆ ಕುಸಿಯಿತು. `ಶರಾವತಿ ಕರ್ನಾಟಕದ ಬೆಳಕು ಭಾರತದ ಹೆಮ್ಮೆ' ಅನ್ನುವ ಸರ್ಕಾರದ ಘೋಷಣೆ ಏನಿತ್ತು ಅದರಲ್ಲಿ ಏನೋ ಪೊಳ್ಳುತನವಿದೆ ಎಂದು ನನಗೆ ಅನಿಸಿತು. ಪಂಡಿತ ಜವಾಹರಲಾಲ್ ಅವರು ಏನು  `ಅಣೆಕಟ್ಟುಗಳನ್ನ ಆಧುನಿಕ ಭಾರತದ ದೇವಾಲಯಗಳು' ಎಂದು ಕರೆದಿದ್ದರು ಇದು ಸುಳ್ಳು ಎಂದೆನಿಸತೊಡಗಿತು.
ಅಭಿವೃದ್ಧಿಯ ಹೆಸರಿನಲ್ಲಿ ಆಗುತ್ತಿರುವುದೆಲ್ಲ ಮೋಸ ವಂಚನೆ ಅನಿಸಿ ನಾನು ಮುಳುಗಡೆಯ ಕುರಿತು ವಿರೋಧವಾಗಿ ಬರೆಯತೊಡಗಿದೆ. ಈ ಮುಳುಗಡೆ ಅನಿಸುವುದು ಕೇವಲ ಪರಿಸರದ ನಾಶ ಮಾತ್ರ ಆಗಿ ನನಗೆ ತೋರಲಿಲ್ಲ. ಇಲ್ಲಿ ತೊಂದರೆಗೆ ಒಳಗಾದ ಸುಮಾರು 30,000ಕ್ಕೂ ಮಿಕ್ಕ ಜನ ಅನುಭವಿಸಿದ ಬವಣೆ ಮನುಷ್ಯನ ಮೇಲೆ  ಮಾಡಿದ ಅತ್ಯಾಚಾರ ಎಂದು ನನಗೆ ಅನಿಸಿತು. ಈ ದೇಶದ ವಿಭಜನೆಯಾದಾಗ ಎಷ್ಟು ಜನ ತೊಂದರೆಗೆ ಒಳಗಾಗಿದ್ದರೋ ಅದಕ್ಕೆ ಮೂರು ಪಟ್ಟು ಜನ ಇಡೀ ದೇಶದಲ್ಲಿ ಈ ಅಣೆಕಟ್ಟುಗಳ ನಿರ್ಮಾಣದಿಂದಾಗಿ ತೊಂದರೆಗೆ ಒಳಗಾಗಿದ್ದಾರೆ ಎಂಬುದನ್ನ ಕೇಳಿದಾಗ ನನಗೆ ಆದ ಆಘಾತ ದೊಡ್ಡದು. ಈ ಜನರ ಬದುಕನ್ನ ಪರಿಸರದಿಂದ ಬೇರ್ಪಡಿಸಿ ನೋಡಲು ನಾನು ಇಂದಿಗೂ ಸಿದ್ಧನಿಲ್ಲ. ಇವರೆಲ್ಲ ಈ ಪರಿಸರದ ಕೂಸುಗಳು. ಇವರನ್ನ ಇಲ್ಲಿಂದ ಹೊರಗೆ ಕಳುಹಿಸಿದ್ದು ಒಂದು ಅಪರಾಧ. ಇವತ್ತು ಸರ್ಕಾರ ಎಲ್ಲೇ ಅಣೆಕಟ್ಟನ್ನ, ವಿಮಾನ ನಿಲ್ದಾಣವನ್ನ, ಕಾರ್ಖಾನೆಯನ್ನ, ಹೆದ್ದಾರಿಯನ್ನ, ಹೊಸ ಬಡಾವಣೆಗಳನ್ನ ಮಾಡುತ್ತೇನೆ ಎಂದು ಹೊರಟಾಗ ಅಲ್ಲಿ ವಿರೋಧ ವ್ಯಕ್ತವಾಗುತ್ತದೆ. ಅದಕ್ಕೆ ಕಾರಣ ತಮಗೆ ತೊಂದರೆಯಾಗುತ್ತದೆಂದು ಜನ ಕೂಗುವುದು. ಈ ಕೂಗಿನ ಹಿಂದಿರುವುದು ಪರಿಸರದ ಪ್ರಶ್ನೆ. ಈ ಪ್ರಶ್ನೆಯನ್ನೇ ನಾನು ದೊಡ್ಡದಾಗಿ ಬಿಂಬಿಸುತ್ತ ಬಂದಿದ್ದೇನೆ. ನಾನು ಮುಳುಗಡೆಯ ಕುರಿತು  ಬರೆದಿರುವ ಕಾದಂಬರಿಗಳು (ದ್ವೀಪ, ಮುಳುಗಡೆ, ಒಡ್ಡು, ಗುಣವಂತೆ), ಹಲವಾರು ಕತೆಗಳು ಇದೇ ವಿಷಯವನ್ನ ಕುರಿತು ಆಗಿದ್ದು ನನಗೆ `ಮುಳುಗಡೆ ಡಿಸೋಜ' ಅನ್ನುವ ಹೆಸರನ್ನೂ ತಂದು ಕೊಟ್ಟಿವೆ.

ಬರೆದದ್ದನ್ನೇ ಬರೆಯುತ್ತಾನೆ ಅನ್ನುವ ಆಪಾದನೆಯೂ ನನ್ನ ಮೇಲಿದೆ. ಈಗಲೂ ಸರ್ಕಾರ ಅಣೆಕಟ್ಟುಗಳನ್ನ ನಿರ್ಮಿಸುವ ಮಾತುಗಳನ್ನ ಆಡುತ್ತಲೇ ಇದೆ. ಪಶ್ಚಿಮ ಘಟ್ಟದ ಉದ್ದಕ್ಕೂ ಸುಮಾರು 29 ಅಣೆಕಟ್ಟುಗಳನ್ನ ನಿರ್ಮಿಸಬೇಕು ಅನ್ನುವ ಹುನ್ನಾರ ಸರ್ಕಾರದ ಮುಂದಿದೆ. ಅಣೆಕಟ್ಟನ್ನು ನಿರ್ಮಿಸುವ ಕೆಲಸವನ್ನ ಸರ್ಕಾರ ನಿಲ್ಲಿಸಿಲ್ಲ, ಇನ್ನು ಇದರ ಬಗ್ಗೆ ಬರೆಯುವುದನ್ನ ನಾನು ಏಕೆ ನಿಲ್ಲಿಸಬೇಕು ಎಂದು ನಾನು ನನ್ನ ವಿಮರ್ಶಕರಿಗೆ ಕೇಳ ಬಯಸುತ್ತೇನೆ. ನಾನು ಕಾದಂಬರಿಯ ಮೂಲಕ ಎತ್ತಿದ ಸಮಸ್ಯೆ ಸೆಲ್ಯೂಲಾಯ್ಡ ಮೂಲಕ ಎಲ್ಲರ ಗಮನ ಸೆಳೆದಿದೆ. ನನ್ನ ಕಾದಂಬರಿ `ದ್ವೀಪ' ಚಲನಚಿತ್ರವಾಗಿ ನನ್ನ ನಾಗಿ, ದುರ್ಗಜ್ಜರ ಸಮಸ್ಯೆ ಹಲವರನ್ನ ಕಾಡಿದೆ. ಇದೇ ಕಾದಂಬರಿ `ಆಕ್ಸ್‌ಫರ್ಡ್' ಪ್ರಕಾಶನದ ಮೂಲಕ  ಆಂಗ್ಲ ಭಾಷೆಗೆ ಅನುವಾದವಾಗಿ ಈ ಸಮಸ್ಯೆ ಮತ್ತೂ ಹೊಸ ಆಯಾಮಗಳಲ್ಲಿ ಚರ್ಚೆಗೆ ಒಳಗಾಗಲಿದೆ.

ನಾಲಿಗೆ ನೋಯುವ ಹಲ್ಲನ್ನ ಮತ್ತೆ ಮತ್ತೆ ಸವರುತ್ತದೆ. ಅದು ಸಹಜ. ವಿವಿಧ ರೀತಿಯಲ್ಲಿ ವಿವಿಧ ಬಗೆಯಲ್ಲಿ ನಾವು ಪರಿಸರವನ್ನ ಕಳೆದುಕೊಳ್ಳುತ್ತಿದ್ದೇವೆ. ಶರಾವತಿ ನದಿ ತನ್ನ ನದಿಯ ಸ್ವಭಾವವನ್ನ ಕಳೆದುಕೊಂಡ ಮೇಲೆ ಜೋಗದ ಜಲಪಾತ ಸತ್ತು ಹೋಯಿತು. 1905ರಲ್ಲಿ ಲಾರ್ಡ ಕರ್ಜನ್‌ಗೆ ಬ್ರಿಟಿಷ್ ಸರ್ಕಾರ ಒಂದು ಕಾರ್ಯವನ್ನ ವಿಧಿಸುತ್ತದೆ. ಕೆಲ ಬ್ರಿಟಿಷ್ ಕಂಪನಿಗಳು ಇಲ್ಲಿ ವಿದ್ಯುತ್ತನ್ನ ಉತ್ಪಾದಿಸಲು ಅನುಮತಿ ಕೇಳಿರುತ್ತವೆ. ಈ ವಿಷಯವನ್ನ ಪರಿಶೀಲಿಸಲು ಸರ್ಕಾರ ಕೇಳಿಕೊಂಡಾಗ ಕರ್ಜನ್ `ಇದಕ್ಕೆ ಅನುಮತಿ ಕೊಡಬೇಡಿ, ಕೊಟ್ಟರೆ ಒಂದು ಸುಂದರ ಜಲಪಾತ ಕಾಣೆಯಾಗುತ್ತದೆ' ಎಂದು ಉತ್ತರ ಕೊಡುತ್ತಾನೆ. ನಂತರದ ವಿಷಯ ನಮಗೆ ಗೊತ್ತಿದೆ. ಇವತ್ತು ಜಲಪಾತವಿಲ್ಲ. ಈ ಬಗ್ಗೆಯೇ ನಾನು ಬರೆದೊಂದು ಕಾದಂಬರಿ `ಒಂದು ಜಲಪಾತದ ಸುತ್ತ'. ಅಂತೆಯೇ ಶರಾವತಿ ಗೇರಸೊಪ್ಪೆಯಿಂದ ಹೊನ್ನಾವರದವರೆಗೆ ದೋಣಿಗಳ ಓಡಾಟಕ್ಕೆ ಹೇಳಿ ಮಾಡಿಸಿದಂತಹಾ ಒಂದು ನದಿ. ಒಂದು ಕಾಲದ ಗೇರಸೊಪ್ಪೆ ರಾಜಧಾನಿ ಇದ್ದುದು ಈ ನದಿಯ ದಡದ ಮೇಲೆ. ಪೋರ್ಚುಗೀಸರು ಗೇರಸೊಪ್ಪೆಯ ರಾಣಿಯ ಜೊತೆ ಸಂಪರ್ಕ ಇರಿಸಿಕೊಂಡದ್ದು ಈ ನದಿಯ ಮೂಲಕ. ನೂರಾರು ಮೀನ ದೋಣಿಗಳು, ಪ್ರಯಾಣಿಕರ ದೋಣಿಗಳು ತಿರುಗಾಡುತ್ತಿದ್ದದು ಇಲ್ಲಿ. ಇಡೀ ಒಂದು ಬದುಕು ಈ ನದಿಯ ಮೇಲೆ ಅವಲಂಬಿಸಿಕೊಂಡಿತ್ತು. ಈಗ ನದಿ ಸೊರಗಿದೆ. ನದಿ ಪಕ್ಕದಲ್ಲಿ ಒಂದು ಹೆದ್ದಾರಿಯಾಗಿದೆ. ಆಧುನಿಕತೆ ಅನ್ನುವುದು ಇಲ್ಲಿ ವಿಜೃಂಭಿಸುತ್ತಿದೆ. ಈ ಎಲ್ಲ ಚಿತ್ರಣವನ್ನ ನಾನು `ಹರಿವ ನದಿ' ಎಂಬ ಕಾದಂಬರಿಯ ಮೂಲಕ ನೀಡಿದ್ದೇನೆ. ಇದು ಮತ್ತೆ ಪರಿಸರದ ಬಗೆಗಿನ ನನ್ನ ಆಸಕ್ತಿ ಅಭಿಮಾನ.
ನನ್ನ ಈ ಪರಿಸರಾಸಕ್ತಿಯನ್ನ ಗಮನಿಸಿದ ಓರ್ವ ವಿಮರ್ಶಕರು ನನ್ನನ್ನ `ನದಿಯೊಂದರ ಕತೆಗಾರ' ಎಂದು ಕರೆದಿದ್ದಾರೆ. ಇದು ಕೂಡ ನನಗೆ ಹೆಮ್ಮೆ ತರುವ ವಿಷಯವೇ. ನದಿ ಕೂಡ ಪರಿಸರದ ಒಂದು ಅಂಗವೇ ಅಲ್ಲವೆ? ಕೊಡೈಕೆನಾಲಿನಲ್ಲಿ 12 ವರ್ಷಗಳಿಗೆ ಒಂದು ಹೂವು ಅರಳುತ್ತದೆ. ಅದರ ಹೆಸರು ಕೆಂಜಿರ ಪುಷ್ಪಂ.  ಆಗ ಕೆಲ ದಿನ ಇಡೀ ಕಣಿವೆ ನೀಲಿ ಬಣ್ಣದಲ್ಲಿ ಕಂಗೊಳಿಸುತ್ತದೆ. ಕೆಲವೇ ದಿನ ಇದ್ದು ಈ ಹೂವು ಬಾಡಿಹೋಗುತ್ತದೆ, ಮತ್ತೆ 12 ವರ್ಷಗಳ ನಂತರ ಇದು ಅರಳುತ್ತದೆ. ಈ ವಿಷಯವನ್ನೇ ಆಧಾರವಾಗಿ ಇರಿಸಿ ಕೊಂಡು ನಾನು ಬರೆದ ಕಾದಂಬರಿ `ಕುಂಜಾಲು ಕಣಿವೆಯ ಕೆಂಪು ಹೂವು'. ಮತ್ತೆ ಆಧುನಿಕತೆಯ ಹೆಸರಿನಲ್ಲಿ ನಾವು ಏನನ್ನ ಕಳೆದುಕೊಂಡಿದ್ದೇವೆ, ನಮ್ಮ ಹಿರಿಯರು ಇಲ್ಲಿ ಅದು ಹೇಗೆ ಬದುಕಿದ್ದರು, ನಮ್ಮ ಬದುಕಿನ ಕೊರತೆಗಳೇನು ಅನ್ನುವುದನ್ನ ಓದುಗರ ಗಮನಕ್ಕೆ ತರುವ ಒಂದು ಯತ್ನ ಇದು. ಈ ಕಾದಂಬರಿ ತೆಲುಗು ಮತ್ತು ಮಲಯಾಳಂ ಭಾಷೆಗೆ ಅನುವಾದಗೊಂಡಿದೆ. ನಮ್ಮ ಕಾಡಿನಲ್ಲಿ ಇರುವ ಹಲವಾರು ಗಿಡ ಮರಗಳು ಪ್ರಾಣಿಗಳು ಪಕ್ಷಿಗಳು ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಈ ಕಾದಂಬರಿ ಅಂತಹಾ ಒಂದು ವಿಷಯವನ್ನ ಡೀಲ್ ಮಾಡುತ್ತದೆ.

ಕರಗುತ್ತಿರುವ ಬೆಟ್ಟಗಳು, ಪಕ್ಷಿ  ಪ್ರಾಣಿ, ಬದಲಾದ ಜನ ಜೀವನ ಈ ಕಾದಂಬರಿಯ ವಸ್ತು. ತಂದೆಯಾದವನು ಪರಿಸರದಲ್ಲಿ ಏನನ್ನ ಕಂಡು ಸಂತಸ ಪಟ್ಟನೋ ಅದನ್ನ ಮಗ ನೋಡಲಾಗದೆ ಪರಿತಪಿಸುತ್ತಾನೆ. ನಾವು ಕಳೆದುಕೊಂಡ ಪರಿಸರದ ಒಂದು ಪರಿಚಯವನ್ನ ಈ ಕಾದಂಬರಿ ಮಾಡಿ ಕೊಡುತ್ತದೆ.

ಅಂತೆಯೇ ಮಕ್ಕಳಿಗಾಗಿ ನಾನು ಬರೆದ ಕೆಲ ಮಿನಿ ಕಾದಂಬರಿಗಳು ನನಗೆ ಪ್ರಿಯವಾದ ಈ ವಿಷಯವನ್ನ ಕುರಿತು ಮಾತನಾಡುತ್ತವೆ. `ಹಕ್ಕಿಗೊಂದು ಗೂಡು ಕೊಡಿ' ಪರಿಸರದಲ್ಲಿ ಗೂಡುಗಳನ್ನ ಕಟ್ಟಿ ಕೊಳ್ಳಲು ಅವಕಾಶ ಇಲ್ಲದಂತಹಾ ಪರಿಸ್ಥಿತಿಯಲ್ಲಿ ಬವಣೆ ಪಡುವ ಒಂದು ಹಕ್ಕಿಯ ಕತೆ ಇದು. ಈ ಕಾದಂಬರಿ ನಾಟಕವಾಗಿ ಹಲವೆಡೆಗಳಲ್ಲಿ ಪ್ರದರ್ಶನಗೊಂಡಿದೆ. ಹಾಗೆಯೇ ಎನ್. ಬಿ. ಟಿ. ಯವರು ಪ್ರಕಟಿಸಿದ `ಮಕ್ಕಳು ಕಲಿಸಿದ ಪಾಠ' ಎಂಬ ನಾಟಕ ಕೂಡ  ಪರಿಸರದ ಬಗ್ಗೆ ಮಕ್ಕಳು ವ್ಯಕ್ತಪಡಿಸುವ ಪ್ರೀತಿಯನ್ನ ತೋರ್ಪಡಿಸುವಂತಹದು. ಶಾಲೆಯ ಮುಂದೆ  ಇದ್ದ ಮರವೊಂದರ ಜೊತೆಯಲ್ಲಿ ಮಕ್ಕಳು ಒಂದು ಅವಿನಾಭಾವ ಸಂಬಂಧವನ್ನ ಇರಿಸಿಕೊಂಡಿರುತ್ತಾರೆ. ಆದರೆ ಕೆಲ ಮರಗಳ್ಳರು ಈ ಮರ ಕಡಿದು ಮಾರಿ ಅಲ್ಲೊಂದು ಮರದ ಪ್ರತಿಕೃತಿಯನ್ನ ನಿಲ್ಲಿಸಿದಾಗ ಮಕ್ಕಳು ಆ ಮರಗಳ್ಳರಿಗೆ ಮತ್ತೆ ಮರ ನೆಟ್ಟು ಬೆಳೆಸುವ ಶಿಕ್ಷೆ ವಿಧಿಸುತ್ತಾರೆ.

ಹೀಗೆ ನನ್ನ ಕತೆ ಕಾದಂಬರಿಗಳಲ್ಲಿ ಪರಿಸರ ಕುರಿತ ಹಲವು ಸಮಸ್ಯೆಗಳನ್ನ ನಾನು ಚಿತ್ರಿಸುತ್ತ ಬಂದಿದ್ದೇನೆ. ಹಾಗೆಂದು ಈ ವಿಷಯವನ್ನ ಒತ್ತಾಯ ಪೂರ್ವಕವಾಗಿ ಎಳೆದು ತಂದು ಕಾದಂಬರಿಯಲ್ಲಿ ಸೇರಿಸಬೇಕಾಗಿಲ್ಲ. ನೀರು, ಗಾಳಿ, ಬೆಳಕು, ಮಣ್ಣು, ಹೀಗೆ ಪರಿಸರ ನೀಡಿದ ಎಲ್ಲವೂ ನಮ್ಮ ಬದುಕಿಗೆ ಅತ್ಯಾವಶ್ಯಕವಾಗಿ ಇರುವುದರಿಂದ ಇವಿಲ್ಲದೆ ನಾವು ಬದುಕಲಾರೆವು ಅನ್ನುವುದೂ ನಿಜವೇ. ಆದರೆ ಈ ಅರಿವು ನಮ್ಮ ಹಿರಿಯರಿಗಿತ್ತು, ಅದು ನಮಗೆ ಇಲ್ಲ ಅನ್ನುವುದು ಒಂದು ದುರಂತ. ಈ ದುರಂತಕ್ಕೆ  ಸಾಹಿತ್ಯದ ರೂಪ ಕೊಡುವ ಕೆಲಸವನ್ನ ನಾನು ಮಾಡಿ ಕೊಂಡು ಬಂದಿದ್ದೇನೆ. ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕ ಈ ವಿಷಯ ಓದುಗರ ಗಮನಕ್ಕೆ ಬಂದೀತು ಅನ್ನುವ ಭರವಸೆ ಕೂಡ ನನಗಿದೆ.
ಓರ್ವ ಆಂಗ್ಲ ಲೇಖಕ ಒಂದು ಮಾತನ್ನ ಹೇಳಿದ್ದಾನೆ `ಮರಕಟುಕನೆ ದೂರ ಸರಿ, ಈ ಮರ ಬಾಲ್ಯದಿಂದ ನನಗೆ ನೆರಳನ್ನ ತಂಪನ್ನ ನೀಡಿ ಕಾಪಾಡಿದೆ, ಈಗ ನಾನು ಅದನ್ನ ರಕ್ಷಿಸ ಬೇಕು... ದೂರ ಸರಿ'.
ಇದೇ ಮಾತನ್ನ ಹೇಳುವುದು ನನ್ನ ಕರ್ತವ್ಯ ಅಂದುಕೊಂಡಿದ್ದೇನೆ ನಾನು. ನಮ್ಮ ಕವಿಗಳು, ಕುವೆಂಪು, ಕಾರಂತ, ತೇಜಸ್ವಿ ಮತ್ತಿತರರ ದನಿಗೆ ನನ್ನ ದನಿ ಸೇರಿಸಿದ್ದೇನೆ.

Sunday 8 October 2017

ಒಂದಿಷ್ಟು ಕನ್ನಡ ಜ್ಞಾನ

_*💐ಸಾಮಾನ್ಯ ಕನ್ನಡ💐*_

ಕನ್ನಡದ / ಕರ್ನಾಟಕದ ಮೊದಲಿಗರು

ದೊರೆ - ಮಯೂರವರ್ಮ

ಗಣಿತ ಶಾಸ್ತ್ರಜ್ಞ - ಮಹಾವೀರಾಚಾರ್ಯ

ವಚನಗಾರ - ದೇವರದಾಸಿಮಯ್ಯ

ಕನ್ನಡ ಅಕ್ಷರ ಅಚ್ಚಿನಮೊಳೆ ವಿನ್ಯಾಸ - ಅತ್ತಾವರ ಅನಂತಾಚಾರಿ

ಕನ್ನಡ ಬೆರಳಚ್ಚು ಯಂತ್ರ / ಕೀಲಿಮಣೆ -  ಅನಂತ ಸುಬ್ಬರಾವ್

ಕನ್ನಡ ಲಿಪಿಯನ್ನ ಕಂಪ್ಯೂಟರ್ ಗಳವಡಿಸಿ ಸರಳ FONT ರಚನೆ - ಕೆ.ಪಿ.ರಾವ್

ಕನ್ನಡ ಶೀಘ್ರಲಿಪಿ - ರೆವರೆಂಡ್ ಬಿ.ಲೂಥಿ

ಪ್ರಾಧ್ಯಾಪಕ - ಟಿ.ಎಸ್.ವೆಂಕಣ್ಣಯ್ಯ

ರಾಜಕೀಯ / ಅತ್ಯುನ್ನತ ಹುದ್ದೆ

ಸೇನಾ ದಂಡನಾಯಕ - ಕೆ.ಎಂ.ಕಾರ್ಯಪ್ಪ

ಪ್ರಧಾನಮಂತ್ರಿ - ಹೆಚ್.ಡಿ.ದೇವೇಗೌಡ

ರಾಜ್ಯಪಾಲ - ಜಯಚಾಮರಾಜೇಂದ್
ರ ಒಡೆಯರ್

ಮುಖ್ಯಮಂತ್ರಿ - ಕೆ.ಸಿ.ರೆಡ್ಡಿ

ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್.ನಿಜಲಿಂಗಪ್ಪ

💐ಪ್ರಶಸ್ತಿ ವಿಜೇತರು💐

ಭಾರತರತ್ನ ಪ್ರಶಸ್ತಿ ವಿಜೇತರು - ಸರ್ ಎಂ.ವಿಶ್ವೇಶ್ವರಯ್ಯ

ಮ್ಯಾಗ್ಸೆಸೇ ಪ್ರಶಸ್ತಿ ವಿಜೇತರು - ಕೆ.ವಿ.ಸುಬ್ಬಣ್ಣ

ಜ್ಞಾನಪೀಠ ಪ್ರಶಸ್ತಿ ವಿಜೇತರು - ಕುವೆಂಪು

ಪಂಪ ಪ್ರಶಸ್ತಿ ವಿಜೇತರು - ಕುವೆಂಪು

ರಾಷ್ಟ್ರಕವಿ - ಗೋವಿಂದ ಪೈ

ಕಾಳಿದಾಸ್ ಸಮ್ಮಾನ್ ವಿಜೇತರು - ಮಲ್ಲಿಕಾರ್ಜುನ ಮನ್ಸೂರ್

ಕಬೀರ್ ಸಮ್ಮಾನ್ ವಿಜೇತರು - ಗೋಪಾಲಕೃಷ್ಣ ಅಡಿಗ

ಜಮನ್ ಲಾಲ್ ಪ್ರಶಸ್ತಿ ವಿಜೇತರು - ತಗಡೂರು ರಾಮಚಂದ್ರರಾವ್

ಗೋಯೆಂಕಾ ಪ್ರಶಸ್ತಿ ವಿಜೇತರು - ಪಾ.ವೆಂ.ಆಚಾರ್ಯ

ರಾಷ್ಟ್ರ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ - ಹಾರಾಡಿ ರಾಮಗಾಣಿಗ

ಕನ್ನಡ ಕೆಲಸಕ್ಕೆ ಡಾಕ್ಟರೇಟ್ - ಫರ್ಡಿನೆಂಡ್ ಕಿಟ್ಟೆಲ್

ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ - ಶಿವಮೊಗ್ಗ ಸುಬ್ಬಣ್ಣ

ಪುಸ್ತಕ ಪ್ರಕಾಶನಕ್ಕೆ ಪದ್ಮಶ್ರೀ - ಜಿ.ಬಿ.ಜೋಷಿ

ಸೋವಿಯತ್ ಲ್ಯಾಂಡ್ ಪ್ರಶಸ್ತಿ - ಬಸವರಾಜ್ ಕಟ್ಟಿಮನಿ

💐ಮೊದಲಿಗ ಮಹಿಳೆಯರು💐

ವಚನಗಾರ್ತಿ - ಅಕ್ಕಮಹಾದೇವಿ

ಪತ್ರಕರ್ತೆ / ಪ್ರಕಾಶಕಿ - ನಂಜನಗೂಡು ತಿರುಮಲಾಂಬಾ

ನಾಟಕ ರಂಗದ ಮೇಲೆ ಮೊದಲ ಸ್ತ್ರೀ - ಗಂಗೂಬಾಯಿ ಗುಳೇದಗುಡ್ಡ

ಮಹಿಳಾ ಮಂತ್ರಿ - ಗ್ರೇಸ್ ಠಕ್ಕರ್

ಸಾಹಿತ್ಯ ಸಮ್ಮೇಳನದ ಮಹಿಳಾ ಅಧ್ಯಕ್ಷರು - ಜಯದೇವಿ ತಾಯಿ ಲಿಗಾಡೆ

ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಕನ್ನಡಿತಿ - ಅನುಪಮಾ ನಿರಂಜನ

ನವೋದಯ ಕವಯಿತ್ರಿ - ಬೆಳಗೆರೆ ಜಾನಕಮ್ಮ

💐ಪತ್ರಿಕಾ ಲೋಕ💐

ಪತ್ರಿಕೆ - ಮಂಗಳೂರು ಸಮಾಚಾರ (೧೮೪೮)

ದಿನಪತ್ರಿಕೆ - ಸೂರ್ಯೋದಯ ಪ್ರಕಾಶಿಕ (೧೮೭೦)

ಕನ್ನಡ e-ಪತ್ರಿಕೆ - ವಿಶ್ವಕನ್ನಡ

ವಾರ ಪತ್ರಿಕೆ - ಸುಬುದ್ಧಿ ಪ್ರಕಾಶ (೧೮೫೦)

ವಿಜ್ಞಾನ ಪತ್ರಿಕೆ - ವಿಜ್ಞಾನ

ವಿಡಿಯೋ ಪತ್ರಿಕೆ - ಬೆಳ್ಳಿಚುಕ್ಕಿ

ಮಕ್ಕಳ ಪತ್ರಿಕೆ - ಮಕ್ಕಳ ಪುಸ್ತಕ

ಮಹಿಳಾ ಪತ್ರಿಕೆ - ಕರ್ನಾಟಕ ನಂದಿನಿ (೧೯೧೩)

ಸಾಹಿತ್ಯಿಕ ವೈಜ್ಞಾನಿಕ ಪತ್ರಿಕೆ - ಕರ್ನಾಟಕ ಜ್ಞಾನ ಮಂಜರಿ (೧೮೭೮)

ಶಿಕ್ಷಣ ಪತ್ರಿಕೆ - ಕನ್ನಡ ಜ್ಞಾನ ಬೋಧಿನಿ (೧೮೬೨)

ಜಿಲ್ಲಾ ಪತ್ರಿಕೆ - ಜ್ಞಾನೋದಯ (ಶಿವಮೊಗ್ಗ)

ಕಾಮಶಾಸ್ತ್ರ ಪತ್ರಿಕೆ - ಪ್ರೇಮ

ಕಾನೂನು ಪತ್ರಿಕೆ - ನ್ಯಾಯ ಸಂಗ್ರಹ

ಚಲನಚಿತ್ರ ಪತ್ರಿಕೆ - ಸಿನಿಮಾ

ಹಾಸ್ಯ ಪತ್ರಿಕೆ - ವಿಕಟ ಪ್ರತಾಪ

ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಪತ್ರಿಕೆ - ಉದಯವಾಣಿ

💐ಸಾಹಿತ್ಯ ಲೋಕ 💐

ಕೃತಿ - ಕವಿರಾಜಮಾರ್ಗ

ಕಾವ್ಯ - ಆದಿಪುರಾಣ

ಗದ್ಯ - ವಡ್ಡಾರಾಧನೆ

ನಾಟಕ - ಮಿತ್ರಾವಿಂದಾ ಗೋವಿಂದಾ

ಗೀತ ನಾಟಕ - ಮುಕ್ತದ್ವಾರ

ಜ್ಯೋತಿಷ್ಯ ಗ್ರಂಥ - ಜಾತಕ ತಿಲಕ ( ಶ್ರೀಧರಾಚಾರ್ಯ )

ಸ್ವತಂತ್ರ ಪೌರಾಣಿಕ ನಾಟಕ - ಪೃಥು ವಿಜಯ

ಗಾದೆಗಳ ಸಂಕಲನ - ಕನ್ನಡ ಗಾದೆಗಳು

ಒಗಟುಗಳ ಸಂಗ್ರಹ - ಮಕ್ಕಳ ಒಡಪುಗಳು

ಪ್ರಬಂಧ ಸಂಕಲನ - ಲೋಕರಹಸ್ಯ

ಛಂದಶಾಸ್ತ್ರ ಗ್ರಂಥ - ಛಂದೋಂಬುಧಿ

ವೈದ್ಯ ಗ್ರಂಥ - ಗೋವೈದ್ಯ ( ಕೀರ್ತಿವರ್ಮ )

ವಿಷಯ ವಿಶ್ವಕೋಶ - ವಿವೇಕ ಚಿಂತಾಮಣಿ

ವಿಶ್ವಕೋಶ - ಲೋಕೋಪಕಾರ

ಮಕ್ಕಳ ವಿಶ್ವಕೋಶ - ಬಾಲ ಪ್ರಪಂಚ

ನವ್ಯತೆಯನ್ನೊಳಗೊಂಡ ಕಾದಂಬರಿ - ವಿಶ್ವಾಮಿತ್ರನ ಸೃಷ್ಟಿ (ಶ್ರೀರಂಗ)

ಮನೋವೈಜ್ಞಾನಿಕ ಕಾದಂಬರಿ - ಅಂತರಂಗ ( ದೇವುಡು )

ವ್ಯಾಕರಣ ಗ್ರಂಥ - ಶಬ್ದಮಣಿ ದರ್ಪಣ

ಲಾಕ್ಷಣಿಕ ಗ್ರಂಥ - ಕವಿರಾಜ ಮಾರ್ಗ

ಬೈಬಲ್ ಕನ್ನಡೀಕರಣ - ಜಾನ್ ಹ್ಯಾಂಡ್ಸ್

ಐತಿಹಾಸಿಕ ನಾಟಕಕಾರ - ಸಂಸ

ಪ್ರವಾಸ ಕಥನ - ದಕ್ಷಿಣ ಭಾರತ ಯಾತ್ರೆ

ಪತ್ತೇದಾರಿ ಕಾದಂಬರಿ - ಚೋರಗ್ರಹಣ ತಂತ್ರ

ಆಯುರ್ವೇದ ಗ್ರಂಥ - ಕರ್ಣಾಟಕ ಕಲ್ಯಾಣಕಾರಕ

ಸ್ವತಂತ್ರ ಸಾಮಾಜಿಕ ಕಾದಂಬರಿ - ಇಂದಿರಾಬಾಯಿ

ಐತಿಹಾಸಿಕ ಕಾದಂಬರಿ - ಮುದ್ರಾಮಂಜೂಷ

ಜೀವನಚರಿತ್ರೆ - ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ

ಅಭಿನಂದನಾ ಗ್ರಂಥ - ಸಂಭಾವನೆ ( ಬಿ.ಎಂ.ಶ್ರೀ.ಯವರಿಗೆ )

ಇಂಗ್ಲೀಷ್ - ಕನ್ನಡ ನಿಘಂಟುಕಾರ - ವಿಲಿಯಮ್ ರೀವ್ಸ್

ತಾಂತ್ರಿಕ ಪದಕೋಶ - ಔದ್ಯಮಿಕ ನಿಘಂಟು

ಕಾವ್ಯ ನಿಘಂಟು - ರನ್ನಕಂದ

ಗದ್ಯ ನಿಘಂಟು - ಕರ್ಣಾಟಕ ಶಬ್ದಸಾರ

ವೈದ್ಯಕೀಯ ನಿಘಂಟು - ವೈದ್ಯ ಪದಕೋಶ

💐ಬಣ್ಣದ ಲೋಕ💐

ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ - ಬೇಡರ ಕಣ್ಣಪ್ಪ

ಐತಿಹಾಸಿಕ ಚಿತ್ರ - ರಣಧೀರ ಕಂಠೀರವ

ಮೂಕಿ ಚಿತ್ರ - ಮೃಚ್ಛಕಟಿಕ

ವರ್ಣ ಚಲನಚಿತ್ರ - ಅಮರಶಿಲ್ಪಿ ಜಕಣಾಚಾರಿ

ಚಿತ್ರಮಂದಿರ - ಪ್ಯಾರಾಮೌಂಟ್ ( ೧೯೦೫ )

ಕಾದಂಬರಿ ಆಧಾರಿತ ಚಲನಚಿತ್ರ - ಕರುಣೆಯೇ ಕುಟುಂಬದ ಕಣ್ಣು

ರಿಯಾಯಿತಿ (ಸಬ್ಸಿಡಿ ) ಪಡೆದ ಚಿತ್ರ - ನಕ್ಕರೆ ಅದೇ ಸ್ವರ್ಗ

ಸಾಮಾಜಿಕ ಚಲನಚಿತ್ರ - ಸಂಸಾರ ನೌಕೆ (೧೯೩೬)

ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ - ಶಿವಮೊಗ್ಗ ಸುಬ್ಬಣ್ಣ

ಚಿತ್ರ ಸಂಗೀತಕ್ಕೆ ೨ ಬಾರಿ ರಾಷ್ಟ್ರ ಪ್ರಶಸ್ತಿ - ಬಿ.ವಿ.ಕಾರಂತ್

ಭಾವಗೀತೆ ಧ್ವನಿಸುರುಳಿ - ನಿತ್ಯೋತ್ಸವ

ವೃತ್ತಿನಾಟಕ ಕಂಪೆನಿ - ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ

ಬೀದಿ ನಾಟಕ ಪ್ರಯೋಗ -  ಕಟ್ಟು

ಹವ್ಯಾಸಿ ನಾಟಕ ತಂಡ - ಭಾರತ ಕಲೋತ್ತೇಜಕ ಸಂಗೀತ ಸಮಾಜ

ರೇಡಿಯೋ ನಾಟಕ - ನೀರಗಂಟಿ ಮಾರ ( ವಿ.ಕೆ.ಶ್ರೀನಿವಾಸನ್ )

ಪ್ರದರ್ಶನಗೊಂಡ ಅಸಂಗತ ನಾಟಕ - ಬೊಕ್ಕತಲೆಯ ನರ್ತಕಿ ( ಸುಮತೀಂದ್ರ ನಾಡಿಗ್ )

Friday 6 October 2017

ಒಂದು ಜಾನಪದ

🌸🌹ಕುದುರೇನ ತಂದೀವ್ನಿ🌹🌸

**********************************
-ಜಾನಪದ ಸಂಗ್ರಹ
**********************************

ಕುದುರೇನ ತಂದೀವ್ನಿ ಜೀನಾವ ಬಿಗ್ಸಿವ್ನಿ
ಬರಬೇಕು ತಂಗಿ ಮದುವೇಗೆ ll

ಅಂಗ್ಳ ಗುಡಿಸೋರಿಲ್ಲ ಗಂಗ್ಳ ತೊಳೆಯೋರಿಲ್ಲ
ಹೆಂಗೆ ಬರಲಣ್ಣ ಮದುವೇಗೆ ?
ಅಂಗ್ಳಾಕೆ ಆಳಿಡುವೆ ಗಂಗ್ಳಾಕೆ ತುತ್ತಿಡುವೆ
ಬರಬೇಕು ತಂಗಿ ಮದುವೇಗೆll ಕುll

ಮಳೆಯಾರ ಬಂದೀತು ಹೊಳೆಯಾರ ತುಂಬೀತು
ಹೆಂಗೆ ಬರಲಣ್ಣ ಮದುವೇಗೆ?
ಚಿನ್ನಾದ ಹರಿಗೋಲ್ಗೆ ರನ್ನಾದ ಹುಟ್ಟಾಕಿ
ಜೋಕೇಲಿ ನಿನ್ನ ಕರೆದೊಯ್ವೆ llಕುll

ಅಪ್ಪ ಇದ್ದರೆ ಎನ್ನ ಸುಮ್ಮಾನೆ ಕಳುವೋರೆ
ಅಮ್ಮ ಇಲ್ಲದಾ ಮನೆಯಲ್ಲಿ
ಬಂದಾರೆ ಬಂದೇನು ಅಂಗ್ಳದಾಗೆ ನಿಂದೇನು
ಕಣ್ಣಾಗೆ ಧಾರೆ ಎರೆದೇನು llಕುll

::::::::::::::::::::::::::::::::::::::::::::::::::::::::::::

Thursday 5 October 2017

ಇತಿಹಾಸದ ಪ್ರಮುಖ ಇಸವಿಗಳು.


ಕಾಲಾನುಕ್ರಮಣಿಕೆ

*ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.*
*ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.*
*ಕ್ರಿ.ಪೂ.1000 ಕಬ್ಬಿಣದ ಬಳಕೆ.*
*ಕ್ರಿ.ಪೂ.1000-500 ವೇದಗಳ ಕಾಲ*
*ಕ್ರಿ.ಪೂ.563-483 ಗೌತಮ ಬುದ್ಧನ ಕಾಲ*
*ಕ್ರಿ.ಪೂ.540-468 ಮಹಾವೀರನ ಕಾಲ*
*ಕ್ರಿ.ಪೂ.542-490 ಹರ್ಯಂಕ ಸಂತತಿ*
*ಕ್ರಿ.ಪೂ.413-362 ಶಿಶುನಾಗ ಸಂತತಿ.*
*ಕ್ರಿ.ಪೂ.362-324 ನಂದ ಸಂತತಿ.*
*ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ*
*ಕ್ರಿ.ಪೂ.324-183 ಮೌರ್ಯ ಸಂತತಿ.*
*ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ*
*ಕ್ರಿ.ಪೂ.298-273 ಬಿಂದುಸಾರನ ಕಾಲ.*
*ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.*
*ಕ್ರಿ.ಪೂ.185-147 ಶುಂಗ ಸಂತತಿ.*
*ಕ್ರಿ.ಪೂ.73-28 ಕಣ್ವರ ಆಳ್ವಿಕೆ.*
*ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.*
*ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.*
*ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)*

*ಕ್ರಿ.ಶ.78-101 ಕಾನಿಷ್ಕನ ಕಾಲ.*
*ಕ್ರಿ.ಶ.78 ಶಕ ಸಂವತ್ಸರ*
*ಕ್ರಿ.ಶ.320-540 ಗುಪ್ತ ಸಾಮ್ರಜ್ಯ.*
*ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.*
*ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.*
*ಕ್ರಿ.ಶ.535-757 ಬದಾಮಿಯ ಚಾಲುಕ್ಯರು.*
*ಕ್ರಿ.ಶ.300-888 ಕಂಚಿಯ ಪಲ್ಲವರು.*
*ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.*
*ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.*
*ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.*
*ಕ್ರಿ.ಶ.814-878 ಅಮೋಘವರ್ಷ ನೃಪತುಂಗ.* *ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.*
*ಕ್ರಿ.ಶ.760-1142 ಬಂಗಾಳದ ಪಾಲರು.*
*ಕ್ರಿ.ಶ.800-1036 ಕನೌಜಿನ ಪ್ರತಿಹಾರರು*
*ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.*
*ಕ್ರಿ.ಶ.907-1256 ಚೋಳ ಸಾಮ್ರಾಜ್ಯ.*
*ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.*
*ಕ್ರಿ.ಶ.974-1233 ಮಾಳ್ವದ ಪಾರಮಾರರು.*
*ಕ್ರಿ.ಶ. 1118-1190 ಬಂಗಾಳದ ಸೇನರು.*
*ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.*
*ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.*
*ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.*

*ಕ್ರಿ.ಶ.1290-1320  ಖಿಲ್ಜಿ ಸಂತತಿ.*
*ಕ್ರಿ.ಶ.1320-1414 ತುಘಲಕ್ ಸಂತತಿ.*
*ಕ್ರಿ.ಶ.1414-1451 ಸೈಯದ್ ಸಂತತಿ.*
*ಕ್ರಿ.ಶ. 1451-1525 ಲೂಧಿ ಸಂತತಿ.*
*ಕ್ರಿ.ಶ.1336-1649 ವಿಜಯನಗರದ ಆಳ್ವಕೆ.*
*ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.*
*ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ*. *ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.*
*ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.*
*ಕ್ರಿ.ಶ.1627-1680 ಶಿವಾಜಿಯ ಕಾಲ.*
*ಕ್ರಿ.ಶ.1757 ಪ್ಲಾಸಿ ಕದನ.*
*ಕ್ರಿ.ಶ.1764 ಬಕ್ಸಾರ ಕದನ.*
*ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.*
*ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.*
*ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.*
*ಕ್ರಿ.ಶ.1824-ಕಿತ್ತೂರು ದಂಗೆ.*
*ಕ್ರಿ.ಶ.1857 ಸಿಪಾಯಿ ದಂಗೆ.*
*ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.*
*ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.*
*1905- ಬಂಗಾಳ ವಿಭಜನೆ.*

*🔶1906-ಮುಸ್ಲಿಂ ಲೀಗ್ ಸ್ಥಾಪನೆ.*
*🔶1907- ಸೂರತ್ ಅಧಿವೇಶನ/ಸೂರತ್ ಒಡಕು*
*🔶1909- ಮಿಂಟೋ ಮಾಲ್ರೇ ಸುಧಾರಣೆ.*
*🔶1911- ಕಲ್ಕತ್ತಾ ಅಧಿವೇಶನ.*
*🔶1913 -ಗದ್ದಾರ್ ಪಕ್ಷ ಸ್ಥಾಪನೆ.*
*🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.*
*🔶1916 -ಲಕ್ನೋ ಅಧಿವೇಶನ.*
*🔶1917 -ಚಂಪಾರಣ್ಯ ಸತ್ಯಾಗ್ರಹ*
*🔶1918 -ಹತ್ತಿ ಗಿರಣಿ ಸತ್ಯಾಗ್ರಹ'*
*🔶1919 -ರೌಲತ್ ಕಾಯಿದೆ.*
*🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.*
*🔶1920 -ಖಿಲಾಪತ್ ಚಳುವಳಿ.*
*🔶1922 -ಚೌರಾಚೌರಿ ಘಟನೆ.*
*🔶1923 -ಸ್ವರಾಜ್ ಪಕ್ಷ ಸ್ಥಾಪನೆ.*
*🔶1927-ಸೈಮನ್ ಆಯೋಗ.*
*🔶1928- ನೆಹರು ವರದಿ.*
*🔶1929- ಬಾ‌ಡ್ರೋಲೀ ಸತ್ಯಾಗ್ರಹ.*
*🔶1930 -ಕಾನೂನ ಭಂಗ ಚಳುವಳಿ.*
*🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.*
*🔶1937 -ಪ್ರಾಂತೀಯ ಚುಣಾವಣೆ*
*🔶1939 -ತ್ರೀಪುರಾ ಬಿಕ್ಕಟ್ಟು.*
*🔶1940 -ಅಗಷ್ಟ ಕೊಡುಗೆ.*
*🔶1942 -ಕ್ರಿಪ್ಸ ಆಯೋಗ*
*🔶1945 -ಸಿಮ್ಲಾ ಸಮ್ಮೇಳನ*
*🔶1946- ಕ್ಯಾಬಿನೆಟ್ ಆಯೋಗ*
*🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.*
*⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ...*
*⭐1973-ಕರ್ನಾಟಕ ಮರುನಾಮಕರಣ.*