ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 13 December 2016

ಕನ್ನಡ ಸಾಹಿತ್ಯ ನಿಮಗೆಷ್ಟು ಗೊತ್ತು. ..?

ಹೊಸದಾಗಿ ಕನ್ನಡ ಸಾಹಿತ್ಯ ಸಿದ್ಧತೆ ಆರಂಭಿಸುವ ಅಭ್ಯರ್ಥಿಗಳಿಗೆ ಕಿವಿಮಾತು – ಕೋಚಿಂಗ್ ಇಲ್ಲದೆ ಕನ್ನಡ ಸಾಹಿತ್ಯ ಅಧ್ಯಯನ ಕಷ್ಟಸಾಧ್ಯ ಎಂಬುದು ನನ್ನ ಸ್ವಂತ ಅಭಿಪ್ರಾಯ. ಇದಕ್ಕೆ ಕಾರಣ ಕನ್ನಡ ಸಾಹಿತ್ಯಕ್ಕೆ ಸಂಬಂದಿಸುವ ಎಲ್ಲ ಪುಸ್ತಕಗಳು ಒಂದೆಡೆ ಸಿಗುವುದಿಲ್ಲ. ಹಲವು ಪುಸ್ತಕಗಳ ಮುದ್ರಣ ನಿಂತೇ ಹೋಗಿದೆ. ಆದರೆ ಕನ್ನಡ ಸಾಹಿತ್ಯ ಬೋಧಿಸುವವರ ಎಲ್ಲ ಅಗತ್ಯ ಪುಸ್ತಕಗಳನ್ನು ಕಲೆ ಹಾಕಿರುತ್ತಾರೆ. ನಂತರ ಕೋಚಿಂಗ್ ಹೋದಾಗ ನಿಮಗೆ ಮಾದರಿ ಉತ್ತರಗಳು, ಯಶಸ್ವಿ ವಿಧ್ಯಾರ್ಥಿಗಳ ಉತ್ತರಗಳು ಲಭ್ಯವಾಗುತ್ತವೆ. ಅದು ಬಹಳ ಸಹಾಯಕವಾಗುತ್ತದೆ. (ಆ ಉತ್ತರಗಳನ್ನು ಉರು ಹಚ್ಚಬಾರದು. ಆ ಉತ್ತರಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಸ್ವಂತಿಕೆ ಬಳಿಸಿ ‘ನಿಮ್ಮ’ ಉತ್ತರ ತಯಾರಿಸುವ ಚಾಕಚಕ್ಯತೆ ಬೆಳೆಸಿಕೊಂಡರೆ ನಿಬ್ಬೆರಗಗಿಸುವ ಅಂಕಗಳು ನಿಮ್ಮ ಕಿಸೆಗೆ ತಾವಾಗಿಯೇ ಬಂದು ಬೀಳುತ್ತವೆ).

ಕನ್ನಡ ಸಾಹಿತ್ಯ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು (ನನ್ನ ಪ್ರಕಾರ) ಕೆಳಕಂಡಂತಿವೆ;

ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪರಿಶ್ರಮ ಬೇಡ. ಅದನ್ನು ಕೇವಲ ಎರಡು ತಿಂಗಳಲ್ಲಿ ಓದಿಮುಗಿಸಬಹುದು ಎನ್ನುವ ತಪ್ಪು ಕಲ್ಪನೆ. (ಇತರೆ ಐಚ್ಚಿಕ ವಿಷಯದ ವಿಧ್ಯಾರ್ಥಿಗಳು ೭-೮ ತಿಂಗಳುಗಳು ಓದಲೇಬೇಕಿರುವಾಗ ಮತ್ತು ಅಷ್ಟು ಓದಿದರೂ ಸಹ ಅವರ ಪರಿಶ್ರಮಕ್ಕೆ ಪ್ರತಿಫಲ ಸಿಗುವುದು ಅನಿಶ್ಚಿತವಾಗಿರುವಾಗ ಕನ್ನಡ ಕಂದಮ್ಮಗಳಾದ ನೀವು ‘ನಾನು ಕನ್ನಡ ವಿಷಯವನ್ನು ಕೇವಲ ೨ ತಿಂಗಳಲ್ಲಿ ಮುಗಿಸುತ್ತೇನೆ, ಅದಕ್ಕಿಂತ ಹೆಚ್ಚಿಗೆ ಓದಲು ಸಾಧ್ಯವಿಲ್ಲ’ ಎಂದುಕೊಳ್ಳೋದು ಹಾಸ್ಯಾಸ್ಪದ. ದಯವಿಟ್ಟು ಕನಿಷ್ಠ ೪ ತಿಂಗಳು ಕನ್ನಡಕ್ಕಾಗಿ ಮೀಸಲಿಡಿ ಹಾಗು ಇದರಲ್ಲಿ ಮೈನವಿರೇಳಿಸುವ ಅಂಕಗಳನ್ನು ಪಡೆದು ಒಳ್ಳೆಯ ರಾಂಕ್ಕ್ ಪಡೆಯಿರಿ.)
ಕನ್ನಡ ಸಾಹಿತ್ಯ ಪಠ್ಯ ವಿಷಯ (ಸಿಲಬುಸ)ನ್ನು ಸಂಪೂರ್ಣ ಓದದೆ ಕೇವಲ ಮುಖ್ಯ ಪಾಠಗಳನ್ನು ಮಾತ್ರ ಓದುವುದು. ಸಿಲಬುಸ್ ಪೂರ್ಣ ಓದಲು ಸಾಧ್ಯವಾಗದಿದ್ದರೆ ಕನಿಷ್ಟಪಕ್ಷ ಶೇ. ೯೦ ಸಿಲಬುಸ್ ಆದರು ಓದಿ. ಇಲ್ಲದಿದ್ದರೆ ನಿಮಗೆ ಎಲ್ಲರೂ ಪಡೆಯುವಂತೆ ಸರಾಸರಿ ಅಂಕಗಳು ಮಾತ್ರ ಲಭಿಸುತ್ತವೆ.
ಮೂಲ ಪುಸ್ತಕಗಳನ್ನು ಓದದೆ ನೋಟ್ಸ್ ಗಳನ್ನ ಓದುವುದು (ಉದಾಹರಣೆಗೆ, ‘ಬೆಟ್ಟದ ಜೀವ’ ಕಾದಂಬರಿಯನ್ನೇ ಓದದೆ ಅದರ ವಿಮರ್ಶೆಯನ್ನು ಅಥವಾ ನೋಟ್ಸ್ ನ್ನು ಓದಿ ಉತ್ತರಿಸುವುದು). ಅಥವಾ ಹಿಂದಿನ ಯಶಸ್ವೀ ವಿಧ್ಯಾರ್ಥಿಗಳ ಉತ್ತರಗಳನ್ನು ಓದುವುದು ಅಥವ ಪಾಠದ ಧ್ವನಿ ಮುದ್ರಿಕೆ (ಆಡಿಯೋ) ಗಳನ್ನು ಕೇಳಿ ಸುಮ್ಮನಾಗುವುದು. ಈ ತಪ್ಪನ್ನು ತುಂಬಾ ವಿಧ್ಯಾರ್ಥಿಗಳು ಮಾಡಿದ್ದಾರೆ. ದಯವಿಟ್ಟು ಮೊದಲು ಮೂಲ ಪುಸ್ತಕ ನಂತರ ವಿಮರ್ಶೆ, ನೋಟ್ಸ್, ಯಶಸ್ವೀ ವಿಧ್ಯಾರ್ಥಿಗಳ ಉತ್ತರ ಇತ್ಯಾದಿ.
ಪ್ರಶ್ನೆ-ಉತ್ತರದ ರೂಪದಲ್ಲಿ ತಯಾರಿ ನಡೆಸುವುದು ಹೆಚ್ಚಿನ ಅಂಕಗಳಿಗೆ ದಾರಿಮಾಡಿ ಕೊಡುವುದಿಲ್ಲ. ಈಗಿನ ಪ್ರಶ್ನೆ-ಪತ್ರಿಕೆಯ ಸ್ವರೂಪವನ್ನು ಗಮನಿಸಿದರೆ ವಿಷಯದ ಮೇಲೆ ಹಿಡಿತ ಅವಶ್ಯಕ ಎಂದು ವೇದ್ಯವಾಗುತ್ತದೆ. ಹಾಗಿರುವಾಗ ಪ್ರತಿ ಪಾಠದ ಮೇಲೆ ೩-೪ ಪ್ರಶ್ನೆಗಳಿಗೆ ಚೆಂದದ ಉತ್ತರ ಸಿದ್ಧ ಮಾಡಿ ಉಳಿದ ಪ್ರಶ್ನೆಗಳಿಗೆ ಆ ಉತ್ತರದಿಂದಲೇ ಉತ್ತರ ಅರಸುವ ಮತ್ತು ಆರಿಸುವ ವಿಧಾನ ತಮಗೆ ನಿಬ್ಬೆರಗಾಗಿಸುವ ಅಂಕಗಳನ್ನು ದಯಪಾಲಿಸುವುದಿಲ್ಲ. ಉತ್ತರವನ್ನು ಮನೆಗೆ ಉಪಮಾನವಾಗಿ ಪರಿಗಣಿಸಿ ಹೇಳುವುದಾದರೆ ಉತ್ತರ ಪತ್ರಿಕೆಯ ಮೇಲೆ ಮನೆ ಕಟ್ಟಲು ಅವಶ್ಯಕವಾದ ಇಟ್ಟಿಗೆಗಳನ್ನು ತಯಾರಿಸಿಕೊಂಡು ಹೋಗಿ ಅವರು ಕೇಳಿದಂತೆ ಮನೆ ಕಟ್ಟಬೇಕೇ ವಿನಃ ಮನೆಯನ್ನು ಮೊದಲೇ ಕಟ್ಟಿ ಅಲ್ಲಿ ಪ್ರತಿಷ್ಟಾಪಿಸುವುದು; ಅಥವಾ ಆ ಮನೆಯನ್ನು ಪರೀಕ್ಷಾ ಕೋಣೆಯಲ್ಲಿ ಕೆಡವಿ ಇಟ್ಟಿಗೆಗಳನ್ನು ಆಯ್ದು ಕಟ್ಟುವುದು ತಕ್ಕುದಲ್ಲ.
ಕನ್ನಡವನ್ನು ವೇಗವಾಗಿ ಬರೆಯಲು ಪ್ರಯತ್ನಿಸದಿರುವುದು.
ಉತ್ತರದಲ್ಲಿ ಕೇವಲ ಕಥೆಯನ್ನೇ ತುಂಬಿ ವಿಮರ್ಶೆಯನ್ನು ಕಡೆಗಣಿಸುವುದು. ವಿಮರ್ಶಾತ್ಮಕ ಉತ್ತರಗಳಿಗೆ ಮಾತ್ರ ಗರಿಷ್ಟ ಅಂಕ ಲಭಿಸುತ್ತದೆ. (ವಿಮರ್ಶಾತ್ಮಕವಾಗಿ ಹೇಗೆ ಉತ್ತರಿಸಬೇಕು ಎಂಬುದನ್ನು ಮುಂದೆ ನೋಡೋಣ).
ಪತ್ರಿಕೆ ೧

೧. ಭಾಷಾಶಾಸ್ತ್ರ

ಈ ಪಾಠದಿಂದ ನೇರ ಪ್ರಶ್ನೆಗಳು ಬರುವುದರಿಂದ ಪುಸ್ತಕ ವನ್ನು ಚೆನ್ನಾಗಿ ಓದಿ ಮನನ ಮಾಡಿ. ಪ್ರತಿ ಉತ್ತರದಲ್ಲೂ ಹೇರಳವಾಗಿ ಉದಾಹರಣೆಗಳನ್ನೂ ನೀಡಬೇಕು. ಪ್ರತಿ ವಿಷಯದ ಮೇಲೂ ಒಂದು ಅಥವಾ ಎರಡು ಉದಹರಣೆ ಮಾತ್ರ ಖಚಿತವಾಗಿ ನೆನಪಿರಲಿ. ಅದಕ್ಕಿಂತ ಹೆಚ್ಚು ನೆನಪಿದ್ದರು ಪರೀಕ್ಷೆಯಲ್ಲಿ ಸೇರಿಸಲು ಸಾಧ್ಯವಿಲ್ಲ. (ನಿದರ್ಶನ – ಧ್ವನಿ ವ್ಯತ್ಯಾಸದಲ್ಲಿ ಮಿತವ್ಯಯಾಸಕ್ತಿ ಗೆ ಎರಡು, ಅವಧಾರಣೆ ಗೆ ಎರಡು ಹೀಗೆ ಪ್ರತಿಯೊಂದಕ್ಕೂ ಉದಹರಣೆ ತಿಳಿದಿರಬೇಕು)

ಭಾಷಾಶಾಸ್ತ್ರಕ್ಕೆ ‘ಕನ್ನಡ ಭಾಷ ಚರಿತ್ರೆ’ (ಲೇ: ಎಂ.ಎಚ್. ಕೃಷ್ಣಯ್ಯ) ಮತ್ತು ಸಾ.ಶಿ. ಮರುಳಯ್ಯ ವಿರಚಿತ ಭಾಷಾಶಾಸ್ತ್ರ ಪುಸ್ತಕಗಳು ಸಹಕಾರಿ. ಅಂತೆಯೇ, ವೆಂಕಟೇಶಪ್ಪ ಸರ್ ಅವರ ತರಗತಿ ಟಿಪ್ಪಣಿಗಳು ಬಹಳ ಸಹಾಯಕವಾದವು.

ಭಾಶಶಸ್ತ್ರದ ಪರಿಕಲ್ಪನೆಗಳನ್ನು ಪತ್ರಿಕೆ ೨ ರಲ್ಲಿ ಭಾವಾರ್ಥ ಬರೆಯುವಾಗ ಕೂಡ ಬಳಸಿಕೊಳ್ಳಬಹುದು. ಉದಾಹರಣೆಗೆ, ನೀಡಿರುವ ಪದ್ಯಭಾಗದಲ್ಲಿನ ಹಳಗನ್ನಡ ಪದಗಳನ್ನು ಗಮಿನಿಸಿ, ಆ ಪದಗಳಿಗೆ ಹೊಸಗನ್ನಡ ಸಮಾನಂತರ ಪದಗಳನ್ನು ಬರೆದು, “ಈ ಪಧ್ಯಭಾಗದಿಂದ ಕನ್ನಡ ಭಾಷೆಯ ಅವಸ್ಥಾ೦ತರದ ವಿವಿಧ ಹಂತಗಳನ್ನು ಗುರುತಿಸಿ ನದಿಯ ನೀರು ದಿಕ್ಕು ಬದಲಿಸುವಂತೆ, ಕನ್ನಡ ಭಾಷೆ ಹೇಗೆ ದಿಕ್ಕು ಬದಲಿಸಿದೆ ತಿಳಿಯಬಹುದು” ಎಂದೆಲ್ಲ ವಿಮರ್ಶೆ ಬರೆಯಬಹುದು.

ಅಂತೆಯೇ, ಪದ್ಯಭಾಗದಲ್ಲಿ ಇತರೆ ಭಾಷೆಗಳಿಂದ ಬಂದ ಪದಗಳಿದ್ದರೆ ಗಮನಿಸಿ ಅದನ್ನು ಸಹ ಭಾವಾರ್ಥದಲ್ಲಿ ಸೇರಿಸಬಹುದು.

ಹೊಸಗನ್ನಡ ಕಥೆ, ಕವನ, ನಾಟಕ, ಕಾದಂಬರಿ, ಇತ್ಯಾದಿಗಳಲ್ಲಿ ಮಂಗಳೂರು, ಮೈಸೂರು, ಧಾರವಾಡ, ಗುಲ್ಬರ್ಗ ಕನ್ನಡಗಳ ,ಪದಗಳು ಭಾಷ ಸೊಗಡನ್ನು ಗುರುತಿಸಬೇಕು. ತತ್ಸಂಬಂಧ ಕಥೆ, ಕವನ, ನಾಟಕ, ಕಾದಂಬರಿ, ಇತ್ಯಾದಿಗಳ ಮೇಲಿನ ಪ್ರಶ್ನೆಗಳಿಗೆ ಉತ್ತರಿಸುವಾಗ ಅವನ್ನು ಸಮೊಯೋಚಿತವಾಗಿ ಉತ್ತರದಲ್ಲಿ ಸೇರಿಸಿ. (ನಿದರ್ಶನ – ಬೇಂದ್ರೆ ಅವರ ಕವನಗಳಲ್ಲಿನ ಧಾರವಾಡ ಕನ್ನಡ ಸೊಗಡು).

ಇಂಗ್ಲಿಷ್ ಭಾಷೆಯ ಪದಗಳ ಬಳಕೆಯನ್ನು ಗಮನಿಸಿ ಭಾಷೆ-ಭಾಷೆಗಳ ನಡುವಣ ಕೊಡು-ಕೊಳ್ಳು ಸಂಬಂಧ ಎಂತೆಲ್ಲ ಬರೆಯಬಹುದು. ನಿದರ್ಶನ – “ಕ್ಲಿಪ್ ಜಾಯಿಂಟ್ ಕಥೆಯಲ್ಲಿ ಶ್ರೀ ಅನಂತ ಮೂರ್ತಿ ಅವರು ಬಳಸುವ ಆಂಗ್ಲ ಪದಗಳಲ್ಲಿ ಭಾವನೆಗೆ ಭಾಷೆ ದಾಸನಾಗಬೇಕೆಂಬ ನಿಲುವು ನಿಚ್ಚಳವಾಗಿ ಕಂಡುಬರುತ್ತದೆ” ಎಂದು ಬರೆಯಬಹುದು.

೨. ಕನ್ನಡ ಸಾಹಿತ್ಯದ ಇತಿಹಾಸ

ಈ ಉಪವಿಭಾಗಕ್ಕೆ “ಶ್ರೀ ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ” ಪುಸ್ತಕ ಮಾಲಿಕೆಯ ೧೦ ಪುಸ್ತಕಗಳಲ್ಲಿನ ಆಯ್ದಭಾಗಗಳು ಅತ್ಯುಪಯುಕ್ತ. (ಎಚ್ಚರವಿರಲಿ – ಪೂರ್ತಿ ಅಲ್ಲ, ಸಿಲಬಸ್ ಗೆ ಸಂಬಂಧಪಟ್ಟ ಆಯ್ದ ಭಾಗಗಳು ಮಾತ್ರ. ಸಪ್ನ ಪುಸ್ತಕ ಮಳಿಗೆಯಲ್ಲಿ ಇವು ಲಭ್ಯ. ಅಷ್ಟೇ ಅಲ್ಲದೆ ಮೈಸೂರು ಬ್ಯಾಂಕ್ ವೃತ್ತ ದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ‘ಪ್ರಸಾರಾಂಗ’ ಪುಸ್ತಕ ಮಾರಾಟ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಲಭ್ಯ.

ಪ್ರತಿಯೊಬ್ಬ ಕವಿಯ ಬಗ್ಗೆಯೂ, ಆತನ ಕಾಲದ ಬಗ್ಗೆಯೂ, ಆತನ ಶೈಲಿಯ ಬಗ್ಗೆಯೂ ತಿಳಿದು ತುಲನಾತ್ಮಕ ವಿಮರ್ಶೆಗೆ ಬಳಸಬಹುದು. ಪ್ರತಿಯೊಬ್ಬ ಕವಿಯ ಬಗ್ಗೆ ಇತರ ವಿಮರ್ಶಕರ ಹೇಳಿಕೆಗಳು (ಉದಾಹರಣೆಗೆ, ಪಂಪನ ಬಗ್ಗೆ ತೀ. ನಂ. ಶ್ರೀ. ಅವರ ಹೇಳಿಕೆ ; ರತ್ನಾಕರವರ್ಣಿ ಕುರಿತ ಕುವೆಂಪು ಅವರ ಹೇಳಿಕೆ ಇತ್ಯಾದಿ) ತಮಗೆ ತಿಳಿದಿರಬೇಕು. ಅಂತೆಯೆ ಪ್ರತಿಯೊಬ್ಬ ಕವಿಯ ಇಂದಿನ ಪ್ರಸ್ತುತತೆ ಯನ್ನು ಉತ್ತರದಲ್ಲಿ ಸೇರಿಸಿ. ತಮ್ಮ ‘ಸಾಮಾನ್ಯ ಅಧ್ಯಯನ’ (ಜನರಲ್ ಸ್ಟಡೀಸ್) ನಿಂದ ತಿಳಿದುಕೊಂಡಿರುವ ವಿಚಾರಗಳ ಹಿನ್ನಲೆಯಲ್ಲಿ ಕವಿಯ ಪ್ರಸ್ತುತತೆಯನ್ನು ವಿಶ್ಲೆಸಿಬಹುದು. ಉದಾಹರಣೆಗೆ, ಇತ್ತೀಚೆಗೆ ಪ್ರಕಟಗೊಂಡ ವರದಿಯೊಂದರ ಪ್ರಕಾರ ಕೆಲ ಜಾತಿಗಳ ಕುಟುಂಬಗಳಿಗೆ ನಗರಗಳಲ್ಲಿ ಮನೆ ಬಾಡಿಗೆ ಕೊಡದಿರುವುದು ಬೆಳಕಿಗೆ ಬಂದಿದೆ. ಇದರ ಹಿನ್ನಲೆಯಲ್ಲಿ ಬಸವಣ್ಣನವರ ವಚನಗಳ ಪ್ರಸ್ತುತತೆಯನ್ನು ಅವಲೋಕಿಸಬಹುದು.

೩. ಹೊಸಗನ್ನಡ ಸಾಹಿತ್ಯ ಚರಿತ್ರೆ

ಪ್ರಸ್ತುತ ಉಪವಿಭಾಗಕ್ಕೆ ಶ್ರೀ ಎಲ್.ಎಸ್. ಶೇಷಗಿರಿ ರಾವ್ ವಿರಚಿತ “ಹೊಸಗನ್ನಡ ಸಾಹಿತ್ಯ ಚರಿತ್ರೆ” ಪುಸ್ತಕ ಅತ್ಯಂತ ಮಹತ್ವದ್ದು. ಅದರ ಜೊತೆಯಲ್ಲಿಯೇ ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕಗಳು ಅತ್ಯಂತ ಅನುಕೂಲ.

ಪ್ರತಿ ಸಾಹಿತ್ಯ ಚಳುವಳಿಯ ಗುಣಲಕ್ಷಣಗಳನ್ನು ಚೆನ್ನಾಗಿ ತಿಳಿದು ಅದಕ್ಕೆ ತಕ್ಕ ಉದಾಹರಣೆಗಳನ್ನು ಕಂಡುಕೊಳ್ಳಿ. ಶೇಷಗಿರಿ ರಾವ್ ಪುಸ್ತಕದಲ್ಲಿನ ಉದಾಹರಣೆಗಳನ್ನು ಮಾತ್ರವಲ್ಲದೆ ಪತ್ರಿಕೆ ೨ ರಲ್ಲಿನ ವಿಷಯಗಳಲ್ಲಿನ ಉದಾಹರಣೆಗಳನ್ನು ನೀಡಬೇಕು. ನಿದರ್ಶನ – ನವೋದಯದ ‘ಜೀವನ ಪ್ರೀತಿ’ ಮೌಲ್ಯಕ್ಕೆ ಉದಾಹರಣೆಯಾಗಿ ‘ಹೊಸಗನ್ನಡ ಕವಿತೆಯಲ್ಲಿನ’ ಮಾಸ್ತಿ ಅವರ ‘ಬಾಳು ಜಾರುಬಂಡೆಯಾಟ’ ಕವಿತೆ ಯನ್ನು ನೀಡಬಹುದು. ಆ ಪದ್ಯದ ಕಡೆಯ ಸಾಲು – ‘ಚಣ ಮುಗಿದು ಬುಡ ಸೇರುವೆವು, ಮತ್ತೆ ತುದಿಗೆರುವೆವು’ ಲ್ಲಿ ಜೀವನ ಪ್ರೀತಿ ಘನೀಕರಿಸಿದೆ. ಅಂತೆಯೇ ಮಾಸ್ತಿ ಅವರ ‘ಮೊಸರಿನ ಮಂಗಮ್ಮ’ ಕಥೆಯಲ್ಲಿ ಮಂಗಮ್ಮ ಹೊಸ ರವಿಕೆ ಹೊಲೆಸಿಕೊಲ್ಲುವುದ್ರಲ್ಲೂ “ಏಜ್ ಇಸ್ ಜಸ್ಟ್ ಅ ನಂಬರ್’ ಎಂಬ ಆಂಗ್ಲ ಉಕ್ತಿಯನ್ನು ನೆನಪಿಸುವುದರ ಜೊತೆ ಜೊತೆಗೆ ಜೀವನ ಪ್ರೀತಿಯ ದ್ಯೋತಕವೂ ಆಗಿದೆ.

ಪ್ರಗತಿಶೀಲ ಚಳುವಳಿಯ ಕುರಿತು ಬರೆಯುವಾಗ ‘ಕೊನೆಯ ಗಿರಾಕಿ’ ಕಥೆಯನ್ನು ಉದಾಹರಿಸಬಹುದು.

ಹೀಗೆ ಪತ್ರಿಕೆ ೨ ರಲ್ಲಿನ ಉದಾಹರಣೆಗಳನ್ನು ಶೇಷಗಿರಿ ರಾವ್ ವಿರಚಿತ “ಹೊಸಗನ್ನಡ ಸಾಹಿತ್ಯ ಚರಿತ್ರೆ” ಪುಸ್ತಕದಲ್ಲಿನ ಉದಾಹರಣೆಗಳನ್ನು ನೀಡಿ ಉತ್ತರದ ಗುಣಮಟ್ಟವನ್ನು ಹೆಚ್ಚಿಸಿ.

ಅಂತೆಯೇ ಪತ್ರಿಕೆ ೨ ರಲ್ಲಿ ಉತ್ತರ ಬರೆಯುವಾಗ ಈ ಸಾಹಿತ್ಯ ಚಳುವಳಿಗಳ ಸಾಹಿತ್ಯ ಲಕ್ಷಣಗಳು ಹೇಗೆ ಸಾಕಾರಗೊಂಡಿವೆ ಎಂದು ಬರೆಯುವುದು ಒಳ್ಳೆಯದು.

೪. ಕಾವ್ಯ ಮೀಮಾಂಸೆ

ಕಾವ್ಯ ಮೀಮಾಂಸೆ ಗೆ ವೆಂಕಟೇಶಪ್ಪ ಸರ್, ಜಿನೆಂದ್ರ ಸರ್ ನೋಟ್ಸ್, ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕಗಳು – ಇವನ್ನು ಪ್ರಮುಖವಾಗಿ ಓದಿದ್ದೆ. ಜೊತೆಯಲ್ಲಿ ಸ್ವಲ್ಪ ಮಟ್ಟಿಗೆ ತಿಪ್ಪೇರುದ್ರಸ್ವಾಮಿ ವಿರಚಿತ “ತೌಲನಿಕ ಕಾವ್ಯ ಮೀಮಾಂಸೆ’ ಹೊತ್ತಿಗೆಯನ್ನು ಓದಿದ್ದೆ. ಜೊತೆ ಜೊತೆಗೆ ಮೀಮಾಂಸೆಯ ಪರಿಕಲ್ಪನೆಗಳನ್ನು ವಿಮರ್ಶೆಯ ಪರಿಕಲ್ಪನೆಗಳೊಂದಿಗೆ ಹೋಲಿಸಬೇಕು. ಉದಾಹರಣೆಗೆ ಅರಿಸ್ಟಾಟಲ್ ನ ‘ಕಾಥರ್ಸಿಸ್’ ಪರಿಕಲ್ಪನೆಯನ್ನು ‘ಶಾಂತ ರಸ’ ದ ಜೊತೆ ಹೋಲಿಸುವುದು. (ಸಿ.ಎನ್. ರಾಮಚಂದ್ರನ್ ವಿರಚಿತ ಸಾಹಿತ್ಯ ವಿಮರ್ಶೆ ಪುಸ್ತಕದ ೨ನೆ ಅಧ್ಯಾಯದಲ್ಲಿ ಕೆಲವು ವಿಮರ್ಶೆ ಪರಿಕಲ್ಪನೆಗಳಿವೆ. ಅವನ್ನು ಕಾವ್ಯ ಮೀಮಾಂಸೆಯ ಪರಿಕಲ್ಪನೆಗಳೊಂದಿಗೆ ಹೋಲಿಕೆ ಮಾಡಿದ ಟಿಪ್ಪಣಿಗಳನ್ನು ನೀಡಲಾಗಿದೆ).

ಅಂತೆಯೇ, ರಾಷ್ಟ್ರ ಕವಿ ಶ್ರೀ ಶಿವರುದ್ರಪ್ಪ ವಿರಚಿತ ‘ಕಾವ್ಯಾರ್ಥ ಚಿಂತನ’ ಪುಸ್ತಕ ಕೂಡ ಅವಶ್ಯಕ. (ರೀತಿ ಪರಿಕಲ್ಪನೆಗೆ ಈ ಪುಸ್ತಕದ ಲೇಖನ ಅತ್ಯುಪಯುಕ್ತ. ಹಾಗೆಯೆ ‘ಪ್ರತಿಭೆ’, ‘ಸ್ಪೂರ್ತಿ’, ‘ಮಾನಸಿಕ ದೂರ ‘ ಇತ್ಯಾದಿ ಪರಿಕಲ್ಪನೆಗಳ ಬಗ್ಗೆಓದಿ. ಇದು ಸಿಲಬಸ್ ಅಲ್ಲಿ ಇಲ್ಲ. ಆದರೂ ಪ್ರಶ್ನೆ ಬರಬಹುದು. ಅಷ್ಟೇ ಅಲ್ಲ, ಆ ಪರಿಕಲ್ಪನೆಗಳನ್ನು ಪತ್ರಿಕೆ ೨ ರಲ್ಲಿ ಹೇರಳವಾಗಿ ವಿಮರ್ಶೆಗೆ ಬಳಸಬಹುದು. ನಿದರ್ಶನ – ಕೆಲವೊಂದು ಉತ್ತರದಲ್ಲಿ ಹೆಚ್ಚಿನ ವಿಮರ್ಶೆಗೆ ಅವಕಾಶ ಇಲ್ಲದಿರುವಾಗ ‘ಪ್ರಸ್ತುತ ಕಾವ್ಯ ಭಾಗವನ್ನು ಕವಿಯು ಸ್ಪೂರ್ತಿಯ ತೆಕ್ಕೆಗೆ ಸಿಲುಕಿದಾಗ ರಚಿಸಿರುವುದರಿಂದ ಸಹೃದಯನಲ್ಲಿ ಧನಾತ್ಮಕ ಭಾವನೆ ಮೂಡಿಸುತ್ತದೆ.’ ಹೀಗೆಲ್ಲ ಬರೆಯಬಹುದು.

ಕಾವ್ಯ ಮೀಮಾಂಸೆ ಯ ಪ್ರಶ್ನೆಗಳಿಗೆ ಉತ್ತರಿಸುವಾಗ ಸಂಸ್ಕೃತ ವಾಕ್ಯಗಳನ್ನು ಉಲ್ಲೆಕಿಸುವ ಪ್ರಯತ್ನ ಮಾಡಿ. ಪ್ರತಿ ಕಾವ್ಯ ಮೀಮಾಂಸೆಯ ಪರಿಕಲ್ಪನೆಗೆ ಹಳೆಗನ್ನಡ, ಹೊಸಗನ್ನಡ, ಜನಪದದ ಉದಾಹರಣೆ ನೀಡಿದರೆ ಒಳ್ಳೆಯದು. ಇದು ನಿಮ್ಮ ಉತ್ತರವನ್ನು ವಿಭಿನ್ನಗೊಳಿಸುತ್ತದೆ. ನಿದರ್ಶನ – ‘ರೀತಿ’ ಗೆ ನಿದರ್ಶನವಾಗಿ ಹಳೆಗನ್ನಡದಲ್ಲಿ ‘ಅಳಗಂ ಮಂದಾರ ಶೂನ್ಯಂ……’ ಎಂಬ ಆದಿಪುರಾಣದ ಕಾವ್ಯಭಾಗವನ್ನು, ಹೊಸಗನ್ನಡದಲ್ಲಿ ರಾಜರತ್ನಂ ಅವರ ಕುಡುಕನ ಭಾಷೆಯ ಶೈಲಿ, ಸಿದ್ದಲಿಂಗಯ್ಯ ಅವರ ‘ಇಕ್ರಲಾ ಓದಿರ್ಲಾ….’ ಸಾಲಿಂಥ ಹಳ್ಳಿಯ ಭಾಷೆಯನ್ನೂ ಮತ್ತು ಜನಪದದ ‘ರತ್ತೋ ರತ್ತ್ಹೋ ರಾಯನ ಮಗಳೇ…..’ ಸಾಲನ್ನು ಉದಾಹರಿಸಬಹುದು. ಶ್ರೀ ಗಿರಡ್ಡಿ ಗೋವಿಂದರಾಜು ಅವರ ‘ವಚನ ವಿನ್ಯಾಸ’ ಪುಸ್ತಕದಲ್ಲಿ ಪಾಶ್ಚಾತ್ಯ ಶೈಲಿಶಾಸ್ತ್ರದ ಹಲವು ಪರಿಕಲ್ಪನೆಗಳ ಚರ್ಚೆ ಇದೆ. ಅದನ್ನು ಓದಿ ರೀತಿಯೊಂದಿಗೆ ಹೋಲಿಸಿ ಬರೆಯಬಹುದು. ಈ ಪುಸ್ತಕ ಪತ್ರಿಕೆ ೨ ಲ್ಲಿನ ವಚನಗಳ ವಿಮರ್ಶೆಗೂ ಸಹ ಉಪಯುಕ್ತ.

ಕಡೆಯದಾಗಿ ಎಲ್ಲೆಲ್ಲಿ ಕಾವ್ಯ ಮೀಮಾಂಸೆಯ ಯುದೆ ಪ್ರಸ್ಥಾನಗಳು ಹೊಂದಿಕೆಯಾಗದಿರುವಾಗ ‘ಔಚಿತ್ಯ’ ಪರಿಕಲ್ಪನೆಯನ್ನು ಬಳಸಬಹುದು.

೫. ಸಾಹಿತ್ಯ ವಿಮರ್ಶೆ

ಇದೊಂದು ನಿಗೂಢ ಉಪವಿಭಾಗ ಎನ್ನಬಹುದು. ಕಾರಣ ಇಲ್ಲಿಂದ ಬರುವ ಹಲವು ಪ್ರಶ್ನೆಗಳಿಗೆ ಉತ್ತರ ಎಲ್ಲಿ ಸಿಗುತ್ತದೋ ಎಷ್ಟೋ ಬಾರಿ ತಿಳಿಯುವುದೇ ಇಲ್ಲ.

ಡಾ. ಸಿ.ಎನ್. ರಾಮಚಂದ್ರನ್ ವಿರಚಿತ ‘ಸಾಹಿತ್ಯ ವಿಮರ್ಶೆ’ ಪುಸ್ತಕ ವನ್ನು ಓದಿ. ಪ್ರತಿಯೊಬ್ಬ ವಿಮರ್ಶಕನ ಕೊಡುಗೆಯ ಕುರಿತು ೨ ಪುಟದಷ್ಟು ಟಿಪ್ಪಣಿ ತಯಾರು ಮಾಡಿಕೊಳ್ಳಿ. ವಿಮರ್ಶಕರ ಹೆಸರುಗಳು ಚೆನ್ನಾಗಿ ನೆನಪಿರಲಿ. ಅವನ್ನು ಪತ್ರಿಕೆ ಯೆಅರ್ದರಲ್ಲಿ ಬಳಸಬಹುದು. ಉದಾಹರಣೆಗೆ, ಅಕ್ಕಮಹಾದೇವಿಯ ಕುರಿತು ಬರೆಯುವಾಗ ಸಿಮೊನ್ ದ ಬೊವ ವಿಚಾರ ಲಹರಿಯನ್ನು ಹೋಲಿಕೆಗೆ ಬಳಸಬಹುದು.

ಇಲ್ಲಿ ಸ್ವಲ್ಪ ಉರು ಹೊಡೆಯುವುದು ಅನಿವಾರ್ಯ. ಆದರೆ ಅರ್ಥ ಮಾಡಿಕೊಂಡು ಉರು ಹೊಡೆಯಿರಿ. ಹಾ ಹಾ… ಹಾ…

೬. ಸಾಂಸ್ಕೃತಿಕ ಇತಿಹಾಸ

ಇಲ್ಲಿ ನೇರ ಪ್ರಶ್ನೆಗಳು ಬರುವುದರಿಂದ, ನಾನು ಹೆಚ್ಚಾಗಿ ಎನನ್ನು ಹೇಳಲಾರೆ. ಫಾಲಾಕ್ಷ ಅವರ ‘ಕರ್ನಾಟಕ ಇತಿಹಾಸ’ ಪುಸ್ತಕದ ಆಯ್ದ ಭಾಗಗಳನ್ನು ಓದಬಹುದು. ಈಗೀಗ ಸ್ವಲ್ಪ ಆಳಕ್ಕೆ ಇಳಿದು ಪ್ರಶ್ನೆ ಕೇಳುತ್ತಿರುವುದರಿಂದ ತಿಪ್ಪೇರುದ್ರಸ್ವಾಮಿ ವಿರಚಿತ ‘ಕರ್ನಾಟಕ ಸಾಂಸ್ಕೃತಿಕ ಸಮೀಕ್ಷೆ’ ಪುಸ್ತಕ ಅನುಕೂಲವಾಗಬಹುದು.

ಪತ್ರಿಕೆ ೨

ಪತ್ರಿಕೆ ೨ ರಲ್ಲಿ ಹೆಚ್ಚಿನ ಅಂಕ ಗಳಿಸಬೇಕಾದರೆ,

ಪತ್ರಿಕೆ ೧ ರಲ್ಲಿನ ಶಾಸ್ತ್ರಿಯ (ಭಾಷಾ ಶಾಸ್ತ್ರ, ಮೀಮಾಂಸೆ, ವಿಮರ್ಶೆ ಪರಿಕಲ್ಪನೆ) ಪರಿಕಲ್ಪನೆಗಳನ್ನು ಹೇರಳವಾಗಿ ಬಳಕೆ ಮಾಡಬೇಕು.
ಅಂತೆಯೆ ಉತ್ತರದಲ್ಲಿ ಸುಮ್ಮನೆ ಕಥೆ ಬರೆಯದೆ ಉತ್ತರದ ಶೇ ೫೦ ವಿಮರ್ಶೆಗೆ ಮೀಸಲಿರಬೇಕು.
ಎಷ್ಟು ಸಾಧ್ಯವೋ ಅಷ್ಟು ಹಳೆಗನ್ನಡ, ವಚನ, ಕೀರ್ತನೆ ಸಾಲು ಗಳನ್ನೂ ಉಲ್ಲೇಕಿಸಬೇಕು. ಪ್ರತಿ ಉತ್ತರದಲ್ಲೂ ‘ಪ್ರಸ್ತುತತೆ’ ಯನ್ನು ಬರೆಯಬೇಕು.
ಉತ್ತರದಲ್ಲಿ ನಿಮ್ಮ ಸ್ವಂತ ಅಭಿಪ್ರಾಯ ಅನಿಸಿಕೆಗಳನ್ನು ನೀಡಬೇಕು.
೧. ಪಂಪಭಾರತ

ಪಂಪಭಾರತದ ಹಳೆಗನ್ನಡ-ಹೊಸಗನ್ನಡ ಪುಸ್ತಕವೊಂದಿದೆ. ಅದರ ಪ್ರಸ್ತಾವನೆ ಅತ್ಯಂತ ಉಪಯುಕ್ತ. ನಂತರದಲ್ಲಿ ಇಡಿ ಪಂಪಭಾರಥವನ್ನು ಘಟನೆಗಳಾಗಿ ವಿಭಾಗಿಸಿ – – ದ್ರೋಣನ ಸಾವು, ಅಶ್ವತ್ಹಾಮ-ಕರ್ಣರ ಜಟಾಪಟಿ, ಕರ್ಣ-ಭೀಷ್ಮರ ಭೇಟಿ ಇತ್ಯಾದಿ – – ಪ್ರತಿ ಘಟನೆಯನ್ನು ನಿಮ್ಮದೇ ಆದ ವಾಕ್ಯಗಳಲ್ಲಿ ವಿಮರ್ಶಾತ್ಮಕವಾಗಿ, ಅಲ್ಲಲ್ಲಿ ಹಳಗನ್ನಡ ವಾಕ್ಯಗಳನ್ನು ಉಲ್ಲೇಖಿಸಿ ಬರೆಯುವ ಕೌಶಲ್ಯ ಬೆಳೆಸಿಕೊಳ್ಳಿ.

ಪಂಪಭಾರತವನ್ನು ಕುಮಾರವ್ಯಾಸ ಭಾರತ ದೊಂದಿಗೆ ಹೋಲಿಕೆ ಮಾಡಬೇಕು.

೨. ಕುಮಾರವ್ಯಾಸ ಭಾರತ

ಕುವೆಂಪು ಅವರು ಕುಮಾರವ್ಯಾಸ ಭಾರತ ಸಂಗ್ರಹಕ್ಕೆ ಬರೆದಿರುವ ‘ತೋರಣನಾಂದಿ’ ಮತ್ತು ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕ ಅನುಕೂಲವಾಗುತ್ತದೆ.

ಇಲ್ಲಿಯೂ ಕೂಡ ಘಟನೆಗಳನ್ನು ವಿಭಾಗಿಸಿ ಅಲ್ಲಿಯ ವಾಕ್ಯಗಳನ್ನು ಉತ್ತರದಲ್ಲಿ ಸೇರಿಸಿ ಕುಮಾರವ್ಯಾಸನ ಗ್ರಾಮ್ಯ ಶೈಲಿ,ರೂಪಕ ಬಳಕೆ ಇತ್ಯಾದಿಗಳನ್ನು ಅವನದೇ ವಾಕ್ಯಗಳನ್ನು ಅಲ್ಲಲ್ಲಿ ಬಳಿಸಿ ಉತ್ತರಿಸಿ. ಪೂರ್ತಿ ಸಾಲನ್ನು ಬರೆಯುವುದು ಸಾಧ್ಯವಿಲ್ಲ. ಆದ್ದರಿಂದ, ಕೆಲವೇ ಕೆಲವು ಹಳಗನ್ನಡ ಪದಗಳನ್ನು ಬಳಸಬಹುದು. ನಿದರ್ಶನ – ಕರ್ಣ ಹೇಳುತ್ತಾನೆ , ‘ಪಾರ್ಥನೆಮ್ಬುವನಾವ ಮಾನಿಸನು ….. ಬಲುಹು ಸಾರಥಿಯಿಂದ.. ರಿಪುಗಳ ಗೆಲುವು ಸಾರಥಿಯಿಂದ….” .; “ಅವನಿಪತಿಗಳ ಸೇವೆಯಿದು ಕಷ್ಟವಲೆ” ಇತ್ಯಾದಿ ಸಣ್ಣ ಸಣ್ಣ ಪದಪುಂಜ ಬಳಸಿ ನಿಮಗೆ ಪಠ್ಯ ತಿಲಿತಿಲಿದಿದೆ ಎಂದು ತೋರಿಸಿಕೊಳ್ಳಿ.

೩. ವಡ್ಡಾರಾಧನೆ

ಜೈನ ತತ್ವಗಳಾದ ಪಂಚಾಣವ್ರತ, ಆಸ್ರವ, ನಿರ್ಜರ, ಇತ್ಯಾದಿ ಪರಿಕಲ್ಪನೆಗಳನ್ನು ಉತ್ತರದಲ್ಲಿ ಬಳಸಿ.

ವಡ್ಡಾರಾಧನೆ ಕಥೆಗಳಿಗೆ ನಕಾಶೆ (chart) ಹಾಕಿ ಎಲ್ಲ ಉಪಕಥೆಗಳ ಸರಣಿ ಮತ್ತು ಪಾತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.

ವಡ್ಡಾರಾಧನೆ ಕಥೆಗಳನ್ನು ಹೊಸಗನ್ನಡ ಕಥೆಗಳು ಮತ್ತು ಜನಪದದ ಕಥೆಗಳೊಂದಿಗೆ ಹೋಲಿಸಿ.

೪. ವಚನಗಳು

ಶ್ರೀ ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲಿಕೆಯ ಚಿದಾನಂದ ಮೂರ್ತಿ ವಿರಚಿತ ‘ವಚನ ಸಾಹಿತ್ಯ’ ಕೃತಿ ಅನುಕೂಲವಾಯಿತು. ಗಿರಡ್ಡಿ ಗೋವಿಂದರಾಜು ಅವರ ‘ವಚನ ವಿನ್ಯಾಸ’ ಕೃತಿ ವಚನ ವಿಶ್ಲೇಷಣೆಗೆ ಹೊಸ ದಿಕ್ಕನ್ನೇ ತೋರಿಸಿತು. (ಅಷ್ಟೇ ಅಲ್ಲ ಈ ಕೃತಿ ಶೈಲಿಶಾಸ್ತ್ರದ ಹಲವು ಪರಿಕಲ್ಪನೆಗಳಾದ ‘ಪುನರಾವರ್ತನೆ’, ‘ಸಮಾoತರತೆ’, ‘ರಚನಸಾಮ್ಯ’ ಇತ್ಯಾದಿ ಪರಿಕಲ್ಪನೆಗಳು ಕೀರ್ತನೆ, ಹಳೆಗನ್ನಡ ಕಾವ್ಯ, ಹೊಸಗನ್ನಡ ಕಾವ್ಯಗಳ ವಿಶ್ಲೆಶನೆಗು ಸಹಾಯಕವಾಯಿತು.

ಕೇವಲ ಬಸವಣ್ಣ, ಅಕ್ಕಮಹಾದೇವಿ, ಜೇಡರ ದಸಿಮಯ್ಯ, ಅಲ್ಲಮ ಪ್ರಭು ವಚನಗಳ ಜೊತೆ ಜೊತೆಗೆ ಅಷ್ಟೊಂದು ಪ್ರಸಿದ್ಧಿಇರದ ವಚನಕಾರರ ವಚನಗಳ ಸಾಲುಗಳನ್ನು ನೆನಪಿನಲ್ಲಿಡಿ. ವಿಶೇಷವಾಗಿ ವಚನಕರ್ಥಿಯರ ವಚನಗಳ ಕುರಿತು ನಿಮಗೆ ತಿಳಿದಿರಬೇಕು. ನಾನು ಸರಿ ಸುಮಾರು ೧೦೦ ವಚನಗಳ ಸಾಲುಗಳನ್ನು ತಿಳಿದಿದ್ದೆ. ವಚನದ ಮೇಲಿನ ಉತ್ತರದಲ್ಲಿ ಕಡ್ಡಾಯವಾಗಿ ಪ್ರಸಿದ್ಧರಲ್ಲದವರ ವಚನಗಳ ಜೊತೆಗೆ ಇತರೆ ವಚನಕಾರರ ವಚನಗಳ ಸಾಲುಗಳನ್ನು ಮತ್ತು ವಚನಕಾರ್ಥಿಯರ ವಚನ ಸಾಲುಗಳನ್ನು ಉಲ್ಲೇಖಿಸುತ್ತಿದ್ದೆ.

ವಚನಗಳನ್ನು ಕೀರ್ತನೆಗಳೊಂದಿಗೆ ಹೋಲಿಸುತ್ತಿದ್ದೆ. ಮತ್ತು ಕೀರ್ತನೆಗಳನ್ನು ವಚನಗಳೊಂದಿಗೆ ಹೋಲಿಸುತ್ತಿದ್ದೆ.

೫. ಕೀರ್ತನೆಗಳು

ಶ್ರೀ ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಮಾಲಿಕೆಯ ಚಿದಾನಂದ ಮೂರ್ತಿ ವಿರಚಿತ ‘ಕೀರ್ತನೆಕಾರರು’ ಕೃತಿ ಅನುಕೂಲವಾಯಿತು ಕೀರ್ತನೆಗಳ ಸಾಲುಗಳನ್ನು ನೆನಪಿನ್ನಲ್ಲಿಡಿ. ಅಂತೆಯೆ ಕೀರ್ತನೆಗಳನ್ನು ವಚನಗಳೊಂದಿಗೆ ಹೋಲಿಸಿ. ಮೇಲೆ ಹೇಳಿದ ಶೈಲಿಶಾಸ್ತ್ರದ ಪರಿಕಲ್ಪನೆಗಳನ್ನು ಇಲ್ಲಿಯೂ ಉಪಯೋಗಿಸಬಹುದು.

೬. ಭರತೇಶ ವೈಭವ

ಭರತೇಶ ವೈಭವಕ್ಕೆ ಕುವೆಂಪು ಅವರು ಬರೆದಿರುವ ಸುಮಾರು ೬೦ ಪುಟಗಳ ಪ್ರಸ್ತಾವನೆ ಮತ್ತು ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕ ಅನುಕೂಲ.
ಅಂತೆಯೇ ಶಿವರುದ್ರಪ್ಪ ಅವರ ‘ಯೋಗ-ಭೋಗ ತೊಡಕು’ ವಿಮರ್ಶಾ ಲೇಖನ ಮತ್ತು
ಅದಕ್ಕೆ ವಿರುದ್ದವಾಗಿ ಜಯಚಂದ್ರ ಅವರು ಬರೆದಿರುವ ‘ರತ್ನಾಕರನಲ್ಲಿ ಯೋಗ-ಬೋಗದ ತ್ಹೊದಕಿದೆಯೇ?’ ವಿಮರ್ಶೆ ಅನುಕೂಲವಾಗುತ್ತವೆ.
ಚಂದ್ರಶೇಕರ ಕಂಬಾರರ ದೇಶಿಯ ಚಿಂತನೆ ಪುಸ್ತಕದಲ್ಲಿನ ಲೇಖನ,
ಡಾ. ಕುಮುದಾ ವಿರಚಿತ ‘ಚಿಂತನ’ ಪುಸ್ತಕದಿಂದ ಆಯ್ದ “ಭರತೇಶ ವೈಭವದ ಭರತ-ಬಾಹುಬಲಿ ಪ್ರಸಂಗ” ಲೇಖನ;
ಡಾ. ಡಿ. ಲಿಂಗಯ್ಯ ವಿರಚಿತ ‘ಕಾವ್ಯಪರುಷ’ ಸಂಕಲನದ ‘ರತ್ನಾಕರನ ಶೈಲಿ’ ಲೇಖನ.
ಮೇಲಿನ ಪುಸ್ತಕಗಳು ಬೆಂಗಳೂರು ವಿಜಯನಗರದ ಆರ್.ಪಿ.ಸಿ. ಬಡಾವಣೆಯ ಗ್ರಂಥಾಲಯದಲ್ಲಿ ಲಭ್ಯವಿವೆ.

(ವಿರಾಮ – ನನ್ನ ಒಂದು ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸ್ಸಾಗುತ್ತಿದೆ. ಪ್ರಥಮ ಪ್ರಯತ್ನದಲ್ಲಿ ಸಂದರ್ಶನಕ್ಕೆ ಕರೆ ಬಾರದಿದ್ದಾಗ ಕನ್ನಡ ಸಾಹಿತ್ಯದಲ್ಲೇ ಕಡಿಮೆ ಅಂಕ ಬಂದಿರಬಹುದೆಂದು ಭಾವಿಸಿ ಕನ್ನಡ ಸಾಹಿತ್ಯದಲ್ಲಿ ಮುಂದಿನ ಬಾರಿ ಅತಿ ಹೆಚ್ಚು ಅಂಕಗಳನ್ನು ಪಡೆಯಲೇಬೇಕೆಂಬ ಧೃಡಚಿತ್ತದಿಂದ ಮೇಲೆ ಹೇಳಿದ ಗ್ರಂಥಳಯದಲ್ಲಿನ ‘ಎಲ್ಲ’ ವಿಮರ್ಶೆ ಪುಸ್ತಕಗಳ ಪರಿವಿಡಿಯನ್ನು ಅವಲೋಕಿಸಿ, ಸಿಲಬುಸ್ ಗೆ ಸಂಬಂದಿಸಿದ ಲೇಖನಗಳಿವೆಯೇ ಎಂದು ಪರಿಶೀಲಿಸಿ, ಅಂತಹ ಲೇಖನ ಇದ್ದಲ್ಲಿ ಅದರ ಸಾರಾಂಶವನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ನಂತರ ಅಂಕಗಳು ಬಿಡುಗಡೆಯಾದ ಮೇಲೆ ನನ್ನ ಎಣಿಕೆ ತಪ್ಪಾಗಿತ್ತು. ಕನ್ನಡದಲ್ಲಿ ನಾನು ಸರಾಸರಿಗಿಂತ ಹೆಚ್ಚಿನ ಅಂಕ ಪಡೆದಿದ್ದೆ. ಒಂದು ರೀತಿಯಲ್ಲಿ ನಾನು ಕಡಿಮೆ ಅಂಕ ಪಡೆದಿರಬಹುದು ಎಂಬ ತಪ್ಪು ಎಣಿಕೆ ನನಗೆ ವರವಾಯ್ತು. ನನ್ನ ಪರಿಶ್ರಮಕ್ಕೆ ಕೊನೆಗೂ ಪ್ರತಿಫಲ ದಕ್ಕಿದೆ. ಮೆಹನತ್ಕಾಫಲ್ ಹಮೇಶ ಮೀಠಹಿಹೋತಾ ಹೈ ಎನ್ನುವ ಹಿಂದಿಯ ಉಕ್ತಿ ಖಂಡಿತಾ ಸತ್ಯ.)

ಉರಿಲಿಂಗದೇವ, ಗಜೇಶ ಮಸಣಯ್ಯರ ವಚನಗಳಲ್ಲಿ ಕಾಮದ ಸಂಕೇತಗಳನ್ನೇ ಬಳಸಿಕೊಂಡು ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ. ಆ ವಚನಗಳನ್ನು ‘ಯೋಗ-ಭೋಗ ಸಮನ್ವಯ’ಕ್ಕೆ ಹೋಲಿಸಬಹುದು. ನಂಬಿಯಣ್ಣನ ರಗಳೆಯನ್ನು ಸಹ ಇದಕ್ಕೆ ಹೋಲಿಕೆ ಮಾಡಬಹುದು.

೭. ನಂಬಿಯಣ್ಣನ ರಗಳೆ

ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕ ಅನುಕೂಲ.
ವಸಿಷ್ಠ ಅವರ ನಂಬಿಯಣ್ಣನ ರಗಳೆಯ ಹೊಸಗನ್ನಡ ರೂಪ ಕಥೆಯ ಸ್ವರೂಪವನ್ನು ತಿಳಿಸುವುದು ಮಾತ್ರವಲ್ಲದೆ ನಿಮಗೆ ಅತ್ಯವಶ್ಯಕವಾದ ರಗಳೆಯಲ್ಲಿನ ಸಾಲುಗಳನ್ನು ಹೆಕ್ಕಿ ತೆಗೆಯಲು ಸಹಕಾರಿ.
ಡಾ. ಎಸ್.ವಿದ್ಯಾಶಂಕರ ಅವರ “ನಂಬಿಯಣ್ಣ: ಒಂದು ಅಧ್ಯಯನ” ಪುಸ್ತಕ ಸಹಾಯವಾಯಿತು (ಈ ಪುಸ್ತಕವು ಸಹ ಮೇಲೆ ಹೇಳಿದ ಗ್ರಂಥಾಲಯದಲ್ಲೇ ಸಿಕ್ಕಿದ್ದು.) – ಈ ಪುಸ್ತಕದಲ್ಲಿ ನಂಬಿಯಣ್ಣನರಗಳೆಗೆ ನೀಡಬಹುದಾದ ಹೋಲಿಕೆಗಳು ಲಭ್ಯವಾದವು. ಅಷ್ಟೇ ಅಲ್ಲದೆ ಮೂಲ ಕೃತಿಯಿಂದ ಹರಿಹರ ಮಾಡಿಕೊಂಡಿರುವ ಮಾರ್ಪಾಡುಗಳ ಮಾಹಿತಿ ಲಭ್ಯವಾಯಿತು.
ಈ ರಗಳೆಯನ್ನು ಭರತೇಶ ವೈಭವದೊಡನೆ ಹೋಲಿಸಬಹುದು.

೮. ಹೊಸಗನ್ನಡ ಕವಿತೆ

ಎಲ್ಲಾಕವಿತೆಗಳನ್ನು ಓದಿ ಅರ್ಥೈಸಿಕೊಳ್ಳುವುದು ಕಷ್ಟಸಾದ್ಯ. ಹಾಗಾಗಿ ತುಂಬಾ ಪ್ರಮುಖ ಕವಿಗಳ ಕವಿತೆಗಳ ಸಾರಾಂಶ ಬರೆದು ತಯಾರಾಗಿ. ಅಕ್ಕ ಐಎಎಸ್ ಅವರ ನೋಟ್ಸ್ ಅಲ್ಲಿ ಹಲವು ಕವಿತೆಗಳ ಸಾರಾಂಶ ಲಭ್ಯವಿದೆ. ಯಾರಾದರು ಕನ್ನಡ ಭೋದಕರು ಅಥವಾ ಸ್ನಾತಕ ವಿಧ್ಯಾರ್ಥಿಗಳ ಸಹಾಯ ಪಡೆದು ಅತಿ ಮುಖ್ಯ ಕವಿತೆಗಳ ಸಾರಾಂಶ ಮತ್ತು ಆ ಕವಿತೆಯಲ್ಲಿ ಸಾಕಾರಗೊಂಡಿರುವ ಚಳುವಳಿಯ ಲಕ್ಷಣಗಳನ್ನು ಟಿಪ್ಪಣಿ ರೂಪದಲ್ಲಿ ಮಾಡಿಟ್ಟುಕೊಳ್ಳಿ.

೯. ಬೆಟ್ಟದ ಜೀವ

ಹೆಚ್ಚಾಗಿ ಹೇಳುವುದು ಏನು ಇಲ್ಲ. ಆದರೆ ಶೇಷಗಿರಿರಾಯರ ‘ಹೊಸಗನ್ನಡ ಸಾಹಿತ್ಯ ಚರಿತ್ರೆ’ ಕೃತಿಯಲ್ಲಿನ ಕಾರಂತರ ಕಾದಂಬರಿ ಕುರಿತ ವಿಚಾರವನ್ನು ವಿಮರ್ಶೆಗೆ ಬಳಸಿ. ವೆಂಕಟೇಶಪ್ಪ ಸರ್ ಕೊಟ್ಟ ಟಿಪ್ಪಣಿಗಳು ಬಲು ಉಪಯುಕ್ತ. ದಯವಿಟ್ಟು ಕಾದಂಬರಿಯನ್ನು ಓದಿ, ಅದರ ಭಾಷೆ, ಶೈಲಿ ಇತ್ಯಾದಿಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳಿ.

೧೦. ಮಾಧವಿ

ಪಾತ್ರಗಳ ನಾಮಧೆಯಗಳನ್ನು ನೆನಪಿನಲ್ಲಿಡಿ. ವೆಂಕಟೇಶಪ್ಪ ಸರ್ ಟಿಪ್ಪಣಿಗಳು ಉಪಯುಕ್ತ. ಈ ಕಾದಂಬರಿಯನ್ನು ಸ್ತ್ರೀ ಕೇಂದ್ರಿತ ವಚನ, ಸ್ತ್ರೀವಾದಿ ವಿಮರ್ಶಕರಾದ ಸಿಮೊನ್ ದ ಬೊವ ಮತ್ತು ಇತರರ ವಿಚಾರಧಾರೆಗಳನ್ನೂ ಹೋಲಿಕೆಗೆ ಬಳಸಿ. ಪ್ರಸ್ತುತತೆಯನ್ನು ಬರೆಯುವಾಗ ಸ್ತ್ರೀ ಮೇಲೆ ಇಂದಿಗೂ ಜರಗುತ್ತಿರುವ ಅತ್ಯಾಚಾರ, ಶೋಷಣೆಯ ಬೆಳಕಿನಲ್ಲಿ ‘ದೆಹಲಿಯ ಸಾಮೂಹಿಕ ಅತ್ಯಾಚಾರವನ್ನು ಸಹ ಉದ್ಧರಿಸಬಹುದು.

೧೧. ಒಡಲಾಳ

ಶ್ರೀ ಎಚ್. ಕೆ. ವೆಂಕಟೇಶ್ ವಿರಚಿತ “ನೋವು ನಲಿವಿನ ಹಾಡು” ಪುಸ್ತಿಕೆಯಿಂದ ಆಯ್ದ “ಯಾರ ಜಪ್ತಿಗೂ ಸಿಗದ ನವುಲುಗಳು” ಲೇಖನ ಉಪಯುಕ್ತ. (ಮೇಲೆ ಹೇಳಿದ ಗ್ರಂಥಾಲಯದಲ್ಲಿ ಲಭ್ಯ)
ವಚನಗಳನ್ನು, ದಲಿತ ಸಾಹಿತ್ಯದ ಕವನಗಳನ್ನು, ಶೂದ್ರ ತಪಸ್ವಿಯನ್ನು, ಮಾರ್ಕ್ಸವಾದಿ ವಿಮರ್ಶಕರ ಅಭಿಪ್ರಾಯಗಳು ಉತ್ತರದ ಗುಣಮಟ್ಟ ಹೆಚ್ಚಿಸಲು ಸಹಕಾರಿ.

೧೨. ತುಘಲಕ್

ಮೈಸೂರು ವಿಶ್ವವಿದ್ಯಾಲಯದ ಎಂಎ (ಕನ್ನಡ) ಪುಸ್ತಕ ಅನುಕೂಲ.
ಶ್ರೀ ಕೃಷ್ಣಮೂರ್ತಿ ಚೆಂದುರ್ ಸಂಪಾದಿಸಿರುವ “ಗಿರೀಶ್ ಕಾರ್ನಾಡರ ನಾಟಕಗಳು” ವಿಮರ್ಶಾ ಸಂಕಲನದಲ್ಲಿ ಈ ನಾಟಕಕ್ಕೆ ಸಂಬಂದಿಸಿದ ಪರೀಕ್ಷೆಯಲ್ಲಿ ಉತ್ತರಿಸಲು ಸಹಕಾರಿಯಾದ ವಿಮರ್ಶೆಗಳು ಲಭ್ಯವಿವೆ.
ಹಲವು ವಿಮರ್ಶೆಗಳು ತುಘಲಕ್ ನ್ನು ನೆಹರು ಗೆ ಹೋಲಿಸಲಾಗಿದೆ. ದಯವಿಟ್ಟು ಉತ್ತರದಲ್ಲಿ ಅದನ್ನು ಬರೆಯಬೇಡಿ. ವಾಸ್ತವತೆಯ ಗಂಧವಿಲ್ಲದ ಮಹತ್ವಾಕಾಂಕ್ಷೆಯ ನಾಯಕರುಗಳ ಲೇವಡಿ ಅಥವಾ ಟೀಕೆ ಎಂದಷ್ಟೆ ನಮೂದಿಸಿ. ಸಾಧ್ಯವಾದಲ್ಲಿ ತುಘಲಕ್ ಪಾತ್ರವನ್ನು ಮನೋವೈಜ್ಞಾನಿಕ ದೃಷ್ಟಿಯಿಂದಲೂ ವಿವೇಚಿಸಿ (ಆಪ್ತ ಮಿತ್ರ ನಾಗವಲ್ಲಿ ಯನ್ನು ನೆನಪಿಸಿಕೊಳ್ಳಿ… ಹಾ ಹಾ ಹಾ…)

೧೩. ಶೂದ್ರ ತಪಸ್ವಿ

ವೆಂಕಟೇಶಪ್ಪ ಸರ್ ನೀಡಿದ ಟಿಪ್ಪಣಿಗಳು ಅದ್ಭುತ. ಸಾಧ್ಯವಾದಷ್ಟು ಕುವೆಂಪು ಬಳಸಿರುವ ನಡುಗನ್ನಡದ ಸಂಬಾಷಣೆಯನ್ನು ಉತ್ತರದಲ್ಲಿ ಬಳಸಿ. ದಲಿತ ಸಾಹಿತ್ಯ, ವಚನ ಸಾಹಿತ್ಯ, ಮಾರ್ಕ್ಸ್ವಾದಿ ವಿಮರ್ಶೆಯನ್ನ ಹೋಲಿಕೆಗೆ ಬಳಸಿ.

೧೪. ದೇವರು

ಪುಸ್ತಕವನ್ನು ಓದಿ ಮೂರ್ತಿರಾಯರ ವಿಚಾರಧಾರೆಯನ್ನು ಅರಿತುಕೊಳ್ಳಿ. ಪುಸ್ತಕದಲ್ಲಿ ಅವರು ನೀಡಿರುವ ಉದಾಹರಣೆಗಳನ್ನು ಒಂದೆಡೆ ಪಟ್ಟಿ ಮಾಡಿ. ನಂತರ ಪ್ರಶ್ನೆಯನ್ನು ನಿಮ್ಮದೇ ವಾಕ್ಯದಲ್ಲಿ ಸ್ವಂತವಾಗಿ ಉತ್ತರಿಸಿ.

೧೫. ಕನ್ನಡ ಸಣ್ಣ ಕಥೆಗಳು

ಎಲ್ಲ ಕಥೆಗಳನ್ನು ಓದಿ ನೀವೇ ಒಂದು ಸ್ವಂತ ನೋಟ್ಸ್ ಮಾಡುವುದು ಒಳ್ಳೆಯದು. ಪ್ರತಿ ಕಥೆಯನ್ನು ಕೆಳಗಿನ ಅಂಶಗಳ ಹಿನ್ನಲೆಯಲ್ಲಿ ವಿಶ್ಲೇಷಿಸಿ.

ಕಥೆಯ ಸಾರಾಂಶ
ಸಾಕಾರಗೊಂಡಿರುವ ಚಳುವಳಿಯ ಲಕ್ಷಣಗಳು
ಭಾಷೆಯ ಸ್ವರೂಪ
ಶೈಲಿ
ಕಾವ್ಯ ಮೀಮಾಂಸೆ ಅಂಶಗಳು
ಜನಪದ ಕಥೆಗಳೊಂದಿಗೆ ಹೋಲಿಕೆ
ವಡ್ಡಾರಾಧನೆ ಕಥೆಗಳೊಂದಿಗೆ ಹೋಲಿಕೆ
ಪಾತ್ರಸೃಷ್ಟಿ
ಪ್ರಸ್ತುತತೆ
ಒಬ್ಬರಿಗೆ ಎಲ್ಲಾ ಕಥೆಗಳ ಮೇಲೆ ನೋಟ್ಸ್ ಮಾಡಲು ಸಾಧ್ಯವಾಗದಿದ್ದರೆ, ಇತರೆ ಆಕಾಂಕ್ಷಿಗಳೋಡನೆ ಸೇರಿ ಪ್ರತಿಯೊಬ್ಬರು ಕೆಲವು ಕಥೆಗಳ ನೋಟ್ಸ್ ಮಾಡಿ ಹಂಚಿಕೊಳ್ಳಿ.

೧೫. ಜಾನಪದ ಸಾಹಿತ್ಯ

ಶ್ರೀ ಜಿನೇಂದ್ರ ಸರ್ ಅವರು ನೀಡಿದ ನೋಟ್ಸ್ ಬಹಳ ಅನುಕೂಲವಾಯಿತು. ಸಿಲಬಸ್ ನಲ್ಲಿರುವ ಪುಸ್ತಕ ದಲ್ಲಿನ ಪ್ರಸ್ತಾವನೆಯನ್ನು ಓದಿ ಟಿಪ್ಪಣಿ ಮಾಡಿಕೊಳ್ಳುವುದು ಒಳ್ಳೆಯದು. ಉದಾಹರಣೆಗೆ ನೀಡಲು ವಿವಿಧ ರೀತಿಯ ಗೀತೆಗಳು, ಗಾದೆಗಳು, ಒಗಟುಗಳು, ಕಥೆಗಳನ್ನು ಓದಿ ತಿಳಿದುಕೊಳ್ಳುವುದು ಒಳ್ಳೆಯದು.ಜನಪದವನ್ನು ಕಡೆಗಣಿಸಬೇಡಿ.

ವಿಮರ್ಶಾತ್ಮಕ ಉತ್ತರ

ತುಲನಾತ್ಮಕವಾಗಿರಬೇಕು
ಕಾವ್ಯ ಮೀಮಾಂಸೆಯ ಅಂಶಗಳನ್ನು ಗುರುತಿಸುವುದು
ವಿಮರ್ಶೆಯ ಪರಿಕಲ್ಪನೆಗಳನ್ನು ಗುರುತಿಸುವುದು
ನಿಮ್ಮ ಅಭಿಪ್ರಾಯ – ಅನಿಸಿಕೆ ನಮೂದಿಸಬೇಕು
ಪ್ರಸ್ತುತೆಯನ್ನು ಬರೆಯಬೇಕು (GS ವಿಷಯಗಳನ್ನು ಲಿಂಕ್ ಮಾಡಿ)
.

Saturday 3 December 2016

82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬರಗೂರರ ಭಾಷಣ

82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ರಾಯಚೂರು
ದಿನಾಂಕ : 2, 3 ಮತ್ತು 4 - ಡಿಸೆಂಬರ್ 2016
ಸಮ್ಮೇಳನಾಧ್ಯಕ್ಷರ ಭಾಷಣ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ
ಎಲ್ಲರಿಗೂ ನಮಸ್ಕಾರ,
ಈ ಸಮ್ಮೇಳನವನ್ನು ಉದ್ಘಾಟಿಸಿದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯನವರೆ,                      ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರೆ, ಕಾರ್ಯಕಾರಿ ಸಮಿತಿ ಮತ್ತು ಸ್ವಾಗತ ಸಮಿತಿಯ ಸಮಸ್ತರೆ, ಇಲ್ಲಿ ನೆರೆದಿರುವ ಮನಸ್ಸಿನ ಮನುಷ್ಯಬಂಧುಗಳೆ-         
ರಾಯಚೂರಿನಲ್ಲಿ ನಡೆಯುತ್ತಿರುವ ಈ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ                 ನನ್ನನ್ನು ಆಯ್ಕೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರು, ಪದಾಧಿಕಾರಿಗಳು,  ಜಿಲ್ಲಾಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸಮಸ್ತರಿಗೆ ನಾನು ಆಭಾರಿಯಾಗಿದ್ದೇನೆ. ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆಂಬ ಮಾಹಿತಿ ಸಿಕ್ಕ ಕೂಡಲೇ ನನ್ನ ನೆನಪಿಗೆ ಬಂದವರು- ನನಗೆ ಅಕ್ಷರ ಕಲಿಸಿದ ಗುರುಗಳು ಮತ್ತು ಶಾಲೆಗೆ ಸೇರಿಸಿದ  ತಾಯಿ, ತಂದೆ ಆನಂತರ ನನ್ನನ್ನು ಬೆಳೆಸಿದ ಪ್ರಗತಿಪರ ಚಳವಳಿಗಳು, ಸಾರ್ವಜನಿಕ ಬದುಕಿನ ಬವಣೆಗಳ ಮುಖಾಮುಖಿಗೆ ಬೆನ್ನೆಲುಬಾಗಿ ನಿಂತ ಕುಟುಂಬವರ್ಗ ಮತ್ತು ಸ್ನೇಹಿತರು. ಒಂದೇ ವಾಕ್ಯದಲ್ಲಿ ಹೇಳುವುದಾದರೆ ‘ಸ್ನೇಹಿತರೇ ನನ್ನ ಸಂಪತ್ತು’. ಈ ಎಲ್ಲರಿಗೂ ನನ್ನ ಮೊದಲ ನಮನಗಳು.
ನನ್ನ ಅಧಿಕೃತ ಭಾಷಣವನ್ನು ಒಂದು ಸಂಕಟದ ಸಂವೇದನೆಯೊಂದಿಗೆ ಆರಂಭಿಸುತ್ತೇನೆ. ಸಂವೇದನೆ ಎಂಬ ಪದದಲ್ಲೇ `ವೇದನೆ’ಯಿದೆ. ವೇದನೆ ಮತ್ತು ಸಂವೇದನೆ ಒಂದಾದ ಕಾಲಘಟ್ಟ ನಮ್ಮದು. ಅಷ್ಟೇಕೆ ವೇದನೆಯೇ ಸಂವೇದನೆಯಾಗುತ್ತಿರುವ ವೈರುಧ್ಯ ವಲಯವೂ ನಮ್ಮದು. ಅಂದು
ಆಗಸ್ಟ್ 30-2015 ರ ಬೆಳಗ್ಗೆ. ಸಾಂಸ್ಕøತಿಕ ಲೋಕ ದಿಗ್ಭ್ರಮೆಗೊಂಡು ಮೂಕವಾದ ಮುಂಜಾವು. ಅದಕ್ಕೆ ಕಾರಣ ಎಂ.ಎಂ. ಕಲಬುರ್ಗಿಯವರ ಸಾವು.  ಕಲಬುರ್ಗಿಯವರನ್ನು ಕೊಂದ ಹಂತಕರನ್ನು ಶೀಘ್ರ ಪತ್ತೆ ಹಚ್ಚಿ ನಿಧಾನದ್ರೋಹದ ಕಳಂಕದಿಂದ ಮುಕ್ತವಾಗಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಭಿನ್ನಾಭಿಪ್ರಾಯಗಳನ್ನು  ಬಲಿಪೀಠವಾಗಿಸಿದ ಆ ದಾರುಣದ ದಿನದ ನೆನಪು ನುಗ್ಗಿ ಬರುತ್ತಿರುವಾಗ ಎಂ.ಎಂ. ಕಲಬುರ್ಗಿಯವರ ಚೇತನಕ್ಕೆ ನನ್ನ ನಮನ ಸಲ್ಲಿಸಿ ಮಾತು ಮುಂದುವರೆಸುತ್ತೇನೆ.     
ನನ್ನ ಮುಂದೆ ಕುವೆಂಪು ಅವರ ಮಲೆನಾಡು ಇರಲಿಲ್ಲ. ಬೇಂದ್ರೆಯವರ ಸಾಧನಕೇರಿಯಿರಲಿಲ್ಲ. ಶಿವರಾಮಕಾರಂತರ ಕಡಲು ಇರಲಿಲ್ಲ. ಕೆ.ಎಸ್.ನ. ಅವರ ಮೈಸೂರು ಮಲ್ಲಿಗೆಯಿರಲಿಲ್ಲ. ಪು.ತಿ.ನ. ಅವರ ಮೇಲುಕೋಟೆಯಿರಲಿಲ್ಲ. ಬದುಕಿನ ಬೇಟೆಯಲ್ಲಿ ಬೆಳೆಯುತ್ತ ಬಂದ ಅನೇಕರಲ್ಲಿ ನಾನೂ ಒಬ್ಬ. ಈ `ಬೇಟೆ ಬದುಕಿನಲ್ಲಿ’ ಶ್ರೀಗಂಧದ ಮರಗಳಿರಲಿಲ್ಲ. ಜಾಲಿಯ ಮರಗಳಿದ್ದವು; ಜೊತೆಗೆ ಹೊಂಗೆ ಹುಣಸೆಮರಗಳಿದ್ದವು. ಕೋಗಿಲೆಯಿರಲಿಲ್ಲ ಕಾಗೆಗಳಿದ್ದವು, ಗುಬ್ಬಚ್ಚಿಗಳಿದ್ದವು. ಮುಗಿಲು ಮುನಿದು ಬಿರುಕುನೆಲದ ಕೆರೆಗಳಿದ್ದವು. ನಳನಳಿಸುತ್ತಲೇ ಕೂಳೆ ಹೊಲಗಳಾದ ಜಮೀನುಗಳಿದ್ದವು. ಹೆಡೆ ಎತ್ತಿದ ಹಾದಿಗಳಿದ್ದವು. ಹತ್ತಿರದಲ್ಲೇ ಊದುವ ಪ್ರೀತಿಪುಂಗಿಗಳಿದ್ದವು.  ಚಿತ್ತದಲ್ಲಿ ಬಿತ್ತಿ ಬೆಳೆಯುವ  ಭಾವನೆಗಳಿದ್ದವು. ಬರವಿಲ್ಲದ ಭೂಮಿಭಾವನೆಗಳಿಂದ ಬೆಳೆಯುತ್ತಲೇ ಚಿಂತನೆಯ ಚೌಕಬಾರದಲ್ಲಿ  ಕೊನೆಯ ಮನೆ ಸೇರಿ ಗೆಲ್ಲುವ ಆತ್ಮವಿಶ್ವಾಸವನ್ನು ಪಡೆದ ಬದುಕು ನನ್ನದು. ಇರುವಲ್ಲಿ ಮತ್ತು ಇರುವುದರಲ್ಲಿ ನಮ್ಮ ಸೃಜನಶೀಲತೆಯನ್ನು ಬೆಳೆಸಿಕೊಳ್ಳುವ ಸಂಕಲ್ಪ ನಮ್ಮದಾಗಬೇಕೆಂದು ನಂಬಿದವನು ನಾನು.  ಸೃಜನಶೀಲತೆಗೆ ಬಡವ-ಬಲ್ಲಿದ ಎಂಬ ಭೇದವಿಲ್ಲ. ಆದ್ದರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷನಾಗಿರುವ ಈ ಸಂದರ್ಭದಲ್ಲಿ ನಾನು ಹೇಳುವುದಿಷ್ಟೆ: ಈ ಗೌರವ ನನ್ನಂತಹ ಅಸಂಖ್ಯಾತ ಆತ್ಮವಿಶ್ವಾಸಿಗಳಿಗೆ ಸಲ್ಲುವ
ಗೌರವ ; ಇಲ್ಲಿ ಅಧ್ಯಕ್ಷನಾದವನು `ನಾನು’ `ಅಲ್ಲ-`ನಾವು’. ಈ ನಾವುಗಳ ಸಂಕೇತವಾಗಿ `ನಾನು’  ಇಲ್ಲಿದ್ದೇನೆ; ನಾನು ಅಧ್ಯಕ್ಷನಾಗಿ ಇಲ್ಲಿರುವುದನ್ನು ಕಂಡು, ಕೇಳಿ ಸಂಭ್ರಮಿಸುವ ಸಮಸ್ತರೂ ಅಧ್ಯಕ್ಷರೇ ಎಂದು ಭಾವಿಸುತ್ತೇನೆ.
ಹೈದರಾಬಾದ್ ಕರ್ನಾಟಕವೆಂದು ಕರೆಯಲ್ಪಡುತ್ತಿರುವ ಕರ್ನಾಟಕದ ಈ ವಲಯದ ರಾಯಚೂರಿಗೆ ವಿಶಿಷ್ಟ ಇತಿಹಾಸವಿದೆ. ಕ್ರಿ.ಪೂ. 300ರಲ್ಲಿ ಅಶೋಕನ ಆಳ್ವಿಕೆಗೆ ಒಳಪಟ್ಟಿತ್ತೆಂದು ಉಲ್ಲೇಖವುಳ್ಳ ಮಸ್ಕಿಶಾಸನವು ಅಶೋಕನನ್ನು ದೇವನಾಂಪ್ರಿಯ, ಪ್ರಿಯದರ್ಶಿ ಅಶೋಕ ಎಂದು ಕರೆದ ಆರಂಭಿಕ ದಾಖಲೆಯೆಂದು ಹೇಳಲಾಗುತ್ತಿದೆ. ಶಾಂತಿಪ್ರಿಯ ಅಶೋಕನ ಶಾಸನವುಳ್ಳ ರಾಯಚೂರು ಸರ್ವದರ್ಮ ಸಮನ್ವಯದ ನೆಲೆಯೂ ಆಗಿದೆ. ಕಲ್ಯಾಣ ಕ್ರಾಂತಿಯ ಸಂದೇಶವನ್ನು ಪ್ರಸಾರಗೊಳಿಸುವ ಕಾರ್ಯದಲ್ಲಿ ರಾಯಚೂರು ಜಿಲ್ಲೆಯ ಪಾತ್ರ ಪ್ರಮುಖವಾಗಿದೆ. ‘ಕಾಯಕವೇ ಕೈಲಾಸ’ವೆಂಬ ಮಾತನ್ನು ಮೊದಲು ಬಳಸಿದ ಆಯ್ದಕ್ಕಿ ಮಾರಯ್ಯ ಈ ಜಿಲ್ಲೆಯ ವಚನಕಾರ. ಸಾಹಿತ್ಯ, ಸಂಗೀತ, ಚಿತ್ರಕಲೆಯಲ್ಲಿ ಅಪೂರ್ವ ಸಾಧಕರನ್ನು ಪಡೆದ ರಾಯಚೂರಿನ ಸಾಧಕರ ಪಟ್ಟಿ ದೊಡ್ಡದು ಪ್ರಸಿದ್ಧಿಯೂ ದೊಡ್ಡದು. (ಹೀಗಾಗಿ ನಾನು ಹೆಸರುಗಳನ್ನು ಪಟ್ಟಿಮಾಡಿಲ್ಲ)
ಹೈದರಾಬಾದ್ ಕರ್ನಾಟಕ ವಲಯವು ನಿಜಾಮರ ಆಳ್ವಿಕೆಯಲ್ಲಿದ್ದುದರಿಂದ ಇಲ್ಲಿ ಉರ್ದುವಿನ ಪ್ರಭಾವ ಸ್ವಾಭಾವಿಕವಾಗಿ ಹರಡಿಕೊಂಡಿದೆ. ಜೊತೆಗೆ ಗಡಿಭಾಗದ ಭಾಷೆಗಳ ಪ್ರಭಾವವೂ ಇದೆ. ಇದು ಹೋರಾಟಗಳ ಭೂವಲಯವೂ ಹೌದು. ನಿಜಾಮರ ವಿರುದ್ಧ ನಡೆದ ಕಾರ್ಯಾಚರಣೆಯಿಂದ 1948ರ ಸೆಪ್ಟಂಬರ್‍ನಲ್ಲಿ ಸ್ವತಂತ್ರವಾದ ಈ ಭೂಭಾಗದಲ್ಲಿ ರೈತ ಹೋರಾಟಗಳೂ ಇದ್ದವು. ನಿಜಾಮರ ದಮನದ ಜೊತೆಗೆ ರೈತ ಹೋರಾಟಗಳ ದಮನವೂ ನಡೆದ ವಿಪರ್ಯಾಸಕ್ಕೆ ತೆಲಂಗಾಣವನ್ನು ಒಳಗೊಂಡ ಈ ಭೂಭಾಗ ಸಾಕ್ಷಿಯಾದದ್ದು ಈಗ ಇತಿಹಾಸ. ಇಷ್ಟಾದರೂ ಇದು ಸೌಹಾರ್ದ ಸಂಸ್ಕøತಿಯ ಬೀಡು. ಸೂಫಿ ಸಂತರು ಮತ್ತು ತತ್ವ ಪದಕಾರರ ಪರಂಪರೆಯುಳ್ಳ ಭೂಮಿ. ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವು ಸೌಹಾರ್ದ ಸಂಸ್ಕøತಿಯ ವಿಸ್ತರಣೆಗೆ ಕಾರಣವಾಗಲಿ, ಎಂದು ಹಾರೈಸುತ್ತೇನೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವೆಂದರೆ ನೆರೆದ ಜನಕ್ಕೆ ಮತ್ತು ನಾಡಿಗೆ  ಕೊಡುವ ಸಂದೇಶವೆಂದು ತಿಳಿಯುತ್ತ ಬರಲಾಗಿದೆ. ಜನರು, ಸಾಹಿತಿಗಳ ಚರ್ಚೆ, ಚಿಂತನೆಗಳ ಮೂಲಕ ಬೌದ್ಧಿಕ ಬೆಳಕು ಪಡೆಯಲು ಬರುತ್ತಾರೆಂದೂ ಸಮ್ಮೇಳನದ ಚಿಂತನೆಗಳಿಂದ ಒಂದಿಷ್ಟು ಕಲಿಯುತ್ತಾರೆಂದೂ ಕಲಿಯಬೇಕೆಂದೂ ಆಶಿಸಲಾಗಿದೆ. ಇದು ನಿಜವಾದ ಆಶಯವೇ ಇರುಬಹುದು. ಆದರೆ ನನಗನ್ನಿಸುತ್ತದೆ: ಇಲ್ಲಿ ನೆರೆದಿರುವ ನೀವು ನಮ್ಮಿಂದ ಕಲಿಯುವುದಲ್ಲ. ವೇದಿಕೆಯ ಮೇಲಿರುವ ನಾವು ನಿಮ್ಮಿಂದ  ಕಲಿಯಬೇಕು. ನೀವು  ನಮ್ಮನ್ನು ನೋಡುವುದು ಮುಖ್ಯವಲ್ಲ; ನಾವು ನಿಮ್ಮನ್ನು ನೋಡುವುದು ಮುಖ್ಯ. ನಾವು  ನಿಮ್ಮನ್ನು ನೋಡುತ್ತಲೇ ನೀವಾಗುವುದು, ನೀವು ನಮ್ಮನ್ನು ನೋಡುತ್ತಲೇ  ನಾವಾಗುವುದು, ಹೀಗೆ ಪರಸ್ಪರ ಪ್ರವೇಶ ಪ್ರಕ್ರಿಯೆಯಲ್ಲಿ ತೊಡಗುವುದು ಮುಖ್ಯವೆಂದು ನಾನು ತಿಳಿದಿದ್ದೇನೆ. ಕನ್ನಡದ ಹೆಸರಲ್ಲಿ, ಕರ್ನಾಟಕದ ಹೆಸರಲ್ಲಿ, ಸಾಹಿತ್ಯಾಸಕ್ತಿಯಲ್ಲಿ ಇಲ್ಲಿ ನೆರೆದಿರುವ ಈ ಬಹು ದೊಡ್ಡ ಸಮೂಹವು ವೇದಿಕೆಯಲ್ಲಿರುವವರಿಗೊಂದು ವಿವೇಕದ ಎಚ್ಚರ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಮ್ಮಿಂದ ನೀವು ಕಲಿಯುವುದೆಷ್ಟೆಂದು ಲೆಕ್ಕ ಹಾಕುವುದರ ಬದಲು ನಿಮ್ಮಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ತಿಳಿಯಬೇಕಿದೆ. ಒಂದು ಸಮ್ಮೇಳನಕ್ಕೆ ಇಷ್ಟೊಂದು ಅಪಾರ  ಸಂಖ್ಯೆಯಲ್ಲಿ ಸೇರಿದ್ದಾರಲ್ಲ,  ಇವರ ವಿಶ್ವಾಸಾರ್ಹತೆಗೆ ಧಕ್ಕೆ ತರಬಾರದು ಎಂಬ  ಎಚ್ಚರ  ನಮಗಿರಬೇಕು; ಅಪಾರ ನಿರೀಕ್ಷೆಯಿಂದ ನೆರೆದವರಿಗೆ ನಿರಾಶೆಯಂಟು ಮಾಡದಿರಬೇಕೆಂಬ ಹೊಣೆಗಾರಿಕೆ ನಮ್ಮದಾಗಬೇಕು. ಈ ಸಂದರ್ಭದಲ್ಲಿ ರಷ್ಯಾದ ಚಿಂತಕ ಪ್ಲೆಖನೋವ್ ಹೇಳಿದ ಒಂದು ಅಭಿಪ್ರಾಯ ನೆನಪಿಗೆ ಬರುತ್ತಿದೆ: “ಕಲಾಕಾರರು ಜನಗಳಿಂದ ಗೌರವ ಮತ್ತು ಮನ್ನಣೆಗಳನ್ನು ಬಯಸುತ್ತಾರೆ. ಜನರು  ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ.”
ಹೌದು; ಜನರು ನಮ್ಮಿಂದ ಜವಾಬ್ದಾರಿಯನ್ನು ಬಯಸುತ್ತಾರೆ. ಆದ್ದರಿಂದ ಸಾಂಸ್ಕøತಿಕ ಪ್ರತಿನಿಧಿಗಳೆಂಬ ಹಣೆಪಟ್ಟಿಯ ನಾವು ಆತ್ಮವಂಚನೆ ಮಾಡಿಕೊಳ್ಳಬಾರದು; ಜನರು ನಮ್ಮ ಮೇಲಿಟ್ಟಿರುವ  ವಿಶ್ವಾಸಕ್ಕೆ ವಂಚನೆ ಮಾಡಬಾರದು. ನಾವು ಜನಗಳಿಗೆ ಜವಾಬ್ದಾರರಾಗಬೇಕು. ಇದು ಈ ಸಮ್ಮೇಳನದಿಂದ ನಾವು ಕಲಿಯಬೇಕಾದ ಪ್ರಥಮ ಪಾಠ.
ಏಕೀಕರಣ, ಪ್ರತ್ಯೇಕೀಕರಣ ಮತ್ತು ಪರಕೀಯತೆ
ಕರ್ನಾಟಕದ ಏಕೀಕರಣವಾಗಿ 60 ವರ್ಷಗಳು ತುಂಬಿ ವಜ್ರ ಮಹೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿ ಸಮ್ಮೇಳನ ನಡೆಯುತ್ತಿದೆ. ಸಹಜವಾಗಿಯೇ ಏಕೀಕರಣದ ಫಲಿತಗಳನ್ನು  ಕುರಿತ ಪ್ರಶ್ನೆ ಎದುರಾಗುತ್ತದೆ. ಕನ್ನಡ ಮಾತು  ಪ್ರಧಾನವಾಗಿರುವ ಪ್ರದೇಶಗಳೆಲ್ಲ ಒಂದಾಗಬೇಕೆಂಬ ಏಕೀಕರಣದ ಪ್ರಧಾನ ಆಶಯ ಬಹುಮಟ್ಟಿಗೆ ಈಡೇರಿದ್ದರೂ ಇನ್ನೂ ಕೆಲವು ಕನ್ನಡ ಮಾತಿನ ಪ್ರದೇಶಗಳು ಬೇರೆ ರಾಜ್ಯದಲ್ಲಿ ಉಳಿದಿವೆ. ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಗಡಿವಿವಾದ ಬಗೆಹರಿಸಲು ರಚಿತವಾದ ಮಹಾಜನ್  ಆಯೋಗದ ವರದಿಯು ಇನ್ನೂ ಅನುಷ್ಠಾನಗೊಂಡಿಲ್ಲ. ಕೇರಳದ ಕಾಸರಗೋಡು ಕರ್ನಾಟಕವಾಗಲಿಲ್ಲ.  ಆಂಧ್ರದಲ್ಲಿರುವ ಕನ್ನಡ ಪ್ರಧಾನ ಮಡಕಶಿರಾ ಕರ್ನಾಟಕಕ್ಕೆ ಸೇರಲಿಲ್ಲ. ತಮಿಳುನಾಡಿನಲ್ಲಿರುವ  ತಾಳವಾಡಿಫಿರ್ಕಾ, ಕೇರಳದಲ್ಲಿರುವ  ಕಾಸರಗೋಡು, ಹೊಸದುರ್ಗ.  ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಮುಂತಾದ ಕನ್ನಡ ಪ್ರಧಾನ  ಪ್ರದೇಶಗಳು ನಮ್ಮ ನಾಡಿನ ಭಾಗವಾಗಿಲ್ಲ. ಅಷ್ಟೇಕೆ ಕರ್ನಾಟಕ ಸರ್ಕಾರವು ಹೊರ ರಾಜ್ಯದ ಕೆಲವು ಪ್ರದೇಶಗಳಿಗೆ  ನೀಡಿರುವ ಅಧಿಕೃತ ಗಡಿಗ್ರಾಮ ಮನ್ನಣೆಯು ರಾಯಚೂರು ಪಕ್ಕದ ಮೆಹಬೂಬುನಗರ ಜಿಲ್ಲೆಯ ಕೃಷ್ಣಾ, ಗುರ್ಜಾಲೆ, ತಂಗಡಗಿ, ಕುಸಮುರ್ತಿ,  ಹೈನಾಪುರ, ಜೆಗುಂಟಾ, ಶುಕ್ರಲಿಂಗದಹಳ್ಳಿ, ಖಾನಾಪುರ, ಕುನಸಿ, ಹಾಲಂಪಲ್ಲಿ, ಕೊತ್ತಪಲ್ಲಿ ಗುಡೆವೆಲ್ಲೂರ್, ಇಂದುಪುರ-ಎಂಬ  ಹದಿನೂರು ಗ್ರಾಮಗಳಿಗೆ ಲಭ್ಯವಾಗಿಲ್ಲ. ಗೋವಾದಲ್ಲಿರುವ ಕನ್ನಡಿಗರ ಬವಣೆ ಬತ್ತಿಲ್ಲ. ಕರ್ನಾಟಕದ ಒಳನಾಡಿನವರಿಗೆ ಸಿಗುವ ಶೈಕ್ಷಣಿಕ ಮತ್ತು ಔದ್ಯೋಗಿಕ ಸೌಲಭ್ಯಗಳು ಕನ್ನಡಮಾಧ್ಯಮದಲ್ಲೇ ವ್ಯಾಸಂಗ ಮಾಡಿದ ಹೊರನಾಡಿನ ಕನ್ನಡಿಗರಿಗೆ ಪೂರ್ಣಪ್ರಮಾಣದಲ್ಲಿ ಸಿಗುತ್ತಿಲ್ಲ, ಸಿಗಬೇಕು. ಕರ್ನಾಟಕವು ಇನ್ನೂ ಒಳನಾಡು, ಗಡಿನಾಡು ಮತ್ತು ಹೊರನಾಡು ಎಂಬ ವಿಂಗಡನೆಯ ವಿಷಾದವನ್ನು ಒಡಲುರಿಯಾಗಿ ಅನುಭವಿಸುತ್ತಿದೆ. ಇಂಥ ಒಡಲುರಿ ಇರಬಾರದೆಂದೇ  ಅಂದು  ಏಕೀಕರಣದ ಹೋರಾಟ ಹುಟ್ಟಿಕೊಂಡಿತ್ತು. ಧಾರವಾಡದಲ್ಲಿ  20.07.1890ರಲ್ಲಿ ಸ್ಥಾಪಿತವಾದ  ಕರ್ನಾಟಕ ವಿದ್ಯಾವರ್ಧಕ ಸಂಘದ `ವಾಗ್ಭೂಷಣ’ ಪತ್ರಿಕೆಯಲ್ಲಿ ಆಲೂರು ವೆಂಕಟರಾಯರು. “ಕರ್ನಾಟಕವು ಒಂದಾಗದಿದ್ದರೆ ಕರ್ನಾಟಕದ ಸ್ಥಿರ ಏಳಿಗೆಯು ಎಂದೆಂದಿಗೂ ಸಾಧ್ಯವಿಲ್ಲ” ಎಂದು ಬರೆದರು. 1917ರ ಜನವರಿ 7ರಂದು ವಿದ್ಯಾವರ್ಧಕ ಸಂಘದ  ವ್ಯವಸ್ಥಾಪಕ ಸಮಿತಿಯು ಒಂದು ಗೊತ್ತುವಳಿಯನ್ನು ಸ್ವೀಕರಿಸಿ ಏಕೀಕರಣದ ಆಶಯವನ್ನು ದಾಖಲಿಸಿತು. “ಬ್ರಿಟಿಷ್ ಅಧಿಕಾರಕ್ಕೆ ಒಳಗಾದ. ಎಲ್ಲ ಕನ್ನಡ ಊರು, ತಾಲ್ಲೂಕು ಮತ್ತು ಜಿಲ್ಲೆಗಳನ್ನು ಒಟ್ಟುಗೂಡಿಸಿ, ಒಂದು ರಾಜಕೀಯ ವಿಭಾಗವನ್ನಾಗಿ ಮಾಡಿ, ಅದನ್ನು ಕರ್ನಾಟಕವೆಂದು ಕರೆಯಬೇಕು” ಎಂದು ಈ ಗೊತ್ತುವಳಿಯು ಕರೆ ನೀಡಿತು. 1915ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಏಕೀಕರಣದ ಹೋರಾಟಕ್ಕೆ ಒತ್ತಾಸೆಯಾಗಿ ನಿಂತಿತು. 1916ರಲ್ಲಿ  ಏಕೀಕರಣದ ಉದ್ದೇಶಕ್ಕಾಗಿಯೇ `ಕರ್ನಾಟಕ ಏಕೀಕರಣ ಸಭೆ’ ಎಂಬ  ಸಂಸ್ಥೆ ಸ್ಥಾಪನೆಯಾಯಿತು. ಆನಂತರದ ದಿನಗಳಲ್ಲಿ ಇದಕ್ಕೆ `ಕರ್ನಾಟಕ ಏಕೀಕರಣ ಸಂಘ’ ಎಂದು ಮರುನಾಮಕರಣ ಮಾಡಲಾಯಿತು. ಈ ಸಂಸ್ಥೆಯು ಏಕೀಕರಣದ ಉದ್ದೇಶಕ್ಕಾಗಿಯೇ 1926ರಿಂದ 1947ರೊಳಗೆ ಒಟ್ಟು 12 ಸಮ್ಮೇಳನಗಳನ್ನು ನಡೆಸಿತು. ನಮ್ಮ ದೇಶ ಸ್ವಾತಂತ್ರ್ಯಗಳಿಸಿದ ನಂತರವೂ ಏಕೀಕರಣದ ಹೋರಾಟ ಮತ್ತಷ್ಟು ಪ್ರಬಲಗೊಂಡಿತು. ವಿಶೇಷವೆಂದರೆ 1951ರಲ್ಲಿ ಕಮ್ಯುನಿಸ್ಟ್ ಪಕ್ಷವೂ ಏಕೀಕರಣಕ್ಕೆ ಬೆಂಬಲವಾಗಿ ನಿಂತಿತು. ಕಮ್ಯೂನಿಸ್ಟರು, ಸೋಷಲಿಸ್ಟರು ತಮ್ಮ ಸಮಾನತೆಯ ಆಶಯಗಳ ಮೂಲ ಆಶಯವನ್ನಿಟ್ಟುಕೊಂಡೇ ಏಕೀಕರಣದ ಅಗತ್ಯವನ್ನು ಪ್ರತಿಪಾದಿಸಿದರು. ಈ ನಡುವೆ 1952ರಲ್ಲಿ ಆಂದ್ರದ ಪೊಟ್ಟಿಶ್ರೀರಾಮುಲು ಅವರು ತೆಲುಗು ಮಾತಿನ ಪ್ರದೇಶಗಳ  ಏಕೀಕರಣಕ್ಕಾಗಿ  ಆಮರಣಾಂತ ಉಪವಾಸ ಆರಂಭಿಸಿದರು. 58 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ಪೊಟ್ಟಿಶ್ರೀರಾಮುಲು ನಿಧನ ಹೊಂದಿ ಹುತಾತ್ಮರಾದರು. ಕನ್ನಡನಾಡಿನಲ್ಲಿ ಬಳ್ಳಾರಿಯ ರಂಜಾನ್ ಸಾಬ್  ಅವರು ಏಕೀಕರಣ ಹೋರಾಟದಲ್ಲಿ ಜೀವ ತೆತ್ತರು. ಈ ಜೀವ ಕನ್ನಡನಾಡಿನ ಜಾತ್ಯತೀತ ಮೌಲ್ಯದ ಒಂದು ಮಾದರಿಯಾಗಿ ಇಂದಿಗೂ ಸ್ಮರಣೀಯವಾಗಿದೆ.
ಹೀಗೆ ಕನ್ನಡ ಮತ್ತು ತೆಲುಗು ಕೇಂದ್ರಿತ ಏಕೀಕರಣ ಹೋರಾಟಗಳ ಫಲವಾಗಿ ಕೇಂದ್ರ ಸರ್ಕಾರವು  1953ರಲ್ಲಿ ಫಜಲ್ ಆಲಿ ಅವರ  ನೇತೃತ್ವದಲ್ಲಿ ರಾಜ್ಯ ಪುನರ್‍ವಿಂಗಡನಾ ಆಯೋಗವನ್ನು ರಚಿಸಿತು. ಇದೇ ವರ್ಷ, ಪೊಟ್ಟಿ ಶ್ರೀರಾಮುಲು ಅವರ ಹೋರಾಟ ಮತ್ತು ಮರಣದ ಫಲವೆಂಬಂತೆ ತೆಲುಗು ಪ್ರಧಾನ ಪ್ರಾಂತ್ಯವಾಗಿ `ಆಂದ್ರಪ್ರದೇಶ’ ರಚನೆಯಾಯಿತು. ಮುಂದೆ ಫಜಲ್ ಆಲಿ ಆಯೋಗದ ಶಿಫಾರಿಸಿನಂತೆ  ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ 1.11.1956 ರಂದು `ವಿಶಾಲ ಮೈಸೂರು’ ಅಸ್ತಿತ್ವಕ್ಕೆ ಬಂದಿತು.  ಕನ್ನಡ ಮಾತು ಪ್ರಧಾನವಾದ ಕೇರಳದ ಕಾಸರಗೋಡು, ಹೊಸದುರ್ಗವನ್ನೂ ಒಳಗೊಂಡಂತೆ  ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿರುವ ಕನ್ನಡಪ್ರಧಾನ  ಪ್ರದೇಶಗಳನ್ನು  ಒಳಗೊಳ್ಳದೆ `ವಿಶಾಲ ಮೈಸೂರು’ ಎಂಬ ಕನ್ನಡದ ಬಹುಪಾಲು ಪ್ರದೇಶದ ಏಕೀಕೃತ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಆದರೆ `ಕರ್ನಾಟಕ’ ಎಂದು ಹೆಸರಿಡಲು 1973ರವರೆಗೆ ಕಾಯಬೇಕಾಯಿತು. ಅದರಲ್ಲೂ `ಮೈಸೂರು’ ಹೆಸರಿನ ಪರವಾಗಿದ್ದ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ `ಕರ್ನಾಟಕ’   ಎಂದು ಹೆಸರಿಡಬೇಕಾಯಿತು. ಜನಾಭಿಪ್ರಾಯಕ್ಕೆ  ಮನ್ನಣೆಕೊಟ್ಟ ದೇವರಾಜ ಅರಸು  ತಮ್ಮ ಹಿಂದಿನ ಅಭಿಪ್ರಾಯವನ್ನು ಬದಿಗೊತ್ತಿ 1.11.1973 ರಂದು ಈ ‘ವಿಶಾಲ ಮೈಸೂರು’ ಬದಲು `ಕರ್ನಾಟಕ’ ಎಂದು ಹೆಸರು ಬದಲಾಯಿಸಿದ್ದು ಸಾಂಕೇತಿಕವಾಗಿ ಜನಾಭಿಪ್ರಾಯದ ವಿಜಯ. ಅರಸು ಅವರ ಪ್ರಜಾಸತಾತ್ಮಕ ನಿಲುವಿನ ಫಲ. ಅಂದು ಅರಸು ಅವರು ಕರ್ನಾಟಕದ ಜನಮಾನಸದ ಅಭಿನಂದನೆಗೆ ಪಾತ್ರರಾದರು. ಹಾಗೆ ನೋಡಿದರೆ ಕರ್ನಾಟಕದೊಳಗಿನ ವಿವಿಧ ಸಾಮಾಜಿಕ ಮತ್ತು ಭೌಗೋಳಿಕ ವಲಯಗಳನ್ನು ಒಳಗೊಳ್ಳುವಂತೆ ಪ್ರತಿನಿಧೀಕರಣದ ಪ್ರಕ್ರಿಯೆಗೆ ಕಾರಣರಾದ ಅರಸು  `ಸಾಮಾಜಿಕ ಏಕೀಕರಣ’ದ ರೂವಾರಿ ಎಂದರೂ ತಪ್ಪಾಗಲಾರದು. ಕರ್ನಾಟಕದ ವಿಧಾನ ಮಂಡಲದಲ್ಲಿ ವಿವಿಧ ಪ್ರದೇಶ, ವಿವಿಧ ಸಾಮಾಜಿಕ ಹಿನ್ನಲೆಯ ಸಂಕೇತಗಳು ಸಮಾವೇಶಗೊಳ್ಳುವಂತೆ ಮಾಡಿದ ಅರಸು ಅವರ `ಸಾಮಾಜಿಕ ಏಕೀಕರಣ’ದ                          ರಾಜಕಾರಣ ಅಸಾಧಾರಣ.
ಆದರೆ ಆಮೇಲೆ ಏನಾಯಿತು? ಭಾಷೆ ಮತ್ತು ಭೂಗೋಳವನ್ನು ಬೆಸೆದ ಏಕೀಕರಣವು ಮಾನಸಿಕ ಏಕೀಕರಣಕ್ಕೆ ಕಾರಣವಾಯಿತೆ? ಏಕೀಕರಣದ ವಿಸ್ತರಣೆಗಾಗಿ ಭೂಗೋಳ ಪ್ರಜ್ಞೆಯೇ ಪ್ರಧಾನವಾಯಿತೆ? ಸ್ವಲ್ಪಮಟ್ಟಿಗೆ ಹೌದು. ಆದ್ದರಿಂದಲೇ ಕರ್ನಾಟಕದ ವಿಸ್ತಾರವನ್ನು ಕುರಿತು ಮತ್ತೆ ಮತ್ತೆ  ಮಾತನಾಡುವವರು ಭೂಗೋಳ ಪ್ರಜ್ಞೆಯ ಪರಿಧಿಯಲ್ಲೇ ಉಳಿದಿದ್ದಾರೆ. ನಿಜ; ಕಾವೇರಿಯಿಂದ ಗೋದಾವರಿವರೆಗೆ ನಮ್ಮ ಅಂದಿನ ನಾಡು ಇತ್ತು ಎಂದುಕೊಳ್ಳೋಣ. ಅಷ್ಟೇಕೆ ಅಚ್ಚಕನ್ನಡ ರಾಜವಂಶವೆಂಬ ಕೀರ್ತಿಗೆ ಭಾಜನರಾದ ಮತ್ತು 215 ವರ್ಷಗಳವರೆಗೆ  ಆಳಿದ  ಕದಂಬರ ಸಾಮ್ರಾಜ್ಯವು ಮೃಗೇಶ ವರ್ಮನ ಕಾಲದಲ್ಲಿ ಉತ್ತರದ ನರ್ಮದಾ ನದಿಯವರೆಗೆ ವಿಸ್ತಾರಗೊಂಡಿತ್ತು. ಬಾದಾಮಿ ಚಾಲುಕ್ಯರ ಸಾಮ್ರಾಜ್ಯದಲ್ಲಿ ಅಜಂತ, ಎಲ್ಲೋರ, ನಾಸಿಕ್, ಓರಂಗಲ್ ಮುಂತಾದ ಪ್ರದೇಶಗಳೂ ಇದ್ದವು. ರಾಷ್ಟ್ರಕೂಟರ ಸಾಮ್ರಾಜ್ಯದಲ್ಲಿಯೂ ಅಜಂತ, ಎಲ್ಲೋರ, ಇದ್ದವು. ಕಲ್ಯಾಣಿ ಚಾಲುಕ್ಯರ ಸಾಮ್ರಾಜ್ಯದಲ್ಲಿ ಓರಂಗಲ್ಲು, ಪಂಡರಪುರ, ದೇವಗಿರಿ, ನವಸಾರಿಕ ಮುಂತಾದ ಪ್ರದೇಶಗಳಿದ್ದವು. ಹೊಯ್ಸಳರ ಸಾಮ್ರಾಜ್ಯದಲ್ಲಿ ಕಂಚಿ, ಕಣ್ಣಾನೂರುಗಳಿದ್ದವು. ವಿಜಯನಗರ ಸಾಮ್ರಾಜ್ಯದಲ್ಲಿ ತೇಡಪತ್ರಿ, ಲೇಪಾಕ್ಷಿ, ತಿರುಪತಿ, ವೆಲ್ಲೂರು, ಮಧುರೆ, ಪಾಂಡಿಚೆರಿ ಮುಂತಾದ ಪ್ರದೇಶಗಳು ಇದ್ದವು. ಹೀಗೆ ವಿವಿಧ ಸಾಮ್ರಾಜ್ಯಗಳಲ್ಲಿದ್ದ ಪ್ರದೇಶಗಳಲ್ಲಿ ಕನ್ನಡವೂ ಇತ್ತು.  ಆದರೆ ಎಲ್ಲ ಪ್ರದೇಶಗಳಲ್ಲೂ  ಕನ್ನಡವಿರಲಿಲ್ಲ. ಇದರರ್ಥ ಏನು? ಈ ಪ್ರದೇಶಗಳೆಲ್ಲ ಕನ್ನಡ ಪ್ರದೇಶಗಳಲ್ಲ; ಕನ್ನಡ ಬಲ್ಲ ರಾಜರ ಪ್ರದೇಶಗಳು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು  ಶ್ರೀಕೃಷ್ಣದೇವರಾಯ. ಆಂಧ್ರಪ್ರದೇಶದವರು ಶ್ರೀಕೃಷ್ಣದೇವರಾಯನನ್ನು ತಮ್ಮವನೆಂದು ತಿಳಿದಿದ್ದಾರೆ. ನಾವು ಕನ್ನಡಿಗರು ನಮ್ಮವನೆಂದು ತಿಳಿದಿದ್ದೇವೆ. ಆಂಧ್ರದಲ್ಲಿ ನಮಗಿಂತ ಮೊದಲೇ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತದೆ. ಶ್ರೀಕೃಷ್ಣ ದೇವರಾಯ ತೆಲುಗು ಸಿನಿಮಾ ತಯಾರಾಗುತ್ತದೆ.  ಆನಂತರ ನಮ್ಮಲ್ಲಿ ಶ್ರೀಕೃಷ್ಣದೇವರಾಯ ಸಿನಿಮಾ ನಿರ್ಮಾಣ; ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ಥಾಪನೆ. ಇದರರ್ಥ ಏನು? ಶ್ರೀಕೃಷ್ಣದೇವರಾಯನ ಸಾಮ್ರಾಜ್ಯ ಪೂರ್ಣ ಕನ್ನಡ ಸಾಮ್ರಾಜ್ಯವಲ್ಲ. ಅಷ್ಟೇಕೆ, ಯಾವುದೇ ರಾಜರ ಸಾಮ್ರಾಜ್ಯಗಳು ಒಂದೇ ಭಾಷೆಯ ರಾಜ್ಯಗಳಲ್ಲ. ಆದ್ದರಿಂದ ಕನ್ನಡ ರಾಜವಂಶಗಳ ಸಾಮ್ರಾಜ್ಯಗಳನ್ನು ಇಡಿಯಾಗಿ                    ಕನ್ನಡ ಪ್ರದೇಶಗಳೆಂದು ಕರೆಯುವುದು ಚಾರಿತ್ರಿಕವಾಗಿ ಸರಿಯಲ್ಲ.
ಸಮಸ್ಯೆ  ಇರುವುದೇ ಇಲ್ಲಿ. ಭೂಗೋಳಪ್ರಜ್ಞೆ ಮತ್ತು ಚರಿತ್ರೆಯ ಪ್ರಜ್ಞೆ ಒಂದಾಗಿ ಬೆಸೆದ  ಕನ್ನಡ ಪ್ರಜ್ಞೆಯ ಕೊರತೆಯಿಂದ ಸಾಮ್ರಾಜ್ಯಪ್ರಜ್ಞೆಯೇ ಪ್ರಧಾನವಾಗಿಬಿಡುತ್ತದೆ. ಚರಿತ್ರೆಯ ಪ್ರಜ್ಞೆಯೆಂಬುದು ಸಹ ಗತಕಾಲದ ಕನವರಿಕೆಯಲ್ಲ.                                ಇಲ್ಲಿ ಡಿ.ಡಿ. ಕೊಸಾಂಬಿಯವರ ವ್ಯಾಖ್ಯಾನವನ್ನು ಉಲ್ಲೇಖಿಸಬೇಕು: “ಚರಿತ್ರೆಕಾರನ ಕೆಲಸ ಕೇವಲ ಭೂತಕಾಲವನ್ನು ಪ್ರೀತಿಸುವುದು ಅಥವಾ ಭೂತ ಕಾಲದಿಂದ ದೂರವಾಗುವುದಲ್ಲ. ವರ್ತಮಾನವನ್ನು ಅರ್ಥಮಾಡಿಕೊಳ್ಳಲು ಭೂತಕಾಲವನ್ನು ಕೀಲಿಕೈ ಎಂದು ತಿಳಿಯಬೇಕು. ಭೂತಕಾಲದ ಬೆಳಕಿನಲ್ಲಿ ವರ್ತಮಾನವನ್ನು ಅರಿಯುವುದೆಂದರೆ, ವರ್ತಮಾನದ ಬೆಳಕಿನಲ್ಲಿ, ಭೂತಕಾಲವನ್ನು ಸಹ ಅರಿಯುವುದು ಎಂದರ್ಥ”
ಭಾಷಾಭಿಮಾನಕ್ಕೆ ಭೂತಕಾಲ ಮತ್ತು ವರ್ತಮಾನಗಳ ಉಚಿತಾನುಸಂಧಾನ ಮುಖ್ಯ. ಭೂತದಲ್ಲೇ ಹೂತು ಹೋಗುವುದು ಕೇವಲ ಕನವರಿಕೆಯಾಗುತ್ತದೆ. ವರ್ತಮಾನವೇ ಸರ್ವಸ್ವ ಎಂದುಕೊಂಡರೆ ಪರಂಪರೆಯ ಪ್ರಜ್ಞೆ ಪತನಗೊಳ್ಳುತ್ತದೆ.                     ಒಂದರಿಂದ ಇನ್ನೊಂದನ್ನು ಅರಿಯುವ ಅರ್ಥಪೂರ್ಣತೆ ಮುಖ್ಯ.
ಆದ್ದರಿಂದ, ನಾವು ಅರ್ಥಮಾಡಿಕೊಳ್ಳಬೇಕು: ಭಾಷೆ ಮತ್ತು ಭೂಗೋಳದ ಸಂಬಂಧವಷ್ಟೇ ಕನ್ನಡಾಭಿಮಾನವಲ್ಲ. ಭೂಗೋಳ ಮಿತಿಯ ಚಿಂತನೆಯೊಂದೇ ಕರ್ನಾಟಕದ ಮನಸ್ಸನ್ನು ಒಂದುಗೂಡಿಸುವ ಅಂತಿಮ ಸಾಧನವಾಗುವುದಿಲ್ಲ. ಸಾಮಾಜಿಕ-ಆರ್ಥಿಕ  ಸಮಾನತೆಯ ಆಧಾರದಲ್ಲಿ ಅಭಿವೃದ್ಧಿಯ ಸಮತೋಲನವನ್ನು ಸಾಧಿಸದಿದ್ದರೆ ಕರ್ನಾಟಕದ ಒಳಗೆ ಒಡಕು ಹುಟ್ಟುತ್ತದೆ. ಹುಟ್ಟುತ್ತದೆ ಅನ್ನುವುದಾದರೂ ಏಕೆ? ಹುಟ್ಟುತ್ತಿದೆ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನದ ಅಸಮಾಧಾನ ಪ್ರಕಟಗೊಳ್ಳುತ್ತಿದೆ. ನಿಜ; ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳೂ ಹಿಂದುಳಿದಿವೆ. ಆದರೆ ಮೈಸೂರು ರಾಜ್ಯಕ್ಕೆ ಸೇರಿದ  ಹೊಸ ಪ್ರದೇಶಗಳು ಹೆಚ್ಚು ಹಿಂದುಳಿದಿವೆ. ಕೇವಲ ಆರ್ಥಿಕ ಅಭಿವೃದ್ಧಿಯ  ಅಸಮತೋಲನವಷ್ಟೇ ಅಲ್ಲ, ಸಾಂಸ್ಕøತಿಕ ಪ್ರಾತಿನಿಧ್ಯದ ಪರಕೀಯತೆಯೂ  ಇವರನ್ನು ಕಾಡಿಸುತ್ತಿದೆ.  ರಾಜಧಾನಿ ಕೇಂದ್ರಿತ ನೋಟದಿಂದ ಸಿಗುವ ಸಾಂಕೇತಿಕ ಪ್ರಾತಿನಿಧ್ಯವು ಸಾಂಸ್ಕøತಿಕ ಪರಕೀಯತೆಯನ್ನು ಸಲೀಸಾಗಿ ಹೋಗಲಾಡಿಸಲಾರದು. ಕರ್ನಾಟಕದ ಸಮಸ್ತ ಭೂಗೋಳದೊಳಗೆ ಇರುವ ಜನರ ಸಾಂಸ್ಕøತಿಕ ವೈಶಿಷ್ಟ್ಯಗಳನ್ನು ಉಳಿಸಿ ಬೆಳೆಸಬೇಕಾದ್ದು ಒಂದು ಹೊಣೆಗಾರಿಕೆಯಾದರೆ, ಏಕೀಕರಣದ ಫಲವಾಗಿ ಜೊತೆಗೂಡಿದ ಪ್ರದೇಶಗಳ ಪ್ರತಿಭಾವಂತರಿಗೆ ಪ್ರತೀಕಾತ್ಮಕ ಪ್ರಾತಿನಿಧ್ಯ ನೀಡುವ ಹೊಣೆಗಾರಿಕೆಯೂ ಆಡಳಿತಗಾರರ ಮೇಲಿದೆ; ಸಾಂಸ್ಕøತಿಕ ಸಂಘಸಂಸ್ಥೆಗಳ  ಜವಾಬ್ದಾರಿಯೂ ಆಗಿದೆ. ಅಷ್ಟೇಕೆ ಸಾಮಾಜಿಕವಾಗಿ ತುಳಿತಕ್ಕೊಳಗಾದವರನ್ನು ಪರಕೀಯತೆಯಿಂದ                      ಪಾರು ಮಾಡಬೇಕಾಗಿದೆ.  ಸಮಗ್ರ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ದೃಷ್ಟಿ ಕೋನದ ದೂರಗಾಮಿಚಿಂತನೆ ಮತ್ತು ಬದ್ಧಕ್ರಿಯಾಶೀಲತೆಯಿಂದ ಮಾತ್ರ ಇದು ಸಾಧ್ಯ. ಇಲ್ಲದಿದ್ದರೆ, ಬೇಕೊ ಬೇಡವೊ, ಪ್ರತ್ಯೇಕ ರಾಜ್ಯದ  ಬೇಡಿಕೆ ಇಡುತ್ತಿರುವವರ ದನಿ ಮುಂದೊಂದು ದಿನ ಸಮೂಹ ಸನ್ನಿಯಾದರೆ ಅಚ್ಚರಿಯಿಲ್ಲ.
ಏಕೀಕರಣದಿಂದ  ಪ್ರತ್ಯೇಕೀಕರಣದ ಕಿರುದನಿಯತ್ತ ವಾಲುತ್ತಿರುವ ನಮ್ಮ ಸಂದರ್ಭದಲ್ಲಿ ಆತ್ಮಾವಲೋಕನ ಅಗತ್ಯ  ಎಂದು ನಾನು ಭಾವಿಸುತ್ತೇನೆ.   ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿರುವವರು ಪ್ರತ್ಯೇಕತೆಯೊಂದೇ  ಪರಿಹಾರವೇ ಎಂದು ತಮ್ಮೊಳಗನ್ನು ಕೇಳಿಕೊಳ್ಳಬೇಕು. ಪ್ರತ್ಯೇಕ ರಾಜ್ಯವೆನ್ನುವುದು ಭೂಗೋಳ ವಿಭಜನೆ ಮತ್ತು ಅಧಿಕಾರ ಹಂಚಿಕೆಗೆ ನೆರವಾಗಬಹುದು. ಆದರೆ ಒಂದು ರಾಜ್ಯದ ಅಭಿವೃದ್ಧಿಗೆ ಅದಷ್ಟೇ ಸಾಕೆ? ನಿರ್ದಿಷ್ಟ ಭೂಗೋಳದೊಳಗೆ ಇರುವ ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕøತಿಕ ಪ್ರತ್ಯೇಕತೆಯು ಪ್ರತ್ಯೇಕ ರಾಜ್ಯ ರಚನೆಯಿಂದ ಪರಿಹಾರವಾಗುತ್ತದೆಯೆ? ಖಂಡಿತ ಇಲ್ಲ. ಜಾತಿ, ವರ್ಣ,                      ಲಿಂಗತ್ವ ಅಸಮಾನತೆಗಳನ್ನು ಆಧಾರಿಸಿದ ಸಾಮಾಜಿಕ ಪ್ರತ್ಯೇಕತೆಗೆ ಸಾಮಾಜಿಕ ನ್ಯಾಯದ ರಾಜ್ಯಬೇಕು; ಪ್ರತ್ಯೇಕರಾಜ್ಯವಲ್ಲ. ಸಾಂಸ್ಕøತಿಕ ಪ್ರತ್ಯೇಕತೆಯನ್ನು ಹೋಗಲಾಡಿಸಲು ಬಹುತ್ವ ಬದ್ಧ ಚಿಂತನೆ ಮತ್ತು ಕ್ರಿಯೆ ಬೇಕು. ನಾವು ತಿಳಿಯಬೇಕು: ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕøತಿಕ ಪ್ರತ್ಯೇಕತೆಯನ್ನುವುದು ಕೇವಲ ಪ್ರತ್ಯೇಕತೆಯಲ್ಲ. ಅದು ಪರಕೀಯತೆ. ಕನ್ನಡ ಭಾಷಾ  ಭೂಗೋಳದಲ್ಲೇ ಅನುಭವಿಸುವ ಪರಕೀಯತೆ. ಈ ಪರಕೀಯತೆ ಏಕೀಕೃತ ಅಖಂಡ ಕರ್ನಾಟಕದಲ್ಲಿಯೇ ಕೊನೆಗಾಣಬೇಕು.                            ಪ್ರತ್ಯೇಕ ರಾಜ್ಯಬೇಡಿಕೆಯವರಿಗೆ ಅಭಿವೃದ್ಧಿಯ ಅಸಮತೋಲನ ಮತ್ತು ಅಧಿಕಾರ ಮುಖ್ಯವಾದಂತೆ ಸಾಮಾಜಿಕ ಮತ್ತು ಸಾಂಸ್ಕøತಿಕ ಸಮಸ್ಯೆ ಮುಖ್ಯವಾದಂತೆ ಕಾಣಿಸುತ್ತಿಲ್ಲ.  ಆದ್ದರಿಂದ ಪ್ರತ್ಯೇಕ ರಾಜ್ಯ ಬೇಡಿಕೆಯವರಲ್ಲಿ ನನ್ನದೊಂದು ಬೇಡಿಕೆ. ನಾವು ಒಂದಾಗಿ ಸಮಸ್ಯೆಗಳನ್ನು ಬಿಡಿಸೋಣ. ಸವಾಲುಗಳನ್ನು ಒಂದಾಗಿ  ಎದುರಿಸೋಣ. ಭಾವನಾತ್ಮಕವಾಗಿ ಮಾತ್ರವಲ್ಲ. ಕ್ರಿಯಾತ್ಮಕವಾಗಿ ಕೆಲಸ ಮಾಡೋಣ. ಕರ್ನಾಟಕದ ಯಾವುದೇ ಪ್ರದೇಶಕ್ಕೆ ಅನ್ಯಾಯವಾದರೂ ಒಂದಾಗಿ  ಪ್ರತಿಭಟಿಸೋಣ. ಒಡೆದು ಹೋಗುವುದಕ್ಕೆ ನಾವು ಒಂದಾಗಲಿಲ್ಲ ಎಂಬುದನ್ನು ತೋರಿಸಿಕೊಡೋಣ. ಇಂಥದೊಂದು ಕ್ರಿಯೆಗೆ ಕರ್ನಾಟಕದ                ಎಲ್ಲ ಪ್ರದೇಶಗಳ ನೋಟವೇ ಬದಲಾಗಬೇಕು. ಅಪನಂಬಿಕೆಯ ವಾತಾವರಣ ಹೋಗಬೇಕು. ಈ ನಿಟ್ಟಿನಲ್ಲಿ ಆಳುವ  ಸರ್ಕಾರಗಳ ಜವಾಬ್ದಾರಿಯೂ ದೊಡ್ಡದಾಗಬೇಕು. ಎಲ್ಲ ಪ್ರದೇಶದ ಜನಪ್ರತಿನಿಧಿಗಳ ದನಿ ಗಟ್ಟಿಯಾಗಬೇಕು.