ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 20 August 2021

ತಾಯಿ ಮಮತೆಯ ಅಕ್ಷರಗಳ ಮಾಲೆ ಅಮ್ಮ ಕೊಟ್ಟ ಜಾಜಿ ದಂಡೆ

 ಮಮತೆಯ ಅಕ್ಷರಗಳ ಮಾಲೆ
"ಅಮ್ಮ ಕೊಟ್ಟ ಜಾಜಿದಂಡೆ"


ಜಾಜಿ ಹೂವಿನ ಘಮವೇ ಹಾಗೆ.ತನ್ನ ಇರುವಿಕೆಯಿಂದಲೇ ಸುತ್ತಲಿನವರನ್ನು ಬೇಡವೆಂದರೂ ಆವರಿಸಿಕೊಳ್ಳುತ್ತದೆ.ಪುಳಕ ನೀಡುತ್ತದೆ.ಅಬ್ಬಾ!ಘಮವೇ ಅನಿಸುತ್ತದೆ.ಹೆಂಗಳೆಯರ ಬಹು ಪ್ರೀತಿಯ ಸುವಾಸನೆಭರಿತ ಈ ಹೂವೆಂದರೆ ನನಗೆ ಬಹಳ ಪ್ರೀತಿ.ಅದರಲ್ಲೂ ಅಮ್ಮ ಹೆಣೆದುಕೊಟ್ಟ ಜಾಜಿ ದಂಡೆ ಎಂದರೆ ಮಗಳಿಗೇನೋ ವಿಶೇಷ ಅನುಭೂತಿ.ಈಗ ನಾನು ಹೇಳಹೊರಟಿದ್ದು ನಮ್ಮಮ್ಮನೋ,ನಾನೋ ಹೆಣೆದ,ಮುಡಿದ ಜಾಜಿದಂಡೆಯ ಬಗ್ಗೆಯೂ ಅಲ್ಲ,ಈಗ ನಮ್ಮನೆ ಅಂಗಳದಲ್ಲಿ ಅರಳಿ ಘಮ ನೀಡುತ್ತಿರುವ ಜಾಜಿ ಹೂ ಬಗ್ಗೆಯೂ ಅಲ್ಲ‌.ಹೇಳಹೊರಟಿದ್ದು ಕನ್ನಡದ ಅಪೂರ್ವ ಲೇಖಕರಾದ ಮಂಜುನಾಥ್ ಚಾಂದ್ ಅವರ "ಅಮ್ಮ ಕೊಟ್ಟ ಜಾಜಿದಂಡೆ" ಎಂಬ ಪುಟ್ಟ ಪುಸ್ತಕದ ಬಗ್ಗೆ.

ಹೌದು! ಇದು ಬರಿಯ ಘಮವಲ್ಲ.ನಮ್ಮನ್ನು ಆವರಿಸಿಕೊಂಡ,ಅಪ್ಪಿಕೊಂಡ,ಒಪ್ಪಿಕೊಂಡ ,ಬದುಕಾಗಿರುವ ಘಮ.ಈ ಘಮವನ್ನು ಆಸ್ವಾದಿಸುತ್ತಾ ಹೋದಂತೆ ಕಳೆದುಹೋಗುತ್ತೇವೆ.ಕಳೆದು ಹೋದ ಬದುಕಿನೆಡೆಗೆ ತಿರುಗಿ ಹೆಜ್ಜೆಗಳನ್ನೆಣಿಸುತ್ತಾ ಕಣ್ಣೀರಾಗುತ್ತೇವೆ.ಹೌದು! ಇದು ನಮ್ಮ ನಮ್ಮ ಅಮ್ಮನನ್ನು ಹುಡುಕಲು,ಇರುವ ಅಮ್ಮನನ್ನು ಮತ್ತಷ್ಟು ಪ್ರೀತಿಸಿ,ಗೌರವಿಸಿ ಜೋಪಾನಮಾಡಲು,ಕಳೆದುಕೊಂಡ ಅಮ್ಮನನ್ನು ನೆನೆದು "ಅಮ್ಮಾ,ಯೂ ಆರ್ ಗ್ರೇಟ್" ಎಂದು ಕೂಗಿ ಹೇಳುವಂತೆ ಮಾಡುವ ಶಕ್ತಿಯುಳ್ಳ 11 ಲೇಖನಗಳನ್ನು ಪ್ರೀತಿಯಿಂದ,ಶ್ರದ್ಧೆಯಿಂದ , ಪೋಣಿಸಿದ ಜಾಜಿ ಹೂಗಳ ಅಕ್ಷರ ಮಾಲೆಯೇ "ಅಮ್ಮ ಕೊಟ್ಟ ಜಾಜಿ ದಂಡೆ".

ಈ ಜಗತ್ತಿನಲ್ಲಿ " ತಾಯಿ"ಯನ್ನು ಇಷ್ಟೇ,ಹೀಗೆ ಎಂದು ಅವಳನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ.ಯಾಕೆಂದರೆ ಅಮ್ಮ ಜೀವಸೆಲೆ.
ನಮಗೆಲ್ಲಾ ಅಮ್ಮ ನಮ್ಮ ಬದುಕಿನಲ್ಲಿ ಸಿಗುವ ಪಾಪದ ಜೀವಿ.ಅಮ್ಮನಿಲ್ಲದಿದ್ದಾಗ ಅಮ್ಮನ ಇರುವಿಕೆಗಾಗಿ ಹಪಹಪಿಸುವ ನಾವುಗಳು, ಅಮ್ಮ ಇದ್ದಾಗ ಅವಳೊಂದಿಗೆ ಜಗಳ ಆಡಿದ್ದೇ ಜಾಸ್ತಿಯೆನಿಸುತ್ತದೆ,ಗೋಳಾಡಿಸಿದ್ದೇ ಜಾಸ್ತಿ .ಆದರೆ ಅಮ್ಮನಿಂದ ಅದೇ ನಿರ್ಲಿಪ್ತತೆ,ಅದೇ ಮುಗುಳ್ನಗೆ.ಯಾಕೆಂದರೆ ಅವಳು ಅಮ್ಮ...

ಈ ಜಾಜಿದಂಡೆ ಕೈ ಸೇರಿದ ದಿನವೇ ಅದೇನೋ ಮಧುರಭಾವ ನೀಡಿತು.ತಿಳಿಹಸಿರು ಬಣ್ಣದ ಮುಖಪುಟ ತಿರುವಿ ಹಾಕುತ್ತಾ ಓದುತ್ತಾ,ಓದುತ್ತಾ ಕಳೆದುಹೋದೆ.ನೆನಪುಗಳು ಹಸಿರಾಗಿದ್ದವು.ಜಾಜಿಯ ಘಮ ನನ್ನನ್ನು ಎಷ್ಟು ಆವರಿಸಿತ್ತೆಂದರೆ ಗಂಟಲುಬ್ಬಿ,ಕಣ್ಣಾಲಿಗಳು ತುಂಬಿ ಕಣ್ಣೀರು ಕೆನ್ನೆ ತೋಯಲು ಕಾಯುತ್ತಿತ್ತು.ಮಾಸ್ತಿಕಟ್ಟೆಯಲ್ಲಿ ಬಸ್ ಪ್ರಯಾಣಿಕರೆಲ್ಲಾ ಟೀ,ಕಾಪಿಗೆಂದು ಇಳಿದು ಹೋದಾಗ ಸಂಪೂರ್ಣ ಅತ್ತುಬಿಟ್ಟೆ.ದುಃಖ, ಸಂತೋಷ, ಎರಡೂ ಕಣ್ಣೀರಾಗಿ ಹೊರಬಂದ ಘಳಿಗೆ ಅದು.ಆ ಇಡೀ ದಿನ ನಾನು ಹಸಿರು ಪುಸ್ತಕ ನೀಡಿದ ಹಸಿರಾದ ಬಾಲ್ಯದ ದಿನಗಳ ನೆನಪಿನೊಂದಿಗೆ ಕಳೆದುಹೋದೆ.

ಒಂದು ಪುಸ್ತಕ ಹೀಗೆ ಮಾಡಿಸುತ್ತದಾ ಎಂದು ನೀವು ಭಾವಿಸಬಹುದು.ಇದು ಲೇಖಕರೊಬ್ಬರ "ಆತ್ಮಕತೆ" ಯಲ್ಲ.ನಮ್ಮ ನಮ್ಮ ಬದುಕು,ನಾವು ಕಳೆದು ಬಂದ ದಿನಗಳ ಮೆಲುಕು.ಚೆಂದದ ಬಾಲ್ಯ,ಬಡತನ,ಆ ಬಡತನದಲ್ಲಿ ಬದುಕು ನಡೆಸಲು ಅಮ್ಮ - ಅಪ್ಪನ ಜಂಜಾಟಗಳು,ಜೀವನಪ್ರೀತಿ,ಕಳೆದ ಪ್ರತೀ ಕ್ಷಣದಲ್ಲಿ ಅಮ್ಮ ಕಲಿಸುವ ಬದುಕಿನ ಪಾಠವನ್ನು ,"ಒಂದೇ ಲಾಟೀನಿನ ಕೆಳಗೆ"ಎಂಬ ಲೇಖನ ನಮ್ಮ ನಿಮ್ಮೆಲ್ಲರ ಬದುಕಿನ "ಚಿಮಣಿ ದೀಪ" ದ ಕತೆಯನ್ನು ಮೆಲುಕು ಹಾಕಿಸುತ್ತಾ ಅಮ್ಮ ಕಲಿಸಿದ ಬೆಳಕಿನ ಅರ್ಥ ವನ್ನು ಆಪ್ತವಾಗಿಸುತ್ತದೆ.
"ದೂರ ಕುಳಿತು ಬಿಡುವ ಅಮ್ಮನ ಆ ದಿನಗಳು" ಲೇಖನವು ಅಮ್ಮನ ಆ ದಿನಗಳನ್ನು ನೆನೆಸಿ ಕಣ್ಣೀರಾಗಿಸುತ್ತದೆ.ಅಲ್ಲೂ ಅಮ್ಮನಿಗೊಂದು "ರಿಲೀಫ್" ಸಿಗುವ ಭಾವವನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.ಹೊಸ ಸೀರೆ,ಅದನ್ನು ಉಡಲೂ ಕಾಯುವ ದಿನಗಳು,ಇರುವ ಮೂರು ನಾಲ್ಕು ಸೀರೆಗಳಲ್ಲಿ ನೂರು ಸೀರೆ ಇದೆಯೆಂಬಂತೆ ಸಂಭ್ರಮಿಸಿ ಹೊಸ ಸೀರೆ ನಿರಾಕರಿಸುವ ಅಮ್ಮನ ಆ ಗುಣದ ಮುಂದೆ ಇಂದು ನಾವು ತಲೆತಗ್ಗಿಸಬೇಕು.ಯಾಕೆಂದರೆ ಅವಳು ಅಮ್ಮ.

ಅಮ್ಮ ಕೊಟ್ಟ ಡೆಫಾಸಿಟ್ಟು,ಕೇಲ್ ಮಡಿಕೆಯೆಂಬ ಅಮ್ಮನ "ತಿಜೋರಿ" ಅದರ ಹಿಂದಿರುವ ಜೀವನ ಪಾಠ,ನಾಳಿನ ಭರವಸೆ,ಆ ಡೆಫಾಸಿಟ್ ಗೆ ಬಡ್ಡಿಕೊಟ್ಟು ಪೂರೈಸಲು ಸಾಧ್ಯವೇ ?ಎಂದು ನಾವು ನಮ್ಮನ್ನು ಪ್ರಶ್ನಿಸಿಕೊಂಡಾಗ ಗಂಟಲುಬ್ಬಿ ಬಾರದಿದ್ದರೆ ನಾವು ಹಾಗೂ ನಮ್ಮ ಬದುಕು ಶೂನ್ಯ.

ಅಮ್ಮನ ಹದೆಗೆಟ್ಟ ಆರೋಗ್ಯ, ಆಸ್ಪತ್ರೆವಾಸ,ಜೀವನ್ಮುಖಿಯಾದ ಅಮ್ಮ ಸಾವನ್ನು ಗೆದ್ದು ಬಂದಿದ್ದು,ಅಮ್ಮನೆಂಬ ಅಮ್ಮಳ ಬಗ್ಗೆ ಲೇಖಕರು ಎಷ್ಟು ಚೆಂದವಾಗಿ ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ.

ನಕ್ಷತ್ರಗಳನ್ನು ಹಾಸಿದವಳು ಅಮ್ಮನಾದರೆ ಲೇಖಕರ ಬದುಕಿನ ಆಕಾಶ ಅಪ್ಪ.ಅಪ್ಪ ಮಕ್ಕಳೆದುರು ತೆರೆದಿಡುತ್ತಿದ್ದ ಹೊಸ ಜಗತ್ತು ಎಂದರೆ ರಾಮಾಯಣ ಮತ್ತು ಮಹಾಭಾರತದ ಪ್ರವಚನ.ಇದು ಲೇಖಕರ ಬದುಕಿನ ಮೇಲೆ ಬಹಳಪ್ರಭಾವ ಬೀರಿದೆ ಎನಿಸಿದ್ದು ಸುಳ್ಳಲ್ಲ.ಇಲ್ಲಿ ಅಪ್ಪ-ಅಮ್ಮ ಇಬ್ಬರೂ ಸಮಾನ ಪಾಲನ್ನು ಹೊಂದಿರುವುದೇ ವಿಶೇಷ. ಈ ನಿಟ್ಟಿನಲ್ಲಿ ಲೇಖಕರು ಅದೃಷ್ಟವಂತರು.
ಅಪ್ಪ ವಿಶೇಷವಾಗಿ ಸಂತನಂತೆ ಕಾಣಿಸುವ ಕೊನೆಯ ದಿನಗಳು,ಅವರ ಕಣ್ಣಿನ ಬೆಳಕು,ಅಪಾರ ಧೈರ್ಯ,ಧೀಃ ಶಕ್ತಿ,ಜೀವನದಲ್ಲಿ ಅನುಭವಿಸಿದ ಪಲ್ಲಟಗಳು,ದೊಡ್ಡ ಹುದ್ದೆ ತೊರೆದು ಸಾಮಾನ್ಯರಂತೆ ಬಂದು ದೇವಿ ಆಲಯ ಕಟ್ಟಿ ಬದುಕಿದ್ದು ,ಕಷ್ಟದ ಬುಟ್ಟಿಯಲ್ಲಿ ಎಲ್ಲರನ್ನೂ ತಲೆಮೇಲೆ ಹೊತ್ತು ಸಾಗುವ ಅಪ್ಪ ಲೇಖಕರ ಲೇಖನಿಯಲ್ಲಿ ಆಕಾಶದಂತೆ ಹರವಿದ್ದಾರೆ.
ಹೆತ್ತವರ ಬಗೆಗೆ ಚೊಕ್ಕ ವಾಗಿ ಚಿತ್ರಿಸಿರುವ ಈ ಪುಸ್ತಕ ಸುಂದರವಾದ ಬದುಕೊಂದು  ಹೀಗಿದ್ದರೆ ಚೆಂದ ಎಂದು ಹೇಳಿದ್ದಾರೆ.ಅಕ್ಷರ  ಪ್ರಕಾಶನದ ಮೂಲಕ ಪ್ರಕಟವಾಗಿರುವ ಈ ಪುಸ್ತಕವನ್ನು ನೀವೂ ಓದಿ..
ಓದುಗರೇ ಓದುಗರನ್ನು ಹುಟ್ಟು ಹಾಕಬೇಕು ಎಂಬಂತೆ ಪುಸ್ತಕ ಓದೋಣ,ಬೇರೆಯವರಿಗೂ ಓದಲು ಪ್ರೇರಣೆಯಾಗೋಣ..

ರೇಖಾ.ಪಿ.ಕುಲಾಲ್

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...