ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 29 December 2019

ಫಲವಂತಿಕೆ ಆಚರಣೆ ಮತ್ತು ಶಿವಲಿಂಗ ರಹಸ್ಯ

ಹರ್ಷಕುಮಾರ್ ಕುಗ್ವೆ :

ನಮ್ಮ ಸಾಗರದ ಬಳಿಯ ಆನಂದಪುರದ ಕೆರೆಯ ಪಕ್ಕದಲ್ಲಿ ಹೈವೇ ಪಕ್ಕ ಅಗೆತ ಮಾಡುವಾಗ ಈ ಫಲವಂತಿಕೆ ಶಿಲ್ಪಗಳು ನೆನ್ನೆ ಸಿಕ್ಕಿವೆಯಂತೆ.. ಇದೇ ರೀತಿಯ ಶಿಲಾರಚನೆಗಳು ಸಾಗರದಿಂದ 25 ಕಿಲೋಮೀಟರ್ ದೂರದ ಉಳವಿ ಕೆರೆಯ ಮೇಲೂ ಇವೆ. ದ್ರಾವಿಡ ಹಾಗೂ ದ್ರಾವಿಡ ಪೂರ್ವ ಧಾರ್ಮಿಕ ಆಚರಣೆಯಾದ ಫಲವಂತಿಕೆ ಆಚರಣೆಗಳು ಈ ಭಾಗದಲ್ಲಿ ಚಾಲ್ತಿಯಿದ್ದ ಕುರಿತು ಇವು ತಿಳಿಸುತ್ತವೆ.
ಈ ಕುರಿತು ಹಿಂದೆ ನಾನು ಬರೆದಿದ್ದ ಬರೆಹವನ್ನು ಮತ್ತೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಶಿವಮೊಗ್ಗ ಜಿಲ್ಲೆಯ ಉಳವಿಯ (ನಮ್ಮೂರಿನಿಂದ 25 ಕಿಲೋಮೀಟರ್ ದೂರದಲ್ಲಿರುವ) ಕೆರೆ ಏರಿಯೊಂದರ ಮೇಲೆ ಬೈಕಿನಲ್ಲಿ ಹೋಗುತ್ತಿರುವಾಗ ನನ್ನನ್ನು ಗಕ್ಕನೆ ನಿಲ್ಲಿಸುವಂತೆ ಮಾಡಿದ್ದು ಈ ಕಲ್ಲಿನ ಕೆತ್ತನೆಗಳು...
ಇದನ್ನು ನೋಡಿ ಕೆಲವರು ನಾಚಿಕೆ ಪಟ್ಟುಕೊಳ್ಳಬಹುದು, ಲೇವಡಿ ಮಾಡಬಹುದು ಅಥವಾ ಇಂತಹ erotic ಲೈಂಗಿಕ ಶಿಲ್ಪಗಳ ಅರ್ಥ ಏನು ಎಂದೂ ತಲೆ ಕೆಡಿಸಿಕೊಳ್ಳಬಹುದು.
ಗಂಭೀರವಾಗಿ ಅವಲೋಕಿಸಿದರೆ ಈ ದೇಶದ ಮೂಲ ಸಂಸ್ಕೃತಿ ಮತ್ತು ಮೂಲ ಧರ್ಮ ಇವುಗಳಲ್ಲಿದೆ.

ಪುರುಷ ತನ್ನ ಲಿಂಗವನ್ನು ಹಿಡಿದುಕೊಂಡಿರುವ ಮತ್ತು ಮಹಿಳೆ ಅದನ್ನು ಹೊತ್ತುಕೊಂಡಿರುವ ಒಂದು ಶಿಲ್ಪ, ಹಾಗೂ ಮಹಿಳೆ ತನ್ನ ಯೋನಿಯನ್ನು ಹಿಡಿದುಕೊಂಡಿರುವ ಮತ್ತೊಂದು ಶಿಲ್ಪ ಸೂಚಿಸುವುದು ದ್ರಾವಿಡ ಮತ್ತು ದ್ರಾವಿಡ ಪೂರ್ವ ಸಮುದಾಯಗಳ ಫಲವಂತಿಕೆಯ ಆಚರಣೆ (fertility cult) ಯನ್ನು...
ಜಗತ್ತಿನಲ್ಲಿ ಇಂದು ಇರುವ ವೈದಿಕ, ಇಸ್ಲಾಂ, ಪಾರ್ಸಿ, ಕ್ರೈಸ್ತ ಮೊದಲಾದ ಯಾವುದೇ ಮತಧರ್ಮ ಹುಟ್ಟುವುದಕ್ಕೆ ಮೊದಲು ವ್ಯಾಪಕವಾಗಿ ಇದ್ದ ಆಚರಣೆ ಇದು. ಭಾರತದ ಮಟ್ಟಿಗೆ ಆರ್ಯರು ಇಲ್ಲಿಗೆ ಕಾಲಿಡುವ ಮುನ್ನ ದ್ರಾವಿಡ ಸಮುದಾಯಗಳು ಎಲ್ಲೆಡೆ ಪಾಲಿಸುತ್ತಿದ್ದ "ಧರ್ಮ" ಇದು.
ಇದೇ ಆಚರಣೆಗಳು ಮುಂದೆ ವ್ಯವಸ್ಥಿತ ರೂಪ ಪಡೆದು ತಾಂತ್ರಿಕ ಪಂಥದ ಏಳಿಗೆಗೆ ಅನುವು ಮಾಡಿಕೊಟ್ಟವು ಎಂದು ಮಾನವಶಾಸ್ತ್ರಜ್ಞರು, ಸಂಸ್ಕೃತಿ ಚಿಂತಕರು ಶೋಧಿಸಿದ್ದಾರೆ.

ಕರ್ನಾಟಕದಲ್ಲಿಯೇ ಅನೇಕ ಕಡೆಗಳಲ್ಲಿ ಲಜ್ಜಾ ಗೌರಿಯ ವಿಗ್ರಹಗಳು ದೊರೆತಿವೆ. ಲಜ್ಜಾಗೌರಿಯ ಮುಖವು ಅರಳಿದ ಕಮಲವನ್ನು ಹೊಂದಿದ್ದು ಯೋನಿ ಮೇಲ್ಮುಖವಾಗಿರುತ್ತದೆ... ಇದೂ ಸಹ ಫಲವಂತಿಕೆ ಪಂಥದ ಪೂಜಾ ಸಾಧನವೇ ಆಗಿದೆ.

ಈ ಕೆತ್ತನೆಗಳಲ್ಲಿನ ಮೂಲ ತಿಳುವಳಿಕೆಯ ಸಾರ ಇಷ್ಟೇ. ಸಕಲ ಜೀವಜಂತುಗಳ ಸಂತಾನೋತ್ಪತ್ತಿಗೆ ಕಾರಣವಾಗುವ ಸ್ತ್ರೀ ಪುರುಷ ಜನನಾಂಗಗಳೇ ಪೂಜನೀಯವಾದವು.

ಮುಂದೆ ಶೈವ ಪಂಥವು ಸ್ವೀಕರಿಸಿದ ಲಿಂಗವೂ ಸ್ತ್ರೀ-ಪುರುಷ ಸಮಾಗಮ ತತ್ವವನ್ನೇ ಸಾಂಕೇತಿಕಗೊಳಿಸಿಕೊಂಡದ್ದು. ಈ ಬಗ್ಗೆ ಸಂಸ್ಕೃತಿ ಚಿಂತಕರಾದ ಡಾ.ಲಕ್ಷ್ಮೀಪತಿ ಕೋಲಾರ ಅವರು ತಮ್ಮ 'ಲಾಗಾಯ್ತಿನ ಲಿಂಗ ಪುರಾಣ' ಎಂಬ ಲೇಖನದಲ್ಲಿ, "ವೇದದಲ್ಲೆಲ್ಲೂ "ಶಿವ' ಎಂಬ ಪದದ ಪ್ರಯೋಗವೂ ಆಗಿಲ್ಲ ಎಂಬುದನ್ನು ಶಂ.ಭಾ. ಜೋಶಿಯವರು ತಮ್ಮ 'ಶಿವ ರಹಸ್ಯ' ದಲ್ಲಿ ದಾಖಲಿಸಿದ್ದಾರೆ. ವೈದಿಕ ಸಾಹಿತ್ಯದಲ್ಲಿ ಮೊದಲು ಶಿವ ಎಂಬ ನಾಮದ ಪ್ರಯೋಗವಾಗಿರುವುದು ಶ್ವೇತಾಶ್ವತೋಪನಿಷತ್ತಿನಲ್ಲೇ! ದ್ರಾವಿಡ ಭಾಷಾ ವಿಜ್ಞಾನಿಗಳು ಈಗಾಗಲೇ ದೃಢಪಡಿಸಿರುವಂತೆ 'ಶಿವ' ಮತ್ತು 'ಲಿಂಗ' ಶಬ್ದಗಳು ಸಂಸ್ಕೃತ ಭಾಷೆಯದ್ದಲ್ಲವೇ ಅಲ್ಲ....." ಎನ್ನುತ್ತಾರೆ. ಲಿಂಗ ಎಂಬ ಪದವು ಕೋಲಾ ಮುಂಡಾ ಬುಡಕಟ್ಟು ಜನರಿಂದ ಪಡೆದುಕೊಂಡಿದ್ದೆಂದೂ ಈ ಕುರಿತ ಅಧ್ಯಯನಗಳು ತಿಳಿಸಿವೆ.

ದ್ವೈತ ಹಾಗೂ ಅದ್ವೈತ ಚಿಂತನೆಗಳ ಮೂಲವೂ ಸಹ ಈ ಸ್ತ್ರೀ ಪುರುಷ ಸಂಯೋಗದ ಫಲವಂತಿಕೆ ಪಂಥದಲ್ಲಿಯೇ ಇತ್ತು ಎನ್ನಲಾಗುತ್ತದೆ. ಹೆಣ್ಣು ಗಂಡಿನ ಮಿಲನದ ಸರಳ ಸುಂದರ ಅದ್ವೈತ ತತ್ವವನ್ನು ಮುಂದೆ ಎಂಟನೇ ಶತಮಾನದಲ್ಲಿ ಜನವಿರೊಧಿ ಸಿದ್ಧಾಂತವಾಗಿಸಲಾಯಿತು. ಈ ಬಗ್ಗೆ ಲಕ್ಷ್ಮೀಪತಿ ಕೋಲಾರ ಅವರು ಅದೇ ಲೇಖನದಲ್ಲಿ ಹೀಗ ಬರೆಯುತ್ತಾರೆ, "ಹೆಣ್ಣು- ಗಂಡುಗಳು ದ್ವೈತವಾಗಿದ್ದು, ಅವರ ಸಮಾಗಮದಿಂಸ ಸೃಷ್ಟಿಕ್ರಿಯೆ ನಡೆದು, ಅಲ್ಲಿ ಹುಟ್ಟುವ ಹೊಸ ಜೀವ ಅವರಿಂದ ಬೇರೆಯಲ್ಲವಾಗಿ ಅದು ಅದ್ವೈತ. ಇದು ಜೇನು ಕುರುಬರ ಅಣಪೆ ನೂರಾಳೊಡೆಯನ ಪರಿಕಲ್ಪನೆಯ ಹಿಂದಿರುವ ಆದಿಮವಾದ, ಸರಳ ಅದ್ವೈತ ತತ್ವ. ಜೇನು ಕುರುಬರಲ್ಲಿನ ಈ ಸೃಷ್ಟಿ ಕ್ರಿಯೆಯನ್ನಾಧರಿಸಿದ ಅದ್ವೈತ ತತ್ವವನ್ನೇ ವೈದಿಕ ಪೂರ್ವದ ಅಥವ ದ್ರಾವಿಡರ ತಂತ್ರ ಪಂಥವು ತಂತ್ರಾಕೃತಿಗಳ ಮೂಲಕವೇ ಹಿಡಿದಿಟ್ಟಿತು. ಉದಾಹರಣೆಗೆ ಸರಳವಾಗಿ ಹೀಗೆ ವಿವರಿಸಬಹುದು: ಮೇಲ್ಮುಖವಾದ ತ್ರಿಕೋನವು ಪುರುಷ ಲಿಂಗದ ಸಂಕೇತವಾದರೆ ಕೆಳಮುಖವಾದ ತ್ರಿಕೋನವು ಸ್ತ್ರೀಲಿಂಗದ ಸಂಕೇತವೆಂದುಕೊಳ್ಳೋಣ. ಹೆಣ್ಣು ಗಂಡುಗಳು ಪ್ರತ್ಯೇಕವಾಗಿರುವವರೆಗೂ ಈ ತ್ರಿಕೋನಗಳು ಬೇರೆ ಬೇರೆಯೇ ಆಗಿ ದ್ವೈತವನ್ನು ಹೇಳುತ್ತವೆ. ಹೆಣ್ಣು- ಗಂಡುಗಳು ಸಮಾಗಮಗೊಂಡಾಗ ಎರಡು ತ್ರಿಕೋನಗಳೂ ಹೀಗೆ ಬೆಳೆದುಕೊಂಡು ಆರು ತ್ರಿಕೋನಗಳನ್ನು ಸೃಷ್ಟಿಸುತ್ತವೆ. ಈ ಹೊಸದಾದ ಆರು ತ್ರಿಕೋನಗಳೂ ಮೂಲದ ಹೆಣ್ಣು ಗಂಡುಗಳ ಎರಡು ತ್ರಿಕೋನಗಳಿಂದ ಹೊರತಾದುದಲ್ಲವಾದ್ದರಿಂದ ಅದು ಅದ್ವೈತವನ್ನು ಸಾರುತ್ತದೆ. ಮನುಷ್ಯ ಮೂರು ಸಂದರ್ಭಗಳಲ್ಲಿ ತುರಿಯಾವಸ್ಥೆಯನ್ನು (orgasm) ತಲುಪುತ್ತಾನೆಂದು ಶೈವ ತತ್ವ ಹೇಳುತ್ತದೆ. ಅದು ಹೆಣ್ಣು ಗಂಡಿನ ಸಮಾಗಮ, ಸಂಗೀತ ಹಾಗೂ ನೃತ್ಯದ ತಲ್ಲೀನತೆಗಳಲ್ಲಿ. ಹಾಗಾಗಿ ಇದೇ ತಂತ್ರಾಕೃತಿಯನ್ನು
ಕೊಂಚ ಬದಲಿಸಿ ಢಮರುಗವನ್ನು ಸೃಷ್ಟಿಸಿ ಹೆಣ್ಣು ತ್ರಿಕೋನದಿಂದ ಶಕ್ತಿ ಮತ್ತು ಪುರುಷ ತ್ರಿಕೋನದಿಂದ ಶಿವನನ್ನು ಇರಿಸಿ ಶಿವ ಶಕ್ತಿಯರ ಸಮಾಗಮದಲ್ಲಿ ನಾದೋತ್ಪತ್ತಿಯ ತತ್ವವನ್ನು ವಿವರಿಸುತ್ತದೆ. ಇದು ದ್ರಾವಿಡ ಪೂರ್ವ ಬುಡಕಟ್ಟುಗಳ phallic cult ನಿಂದ ಎತ್ತಿ ವಿವರಿಸಿದ diagrammatic ಅದ್ವೈತವಾಗಿದೆ. ಈ ಮೂಲ ಅದ್ವೈತವನ್ನು ಸೃಷ್ಟಿಶೀಲ ನೆಲೆಯಿಂದ ಪಲ್ಲಟಗೊಳಿಸಿ ಪರ- ಬ್ರಹ್ಮ- ಆತ್ಮ- ಪರಮಾತ್ಮದ ವೈದಿಕೋಪನಿಷತ್ತಿನ ವಂಚ ಜಾಲದಲ್ಲಿ ಸಂಕೀರ್ಣಗೊಳಿಸಿ ಜನಸಾಮಾನ್ಯರಿಗೆ ಎಟುಕದಂತೆ ಜಟಿಲ ತತ್ವವನ್ನಾಗಿಸಿದ್ದೊಂದು ಪಿತೂರಿಯೂ ಆಗಿದೆ. ಈ ವಂಚಕ ಚರಿತ್ರೆಯ ವಿವರಣೆಯೂ ಮತ್ತೊಂದು ಅಧ್ಯಾಯವಾಗಬಲ್ಲದು".

ಇಂದಿನ ಕಾಲದಲ್ಲಿ ಹಾಸ್ಯ ಎನಿಸುವ, ವಿಚಿತ್ರ ಎನಿಸುವ ಜನಪದರ ಎಷ್ಟೋ ಆಚರಣೆಗಳಲ್ಲಿ, ನಂಬಿಕೆಗಳಲ್ಲಿ ಇತಿಹಾಸದ ಸತ್ಯಗಳು ಹುದುಗಿ ಹೋಗಿರುತ್ತವೆ. ಅವುಗಳನ್ನು ಎತ್ತಿ ತೆಗೆದು ಜನರಿಗೆ ವಿವರಿಸುವ ಜರೂರು ಇಂದು ಎದುರಾಗಿದೆ.. ಬದುಕಿನ ಪ್ರತಿ ಕ್ಷಣವೂ ವೈದಿಕಗೊಳ್ಳುತ್ತಿರುವ ಕೇಡುಗಾಲದಲ್ಲಿರುವ ನಾವು ಸಂಸ್ಕೃತಿಯ ಮಹಾ ಮರೆವಿನಿಂದ ಹೊರಬರಲೇಬೇಕಾಗಿದೆ.

- ಹರ್ಷಕುಮಾರ್ ಕುಗ್ವೆ

ಚಿತ್ರಗಳು: ಬಿದ್ದ ಮಣ್ಣು ತುಂಬಿದ ಕಲ್ಲುಗಳು ಆನಂದಪುರ ಬಳಿ ಸಿಕ್ಕವು
ನಿಂತಿರುವ ಕಲ್ಲು- ಉಳವಿ ಕೆರೆಯ ಮೇಲಿನವು

Friday 20 December 2019

ಟಿ.ಇ.ಟಿ ಪರೀಕ್ಷೆ ತಯಾರಿಗೆ ಸೂಕ್ತ ಮಾರ್ಗಗಳು

ವೆಂಕಟಸುಬ್ಬರಾವ್..

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೋಲಿಸಿದರೆ ಕರ್ನಾಟಕ ಟಿ.ಇ.ಟಿ. (ಟೀಚರ್ಸ್ ಎಲಿಜಿಬಿಲಿಟಿ ಟೆಸ್ಟ್) ಪರೀಕ್ಷೆಗೆ ಬೇರೆಯದೇ ರೀತಿಯ ಪ್ರಾಮುಖ್ಯತೆ ಇದೆ.


ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಶಿಕ್ಷಕರ ಹುದ್ದೆಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಟಿ.ಇ.ಟಿ.! ಹೀಗಾಗಿ, ಇಲ್ಲಿ ಕೇವಲ ಪ್ರಶ್ನೆಗಳಿಗೆ ಸರಿಯಾದ ರೀತಿಯಲ್ಲಿ, ವೇಗವಾಗಿ ಉತ್ತರಿಸುವುದು ಮಾತ್ರವಲ್ಲ, ಮಕ್ಕಳ ಮನಸ್ಸನ್ನು ಸರಿಯಾದ ರೀತಿಯಲ್ಲಿ ಅರಿತು ಅವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ, ಅವರಿಗೆ ವಿದ್ಯಾಭ್ಯಾಸದ ಜೊತೆಗೆ, ಜೀವನದ ಮೌಲ್ಯಗಳು, ಆದರ್ಶಗಳನ್ನು ಕಲಿಸಬೇಕಾದ ಗುರುತರವಾದ ಜವಾಬ್ದಾರಿ ಇರುತ್ತದೆ. ಅವರಿಗೆ ಮೌಲ್ಯಗಳನ್ನು ಕಲಿಸುವುದಕ್ಕೆ ಮೊದಲು ಶಿಕ್ಷಕರು ಅವುಗಳನ್ನು ಪಾಲಿಸಬೇಕಾಗುತ್ತದೆ.


ಈ ಸಮಯದಲ್ಲಿ ತಾವು ಟಿ.ಇ.ಟಿ ಪರೀಕ್ಷೆಗೆ ಸಂಪೂರ್ಣ ತಯಾರಾಗಿದ್ದೀರಿ ಮತ್ತು ಈ ಲೇಖನವನ್ನು ಓದುವ ಮೊದಲು, ಟಿ.ಇ.ಟಿ ಪರೀಕ್ಷೆಯ ವಿಷಯಗಳನ್ನು ಸರಿಯಾಗಿ ಅರ್ಥೈಸಿ ಓದಿಕೊಂಡಿದ್ದೀರಿ ಎಂದು ಭಾವಿಸುತ್ತಾ, ಓದಿದ ವಿಷಯಗಳನ್ನು ಸರಳವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದಾದ ಕೆಲವು ವಿಧಾನಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ. ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಹಲವಾರು ವಿಧಾನಗಳಿವೆ, ಈ ಕೆಳಗಿನ ಕೆಲವು ವಿಧಾನಗಳು ತಮಗೆ ಸಹಾಯಕವಾಗಬಹುದು.


ಪದಜೋಡಣೆ ವಿಧಾನ


ಈ ವಿಧಾನದಲ್ಲಿ, ತಾವು ಓದಿದ ವಿಷಯಗಳನ್ನು ಸರಳ ಪದಗಳಾಗಿ ಅಥವಾ ಸರಳ ಅರ್ಥಪೂರ್ಣ ವಾಕ್ಯಗಳಾಗಿ ಬದಲಾಯಿಸಿ ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಈ ವಿಧಾನವು ಸಮಾಜಶಾಸ್ತ್ರ, ವಿಜ್ಞಾನ ಹಾಗೂ ಭಾಷಾ ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಸಹಕಾರಿ.


ಉದಾ : ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರೇನು?


ಈ ಕೆಳಗಿನ ಸರಳವಾಕ್ಯದ ಸಹಾಯದಿಂದ ಈ ಪ್ರಶ್ನೆಯ ಉತ್ತರವನ್ನು ನೆನಪಿನಲ್ಲಿ ಇಟ್ಟುಕೊಳ್ಳಬಹುದು,


ಅವರಂಗಿ ಜೇಬು ಮುರಿದು ಹೋಯಿತು, ಸೂಜಿ ದಾರದಿಂದ ಹೊಲಿ!


ಇಲ್ಲಿ ಅವರಂಗಿ ಜೇಬು ಔರಂಗಜೇಬ್,


ಮುರಿದು - ಮುರಾದ್


ಸೂಜಿ - ಶೂಜ


ದಾರ - ದಾರ


ಉತ್ತರ: ಷಹಜಹಾನನ ನಾಲ್ಕು ಜನ ಮಕ್ಕಳ ಹೆಸರು ಔರಂಗಜೇಬ್, ಮುರಾದ್, ಶೂಜ, ದಾರ !


ಎಷ್ಟು ಸರಳ ಅಲ್ಲವೇ !


ಹೀಗೆ ಪದ ಜೋಡಣೆ ವಿಧಾನದಿಂದ ಹಲವಾರು ವಿಷಯಗಳನ್ನು ಸರಳವಾಗಿ ನೆನಪಿನಲ್ಲಿಟ್ಟುಕೊಳ್ಳಬಹುದು.


ಈ ವಿಧಾನದಿಂದ ತಾವು ಓದಿದ ವಿಷಯಗಳ ಮುಖ್ಯ ಅಂಶಗಳನ್ನು ಸರಳವಾದ ವಾಕ್ಯಗಳ ಸಹಾಯದಿಂದ ನೆನಪಿನಲ್ಲಿಟ್ಟುಕೊಳ್ಳಬಹುದು. ತಮ್ಮದೇ ವಾಕ್ಯಗಳಾದ್ದರಿಂದ ನೆನಪಿನಲ್ಲಿಟ್ಟುಕೊಳ್ಳುವುದು ಸುಲಭ. ಹೀಗೆ ತಾವು ಮೂಡಿಸಿದ ವಾಕ್ಯಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ. ಈ ವಾಕ್ಯಗಳು, ಟಿ.ಇ.ಟಿ. ಪರೀಕ್ಷೆಯಷ್ಟೇ ಅಲ್ಲದೆ, ಮುಂದೆ, ನಿಮ್ಮ ತರಗತಿಗಳಲ್ಲಿಯೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತವೆ.


ಮೈಂಡ್ ಮ್ಯಾಪ್ ವಿಧಾನ


ನಮ್ಮ ಮೆದುಳು ಚಿತ್ರಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವಿಧಾನದಲ್ಲಿ ನೀವು ಓದಿದ ಬಹಳಷ್ಟು ವಿಷಯಗಳನ್ನು ಚಿತ್ರೀಕರಿಸಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು. ಇದೊಂದು ಅತ್ಯಂತ ಸರಳ ವಿಧಾನ. ಆದರೆ ಬಹಳ ಪರಿಣಾಮಕಾರಿ ವಿಧಾನ. ಈ ವಿಧಾನವು ಭಾಷೆ, ಸಮಾಜಶಾಸ್ತ್ರ ಹಾಗೂ ವಿಜ್ಞಾನದ ವಿಷಯಗಳಿಗೆ ಬಹಳ ಉಪಯುಕ್ತ.


ಇಲ್ಲಿ ಒಂದು ಪಾಠದ ಸರಳ ಚಿತ್ರವನ್ನು ಸಂಪೂರ್ಣವಾಗಿ ಒಂದೇ ಹಾಳೆಯಲ್ಲಿ ಬಿಡಿಸಿಟ್ಟುಕೊಳ್ಳಬಹುದು. ಇದರಿಂದ, ಪರೀಕ್ಷೆಗೆ ಮೊದಲು ಪುನಾರಾವರ್ತನೆಯು ಬಹಳ ಸುಲಭವಾಗುತ್ತದೆ ಹಾಗೂ ಪರೀಕ್ಷೆಯ ಸಮಯದಲ್ಲಿ ಈ ಚಿತ್ರವನ್ನು ಅತ್ಯಂತ ಸುಲಭವಾಗಿ ನೆನಪಿಸಿಕೊಳ್ಳಬಹುದು ಹಾಗೂ ಪ್ರಶ್ನೆಗಳಿಗೆ ಅತ್ಯಂತ ಸುಲಭವಾಗಿ ಉತ್ತರಿಸಬಹುದು. ಈ ವಿಧಾನವು ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲದೇ ಮುಂದೆ ತರಗತಿಗಳಲ್ಲಿಯೂ ಉಪಯೋಗಕ್ಕೆ ಬರುತ್ತದೆ.


ಮೈಂಡ್ ಮ್ಯಾಪ್‌ನ ಒಂದು ಉದಾಹರಣೆ:


ಸರಳವಾದ ತಾಳೆ ನೋಡುವ ಪದ್ಧತಿ


ಈ ತಾಳೆ ನೋಡುವ ಪದ್ಧತಿಯಿಂದ ಗಣಿತ (ಅಂಕಗಣಿತ ಮತ್ತು ಬೀಜಗಣಿತ)ದ ಸಮಸ್ಯೆಗಳ ಉತ್ತರಗಳನ್ನು ಅತ್ಯಂತ ವೇಗವಾಗಿ ತಾಳೆ ನೋಡಲು ಸಹಾಯಕವಾಗುತ್ತದೆ. ಈ ವಿಧಾನವು ಕೇವಲ ತಾಳೆ ನೋಡುವ ವಿಧಾನ. ಇದರಿಂದ ಬಹು ಆಯ್ಕೆ ಪ್ರಶ್ನೆಗಳಿಗೆ ಸುಲಭವಾಗಿ, ಕೇವಲ ಉತ್ತರಗಳನ್ನು ಗಮನಿಸುವುದರ ಮೂಲಕ ಸರಿಯಾದ ಉತ್ತರವನ್ನು ಕಂಡುಹಿಡಿಯಬಹುದು! ಇದು ವೇದಗಣಿತದ ವಿಧಾನ.


ಹೀಗೆ ತಾಳೆ ನೋಡಿ


ಈ ವಿಧಾನದಲ್ಲಿ ಎಲ್ಲ ಸಂಖ್ಯೆಗಳನ್ನೂ ಒಂದಂಕಿಯಾಗಿ ಪರಿವರ್ತಿಸಿ. ಒಂದಂಕಿಯಾಗಿ ಪರಿವರ್ತಿಸಲು ಕೊಟ್ಟಿರುವ ಸಂಖ್ಯೆಯ ಎಲ್ಲ ಅಂಕಿಗಳನ್ನೂ ಕೂಡಿಸಿ. ಉದಾ : 12 ರ ಒಂದಂಕಿ = 1 + 2 = 3, 65ರ ಒಂದಂಕಿ = 6 + 5 = 11 ( ಎರಡು ಅಂಕಿಗಳು ಬಂದರೆ ಮತ್ತೆ ಕೂಡಿಸಿ ಒಂದಂಕಿ ಮಾಡಿ) = 1 + 1 = 2


ಈ ಒಂದಂಕಿ ಸಹಾಯದಿಂದ ಸುಲಭವಾಗಿ ತಾಳೆ ನೋಡಬಹುದು.


ಉದಾ : 123ರ ವರ್ಗ


ಎ) 15129 ಬಿ) 15139 ಸಿ) 25129 ಡಿ) 15229


ಮೇಲಿನ, ಉದಾಹರಣೆಯಲ್ಲಿ ಪ್ರಶ್ನೆಯಲ್ಲಿರುವ 123ನ್ನು ಒಂದಂಕಿಯಾಗಿ ಪರಿವರ್ತಿಸಿ,


1+2 + 3 = 6, 6ರ ವರ್ಗ( ಏಕೆಂದರೆ, ಇಲ್ಲಿ ನಾವು 123ರ ವರ್ಗವನ್ನು ಕಂಡುಹಿಡಿಯಬೇಕು) = 36 = 3+6 ರ ಒಂದಂಕಿ = 9


ಈಗ ಉತ್ತರದ ಆಯ್ಕೆಗಳಲ್ಲಿ, ಯಾವ ಆಯ್ಕೆಯು 9ನ್ನು ಒಂದಂಕಿಯಾಗಿ ಕೊಡುತ್ತದೆ ಎಂದು ನೋಡಿ.


ಆಯ್ಕೆ ಎ) ದ ಒಂದಂಕಿ 9 ಆಗುತ್ತದೆ, ಅಂದರೆ, 123 ರ ವರ್ಗ 15129 ಆಯ್ಕೆ ಎ) ಸರಿ ಉತ್ತರ !


ಈ ತಾಳೆ ನೋಡುವ ಪದ್ಧತಿಯಿಂದ ಸರಿಯಾದ ಆಯ್ಕೆಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಕಂಡುಹಿಡಿಯಬಹುದು!


ಒಮ್ಮೊಮ್ಮೆ ಒಂದಕ್ಕಿಂತ ಹೆಚ್ಚು ಆಯ್ಕೆಗಳ ಒಂದಂಕಿಗಳು ಒಂದೇ ಆಗಿದ್ದರೆ ಬೇರೆಯ ರೀತಿಯ ತಾಳೆ ನೋಡುವ ಪದ್ಧತಿಗಳನ್ನು ಬಳಸಬಹುದು. ಮೊದಲೇ ತಿಳಿಸಿದಂತೆ, ಈ ಕೆಲವು ವಿಧಾನಗಳು ವಿಷಯಗಳನ್ನು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳಲು ಮಾತ್ರ ಸಹಕಾರಿಯಾಗಿರುತ್ತವೆ.


(ಲೇಖಕರು .ನಿರ್ದೇಶಕರು, ಸ್ಮಾರ್ಟ್ ಸೆರೆಬ್ರಮ್, ಬೆಂಗಳೂರು)


ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...