ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 28 October 2019

ರಹಮತ್ ತರೀಕೆರೆ ಅವರ ಒಂದು ಲೇಖನ

#ರಹಮತ್ #ತರೀಕೆರೆ​ ಅವರ ಲೇಖನ .

#ಟಿಪ್ಪು #ಸುಲ್ತಾನ್​ #ಭಾರತದ #ಮೊದಲ #ಸ್ವಾತಂತ್ರ್ಯ #ಸೇನಾನಿ

ಮೈಸೂರ ಅರಮನೆಯನ್ನು ನೋಡುವಾಗ, ಚರಿತ್ರೆಯ ಎರಡು ವಿರುದ್ಧ ಸಂಗತಿಗಳು ಒಂದೇ ಕಡೆ ನೆಲೆಸಿರುವ ವಿಚಿತ್ರ ಅನುಭವವಾಗುತ್ತದೆ. ಈ ವೈರುಧ್ಯ ಉಂಟಾಗಿರುವುದು ಟಿಪ್ಪುವಿನ ಖಡ್ಗ ಹಾಗೂ ಅರಮನೆಯ ಗೋಡೆಗಳಲ್ಲಿರುವ ಭಿತ್ತಿಚಿತ್ರಗಳಿಂದ. ದರ್ಬಾರ್ ಸಭೆ, ಪಟ್ಟಾಭಿಷೇಕ ಉತ್ಸವ, ದಸರಾ, ಮದುವೆ, ರಾಜಕುವರರ ಹುಟ್ಟಿದಹಬ್ಬ ಇತ್ಯಾದಿ ಉತ್ಸವ ಮತ್ತು ಕಾರ್ಯಕ್ರಮಗಳಲ್ಲಿ, ಒಡೆಯರ ಜತೆ ಬ್ರಿಟಿಶ್ ಅಧಿಕಾರಿಗಳು ಕಾಲಮೇಲೆ ಕಾಲು ಹಾಕಿ ಸುಖಾಸೀನವಾಗಿ ಕುಳಿತಿರುವುದನ್ನು ಈ ವರ್ಣಚಿತ್ರಗಳು ಕಾಣಿಸುತ್ತವೆ.
ಈ ಚಿತ್ರಗಳನ್ನೂ ಅರಮನೆಯ ಸಿಂಹಾಸನ, ಪಲ್ಲಕ್ಕಿ ಇತ್ಯಾದಿಗಳ ಕಣ್ಕುಕ್ಕುವ ವೈಭವವನ್ನೂ ನೋಡಿಕೊಂಡು, ಬೆಳ್ಳಿಯ ಬಾಗಿಲು ಮೂಲಕ ಹೊರಹೋಗಲು ಕೆಳಕ್ಕೆ ಇಳಿದರೆ, ಅಲ್ಲಿ ಟಿಪ್ಪುವಿನ ಖಡ್ಗದ ಚಿತ್ರವಿಡಲಾಗಿದೆ. ಅದನ್ನು-ಉದ್ದೇಶಪೂರ್ವಕವಾಗಿ ಅಲ್ಲದೆ ಪ್ರಾಸಂಗಿಕವಾಗಿ ಇಡಲಾಗಿದೆ. ಆ ಖಡ್ಗದ ಚಿತ್ರದಡಿಯಲ್ಲಿ, ಟಿಪ್ಪು ಗಾಯಗೊಂಡು ಪ್ರಾಣಬಿಡುತ್ತಿದ್ದ ಹೊತ್ತಲ್ಲಿ ಅವನಿಂದ ಖಡ್ಗವನ್ನು ಹೇಗೆ ಕಿತ್ತುಕೊಳ್ಳಲಾಯಿತು, ನಂತರ ಈ ಖಡ್ಗ ಹೇಗೆ ಲಂಡನ್ನಿನ ಬ್ರಿಟಿಶ್ ಮ್ಯೂಸಿಯಂ ತಲುಪಿತು ಎಂಬ ವಿವರಣೆ ಕೊಡಲಾಗಿದೆ. ಅವನ ಕೊನೇ ಕ್ಷಣಗಳು ಎಂಥವು? ಗಾಯಗೊಂಡು ಬಿದ್ದಿದ್ದ ಟಿಪ್ಪುವಿನ ಖಡ್ಗವನ್ನು ಸಾಮಾನ್ಯ ಬ್ರಿಟಿಶ್ ಸೈನಿಕನೊಬ್ಬ ಕಿತ್ತುಕೊಳ್ಳಲು ಬಂದಾಗ, ಕೊನೆಯ ಸಲ ಪ್ರತಿರೋದಿಸುತ್ತಾನೆ.

ಸೈನಿಕನು ಟಿಪ್ಪುವೆಂದರಿಯದೆ, ಅವನ ತಲೆಗೆ ಗುಂಡು ಹಾರಿಸಿ ಕೊಂದು ಆ ಖಡ್ಗವನ್ನೂ ಅವನ ಉಡುಪಿನಲ್ಲಿದ್ದ ಬೆಲೆಬಾಳುವ ಆಭರಣಗಳನ್ನೂ ಕಿತ್ತುಕೊಳ್ಳುತ್ತಾನೆ. ಈ ದಾರುಣ ಪ್ರಸಂಗವನ್ನು ಮೊದಲ ಕಾದಂಬರಿಕಾರರಲ್ಲಿ ಒಬ್ಬರಾದ ಎಂ. ಎಸ್. ಪುಟ್ಟಣ್ಣನವರು, ತಮ್ಮ `ದಿ ಲಾಸ್ಟ್ ಹವರ್ ಆಫ್ ಟಿಪ್ಪುಸುಲ್ತಾನ್' ಎಂಬ ಲೇಖನದಲ್ಲಿ ವರ್ಣಿಸುತ್ತಾರೆ.

ಒಂದೆಡೆ, ಬ್ರಿಟಿಶರ ಜತೆ, ಅವರು ದಯಪಾಲಿಸಿದ ಜೆಸಿಇಸಿ ಇತ್ಯಾದಿ ಬಿರುದುಗಳನ್ನು ಧರಿಸಿ, ವಿರಾಜಮಾನರಾಗಿ ಕುಳಿತಿರುವ ಒಡೆಯರ ಚಿತ್ರ; ಇನ್ನೊಂದೆಡೆ, ತಾನು ಸೋಲುವ ಮತ್ತು ಸಾಯುವ ಅರಿವಿದ್ದರೂ ಶರಣಾಗದೆ, ಮೈಸೂರು ರಾಜ್ಯವನ್ನು ಉಳಿಸಿಕೊಳ್ಳಲು ಸ್ವಾಭಿಮಾನದಿಂದ ರಣರಂಗದಲ್ಲಿ ಹೋರಾಡಿ, ಶ್ರೀರಂಗಪಟ್ಟಣದ ಬೀದಿಯಲ್ಲಿ ಪ್ರಾಣಬಿಟ್ಟ ಟಿಪ್ಪುವಿನ ಕೊನೆಯ ದಿನದ ರೂಪಕವಾಗಿರುವ ಖಡ್ಗದ ಚಿತ್ರ. ತುಸುವೇ ರಾಜಿ ಮಾಡಿಕೊಂಡಿದ್ದರೆ, ಟಿಪ್ಪು ಕೂಡ ತಿರುವಾಂಕೂರು, ಹೈದರಾಬಾದ್, ಅವಧ್, ಪೇಶವೆ ಮುಂತಾದ ಸಂಸ್ಥಾನಿಕರಂತೆ, ಬ್ರಿಟಿಶರ ಜೊತೆ ‘ಗೌರವಾನ್ವಿತ ಒಪ್ಪಂದ’ ಮಾಡಿಕೊಂಡು, ‘ಸ್ವತಂತ್ರ’ ರಾಜನಾಗಿರಬಹುದಿತ್ತು.

ಇಲ್ಲವೆ ಸವಣೂರಿನ ನವಾಬನಂತೆ ಪೆನ್ಶನ್ ಪಡೆದು ಬದುಕಿರಬಹುದಿತ್ತು. ಆದರೆ ಸ್ವಾತಂತ್ರ್ಯ ಕಳೆದುಕೊಂಡು ಜೀವಿಸುವುದು ಅವನಿಗೆ ಬೇಡವೆನಿಸಿರಬಹುದು. ಮೂರನೇ ಮೈಸೂರು ಯುದ್ಧದ ಹೊತ್ತಿಗೆ ಅವನು ಸಾಕಷ್ಟು ಸೋಲು ಮತ್ತು ಮುಜುಗರ ಅನುಭವಿಸಿ ತಪ್ತನಾಗಿದ್ದನು. ಮಕ್ಕಳನ್ನು ಒತ್ತೆಯಿಟ್ಟಿದ್ದು ಅವನಿಗೆ ವೇದನೆಯ ಸಂಗತಿಯಾಗಿತ್ತು. ಬ್ರಿಟಿಷರು, ಮರಾಠರು, ನಿಜಾಮರು ಸೇರಿ ಅವನನ್ನು ಹಣ್ಣುಗಾಯಿ ಮಾಡಿದ್ದರು. ಇನ್ನೊಂದು ಯುದ್ಧ ನಡೆದರೆ ಸೋಲುವುದು ಖಚಿತವಾಗಿತ್ತು. ಆದರೂ ಸಾವು ಹೀಗೆ ಬಂದೆರಗಬಹುದೆಂದು ಆತ ಊಹಿಸಿರಲಿಕ್ಕಿಲ್ಲ.

ಅವನ ಶವವನ್ನು ಇಡೀರಾತ್ರಿ ದೊಂದಿಯ ಬೆಳಕಲ್ಲಿ ಹುಡುಕುವುದು, ಅದನ್ನು ಹೆಣಗಳ ರಾಶಿಯಲ್ಲಿ ಅಂಗರಕ್ಷಕನೊಬ್ಬ ಪತ್ತೆಮಾಡುವುದು, ಅದನ್ನು ಅರಮನೆಗೆ ತರುವುದು, ಮಹಿಳೆಯ ರೋದನ ಇತ್ಯಾದಿಯೆಲ್ಲವನ್ನೂ ಬ್ರಿಟಿಶ್ ಚಿತ್ರಕಾರರೇ ಚಿತ್ರಿಸಿದ್ದಾರೆ.
ಆದರೆ ಟಿಪ್ಪುವನ್ನು ಕೊಂದ ಬಳಿ ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ಬ್ರಿಟಿಶರು, ಒಡೆಯರನ್ನು ಹೀನಾಯವಾಗಿ ನಡೆಯಿಸಿಕೊಂಡರು.

ಕೆಲವು ಕಾಲ ಮುಮ್ಮಡಿಯನ್ನು ಸಿಂಹಾಸನದ ಮೇಲೆ ಕೂರಿಸಿದರೂ, ಏನೊ ನೆಪತೆಗೆದು (1831) ಕೆಳಗಿಳಿಸಿದರು. ಮುಂದಿನ 50 ವರ್ಷಕಾಲ ನಿಜವಾದ ಅಧಿಕಾರ ಬ್ರಿಟಿಶ್ ಕಮಿಶನರುಗಳ ಕೈಯಲ್ಲಿತ್ತು. ಈ ಪರಿಮಿತಿಯಲ್ಲೂ ಹತ್ತನೇ ಚಾಮರಾಜ ಒಡೆಯರ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರು ಆಧುನಿಕ ಮೈಸೂರು ರಾಜ್ಯವನ್ನು ಕಟ್ಟಲು ಮಾಡಿದ ಕೆಲಸಗಳು ಚಾರಿತ್ರಿಕವಾಗಿ ಮಹತ್ವದವು.

ಅದರಲ್ಲೂ ಹಿಂದುಳಿದ ಜಾತಿಗಳಿಗೆ ಅವರು ಜಾರಿತಂದ ಮೀಸಲಾತಿಯ ದೃಷ್ಟಿಯಿಂದ ಅವರ ಕಾರ್ಯವನ್ನು ಬಹಳ ಗೌರವದಿಂದ ದಾಖಲಿಸಬೇಕಿದೆ. ಆದರೆ, ಒಡೆಯರು ಬ್ರಿಟಿಶರ ವಿರುದ್ಧ ಯಾವುದೇ ರಾಷ್ಟ್ರೀಯ ಹೋರಾಟವೂ ಮೈಸೂರು ಸೀಮೆಯಲ್ಲಿ ಏಳದಂತೆ ದಮನಿಸುವ ಕೆಲಸವನ್ನೂ ಮಾಡಬೇಕಾಯಿತು.

ವಸಾಹತುಶಾಹಿಶಾಹಿ ವಿರೋಧಿಗಳಾಗಿದ್ದ ಸ್ವಾಮಿ ಅಪರಂಪಾರ, ಧೋಂಡಿಯಾವಾಘ್, ತರೀಕೆರೆಯ ಸರ್ಜಾ ರಂಗಪ್ಪನಾಯಕ, ಹನುಮಪ್ಪನಾಯಕ ಇವರೆಲ್ಲರನ್ನು ಅವರು ಕೊಂದರು. 1942ರ ಕ್ವಿಟ್ ಇಂಡಿಯಾ ಚಳುವಳಿ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ ನಡೆದ ಹೋರಾಟದಲ್ಲಿ ಭಾಗಿಯಾದ 5 ಜನ ಹೋರಾಟಗಾರರು, ಜೀವದಾನ ಮಾಡಬೇಕೆಂದು ಅಪೀಲು ಸಲ್ಲಿಸಿದಾಗ, ಮೈಸೂರು ಅವರು ಕ್ಷಮಾದಾನ ಮಾಡಲಿಲ್ಲ. ಹಾಗೆ ಮಾಡುವುದು ಅವರ ಕೈಯಲ್ಲೂ ಇರಲಿಲ್ಲ.

ಈಸೂರ ವೀರರನ್ನು ಗಲ್ಲಿಗೇರಿಸಲಾಯಿತು. ವಿದುರಾಶ್ವತ್ಥದ ಹೋರಾಟವನ್ನು ಹೊಸಕಿಹಾಕಿದರು. ಇದು ಒಡೆಯರಿಗಿದ್ದ ‘ಸ್ವಾತಂತ್ರ್ಯ’ದ ಸ್ವರೂಪವನ್ನು ತಿಳಿಸುತ್ತದೆ. ಎಂತಲೇ ಮೈಸೂರು ಅರಮನೆಯಲ್ಲಿ ನಿರುದ್ದಿಶ್ಯವಾಗಿ ಇಟ್ಟಿರುವ ಟಿಪ್ಪುವಿನ ಖಡ್ಗದ ಕತೆಯುಳ್ಳ ಫಲಕವು, ಚಾರಿತ್ರಿಕ ವ್ಯಂಗ್ಯವನ್ನು ಹುಟ್ಟಿಸುತ್ತದೆ.ಅದು ಮೈಸೂರ ಅರಮನೆಯ ಜೊತೆ, (‘ಗುಲಾಮಿಗೂ ಚಿನ್ನದ ಮುಲಾಮು’ ಎಂದು ಕುವೆಂಪು ವರ್ಣಿಸಿದ ಅರಮನೆ ವೈಭವದ ಜೊತೆ) ಹೊಂದಿಕೊಳ್ಳುವುದಿಲ್ಲ.

ಈ ವೈರುಧ್ಯ ಕಥನ ಜಗನ್ಮೋಹಿನಿ ಅರಮನೆಯೊಳಗೂ ಮುಂದುವರೆಯುತ್ತದೆ. ಇಲ್ಲಿ ಕೂಡ ವಿಜಯದ ನಗೆಹೊತ್ತ ಬ್ರಿಟಿಶ್ ದೊರೆಗಳ ಆಳೆತ್ತರದ ಚಿತ್ರಗಳ ನಡುವೆ, ಟಿಪ್ಪು ತನ್ನ ಎಳೆಯ ಮಕ್ಕಳನ್ನು ಬ್ರಿಟಿಶರಿಗೆ ಒತ್ತೆ ಇಡುತ್ತಿರುವ ಹಾಗೂ ಅವನ ಮೃತದೇಹವನ್ನು ರಣರಂಗದಲ್ಲಿ ಹುಡುಕಿ ತೆಗೆಯುತ್ತಿರುವ ವರ್ಣಚಿತ್ರಗಳಿವೆ.

ಕುತೂಹಲಕರವೆಂದರೆ, ಕರ್ನಾಟಕದ ಚರಿತ್ರೆಕಾರರು ಟಿಪ್ಪು ಹಾಗೂ ಮೈಸೂರು ಒಡೆಯರನ್ನು ಚಿತ್ರಿಸುವ ವಿಧಾನದಲ್ಲಿರುವ ತಾರತಮ್ಯ. ಬ್ರಿಟಿಶರು ಟಿಪ್ಪುವನ್ನು ‘ಕ್ರೂರಿ’ ಎಂದೂ, ಬಲಾತ್ಕಾರ ಮತಾಂತರ ಮಾಡಿಸಿದ ಮತಾಂಧನೆಂದೂ, ಮೈಸೂರರಸರ ಅಧಿಕಾರ ಕಿತ್ತುಕೊಂಡ ವಂಚಕನ ಮಗನೆಂದೂ ಯಾಕೆ ಚಿತ್ರಿಸಿದರು ಎಂಬುದು ಸುಲಭವಾಗಿ ಅರ್ಥವಾಗುತ್ತದೆ.

ಆದರೆ ಕರ್ನಾಟಕದ ಕೆಲವು ಚರಿತ್ರೆಕಾರರೂ ಇದೇ ಧಾಟಿಯಲ್ಲಿ ಬರೆಯುವುದು ಅರ್ಥವಾಗುವುದಿಲ್ಲ. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೈದರಾಲಿ ಮತ್ತು ಟಿಪ್ಪು ಆಳ್ವಿಕೆಯನ್ನು ಕೆಲವೇ ಸಾಲುಗಳಲ್ಲಿ ಮುಗಿಸಲು ಅವರು ತವಕಿಸುತ್ತಾರೆ. ಹೈದರ್ ಮತ್ತು ಟಿಪ್ಪು ಕುರಿತ ಅವರ ತಿರಸ್ಕಾರ ಎಂಥದ್ದೆಂದರೆ, ಕಡ್ಡಾಯವಾಗಿ ಮೈಸೂರು ಒಡೆಯರ ಬಗ್ಗೆ ಬಹುವಚನವನ್ನೂ, ಅಪ್ಪಮಕ್ಕಳಿಬ್ಬರಿಗೂ ಏಕವಚನವನ್ನೂ ಬಳಸುತ್ತಾರೆ; ಹೈದರನು `ಹಿಂದೂ’ ದೊರೆಗಳಿಂದ (ವಾಸ್ತವವಾಗಿ ದುರ್ಬಲರಾಗಿದ್ದ ಒಡೆಯರನ್ನು ಪಕ್ಕತಳ್ಳಿ ಆಳ್ವಿಕೆ ಮಾಡುತ್ತಿದ್ದ ದಳವಾಯಿಗಳಿಂದ) ಅಧಿಕಾರವನ್ನು ಕಸಿದುಕೊಂಡು `ಮುಸ್ಲಿಂ’ ಆಡಳಿತವನ್ನು ಆರಂಭಿಸಿದ `ಸರ್ವಾಧಿಕಾರಿ' ಎಂದು ಬರೆಯುತ್ತಾರೆ.

ಅವನೊಬ್ಬ ಸ್ವಾಮಿದ್ರೋಹಿ ಎಂಬುದು ಅವರ ನಂಬಿಕೆ. ಆಲೂರು ವೆಂಕಟರಾಯರ ‘ಕರ್ನಾಟಕ ವೀರರತ್ನಗಳು’ ಕೃತಿಯಲ್ಲಾಗಲಿ, ಚಿದಾನಂದಮೂರ್ತಿಯವರ ‘ಕನ್ನಡ ಸಂಸ್ಕøತಿ ನಮ್ಮ ಹೆಮ್ಮೆ’ಯಲ್ಲಾಗಲಿ ಹೈದರ್-ಟಿಪ್ಪು ಹೆಸರಿಲ್ಲ. ಕುವೆಂಪು ತಮ್ಮ ನಾಡಗೀತೆ `ಭಾರತ ಜನನಿಯ ತನುಜಾತೆ'ಯ ಮೊದಲನೆಯ ಕರಡುಪ್ರತಿಯಲ್ಲಿ ಟಿಪ್ಪು ಹೈದರರ ಹೆಸರನ್ನು ಸೇರಿಸಿದ್ದರು.

ನಂತರ ಯಾವ ಕಾರಣಕ್ಕೊ ತಿಳಿಯದು, ಅದನ್ನು ಕೈಬಿಟ್ಟರು. ಈ ಮನೋಭಾವದ ಮುಂದುವರಿಕೆ ಎಂದರೆ, ನಮ್ಮ ಶಾಲಾ ಗೋಡೆಗಳ ಮೇಲೆ ಬರೆಯಲಾಗುವ ವಸಾಹತುಶಾಹಿ ವಿರೋಧಿ ಹೋರಾಟಗಾರರ ಚಿತ್ರಗಳಲ್ಲಾಗಲಿ, ಸಾರ್ವಜನಿಕ ಜಾಗಗಳಲ್ಲಿ ನಿಲ್ಲಿಸಲಾಗುವ ಪ್ರತಿಮೆಗಳಲ್ಲಾಗಲಿ ಚೆನ್ನಮ್ಮ, ಮದಕರಿನಾಯಕ, ಕೃಷ್ಣದೇವರಾಯರ ಟಿಪ್ಪು ಇರದಂತೆ ನೋಡಿಕೊಂಡಿರುವುದು; ಟಿಪ್ಪು ನಿಧನವಾದ 200ನೇ ವರ್ಷದ ಕಾರ್ಯಕ್ರಮಗಳನ್ನು ಆಚರಿಸುವ ಪ್ರಸ್ತಾವನೆ ಬಂದಾಗ ವಿರೋಧ ವ್ಯಕ್ತವಾಗಿದ್ದು; ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕು ಎಂಬ ಪ್ರಸ್ತಾಪ ಬಂದಾಗಲೂ ಇಂತಹುದೇ ವಿರೋಧ ಬಂದಿತು.

ಸಾಂಕೇತಿಕವಾದ ಸ್ಥಾವರ ಸ್ಮಾರಕಗಳು ಆಯಾ ವ್ಯಕ್ತಿಯ ವ್ಯಕ್ತಿತ್ವವನ್ನು ಚಿಂತನೆಯನ್ನು ಸಮಕಾಲೀನ ಜೀವನದಲ್ಲಿ ಪಸರಿಸುವುದಿಲ್ಲ ಎಂಬುದು ನಮಗೆ ಗಾಂಧಿಜಿ ಹೆಸರಿನ ರಸ್ತೆ, ನಗರ, ಪ್ರತಿಮೆ, ಸರ್ಕಲ್ಲುಗಳಿಂದ ಗೊತ್ತಾಗಿದೆ. ಆದರೆ ಇಂತಹ ಸಾಂಕೇತಿಕ ಮತ್ತು ಔಪಚಾರಿಕ ಸ್ಮರಣೆಗಳಿಗೂ ಬರುತ್ತಿರುವ ವಿರೋಧಗಳು, ಚರಿತ್ರೆಯ ಮತೀಯವಾದಿ ನೆಲೆಯ ತಾರ್ಕಿಕ ಮುಂದುವರಿಕೆಯಾಗಿವೆ.

ಇದೇ ಇತಿಹಾಸಕಾರರು, ಟಿಪ್ಪು ನಂತರ `ಹಿಂದೂ' ದೊರೆಗಳಾದ ಮೈಸೂರು ಒಡೆಯರನ್ನು ಬ್ರಿಟಿಶರು ನಡೆಸಿಕೊಂಡ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವುದು ಕುತೂಹಲ ಹುಟ್ಟಿಸುತ್ತದೆ. ಒಡೆಯರನ್ನು ಬ್ರಿಟಿಶರು ಎಷ್ಟು ನಿಕೃಷ್ಟವಾಗಿ ನಡೆದುಕೊಂಡರು ಎಂಬುದಕ್ಕೆ ಅವರು ಚಾಮರಾಜ ಒಡೆಯರನ್ನು ಪಟ್ಟಕ್ಕೆ ತರುವಾಗ (1881) ಮಾಡಿಕೊಂಡ ಕರಾರು ಒಪ್ಪಂದದ ಕಲಮುಗಳೇ ಸಾಕ್ಷಿ.

ಇಡೀ ಈ ಒಪ್ಪಂದ ಪತ್ರವೂ ಕಲ್ಕತ್ತೆಯಿಂದ ಲಾರ್ಡ್ ಡಾಲ್‍ಹೌಸಿಯು ಬಂದಾಗ ಹೇಗೆ ದೀನವಾಗಿ ನಡೆದುಕೊಂಡರು ಎಂಬ ವಿವರಗಳನ್ನು ಆಸ್ಥಾನದ ಇತಿಹಾಸಕಾರರಾದ ಎಂ. ಶಿಂಗ್ರಯ್ಯನವರು ‘ಶ್ರೀ ಚಾಮರಾಜೇಂದ್ರ ಒಡೆಯರವರ ಚರಿತ್ರೆ’ಯಲ್ಲಿ (1903) ಮುಂಬರುವ ವ್ಯಾಖ್ಯಾನಕಾರರು ಹೊರಡಿಸುವ ಅರ್ಥದ ಪರಿವಿಲ್ಲದೆ ಅಮಾಯಕವಾಗಿ ಬರೆಯುತ್ತಾರೆ.

ಆದರೆ ಕೋಮುವಾದಿ ನಂಜಿನ ಈ ಚರಿತ್ರ ಲೇಖನಗಳಿಗೆ ಪ್ರತಿಯಾದ ಬರೆಹಗಳೂ ಇವೆ. ಇವು ಶ್ರೀರಂಗಪಟ್ಟಣದ ರಂಗನಾಥ, ನಂಜನಗೂಡಿನ ನಂಜುಂಡೇಶ್ವರ, ಮುಖ್ಯವಾಗಿ ಶೃಂಗೇರಿ ಮಠದ ಜೊತೆ ಟಿಪ್ಪು ನಡೆದುಕೊಂಡ ರೀತಿಯನ್ನೊ; ದಿವಾನ್ ಪೂರ್ಣಯ್ಯನಿಂದ ಹಿಡಿದು ತನ್ನ ಆಪ್ತ ಕಾರ್ಯದರ್ಶಿ ಶಿವಾಜಿಯ ತನಕ ಮುಖ್ಯ ಅದಿsಕಾರಿಗಳನ್ನು ಟಿಪ್ಪು ಮುಸ್ಲಿಮರಲ್ಲದವರ ಕೈಯಲ್ಲಿಟ್ಟಿದ್ದನ್ನೊ; ಹೈದರಾಬಾದ್, ಕರ್ನೂಲು, ಸವಣೂರುಗಳ ನಿಜಾಮ-ನವಾಬರನ್ನು ಅವನ ಮುಖ್ಯ ರಾಜಕೀಯ ಶತ್ರುಗಳಾಗಿ ಇದ್ದುದ್ದನ್ನೊ ಮುಂದಿಟ್ಟು, ಕೋಮುವಾದಿ ಚರಿತ್ರೆಯ ಆರೋಪ ಮತ್ತು ಪೂರ್ವಗ್ರಹಗಳಿಗೆ ಉತ್ತರಿಸುತ್ತವೆ.

ಇವುಗಳ ಸಮಸ್ಯೆಯೆಂದರೆ, ಟಿಪ್ಪುವನ್ನು ಯಾವ ತಪ್ಪೂ ಮಾಡದ ಸಜ್ಜನ ಎಂಬಂತೆ ಕಾಣಿಸುವ ಉದಾರ ಮಾನವತಾವಾದಿ ಉತ್ಸಾಹ. ಭಗವಾನ್ ಗಿದ್ವಾನಿಯವರ ‘ಟಿಪ್ಪೂಸುಲ್ತಾನನ ಖಡ್ಗ’ ಅಥವಾ ಶೇಕ್ ಆಲಿಯವರ `ಟಿಪ್ಪುಸುಲ್ತಾನ್' ಮುಂತಾದವು ರಕ್ಷಣಾತ್ಮಕ ಮಾದರಿಯ ಕೃತಿಗಳು. ಆದರೆ ಕೋಮುವಾದಿ ಚರಿತ್ರೆಕಾರರ ಆಪಾದನೆಗಳಿಗೆ ಎಡಪಂಥೀಯ ಚರಿತ್ರೆಕಾರರು ಕೊಡುವ ಉತ್ತರಗಳು ಬೇರೆ ತರಹ ಇವೆ.

ಅವರು ಹೈದರ್ ಮತ್ತು ಟಿಪ್ಪೂ ಹೇಗೆ ವಸಾಹತುಶಾಹಿಯನ್ನು ರಾಜಕೀಯ ಪ್ರಜ್ಙೆಯಲ್ಲಿ, ವಿಶಾಲವಾದ ರಾಷ್ಟ್ರಹಿತದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಂಡಿದ್ದ ದೇಶೀ ಪ್ರಭುಗಳಾಗಿದ್ದರು; ಮೈಸೂರು ರಾಜ್ಯವನ್ನು ಬಲಿಷ್ಠ ಆರ್ಥಿಕ ನೆಲೆಯ ಮೇಲೆ ಕಟ್ಟುವ ಆಧುನಿಕ ಮನಸ್ಸುಳ್ಳ ಕನಸುಗಾರ ದೊರೆಗಳಾಗಿದ್ದರು ಎಂಬುದನ್ನು ವಿಶ್ಲೇಷಿಸುತ್ತಾರೆ. ಇದಕ್ಕೆ ನಿದರ್ಶನ ಸಾಕಿಯವರು ರಚಿಸಿದ `ಮೇಕಿಂಗ್ ಹಿಸ್ಟರಿ’ (1997) ಪುಸ್ತಕ.

ಕುತೂಹಲಕರವೆಂದರೆ, ಕನ್ನಡ ಲೇಖಕರ ಪ್ರತಿಕ್ರಿಯೆ. ಇದು ಮಾಸ್ತಿಯವರಿಂದ ಆರಂಭಿಸಿ, ವೀರಕೇಸರಿ ಸೀತಾರಾಮಶಾಸ್ತ್ರಿ, ಹೆಚ್.ಎಸ್. ಶಿವಪ್ರಕಾಶ್, ಗಿರೀಶ್ ಕಾರ್ನಾಡ, ಲಿಂಗದೇವರು ಹಳೇಮನೆ, ಬಂಜಗೆರೆ ಜಯಪ್ರಕಾಶ್, ಎಂ.ಜೀವನ ತನಕ ಇದೆ. ಆಧುನಿಕ ಕನ್ನಡ ಸಾಹಿತ್ಯದ ಲೇಖಕರು ಹೈದರ್-ಟಿಪ್ಪು ಚರಿತ್ರೆಯನ್ನು ಕಥೆ ಕಾದಂಬರಿ ನಾಟಕ ಪದ್ಯಗಳ ಮೂಲಕ ಮರು ಸೃಷ್ಟಿಸಿದ್ದಾರೆ. ಮರುಸೃಷ್ಟಿಯೆಂದರೆ ಚರಿತ್ರೆಯ ಮರುವ್ಯಾಖ್ಯಾನವೇ.

ಇವರು ಕೋಮುವಾದಿ ಚರಿತ್ರೆಕಾರರು ನೋಡಲು ನಿರಾಕರಿಸಿದ ಸಂಗತಿಗಳನ್ನು ಕಾಳಜಿಯಿಂದ ಎತ್ತಿಕೊಳ್ಳುತ್ತಾರೆ; ಟಿಪ್ಪು ಒಬ್ಬ ದೊರೆಯಾಗಿ ಹಾಗೂ ಮನುಷ್ಯನಾಗಿ ಪಟ್ಟ ಪಾಡನ್ನು, ಅವನ ಬಾಳಿನ ದುಃಖ, ಸುಖ, ಕನಸು, ದುರಂತಗಳನ್ನು ನೋಡಲು ಯತ್ನಿಸುತ್ತಾರೆ. ಇದನ್ನು ಚರಿತ್ರೆಯ ಮಾನವೀಕರಣ ಎನ್ನಬಹುದು. ಈ ಸಾಲಿನಲ್ಲಿ ಮಾಸ್ತಿ ಕತೆ ಮಾತ್ರ (`ಡೂಬಾಯಿ ಪಾದ್ರಿಯ ಒಂದು ಪತ್ರ') ಟಿಪ್ಪು ಕುರಿತು ಕಟುವಾದ ನಿಲುವನ್ನು ತಳೆಯುತ್ತದೆ.

ಚರಿತ್ರೆಯ ಮಾನವೀಕರಣದಲ್ಲಿ ಕರ್ನಾಟಕ ಜಾನಪದ ಮನಸ್ಸಿನ ಪಾತ್ರ ವಿಶೇಷವಾದುದು. ಟಿಪ್ಪುವಿನ ಮೇಲೆ ಬಂದ ಲಾವಣಿಗಳನ್ನು ಗಮನಿಸಬೇಕು. ಟಿಪ್ಪುವನ್ನು ಕೊಂದ (1799) ಕೆಲವೇ ವರ್ಷಗಳಲ್ಲಿ ಮೈಸೂರು ಸೀಮೆಯಲ್ಲಿ ಲಾವಣಿಗಳು ಹುಟ್ಟಿಕೊಂಡಿದ್ದವು. ಜಾನ್ ಲೇಡನ್ 1803ರಲ್ಲಿ ಶ್ರೀರಂಗಪಟ್ಟಣದಲ್ಲಿ, ಮೊಟ್ಟಮೊದಲ ಟಿಪ್ಪು ಕುರಿತ ಲಾವಣಿಯನ್ನು ಸಂಗ್ರಹಿಸಿದ್ದನು.

ಅಲ್ಲಿಂದ ಮುಂದೆ ಅನೇಕ ಲಾವಣಿಗಳು ಕರ್ನಾಟಕದ ತುಂಬಾ ಹುಟ್ಟಿಕೊಂಡವು. ಇವುಗಳಲ್ಲಿ “ಭೇಷಕ್ ತಮಾಶಾ ಟೈಗರ್ ನಿಶಾನಾ ಟಿಪ್ಪು ಸುಲ್ತಾನನ ಹೆಸರಾಯ್ತು, ಮಸಲತ್ ಮಾಡಿದ ಮೀರ್ ಸಾದಿಕನಿಗೆ ದೇಶದ್ರೋಹಿ ಎಂಬ ಹೆಸರಾಯ್ತು” ಎಂದು ಶುರುವಾಗುವ ಲಾವಣಿಯು ಬಹಳ ಪ್ರಸಿದ್ಧವಾಯಿತು.

ಜಾನಪದ ಮನಸ್ಸು ಚರಿತ್ರೆಯನ್ನು ನಿಷ್ಠುರ ರಾಜಕೀಯ ಪ್ರe್ಞÉಯಲ್ಲಿ ಗ್ರಹಿಸುವುದಿಲ್ಲ. ಬದಲಿಗೆ ಮನುಷ್ಯ ಸ್ವಭಾವದ ಗುಣ ದೋಷಗಳಲ್ಲಿ, ನೈತಿಕತೆಯಲ್ಲಿ ಗ್ರಹಿಸುತ್ತದೆ. ಬಹಳ ಸಲ ಈ ನೈತಿಕ ಚೌಕಟ್ಟು, ಸಂಕೀರ್ಣವಾದ ರಾಜಕೀಯ ಸಾಮಾಜಿಕ ಧಾರ್ಮಿಕ ಸಂಘರ್ಷಗಳನ್ನು ಸರಳೀಕರಿಸುತ್ತದೆ.

ಆದರೆ ಅದು ಶಕ್ತಿಶಾಲಿ ವ್ಯವಸ್ಥೆಯೊಂದರ ವಿರುದ್ಧ ಹೋರಾಡುವ ದುರ್ಬಲರ ಸೋಲು ನೋವು ಹಾಗೂ ಸಾವುಗಳ ಜತೆಯಲ್ಲಿ ಸದಾ ಇರುತ್ತದೆ; ಅವರ ಮಾನವೀಯ ಸಂಕಟಗಳನ್ನು ಆಪ್ತವಾಗಿ ಚಿತ್ರಿಸುತ್ತದೆ. ಕೋಮುವಾದಿ ಚರಿತ್ರೆ ತಳೆಯಲಾಗದ ನಿಲುವನ್ನು ಅದು ತಳೆಯುತ್ತದೆ. ಟಿಪ್ಪು ಲಾವಣಿಗಳ ಒಳಗಿನ ರಾಜಕೀಯ ನಿಲುವು ಕೂಡ ಇದೇ ಆಗಿದೆ.

ಇಲ್ಲೇ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ, ಚರಿತ್ರೆಕಾರರು ಹೆಮ್ಮೆಯಿಂದ ವರ್ಣಿಸುವ ಕರ್ನಾಟಕವನ್ನು ಆಳಿದ ಸುಪ್ರಸಿದ್ಧ ದೊರೆಗಳನ್ನು ಕುರಿತು ಜನ ಹಾಡು ಕಟ್ಟಲಿಲ್ಲ? ಯಾಕೆ ಕಂಪಿಲಿಯ ಕುಮಾರರಾಮ, ಪಿರಿಯಾಪಟ್ಟಣದ ವೀರರಾಜ, ಟಿಪ್ಪು, ಸುರಪುರದ ವೆಂಕಟಪ್ಪ ನಾಯಕ, ಚಿತ್ರದುರ್ಗದ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ತರೀಕೆರೆಯ ಸರ್ಜಾ ಹನುಮಪ್ಪ ನಾಯಕ, ಕಿತ್ತೂರ ಚನ್ನಮ್ಮ, ಮುಂಡರಗಿ ಭೀಮರಾಯ, ಮೈಲಾರದ ಮಹದೇವಪ್ಪ, ಕನ್ನೇಶ್ವರದ ರಾಮ- ಮುಂತಾದ ಕೆಲವೇ ಚಾರಿತ್ರಿಕ ವ್ಯಕ್ತಿಗಳನ್ನು ಅದು ತನ್ನ ಸಾಂಸ್ಕøತಿಕ ವೀರರನ್ನಾಗಿ ಸ್ವೀಕರಿಸಿತು? ಇವರಲ್ಲಿ ಬಹಳ ಜನ ಟಿಪ್ಪುವಿನಂತೆ ದೊಡ್ಡರಾಜ್ಯ ಕಟ್ಟಿ ಆಳಿದವರಲ್ಲ. ಕೇವಲ ತುಂಡರಸರು ಅಥವಾ ಅವರ ಭಂಟರು.

ಜಾನಪದವು ಒಬ್ಬ ವ್ಯಕ್ತಿಯನ್ನು ತಮ್ಮ ಹಾಡಿನ ನಾಯಕನಾಗಿ ಆಯ್ದುಕೊಳ್ಳಲು ಮುಖ್ಯವಾಗಿ ಎರಡು ಮಾನದಂಡಗಳನ್ನು ಇಟ್ಟುಕೊಂಡಂತೆ ಕಾಣುತ್ತದೆ.

1. ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಸಾಹಸ-ಸಾಮಥ್ರ್ಯ ತೋರಿ ದೊಡ್ಡದಾಗಿ ಬೆಳೆಯುವುದು. ಜನಪದ ಕಥೆಗಳ ನಾಯಕರು ಕಡ್ಡಾಯವಾಗಿ ಇಂಥವರು;

2. ಬೃಹತ್ ಶಕ್ತಿಯೊಂದನ್ನು ಧೈರ್ಯದಿಂದ ಮುಖಾಮುಖಿ ಮಾಡುವುದು. ಸಂಘರ್ಷದ ಬಳಿಕ ಸೋಲುವುದು ಅಥವಾ ಸಾಯುವುದು. ಟಿಪ್ಪುವನ್ನೊಳಗೊಂಡಂತೆ ಮೇಲೆ ಉಲ್ಲೇಖಿಸಿದ ಸಾಂಸ್ಕøತಿಕ ಮತ್ತು ಚಾರಿತ್ರಿಕ ನಾಯಕರು ಹೀಗೆ ಹೋರಾಡಿ ಹುತಾತ್ಮರಾದವರು.

ಕುಮಾರ ರಾಮನು ದೆಹಲಿ ಸುಲ್ತಾನರ, ಪಿರಿಯಾಪಟ್ಟಣದ ವೀರರಾಜನು ಮೈಸೂರು ಅರಸರ, ಸಿರುಮಣ ನಾಯಕನು ವಿಜಯನಗರ ಅರಸರ ಹಾಗೂ ಮದಕರಿ ನಾಯಕನು ಹೈದರಾಲಿಯ ವಿರುದ್ಧ ಕಾದುವಾಗ ಸೋಲನುಂಡವರು ಅಥವಾ ಮಡಿದವರು; ಆದರೆ ಹೆಚ್ಚಿನ ವೀರರು ಕಂಪನಿ ಸರ್ಕಾರದ ವಿರುದ್ಧ ಕಾದು ಮಡಿದವರು.

ಯಾಕೆ ಕೃಷ್ಣದೇವರಾಯ ಅಥವಾ ಕಂಠೀರವ ನರಸರಾಯರ ಬಗ್ಗೆ ಲಾವಣಿ ಇಲ್ಲ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ತಾನೇ ಸ್ಪಷ್ಟವಾಗಿದೆ. ದೊಡ್ಡಶಕ್ತಿಯಾಗಿ ದುರ್ಬಲರನ್ನು ಹೊಸಕಿ ಹಾಕಿದವರು ಅಥವಾ ದೊಡ್ಡ ಶಕ್ತಿಯ ಜೊತೆಯ ರಾಜಿ ಮಾಡಿಕೊಂಡು ನಿರುಮ್ಮಳವಾಗಿ ಇದ್ದವರು, ಜನಪದರ ನಾಯಕರಾಗಲಿಲ್ಲ. ಬದಲಿಗೆ ತಮ್ಮ ಆಸ್ಥಾನ ಕವಿಗಳು ಬರೆದ ಕಾವ್ಯಗಳ ನಾಯಕರಾದರು, ಇಲ್ಲವೇ ಅರಮನೆಯ ಕಲಾವಿದರು ರಚಿಸಿದ ಭಿತ್ತಿಚಿತ್ರಗಳಿಗೆ ರೂಪದರ್ಶಿಗಳಾದರು. ಮೈಸೂರು ಅರಮನೆಯಲ್ಲಿರುವ ಭಿತ್ತಿಚಿತ್ರಗಳು ಇಂತಹವು.

ಟಿಪ್ಪು ‘ಮೈಸೂರು ಹುಲಿ’ ಎಂದೂ ಹೆಸರಾಗಿದ್ದಾನಷ್ಟೆ. ಹುಲಿಪಟ್ಟೆ ಅವನ ಧ್ವಜ ಚಿಹ್ನೆಯಾಗಿತ್ತು. ಬ್ರಿಟಿಶರ ಪಾಲಿಗೆ ಆತ ಹುಲಿಯಂತಿದ್ದ ಎಂಬರ್ಥದಲ್ಲಿ ಜನ ಈ ಬಿರುದನ್ನು ನೀಡಿರಬಹುದು. ಟಿಪ್ಪು ಬ್ರಿಟಿಷ್ ಸೈನಿಕರ ಮೇಲೆ ಹುಲಿಯೊಂದು ಎರಗಿ ಅಕ್ರಮಣ ಮಾಡುತ್ತಿರುವಂತೆ ಒಂದು ಆಟಿಕೆಯಂತ್ರ ಮಾಡಿಸಿದ್ದ. ಕೀಲಿ ಕೊಟ್ಟರೆ ಹುಲಿ ಗುರ್ರೆಂದು ಶಬ್ದ ಮಾಡುತ್ತ, ಸೈನಿಕನು ಚೀತ್ಕರಿಸುತ್ತಾ ಇರುವಂತೆ ಅದನ್ನು ನಿರ್ಮಿಸಲಾಗಿತ್ತು.

(ಯುದ್ಧಾನಂತರ ಅರಮನೆಯ ಸೂರೆಯಲ್ಲಿ ಸಿಕ್ಕ ಈ ಯಂತ್ರವನ್ನು ದೋಚಿದ ಬ್ರಿಟಿಶರು ಅದನ್ನು ಲಂಡನ್ನಿಗೆ ಕಳುಹಿಸಿಕೊಟ್ಟಿದ್ದು, ಈಗಲೂ ಅದು ಬ್ರಿಟಿಷ್ ಮ್ಯೂಸಿಯಂನಲ್ಲಿದೆ.) ಆದರೆ ಟಿಪ್ಪುವಿನ ಜನಪ್ರಿಯ ಚಿತ್ರದಲ್ಲಿ, ಎಗರಿ ನಿಂತಿರುವ ಹುಲಿಯ ಬಾಯನ್ನು ಆತ ತನ್ನ ಎರಡು ಕೈಯಲ್ಲಿ ಸೀಳುತ್ತಿರುವ ಭಂಗಿ ಇದೆ. ಬಹುಶಃ ಕಲಾವಿದನ ಕಲ್ಪನೆಯಲ್ಲಿ ಈ ಹುಲಿ, ಬರೀ ಹುಲಿಯೊ ಕಂಪನಿ ಸರ್ಕಾರವೊ ತಿಳಿಯದು. ಜನಪದರಿಗೆ ತಮ್ಮ ನಾಯಕರು ಅಥವಾ ದೈವಗಳು ಒಂದೋ ಹುಲಿ ಸವಾರಿ ಮಾಡಬೇಕು. ಇಲ್ಲವೇ ಹುಲಿಯನ್ನು ಕೊಲ್ಲಬೇಕು.

ಈ ಹುಲಿ ಪ್ರತಿಮೆಗೆ ಇನ್ನೊಂದು ಆಯಾಮವಿದ್ದಂತಿದೆ. ಅದು ಮೊಹರಂ ಹಬ್ಬದ ಹುಲಿವೇಷ. ಮೊಹರಂ ಅಥವಾ ಕರ್ಬಲಾ ಹಾಡುಗಳ ನಾಯಕರು, ತಮಗೆ ನ್ಯಾಯವಾಗಿ ಸಿಗಬೇಕಾಗಿದ್ದ ರಾಜ್ಯಾಧಿಕಾರವನ್ನು ಪಡೆಯಲೆಂದು ಮಾಡಿದ ಸಂಘರ್ಷದಲ್ಲಿ, ಟಿಪ್ಪುವಿನಂತೆಯೆ ರಣರಂಗದಲ್ಲಿ ಪ್ರಾಣ ತೆತ್ತವರು. ಎಂತಲೇ ಅವರು ಜನಪದರ ಸಾಂಸ್ಕøತಿಕ ನಾಯಕರೂ ಆಗಿದ್ದಾರೆ.

ಕರ್ಬಲಾ ಯುದ್ಧದ ದಾರುಣ ದುರಂತಗಳನ್ನು ಚಿತ್ರಿಸುವ ಪರಂಪರೆಗೆ ಟಿಪ್ಪುವನ್ನು ಚಿತ್ರಿಸುವುದು ಕಷ್ಟವಾಗಿರಲಿಕ್ಕಿಲ್ಲ. ಇದಕ್ಕೆ ಪೂರಕವಾಗಿ ಟಿಪ್ಪು ಎರಡುಕಾಲ ಮೇಲೆ ನಿಂತಿರುವ ಪಟ್ಟೆಹುಲಿಯ ಬಾಯಿಗೆ ಕೈಹಾಕಿ ಅದನ್ನು ಸೀಳುತ್ತಿರುವ ಚಿತ್ರಪಟವೊಂದು ಬಹುಕಾಲ ಮೈಸೂರು ಸೀಮೆಯ ಮುಸ್ಲಿಮರ ಮನೆಗಳಲ್ಲಿ ಕಾಣಬಹುದಿತ್ತು.

ಬ್ರಿಟಿಶರು ಟಿಪ್ಪುವನ್ನು ಕೊಂದು ಮೈಸೂರು ರಾಜ್ಯ ವಶಪಡಿಸಿಕೊಂಡ ದಿನದಿಂದ ಈ ದೇಶ ಬಿಟ್ಟುಹೋಗುವ ತನಕ, ಬ್ರಿಟಿಶರ ವಿರುದ್ಧ ಹೋರಾಡಿದ ನಾಯಕರ ಸಂಕಟಗಳನ್ನು ಎದೆ ಬಿರಿಯುವಂತೆ ವರ್ಣಿಸುತ್ತಾ ಜನರ ನಡುವಿದ್ದ ಈ ಲಾವಣಿಗಳು, ಮೂಡಿಸಿರಬಹುದಾದ ರಾಜಕೀಯ ಪ್ರತಿರೋಧ ಎಂಥದ್ದಿರಬಹುದು? ಚರಿತ್ರೆಯನ್ನು ವರ್ತಮಾನದ ರಾಜಕೀಯ ಕ್ರಿಯೆಗಳಿಗೆ ಪ್ರೇರಣೆಯಾಗಿಸಿಕೊಳ್ಳುವ ಸಮುದಾಯದ ಪ್ರತಿಭೆಯ ಸ್ವರೂಪ ಎಂತಹುದ್ದು? ಇದನ್ನೆಲ್ಲ ಸರಳೀಕರಿಸದೆ ನೋಡಲು ಸಾಧ್ಯವಾಗಬೇಕಿದೆ. ಟಿಪ್ಪು ಲಾವಣಿಗಳಲ್ಲಿ ಎರಡು ಸಂಗತಿಗಳು ಮುಖ್ಯವಾಗಿ ಕಾಣುತ್ತವೆ.

1. ಅನ್ಯಾಯಕ್ಕೊಳಗಾದ ಅಮಾಯಕರು ಗುಪ್ತ ಶತ್ರುಗಳಾಗಿ ಸೇಡು ತೀರಿಸಿಕೊಳ್ಳುವುದು: ಬೆಳಗಾವಿ ಜಿಲ್ಲೆಯಲ್ಲಿ ಸಿಕ್ಕಿರುವ ಲಾವಣಿಯಲ್ಲಿ ಪೂರ್ಣಯ್ಯನ ಸುಂದರ ಮಗಳನ್ನು ಟಿಪ್ಪು ಸೈನಿಕನೊಬ್ಬ ಕೆಡಿಸಿ ಬಿಡುತ್ತಾನೆ. ಈ ಅಪಮಾನ ನೋವುಗಳಿಂದ ಪೂರ್ಣಯ್ಯ ಇಡೀ ಟಿಪ್ಪು ರಾಜ್ಯವನ್ನೇ ಪತನ ಮಾಡಬೇಕೆಂದು ಶಪಥ ಮಾಡುತ್ತಾನೆ. ಯುದ್ಧದ ನಿರ್ಣಾಯಕ ವೇಳೆಯಲ್ಲಿ ಬ್ರಿಟಿಶರಿಗೆ ಕೋಟೆಗೆ ನುಗ್ಗುವಂತೆ ಸನ್ನೆ ಮಾಡುತ್ತಾನೆ. ಮಾಸ್ತಿಯವರು ಬರೆದಿರುವ ಕತೆಯಲ್ಲಿ ಕೂಡಾ, ಬಲಾತ್ಕಾರ ಮತಾಂತರಕ್ಕೆ ಒಳಗಾದ ನರಸಿಂಹನು (ಅಲಿಯಾಸ್ ಅಬ್ಬಾಸನು), ಮೈಸೂರು ರಾಣಿಯ ಪರವಾಗಿ ಬ್ರಿಟಿಶರ ಜೊತೆ ಸೇರಿ ಟಿಪ್ಪು ವಿರುದ್ಧ ಫಿತೂರಿ ಮಾಡಿ ಸೇಡು ತೀರಿಸಿಕೊಳ್ಳುತ್ತಾನೆ. ಈ ಮಿತ್‍ಗಳು ಏನನ್ನು ಹೇಳುತ್ತವೆ? ಟಿಪ್ಪು ಬ್ರಿಟಿಶರ ಅನ್ಯಾಯಕ್ಕೆ ಒಳಗಾದವನು ನಿಜ. ಆದರೆ ಅವನ ರಾಜ್ಯದಲ್ಲಿ ಅಸಹಾಯಕ್ಕೊಳಗಾದ ಅಸಹಾಯಕರೂ ಇದ್ದರೆಂದೇ? ಅವರ ಮನಸ್ಸು ಮುರಿದುದಕ್ಕಾಗಿ ಅವನು ಬೆಲೆ ತೆರಬೇಕಾಯಿತು ಎಂದೆ? ಎಲ್ಲ ಪ್ರಭುತ್ವಕ್ಕೂ ಹಿಂಸೆಯ ಮುಖವೊಂದು ಇದ್ದೇ ಇರುತ್ತದೆ.

2. ಆಪ್ತರೆನಿಸಿಕೊಂಡವರೇ ವಿಶ್ವಾಸ ದ್ರೋಹ ಮಾಡುವುದು; ರಾಜ್ಯವನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರೇ ಕೇಡು ಬಯಸುವಂತಾಗುವುದು. ‘ಏನು ಮೋಸವಾಯಿತು’ ಎಂದು ಆರಂಭವಾಗುವ ಲಾವಣಿಯಲ್ಲಿ ಈ ಪಲ್ಲವಿ ರಿಪೀಟಾಗುತ್ತಾ ಗಾಢವಿಷಾದ ಸೂಸುತ್ತದೆ. ಮೀರ್‍ಸಾದಿಕ್, ಸೈಯದ್ ಸಾಹೇಬ್, ಖಮ್ರುದ್ದೀನ್ ಇವರು ಶ್ರೀರಂಗಪಟ್ಟಣದ ಪತನದಲ್ಲಿ ಮುಖ್ಯ ಫಿತೂರಿಗಾರರು. ಇವರೆಲ್ಲಾ ಟಿಪ್ಪುವಿನ ಮಂತ್ರಿಗಳು ಹಾಗೂ ದಂಡನಾಯಕರು. ಲಾವಣಿಗಳಲ್ಲಿ ಈ ವಿಶ್ವಾಸಘಾತುಕರ ಮೇಲೆ ಬಹಳ ಆಕ್ರೋಶ. `ಮೀರ್‍ಸಾದಿಕ್' ಎನ್ನುವುದು ಹಳೇ ಮೈಸೂರು ಸೀಮೆಯಲ್ಲಿ ವಿಶ್ವಾಸಘಾತ ವಂಚನೆಗಳ ಬದಲಿ ನುಡಿಗಟ್ಟಾಗಿದೆ.

‘ಮೀರ್‍ಸಾಬರ ಗೋರಿ ಮೇಲೆ ನೂರೊಂದು ಯಕಡ ಬಿತ್ತು’ ಎಂದು ಹೇಳುವಷ್ಟು ಕಟುವಾದ ಆಕ್ರೋಶ ಲಾವಣಿಗಳಲ್ಲಿದೆ. ಸೋಜಿಗವೆಂದರೆ, ಚರಿತ್ರೆಯಲ್ಲಿ ದಕ್ಷ ಮಂತ್ರಿಯಾಗಿ, ಹೈದರ್‍ನಂತಹ ಸಿಪಾಯಿಯನ್ನು ರಾಜನನ್ನಾಗಿಸಿ ಕಿಂಗ್‍ಮೇಕರ್ ಆಗಿ ಚಿತ್ರಣಗೊಳ್ಳುವ ದಿವಾನ್ ಪೂರ್ಣಯ್ಯನ ಹೆಸರು ಸಹ, ಮೈಸೂರು ಸೀಮೆಯ ಆಡುಮಾತಲ್ಲಿ ವಂಚನೆಯ ನುಡಿಗಟ್ಟು ಆಗಿರುವುದು. ``ಕೋಟೆ ಮೇಲೆ ಕೂತುಕೊಂಡು ಹಸಿರು ಬಾವುಟ ಹಿಡಿದುಕೊಂಡು ವಸ್ತ್ರ ಬೀಸಿ ಕರೆಯುತಾನೆ ಪೂರ್ಣಯ್ಯ ತಾಯಿಗಂಡ’’ ಎಂದು ಲಾವಣಿ ಕಟುವಾಗಿ ನುಡಿಯುತ್ತದೆ.

ಉಪ್ಪಿನ ಋಣಕ್ಕೆ ಎರಡು ಬಗೆದವನೆಂದು ಅವನನ್ನು ವರ್ಣಿಸುತ್ತದೆ. ಟಿಪ್ಪುವಿನ ಮೇಲೆ ಹುಟ್ಟಿರುವ ಲಾವಣಿಗಳು ಕರ್ನಾಟಕದ ಜನಸಮುದಾಯದ ಚರಿತ್ರೆಯನ್ನು ಗ್ರಹಿಸುವ, ರಾಜಕೀಯ ಪ್ರತಿರೋಧ ಹುಟ್ಟಿಸುವ, ಮಾನವೀಯ ಸಂಕಟಗಳಿಗೆ ಮಿಡಿಯುವ ಅನೇಕ ಪರಿಯನ್ನು ಸೂಚಿಸುತ್ತವೆ. ದಮನಿತರ ಸೋತವರ ಜೊತೆ ಇರುವ ರಾಜಕಾರಣದ ಭಾಗವಾಗಿ ಇವು ರೂಪುಗೊಂಡಿವೆ.

ನಿನ್ನಯ ಜನಕೆ ಪೂರ್ಣಯ್ಯ ಮನ್ನಣೆ ಒಳಗಿದ್ದ
ಸನ್ನೆಯಿಂದಲೇ ಕೊಟ್ಟ ನಿನ್ನ ಪಟ್ಟಣಗಳ
ಹನ್ನೆರಡು ಗಂಟೆ ಹೊತ್ತು ನಿಂತ ಮಧ್ಯಾಹ್ನದಲ್ಲಿ
ಏನು ಮೋಸವಾಯಿತೋ ಸಿರಿರಂಗಪಟ್ನ ಗಳಿಗೆಯಲ್ಲಿ ಸೂರೆಹೋಯಿತೋ

ಈ ಹೊತ್ತಿನ ಭಾರತದ ಆಳುವ ವರ್ಗಗಳ ನೀತಿಯನ್ನು ಗಮನಿಸಿದರೆ, ಅವರಲ್ಲಿ ಬಹಳ ಜನ ಮನ್ನಣೆ ಒಳಗಿದ್ದವರಾಗಿ ಸನ್ನೆಯಿಂದಲೆ ನಮ್ಮ ಸಿರಿಯ ರಂಗಪಟ್ಟಣಗಳನ್ನು ಸೂರೆಹೊಡೆಯಲು ಶತ್ರುಗಳನ್ನು ಆಹ್ವಾನಿಸುವ ನೀತಿಯನ್ನುಳ್ಳವರು ಅನಿಸತೊಡಗುತ್ತದೆ.

ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ನಿರ್ಣಯಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಿ, ನಮ್ಮ ರೈತರ ನೀರು ಭೂಮಿ ಕಾಡುಗಳನ್ನು ಕೊಡುತ್ತಿರುವ ಈ ಆಳುವವರು, ಮೈಸೂರು ಅರಮನೆಯ ಭಿತ್ತಿಚಿತ್ರಗಳಲ್ಲಿ ಬ್ರಿಟಿಶರ ಜೊತೆ ಸುಖಕರ ಒಪ್ಪಂದಗಳನ್ನು ಮಾಡಿಕೊಂಡು ಕುಳಿತ ಅರಸರನ್ನು ನೆನಪಿಸುತ್ತಾರೆ.

ಎಂತಲೇ ವಸಾಹತುಶಾಹಿಗಳ ಬಗ್ಗೆ ರಾಜಿ ಮಾಡಿಕೊಳ್ಳದ, ಸಮೃದ್ಧ ಮೈಸೂರು ರಾಜ್ಯವನ್ನು ಕಟ್ಟುವ ಕನಸನ್ನು ಕಟ್ಟಿಕೊಂಡಿದ್ದ ಟಿಪ್ಪುವನ್ನು ಮತೀಯವಾದಿಗಳ ವಿರೋಧಿಸುವುದು ಆಶ್ಚರ್ಯವಲ್ಲ. ಇವರು ಏಕಕಾಲಕ್ಕೆ ಅಮೆರಿಕದ ಚೀನಾದ ಅಧ್ಯಕ್ಷರಿಗೆ ಹಡದಿ ಹಾಸಿ ಕರೆಯುವುದು, ಅವರು ಬಂದಾಗ ಭಯಭಕ್ತಿ ತೋರುವುದು; ಆದರೆ ಶ್ರೀಲಂಕಾ ಮಾಲ್ಡೀವ್ಸ್ ಬಾಂಗ್ಲಾ ನೇಪಾಳ ಮುಂತಾದ ಸಣ್ಣಪುಟ್ಟ ದೇಶಗಳನ್ನು ಹೆದರಿಸುವುದೂ ಕೂಡಾ ಇದೇ ತರ್ಕಕ್ಕೆ ಅನುಸಾರವಾಗಿದೆ.

#ಚಿತ್ರ_ಹಾದಿಮನಿ

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...