ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 17 September 2019

ಜಾನಪದಗಳಲ್ಲಿ ವೈಚಾರಿಕತೆ ಹೇಳುವ ಹೊಸ ಮಾದರಿ



ನನ್ನ ಇತ್ತೀಚಿನ  ಕೃತಿ ನಮ್ಮೂರ ಜಾನಪದ ಅನುಸಂಧಾನ ಪುಸ್ತಕದ ಕುರಿತು ಜಾನಪದ ಸಂಶೋಧಕರಾದ ಡಾ. ಅರುಣ್ ಜೋಳದ ಕೂಡ್ಲಗಿ ಅವರು ಬರೆದ ಮುನ್ನುಡಿಯ ಮಾತುಗಳು

''ಮಕ್ಕಳಲ್ಲಿ ವೈಚಾರಿಕತೆ ಕಲಿಸುವ ಜಾನಪದದ ಹೊಸ ಮಾದರಿ''

ಮಸ್ಕಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರವಿಚಂದ್ರ.
(ರವಿರಾಜ್ ಸಾಗರ್) ಅವರು ನನ್ನನ್ನು ಸಂಪರ್ಕಿಸಿ ಶಾಲಾ ಪಠ್ಯದಲ್ಲಿ ಜಾನಪದ
ಲಯವನ್ನು ಸೇರಿಸುವ ಪಠ್ಯಂತರ್ಗತ ಪ್ರಯತ್ನ ಮಾಡಿದ್ದೇನೆ  ಇದಕ್ಕೆ ಮುನ್ನುಡಿ
ಬೇಕೆಂದು ಕೇಳಿದರು. ಅಪರಿಚಿತರಾಗಿದ್ದ ರವಿಚಂದ್ರ ಅವರ ಕೋರಿಕೆ ನನಗೆ
ಕುತೂಹಲ ಮೂಡಿಸಿತು. ಹಾಗಾಗಿ ಬರೆಯುವುದಾಗಿ ಹೇಳಿ ಕರಡು ಪ್ರತಿ
ತರಿಸಿಕೊಂಡು ಓದಿದೆ. ಈ ಪ್ರಯೋಗ ನಿಜಕ್ಕೂ ಖುಷಿಯಾಯಿತು.
ಈ ಕೃತಿಯ ಹೆಸರು ನಮ್ಮೂರ ಜಾನಪದ ಅನುಸಂಧಾನಇಲ್ಲಿ ಊರಿನ
ಜನಪದರ ಮೌಖಿಕ ಸಾಹಿತ್ಯವನ್ನು ಸಂಗ್ರಹಿಸಿದ ಶಾಲಾ ಮಕ್ಕಳು ಮತ್ತು ಶಿಕ್ಷಕರು,
ಇದೇ ಮೌಖಿಕ ಲಯ ಬಳಸಿ ಮಕ್ಕಳ ಕಲಿಕೆಗೆ ನೆರವಾಗುವಂತೆ ರವಿಚಂದ್ರ
ಅವರು ರಚಿಸಿದ ಪಠ್ಯಂತರ್ಗತ ಜಾನಪದ ಪದ್ಯಗಳಿವೆ. ಇಲ್ಲಿ ಈ ಮೂರೂ
ಸಂಗತಿಗಳ ಮುಖಾಮುಖಿಯಾಗಿದೆ. ವಿಶೇವೆಂದರೆ ಜಾನಪದದ ಸಂಗ್ರಹ
ಮತ್ತು ಅದರ ಆನ್ವಯಿಕತೆ ಎರಡೂ ಜೊತೆಜೊತೆಗೆ ನಡೆದಿದೆ. ಇದು ಈ
ಕೃತಿಯ ವಿಶಿಷ್ಟ ಸಂಗತಿ. ಜಾನಪದವನ್ನು ಸಂಗ್ರಹಿಸುವ ಯಾರೇ ಆಗಲಿ ಜಾನಪದ
ಕ್ಷೇತ್ರದ ಬಗೆಗೆ ಇರುವ ಕೆಲವು ಮೂಡನಂಬಿಕೆಗಳ ಬಗೆಗೆ ಅರಿಯಬೇಕು.
ಜಾನಪದವೆಂದರೆ ಗ್ರಾಮೀಣ, ಅನಕ್ಷರಸ್ಥರದ್ದು, ಸಾಮರಸ್ಯದ್ದು, ಮೌಖಿಕವಾದದ್ದು,
ಬೆಲೆಯುಳ್ಳದ್ದು, ನಾಶವಾಗುತ್ತದೆ ಉಳಿಸಬೇಕು ಮುಂತಾದ ನಂಬಿಕೆಗಳನ್ನು
ಜಾನಪದಕ್ಕೆ ಬಿಗಿಯಾಗಿ ಕಟ್ಟಲಾಗಿದೆ. ಇವೆಲ್ಲಾ ಜಾನಪದದ ತಿಳುವಳಿಕೆಯನ್ನು
ಕುಬ್ಜಗೊಳಿಸಿವೆ. ಜಾನಪದ ಸಾವನ್ನು ನಿರಾಕರಿಸುವಂಥದ್ದು. ಎಲ್ಲಾ ಕಾಲಕ್ಕೂ
ಹೊಸ ಆಕಾರಗಳಲ್ಲಿ ಎಲ್ಲಾ ಕಡೆಯೂ ಜೀವಿಸುವಂಥದ್ದು. ಜನರು ಎಲ್ಲಿಯವರೆಗೆ
ಉಸಿರಾಡಿಕೊಂಡು ಮಾತನಾಡಿಕೊಂಡು ಲೋಕವನ್ನು ತನ್ನದೇ ಅಚ್ಚರಿ, ಭಯ,
ಆತಂಕ, ಕೌತುಕಗಳೊಂದಿಗೆ ಕಥನ ಮಾಡುತ್ತಾರೋ ಅದೆಲ್ಲವೂ ಜಾನಪದದ
ರೂಪವೆ. ಬದಲಾಗುತ್ತದೆ. ಇಂತಹ ಬದಲಾದ ಸಂವಹನದಲ್ಲಿಯೂ ಹೊಸತೊಂದು
ಜಾನಪದ ಮೈದಾಳುತ್ತದೆ. ಉದಾಹರಣೆಗೆ ಅಂತರ್ಜಾಲದಲ್ಲಿ ಜನರು ಸಂಧಿಸುತ್ತಿದ್ದು
ಅಲ್ಲೊಂದು ಡಿಜಿಟಲ್ ಫೋಕ್‌ಲೋರ್ ಹುಟ್ಟುತ್ತಿದೆ. ಇರುವ ಜಾನಪದವನ್ನೆಲ್ಲಾ
ಮೋಹಿಸಬೇಕಿಲ್ಲ. ಜಾನಪದದಲ್ಲಿ ನಾಶಮಾಡಬೇಕಾದ್ದು, ಸಂಗ್ರಹಕ್ಕೆ ಯೋಗ್ಯವಲ್ಲದ್ದು
ಹೆಚ್ಚಿದೆ. ಜಾತಿ, ಲಿಂಗ, ಬಣ್ಣ, ಪ್ರದೇಶ, ಒಡೆಯ, ಆಳು ಇಂತಹ ಬೇಧಗಳ
ಗಟ್ಟಿಗೊಳಿಸಿ ಯಥಾಸ್ಥಿತಿಯನ್ನು ಉಳಿಸುವ ರಚನೆಗಳ ಸಂಖ್ಯೆ ದೊಡ್ಡದಿದೆ.
ಅಂತಹ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ರಚನೆಗಳನ್ನು ಮುಂದಿನ
ತಲೆಮಾರಿಗೆ ಕಾಪಿಡುವ ಅಗತ್ಯವಿಲ್ಲ. ಪ್ರತಿ ಜಾನಪದ ಸಂಗ್ರಾಹಕಾರು ಇದನ್ನು
ಗಮನಿಸಬೇಕಿದೆ.
ಕೃತಿಯಲ್ಲಿ ಶಿಕ್ಷಕರಾದ ರವಿಚಂದ್ರ ಅವರು ಜಾನಪದ ಲಯ ಬಳಸಿ ಬರೆದ
ಹಾಡುಗಳಲ್ಲಿ ಮತ್ತೊಂದು ಆಯಾಮವಿದೆ. ಇಲ್ಲಿ ಸಂವಿಧಾ£ಕ ಆಶಯಗಳನ್ನು
ಬಲಪಡಿಸುವ ಜಾಗೃತಿ ಮೂಡಿಸುವ ಸದಾಶಯವಿದೆ.
ಸೂವ್ವಿ ಸೂವಮ್ಮಾ ಶಾಲಿಗೆ ಹೋಗಮ್ಮಾ
ಸೂವ್ವಿ ಸೂವ್ವಿ ಸೂವಮ್ಮಾ ||
ಓಣ್ಯಾಗ ಅಡಬ್ಯಾಡ ಶಾಲೀಗೇ ಹೋಗಮ್ಮಾ.
ಶಾಲೀಗಾ ಹೋಗಿ ನೀನಾರು ಕಲಿಯಮ್ಮಾ |ಸುವ್ವಿ ಸುವ್ವಿ|
ಮಾಸ್ತಾರು ಬಡಿತಾರಂತ ಅಂಜಿಕೆ ಬ್ಯಾಡಮ್ಮಾ
ಮಾಸ್ತಾರು ಹೇಳಿದ್ದಾ ಕೇಳಿ ಶ್ಯಾಣ್ಯಾಕಿ ಆಗಮ್ಮಾ
ಕಲಿತ ನಾರಿ ಸುಖಿ ಕುಟುಂಬಕ ದಾರಿ |ಸುವ್ವಿ ಸುವ್ವಿ|
ನಿಮ್ಮಪ್ಪಗಾ ಹೆದರಾಬ್ಯಾಡ ಹೊಲಕಾ ನೀ ಬರಬ್ಯಾಡ
ಎಲ್ಲಾ ದಗುದಾವಾ ನಾನೇ ಮಾಡುವೆ
ನೀ ಬೇಸು ಓದಮ್ಮಾ |ಸುವ್ವಿ ಸುವ್ವಿ| (ಪುಟ: ೯)
ಈ ರಚನೆಯಲ್ಲಿ ಹೆಣ್ಣು ಶಾಲೆಗೆ ಹೋಗಿ ಕಲಿಯುವ ಆಶಯವಿದೆ.
ಜಾನಪದ ಸಾಹಿತ್ಯದ ತಾಯಿ ಗಂಡ ಬೈದರೂ ಎದುರಾಡದೆ ಬಾಳು ಎಂದರೆ
ಆಧು£ಕ ತಾಯಿ ನಿಮ್ಮಪ್ಪಗಾ ಹೆದರಬೇಡ ಹೊಲಕ ನೀ ಬರಬ್ಯಾಡ, ಸಾಲಿ ಓದಿ
ಆಫಿಸರ್ ಆಗಮ್ಮಾಎಂದು ಹಾರೈಸುತ್ತಾಳೆ. ಬಹುಶಃ ಜಾನಪದ ಲಯ ಬಳಸಿ
ಆಧುನಿಕ ವೈಚಾರಿಕತೆಯನ್ನು ಮೂಡಿಸುವ ಪ್ರಯತ್ನವೆಂದರೆ ಇದು. ರವಿಚಂದ್ರರ
ರಚನೆಯ ಮತ್ತೊಂದು ಹಾಡು ಜಾಗೃತಿ ಜನಪದಹೀಗಿದೆ:
ಕುಂತಂತ ಮೇಲ್ಜಾತಿ ನಿಂತಂತ ಕೆಳಜಾತಿ / ಅಣ್ಣಾ ಅಕ್ಕಂದಿರೆ ಕೇಳಿರಿ
ಮನು ಕುಲವೆಲ್ಲ ಒಂದೇ ಎನ್ನುವ / ನಿಸರ್ಗದಾ ಸತ್ಯ ತಿಳೀಯಿರಿ ||
ಯಾವ ಕುಲದವಾ ಮಾಡಿದನವ್ವಾ ಜಾತಿ ಪದ್ದತಿಯಾ ?
ನೂರಾರು ಜಾತಿಯ ಬೇದವ ಸೃಷ್ಟಿಸಿ/ ಏಸು ವರು ಒಡೆದಾಳುವಿರಿ||
ಯಾವ ಕುಲದವಾ ಮಾಡಿದನವ್ವಾ / ವರದಕ್ಷಿಣೆ ಪದ್ದತಿಯಾ ?
ಹೆಣ್ಣು ಹೆತ್ತೊರ ಕಣ್ಣಿರ ಕತೆಯಾ/ ಇನ್ನೂ ಏಸು ವರುಕೇಳುವಿರಿ||
ಯಾವ ಕುಲದವಾ ಮಾಡಿದನವ್ವಾ/ ನೂರೊಂದು ಶಾಸ್ತಗಳಾ ?
ಮೂಢನಂಬಿಕೆಗಳ ಬಲೆಯಲಿ ಬಿದ್ದು / ಇನ್ನೂ ಏಸು ವರು ಗೋಳಾಡುವಿರಿ||
(ಪುಟ:೧೮)
ಜಲಪದ ಹೀಗಿದೆ
ನೀರು ನೀರು ನೀರಮ್ಮ ನೀರು / ನೀರಿದ್ದರೆ ಮಾತ್ರ ಬೆಳಿಯೋದು ಊರು
ನೀರೇ ಬಂಗಾರ ಚೆಲ್ಲಾಬ್ಯಾಡಾ || ಸೂಯ್ ||
ಗಂಗಾ ದೇವಿಯ ಪ್ರಸಾದ, ತುಂಗಾಮಾತೆಯ ವರದಾನ
ನಮ್ಮ ಹೊಸಪೇಟೆ ಡ್ಯಾಮೇ ವರದಾನ/ ಮಿತವಾಗಿ ಬಳಸೇ ಮಾತಾಯಿ.
||ಸುಯ್|| (ಪುಟ:೧೫)
ಈ ಮೇಲಿನ ಪದಗಳಲ್ಲಿ ಜಾತಿಪದ್ಧತಿಯ ಲೋಪದ ಬಗ್ಗೆ ಮಕ್ಕಳಲ್ಲಿ
ಜಾಗೃತಿ ಮೂಡಿಸುವ ಆಯಾಮವಿದೆ. ಜಲಪದ ಹಾಡಿನಲ್ಲಿ ನೀರಿನ ಮಹತ್ವದ
ಬಗ್ಗೆ ಅರಿವು ಮೂಡಿಸುವ ಉದ್ದೆಶವಿದೆ.
ಬಹುಶಃ ರವಿಚಂದ್ರ ಅವರ ಎಲ್ಲಾ ರಚನೆಗಳಲ್ಲಿಯೂ ಈ ಆಯಾಮವಿರುವುದು
ಆಶಾದಾಯಕ ಬೆಳವಣಿಗೆ. ಜೀವಪ್ರಪಂಚ, ನಿಸರ್ಗ ಸೋಜಿಗ, ಶಾಲೆ ಹಬ್ಬ,
ನೀರಿಗೋಗೋನು ಬಾ, ಮಳೆಹಾಡು, ಬನ್ನಿ ಮಕ್ಕಳೆ ನಮ್ಮೂರ ಶಾಲೆಗೆ, ಮುಂತಾದ
ಹಾಡುಗಳಲ್ಲಿ ಸಮತೆಯ ನಿಸರ್ಗ ವಿವೇಕವನ್ನು ವಿಸ್ತರಿಸಲು ಪ್ರಯತ್ನಿಸಿದ್ದಾರೆ.
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಮೈಲಾದ ಮಹಾದೇವ, ಕುವೆಂಪು,
ನಾ.ಡಿಸೋಜ, ರಾಜಕುಮಾರ್ ತರಹದವರ ಗುಣಲಕ್ಷಣಗಳನ್ನೆ ಒಗಟಾಗಿಸಿ
ಉತ್ತರವಾಗಿ ಇವರುಗಳ ಹೆಸರು ತಂದಿರುವುದು ಪ್ರಯೋಗಶೀಲವಾಗಿದೆ.
ಜಾನಪದ ಮೋಹದಿಂದ ಅದೇ ಮೌಲ್ಯಗಳನ್ನು ಪ್ರತಿಪಾದಿಸುವ ಲಯದ
ಜತೆ ಹಾಡಿನ ತಿರುಳನ್ನೂ ಪಡೆದಿದ್ದರೆ ಬಹುಶಃ ರವಿಚಂದ್ರರೂ ಜಾನಪದರಂತೆ
ಟೀಕೆಗೆ ಗುರಿಯಾಗಬೇಕಿತ್ತು. ಆದರೆ ಈ ಮಿತಿಯನ್ನು ಅರ್ಥಮಾಡಿಕೊಂಡು
ಹೊಸ ಬಗೆಯ ವೈಚಾರಿಕ ಗೀತೆಗಳನ್ನು ಜನಪದ ಶೈಲಿಯಲ್ಲಿ ರಚಿಸಿದ್ದಾರೆ.
ಇದುವೆ ಈ ಕೃತಿಯ ಮತ್ತೊಂದು ಗಮನಾರ್ಹ ಸಂಗತಿ.

ಕರ್ನಾಟಕದ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಕೆಲವರು
ವಿಶ್ವವಿದ್ಯಾಲಯಗಳ ಬಹುಪಾಲು ಅಧ್ಯಾಪಕರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದಾರೆ.
ಈಗ ಬರೆಯುತ್ತಿರುವ ಅತ್ಯುತ್ತಮ ಕವಿಗಳು ಶಾಲಾ ಮಾಸ್ತರರು. ಉಳಿದಂತೆ
ಸರಕಾರಿ ಶಾಲೆ ಉಳಿಸುವ ಪ್ರಯೋಗದಲ್ಲಿಯೂ ಗಮನ ಸೆಳೆಯುತ್ತಿದ್ದಾರೆ.
ಇದೊಂದು ಆಶಾದಾಯಕ ಬೆಳವಣಿಗೆ.  ಇದೊಂದು ಜಾನಪದ
ಸಂಗ್ರಹಕ್ಕೆ ಬಳಸುವ ವಿಶಿಷ್ಟ  ದಾರಿ. ಆದರೆ ಜಾನಪದ ಮೌಲ್ಯಗಳನ್ನು
ಮುರಿದುಕಟ್ಟುವ ರವಿಚಂದ್ರ ಅವರಂತಹ ಗೀತೆಗಳ ರಚನೆಯನ್ನು ಎಲ್ಲಾ ಶಿಕ್ಷಕರು
ಮಾಡಬೇಕಿದೆ. ಇದನ್ನು ಉಪಪಠ್ಯವಾಗಿ ಮಕ್ಕಳಿಗೆ ಕಲಿಸಬೇಕಿದೆ. ಬಹುಶಃ ಈ
ಪುಸ್ತಕದ ಮೂಲಕ ರವಾನೆಯಾಗಬೇಕಿರುವ ಸಂದೇಶವೂ ಇದೇಯಾಗಿದೆ.
ಈ ಕೃತಿಯಲ್ಲಿ ಸಂಗ್ರಹವಾದ ಜಾನಪದ ಸಾಹಿತ್ಯದ ಸಂಗ್ರಾಹಕರಾದ ಶಾಲಾ
ಮಕ್ಕಳಿಗೂ, ಹಾಡಿದ, ಮಾಹಿತಿ ನೀಡಿದ ಜಾನಪದ ಕಲಾವಿದರಿಗೂ, ಇಂತಹ
ಪ್ರಯೋಗಕ್ಕೆ ಒಡ್ಡಿಕೊಂಡ ಮತ್ತು ಮುನ್ನುಡಿಯ ನೆಪದಲ್ಲಿ ಜಾನಪದದ ಗ್ರಹಿಕೆಯ
ಬಗೆಗೆ ವಿಮರ್ಶಾತ್ಮಕ ಪುಟ್ಟ ಟಿಪ್ಪಣಿ ಬರೆಯಲು ಅವಕಾಶ ಕಲ್ಪಿಸಿದ ರವಿಚಂದ್ರ
ಅವರಿಗೂ ಅಭಿನಂದನೆಗಳು.
- ಡಾ. ಅರುಣ್ ಜೋಳದಕೂಡ್ಲಿಗಿ
ಜಾನಪದ ಸಂಶೋಧಕರು, ಬಳ್ಳಾರಿ
ಪುಸ್ತಕಕ್ಕೆ ಸಂಪರ್ಕಿಸಿ : ಸೃಜನ ಪುಸ್ತಕಾಲಯ .8660489901
                   ನನ್ನ ವಾಟ್ಸ್ ಆಪ್ – 9980952630.
ಪುಟಗಳು 124 . ಮುಖ ಬೆಲೆ -130.  ಅಂಚೆ ವೆಚ್ಚ  ಸೇರಿಯೂ 100 ರೂಗೆ ಲಬ್ಯ .

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...